ವಿಷಯದ ವಿವರಗಳಿಗೆ ದಾಟಿರಿ

ಜುಲೈ 16, 2012

3

ಕೇಸರೀಕರಣ: ದಾಯಾದಿಗಳ ಕಲಹ

‍ನಿಲುಮೆ ಮೂಲಕ

– ಸಂತೋಷ್ ಕುಮಾರ್ ಪಿಕೆ

ಕರ್ನಾಟಕದ ಪ್ರಾಥಮಿಕ ಶಾಲಾಪಠ್ಯದಲ್ಲಿ ಹೊಸ ಪಠ್ಯಕ್ರಮವನ್ನು ಸೇರ್ಪಡೆ ಮಾಡುತ್ತಿರುವ ಕುರಿತು ಎರಡು ಬಣಗಳ ನಡುವೆ ವ್ಯಾಪಕವಾದ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಗತಿ. ಬಿ.ಜೆ.ಪಿಯವರು ಹೊಸಪಠ್ಯಕ್ರಮವನ್ನು ಕೇಸರೀಕರಣವೆಂದೂ ಆದರೆ ಅದು ವಿರೋಧಿ ಬಣಗಳು ತಿಳಿದುಕೊಂಡಿರುವ ರೀತಿಯದ್ದಲ್ಲ ಎಂತಲೂ ಹಾಗೂ ಅದರ ವಿರೋಧಿ ಗುಂಪು ಅದು ಕೇಸರೀಕರಣ ಪ್ರಕ್ರಿಯೆ ಎಂತಲೂ ನಿರಪಯುಕ್ತವಾದ ಚರ್ಚೆಯನ್ನು ಬಿರುಸಾಗಿ ನಡೆಸುತ್ತಿದ್ದಾರೆ. ಪ್ರಸ್ತುತ ಬರಹದಲ್ಲಿ ಆ ಚರ್ಚೆಯಲ್ಲಿ ಪಾಲ್ಗೊಂಡವರು ಬೇರೆ ಬೇರೆ ತುದಿಯಲ್ಲಿ ನಿಂತಂತೆ ಭಾಸವಾದರೂ ಇಬ್ಬರೂ ಒಂದೇ ಸೇತುವೆಯ ಮೇಲೆ ನಿಂತಿರುವುದನ್ನು ನಿದರ್ಶಿಸುವ ಪ್ರಯತ್ನವನ್ನು ಮಾಡಲಾಗುವುದು. ಮೊದಲನೆಯದಾಗಿ ಬಿ.ಜೆ.ಪಿ.ಬಣದ ವಾದದಿಂದ ಪ್ರಾರಂಭಿಸುತ್ತೇನೆ.

ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಡಗೆ ಕಾಗೇರಿಯವರು ಇತ್ತೀಚೆಗೆ ತಮ್ಮ ಲೇಖನದಲ್ಲಿ ಕೇಸರೀಕರಣದ ಕುರಿತು ಎಲ್ಲರಿಗೂ ಗೊಂದಲವಿದ್ದು, ಅದರ ಕುರಿತು ಸ್ಪಷ್ಟತೆ ಅದನ್ನು ವಿರೋಧಿಸುವ ವಿರೋಧಿಗಳಿಗಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ನನ್ನ ಪ್ರಕಾರ, ಕೇಸರೀಕರಣದ ಕುರಿತು ಅದರ ವಿರೋಧಿಗಳಿಗಿರಲಿ, ಅದರ ಸ್ವಯಂ ಪ್ರತಿಪಾದಕರಿಗೇ ಸರಿಯಾದ ಜ್ಞಾನ ಇರುವುದು ಅನುಮಾನ. ಏಕೆಂದರೆ ಇದುವೇ ಕೇಸರೀಕರಣ ಎಂದು ಸ್ಪಷ್ಟವಾಗಿ ಹೇಳುವ ಧೈರ್ಯ ಯಾರಿಗೂ ಇದ್ದಂತಿಲ್ಲ, ಕೇವಲ ಭಗವಾಧ್ವಜ ಹಿಡಿದುಕೊಂಡು ಮಾಡುವ ಕೆಲಸಗಳು ಮಾತ್ರ ಕೇಸರೀಕರಣವಾಗುತ್ತದೆಯೇ? ಖಂಡಿತ ಇಲ್ಲ, ಏಕೆಂದರೆ ಕೇಸರೀಕರಣ ಎಂಬುದು ಒಂದು ಐಡಿಯಾಲಜಿ, ನಿದರ್ಶಿ ಷ್ಟವಾಗಿ ಇಂತಿಂತಹ ಕೆಲಸಗಳನ್ನು ಮಾಡಬೇಕು ಎಂದು ನಿರ್ದೇಶನ ನೀಡುವ ವಿಚಾರಗಳ ಗುಚ್ಚ ಅದಾಗಿದೆ. ಹಾಗೂ ಕೇಸರೀಕರಣದ ಕುರಿತು ಯಾವುದೇ ಸಿದ್ಧಾಂತ (ಥಿಯರಿ)ದ ಜ್ಞಾನಶಿಸ್ತು (ಜ್ಞಾನಶಿಸ್ತಿನ ಅಗತ್ಯ ಇಲ್ಲ ಎಂದು ಬಿ.ಜೆಪಿ ಯವರು ಭಾವಿಸಿದ್ದರೂ ಕೂಡ) ಇಲ್ಲದಿರುವುದರಿಂದ ಜನರು ತಮ್ಮ ಮನಸೋಇಚ್ಚೆ ಅರ್ಥಮಾಡಿಕೊಳ್ಳಲು ಸಾಧ್ಯವಿದೆ.

ಕೇಸರೀಕರಣ ಎಂಬುದು ಒಂದು ಐಡಿಯಾಲಜಿ ಎಂದು ಬಹುತೇಕರು ಅದನ್ನು ಬಳಸುತ್ತಾರೆ, ಆದರೆ ನಿದರ್ಶಿ ಷ್ಟವಾಗಿ ಅದರ ಗುಣಲಕ್ಷಣಗಳೇನು? ಎಂಬುದನ್ನು ಯಾರೂ ಸ್ಪಷ್ಟಪಡಿಸಿಲ್ಲ. ಒಮ್ಮೆ ಅದರ ಗುಣಲಕ್ಷಣಗಳು ಸ್ಪಷ್ಟವಾದರೆ ಬಿಜೆಪಿಗರು ಮಾಡುವ ಯಾವ ಯಾವ ಕೆಲಸಗಳು ಕೇಸರೀಕರಣವಾಗುತ್ತವೆ ಯಾವ ಕೆಲಸಗಳು ಕೇಸರೀಕರಣವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಆದರೆ ಸದ್ಯದ ಪರಿಸ್ಥಿತಿ ಸಂಪೂರ್ಣವಾಗಿ ಇದಕ್ಕೆ ತದ್ವಿರುದ್ದವಾಗಿದೆ. ಐಡಿಯಾಲಜಿಯು ಸಾಮಾನ್ಯವಾಗಿ ಬೇರೆ ಬೇರೆ ಚಿಂತನೆಗಳ ಸಮೂಹಗಳಾಗಿರುತ್ತವೆ. ಆ ಚಿಂತನೆಗಳು ಹಲವಾರು ಸಿದ್ಧಾಂತಗಳಿಂದ ಬರಬಹುದು ಅಥವಾ ವೈಯುಕ್ತಿಕವಾಗಿ ಕೆಲವಾರು ವ್ಯಕ್ತಿಗಳಿಂದ ಹೊರಹೊಮ್ಮಬಹುದು. ಒಟ್ಟಿನಲ್ಲಿ ಐಡಿಯಾಲಜಿಯು ಮುಂದೆ ಮಾಡಬೇಕಾಗಿರುವ ಕಾರ್ಯಗಳ ರೂಪುರೇಷೆಗಳನ್ನು ಸ್ಪಷ್ಟಪಡಿಸುತ್ತಾ ಗುರಿಸಾಧನೆಯ ಮಾರ್ಗವನ್ನು ತೋರಿಸುತ್ತಾ ಹೋಗುತ್ತದೆ. ಉದಾಹರಣೆಗೆ ಮಾರ್ಕ್ಸಿಸ್ಟ್ ಐಡಿಯಾಲಜಿ ಅಥವಾ ಎಡಪಂಥೀಯ ಐಡಿಯಾಲಜಿಯು ಕಾರ್ಮಿಕರ ಸರ್ವಾಧಿಕಾರವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿರುತ್ತದೆ. ಅದರಂತೆಯೇ ಅದರ ಹಿಂಬಾಲಕರು ಕಾರ್ಯಪ್ರವೃತ್ತರಾಗುತ್ತಾರೆ. ಅಂದರೆ ಒಂದು ಅಥವಾ ಹಲವಾರು ಗುರಿಗಳನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಬೇಕಾದ ಐಡಿಯಾಗಳನ್ನು ಮತ್ತು ಅದಕ್ಕೆ ಪೂರಕವಾದ ಕಾರ್ಯಗಳನ್ನು ರೂಪಿಸುತ್ತಾ ಹೋಗುತ್ತಾರೆ. ಈ ಅರ್ಥದಲ್ಲಿ ಕೇಸರೀಕರಣ ಎಂಬ ಪರಿಕಲ್ಪನೆಯನ್ನು ತೆಗೆದುಕೊಂಡರೆ ಅದು ಐಡಿಯಾಲಜಿಯೇ? ಎಂಬುದು ಅದರ ಪ್ರತಿಪಾದಕರಿಂದಾಗಲಿ ಅಥವಾ ಅದರ ವಿರೋಧಿಗಳಿಂದಾಗಲಿ ಸ್ಪಷ್ಟವಾಗುವುದಿಲ್ಲ. ಅಂದರೆ   ನಿದರ್ಶಿಷ್ಟವಾಗಿ ಇಂತಿಂತಿಹ ಕೆಲಸಗಳನ್ನು ಮಾಡಿದರೆ ಕೇಸರೀಕರಣವಾಗುತ್ತದೆ ಎಂಬುದನ್ನು ಇದುವರೆಗೂ ಯಾರೂ ತೋರಿಸಿಕೊಟ್ಟಿಲ್ಲ. ಇನ್ನೂ ಸ್ವಲ್ಪ ಬಿಡಿಸಿ ಹೇಳುವುದಾದರೆ, ಹೊಸಪಠ್ಯಕ್ರಮ ಸೇರಿದರೆ, ಸಹಲ್ ನಡೆಸಿದರೆ, ಬೈಠಕ್ ನಡೆಸಿದರೆ, ಐಟಿಸಿ, ಓಟಿಸಿ ಕ್ಯಾಂಪ್ ನಡೆಸಿದರೆ ಅವೆಲ್ಲವೂ ಕೇಸರಿಕರಣವಾಗುತ್ತದೆಯೋ ಇಲ್ಲವೋ ಎಂಬುದೂ ಸಹ ಗೊತ್ತಿಲ್ಲ. ಆದ್ದರಿಂದ ಕೇಸರೀಕರಣದ ಕುರಿತು ಜನರು ಬಾಯಿಗೆ ಬಂದ ಹಾಗೆ ಮಾತನಾಡಿದರೆ ಅದರ ಗುಣಲಕ್ಷಣವನ್ನು ಭೌದ್ದಿಕವಾಗಿ ನಿರ್ದಿಷ್ಟಪಡಿಸದಿರುವುದಕ್ಕೆ ಬಿ.ಜೆ.ಪಿ.ಯವರ ನಿರ್ಲಕ್ಷವೇ ಹೊಣೆಗಾರಿಕೆ ಎಂದರೆ ತಪ್ಪಾಗಲಾರದು. ಇದಿಷ್ಟು ಕೇಸರೀಕರಣದ ಕುರಿತು ಇರುವ ಗೊಂದಲವಾಗಿದೆ. ಇನ್ನು ಈ ಗೊಂದಲದ ಆಧಾರದ ಮೇಲೆ ಹೊಸಪಠ್ಯಕ್ರಮವನ್ನು ರೂಪಿಸಲು ಹೊರಟಿರುವ ಹಿಂದಿರುವ ಅಜೆಂಡಾಗಳ ಕುರಿತು ವಿಶ್ಲೇಷಣೆ ಮಾಡುವ ಅಗತ್ಯವಿದೆ.
ಹೊಸಪಠ್ಯಕ್ರಮ ಸೇರಿಸುವುದರಲ್ಲಿ ಎರಡು ಮುಖ್ಯವಾದ ಅಜೆಂಡಾಗಳಿವೆ ಎಂಬುದಾಗಿಯೂ ಸಹ ಮಾನ್ಯ ಮಂತ್ರಿಯವರು ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅವುಗಳಲ್ಲಿ ಮೊದಲನೆಯದು, ಭಾರತೀಯ ಸಂಸ್ಕೃತಿಯನ್ನು ನವಪೀಳಿಗೆಗೆ ಪರಿಚಯಿಸುವುದು ಹಾಗೂ ಎರಡನೆಯದು ರಾಷ್ಟ್ರೀಯವಾದವನ್ನು ಮಕ್ಕಳ ಮೇಲೆ ಹೇರುವುದು. ಅವುಗಳನ್ನು ಒಂದೊಂದಾಗಿ ನೋಡುವ ಭಾರತೀಯ ಸಂಸ್ಕೃತಿಯನ್ನು ಹೊಸತಲೆಮಾರಿಗೆ ಪರಿಚಯಿಸುವುದು ಮೊದಲನೆಯ ಅಜೆಂಡಾ. ಇದು ಸದುದ್ದೇಶದಿಂದ ಕೂಡಿದ್ದರೂ ಸಹ ಸಂಸ್ಕೃತಿಯ ಹೆಸರಿನಲ್ಲಿ ಏನನ್ನು ಪರಿಚಯಿಸಲಾಗುತ್ತದೆ ಎಂಬ ಪ್ರಶ್ನೆ ಏಳುತ್ತದೆ. ಮಾನ್ಯ ಮಂತ್ರಿಯವರೇ ಹೇಳುವಂತೆ, ಖಗೋಳಶಾಸ್ತ್ರ, ಗಣಿತ, ಆಯುರ್ವೇದ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಭಾರತೀಯರು ಮಾಡಿರುವ ಸಾಧನೆಗಳನ್ನು ಪರಿಚಯಿಸಿಕೊಡುವುದು. ಇದರಿಂದ ಓದುಗರಿಗೆ ಏನು ಲಾಭ? ನಿಜವಾಗಿಯೂ ಗೊತ್ತಿಲ್ಲ. ಭಾರತೀಯರು ಸೊನ್ನೆ ಕಂಡುಹಿಡಿದರು, ಆರ್ಯಭಟ ಎಂಬುವವನಿದ್ದ, ಇನ್ನೂ ಮುಂತಾದ ವಿಷಯಗಳನ್ನು ಹೇಳಿಕೊಡುವುದರಿಂದ ಭಾರತೀಯ ಸಂಸ್ಕೃತಿಯ ನೈಜ ಪರಿಚಯವಾಗಿಬಿಡುತ್ತದೆಯೇ? ಉದಾಹರಣೆಗೆ, ಮುಂದಿನ 50 ವರ್ಷದ ನಂತರ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಇಂದು ಸಾಧನೆಗೈದಿರುವ ಸಾನಿಯಾ ಮಿರ್ಜಾ, ಸಚಿನ್ ತೆಂಡೂಲ್ಕರ್, ಅಬ್ದುಲ್ ಕಲಾಂ, ಮಹೇಶ್ ಭೂಪತಿ, ರಾಜ್ ಕುಮಾರ್ (ಇವರೆಲ್ಲರೂ ತಮ್ಮತಮ್ಮ ಕ್ಷೇತ್ರದಲ್ಲಿ ಸಾಧನೆಗೈದಿರುವ ಮಹನೀಯರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ) ಮುಂತಾದ ಮಹನಿಯರ ಪರಿಚಯ ಮಾಡಿದರೆ ಭಾರತೀಯ ಸಂಸ್ಕೃತಿಯ ಕುರಿತು ಜ್ಞಾನ ಬಂದಂತಾಗುತ್ತದೆಯೇ? ಅದೇ ರೀತಿ ಹಿಂದಿನ ಕಾಲದಲ್ಲಿ ಯಾರೋ ಮಾಡಿದ ಯುದ್ದ, ಯಾರೋ ಸೋತಿರುವ ಕುರುಹು ಇವುಗಳನ್ನು ತೆಗೆದುಕೊಂಡು ಮಾಡುವುದಾದರೂ ಏನು? ಇಂದು ನಾವು 21ನೇ ಶತಮಾನದಲ್ಲಿದ್ದೇವೆ, ಅದರ ಅರ್ಥ ತಂತ್ರಜ್ಞಾನ ವಿಜ್ಞಾನ ಬಹಳಷ್ಟು ಮುಂದುವರೆದಿವೆ, ಇಂದು ನಮಗೆ ಬೇಕಾಗಿರುವುದು ಅದರೊಟ್ಟಿಗೆ ಜೀವನ ನಡೆಸಲು ಬೇಕಾದ ಮಾರ್ಗದರ್ಶಿಯನ್ನು ರೂಪಿಸುವ ಶಿಕ್ಷಣವೇ ಹೊರತು ರೋಷ ಉಕ್ಕಿಸಿ ಸಾಮರಸ್ಯವನ್ನು ಕದಡುವ ಅಥವಾ ನಮ್ಮ ಸಂಸ್ಕೃತಿಯನ್ನೇ ಹೀಗಳೆಯುವ ಶಿಕ್ಷಣದ ಅಗತ್ಯವಿಲ್ಲ.

ಎರಡನೆಯದಾಗಿ, ರಾಷ್ಟ್ರೀಯತೆಯನ್ನು(ನ್ಯಾಶನಾಲಿಸಂ) ಜಾಗೃತಿಗೊಳಿಸುವ ಕಾರ್ಯ. ನಿಜವಾಗಿಯೂ ಇದು ಆಶ್ಚರ್ಯಕರವಾದ ಅಜೆಂಡಾ ಎಂದರೆ ತಪ್ಪಾಗಲಾರದು. ಏಕೆಂದರೆ ರಾಷ್ಟ್ರೀಯವಾದದ ಕುರಿತು ಏನನ್ನೂ ತಿಳಿದುಕೊಳ್ಳದೆ ಮನಸ್ಸಿಗೆ ಬಂದ ವಿಷಯಗಳನ್ನು ರಾಷ್ಟ್ರೀಯವಾದ ಎಂದು ಹೇಳುತ್ತಿರುವುದು ಕೇಸರೀಕರಣದ ಪ್ರತಿಪಾದಕರ ಪಾಳೆಯದಲ್ಲಿರುವ ಅಜ್ಞಾನವನ್ನು ಪ್ರದರ್ಶಿಸುತ್ತದೆ. ಉದಾಹರಣೆಗೆ, ಅಲೆಗ್ಸಾಂಡರ್ನನ್ನು ಪುರೂರವ ಸೋಲಿಸಿದ್ದು ಇತಿಹಾಸದ ಇನ್ನೊಂದು ಮಗ್ಗಲು ಇದು ರಾಷ್ಟ್ರೀಯವಾದ ಹಾಗೆಯೇ ಶಿವಾಜಿಯ ಸಾಮ್ರಾಜ್ಯ ವಿಸ್ತರಣೆ ಇದು ರಾಷ್ಟ್ರೀಯವಾದ ಎಂಬುದು ಮಾನ್ಯ ಮಂತ್ರಿಗಳ ವಾದ. ಆದರೆ, ಅಲೆಗ್ಸಾಂಡರ್ ಸೋಲುವುದಕ್ಕೂ ರಾಷ್ಟ್ರೀಯವಾದಕ್ಕೂ ಏನು ಸಂಬಂಧ? ನಿಜವಾಗಿಯೂ ಯಾವ ಸಂಬಂಧವೂ ಇಲ್ಲ, ಏಕೆಂದರೆ ಅಲೆಗ್ಸಾಂಡರ್ ನ ದಾಳಿ ಹೊತ್ತಿಗಾಗಲೀ ಅಥವಾ ಶಿವಾಜಿಯ ಸಾಮ್ರಾಜ್ಯ ವಿಸ್ತರಣೆಯ ಸಂದರ್ಭದಲ್ಲಿ ಆಗಲಿ ರಾಷ್ಟ್ರ (ನೇಶನ್) ಎನ್ನುವ ಕಲ್ಪನೆಯೇ ನಮ್ಮಲ್ಲಿ ಇರಲಿಲ್ಲ. ಹಲವಾರು ಚಿಕ್ಕ ಚಿಕ್ಕ ಸಾಮ್ರಾಜ್ಯಗಳಾಗಿ ಇದ್ದಂತಹ ಪ್ರದೇಶ ಇದಾಗಿತ್ತು. ಅವೆಲ್ಲವನ್ನೂ ಒಗ್ಗೂಡಿಸುವ ರಾಷ್ಟ್ರವಾಗಲೀ ಅದರ ಕಲ್ಪನೆಯಾಗಲೀ ಇದ್ದುದಕ್ಕೆ ನಮ್ಮಲ್ಲಿ ಯಾವುದೇ ಪುರಾವೆಗಳಿಲ್ಲ. ರಾಷ್ಟ್ರೀಯವಾದವು ರಾಷ್ಟ್ರ-ರಾಜ್ಯ ಕಲ್ಪನೆಯ ಫಲವಾಗಿದ್ದು, ರಾಷ್ಟ್ರ-ರಾಜ್ಯ ಕಲ್ಪನೆಯು 1648 ರ ವೆಸ್ಟ್ಫಾಲಿಯ ಒಪ್ಪಂದದಿಂದಾಗಿ ಯುರೋಪಿನಲ್ಲಿ ಜನ್ಮತಾಳಿತು. ಒಂದು ಜನಾಂಗ ಹೊಂದಿರುವ ಸಾಮಾನ್ಯ ಇತಿಹಾಸ, ಸಂಸ್ಕೃತಿ, ಭಾಷೆ ಮುಂತಾದ ಸಂಗತಿಗಳ ಆಧಾರದ ಮೇಲೆ ತಮಗೆ ಬೇಕಾದ ಮತ್ತು ಎಲ್ಲರಿಗೂ ಸಾಮಾನ್ಯವಾಗಿ ಅನ್ವಯವಾಗುವ ಪ್ರಭುತ್ವವನ್ನು ಕಟ್ಟಿಕೊಳ್ಳುವುದೇ ರಾಷ್ಟ್ರ-ರಾಜ್ಯದ ಕಲ್ಪನೆಯಾಗಿದೆ. ಆದರೆ ಇದು ಯುರೋಪಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಅಗತ್ಯವಿದ್ದ ಸಂಗತಿ, ಜಗತ್ತಿನ ಎಲ್ಲಾ ಪ್ರದೇಶಗಳು ಅದೇ ರೀತಿಯಾಗಿ ಬದುಕುವ ಅಗತ್ಯವಿಲ್ಲ. ಬಿಜೇಪಿಗರು ಅಂತಹ ರಾಷ್ಟ್ರೀಯವಾದವನ್ನು ಹಾಗೂ ನಮ್ಮ ಸಂಸ್ಕೃತಿಯನ್ನು ತಪ್ಪಾಗಿ ಅರ್ಥೈಸಿಕೊಂಡು ಪಾಶ್ಚಾತ್ಯರ ಮಾದರಿಯ ರಾಷ್ಟ್ರವನ್ನು ಕಟ್ಟುವ ಹುನ್ನಾರದಲ್ಲಿದ್ದಾರೆ. ಆದ್ದರಿಂದ ಅದನ್ನು ಶಾಲಾಪಠ್ಯಗಳಿಗೆ ಅಳವಡಿಸುವುದು ಅಸಮಂಜಸವಾದ ಕಲ್ಪನೆಯನ್ನು ಅವರ ಮೇಲೆ ಹೇರಿದಂತೆ ಆಗುತ್ತದೆ. ಏಕೆಂದರೆ ರಾಷ್ಟ್ರೀಯತೆ ಎಂದರೇನು? ಈ ಜಾಗತೀಕರಣದ ಸಂದರ್ಭದಲ್ಲಿ ಅದರ ಅಗತ್ಯತೆ ಎಷ್ಟಿದೆ? ಹಾಗೂ ಅದು ಸಂಸ್ಕೃತಿಗೆ ಸಮಂಜಸವಾದುದೇ? ಎಂಬುದರ ಅರಿವು ಕೊಂಚವೂ ಇರದಿದ್ದರೆ ಸುಮ್ಮನೆ ಇರುವುದು ಒಳಿತು. ನಮಗೇ ರಾಷ್ಟ್ರೀಯವಾದದ ಕುರಿತು ತಿಳಿಯದಿರದಿದ್ದರೆ, ಇನ್ನು ಮಕ್ಕಳಿಗೆ ಏನು ಕಲಿಸಿಕೊಡುತ್ತೇವೆ? ಒಟ್ಟಿನಲ್ಲಿ ಕೇಸರೀಕರಣದ ಕುರಿತು ಸ್ಪಷ್ಟತೆ ಅದರ ಪ್ರತಿಪಾದಕರಿಗೆ ಇಲ್ಲ ಎಂಬುದು ಮಾತ್ರ ಮೇಲ್ನೋಟಕ್ಕೆ ಗೋಚರಿಸುತ್ತದೆ.

ಮೇಲಿನ ವಿಷಯಗಳು ಕೇಸರಿ ಪಾಳೆಯದಲ್ಲಿರುವ ಗೊಂದಲಗಳು ಮತ್ತು ಅಸ್ಪಷ್ಟ ವಿಚಾರಗಳಾಗಿವೆ. ಈ ಮೊದಲೆ ಹೇಳಿದಂತೆ ಕೇಸರೀಕರಣದ ಚರ್ಚೆಯಲ್ಲಿ ಎರಡು ಬಣಗಳು ಪರಸ್ಪರ ವಿರೋಧ ಎಂಬಂತೆ ಮೇಲ್ನೋಟಕ್ಕೆ ಅನ್ನಿಸಿದರೂ ಅವರಿಬ್ಬರೂ ಹಂಚಿಕೊಂಡಿರುವ ಅಥವಾ ಅವರಿಬ್ಬರೂ ಪರಸ್ಪರ ಸಂಧಿಸುವ ಅಂಶಗಳಿವೆ. ಅವುಗಳೆಂದರೆ, 1 ಶಿಕ್ಷಣದ ಕುರಿತು ಎರಡೂ ಬಣಗಳಿಗಿರುವ ಒಪ್ಪಂದ 2. ಇತಿಹಾಸದ ಕುರಿತು ಎರಡೂ ಬಣಗಳಿಗಿರುವ ಒಲವು. ಈ ಎರಡು ಸಂಗತಿಗಳನ್ನು ಅರ್ಥಮಾಡಿಕೊಂಡರೆ ಕೇಸರೀಕರಣದ ಚರ್ಚೆಯ ಮಿತಿ ಏನೆಂಬುದು ನಮಗೆ ತಿಳಿದುಬರುತ್ತದೆ ಎಂಬುದು ನನ್ನ ಅಭಿಪ್ರಾಯ.

ಮೊದಲನೆಯ ಅಂಶದಿಂದ ಪ್ರಾರಂಭಿಸುತ್ತೇನೆ. ಶಿಕ್ಷಣ ಎಂದರೆ ಸಾಮಾನ್ಯವಾಗಿ ಹಿಂದುತ್ವದವರಾಗಿರಲಿ, ಸೆಕ್ಯುಲರಿಸ್ಟರಾಗಿರಲಿ ಒಂದೇ ತೆರನಾದ ನಂಬುಗೆ ಇರುವುದನ್ನು ಕಾಣಬಹುದು. ಅದೆಂದರೆ, ಶಿಕ್ಷಣವನ್ನು ಪಡೆಯುವ ಉದ್ದೇಶ ಅಥವಾ ನೀಡುವ ಉದ್ದೇಶ ಅದು ನಮ್ಮ ಬದುಕಿಗೆ ದಾರಿದೀಪವಾಗಬೇಕು. ಅಂದರೆ ನಾವು ಬದುಕಲು ಬೇಕಾಗ ಅಗತ್ಯ ಸಂಗತಿಗಳನ್ನು ಸ್ಪಷ್ಟವಾಗಿ ಅದು ನಮಗೆ ಕಲಿಸಿಕೊಡಬೇಕು, ಇದರಲ್ಲಿ ಯಾರಿಗೂ ಅನುಮಾನವಿರಲಿಕ್ಕಿಲ್ಲ. ಅಷ್ಟೆ ಅಲ್ಲ, ಇವರಿಬ್ಬರಲ್ಲೂ ಇರುವ ಮತ್ತೊಂದು ಮೂಲಭೂತ ಒಪ್ಪಂದವೆಂದರೆ, ಶಿಕ್ಷಣವು ಮನುಷ್ಯನನ್ನು ವೈಚಾರಿಕನನ್ನಾಗಿ ಮಾಡಿಬಿಡುತ್ತದೆ ಎಂದು. ಅದು ಯಾವ ಶಿಕ್ಷಣ ಎಂಬುದು ಆಯಾ ಬಣದ ಐಡಿಯಾಲಜಿಯ ಮೇಲೆ ಅವಲಂಬಿತ. ಆದ್ದರಿಂದಲೇ ಕಡ್ಡಾಯ ಶಿಕ್ಷಣದಂತಹ ಕಾಯ್ದೆಗಳು ಜಾರಿಗೆ ಬಂದಿವೆ. ಒಬ್ಬ ವ್ಯಕ್ತಿ ನಾಗರೀಕನಾಗಬೇಕಾದರೆ ಶಿಕ್ಷಣ ಅಗತ್ಯ ಎಂಬುದು ಇದರ ಅರ್ಥ. ಇಂದು ಬಹುತೇಕ ಶಿಕ್ಷಣ ಸಂಸ್ಥೆಗಳು ವಿಧ್ಯಾರ್ಥಿಗಳನ್ನು ಒಬ್ಬ/ಳು ಉತ್ತಮ ಪ್ರಜೆಯನ್ನಾಗಿ ರೂಪಿಸುವ ಹೊಣೆಯನ್ನು ಹೊತ್ತಿವೆ ಎಂದು ಎದೆತಟ್ಟಿ ಹೇಳಲು ಯಾರಿಗೂ ಸಾಧ್ಯವಿಲ್ಲ. ಹಿಂದಿನ ಶಿಕ್ಷಣ ಪದ್ಧತಿಯನ್ನು ಅವಲೋಕಿಸಿದರೆ, ಅದನ್ನು ಧರಮಪಾಲ್ ಎಂಬ ಚಿಂತಕರು ತಮ್ಮ ಬ್ಯೂಟಿಫುಲ್ ಟ್ರಿ ಎಂಬ ಗ್ರಂಥದಲ್ಲಿ ತಿಳಿಸುವಂತೆ, ಬ್ರಿಟೀಷರ ಆಗಮನ ಪೂರ್ವದಲ್ಲಿ ಇಲ್ಲಿನ ಶಿಕ್ಷಣ ಜನರಿಗೆ ಬದುಕಲು ಅಗತ್ಯವಿರುವ ವಿಚಾರಗಳನ್ನು ಒಳಗೊಂಡಿತ್ತು. ಅಂದರೆ ವೈಶ್ಯರಿಗೆ ವ್ಯಾಪಾರ ಮಾಡಲು ಅಗತ್ಯವಾದ ತರಬೇತಿ, ರಾಜರ ಮಕ್ಕಳಿಗೆ ರಾಜ್ಯಭಾರ ನಡೆಸಲು ಬೇಕಾದ ವಿದ್ಯೆ, ಹಾಗೂ ವೇದಾಧ್ಯಯದಲ್ಲಿ ಆಸಕ್ತಿ ಹೊಂದಿರುವವರಿಗೆ ಅವುಗಳ ಅಧ್ಯಯನ ಹೀಗೆ ಮುಂತಾದ ಅಗತ್ಯವಾದ ವಿದ್ಯೆಗಳನ್ನು ಕಲಿಸಿಕೊಡಲಾಗುತ್ತಿತ್ತು. ಆದರೆ ಮೆಕಾಲೆಯ ಶಿಕ್ಷಣ ಪದ್ದತಿ ಬಂದಮೇಲೆ ಪಾಶ್ಚಾತ್ಯರ ಶ್ರೇಷ್ಟತೆಯನ್ನು ಅನುಸರಿಸುವುದು ಮತ್ತು ಅವರ ಕುರಿತು ಅಧ್ಯಯನ ಮಾಡುವುದು ಮಾತ್ರವೇ ನಿಜವಾದ ಶಿಕ್ಷಣ ಎಂಬಂತಹ ಕಲ್ಪನೆ ಬೆಳೆಯತೊಡಗಿತು. ಶಿಕ್ಷಣದ ಮೂಲಕ ವೈಚಾರಿಕತೆಯನ್ನು ಪಡೆಯುವುದೆಂದರೆ ಪಾಶ್ಚಾತ್ಯರ ನಾಲ್ಕು ಆಂಗ್ಲ ಪುಸ್ತಕಗಳನ್ನು ಓದುವುದು ಮತ್ತು ಅದರ ಆಧಾರದ ಮೇಲೆ ಭಾರತೀಯ ಸಂಸ್ಕೃತಿಯನ್ನು ಹೀಗಳೆಯುವದೇ ವೈಚಾರಿಕ ಶಿಕ್ಷಣದ ಗುರಿಯಾಗಿಬಿಟ್ಟಿದೆ. ಆದ್ದರಿಂದಲೇ ಒಬ್ಬ ಪ್ರಸಿದ್ದ ಚಿಂತಕರೊಬ್ಬರು ಹೇಳುವಂತೆ ಆಧುನಿಕ ಶಿಕ್ಷಣ ಪದ್ದತಿಗೆ ಜೋತುಬಿದ್ದಿರುವ ನಾವೆಲ್ಲಾ ಮೆಕಾಲೆಯ ಮಕ್ಕಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪಾಶ್ಚಾತ್ಯರ ಈ ಶಿಕ್ಷಣ ಪದ್ದತಿಯಿಂದಾಗಿ ನಮಗೆ ಬದುಕಲು ಅಗತ್ಯವಿರುವ ಅಂಶಗಳನ್ನು ಮರೆತು ಭಾರತೀಯ ಸಂಸ್ಕೃತಿಯನ್ನು ಹೀಗಳೆಯುತ್ತಾ, ಪಾಶ್ಚಾತ್ಯ ಸಂಸ್ಕೃತಿಯನ್ನು ಹೊಗಳು ಭಟ್ಟರಂತೆ ಹೊಗಳುವುದು ರೂಢಿಯಾಗಿಬಿಟ್ಟಿದೆ. ಬಿ.ಎಲ್. ಶಂಕರ್ ರವರು ಬರೆದಿರುವ ಲೇಖನವೂ ಸಹ ಪಾಶ್ಚಾತ್ಯರು ಭಾರತದ ಕುರಿತು ಕಟ್ಟಿಕೊಟ್ಟ ಚರಿತ್ರೆಯನ್ನು ಯಥಾವತ್ತಾಗಿ ನಂಬುತ್ತದೆ. ಅವರು ಕೇಸರೀಕರಣ ವಿರೋಧಿಸುತ್ತಾ ಬ್ರಿಟೀಷರು ಹೇಳಿದ್ದನ್ನೇ ಸತ್ಯ ಎಂದು ನಂಬಿ ಅದನ್ನೇ ನಾವೂ ಓದುವಂತೆ ಒತ್ತಾಯ ಪಡಿಸುತ್ತಿದ್ದಾರೆ. ಭಾರತದ ಕುರಿತು ಪಾಶ್ಚಾತ್ಯರು ಹೇಳಿರುವುದನ್ನು ಹಾಗೂ ಹಿಂದಿನ ಕಾಲದ ಕೆಲವೇ ಕಲವು ಭಾರತೀಯ ಸಾಧನೆಗಳನ್ನು ಓದುವುದರಿಂದ ಅದು ನಮ್ಮ ಅನುಭವವಾಗುತ್ತದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ. ಅಂದರೆ ಈಗಿರುವ ಪಠ್ಯಕ್ರಮ ಪಾಶ್ಚಾತ್ಯರ ಫಲವಾಗಿದ್ದು, ಮುಂದೆ ತರಲು ಇಚ್ಚಿಸಿರುವ ಪಠ್ಯಕ್ರಮ ಇವೆರಡರಿಂದಲೂ ನಾವು ಬದುಕುವ ವಿಧಾನವನ್ನು ಕಲಿಯುವಲ್ಲಿ ಅನುಮಾನವಿದೆ. ಆದ್ದರಿಂದ ಪಾಶ್ಚಾತ್ಯರ ಶಿಕ್ಷಣ ಪದ್ದತಿ ವಿರೋಧಿಸಿ ಪುರೂರವನನ್ನು ಓದುತ್ತಾ ಕುಳಿತರೂ ಯಾವ ಪ್ರಯೋಜನವೂ ಇಲ್ಲ ಹಾಗೆಯೇ ಕೇಸರೀಕರಣವನ್ನು ವಿರೋಧಿಸಿ ಪಾಶ್ಚಾತ್ಯರ ಅನುಭವ ಪ್ರಣೀತ ಕತೆಗಳನ್ನು ಓದುವುದರಿಂದಲೂ ಉಪಯೋಗವಿಲ್ಲ, ಏಕೆಂದರೆ ಇವೆರಡೂ ಸಹ 21 ನೇ ಶತಮಾನದಲ್ಲಿ ನಾವು ಬದುಕಬೇಕಾದ ಮಾರ್ಗವನ್ನು ತೋರಿಸುವಲ್ಲಿ ಹೀನಾಯವಾಗಿ ಸೋಲುತ್ತವೆ. ಏಕೆಂದರೆ ಈ ಎರಡೂ ತೆರನಾದ ಪಠ್ಯಕ್ರಮ ನಮ್ಮ ಅನುಭವಕ್ಕೂ ಮತ್ತು ಅಭ್ಯಾಸಕ್ಕೂ ಸಂಬಂಧವನ್ನು ಕಲ್ಪಿಸುವುದಿಲ್ಲ. ಇದರ ಜೊತೆಗೆ ಮತ್ತೊಂದು ಮುಖ್ಯವಾದ ವಿಷಯವನ್ನು ನಾವು ಗಮನಿಸಬೇಕು, ಅದೆಂದರೆ ಶಿಕ್ಷಣದ ಪಠ್ಯಕ್ರಮದಲ್ಲಿ ವಿಜ್ಞಾನದ ವಿಷಯವನ್ನು ಅಥವಾ ಗಣಿತದ ವಿಷಯವನ್ನು ಬದಲಿಸಿದರೆ ಅದು ಅಷ್ಟು ಚರ್ಚೆಗೆ ಗ್ರಾಸವಾಗುವುದಿಲ್ಲ. ಆದರೆ ಇಂದು ಹೆಚ್ಚು ಚರ್ಚೆಯಾಗುವುತ್ತಿರುವುದು ಸಮಾಜವಿಜ್ಞಾನಗಳ ಪಠ್ಯಗಳನ್ನು ಬದಲಿಸುವ ಕುರಿತೇ ಆಗಿದೆ. ಇಂದು ನಾವು ಓದುತ್ತಿರುವ ಸಮಾಜವಿಜ್ಞಾನ ಪಠ್ಯಗಳು ಸಂಪೂರ್ಣವಾಗಿ ಪಾಶ್ಚಾತ್ಯರ ಅನುಭವದ ಕಥನಗಳು ಎಂಬ ವಾದವೂ ಸಹ ಇದೆ. ಅಂದರೆ ಭಾರತೀಯ ಸಮಾಜದ ಕುರಿತು ನಾವು ಓದುವ ಪುಸ್ತಕಗಳಲ್ಲಿರುವ ವಿವರಣೆಗಳು ಪಾಶ್ಚಾತ್ಯರು ಭಾರತಕ್ಕೆ ಬಂದು ಕೆಲವರು ಬಾರದೆ ವಿದೇಶಗಳಲ್ಲೇ ಇದ್ದು ನೀಡಿದಂತವುಗಳಾಗಿವೆ. ಹಾಗೆಂದು ಅದಕ್ಕೆ ಬದಲಿಯಾದ ಪಠ್ಯಕ್ರಮವಿದೆಯೇ ಎಂದು ನೋಡಿದರೂ ಅಲ್ಲಿಯೂ ನಮಗೆ ನಿರಾಸೆಯಾಗುತ್ತದೆ. ಏಕೆಂದರೆ ನಮ್ಮ ಸಂಸ್ಕೃತಿಯ ಕುರಿತು ಸಂಶೋಧನೆ ನಡೆಸಿ ಪಾಶ್ಚಾತ್ಯರು ಹೇಳಿದ್ದನ್ನು ಪುನಾರಾವರ್ತಿಸುವುದನ್ನು ಬಿಟ್ಟು ಹೊಸ ವಿಚಾರಗಳನ್ನು ಹೇಳಿರುವುದು ತುಂಬಾ ವಿರಳ. ಆದ್ದರಿಂದ ಸೆಕ್ಯುಲರ್ಗಳು ಹೇಳುವ ಪಾಶ್ಚಾತ್ಯರ ವಿವರಣೆಯನ್ನು ಓದಿದರೂ ಹಾಗೂ ಯಾವುದೇ ಸಂಶೋಧನೆ ನಡೆಸದೆ ಭಾರತೀಯ ಸಂಸ್ಕೃತಿಯ ಕುರಿತು ಗ್ಲೋರಿಫೈ ಮಾಡುವ ಪಠ್ಯಕ್ರಮ ಇಟ್ಟರೂ, ಇವೆರಡೂ ಸಹ ಮನುಷ್ಯನನ್ನು ವೈಚಾರಿಕನನ್ನಾಗಿ ಬೆಳೆಸುತ್ತವೆ ಎಂಬುದರಲ್ಲಿ ತುಂಬಾ ಬಲವಾದ ಅನುಮಾನವಿದೆ.

ಎರಡನೆಯದಾಗಿ, ಇತಿಹಾಸವನ್ನು ಒಂದು ಮೈಲಿಗಲ್ಲು ಎಂಬಂತೆ ನೋಡುವ ಪರಿಪಾಠ ನಮಗೇಕೆ? ಹೊಸಪಠ್ಯಕ್ರಮವನ್ನು ಸಮರ್ಥಿಸುವ ಮತ್ತು ಅದನ್ನು ವಿರೋಧಿಸುವ ಎರಡೂ ಬಣಗಳು ತಮ್ಮ ಚರ್ಚೆಯನ್ನು ಇತಿಹಾಸದ ಮೇಲೆ ಕೇಂದ್ರೀಕರಿಸಿವೆ. ಇಬ್ಬರೂ ಸಹ ತೆರೆದ ಮತ್ತು ಮುಚ್ಚಿದ ಇತಿಹಾಸ ಎಂಬ ಕಲ್ಪನೆಯನ್ನಿಟ್ಟುಕೊಂಡು ಒಬ್ಬರಮೇಲೋಬ್ಬರು ಕೆಸರೆರಾಚಟ ಮಾಡುತ್ತ ಒಣಚರ್ಚೆಯನ್ನು ಗಂಭೀರವಾಗಿ ಮಾಡುತ್ತಿದ್ದಾರೆ. ಜೊತೆಗೆ ಎರಡೂ ಬಣಗಳು ರಾಷ್ಟ್ರೀಯವಾದವನ್ನು ಬೇರೆ ಬೇರೆ ಸ್ವರೂಪದಲ್ಲಿ ಬೆನ್ನುಹತ್ತಿರುವುದರಿಂದ ಇತಿಹಾಸವು (ಹಿಸ್ಟರಿ) ಅತ್ಯಗತ್ಯ ಎಂದು ಮನಗಂಡಿವೆ. ಆದರೆ ಗತದ ಕುರಿತು ಬೇರೆ ಬೇರೆ ವಿಧಗಳಲ್ಲಿ ನೋಡುವ ಸಾಧ್ಯತೆಗಳಿವೆ ಎಂಬುದಾಗಿ ಬಾಲಗಂಗಾಧರವರು ವಾದಿಸುತ್ತಾರೆ. ಅವರ ವಾದವನ್ನು ಸ್ವಲ್ಪ ನೋಡುವುದಾದರೆ, ಪಾಶ್ಚಾತ್ಯ ಮತ್ತು ಭಾರತದಂತಹ ಪೌರಾತ್ಯ ರಾಷ್ಟ್ರಗಳಲ್ಲಿ ಗತವನ್ನು ನೋಡುವ ವಿಧಾನಗಳಲ್ಲಿ ವ್ಯತ್ಯಾಸಗಳಿವೆ. ಪಾಶ್ಚಾತ್ಯರು ಗತವನ್ನು ಅರ್ಥೈಸಿಕೊಳ್ಳಲು ಮತ್ತು ರಕ್ಷಿಸಿಡಲು ಇತಿಹಾಸ(ಹಿಸ್ಟರಿ)ಯ ಬೆನ್ನುಬಿದ್ದಿದ್ದರೆ, ಭಾರತದಂತಹ ರಾಷ್ಟ್ರಗಳು ಇತಿಹಾಸದ ಅಗತ್ಯವೇ ಇಲ್ಲದೆ ತಮ್ಮ ಗತವನ್ನು ವಿಶಿಷ್ಟ ಬಗೆಯಲ್ಲಿ ಸ್ಮರಣೆಯಲ್ಲಿಟ್ಟುಕೊಂಡಿವೆ. ಅಂದರೆ, ಕತೆ, ಪುರಾಣ ಮುಂತಾದವುಗಳ ಮೂಲಕ ಗತವನ್ನು ಪ್ರಸ್ತುತದಲ್ಲಿ ಉಳಿಸಿಕೊಳ್ಳುತ್ತವೆ. ಆದರೆ ಪಾಶ್ಚಾತ್ಯರ ವಿಧಾನವು ಗತವನ್ನು ವರ್ತಮಾನದಿಂದ ಸಂಪೂರ್ಣವಾಗಿ ಬೇರ್ಪಡಿಸಿಬಿಡುತ್ತದೆ. ಯಾವುದೋ ಒಂದು ಕಾಲದಲ್ಲಿ ಯಾರೋ ಒಬ್ಬ ರಾಜ ಯುದ್ದ ಮಾಡಿದ, ಅದು ಇತಿಹಾಸವಾಗುತ್ತದೆ, ಅವನು ಆ ಕಾಲದಲ್ಲಿ ಯುದ್ದ ಮಾಡಿದ್ದಕ್ಕೂ ನಾವು ಇಂದು ಐಟಿ ಬಿಟಿ ಯಲ್ಲಿ ಕಾರ್ಯನಿರ್ವಹಿಸುವುದಕ್ಕೂ ಯಾವ ಸಂಬಂಧವೂ ಇರುವುದಿಲ್ಲ. ಆದರೆ ಕತೆಗಳನ್ನು ಸ್ಮೃತಿಯಲ್ಲಿಟ್ಟುಕೊಳ್ಳುವುದು ಪಾಶ್ಚಾತ್ಯರ ವಿಧಾನಕ್ಕೆ ಸಂಪೂರ್ಣವಾಗಿ ವಿರುದ್ಧವಾದುದು. ಇಂತಹ ಸತ್ಯವನ್ನು ಅರಿಯದ ಮೆಕಾಲೆಯ ಮಕ್ಕಳು ಎಲ್ಲವನ್ನೂ ಪಾಶ್ಚಾತ್ಯೀಕರಣ ಮಾಡಹೊರಟಿದ್ದಾರೆ, ಅದೂ ನಮ್ಮ ಸಂಸ್ಕೃತಿಯ ಸತ್ವವನ್ನು ನಾಶಮಾಡುವ ಮೂಲಕ. ಆದ್ದರಿಂದ ಹಿಂದುತ್ವದ ಪಠ್ಯಗಳನ್ನು ಅಳವಡಿಸಿದರೂ ಅಥವಾ ಸೆಕ್ಯುಲರ್ ಪಠ್ಯಕ್ರಮವನ್ನು ಅಳವಡಿಸಿದರೂ ಒಂದೊಮ್ಮೆ ಅವು ಇತಿಹಾಸದ ಮೇಲೆ ಅಷ್ಟೊಂದು ಅವಲಂಬಿತವಾಗಿದ್ದರೆ, ನಮ್ಮ ಸಂಸ್ಕೃತಿಯನ್ನು  ಅರ್ಥೈಸಿಕೊಳ್ಳುವಲ್ಲಿ ಮೊದಲನೆಯ ಹಂತದಲ್ಲಿಯೇ ಮಗುಚಿ ಬೀಳುತ್ತದೆ. ಹಿಂದುತ್ವದರವರು ಒಂದು ತೆರನಾದ ಇತಿಹಾಸ ಬೇಕು ಎಂದರೆ ಸೆಕ್ಯುಲರ್ ವಾದಿಗಳು ಮತ್ತೊಂದು ತೆರನಾದ ಇತಿಹಾಸ ಬೇಕು ಎಂದು ಪಟ್ಟುಹಿಡಿಯುತ್ತಾರೆ. ಆದರೆ ಇವರಿಬ್ಬರ ದೋಣಿ ಒಂದೇ, ಅದುವೆ ಇತಿಹಾಸ ಅಥವಾ ಚರಿತ್ರೆ. ಹಾಗೆಯೇ ರಾಷ್ಟ್ರೀಯವಾದವನ್ನು ನೋಡುವುದಾದರೆ, ಒಬ್ಬರನ್ನು ಹಿಂದೂ ರಾಷ್ಟ್ರೀಯವಾದಿಗಳು ಎಂದು ಮತ್ತೊಬ್ಬರನ್ನು ಸೆಕ್ಯುಲರ್ ರಾಷ್ಟ್ರೀಯವಾದಿಗಳೆಂದು ಬಣ್ಣಿಸುವುದರ ಹಿಂದೆ, ಇಬ್ಬರಲ್ಲೂ ರಾಷ್ಟ್ರೀಯವಾದದ ಭೂತ ಅಡಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಒಟ್ಟಿನಲ್ಲಿ ರಾಷ್ಟ್ರೀಯವಾದ ಹಾಗೂ ಇತಿಹಾಸ ಇವೆರಡನ್ನೂ ವಿಭಿನ್ನ ನೆಲಗಳಲ್ಲಿ ಎರಡೂ ಬಣಗಳು ಗ್ರಹಿಸಿ ಹಾಗೂ ಅವುಗಳ ಆಧಾರದ ಮೇಲೆಯೇ ಶಾಲೆಗಳಿಗೆ ಪಠ್ಯಕ್ರಮಗಳನ್ನು ಸೇರಿಸಿದರೂ ಕೂಡ ಅವುಗಳ ಪರಿಣಾಮ ಮಾತ್ರ ಒಂದೆ, ಅದೆಂದರೆ ನಮ್ಮ ಸಂಸ್ಕೃತಿಯನ್ನು ನಾವು ಗ್ರಹಿಸಲು ಸಾಧ್ಯವಾಗುವುದಿಲ್ಲ. ನಮ್ಮ ಸಂಸ್ಕೃತಿಯ ಕುರಿತು ಅಪಾರವಾದ ಗೌರವವನ್ನು ಹೊಂದಿರುವ ಬಿಜೆಪಿಗರು ಮತ್ತು ಅರ್.ಎಸ್ಸ್.ಎಸ್ಸಿಗರು ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲದಿರಲಿ ಎಂಬುದೇ ನನ್ನ ಆಶಯ.

3 ಟಿಪ್ಪಣಿಗಳು Post a comment
  1. SSNK's avatar
    Kumar
    ಜುಲೈ 16 2012

    ಬಹಳ ದೀರ್ಘವಾದ ಲೇಖನ ಬರೆದಿರುವಿರಿ. ಆದರೆ, ಇದರಲ್ಲಿ ವಿಷಯದ ಸ್ಪಷ್ಟತೆಯಿಲ್ಲ. ಉದಾಹರಣೆಗೆ, ಕೇಸರೀಕರಣದ ಬಗ್ಗೆ ಬಿಜೆಪಿ ಸ್ಪಷ್ಟೀಕರಿಸಬೇಕೆನ್ನುತ್ತಿರುವಿರಿ.
    ಕೇಸರೀಕರಣ ಎನ್ನುವ ಪದವನ್ನು ಹುಟ್ಟು ಹಾಕಿರುವವರು ಬಿಜೆಪಿಯ ವಿರೋಧಿಗಳು. ಕೋಮುವಾದಕ್ಕೆ ಪರ್ಯಾಯ ಪದವಾಗಿ ಅವರದನ್ನು ಉಪಯೋಗಿಸುತ್ತಿದ್ದಾರೆ. ಈ ಪದವನ್ನು ಹುಟ್ಟು ಹಾಕಿರುವವರು ಅದರ ಅರ್ಥವನ್ನು ಸ್ಪಷ್ಟಪಡಿಸಬೇಕಲ್ಲವೇ?

    ಇನ್ನು ರಾಷ್ಟ್ರೀಯವಾದದ ಕುರಿತಾಗಿ ಬರೆದಿರುವಿರಿ. ನೀವು ಬರೆದಿರುವ ರಾಷ್ಟ್ರೀಯವಾದ ಪಶ್ಚಿಮದ Nation-States ಸಿದ್ಧಾಂತದಿಂದ ಪ್ರೇರಣೆಗೊಂಡಿದೆ. ಆದರೆ, ಭಾರತದಲ್ಲಿ ಹುಟ್ಟಿದ ರಾಷ್ಟ್ರೀಯವಾದ ಇದಕ್ಕಿಂತ ಬಹಳ ಭಿನ್ನವಾದದ್ದಾಗಿದೆ. ಭಾರತದಲ್ಲಿ ಹುಟ್ಟಿದ್ದು “ಸಾಂಸ್ಕೃತಿಕ ರಾಷ್ಟ್ರೀಯತೆ”. ಭಾರತವು ಒಂದು ರಾಷ್ಟ್ರವೆನ್ನುವ ಕಲ್ಪನೆ ಇಲ್ಲದಿದ್ದಿದ್ದರೆ ಚಾಣಕ್ಯನು ತಕ್ಷಶಿಕೆಯಿಂದ ಮಗದಕ್ಕೆ ಬಂದು ಚಂದ್ರಗುಪ್ತನೊಡನೆ ಒಂದುಗೂಡುತ್ತಿರಲಿಲ್ಲ. ತಕ್ಷಶಿಲೆಯಿದ್ದದ್ದು ಗಾಂಧಾರ ದೇಶದಲ್ಲಿ ಮತ್ತು ಮಗಧವೇ ಪ್ರತ್ಯೇಕ ರಾಜನ ಅಡಿಯಿತ್ತು. ಈ ರೀತಿಯ ಅನೇಕ ಪ್ರಾಂತ್ಯಗಳು/ದೇಶಗಳು ಒಂದಾಗಿ ಗ್ರೀಕರ ಆಕ್ರಮಣವನ್ನು ಎದುರಿಸಿದ್ದು ರಾಷ್ಟ್ರೀಯತೆಯ ಭಾವನೆಯಿಂದಲೇ ಅಲ್ಲವೆ?
    ಶಿವಾಜಿ ಮಹಾರಾಜರೂ ತನ್ನೊಡನಿದ್ದ ಮಾವಳಿಗಳಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಹುರಿದುಂಬಿಸಿ “ಹಿಂದವೀ ಸ್ವರಾಜ್ಯ”ವನ್ನು ನಿರ್ಮಾಣ ಮಾಡಿದ. ಅವನಿಗೆ ರಾಷ್ಟ್ರೀಯತೆಯ ಕಲ್ಪನೆಯಿಲ್ಲದಿದ್ದಿದ್ದರೆ ಕೇವಲ “ಮರಾಠೀ ಸ್ವರಾಜ್ಯ” ಎಂದು ಕರೆಯಬಹುದಿತ್ತಲ್ಲವೇ? ಮತ್ತು ಬುಂದೇಲಖಂಡದ ಛತ್ರಸಾಲನಿಗೆ ರಾಷ್ಟ್ರೀಯತೆಯ ಪಾಠ ಕಲಿಸುವ ಅಗತ್ಯವಿರಲಿಲ್ಲ ಅಲ್ಲವೇ?

    ನಮ್ಮ ಹಿಂದಿನವರು ಗಣಿತ, ಇತಿಹಾಸ, ತಂತ್ರಜ್ಞಾನಗಳಲ್ಲಿ ಮಾಡಿದ ಸಾಧನೆಗಳನ್ನು ಇಂದಿನ ಮಕ್ಕಳಿಗೆ ತಿಳಿಸುವ ಅಗತ್ಯವಿಲ್ಲವೆಂದಿರುವಿರಿ. ಅಂದರೆ, ನಿಮಗೆ ಇತಿಹಾಸದ ಮಹತ್ವವೇ ತಿಳಿದಿಲ್ಲ ಎಂದಾಯಿತು. ಎಲ್ಲಾ ಸಂಶೋಧನೆಗಳೂ ಪಶ್ಚಿಮದಲ್ಲೇ ಆದದ್ದು ಎಂದು ಇಷ್ಟು ವರ್ಷಗಳು ತಿಳಿಸುತ್ತಿದ್ದಾಗ ಸುಮ್ಮನಿದ್ದ ನೀವು, ನಮ್ಮವರು ಮಾಡಿದ ಸಾಧನೆಗಳನ್ನು ತಿಳಿಸಿದ ಕೂಡಲೇ “ಜಾಗೃತ”ರಾಗಿರುವುದು ಕಂಡು ಆಶ್ಚರ್ಯವೆನಿಸುತ್ತಿದೆ. ನಮಗೇ ನಮ್ಮವರ ಕುರಿತಾಗಿ ತಿಳಿಯದಿದ್ದರೆ ಇನ್ನಾರು ಇದನ್ನೆಲ್ಲಾ ತಿಳಿಸುತ್ತಾರೆ. ವಿಜ್ಞಾನ ಎಷ್ಟು ಮುಂದುವರೆದರೂ “ಶೂನ್ಯ” ಎನ್ನುವುದು ಇದ್ದೇ ಇರುತ್ತದೆ. ಅದು ಎಷ್ಟು ಹಳೆಯದಾದರೂ ಇರುತ್ತದೆ. ಗಣಿತ ಮತ್ತು ವಿಜ್ಞಾನದ ಕ್ಷೇತ್ರದಲ್ಲಿ “ಶೂನ್ಯ”ದ ಕಲ್ಪನೆ ಅಸಾಧಾರಣವಾದದ್ದು. ಪಶ್ಚಿಮದ ಅತ್ಯಂತ ಬುದ್ಧಿವಂತ ನಾಗರೀಕತೆಗಳಾದ ಗ್ರೀಕ್, ರೋಮನ್, ಬ್ಯಾಬಿಲೋನಿಯಾ, ಮೆಸಪಟೋನಿಯಾ ಇತ್ಯಾದಿ ನಾಗರೀಕತೆಗಳಲ್ಲಿ ಯಾರೂ “ಶೂನ್ಯ”ವನ್ನು ಕಲ್ಪಿಸಲಿಲ್ಲ. ಶೂನ್ಯದಿಂದ ಹಿಡಿದು ೧೦ರವರೆಗಿನ ಎಲ್ಲಾ ಅಂಕೆಗಳನ್ನೂ, ದಶಮಾಂಶ ಪದ್ಧತಿಯನ್ನು, ಬೀಜಗಣಿತ, ರೇಖಗಣಿತವನ್ನು ಮತ್ತು ಗಣಿತದ ಎಲ್ಲಾ ಕ್ಷೇತ್ರಗಳನ್ನೂ ಜಗತ್ತಿಗೆ ನೀಡಿದ್ದು ಭಾರತ. ಶೂನ್ಯವಿಲ್ಲದೆ ದಶಮಾಂಶ ಪದ್ಧತಿಯಿಲ್ಲ. ರೋಮನ್ ಸಂಖ್ಯೆಯಲ್ಲಿ ೧ ಲಕ್ಷವನ್ನು ಬರೆಯಲು ಪ್ರಯತ್ನಿಸಿ. ಆಗ ತಿಳಿಯುತ್ತದೆ ಶೂನ್ಯ ಹಾಗೂ ದಶಮಾಂಶ ಪದ್ಧತಿಗಳ ಮಹತ್ವ. ಇಂತಹ ಶ್ರೇಷ್ಠ ಕಲ್ಪನೆಯನ್ನು ಮಾಡಿಕೊಂಡ ನಮ್ಮ ಪೂರ್ವಜರು ಅಸಾಧಾರಣ ಬುದ್ಧಿವಂತರಾಗಿದ್ದರೆನ್ನುವುದು ತಿಳಿದಾಗ ನಮ್ಮ ಮಕ್ಕಳ ಮನ ಫುಲಕಿತವಾಗುತ್ತದೆ ಮತ್ತು ಕಲಿಯುವ ಉತ್ಸಾಹ ಹೆಚ್ಚುತ್ತದೆ. ನಮ್ಮವರು ಏನೂ ಕಂಡು ಹಿಡಿಯಲಿಲ್ಲ; ಎಲ್ಲವನ್ನೂ ಪಶ್ಚಿಮದವರೇ ಕಂಡು ಹಿಡಿದರು; ನಮ್ಮವರು ಹಿಂದುಳಿದಿದ್ದರು; ಇಲ್ಲಿ ಕತ್ತಲ ಯುಗ ಇತ್ತು – ಇತ್ಯಾದಿಗಳನ್ನೇ ಹೇಳುತ್ತಿದ್ದರೆ ನಮ್ಮ ಪೂರ್ವಜರ ಬಗ್ಗೆ ಮತ್ತು ನಮ್ಮ ದೇಶದ ಬಗ್ಗೆ ಉತ್ಸಾಹ ಬರಲು ಹೇಗೆ ತಾನೆ ಸಾಧ್ಯ?

    ಇವುಗಳಲ್ಲಿ ಅಸತ್ಯವಾದದ್ದೇನಾದರೂ ಇದ್ದರೆ ಅದನ್ನು ನಿರೂಪಿಸುವುದು ಬಿಟ್ಟು, ಈ ವಿಷಯವೇ ಬೇಡ ಎಂದು ನೀವು ವಾದಿಸುತ್ತಿರುವುದು ಬೌದ್ಧಿಕ ದಿವಾಳಿತನವನ್ನಷ್ಟೇ ಎತ್ತಿ ತೋರಿಸುತ್ತದೆ.

    ಉತ್ತರ
    • Santhosh Shetty's avatar
      ಜುಲೈ 18 2012

      ಅದನ್ನು ಹುಟ್ಟುಹಾಕಿದವರೇ ಸ್ಪಷ್ಟಪಡಿಸಬೇಕೆಂದೇನೂ ಇಲ್ಲ, ಆದರೆ ನಾವು ಮಾಡುತ್ತಿರುವುದು ಕೇಸರೀರಣ ಎಂದು ಅವರೇ ಒಪ್ಪಿಕೊಂಡ ಮೇಲೆ ಸ್ಪಷ್ಟವಾಗಿ ಅದನ್ನ ತಿಳಿಸಬೇಕಲ್ಲವೇ? ಆಗ ಅವರ ವಿರೋಧಿ ಗುಂಪುಗಳು ಬಾಯಿಗೆ ಬಂದ ಹಾಗೆ ಮಾತನಾಡುವುದಕ್ಕೆ ಕಡಿವಾಣ ಬೀಳುತ್ತದೆ.

      ರಾಷ್ಟ್ರೀಯವಾದ ಎಂಬುದು ಹುಟ್ಟಿರುವುದೇ ಪಶ್ಚಿಮದ Nation-States ಸಿದ್ದಾಂತದಿಂದ. ನಾನೇನೂ ವಿಶೇಷವಾಗಿ ಅದರಿಂದ ಪ್ರೇರಣೆಗೊಳ್ಳುವ ಅಗತ್ಯವಿಲ್ಲ. ರಾಷ್ಟ್ರೀಯವಾದದ ಹಿನ್ನೆಲೆಯನ್ನು ತಾವು ತಿಳಿದುಕೊಳ್ಳದೆ ಇದ್ದರೆ ಅದು ತಮ್ಮ ಬೌದ್ದಿಕ ದಿವಾಳಿತನವನ್ನು ಹಾಗೂ ಸೋಮಾರಿತನವನ್ನು ತೋರಿಸುತ್ತದೆ. ಸಾಂಸ್ಕೃತಿಕ ರಾಷ್ಟ್ರೀಯವಾದ ಎಂದರೇನು? ಪಶ್ಚಿಮದ ರಾಷ್ಟ್ರೀಯವಾದವನ್ನು ತೆಗೆದು ಕೊಂಡು ಅದಕ್ಕೆ ಬೇರೆ ರೂಪ ನೀಡುತ್ತಾ ಅದನ್ನು ಸಾಂಸ್ಕೃತಿಕ ರಾಷ್ಟ್ರೀಯವಾದ ಎಂದರೆ ಪಶ್ಚಿಮದ ರಾಷ್ಟ್ರೀಯವಾದದ ಮತ್ತೊಂದು ರೂಪವಾಗುತ್ತದೆಯೇ ಹೊರತು ಅದಕ್ಕಿಂತ ದೊಡ್ಡ ವ್ಯತ್ಯಾಸವೇನೂ ಇಲ್ಲ. ಮತ್ತೊಂದು ಸ್ಪಷ್ಟತೆ ಇರಲಿ, ಇಂದು ನಾವು ದೇಶ ಅಂತ ಬಳಸುವುದಕ್ಕೂ ಪಶ್ಚಿಮದ ನೇಷನ್ ಅಂತ ಬಳಸುವುದಕ್ಕೂ ಬಹಳ ವ್ಯತ್ಯಾಸವಿದೆ. ಅವೆರಡೂ ಒಂದೇ ಅಲ್ಲ. ನಮ್ಮ ರಾಜ ಮಹಾರಾಜರು ಅಕ್ಕ ಪಕ್ಕದ ಪ್ರಾಂತ್ಯಗಳನ್ನು ಒಗ್ಗೂಡಿಸಿಗೊಂಡು ಹೊರಗಿನವರ ಆಕ್ರಮಣ ತಡೆದರೆ ಅದು ಏಕೆ ರಾಷ್ಟ್ರೀಯತೆ ಭಾವನೆಯಾಗಬೇಕು? ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಮಾತ್ರ ಎಂದೇಕೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇನ್ನು ಶಿವಾಜಿಯ ಕುರಿತು ನನಗೂ ಅಪಾರ ಹೆಮ್ಮೆ ಇದೆ, ಹಾಗೆಂದು ಅವರನ್ನು ನಮಗೆ ಬೇಕಾದ ರೀತಿಯಲ್ಲಿ ತಪ್ಪಾಗಿ ಅಥೈರ್ಥೈಸಿಕೊಳ್ಳುವ ಅಗತ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ James W. Laine ಎಂಬ ಚಿಂತಕರು ತಮ್ಮ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ನೋಡಿ..
      “Shivaji came from a “broken family”, with separated parents, he probably had a harem, he showed no interest in the bhakti saints, his ambition was to build a kingdom, not liberate a nation”
      ಇದೇನೂ ನನ್ನ ವಾಖ್ಯಾನವಲ್ಲ, ಪ್ರಸಿದ್ಧ ಚಿಂತಕರೊಬ್ಬರು ಸಂಶೋಧನೆ ನಡೆಸಿ ಬರೆದ ಪುಸ್ತಕದ ಸಾಲುಗಳು…..ಈ ಚಿಂತಕರ ಸಾಲುಗಳಲ್ಲಿಯೂ ಹಲವಾರು ತೊಂದರೆಗಳಿವೆ, ಸಧ್ಯಕ್ಕೆ ಅದನ್ನು ಚರ್ಚಿಸುವ ಅಗತ್ಯವಿಲ್ಲ. ಆದರೆ ಕೇವಲ ಪರಾಮರ್ಶನೆಗೆ ನೋಡಿ…

      ಇತಿಹಾಸದ ಮಹತ್ವದ ಕುರಿತು ಭೌದ್ದಿಕ ವಲಯದಲ್ಲಿ ಇಂದು ಹಲವಾರು ಚರ್ಚೆಗಳಾಗುತ್ತಿವೆ, ಅದನ್ನು ಸ್ವಲ್ಪ ಗಮನಿಸಿ, ಭಾರತದಂತಹ ರಾಷ್ಟ್ರಗಳಲ್ಲಿ ತಮ್ಮ ಗತವನ್ನು ಸ್ಮರಣೆಯಲ್ಲಿಟ್ಟುಕೊಳ್ಳುವ ಹಲವಾರು ವಿಧಾನಗಳಿವೆ, ಎಲ್ಲದಕ್ಕೂ ಚರಿತ್ರೆಯ(ಹಿಸ್ಟರಿ) ಬೆನ್ನು ಬೀಳಬೇಕೆಂದೇನೂ ಇಲ್ಲ.

      ಇನ್ಶೂನು, ನ್ಯದ ಅರ್ಥ ನಮ್ಮ ಸಂಪ್ರದಾಯದಲ್ಲಿ ವಿಭಿನ್ನವಾದುದು, ನೀವು ತಿಳಿದುಕೊಂಡಿರುವ ಸೊನ್ನೆ ಮತ್ತು ಶೂನ್ಯ ಇವೆರಡನ್ನೂ ಒಂದೇ ಅರ್ಥದಲ್ಲಿ ನಾವು ಬಳಸುವುದಿಲ್ಲ. ನೋಡಿ ಇಂತಹ ಚಿಕ್ಕ ಚಿಕ್ಕ ವ್ಯತ್ಯಾಸಗಳೇ ನಿಮಗೆ ತಿಳಿದಿಲ್ಲ, ಇನ್ನು ಸಂಸ್ಕೃತಿ ಸಂಪ್ರದಾಯದ ಬಗ್ಗೆ ಏನು ಹೇಳಿಕೊಡಲು ಸಾಧ್ಯ. ಗಣಿತದಲ್ಲಿ ಸೊನ್ನೆಯ ಮಹತ್ವ ಏನೆಂದು ನನಗೂ ತಿಳಿದಿದೆ. ಮತ್ತೊಂದು ವಿಚಾರ ನಮ್ಮ ಹಿಂದಿನ ಹಿರಿಯರು ಮಾಡಿರುವ ಸಾಧನೆಗಳನ್ನು ಓದಿಸುವುದರಲ್ಲಿ ಯಾವುದೇ ತೊಂದರೆ ಇಲ್ಲ, ಅವುಗಳನ್ನು ನಾವು ತಿಳಿದುಕೊಂಡರೆ ಯಾವುದೇ ತರಹದ ಲುಕ್ಸಾನೂ ಇಲ್ಲ. ಆದರೆ ನನ್ನ ಅಭಿಪ್ರಾಯವೇ ಬೇರೆ, ಕೇವಲ ಅವರ ಸಾಧನೆಗಳನ್ನು ಓದಿದರೆ ನಮ್ಮ ಸಂಸ್ಕೃತಿ ಅರ್ಥವಾಗಿ ಬಿಡುತ್ತದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಇದು ಸಾಧ್ಯವೇ? ಸಂಸ್ಕೃತಿಯನ್ನು ತಿಳಿದುಕೊಳ್ಳುವುದಕ್ಕೂ ಮಹಾಪುರುಷರ ಸಾಧನೆಗಳನ್ನು ತಿಳಿದುಕೊಳ್ಳುವುದಕ್ಕೂ ಸ್ವಲ್ಪವೂ ವ್ಯತ್ಯಾಸವಿಲ್ಲವೇ? ಎಂಬುದು ನನ್ನ ಪ್ರಶ್ನೆ. ಅದಕ್ಕೆ ಸಂಸ್ಕೃತಿಯ ಕುರಿತು ಸಂಶೋಧನೆ ನಡೆಸಿ ಪಾಶ್ಚಾತ್ಯರು ಇದುವರೆಗೂ ನಮ್ಮ ಕುರಿತು ಹೇಳಿರುವುದನ್ನು ಬಿಟ್ಟು ಹೊಸದಾಗಿ ನಮ್ಮ ಸಂಸ್ಕೃತಿಯಲ್ಲಿರುವ ಸತ್ವಗಳ ಬಗ್ಗೆ ತಿಳಿಸಿದರೆ ಅದು ಮುಂದಿನ ಪೀಳಿಗೆಗೆ ಅನುಕೂಲವಾಗಬಹುದು ಎಂಬುದಷ್ಟೇ ನನ್ನ ವಾದ.

      ಸಂಘಪರಿವಾರದವರು ನಮ್ಮ ಸಂಸ್ಕೃತಿಯ ಕುರಿತು ಹೊಂದಿರುವ ಗೌರವದ ಕುರಿತು ನನಗೂ ಸದ್ಭಾವನೆ ಇದೆ, ಹಾಗಾಗಿಯೇ ಅವರ ಹೆಜ್ಜೆಗಳು ಎಡವದಿರಲಿ ಎಂಬುದು ನನ್ನ ಆಶಯ…..

      ಉತ್ತರ
  2. SSNK's avatar
    ಸೆಪ್ಟೆಂ 5 2012

    ನೀವು ಹೇಳುತ್ತಿರುವ “Nation” ಮತ್ತು ಭಾರತೀಯ ಮೂಲದ “ರಾಷ್ಟ್ರ” – ಇವೆರಡೂ ಒಂದೇ ಅರ್ಥದ ಪದಗಳಲ್ಲ.
    ನೀವು ಹೇಳುತ್ತಿರುವ “Nation” ಪದವು ಯೂರೋಪಿನಲ್ಲಿ ಕೆಲವು ಶತಮಾನಗಳ ಹಿಂದೆ ಹುಟ್ಟಿದ್ದು.
    ಭಾರತೀಯ ಮೂಲದ “ರಾಷ್ಟ್ರ” ಹಲವು ಸಹಸ್ರಮಾನಗಳ ಹಿಂದೆಯೇ ಹುಟ್ಟಿರುವ ಪದ. ಋಗ್ವೇದದಲ್ಲೇ ರಾಷ್ಟ್ರ ಪದದ ಉಪಯೋಗ ಮಾಡಲಾಗಿದೆ.
    ಮತ್ತು “ರಾಷ್ಟ್ರ”ಕ್ಕೆ ಇಲ್ಲಿ ಬೇರೆಯೇ ಅರ್ಥವಿದೆ.
    ಹೀಗಾಗಿ, ನೀವು “Nation” ಪದವನ್ನು ಹಿಡಿದುಕೊಂಡು, ರಾಷ್ಟ್ರೀಯತೆಯನ್ನು “Nationalism” ಎಂದು ಅನುವಾದ ಮಾಡಿಕೊಂಡು ಓದಿದರೆ, ನಿಮಗೆ ರಾಷ್ಟ್ರೀಯತೆ ಅರ್ಥವಾಗುವುದು ಸಾಧ್ಯವೇ ಇಲ್ಲ.
    ಭಾರತದಲ್ಲಿ “ರಾಷ್ಟ್ರೀಯತೆ”ಗೂ ದೇಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ದೇಶವೆಂದರೆ ಭೂಪ್ರದೇಶವಷ್ಟೇ. ರಾಜ್ಯವೆಂದರೆ ಆಡಳಿತ.
    ಆದರೆ, ಇದಕ್ಕಿಂತ ಸಂಪೂರ್ಣ ಭಿನ್ನವಾದುದು “ರಾಷ್ಟ್ರ” – ಅದು ಭೂಪ್ರದೇಶಕ್ಕೂ ಸಂಬಂಧಿಸಿದ್ದಲ್ಲ, ಆಡಳಿತಕ್ಕೂ ಸಂಬಂಧಿಸಿದ್ದಲ್ಲ. ಅದೂ ಕೇವಲ ಜನಗಳಿಗೆ ಸಂಬಂಧಿಸಿದ್ದು ಮತ್ತು ಅದು ಕೇವಲ ಭಾವನಾತ್ಮಕ ಸಂಬಂಧವನ್ನು ಕುರಿತಾದ್ದು.

    ನೀವು ಪ್ರಾಯಶಃ ಸಂಸ್ಕೃತವನ್ನು ಕಲಿತಿಲ್ಲ. ಹೀಗಾಗಿ, ವೇದಾಭ್ಯಾಸ ನಿಮಗೆ ಸಾಧ್ಯವೇ ಇಲ್ಲ. ವೇದವನ್ನು ತಿಳಿಯದೇ, ನಮ್ಮಲ್ಲಿ “ರಾಷ್ಟ್ರೀಯತೆ”ಯ ಕಲ್ಪನೆಯೇ ಇರಲಿಲ್ಲ ಎಂದರೆ, ಅದ್ನು ನಿಮ್ಮ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಕೇವಲ ಪಾಶ್ಚಾತ್ಯರು ತಿಳಿಸಿದ್ದನ್ನೇ ಗಿಳಿಪಾಠದಂತೆ ಓದಿಕೊಂಡರೆ ಆಗುವ ಪರಿಣಾಮವೇ ಇದು.
    ಇದು ಟೀಕೆಯಲ್ಲ; ಬದಲಾಗಿ ವಾಸ್ತವ.
    ನಮ್ಮಲ್ಲಿ ಹೆಚ್ಚಿನವರಿಗೆ ಸಂಸ್ಕೃತ ತಿಳಿಯದು. ಪರಿಣಾಮವಾಗಿ ನಮ್ಮ ಪ್ರಾಚೀನ ಸಾಹಿತ್ಯ ಓದಲು ಸಾಧ್ಯವಿಲ್ಲ. ಅದನು ತಿಳಿದುಕೊಳ್ಳಲು ಆಸಕ್ತಿಯಿದ್ದರೂ, ಆಂಗ್ಲ ಭಾಷಾಂತರವನ್ನೇ ಓದಿಕೊಳ್ಳಬೇಕು. ಆ ಭಾಷಾಂತರವೂ ಪಶ್ಚಿಮದವರ ಭಾಷಾಂತರವೇ! ಹೀಗಿರುವಾಗ, “ನಮ್ಮ” ಕುರಿತಾದ “ಸತ್ಯ ದರ್ಶನ” ಆಗದಿರುವುದರಲ್ಲಿ ಆಶ್ಚರ್ಯವಿಲ್ಲ. ಕನಿಷ್ಠಪಕ್ಷ ತಿಳಿದುಕೊಳ್ಳಬೇಕೆಂಬ ಆಸಕ್ತಿಯಿದ್ದರೆ ಸಾಕು.

    ನೀವು “Open Minded” ಆಗಿದ್ದೀರೆಂದು ನನ್ನ ಅನಿಸಿಕೆ. ಹೀಗಾಗಿ, ತಿಳಿದಿರದ ವಿಷಯಗಳನ್ನು ಒಪ್ಪಿಕೊಂಡು ತಿಳಿದುಕೊಳ್ಳುವ ಪ್ರಯತ್ನ ಮಾಡಬಹುದು.
    ನೀವು “ರಾಷ್ಟ್ರೀಯತೆ”ಯ ಕುರಿತಾಗಿ ಹೆಚ್ಚು ತಿಳಿದುಕೊಳ್ಳಲು ಕೆಳಗಿನ ಕೊಂಡಿಗಳನ್ನು ಅಭ್ಯಸಿಸಿ:
    ೧. http://janajaati.blogspot.in/2006/03/bharata-rashtra.html
    ೨. http://vandemataram.com/www/vindex.jsp?sno=62
    ೩. http://vedpradip.com/articlecontent.php?aid=199&linkid=1&catid=10&subcatid=16

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments