ವಿಷಯದ ವಿವರಗಳಿಗೆ ದಾಟಿರಿ

ಜುಲೈ 20, 2012

2

ಹಿಂದುತ್ವವೇ ನಮ್ಮ ತತ್ವ ಎಂದು ಸಾರುತ್ತ ಮಾಡಿದ್ದೇನು?

‍ನಿಲುಮೆ ಮೂಲಕ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಸಂಭ್ರಮ…ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಿಕೊಂಡು ಸಂತೋಷದಿಂದ ಬದುಕು ಸಾಗಿಸಬಹುದು ಎನ್ನುವ ಅಸೆಯ ಅಂಬಾರಿಯನ್ನು ಹೊಡೆದು ಉರುಳಿಸಿದರಲ್ಲಾ ಎನ್ನುವ ಭಾವನೆ ಮೂಡಿದರೆ ತಪ್ಪಲ್ಲ. ಕಾರಣ ರಾಜ್ಯದ ರಾಜಕೀಯದಲ್ಲಿನ ಪ್ರಸ್ತುತ ಬೆಳವಣಿಗೆ. 1950ರಲ್ಲಿ ಸಂವಿಧಾನ ರಚನೆಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು ಶಾಸಕಾಂಗ,ನ್ಯಾಯಾಂಗ,ಕಾರ್ಯಾಂಗ ಹಾಗೂ ಮಾಧ್ಯಮರಂಗಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಪ್ರಮುಖ ಪಾತ್ರಧಾರಿಗಳು ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದ ಕಾಲ ಮರೆಯಾಗಿದೆ. ಆದರೆ ಯಾವುದೇ ರಂಗದಲ್ಲಿ ಲೋಪದೋಷಗಳಾದರೂ ಕಷ್ಟ ಅನುಭವಿಸುವವರು ಸಾಮಾನ್ಯ ಜನತೆ ಎನ್ನುವುದು ಸ್ಪಷ್ಟ.

ಯತ್ಖಲು ಖಲಮುಖಹುತವಹವಿನಿಹಿತಮಪಿ ಶುದ್ದಿಮೇವ ಪರಮೇತಿ
ತದನಲ ಶೌಚಮಿವಾಂಶುಕಮಿಹ ಲೋಕೇ ದುರ್ಲಭಂ ಪ್ರೇಮ||

ನೀಚರ ಬಾಯೆಂಬ ಬೆಂಕಿಯಲ್ಲಿ ಬಿದ್ದದ್ದೆಲ್ಲ ಶುದ್ದವಾಗುವುದೆಂಬ ಮಾತು ಸರ್ವಥಾ ಸರಿಯಲ್ಲ. ಏಕೆಂದರೆ ಬೆಂಕಿಯಲ್ಲಿ ಬಿದ್ದು ಶುದ್ದವಾಗಿ ಉಳಿದು ಬಂದ ಬಟ್ಟೆಯೆಷ್ಟು ದುರ್ಲಭವೋ ದುಷ್ಟರ ಬಾಯಿಗೆ ಸಿಲುಕಿ ಶುದ್ದವಾಗಿ ಹೊರಬಂದ ಸದ್ಗುಣಗಳು ಅಷ್ಟೇ ದುರ್ಲಭ.

ಕೇಂದ್ರದಲ್ಲಿ ಹಲವಾರು ವರ್ಷಗಳ ಕಾಂಗ್ರೆಸ್ ಆಡಳಿತ ನಡೆಸಿದ್ದರೂ ಉತ್ತಮ ಆಡಳಿತ ನೀಡಿದ್ದಾರೆ ಎನ್ನುವ ಗರಿ ಹೊತ್ತಿರುವುದು ಅಟಲ್ ಬಿಹಾರಿ ವಾಜಪೇಯಿ ಎನ್ನುವುದು ಸ್ಪಷ್ಟ. ಅದಕ್ಕಾಗಿಯೇ ಹಿರಿಯರು ಉಲ್ಲೇಖ ಮಾಡಿರುವುದು ಪಾರದರ್ಶಕ ಆಡಳಿತಕ್ಕೆ ಮಾದರಿ ಅಟಲ್ಜೀಯೆಂದು. ಆದರೆ ನಿಷ್ಠಾವಂತ ವ್ಯಕ್ತಿಗಳು ಆಡಳಿತ ಮಾಡಿದ ಬಿಜೆಪಿ ಪಾಳಯದಲ್ಲಿಂದು ಭ್ರಷ್ಠಾಚಾರಿಗಳು ನಾಯಿಕೊಡೆಯಂತೆ ತಲೆ ಎತ್ತಿದ್ದಾರೆ ಎನ್ನುವುದು ಅನಕ್ಷರಸ್ಥನಿಗೂ ತಿಳಿದಿದೆ. ಸಂಘ ಪರಿವಾರದ ದ್ಯೇಯ ನಿಷ್ಠ ಪ್ರತಿಪಾದಕರೆಂದು ಸಾರುವ ಬಿಜೆಪಿ ಪಕ್ಷದಲ್ಲಿಂದು ಅದರಲ್ಲೂ ರಾಜ್ಯ ರಾಜಕಾರಣದಲ್ಲಿ ತೆರೆಮರೆಯಲ್ಲಿ ವ್ಯಕ್ತಿಯೋ ಅಥವಾ ಸಂಘಟನೆಯೋ ಕೆಲಸ ಮಾಡುತ್ತಾ ನಿಷ್ಠಾವಂತರಿಗೆ ಅವಮಾನ ಮಾಡಿರುವುದು ಅವರ ದುರಾಡಳಿತಕ್ಕೆ ಸಾಕ್ಷಿಯಾಗಿದೆ.

ಆಡಳಿತದ  4 ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯಾಗಿದೆ ಎಂದು ಹೆಮ್ಮೆ ಪಡಲು ಸಾಧ್ಯವೇ? ಇವರ ರಾಜಕೀಯ ಕಚ್ಚಾಟದಲ್ಲಿ ಮಾಡಬಾರದ ಅನ್ಯಾಯ ಮಾಡುತ್ತಾ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೊಡೆದಾಟ ಬಣ ಹಾಗೂ ಜಾತಿ ರಾಜಕೀಯ ಮಾಡುತ್ತಾ ನಂಬಿಕೆ ಕಳೆದುಕೊಂಡಿದ್ದಾರೆ. ಜನತೆ ಇವರು ತಮ್ಮ ನಾಯಕ ಆಗಬಹುದು ಎಂದು ಅತ್ಯಂತ ನಂಬಿಕೆಯಿಂದ ಆರಿಸಿ ಕಳುಹಿದರೆ ಇವರು ಮಾಡುವ ಅನಾಚಾರದಿಂದ ಮುಂದಿನ ದಿನದಲ್ಲಿ ಮತದಾನ ಅಥವಾ ರಾಜಕೀಯದ ಹೆಸರು ಹೇಳಿದರೆ ಉರಿದು ಬೀಳುವ ಸಾಧ್ಯತೆಯೇ ಹೆಚ್ಚಾಗಿದೆ. ಅಧಿಕಾರದಲ್ಲಿದ್ದಾಗ ಭ್ರಷ್ಠಾಚಾರದ ಕೀರ್ತಿ ಅಂಟಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಅವರುಗಳೇ ಆಡಳಿತ ಚುಕ್ಕಾಣಿ ಹಿಡಿದಿರುವ ನಾಯಕರನ್ನೇ ಹಿಡಿದು ಅಲ್ಲಾಡಿಸುತ್ತಿದ್ದಾರೆ ಎನ್ನುವಾಗ ರಾಜಕೀಯದ ಗುಣಮಟ್ಟ ಯಾವ ಮಟ್ಟಕ್ಕಿಳಿದಿದೆ ಎಂದು ತಿಳಿಯಬಹುದಾಗಿದೆ.

ಕಾಂಗ್ರೆಸ್ನ ದೀರ್ಘ ಆಡಳಿತದಲ್ಲಿ ಭ್ರಷ್ಠಾಚಾರಿಗಳು ಇರಲಿಲ್ಲವೆಂದಲ್ಲ. ಸಾವಿರಾರು ಭ್ರಷ್ಠಾಚಾರಿಗಳು ಇದ್ದಿದ್ದರು. ಆದರೆ ಬಿಜೆಪಿಯ ಬೃಹತ್ ತಿಮಿಂಗಿಲಗಳ ಎದುರು ಇವರೆಲ್ಲಾ ಸಾಮಾನ್ಯ ಎನ್ನಬಹುದೇ? ಭೂಹಗರಣದ ಅರೋಪ ಹೊತ್ತಿರುವ ವ್ಯಕ್ತಿ ಯಡಿಯೂರಪ್ಪ ರಾಜ್ಯದ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡಿ, ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡುವ ತಾಕತ್ತು ಇದೆಯೆಂದಾದರೆ ಅವರ ಸಾಮರ್ಥ್ಯ ಹಾಗೂ ಬಿಜೆಪಿಯ ದ್ಯೇಯಗಳು ಯಾವ ಮಟ್ಟದ್ದಾಗಿದೆ ಎನ್ನುವ ಸೂಕ್ಷ್ಮ ಸಂಗತಿಯನ್ನು ಗ್ರಹಿಸುವ ಶಕ್ತಿ ಪ್ರಿಯ ಓದುಗರಿಗೆ ಬಿಟ್ಟಿದ್ದೇನೆ. ಈಗಿನ ಬಿಜೆಪಿ ಪಾಳಯದಲ್ಲಿ ಡಿನೋಟಿಫಿಕೇಶನ್ಗೆ ಸಂಬಂಧಿಸಿದ ನಾಯಕರು, ಭ್ರಷ್ಠಾಚಾರಿಗಳು, ಬಲತ್ಕಾರ ಆರೋಪ ಹೊತ್ತ ವ್ಯಕ್ತಿಗಳು, ಬ್ಲೂಬಾಯ್ಸ್ ಪ್ರಕರಣದಲ್ಲಿ ಬಾಗಿಯಾದ ಪ್ರತಿನಿಧಿಗಳು, ರೇವ್ ಪಾರ್ಟಿ ಹೀಗೆ ಹುಡುಕುತ್ತಾ ಹೋದರೆ ಪ್ರತಿಯೊಬ್ಬ ಸಚಿವನ ಮುಂದೆಯೂ ಗುರುತಿಸಬಹುದಾದ ಕೆಲವು ಬಿರುದಾವಳಿಗಳು ದೊರಕುತ್ತದೆ. ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟಿಯಂಥ ಕೆಲವು ನಾಯಕರು ಅಪವಾದವಿರಬಹುದು.

ಲಾಭ ಪ್ರಣಯಿನೋ ನೀಚಾ ಮಾನಕಾಮಾ ಮನಸ್ವಿನಃ
ಮದ್ಗುಃ ಸರಸಿ ಮತ್ಸ್ಯಾರ್ಥಿ ಹಂಸಸ್ಯೇಷ್ಟಾ ಪ್ರಸನ್ನತಾ||

ನೀಚರು ಲಾಭವನ್ನೆ ಬಯಸುವವರು.ಉತ್ತಮರು ಗೌರವ ಬಯಸುವರು. ಸುಂದರ ಸರೋವರದಲ್ಲಿ ನೀರು ಕಾಗೆಯು ಮೀನನ್ನು ಬಯಸಿದರೆ, ಹಂಸವು ನೀರಿನ ತಿಳಿತನವನ್ನೇ ಬಯಸುತ್ತದೆ. ಈ ಮಾತು ಹಾಲಾಡಿಯವರಿಗೆ ಮಾತ್ರ ಸೀಮಿತವಾದುದು.

ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಆದ ಅವಮಾನಕ್ಕೆ ನುಡಿದಂತೆ ನಡೆದು ರಾಜಿನಾಮೆ ಸಲ್ಲಿಸಿದ ಸತ್ಯಹರಿಶ್ಚಂದ್ರನಾಗಿ ಜನಬಿಂಬಿತರಾಗಿದ್ದಾರೆ. ಬಿಜೆಪಿಯಲ್ಲಿ ನಿಷ್ಠಾವಂತ ನಾಯಕನಿಗೆ ಸ್ಥಾನಮಾನ ಹಾಗೂ ಉತ್ತಮ ಮರ್ಯಾದೆ ನೀಡದೆ ಪಕ್ಷವೆ ತನ್ನ ಸರ್ವಸ್ವವೆಂದು ನಂಬಿಕೊಂಡು ಅವಿರತ ಶ್ರಮಿಸಿದ ಹಾಲಾಡಿಯವರನ್ನು ಬೆಂಗಳೂರಿಗೆ ಕರೆಯಿಸಿ ಅವಮಾನ ಮಾಡಿರುವುದು ನ್ಯಾಯವೇ?

ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಕುಂದಾಪುರದಲ್ಲಿ 3 ಬಾರಿ ಅತ್ಯಂತ ಹೆಚ್ಚು ಅಂತರಗಳಿಂದ ಎದುರಾಳಿಯನ್ನು ಜಯಿಸಿ,ಜನಸೇವೆಯಲ್ಲಿಯೆ ಸಂತೋಷ ಗಳಿಸಿದ್ದಾರೆ. ಬಡವರ ಸೇವೆ ಮಾಡುವಲ್ಲಿ ಸಂತೋಷ ಅನುಭವಿಸಿದ ಹಾಲಾಡಿ ಯಾವುದೇ ಸಚಿವ ಸ್ಥಾನಕ್ಕೆ ಆಸೆ ಪಟ್ಟವರಲ್ಲ.ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಬೆಂಬಲ ವ್ಯಕ್ತಪಡಿಸುವಾಗ 4 ಕೋಟಿ ರೂಪಾಯಿಯೊಂದಿಗೆ ಹಾಗೂ ಸಚಿವ ಸ್ಥಾನಕ್ಕೆ ಕರೆಬಂದಾಗ ಅದನ್ನು ಸ್ವೀಕರಿಸದೆ ಪಕ್ಷದ ಹಿರಿಯ ವ್ಯಕ್ತಿಗಳಿಗೆ ಬಿಟ್ಟುಕೊಟ್ಟ ಸಹೃದಯಿ. ಶೆಟ್ಟರ್ ರಾಜ್ಯದ ಮುಖ್ಯಮಂತ್ರಿ ಸ್ಥಾನ ಸ್ವೀಕರಿಸುವಾಗ ಪಕ್ಷದ ಹಿರಿಯ ವ್ಯಕ್ತಿಯೊರ್ವರು (ಹೆಸರು ಅಪ್ರಸ್ತುತ) ಕರೆ ಮಾಡಿ ನೀವು ಮಂತ್ರಿ ಪದವಿಯ ಪ್ರಮಾಣ ವಚನ ಸ್ವೀಕರಿಸಲು ಬರಬೇಕು ಎಂದು ಹೇಳಿದ ಮೇಲೆ ಯಾವುದೇ ಬಣ ರಾಜಕೀಯಕ್ಕೂ ಅಸ್ತು ಎನ್ನದ ಕುಂದಾಪುರ ಶಾಸಕರು ಬುಧವಾರ ರಾತ್ರಿ ಬೆಂಗಳೂರಿಗೆ ತೆರಳುತ್ತಾರೆ. ಕೊನೆಯ ಕ್ಷಣದಲ್ಲಿ ಅವರಿಗೆ ಮಂತ್ರಿ ಸ್ಥಾನ ನೀಡದೆ ಕುಂದಾಪುರದವರೆ ಆದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಿ ನಿಷ್ಠಾವಂತ ಜನಾನುರಾಗಿದ್ದ ಹಾಲಾಡಿಯವರಿಗೆ ಅನ್ಯಾಯ ಮಾಡಿರುವುದು ಎಲ್ಲರಿಗೂ ತಿಳಿದಿದೆ.

ಕಡು ಬಡತನದಿಂದ ಬಂದ ಕೋಟ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ನೀಡಿದ ಕುರಿತು ಯಾವುದೇ ವೈಮನಸ್ಸು ತೋರದ ಹಾಲಾಡಿ ಅವರು ತನ್ನನ್ನು ರಾಜಧಾನಿಗೆ ಕರೆಸಿಕೊಂಡು ಅವಮಾನ ಮಾಡಿದ್ದಾರೆ. ಇದು ಕುಂದಾಪುರದ ಜನತೆಗೆ ಮಾಡಿದ ಅನ್ಯಾಯವೆಂದು ರಾಜೀನಾಮೆ ನೀಡಲು ಮುಂದಾದರು. ಇದು ನಡೆದ ಕೆಲವೆ ನಿಮಿಷಗಳಲ್ಲಿ ಅವರ ಕ್ಷೇತ್ರದಲ್ಲಿ ಬೆಂಬಲಿಗರಿಂದ ಪ್ರತಿಭಟನೆ ನಡೆಯಿತು. ವ್ಯಕ್ತಿಗಾಗಿಯೇ ಹೊರತು ಯಾವುದೇ ರಾಜಕೀಯ ಪಕ್ಷದ ಬೆಂಬಲದಿಂದಲ್ಲದೇ ಅವರ ಅಭಿಮಾನಿಗಳು,  ಕುಂದಾಪುರದ ಇತರ ಪಕ್ಷದ ನಾಯಕರು, ವಿವಿಧ ಸಂಘಟನೆಯ  ಮುಖಂಡರು ಹಾಲಾಡಿಯವರಿಗೆ ಆದ ಅನ್ಯಾಯಕ್ಕೆ ಉತ್ತರವಾಗಿ ಬಂದ್ಗೆ ಕರೆ ನೀಡಿದರು. ಇದಕ್ಕೆ ಸಾಕ್ಷಿಯೆಂಬಂತೆ ಕುಂದಾಪುರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಸ್ವಯಂ-ಪ್ರೇರಿತರಾಗಿ ಬಂದ್ಗೆ ಸಹಕರಿಸಿದ್ದರು. ಹಾಲಾಡಿಯವರೆ ಸ್ವತಃ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಎನ್ನುವ ಹೇಳಿಕೆಗೆ ನಾಡಿನ ಜನತೆ ಸಕರಾತ್ಮಕವಾಗಿಯೆ ಸ್ಪಂದಿಸಿದರು. ರಾಜಕೀಯ ವ್ಯವಸ್ಥೆಯಲ್ಲಿ ಯಾವುದೆ ಬಣ ರಾಜಕೀಯ ಮಾಡದೆ ಸ್ವಾರ್ಥ ಸಾಧಿಸದೆ ಸಚಿವ ಸ್ಥಾನಕ್ಕೆ ಆಕಾಂಕ್ಷಿಯಾಗಿರದೆ  ಕುಂದಾಪುರದ ಜನತೆಗೆ ನೀಡಿದ ನಿಸ್ವಾರ್ಥ ಸೇವೆಯ ಪರಿಣಾಮವಾಗಿದೆ. ಕುಂದಾಪುರದ ಜನತೆಯ ಪಾಲಿಗೆ ನೆಚ್ಚಿನ ಶ್ರೀನಿವಾಸಣ್ಣನಾಗಿ ಸಣ್ಣ ಮಕ್ಕಳಿಗೂ ಮಾರ್ಗದರ್ಶಕರಾಗಿದ್ದಾರೆ. ಇದು ಅತಿಶಯೋಕ್ತಿಯಲ್ಲ. ಇದರ ಅನುಭವವಾಗಬೇಕಿದ್ದರೆ ಹಾಲಾಡಿಯವರನ್ನೊಮ್ಮೆ ಭೇಟಿಯಾಗಿ ಅಥವಾ ಕುಂದಾಪುರದ ಜನತೆಯಲ್ಲಿ ವಿಚಾರಿಸಿದಾಗಲೇ ನಿಜಾಂಶ ತಿಳಿಯುತ್ತದೆ.

ರಾಜ್ಯದ ರಾಜಕೀಯ ಬೆಳವಣಿಗೆ ಗಮನಿಸಿದಾಗ ಅಸಹ್ಯವೆನಿಸುತ್ತಿದೆ. ಭ್ರಷ್ಠಾಚಾರಿಗಳಿಂದ ಕೂಡಿದ ಆಡಳಿತ ಸರಕಾರವೆನ್ನುವ ಹಣೆಪಟ್ಟಿ  ಕಟ್ಟಿಕೊಂಡ ಭಾ.ಜ.ಪ ಇಂದು ಬಣ ರಾಜಕೀಯ ಹಾಗೂ ಜಾತಿ ರಾಜಕೀಯ ಸೃಷ್ಠಿಸಿದೆ. ಯಡಿಯೂರಪ್ಪ ಬಣದೊಂದಿಗೆ ಪ್ರಾರಂಭವಾದ ರಾಜಕೀಯದಾಟ ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದೆ. ಶೆಟ್ರಂಗಡಿ ರಾಜ್ಯದಲ್ಲಿ ತೆರೆಯುವಾಗ ಹಲವು ಭಿನ್ನಮತ ಆದರೂ ಪ್ರಮಾಣ ವಚನ ಸ್ವೀಕರಿಸಿದ್ದರು. ಶೆಟ್ಟರ್ ಪ್ರಾಮಾಣಿಕರಾಗಿ ಕಾರ್ಯನಿರ್ವಹಿಸುತ್ತಾರೆ ಎನ್ನುವ ನಂಬಿಕೆ ಜನರಲ್ಲಿ ಇದ್ದರೂ ಡಿ.ವಿ.ಸದಾನಂದ ಗೌಡರು ಯಾವ ತಪ್ಪು ಎಸಗಿದ್ದಾರೆ ಎನ್ನುವ ತರ್ಕ ಎದುರಾಗುತ್ತದೆ. ಹೈಕಮಾಂಡ್ನ ಆಜ್ಞೆಗೆ ಬದ್ದರಾಗಿ ಡಿ.ವಿ.ಅಧ್ಯಾಯಕ್ಕೆ ತಿಲಾಂಜಲಿ ಇಟ್ಟರು. ಈ ಸಂದರ್ಭ ಗೌಡರ ಪರವಾಗಿ ಒಂದೂ ಮಾತನಾಡದ ದ.ಕ.ಜಿಲ್ಲೆಯ ಶಾಸಕರು ಪ್ರಮಾಣ ವಚನ ಸ್ವೀಕರಿಸುವಾಗ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಒಂದೆ ಕಾರಣಕ್ಕೆ ಹಲವಾರು ಪ್ರತಿಕ್ರಿಯೆಗಳು ಸೃಷ್ಠಿಯಾದವು. ಆದರೆ ನಿಷ್ಠಾವಂತ ನಾಯಕರಾದ ಹಾಲಾಡಿ ಯಾವುದೇ ಜಾತಿ, ಬಣರಾಜಕೀಯ ಮಾಡದೇ ಹಾಲಾಡಿಯಲ್ಲೇ ಇದ್ದು ಪ್ರಮಾಣವಚನ ಸ್ವೀಕರಿಸುವ ದಿನ ಬೆಂಗಳೂರಿಗೆ ಕರೆಯಿಸಿ ಅವಮಾನ ಮಾಡಿರುವುದಕ್ಕೆ ರಾಜೀನಾಮೆ ಕೊಡುವುದು ಸಮಂಜಸ.

ಆದರೆ ಉಡುಪಿಯ ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಬಿ.ನಾಗರಾಜ ಶೆಟ್ಟಿ ಇತರ ಕರಾವಳಿಯ ನಾಯಕರು ಮಾಧ್ಯಮದೆದುರು ರಾಜೀನಾಮೆ ಕೊಡುತ್ತೇವೆ ಎಂದು ಘಂಟಾಘೋಷವಾಗಿ ಸಾರಿರುವುದಕ್ಕೆ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ. ನಾಲಗೆಗೆ ಎಲುಬಿಲ್ಲವೆಂದು ಮನಬಂದಂತೆ ಮಾತನಾಡುವುದು ತಪ್ಪು ಎಂದು ಸಾಮಾನ್ಯನಿಗೂ ತಿಳಿದಿದ್ದರೂ ಮಾಧ್ಯಮದ ಮುಂದೆ ಸಾಚಾ ಎಂದು ತೋರಿಸಲು ರಾಜೀನಾಮೆ ನೀಡುತ್ತೇವೆ ಎನ್ನುವ ಬಿಜೆಪಿ ನಾಯಕರು ಯಾವ ರೀತಿ ಜನಸೇವೆ ಮಾಡುತ್ತಾರೋ ಎಂದು ತಿಳಿಯಬೇಕಾಗಿದೆ. ಈ ರಾಜಕೀಯ ಗೊಂದಲ ಪ್ರಾರಂಭವಾಗುವುದಕ್ಕಿಂತ ಒಂದು ತಿಂಗಳ ಮುಂಚಿತವಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಜೆ.ಡಿ.ಎಸ್ ಸೇರುತ್ತಾರೆ ಎನ್ನುವ ಮಾಹಿತಿಯನ್ನು ಮಂಗಳೂರಿನ ಸ್ಥಳೀಯ ಪತ್ರಿಕೆಯೊಂದು ಬಿತ್ತರಿಸಿತ್ತು. ಈ ಸಂದರ್ಭ ರಾಜಕೀಯದ ಗೊಂದಲ ನಾಗರಾಜ ಶೆಟ್ಟಿ ಹಾದಿ ಸುಗಮವಾಗಿಸಿತು. ನಂತರದ ಒಂದು ದಿನದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮಾತ್ರವಲ್ಲ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಗುಡ್ಬೈ ಹೇಳಿದ್ದಾರೆ.

ಉಡುಪಿಯ ಶಾಸಕ ರಘುಪತಿ ಭಟ್ ಹಾಲಾಡಿ ವರಾತ ತೆಗೆಯುವುದಕ್ಕಿಂತ ಮುಂಚಿತ ರಾಜೀನಾಮೆ ಕೊಡುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟಿದ್ದರು. ನಂತರದ ಬೆಳವಣಿಗೆಯಲ್ಲಿ ರಾಜೀನಾಮೆ ಕುರಿತ ಸುದ್ದಿಯಿಲ್ಲದೆ ಹಾಲಾಡಿಯವರು ನೀಡಬಾರದು ಎಂದು ತಾಕೀತು ಮಾಡಿದ್ದಾರೆ ಎನ್ನುವ ಹೇಳಿಕೆ ನೀಡಿದ್ದಾರೆ. ಅಚಲ ನಿರ್ಧಾರ ಮಾಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜೀನಾಮೆ ಕೊಟ್ಟಿದ್ದು, ಜೆಡಿಎಸ್ನ ವರಿಷ್ಠರು, ಶ್ರೀರಾಮುಲು ನೇರವಾಗಿ ಪಕ್ಷಕ್ಕೆ ಆಹ್ವಾನ ನೀಡಿದರೂ ಬಿಜೆಪಿಯನ್ನು ತೊರೆಯುವ ನಿರ್ಧಾರ ಮಾಡಿಲ್ಲ. ಬೆಂಬಲಿಗರ ಹಾಗೂ ಪಕ್ಷದ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿರುವುದು ಜನತೆಯ ಮೇಲೆ ಅವರು ಇಟ್ಟಂತಹ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಬೇರೆ ಪಕ್ಷದಿಂದ ಆಹ್ವಾನ ಬಂದಾಗ ನೆಗೆಯುವ ರಾಜಕಾರಣಿಗಳಿಗೆ ಇವರು ಯಾಕೆ ಮಾದರಿಯಾಗುವುದಿಲ್ಲ ಎನ್ನುವುದು ನಿಗೂಡವಾಗಿದೆ ಅಲ್ಲವೇ?  ಇದೇ ಕಣ್ರಿ ಹಾಲಾಡಿ ಶ್ರೀನಿವಾಸಣ್ಣನ ವಿಶೇಷತೆ .

ಶ್ರೀನಿವಾಸ ಶೆಟ್ಟಿಯವರಿಗೆ ಮಂತ್ರಿಯ ಸ್ಥಾನ ನೀಡುತ್ತೇವೆ ಎಂದು ಬೆಂಗಳೂರಿಗೆ ಕರೆಸಿಕೊಂಡು ಆರ್.ಎಸ್.ಎಸ್ ನಾಯಕರ ಮಾತಿಗೆ ಕಟ್ಟುಬಿದ್ದು ಕೊನೆಯ ಕ್ಷಣದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಂತ್ರಿಯ ಸ್ಥಾನ ನೀಡಿರುವುದರ ಕುರಿತು ಹಾಲಾಡಿಯವರಿಗೆ ಬೇಸರವಿಲ್ಲದಿದ್ದರೂ ಕರೆಯಿಸಿ ಅವಮಾನ ಮಾಡಿದ್ದಾರೆ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಆರ್ಎಸ್ಎಸ್ನಲ್ಲಿಯ ಕಲ್ಲಡ್ಕ ಪ್ರಭಾಕರ ಭಟ್, ಕೃಷ್ಣಪ್ರಸಾದ್ ಅಡ್ಯಂತಾಯ, ಸುಬ್ರಹ್ಮಣ್ಯ ಹೊಳ್ಳ, ಮೈ.ಚ.ಜಯದೇವ ಅವರ ಹೆಸರುಗಳು ಹಾಲಾಡಿಯವರಿಗೆ ಸಿಗಬೇಕಾಗಿದ್ದ ಸಚಿವ ಸ್ಥಾನ ತಪ್ಪಿಸಲು ಪ್ರಮುಖ ಕಾರಣರಾಗಿದ್ದಾರೆ ಎನ್ನುವ ಮಾತು ಕರಾವಳಿಯಲ್ಲಿ ಕೇಳಿಬರುತ್ತಿದೆ. ಆರ್.ಎಸ್.ಎಸ್ ದೇಶ ಸೇವೆಯ ಹೆಸರನ್ನು ಹೇಳಿಕೊಂಡು ಭವಿತವ್ಯದ ಅಖಂಡ ಭಾರತ ನಿರ್ಮಾಣ ಮಾಡುತ್ತೇವೆ ಎನ್ನುವ ಸೋಗಿನಲ್ಲಿ ನಿಷ್ಠಾವಂತರನ್ನು ತುಳಿಯುತ್ತಿರುವುದು ಕರಾವಳಿಯಲ್ಲಿ ವಿಪರೀತವಾಗಿದೆ.

ಜಾತಿಯೇ ಇಲ್ಲವೆಂದು ಹೇಳುವ ಸಂಘಪರಿವಾರ ಇಂದು ಕರಾವಳಿಯಲ್ಲಿ ಜಾತಿಯ ಅಲೆಯನ್ನು ಸೃಷ್ಠಿಸಿದೆ. ರಾಜ್ಯದಲ್ಲಿ ಜಾತಿ ರಾಜಕೀಯ ಮಾಡಿ ಲಿಂಗಾಯಿತ, ಒಕ್ಕಲಿಗ ಎನ್ನುವ ಎರಡು ಬಣಗಳನ್ನಾಗಿ ಮಾಡಿ ಯಾವುದೇ ಜಾತಿ ರಾಜಕೀಯಕ್ಕೆ ಆಸ್ಪದ ನೀಡದ ಕರಾವಳಿ ಶಾಸಕರಲ್ಲಿ ದ್ವೇಷವನ್ನು ಹೊತ್ತಿಸಬೇಕು ಎನ್ನುವ ಕಾರಣದಿಂದ ಹಾಲಾಡಿ, ಕೋಟ ಇವರಿಬ್ಬರನ್ನು ಕರೆಯಿಸಿ ಹಾಲಾಡಿಗೆ ಅವಮಾನ ಮಾಡಿದ್ದಾರೆ. ಬಿಲ್ಲವ ಸಮುದಾಯಕ್ಕೆ ಸೇರಿದ ಕೋಟ, ಬಂಟ್ಸ್ ಸಮುದಾಯಕ್ಕೆ ಸೇರಿದ ಹಾಲಾಡಿ ಇವರುಗಳ ಮದ್ಯೆ ಬಿರುಕು ನಿರ್ಮಾಣ ಮಾಡಬೇಕು ಎಂದು ಈ ರೀತಿಯಾಗಿ ಮಾಡಿದ್ದಾರೆ ಎನ್ನುವುದು ರಾಜಕೀಯದ ಗಂಧಗಾಳಿಯೇ ತಿಳಿದಿಲ್ಲದ ವ್ಯಕ್ತಿಗೂ ಅರ್ಥವಾಗುತ್ತದೆ. ಸಚಿವ ಸ್ಥಾನ ಕೋಟರವರಿಗೆ ನೀಡಿದ್ದಕ್ಕಾಗಿ ಶ್ರೀನಿವಾಸ ಶೆಟ್ಟಿ ಅವರು ದ್ವೇಷ ಕಾರದಿದ್ದರೂ ಮಾಡಿದ ಅವಮಾನಕ್ಕೆ ತಕ್ಕ ಉತ್ತರವಾಗಿ ರಾಜೀನಾಮೆ ನೀಡಿದ್ದಾರೆ.

ಕಾಲಿನಿಂದ ತುಳಿದ ಧೂಳು ತುಳಿದವನ ತಲೆಯ ಮೇಲೆ ಹೋಗಿ ಕುಳಿತುಕೊಳ್ಳುತ್ತದೆ. ಧೂಳಿಗೂ ಕೂಡ ಅಪಮಾನವಾದಾಗ ಸೇಡು ತೀರಿಸಿಕೊಳ್ಳುವ ಬುದ್ದಿ ಇರುವಾಗ ಸಾಮಾನ್ಯ ಮನುಷ್ಯ ಜನ್ಮದಲ್ಲಿ ಹುಟ್ಟಿ ಅಪಮಾನವಾದರೆ ಸೇಡು ತೀರಿಸುವ ಗುಣ ಇರುವುದು ಸಹಜಧರ್ಮವಾಗಿದೆ. ಆದರೆ ಶ್ರೀನಿವಾಸ ಶೆಟ್ಟಿಯವರು ಆದ ಅವಮಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಡೈರೆಕ್ಟ್ ಪಂಚ್: ಜಾತಿಯೇ ನಮ್ಮಲ್ಲಿಲ್ಲ ಎಂದು ಸಾರುವ ಆರ್.ಎಸ್.ಎಸ್ ನಾಯಕರ  ಜಾತಿ ರಾಜಕೀಯಕ್ಕೆ ಕೊನೆಯಿದೆಯೇ? ರಾಜಕೀಯದಲ್ಲಿ ಮಾಡಿದ ಅವಮಾನಕ್ಕೆ ಪ್ರತಿಯಾಗಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಅದೇ ಕ್ಷೇತ್ರದಲ್ಲಿ ನಿಂತು ಗೆದ್ದಾಗಲೆ ಬಿಜೆಪಿಗೆ ತಕ್ಕ ಉತ್ತರವಾಗುತ್ತದೆ. ಶ್ರೀನಿವಾಸಣ್ಣ ಸಣ್ಣ ಮಕ್ಕಳಿಂದ ಹಿಡಿದು, ಸರಕಾರಿ ಅಧಿಕಾರಿಗಳವರೆಗೂ ಮರ್ಯಾದೆ ನೀಡುತ್ತಿದ್ದರೂ ಎನ್ನುವುದಕ್ಕೆ ಉಡುಪಿ ಜಿಲ್ಲೆಯ ಮಹಿಳಾ ಜಿಲ್ಲಾಧಿಕಾರಿಯವರಿಗೆ ಸಂಬೋಧನೆ ಮಾಡಿದ ಅಕ್ಕಾ ಎನ್ನುವ ನುಡಿಯೇ ಅವರ ವ್ಯಕ್ತಿತ್ವವನ್ನು ಸೂಚಿಸುತ್ತದೆಯೆಂದಾದರೆ ಕುಂದಾಪುರದ ಜನತೆಯ ಪಾಲಿಗೆ ದೇವತೆಯ ಸಮಾನರಾಗಿದ್ದಾರೆ.

ಪ್ರತಿಕ್ರಿಯೆಗೆ ಅಹ್ವಾನವಿದೆ.

2 ಟಿಪ್ಪಣಿಗಳು Post a comment
  1. ಮಹೇಶ್ ಕಾಸರಗೋಡು's avatar
    ಮಹೇಶ್ ಕಾಸರಗೋಡು
    ಜುಲೈ 23 2012

    ಬಿ.ಜೆ.ಪಿ.ಯವರೆ ನಿಮಗೆ ಅಧಿಕಾರ ಬೇಡ……..ನಿಮಗೆ ವಿರೋಧ ಪಕ್ಷವೇ ಲೇಸು.

    ಬೇಸತ್ತ ಒಬ್ಬ ಕಾರ್ಯಕರ್ತ……:)..

    ಉತ್ತರ
  2. SIDDALINGESWARA's avatar
    SIDDALINGESWARA
    ಆಗಸ್ಟ್ 9 2012

    Sir,
    1. Can we expect a article on wat JANATHA DHAL (SECULAR) is doing?
    2. Do think JDS is not doing CAST & RELIGION based politics? if not
    3. what for they conducted MUSLIM CONVENTION? by this what message they given to the
    society?

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments