ವಿಷಯದ ವಿವರಗಳಿಗೆ ದಾಟಿರಿ

ಜುಲೈ 26, 2012

2

ಮೂರುವರೆ ರೂಪಾಯಿ ಓದುಗ ಆರೂವರೆ ರೂಪಾಯಿಯ ಜಾಹೀರಾತುದಾರ…

‍ನಿಲುಮೆ ಮೂಲಕ

– ಡಾ.ಅಶೋಕ್ ಕೆ.ಆರ್

ಪ್ರಜಾವಾಣಿಯಿಂದ ನಿವೃತ್ತರಾದ ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್ ರವರು ವ್ಯಂಗ್ಯಚಿತ್ರಕಾರರ ಬವಣೆ, ಹಣ ನೀಡದ ಪತ್ರಿಕಾ ಸಂಸ್ಥೆಗಳಬಗ್ಗೆ ತಮ್ಮ ಅಭಿಪ್ರಾಯವನ್ನು ಫೇಸ್ ಬುಕ್ಕಿನಲ್ಲಿ ಪತ್ರದ ರೂಪದಲ್ಲಿ ಬರೆದುಕೊಂಡಿದ್ದರು.ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟುರವರು ಫೇಸ್ ಬುಕ್ಕಿನಲ್ಲಿ ಕೆಳಗಿನಂತೆ ಬರೆದಿದ್ದಾರೆ.

“ಸಂಬಳ-ಸೌಲಭ್ಯಗಳ ವಿಚಾರದಲ್ಲಿ ಪತ್ರಕರ್ತರಿಗೆ ಆಗಿರುವ ಅನ್ಯಾಯವನ್ನು ಬರೆಯಲು ಹೊರಟರೆ ಪತ್ರಿಕೆಗಳ ಹನ್ನೆರಡು ಪುಟಗಳೂ ಸಾಲದು. ಊರಿನವರಿಗೆಲ್ಲ ಆಗುತ್ತಿರುವ ಅನ್ಯಾಯದ ಬಗ್ಗೆ ವರದಿ-ಸಂಪಾದಕೀಯಗಳನ್ನು ಬರೆಯುವ ಪತ್ರಕರ್ತರದ್ದು, ತಮ್ಮ ಕಷ್ಟಗಳನ್ನು ಎಲ್ಲಿಯೂ ಹೇಳಲಾಗದ ಅಸಹಾಯಕ ಸ್ಥಿತಿ. ’ಸೆಲೆಬ್ರೆಟಿ’ ಆಗಿ ಮೆರೆಯುತ್ತಿರುವ ಒಂದಷ್ಟು ಪತ್ರಕರ್ತರನ್ನು ನೋಡುವ ಜನ ಪತ್ರಕರ್ತರೆಲ್ಲರೂ ’ಕಾರು-ಬಂಗಲೆ” ಮಟ್ಟದಲ್ಲಿಯೇ ಇದ್ದಾರೆ ಎಂಬ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಆದರೆ ಇಂದಿನ ಪತ್ರಕರ್ತರ ಸ್ಥಿತಿಯನ್ನು ಚರ್ಚಿಸುವಾಗ ಕಳೆದೆರಡು ದಶಕಗಳ ಅವಧಿಯಲ್ಲಿ ಮಾಧ್ಯಮ ರಂಗದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗದಿರುವುದಿಲ್ಲ.
ಮಾಧ್ಯಮಗಳು ಅತ್ತ ಹಳೆಯ ಆದರ್ಶರೂಪದ ವೃತ್ತಿಯಾಗಿ ಉಳಿಯದೆ, ಇತ್ತ ಪೂರ್ಣ ಪ್ರಮಾಣದ ಉದ್ಯಮವಾಗಿಯೂ ಬೆಳೆಯದೆ ತ್ರಿಶಂಕು ಸ್ಥಿತಿಯಲ್ಲಿರುವುದೇ ಪತ್ರಕರ್ತರ ಇಂದಿನ ಬವಣೆಗೆ ಮುಖ್ಯ ಕಾರಣ. ಓದುಗರು ಪತ್ರಕರ್ತರನ್ನು ಸಮಾಜಸೇವಕರ ರೂಪದಲ್ಲಿ ಕಾಣಬಯಸುತ್ತಾರೆ. ಸಮಾಜಸೇವೆಯೂ ವೃತ್ತಿಯಾಗಿರುವ (ಎನ್‌ಜಿಒಗಳು ಮತ್ತೇನು?) ಈ ದಿನಮಾನದಲ್ಲಿ ಪತ್ರಕರ್ತರು ಮಾತ್ರ ಸಮಾಜ ಸೇವಕರ ರೂಪದಲ್ಲಿಯೇ ಉಳಿಯಬೇಕೆನ್ನುವುದು ಅಮಾನವೀಯವಾದುದು.ಹಾಗಿದ್ದರೆ ಮಾಧ್ಯಮಗಳು ಪೂರ್ಣಪ್ರಮಾಣದ ಉದ್ಯಮವಾಗಿಯಾದರೂ ಬೆಳೆದಿದೆಯೇ? ಅದೂಇಲ್ಲ. ಬೆರಳೆಣಿಕೆಯ ಇಂಗ್ಲೀಷ್‌ ಮತ್ತು ಹಿಂದಿ ಪತ್ರಿಕೆಗಳನ್ನು ಹೊರತುಪಡಿಸಿದರೆ ದೇಶದ ಯಾವ ಪತ್ರಿಕೆಗಳು ದೊಡ್ಡ ಲಾಭವನ್ನುಗಳಿಸುತ್ತಿಲ್ಲ.ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ದಿನಪತ್ರಿಕೆಗಳು ಒಂದೊಂದಾಗಿ ಮುಚ್ಚುತ್ತಿವೆ. ಇದಕ್ಕೆ ಕಾರಣ ಹುಡುಕಲು ತನಿಖೆ ನಡೆಸಬೇಕಾಗಿಲ್ಲ.ಈ ಜಗತ್ತಿನಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುವ ಯಾವುದಾದರೂ ಉತ್ಪನ್ನ ಇದ್ದರೆ ಅದು ಪತ್ರಿಕೆ ಮಾತ್ರ. ಇಂತಹದ್ದೊಂದು ಬೇರೆ ಉದ್ಯಮ ಎಲ್ಲಿಯಾದರೂ ಇದೆಯೇ? ಪ್ರಜಾವಾಣಿಯಂತಹ ಪತ್ರಿಕೆಯಉತ್ಪಾದನಾ ವೆಚ್ಚ ಕನಿಷ್ಠ ಹನ್ನೆರಡು ರೂಪಾಯಿಗಳಾಗಿರಬಹುದು. ಆದರೆ ಮಾರಾಟದ ಮುಖಬೆಲೆ ಮೂರುವರೆರೂಪಾಯಿ.ಪತ್ರಿಕೆಯ ಮಾಲೀಕ ಯಾರಿಗೆ ನಿಷ್ಠರಾಗಿರಬೇಕು? ಮೂರುವರೆ ರೂಪಾಯಿ ಕೊಡುವ ಓದುಗನಿಗೋ, ಆರುವರೆ ರೂಪಾಯಿ ಕೊಡುವ ಜಾಹೀರಾತುದಾರರಿಗೋ?

ಕಳೆದ ಇಪ್ಪತ್ತು ವರ್ಷಗಳಲ್ಲಿ ಒಂದು ಎಕರೆಭೂಮಿ, ಒಂದು ಮೀಟರ್‌ ಬಟ್ಟೆಯ ಬೆಲೆ ಮಾತ್ರವಲ್ಲ, ಪತ್ರಿಕೆಯ ರೀತಿಯಲ್ಲಿಯೇ ಜನರ ಚಟವಾಗಿರುವ ಟೀ, ಕಾಫಿ, ಸಿಗರೇಟ್‌ಗಳ ಬೆಲೆ ಎಷ್ಟು ಹೆಚ್ಚಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡರೆ ಪತ್ರಿಕೆಯ ’ಅಪಮೌಲ್ಯ’ದ ಅರಿವಾಗಬಹುದು. ಎಲ್ಲಿಯವರೆಗೆ ಮಾಧ್ಯಮಗಳು ಜಾಹೀರಾತುದಾರರ ಋಣದಿಂದ ಮುಕ್ತವಾಗಿ ಓದುಗರ ನಿಯಂತ್ರಣಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ಪತ್ರಕರ್ತರ ಸ್ಥಿತಿ ಕೂಡಾ ಹೀಗೆಯೇ ಇರುತ್ತದೆ. ’ನಿಮಗೆ ಸಂಬಳ ಕೊಡುತ್ತಿರುವುದು ನೀವು ನಿಷ್ಠರಾಗಿರುವ ಓದುಗರು ಕೊಡುವ ಜುಜುಬಿ ಮುಖ ಬೆಲೆಯಿಂದ ಅಲ್ಲ,ಅದು ಜಾಹೀರಾತುದಾರರು ನೀಡುವ ಹಣದಿಂದ”  ಎಂದು ಪತ್ರಿಕೆಯ ಮಾಲೀಕರು ಹೇಳಿದರೆ ಏನೆಂದು ಉತ್ತರಿಸುವುದು? ಅದನ್ನು ತಪ್ಪು ಎಂದು ಹೇಗೆ ಹೇಳುವುದು?”

-Dinesh Amin Mattu
ಭ್ರಷ್ಟರಾಗಲು ನೂರಾರು ನೆಪ: –

ಭ್ರಷ್ಟರಾಗಲು ಅಧರ್ಮ ಮಾರ್ಗದಲ್ಲಿ ಹಣ ಮಾಡಲು ನೂರಾರು ನೆಪಗಳಿರುತ್ತವೆ. ‘ಲಕ್ಷಾಂತರ ಖರ್ಚು ಮಾಡಿ ಉಳಿದ ಯುವಜನತೆಯಲ್ಲ ಮೋಜು ಮಾಡುವ ಸಮಯದಲ್ಲಿ ಓದುತ್ತ ಕುಳಿತು ಮೂವತ್ತು ವರುಷದ ಸಮೀಪವಾದರೂ ಮನೆಯವರ ದುಡ್ಡಿನ ಮೇಲೆ ಅವಲಂಬಿತನಾಗಿದ್ದೆ. ಈಗ ಹೆಚ್ಚೆಚ್ಚು ಹಣ ಕಿತ್ತರೆ ಏನು ತಪ್ಪು?’ ಎಂದೊಬ್ಬ ವೈದ್ಯ ಕೇಳುತ್ತಾನೆ. ‘ದುಡ್ಡು ಕೊಟ್ಟು ಈ ಪೋಸ್ಟಿಗೆ ಬಂದಿದ್ದೇನೆ. ಕೊಟ್ಟ ದುಡ್ಡು ವಾಪಸ್ಸಾಗಲು ಲಂಚ ಪಡೆದರೆ ಏನು ತಪ್ಪು?’ ಎಂದು ಪೋಲೀಸ್ ಅಧಿಕಾರಿ ಕೇಳುತ್ತಾನೆ. ‘ಪ್ರತಿ ಯೋಜನೆಗೂ ಶಾಸಕರಿಗೆ ಕಮಿಷನ್ ಕೊಡಬೇಕು. ನನ್ನ ಸಂಬಳದಿಂದ ಕೊಡಲಾ?’ ಎಂದು ಪ್ರಶ್ನಿಸುತ್ತಾನೆ ಇಂಜಿನಿಯರ್. ‘ಒಂದು ವೋಟಿಗೆ ಇಷ್ಟು ಸಾವಿರ ಅಂಥ ಪೀಕೇ ನಾನು ಶಾಸಕನಾಗಿರೋದು. ಇರೋ ಐದು ವರ್ಷದಲ್ಲಿ ಎಷ್ಟಾಗುತ್ತೋ ಅಷ್ಟು ದೋಚದೆ ಇರೋದು ಹೇಗೆ ಸಾಧ್ಯ?’ ಎನ್ನುತ್ತಾನೆ ರಾಜಕಾರಣಿ. ‘ಅಲ್ರೀ ಈ ರಾಜಕಾರಣಿಗಳು ಐದು ವರ್ಷ ದೋಚೋದಿಲ್ವ? ಎಲೆಕ್ಷನ್ ಟೈಮಲ್ಲಿ ಅವರತ್ರ ದುಡ್ಡು ತೆಗೆದುಕೊಂಡ್ರೆ ಏನು ತಪ್ಪು?’ ಎಂದು ಕಾಸಿಗಾಗಿ ವೋಟು ಮಾರಿಕೊಂಡವನು ತನ್ನನ್ನು ತಾನೇ ಸಮರ್ಥಿಸಿಕೊಳ್ಳುತ್ತಾನೆ. ‘ಪತ್ರಿಕೆಗಳು ಸರಿಯಾಗಿ ಸಂಬಳ ನೀಡುವುದಿಲ್ಲ. ಅದಿಕ್ಕೆ ಕಾಸಿಗಾಗಿ ಸುದ್ದಿ ಸೃಷ್ಟಿಸುತ್ತೇನೆ’ ಎನ್ನುತ್ತಾನೆ ಪತ್ರಕರ್ತ. ಈ ನೆಪಗಳಿಗೆ ಕೊನೆಯೆಲ್ಲಿದೆ?

ಪತ್ರಕರ್ತ ಸಮಾಜಸೇವೆ ಮಾಡಬೇಕೆಂದು ಜನರ ನಿರೀಕ್ಷೆ ಎನ್ನುತ್ತಾರೆ ದಿನೇಶ್. ಅಸಲಿಗೆ ಪ್ರತಿಯೊಬ್ಬರು ಮತ್ತೊಂದು ವೃತ್ತಿಯಲ್ಲಿರುವವರು ಸಮಾಜಸೇವೆ ಮಾಡಲೆಂದೇ ಬಯಸುತ್ತಾರೆ! ಲಂಚ ಸ್ವೀಕರಿಸುವ ವ್ಯಕ್ತಿಯೂ ವೈದ್ಯನೊಬ್ಬ ಪ್ರಾಮಾಣಿಕನಾಗಿರಬೇಕು ಎಂದು ಬಯಸುತ್ತಾನೆ! ವೈದ್ಯನಿಗೆ ರಾಜಕಾರಣಿಗಳು ಪ್ರಾಮಾಣಿಕರಾಗಿರಬೇಕು ಎನ್ನಿಸುತ್ತದೆ! ಭಗತ್ ಸಿಂಗ್ ಎಂದರೆ ಎಲ್ಲರಿಗೂ ಇಷ್ಟ ಆದರೆ ನಮ್ಮ ಮನೆಯಲ್ಲಿ ಹುಟ್ಟಬಾರದು ಎಂಬ ಭಾವನೆ ಎಲ್ಲರಲ್ಲಿ. ನಿಜವಾಗಿ ಯಾವ ವೃತ್ತಿಯವರೂ ಸಮಾಜಸೇವೆ ಮಾಡುವ ಅವಶ್ಯಕತೆಯಿಲ್ಲ. ಎಲ್ಲ ವೃತ್ತಿಯವರೂ – ಪತ್ರಕರ್ತರನ್ನೂ ಸೇರಿಸಿ – ತಮ್ಮ ತಮ್ಮ ವೃತ್ತಿಧರ್ಮವನ್ನು ಸರಿಯಾಗಿ ಪಾಲಿಸಿದರೆ ಅದೇ ನಾವು ಈ ಸಮಾಜಕ್ಕೆ ಮಾಡುವ ಸೇವೆ. ಅದರ ಹೊರತಾಗಿ ಹೆಚ್ಚಿನದನ್ನು ಮಾಡುವ ಅವಶ್ಯಕತೆಯಿಲ್ಲ.

ಈಜಗತ್ತಿನಲ್ಲಿಉತ್ಪಾದನಾವೆಚ್ಚಕ್ಕಿಂತಕಡಿಮೆಬೆಲೆಯಲ್ಲಿಮಾರಾಟಮಾಡಲಾಗುವಯಾವುದಾದರೂಉತ್ಪನ್ನಇದ್ದರೆಅದುಪತ್ರಿಕೆಮಾತ್ರಎನ್ನುತ್ತಾರೆ ದಿನೇಶ್. ಸತ್ಯ ಜಾಹೀರಾತುಗಳಿಲ್ಲದೆ ಪತ್ರಿಕೆಯಾಗಲೀ ವಾಹಿನಿಗಳನ್ನಾಗಲೀ ನಡೆಸುವುದು ಸಾಧ್ಯವಿಲ್ಲ. ಮೊದಲ ಓದಿಗೆ ‘ಹೌದಲ್ಲ! ಅಕಸ್ಮಾತ್ ದಿನಪತ್ರಿಕೆಯ ಬೆಲೆಯನ್ನು ಹನ್ನೆರಡು ರುಪಾಯಿ ಮಾಡಿಬಿಟ್ಟರೆ ನಾವಾದರೂ ಎಲ್ಲಿ ಪತ್ರಿಕೆಗಳನ್ನು ಖರೀದಿಸುತ್ತೇವೆ?’ ಎನ್ನಿಸಿಬಿಡುತ್ತದೆ. ಆದರೆ ಯಾವ ಜಾಹೀರಾತುದಾರನೂ ಮಾರಾಟವಾಗದ ಪತ್ರಿಕೆಗೆ ಯಾರೂ ನೋಡದ ವಾಹಿನಿಗೆ ಜಾಹೀರಾತು ನೀಡುವುದಿಲ್ಲ ಅಲ್ಲವೇ? ಹೊಸದೊಂದು ಪತ್ರಿಕೆ ಮಾರುಕಟ್ಟೆಗೆ ಬರುತ್ತಿದ್ದ ಹಾಗೆ ಜಾಹೀರಾತು ನೀಡಲು ಯಾರೂ ಮುಂದೆ ಬರುವುದಿಲ್ಲ. ಓದುಗ ಅಥವಾ ನೋಡುಗ ಸಮೂಹ ಎಷ್ಟಿದೆ ಎಂಬುದನ್ನು ಗಮನಿಸಿಯೇ ಜಾಹೀರಾತು ನೀಡುತ್ತಾರೆ ಅದರ ಮೇಲೆಯೇ ಜಾಹೀರಾತು ದರ ಕೂಡ ನಿಗದಿಯಾಗುತ್ತದೆಯಷ್ಟೆ. ‘ನೀವು ಪತ್ರಿಕೆ ನಡೆಸುವುದು ಜಾಹೀರಾತುದಾರರಿಗೆ ತಾನೆ? ಸರಿ ನೀವು ಜಾಹೀರಾತು ಪ್ರಕಟಿಸಿ ಅದನ್ನು ಜಾಹೀರಾತುದಾರರಷ್ಟೇ ಓದಲಿ ಬಿಡಿ ನಮಗ್ಯಾಕೆ’ ಎಂದು ಓದುಗ ನಿರ್ಧರಿಸಿಬಿಟ್ಟರೆ? ಆಗಲೂ ಪತ್ರಿಕೆಗಳಿಗೆ ಜಾಹೀರಾತು ಬರುತ್ತವೆಯೇ? ಪತ್ರಿಕೆಗಳಿಗೆ ಜಾಹೀರಾತು ಎಷ್ಟು ಅವಶ್ಯಕವೋ ಜಾಹೀರಾತುದಾರರಿಗೂ ಜನರನ್ನು ತಲುಪಲು ಪತ್ರಿಕೆಗಳು ಅನಿವಾರ್ಯ ಎಂಬುದನ್ನು ಮರೆಯಬಾರದಲ್ಲವೇ?

ಇನ್ನು ಪತ್ರಿಕೆಗಳು ಬಾಗಿಲು ಹಾಕುತ್ತಿರುವ ವಿಷಯ. ಅಂತರಾಷ್ಟ್ರೀಯ ಮಟ್ಟದಲ್ಲೂ ಸಹಿತ ಬಹಳಷ್ಟು ಪತ್ರಿಕೆಗಳು ಮುಚ್ಚಿಹೋಗುತ್ತಿವೆ. ಆದರಿದು ಪತ್ರಿಕೋದ್ಯಮದ – ಪತ್ರಕರ್ತರ ಅಂತ್ಯವಲ್ಲ. ಪತ್ರಿಕೋದ್ಯಮ ಕವಲೊಡೆಯುತ್ತ ದೃಶ್ಯವಾಹಿನಿಗಳಾಗುತ್ತಿವೆ, ಅಂತರ್ಜಾಲ ಪತ್ರಿಕೆಗಳಾಗುತ್ತಿವೆ. ಹೊಸ ಹೊಸ ಅಂತರ್ಜಾಲ ಪತ್ರಿಕೆಗಳು ಹುಟ್ಟುತ್ತಿವೆ. ಐಪ್ಯಾಡ್, ಕಿಂಡಲ್, ಟ್ಯಾಬ್ಲೆಟ್ಟುಗಳ ಭರಾಟೆಯಲ್ಲಿ ಇದು ಅನಿವಾರ್ಯ ಬದಲಾವಣೆಯೇ ಹೊರತು ಪತ್ರಿಕೋದ್ಯಮವೇ ಅಂತ್ಯವಾಗುತ್ತಿದೆ ಎನ್ನುವುದನ್ನು ಒಪ್ಪುವುದು ಕಷ್ಟ.

ದಿನೇಶ್ ಅಮೀನ್ ಮಟ್ಟುರವರ ಮೇಲಿನ ಮಾತುಗಳು ಒಂದು ಕ್ಷಣದ ಕೋಪ ಬೇಸರದಲ್ಲಿ ಮೂಡಿರಬಹುದೆಂದೇ ನಂಬಿದ್ದೇನೆ. ಅವರು ಹೇಳುವ ಕೆಲವು ಮಾತುಗಳಲ್ಲಿ ಸತ್ಯವಿದೆಯಾದರೂ ಸಂಪೂರ್ಣವಾಗಿ ಒಪ್ಪುವುದು ಕಷ್ಟಸಾಧ್ಯ. ಪತ್ರಕರ್ತರಿಗೂ ಕಷ್ಟಗಳಿವೆ, ಸತ್ಯ. ಕಷ್ಟಗಳು ಎಲ್ಲ ವೃತ್ತಿಯವರಿಗೂ ಇದೆ. ಆ ಕಷ್ಟಗಳನ್ನೇ ನೆಪ ಮಾಡಿಕೊಂಡು ವೃತ್ತಿಧರ್ಮತೊರೆದು ಭ್ರಷ್ಟರಾಗುತ್ತೇವೆಂದು ಸಾಗುವುದು ಎಷ್ಟರ ಮಟ್ಟಿಗೆ ಸಮರ್ಥನೀಯ? ದಿನೇಶ್ ರವರೇ ಉತ್ತರಿಸಬೇಕು. ಕೊನೆಗೆ ಪತ್ರಕರ್ತನ ನಿಷ್ಠೆ ಓದುಗನೆಡೆಗೆ ಇರುವ ಅವಶ್ಯಕತೆಯಿಲ್ಲ, ಜಾಹೀರಾತುದಾರರಡೆಗೂ ನಿಷ್ಠರಾಗಬೇಕಾದ ಅವಶ್ಯಕತೆಯಿಲ್ಲ. ಪತ್ರಕರ್ತನ ನಿಷ್ಠೆಯಿರಬೇಕಾದದ್ದು ಸುದ್ದಿಯೆಡೆಗೆ ಮಾತ್ರ.

 

2 ಟಿಪ್ಪಣಿಗಳು Post a comment
  1. anand prasad's avatar
    anand prasad
    ಜುಲೈ 27 2012

    ಅಮೀನ್ ಮಟ್ಟು ಅವರು ಪ್ರಜಾವಾಣಿಯಂಥ ಪತ್ರಿಕೆಯ ಉತ್ಪಾದನಾ ವೆಚ್ಚ 12 ರೂಪಾಯಿಗಳಾಗಬಹುದು ಎಂದು ಹೇಳುತ್ತಾರೆ. ಆದರೆ ಇದು ಉತ್ಪ್ರೇಕ್ಷಿತ ಲೆಕ್ಕಾಚಾರದಂತೆ ಕಾಣುತ್ತದೆ. ಉದಾಹರಣೆಗ ಮೈಸೂರಿನ ಆಂದೋಲನ ದಿನಪತ್ರಿಕೆ 10 ಪುಟಗಳನ್ನು ಹೊಂದಿದ್ದು ಬೆಲೆ 1.50 ರೂಪಾಯಿ ನಿಗದಿಪಡಿಸಿದ್ದಾರೆ. ಇದರಲ್ಲಿ ಗರಿಷ್ಠವೆಂದರೆ ಒಟ್ಟು ಒಂದು ಪುಟದ ಜಾಹೀರಾತು ಇರುತ್ತದೆ ಅದೂ ದೊಡ್ಡ ಜಾಹೀರಾತುಗಳಲ್ಲ, ಸಣ್ಣ ಸಣ್ಣ ವರ್ಗೀಕೃತ ಜಾಹೀರಾತುಗಳು. ಪ್ರಜಾವಾಣಿಗೆ ಹೋಲಿಸಿದರೆ ಆಂದೋಲನದ ಪ್ರಸಾರ ಸಂಖ್ಯೆ ಸಾಕಷ್ಟು ಕಡಿಮೆ ಇರಬಹುದು. ಹೀಗಿದ್ದರೂ ಆಂದೋಲನವನ್ನು ಒಂದೂವರೆ ರೂಪಾಯಿಗಳಿಗೆ ನೀಡಲು ಹೇಗೆ ಸಾಧ್ಯವಾಗುತ್ತದೆ, ಇದು ನಷ್ಟದಲ್ಲಿ ಅಂತೂ ನಡೆಯಲಿಕ್ಕಿಲ್ಲ. ಇದು ಕಳೆದ 41 ವರ್ಷಗಳಿಂದ ಪ್ರಕಟವಾಗುತ್ತಿದೆ. ಒಂದು ವಸ್ತು ಹೆಚ್ಚು ಸಂಖ್ಯೆಯಲ್ಲಿ ಉತ್ಪಾದನೆ ಆದರೆ ಅದು ಕಡಿಮೆ ಬೆಲೆಗೆ ದೊರಕಬೇಕು. ಹೀಗಾಗಿ ಕಡಿಮೆ ಪ್ರಸಾರದ ಸಣ್ಣ ಪತ್ರಿಕೆಗಳಿಗಿಂಥ ಹೆಚ್ಚು ಪ್ರಸಾರದ ದೊಡ್ಡ ಪತ್ರಿಕೆಗಳ ಉತ್ಪಾದನಾ ವೆಚ್ಚ ಕಡಿಮೆ ಆಗಬೇಕು.

    ಉತ್ತರ
  2. Nanjunda Raju's avatar
    ಜುಲೈ 27 2012

    ಮಾನ್ಯರೇ, ಬ್ರಷ್ಟರಾಗಲು ನೂರಾರು ನೆಪ ಲೇಖನ ಚೆನ್ನಾಗಿದೆ. ಅದರಲ್ಲೂ ಲೇಖನದ ಅಂತಿಮ ಕಂಡಿಕೆ ಅರ್ಥಪೂರ್ಣವಾಗಿದೆ. ಅದು obba ಪ್ರಾಮಾಣಿಕ ಪತ್ರಕರ್ತನ ಸೇವೆ ಮತ್ತು ಸಾರ್ಥಕತೆ ಆಗಿರಬೇಕು. ಹಣ ಹೇಗಾದರೂ ಮಾಡಬಹುದು. ಹೇಗೆ ಬದುಕಿದರು ಎಂಬುದು ಮುಖ್ಯ ಅಲ್ಲವೇ? ಇದು ಕೆಲವರಿಗೆ ರುಚಿಸುವುದಿಲ್ಲ. ಇದು ಸಾಮಾನ್ಯವಾಗಿ ಎಲ್ಲ ವ್ರುತ್ತಿಯವರಿಗೂ ಇರುವಂಥಹ ಕಾಯಿಲೆ ಎನ್ನಬಹುದು. ಇಲ್ಲಿ ಸ್ವಾಭಿಮಾನ ಮುಖ್ಯ. ಒಬ್ಬ ಬಿಕ್ಷುಕ ಹೇಳುತ್ತಾನೆ. ವೃತ್ತಿ ಏನು ಸುಖವಿಲ್ಲ ಎನ್ನುತ್ತಾನೆ. ಅದೇ ಒಬ್ಬ ಕಾರ್ಖಾನೆ ಕಾರ್ಮಿಕ ಹೇಳುತ್ತಾನೆ. ಎಷ್ಟು ಶ್ರಮ ಪಟ್ಟು ದುಡಿದರೂ ಅಷ್ಟೇ ಸಂಬಳ ಎನ್ನುತ್ತಾನೆ. ಶ್ರೀಮಂತನೂ ಅದೇ ಹೇಳುತ್ತಾನೆ. ರಾಜಕಾರಣಿಗಳೂ ಹಾಗೆಯೇ ಹೇಳುತ್ತಾರೆ. ಹಾಗೆಂದು ಅಡ್ಡ ದಾರಿ ಹಿಡಿಯಲು ಸಾಧ್ಯವೇ?

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments