ವಿಷಯದ ವಿವರಗಳಿಗೆ ದಾಟಿರಿ

ಜುಲೈ 27, 2012

9

ನಮ್ಮ ಬರಹ ಇನ್ನೊಬ್ಬರ ಬದುಕಿಗೆ ಬೆಂಕಿ ಇಡಬಾರದು

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಛೆ..! ದೆಹಲಿ,ಉತ್ತರ ಭಾರತದ ಕಡೆಯಿಂದ ಸಾಮಾನ್ಯವಾಗಿ ಸುದ್ದಿಯಾಗುತಿದ್ದ ಅತ್ಯಾಚಾರದಂತ ರಾಕ್ಷಸಿ ವರ್ತನೆ ಕರ್ನಾಟಕದಲ್ಲೂ ದಾಖಲಾಯಿತಲ್ಲ ಅಂತ ಮೊನ್ನೆಯ ‘ಮದ್ದೂರಿನ ರೈಲಿನಲ್ಲಿ ನಡೆದ ದುರ್ಘಟನೆ’ ಸುದ್ದಿಯಾದಾಗ ನಾಡಿನ ಬಹಳಷ್ಟು ಜನರಿಗೆ ಅನ್ನಿಸಿರಲಿಕ್ಕೂ ಸಾಕು.ಅದೃಷ್ಟವೆಂದರೆ ಆ ಹುಡುಗಿ ಪ್ರಾಣಾಪಾಯದಿಂದ ಪಾರಾಗಿದ್ದು.ಕಡೆಗೂ ರೈಲಿನಲ್ಲಿದ್ದ ಜನ ಧೈರ್ಯ ತಂದುಕೊಂಡು ಆ ರಾಕ್ಷಸರಿಗೆ ಬಡಿದು ಪೋಲಿಸರಿಗೆ ಒಪ್ಪಿಸಿದ್ದು ಮತ್ತೆ ಮರು ದಿನ ಹಿಂದೂ ಜಾಗರಣ ವೇದಿಕೆಯವರು ನೀಡಿದ ತಪರಾಕಿ ಎಲ್ಲವೂ ಸುದ್ದಿಯಾದವು.

ಆದರೆ, ಆ ನಂತರ ಆ ಹುಡುಗಿಯ ಪೂರ್ವಾಪರ ಮತ್ತು ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಮಾಧ್ಯಮಗಳು ಬರೆಯಲು ಶುರು ಮಾಡಿದವಲ್ಲ.ಒಂದು ವರದಿಯಲ್ಲಿ ಹುಡುಗಿಯ ನಿಜ ಹೆಸರನ್ನೇ ಬರೆದುಬಿಟ್ಟಿದ್ದರು.ಕಡೆಗೆ ಓದುಗರು ಗಮನಕ್ಕೆ ತಂದ ಮೇಲೆ ತಿದ್ದಿದರು.ಮತ್ತದೇ ಆನ್-ಲೈನ್ ಪತ್ರಿಕೆಯಲ್ಲಿ ಹಾಗೂ ರಾಜ್ಯಮಟ್ಟದ ದಿನಪತ್ರಿಕೆ ಪ್ರಜಾವಾಣಿಯಲ್ಲಿ (ನಾಡಿನ ವಿಚಾರಾವಂತರ ನೆಚ್ಚಿನ ಪತ್ರಿಕೆಯಿದು..!) ಹುಡುಗಿಯ ಪೊಟೋವನ್ನೇ ಹಾಕಿಬಿಡುವುದಾ? ಕನಿಷ್ಠ ಮುಖವನ್ನು ಬ್ಲರ್ ಮಾಡಬೇಕು ಅನ್ನುವ ಕಾಮನ್ ಸೆನ್ಸ್ ಕಾಣೆಯಾಯಿತಾ?ಇದೆಂತ Irresponsibility ? ವರದಿಗಾರಿಕೆ ಅನ್ನುವುದು ಇಷ್ಟೊಂದು ಕಾಟಾಚಾರವಾಗಿದೆಯಾ? ಈ ಮಧ್ಯೆ ಆ ಹುಡುಗಿಯ ಕೆಲಸ ಮಾಡುವ ಜಾಗ ಎಲ್ಲವನ್ನೂ ಹೇಳಿಯೂಬಿಟ್ಟವು.ಮುಂದೆ ಆ ಹುಡುಗಿಯ ಭವಿಷ್ಯವೇನು? ಅವಳನ್ನು ನೋಡಿದಾಗೆಲ್ಲ ಜನ ಅವಳನ್ನ ಏನೆಂದು ಗುರುತಿಸುತ್ತಾರೆ?

ಈ ಹಿಂದೆ ಸುವರ್ಣವಾಹಿನಿ ಶಿವಮೊಗ್ಗದ ಹುಡುಗಿಯೊಬ್ಬಳ ವಿಷಯದಲ್ಲೂ ಹೀಗೆ ಬೇಜವಬ್ದಾರಿತನ ತೋರಿತ್ತು.ಈ ವಿಷಯದ ಬಗ್ಗೆ ದಯಾನಂದ ಟಿ.ಕೆ ಸರಿಯಾಗಿ ಜಾಡಿಸಿ ಆ ವಾಹಿನಿಯ ಸಂಪಾದಕರಿಗೆ ಬಹಿರಂಗ ಪತ್ರ ಬರೆದಿದ್ದರು.ಉತ್ತರ ಬಂದ ಬಗ್ಗೆ ಸುದ್ದಿಯಿಲ್ಲ.ಇದೆ ನ್ಯೂಸ್ ಚಾನೆಲ್ಗಳೇ ತಾನೇ ಬ್ಲೂ ಬಾಯ್ಸ್ ಗಳನ್ನ ತೋರಿಸುವ ನೆಪದಲ್ಲಿ ಬ್ಲೂ-ಫಿಲಂ ತೋರಿಸಿದ್ದು,ಮುನ್ನಿ-ಶೀಲ,ಮದನಾರಿ ಅಂತೆಲ್ಲ ತಲೆ ಕೆಟ್ಟ ಕಾರ್ಯಕ್ರಮ ಮಾಡುತ್ತಿರುವುದು.ಮಕ್ಕಳಿರೋ ಮನೆಯಲ್ಲಿ ನ್ಯೂಸ್ ಚಾನೆಲಗಳನ್ನು ನೋಡಬೇಡಿ ಮಕ್ಕಳು ಹಾದಿ ತಪ್ಪುತ್ತಾರೆ ಅನ್ನುವ ಕಾಲ ಬಂದು ಬಿಟ್ಟಿತಲ್ಲ…!

ಪಬ್ ದಾಳಿಯಾದಾಗ ‘ಪಿಂಕ್ ಚಡ್ಡಿ’ಯಂತ ವಿಕೃತ ಅಭಿಯಾನವನ್ನೆಲ್ಲ ಮಾಡಿದ್ದ ಹೈ-ಫೈ ಮಹಿಳಾ ಹೋರಾಟಗಾರರು,ಮಹಿಳಾ ಸಂಘಟನೆಗಳಾದರೂ ಏನು ಮಾಡುತ್ತಿವೆ? ಪಬ್ ದಾಳಿಯ ನಂತರ ತೋರಿದ ರೌದ್ರಾವತಾರವನ್ನು ಅತ್ಯಾಚಾರಿಗಳಿಗೆ ‘ಗಲ್ಲು ಶಿಕ್ಷೆ’ ವಿಧಿಸಿ ಅನ್ನುವ ಕಾನೂನು ತರುವಲ್ಲಿ ಯಾಕೆ ತೋರುತ್ತಿಲ್ಲ.ತೀರ ಮೊನ್ನೆ ಮೊನ್ನೆ ಖುರ್ಚಿಯಿಂದ ಇಳಿದು ಹೋಗುವ ಮುನ್ನ ದೇಶದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದ ಪ್ರತಿಭಾ ಪಾಟಿಲ್ ಜೀವದಾನ ನೀಡಿದ್ದಾದರು ಎಂತವರಿಗೆ? ಸಿನೆಮಾಗಳಲ್ಲಿ ಬೆನ್ನು ತೋರಿಸಿದರು ಅಂತೆಲ್ಲ ಬೀದಿಗಿಳಿಯುವವರಿಗೆ ಪ್ರತಿಭಾ ಮಾಡಿದ್ದನ್ನು ಪ್ರಶ್ನಿಸಬೇಕು ಅನ್ನಿಸಲಿಲ್ಲವೇ? ಕಡೆ ಪಕ್ಷ ಬೇಜವಬ್ದಾರಿ ವರದಿಗಾರಿಕೆ ಮಾಡುವವರನ್ನ ಪ್ರಶ್ನಿಸುವುದಾದರು ಬೇಡವೇ?

ಮಹಿಳಾ ಸಂಘಟನೆಗಳ ವಿಷಯ ಏನೇ ಇರಲಿ.ಸಂವಿಧಾನದ ನಾಲ್ಕನೇ ಅಂಗ ಅಂತ ಹೇಳಿಕೊಳ್ಳುವ ಮಾಧ್ಯಮಗಳು ಸಾಮಾಜಿಕ ಜವಬ್ದಾರಿಯನ್ನು ಮರೆತಂತೆ ಮಾಡುವುದು ಒಳ್ಳೆಯದಲ್ಲ.ಇಂತ ತಪ್ಪುಗಳೆಲ್ಲ ಸಂಪಾದಕರ ಕಣ್ಣು ತಪ್ಪಿ ಬಂದವು ಅಂದಿಟ್ಟುಕೊಳ್ಳೋಣ.ಆದರೆ,ಇವೆಲ್ಲ ಒಬ್ಬ ಜವಬ್ದಾರಿಯುತ ವರದಿಗಾರನಿಗೆ ತಿಳಿದಿರಬೇಕಾದ ವಿಷಯವಲ್ಲವೇ? ನಮ್ಮ ಬರಹ ಇನ್ನೊಬ್ಬರ ಬದುಕಿಗೆ ಬೆಂಕಿ ಇಡಬಾರದು ಅನ್ನುವುದು ನೆನಪಿರಲಿ.

* * * * * *
ಚಿತ್ರಕೃಪೆ : ಅಂತರ್ಜಾಲ

9 ಟಿಪ್ಪಣಿಗಳು Post a comment
  1. anand prasad's avatar
    anand prasad
    ಜುಲೈ 28 2012

    ಮದ್ದೂರಿನ ಸಮೀಪ ರೈಲಿನಿಂದ ದುಷ್ಕರ್ಮಿಗಳು ದೂಡಿ ಹಾಕಿದ ಹುಡುಗಿಯ ಮೇಲೆ ಅತ್ಯಾಚಾರ ನಡೆದಿಲ್ಲ. ಆ ಹುಡುಗಿಗೆ ಕಿರುಕುಳ ನೀಡಿದ್ದಾರೆ. ಅದನ್ನು ಆಕೆ ಪ್ರತಿಭಟಿಸಿದ್ದಾಳೆ. ಇದರಿಂದಾಗಿ ದುಷ್ಕರ್ಮಿಗಳು ಆಕೆಯನ್ನು ರೈಲಿನಿಂದ ದೂಡಿ ಹಾಕಿದ್ದಾರೆ. ಇದರಲ್ಲಿ ಹುಡುಗಿಯ ತಪ್ಪೇನೂ ಇಲ್ಲ. ಹೀಗಿರುವಾಗ ಹುಡುಗಿಯ ಹೆಸರನ್ನಾಗಲೀ, ಆಕೆ ಕೆಲಸ ಮಾಡುವ ಜಾಗವನ್ನಗಲೀ ಅಥವಾ ಆಕೆಯ ಫೋಟೋ ಹಾಕಿದ್ದರಿಂದ ತೊಂದರೆಯೇನೂ ಆಗಲಿಕ್ಕಿಲ್ಲ. ಆಕೆಯೇ ಹೇಳಿರುವಂತೆ ಆಕೆಯ ತಂದೆ, ತಾಯಿ, ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆ ಅನಾಥೆ, ಹೀಗಾಗಿ ಅಕೆಗೆ ಆಸರೆ, ಗೆಳೆತನ, ಧೈರ್ಯ ತುಂಬುವವರು ಬೇಕಾಗಿದ್ದಾರೆ. ಪತ್ರಿಕೆಯಲ್ಲಿ ವಿವರ ಬಂದಿರುವುದರಿಂದ ಅಕೆಗೆ ಸಹಾಯ ಒದಗುವ ಸಾಧ್ಯತೆ ಇದೆ. ಇಲ್ಲಿ ಬದಲಾಗಬೇಕಿರುವುದು ಸಮಾಜದ ದೃಷ್ಟಿಕೋನ. ಅಸಹಾಯಕರಿಗೆ ಸಹಾಯ ಮಾಡಬೇಕಿರುವುದು ಸಮಾಜದ ಜವಾಬ್ದಾರಿ. ಅದನ್ನು ಮಾಡದೆ ಇನ್ನಷ್ಟು ಕಿರುಕುಳ ನೀಡಿದರೆ ಅಂಥ ಸಮಾಜ ಅನಾಗರಿಕ ಎಂದು ಹೇಳಬೇಕಾಗುತ್ತದೆ. ಪ್ರಜಾವಾಣಿ ಪತ್ರಿಕೆಯು ಕರ್ನಾಟಕದ ವಿಚಾರವಂತರ ನೆಚ್ಚಿನ ಪತ್ರಿಕೆ ಎಂಬುದರಲ್ಲಿ ಸಂದೇಹವಿಲ್ಲ. ಇದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ. ಉಳಿದ ದೊಡ್ಡ ಪತ್ರಿಕೆಗಳು ರಾಜ್ಯವನ್ನು ಮೌಢೄದೆಡೆಗೆ ಕೊಂಡೊಯ್ಯುತ್ತಿರುವಾಗ ಸ್ವಲ್ಪವಾದರೂ ವೈಚಾರಿಕತೆ, ವೈಜ್ಞಾನಿಕತೆಗೆ ಒಟ್ಟು ಕೊಟ್ಟು ಪ್ರಕಟವಾಗುತ್ತಿರುವುದು ಪ್ರಜಾವಾಣಿ ಮಾತ್ರ. ಹೀಗಾಗಿ ಇದು ವಿಚಾರವಂತರ ನೆಚ್ಚಿನ ಪತ್ರಿಕೆಯಾಗಿರುವುದರಲ್ಲಿ ಸಂದೇಹವಿಲ್ಲ.

    ಉತ್ತರ
    • ಪ್ರಜಾವಾಣಿಯ ಬಗ್ಗೆ ನನಗೇನು ವಿಶೇಷ ಕೋಪ,ಪ್ರೀತಿ ಏನು ಇಲ್ಲ.ಹಾಗಾಗಿ ಪ್ರಜಾವಾಣಿ ಒಂದು ಉದಾಹರಣೆಯಷ್ಟೆ. ವಿಷಯ ಮಾಧ್ಯಮಗಳು ಸೆನ್ಸಿಟಿವ್ನೆಸ್ಸ್ ಕಳೆದುಕೊಳ್ಳುತ್ತಿದೆಯಲ್ಲಾ ಅನ್ನುವುದರ ಬಗ್ಗೆ.

      ಆ ಹುಡುಗಿಗೆ ಸಹಾಯ ಹಸ್ತ ನೀಡಬಯಸುವವರು ಹೇಗಾದರೂ ನೀಡಿಯೇ ನೀಡುತ್ತಾರೆ. ನಮ್ಮ ಸಮಾಜ ನೀವಂದುಕೊಂಡಷ್ಟು ಒಳ್ಳೆಯದಲ್ಲ ನೋಡಿ.ಜನ ಆ ಹುಡುಗಿಯನ್ನು ನೋಡಿದಾಗಲೆಲ್ಲ ಹೆಚ್ಚು ನೆನಪಿಸುವುದು ಅವಳು ಮರೆಯ ಬೇಕು ಅನ್ನುವ ದುರ್ಘಟನೆಯನ್ನೇ ಅಲ್ಲವೇ? ಆಕೆ ಅನಾಥೆ ಅನ್ನುವ ಕಾರಣಕ್ಕೆ ಪ್ರಕಟಿಸಬೇಕಿತ್ತಾ? ಒಂದು ವೇಳೆ ಅವರ ಅಕ್ಕ/ತಂಗಿಯರಿಗೆ ಹೀಗೆ ಹಾಗಿದ್ದರೆ ಪೋಟೋ ಪ್ರಕಟಿಸುತಿದ್ದರ?

      ಉತ್ತರ
      • T.M.Kraishna's avatar
        T.M.Kraishna
        ಜುಲೈ 28 2012

        ರಾಕೇಶ್ ಅವರೆ ನಿಮ್ಮ ಅನಿಸಿಕೆ ಯಾಕೋ ದಿಕ್ಕುತಪ್ಪಿದಂತಿದೆ. ಎಲ್ಲರಿಗೂ ಸಾಮಾನ್ಯವಾಗಿ ತೋರುವ ಕಡೆ ನಿಮಗೆ ಅಸಾಮಾನ್ಯವಾಗಿ ತೋರಿದಂತಿದೆ. ಏನೂ ಇಲ್ಲದ ಕಡೆ ಏನೇನೋ ಹುಡುಕುವ ವ್ಯಸನದಂತೆಯೂ ಕಾಣುತ್ತಿದೆ. ನಿಮ್ಮ ಒಟ್ಟಾರೆ ನಿಮ್ಮ ನಿಲುಮೆ ಹಳಿಯ ಮೇಲಿಲ್ಲವೆನಿಸುತ್ತದೆ. ಇದನ್ನು ನೀವೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿನಿಸುತ್ತದೆ.

        ಉತ್ತರ
        • ನಿಮ್ಮ ಪ್ರತಿಕ್ರಿಯೆ ನೋಡಿ,ನಾನು ಮತ್ತೊಮ್ಮೆ ಯೋಚಿಸಿದೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ನನ್ನ ಲೇಖನಕ್ಕೆ ನಾನೀಗಲೂ ಬದ್ಧ

          ಉತ್ತರ
  2. shekhar's avatar
    ಜುಲೈ 28 2012

    ನಿಮ್ಮ ಲೇಖನದ ತಲೆಬರಹ “ನಮ್ಮ ಬರಹ ಇನ್ನೊಬ್ಬರ ಬದುಕಿಗೆ ಬೆಂಕಿ ಇಡಬಾರದು ” ಅನ್ನುವದರ ಬದಲು “ನಮ್ಮ ಪ್ರಸಾರ ಇನ್ನೊಬ್ಬರ ಬದುಕಿಗೆ ಬೆಂಕಿ ಇಡಬಾರದು” ಅಂತಾ ಇರಬೇಕಾಗಿತ್ತು. ಏಕೆಂದರೆ ಬಹುತೇಕ ಕನ್ನಡ ಟೀವಿ ಚಾನಲ್ ಗಳು ಇನ್ನೊಬ್ಬರ ಬದುಕಿನಲ್ಲಿ ಬೆಂಕಿ ಇಡುವ ಕೆಲಸವನ್ನೇ ಮಾಡುತ್ತಿವೆ.ಇದೇ ವಿಚಾರಕ್ಕಾಗಿ ಮೊನ್ನೆಯ” ಕಟ್ಟೆಚ್ಚರ” ಕಾರ್ಯಕ್ರಮದಲ್ಲಿ ಸುವರ್ಣ ೨೪x‍‍೭ ಚಾನಲ್ ನವ್ರು ಹೆಗಲು ಮುಟ್ಟಿ ನೋಡಿಕೊಂಡರು.

    ಉತ್ತರ
  3. suresh nadig's avatar
    suresh nadig
    ಜುಲೈ 30 2012

    ರಾಕೇಶ್ ಶೆಟ್ಟಿಯವರು ಹೇಳಿದ್ದರಲ್ಲಿ ಸತ್ಯವಿದೆ. ಇವತ್ತು ಮನೆ ಜಗಳ ರಾಜ್ಯದ ಸುದ್ದಿಯಾಗುತ್ತಿದೆ. ಅತ್ತೆ, ಸೊಸೆ ಜಗಳ ದಿನವಿಡೀ ಸಂದರ್ಶನ ರೂಪದಲ್ಲಿ ಪ್ರಸಾರವಾಗುತ್ತಿದೆ. ಅಣ್ಣ, ತಮ್ಮಂದಿರ ಜಗಳ ಕೊಲೆಯಾಗುವ ತನಕ ಹೋಗುತ್ತಿದೆ. ಮಾಧ್ಯಮಗಳು ಜವಾಬ್ದಾರಿ ಅರಿಯಬೇಕಿದೆ. ಕಂಡಿದ್ದೆಲ್ಲಾ ಸುದ್ದಿಯೆಲ್ಲಾ ಎನ್ನುವುದನ್ನು ತಿಳಿಯಬೇಕಿದೆ. ಇವತ್ತು ನೂರಾರು ಜ್ವಲಂತ ಸಮಸ್ಯೆಗಳು ನಮ್ಮ ಕಣ್ಣೆದುರಿಗೆ ಇದೆ. ಅದನ್ನು ಹೊರತು ಪಡಿಸಿ ಯಾವುದೋ ಕಿತ್ತು ಹೋಗಿರೋ ಕಾರ್ಯಕ್ರಮದಿಂದ ಸಮಾಜದ ವ್ಯವಸ್ಥೆ ಹದಗೆಡುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತಹ ಕಾರ್ಯವಾಗಬೇಕಿದೆ.
    ಆಕೆ ಅನಾಥೆ ಆಗಿರಬಹುದು, ಅವಳ ಮುಂದಿನ ಬದುಕು ಮಾಧ್ಯಮ ಕಲ್ಪಿಸುತ್ತದೆಯೇ, ಅವಳನ್ನು ನಾಗರಿಕ ಸಮಾಜದಲ್ಲಿ ಯಾವ ತರಹ ನೋಡುತ್ತಾರೆ ಎನ್ನುವುದನ್ನು ಮಾಧ್ಯಮ ಅರಿಯಬೇಕಿದೆ. ಟಿ.ಆರ್.ಪಿ ಅಥವಾ ಪ್ರಸಾರಾಂಗ ಹೆಚ್ಚಿಸುವ ಸಲುವಾಗಿ ಇಂತಹ ವರದಿಗಳನ್ನು ಭಿತ್ತರಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಮಾಧ್ಯಮ ಮಿತ್ರರು ಚಿಂತಿಸಲಿ.

    ಉತ್ತರ
  4. anand prasad's avatar
    anand prasad
    ಜುಲೈ 31 2012

    ಸಾಮಾನ್ಯವಾಗಿ ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗಳ ಹೆಸರು ಬದಲಿಸಿ ಹಾಗೂ ಚಿತ್ರವನ್ನು ಅಸ್ಪಷ್ಟ ಮಾಡಿ ತೋರಿಸುವ ಕ್ರಮ ಇದೆ. ಪತ್ರಿಕೆಯಲ್ಲಿ ಒಂದು ಫೋಟೋ ಅಥವಾ ವರದಿ ಬಂದ ಕೂಡಲೇ ಪತ್ರಿಕೆಯ ಪ್ರಸಾರ ಹೆಚ್ಚಲಾರದು. ಹೀಗಾಗಿ ಪತ್ರಿಕೆ ಪ್ರಸಾರ ಹೆಚ್ಚಿಸಲು ಬೇಜವಾಬ್ದಾರಿಯಿಂದ ಫೋಟೋ ಹಾಗೂ ವಿವರ ಹಾಕಿದೆ ಎಂದು ಅನಿಸುವುದಿಲ್ಲ. ಐದಾರು ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿರುವ ಪ್ರಜಾವಾಣಿಯಂಥ ಪತ್ರಿಕೆ ಅಗ್ಗದ ಗಿಮಿಕ್ಕಿಗೆ ಒಳಗಾಗ ಬೇಕಾದ ಅಗತ್ಯ ಇಲ್ಲ. ಮಾಧ್ಯಮ ಅನಾಥ ವ್ಯಕ್ತಿಗೆ ಮುಂದಿನ ಬದುಕು ಕಲ್ಪಿಸದೆ ಇರಬಹುದು, ಆದರೆ ಮಾಧ್ಯಮವನ್ನು ಲಕ್ಷಾಂತರ ಜನ ನೋಡುವ ಕಾರಣ ಅದರಲ್ಲಿ ವಿವರ ಬಂದರೆ ಮಕ್ಕಳಿಲ್ಲದ ಸಿರಿವಂತ ಪುಣ್ಯಾತ್ಮರು ಅನಾಥರಿಗೆ ತಮ್ಮ ಮಕ್ಕಳಂತೆ ಬಾಳು ಕೊಟ್ಟ, ಕೊಡುತ್ತಿರುವ ಉದಾಹರಣೆ ಇದೆ ಅಥವಾ ಇದನ್ನು ಓದಿದ, ಫೋಟೋ ನೋಡಿದ ಪುಣ್ಯಾತ್ಮರು ಅಂಥವರನ್ನು ಬಾಳಸಂಗಾತಿಯನ್ನಾಗಿ ಮಾಡಿಕೊಂಡು ಬಾಳು ಕೊಡಲೂ ಸಾಧ್ಯವಿದೆ. ಮಾಧ್ಯಮದಲ್ಲಿ ನೋಡಿ ಹೀಗೆ ಬಾಳು ಕೊಟ್ಟ ಉದಾಹರಣೆಗಳೂ ಇವೆ. ಹೀಗಾಗಿ ಮಾಧ್ಯಮದಿಂದ ತಪ್ಪು ನಡೆದಿದೆ ಎಂದು ಅನಿಸುವುದಿಲ್ಲ.

    ಉತ್ತರ
  5. ರವಿಕುಮಾರ ಜಿ ಬಿ's avatar
    ರವಿಕುಮಾರ ಜಿ ಬಿ
    ಜುಲೈ 31 2012

    ಶೆಟ್ರೆ ಸರಿಯಾಗಿ ಹೇಳಿದ್ದೀರಿ. ವಾದ ಮಾಡುವವರಿಗೆ ಹಿಂದೆ ಮುಂದೆ ಇಲ್ಲ ! ಒಟ್ಟು ವಾದ ಅಷ್ಟೇ ! ಮತ್ತೆ ಈಗಿನ ಮೀಡಿಯಾ ದವರಿಗೆ ಇಂತಹುದನ್ನ ಪ್ರಸಾರ ಮಾಡಿ ಟೈಮ್ ಪಾಸ್ ಮಾಡೋದು ಒಂದು ಕೆಟ್ಟ ಹವ್ಯಾಸ ಆಗಿಬಿಟ್ಟಿದೆ. ಟಿವಿ ಯಲ್ಲಾಗಲಿ ಪೇಪರಲ್ಲಾಗಲಿ ಒಂದು ನೈತಿಕತೆ ಇಟ್ಟುಕೊಂಡು ಪ್ರಸಾರ ಮಾಡುತ್ತಿಲ್ಲ ! ಎಲ್ಲಾ ಕಡೆ biased ಮೀಡಿಯಾ . ಸುದ್ದಿಗಳನ್ನ ತಮಗೆ ಉಪಯೋಗ ಆಗೋ ರೀತಿ ತಿರುಚಿ ಹೇಳೋದು, ಮತ್ತೆ ಅದಕ್ಕೆ ಸಪೋರ್ಟ್ ಮಾಡೋರನ್ನ ಹುಡುಕಿ ತಂದು ಅದರ ಬಗ್ಗೆ ಚರ್ಚೆ ಮಾಡೋದು. ಅಕಸ್ಮಾತ್ ಬಂದವರು ಇವರ ಮೂಗಿನ ನೇರಕ್ಕೆ ಮಾತನಾಡದೆ ಉಲ್ಟಾ ಮಾತನಾಡಿದರೆ ತತ್ಕ್ಷಣ ,ಮಾತನ್ನು ಬೇರೆ ಕಡೆ ಹೊರಳಿಸೋದು ಇತ್ಯಾದಿಗಳು, ಸರಿಯಾಗಿ ಗಮನಿಸಿದರೆ ನಮಗೇ ಗೋಚರಿಸುತ್ತದೆ. ಏನೂ ಮಾಡೋಕಾಗಲ್ಲ, ಒಂದು ಮಟ್ಟದವರೆಗೆ ಸಹಿಸಬೇಕು ಅಷ್ಟೇ! ಬೇರೆ ವಿಧಿ ಇಲ್ಲ !

    ಉತ್ತರ
    • angadiindu's avatar
      ಆಗಸ್ಟ್ 1 2012

      ಉದಾಹರಣೆಗೆ ಜನಶ್ರೀ ವಾಹಿನಿ. ಶ್ರೀರಾಮುಲು ಅವರ ಮುಖವಾಣಿಯಂತೆ ಅವರ ಯಾತ್ರೆಗಳ ವಿವರವನ್ನು ತಲೆ ಚಿಟ್ಟು ಹಿಡಿಸುವ ಹಾಗೆ ಪ್ರಸಾರ ಮಾಡುವ ಈ ವಾಹಿನಿಯು ಅದೇ ಸುರೇಶಬಾಬು ಬೇಲ್ ಡೀಲ್ ನಲ್ಲಿ ಬಂಧಿತನಾದಾಗ,A C B ಯೇ ಅವರನ್ನು ಅರೆಷ್ಟ್ ಮಾಡಿ, ತಪ್ಪು ಮಾಡಿದೆ ಎಂದು ಪ್ರಸಾರ ಮಾಡುತ್ತದೆ. ಬೆಳಗಾವಿ ಗಡಿ ವಿಷಯದಲ್ಲಿ ಸುಮ್ಮನೆ ತೊಂದರೆಯಾಗಬಾರದೆಂದು ಕರ್ನಾಟಕ ವಿಧಾನಸಭೆಯಲ್ಲಿ ತೆಗೆದುಕೊಂಡ “ವಾಗ್ದಂಡನೆ” ಯನ್ನು ಕೇವಲ “ಕ್ಷಮಾದಾನ” ವಾಗಿ ಬದಲಾಯಿಸಿದಾಗ ಅದರಲ್ಲೂ ತಪ್ಪು ಹುಡುಕುತ್ತದೆ. ಅನಂತ ಚಿನಿವಾಲ ಹಾಗೂ ಶ್ರೀಲಕ್ಷ್ಮಿ ರಾಜಕುಮಾರ ಅವರಂತ ಉತ್ತಮ ನಿರೂಪಕರೂ ಹಾಗೂ ನಿರರ್ಗಳವಾಗಿ ಮಾತನಾಡುವ ಸುದ್ದಿ ವಾಚಕರನ್ನು ಹೊಂದಿರುವ ಜನಶ್ರೀ ವಾಹಿನಿ ನಂ.೧.ಆಗುವ ಎಲ್ಲಾ ಅರ್ಹತೆ ಹೊಂದಿದೆ. ಆದರೆ ಈ ಪರಿಯ ಗಣಿ ದೊರೆಗಳನ್ನು ಓಲೈಸುವ ದುಷ್ಪ್ರಯತ್ನದಿಂದ ಹತ್ತರಲ್ಲಿ ಇನ್ನೊಂದು ಎನ್ನುವಂತೆ ಆಗಿದೆ.

      ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments