ಇವರ ಪಾಲಿಗೆ ‘ಹೆಣ್ಣು’ ಟಿ ಆರ್ ಪಿ ಹೆಚ್ಚಿಸುವ ಕ್ಯಟಲಿಸ್ಟ್ ಮಾತ್ರ…
– ಚೇತನಾ ತೀರ್ಥಹಳ್ಳಿ
ಸತ್ತು ಬಿದ್ದಿತ್ತು ಭಾರತ’ – ಇದು ಡಿಸೆಂಬರ್ 2, 2007ರಂದು ಬರೆದು ನನ್ನ ಬ್ಲಾಗ್ ನಲ್ಲಿ ಹಾಕಿಕೊಂಡಿದ್ದ ಲೇಖನ.
ಆ ದಿನ ಅಸ್ಸಾಮಿನ ಬುಡಕಟ್ಟು ಜನಾಂಗವೊಂದು ತನ್ನ ಹಕ್ಕುಗಳಿಗಾಗಿ ಒತ್ತಾಯಿಸಿ ಧರಣಿ ಹೂಡಿತ್ತು. ಅದರಲ್ಲಿ ಹೆಂಗಸರೂ ಇದ್ದರು. ದಿಬ್ರುಗಡ್ ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿತ್ತು. ಅದೇ ಸಮಯಕ್ಕೆ ಗುವಹಾಟಿಯ ಬೀದಿಯೊಂದರಲ್ಲಿ ಒಬ್ಬ ಟ್ರೈಬಲ್ ಹೆಣ್ಣುಮಗಳು ಪ್ರತಿಭಟನೆಯ ಬೋರ್ಡ್ ಹಿಡಿದು ತನ್ನ ಪಾಡಿಗೆ ನಿಂತಿದ್ದಳು. ತನ್ನ ಜನಾಂಗದ ಹಕ್ಕಿಗಾಗಿ ಶಾಂತಿಯುತ ಪ್ರತಿರೋಧ ತೋರುತ್ತಿದ್ದ ಆ ಹೆಣ್ಣನ್ನು ಗುವಹಾಟಿಯ ಕೆಲವು ಗಂಡಸರು ಅಟ್ಟಾಡಿಬಿಟ್ಟಿದ್ದರು. ಜನಾಂಗೀಯ ದ್ವೇಷ, ಮತ್ತೆಲ್ಲೋ ನಡೆದ ಹಿಂಸೆಗೆ ಪ್ರತಿಯಾಗಿ ಇಲ್ಲಿ ಅಸಹಾಯಕ ಹೆಣ್ಣಿನ ಮೇಲೆ ಮುಗಿಬಿದ್ದಿದ್ದರು. ಆಗಲೂ ಒಬ್ಬ ಮೀಡಿಯಾ ಹುಡುಗ ಫೋಟೋಗಳನ್ನ ತೆಗೆದು “ಭೇಷ್” ಆಗಿದ್ದ!
~
2012ರ ಜುಲೈ 13. ಪಬ್ ನಿಂದ ಹೊರಬಂದು ಸ್ನೇಹಿತರ ಜತೆ ಜಗಳಾಡುತ್ತಿದ್ದ ಹುಡುಗಿಯ ಮೇಲೆ 20 ಜನ ಗಂಡಸರು ಕೈಮಾಡಿದರು. ಕೈಹೋದಲ್ಲೆಲ್ಲ ಮುಟ್ಟಿ ತೆವಲು ತೀರಿಸಿಕೊಂಡರು. ಅವಳ ಬಟ್ಟೆ ಚಿಂದಿಯಾಯ್ತು. ಇದು ಕೂಡ ನಡೆದಿದ್ದು ಗುವಹಾಟಿಯಲ್ಲೇ. ಆಗಲೂ ಒಬ್ಬ ಲೋಕಲ್ ಮೀಡಿಯಾದ ಫೋಟೋಗ್ರಾಫರ್ ಇದ್ದ. ಘಟನೆಯನ್ನ ವಿಡಿಯೋ ಮಾಡಿದ. ನನ್ನಿಂದ ಸಹಾಯ ಅಂತೂ ಮಾಡಲಾಗಲಿಲ್ಲ, ಅದಕ್ಕೆ ಚಿತ್ರೀಕರಣ ಮಾಡಿದೆ ಅಂದ. ಶೂಟ್ ಮಾಡುವಾಗ ವಿಡಿಯೋಗೆ ಬೆಳಕು ಸಾಕಾಗ್ತಿಲ್ಲ, ಅವಳನ್ನ ಈಚೆ ಎಳಕೊಂಡು ಬನ್ನಿ ಅಂತ ಅವನಂದಿದ್ದು ರಟ್ಟಾಯ್ತು.
~
2009ರ ಜನವರಿ 24. ಮಂಗಳೂರಿನ ಪಬ್ ಒಂದರ ಮೇಲೆ ಶ್ರೀರಾಮ ಸೇನೆಯ ವಾನರರು ದಾಳಿ ಮಾಡಿದರು. ಹೆಣ್ಣುಮಕ್ಕಳನ್ನ ಹಿಗ್ಗಾಮುಗ್ಗ ಬಡಿದರು. ಚಾನೆಲ್ ಒಂದು ಅಚ್ಚುಕಟ್ಟಾಗಿ ಚಿತ್ರೀಕರಿಸಿ ಟಿ ಆರ್ ಪಿ ಹೆಚ್ಚಿಸಿಕೊಂಡಿತು. ತಪ್ಪಿಸುವ ಗೋಜಿಗೆ ಹೋಗುವುದು ಹಾಗಿರಲಿ, ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಿತು.
~
2012ರ ಜುಲೈ28. ಮತ್ತೆ ಮಂಗಳೂರು. ಹೋಮ್ ಸ್ಟೇ ಒಂದರಲ್ಲಿ ಪಾರ್ಟಿ ಮಾಡುತ್ತಿದ್ದ ಹುಡುಗ ಹುಡುಗಿಯರನ್ನ ಥಳಿಸಲಾಯ್ತು. ಹುಡುಗಿಯ ಕಪಾಳಕ್ಕೆ ಬಿಗಿದು, ಮೈಮುಟ್ಟಿ ಹಿಂಸಿಸಲಾಯ್ತು. ಇದನ್ನೆಲ್ಲ ಮಾಡಹೊರಟ ಫಟಿಂಗರು ಚಾನೆಲ್ ಒಂದರ
ಕ್ಯಾಮೆರಾಪರ್ಸನ್ ಗಳನ್ನು ಜೊತೆಯಲ್ಲೇ ಒಯ್ದಿದ್ದರು!
***
ಹೆಣ್ಣುಮಕ್ಕಳು ಏನು ಮಾಡಿದರೂ ತಪ್ಪು. ಹೋರಾಟ ಮಾಡಿದರೂ, ಪಾರ್ಟಿ ಮಾಡಿದರೂ. ಮೈತುಂಬ ಸೀರೆ ತೊಟ್ಟವಳ ಬಟ್ಟೆಯನ್ನೂ ಎಳೆಯಲಾಗುತ್ತೆ, ಸ್ಕರ್ಟ್ ತೊಟ್ಟವಳದ್ದೂ. ನಾವು ಗಂಡಸರ ಮರ್ಜಿಗೆ ತಕ್ಕ ಹಾಗೆ, ಅವರ ತಾಳದ ಲಯಕ್ಕೆ ಹೆಜ್ಜೆ ಹಾಕಬೇಕು ಅನ್ನೋದು ಅವರ ಬಲಾತ್ಕಾರ. ಹೆಣ್ಣು ಅರೆನಗ್ನಳಾಗಿದ್ರೆ ಕಾಮ ಪ್ರಚೋದನೆಯಾಗತ್ತೆ, ಅದಕ್ಕೇ ರೇಪ್ ಕೇಸ್ ಗಳು ಜಾಸ್ತಿ ಆಗೋದು ಅಂತ ಬೊಬ್ಬೆ ಹೊಡೆಯೋರಿಗೆ ನಾಚಿಕೆಯಾಗ್ಬೇಕು. ಎಂಟು ತಿಂಗಳ ಸ್ವಂತ ಮಗಳನ್ನ ಅಪ್ಪ ಅನ್ನಿಸಿಕೊಂಡ ಗಂಡಸು ರೇಪ್ ಮಾಡ್ತಾನೆ. ಮಗುವಿನ ನಗ್ನತೆಗೂ ಕಾಮ ಕೆರಳಿಸ್ಕೊಳ್ಳುವ ಗಂಡಸಿನ ಲಂಪಟತನಕ್ಕೆ ಲಗಾಮು ಹಾಕಬೇಕಾ? ಹೆಣ್ಣುಮಕ್ಕಳನ್ನ ಹುಟ್ಟಿದಾಗಿಂದಲೇ ಘೋಷಾದೊಳಗೆ ಬಚ್ಚಿಡಬೇಕಾ!?
ಸಂಸ್ಕೃತಿ ಕಾವಲಿನ ಹೆಸರಿನಲ್ಲಿ ನಮ್ಮ ಮೈಕೈ ಮುಟ್ಟಲು ಬರುವ ಈ ಲಫಂಗರಿಗೆ ಎಷ್ಟು ಧಿಕ್ಕಾರ ಹೇಳಿದರೂ ಸಾಲದು. ನನ್ನ ಭಾರತ ಏನು, ನನ್ನ ಸಂಸ್ಕೃತಿ ಏನು ಅನ್ನೋದು ನನಗೆ ಗೊತ್ತು. ನಮಗೆಲ್ಲರಿಗೂ ಗೊತ್ತು. ಅದಕ್ಕೆ ಯಾವ ಕಾವಲು ನಾಯಿಗಳೂ ಬೇಕಿಲ್ಲ.
ಕೈಮುಗೀತೀವಿ, ನಮ್ಮ ಸಂಸ್ಕೃತಿಯನ್ನ ಹೀಗೆಲ್ಲ ವಿಕೃತ ಮಾಡಬೇಡಿ… ಅಥವಾ ನಾವೂ ಕೈ ಎತ್ತುವ ತನಕ ಈ ಹರ್ಕತ್ ಗಳನ್ನ ಮುಂದುವರೆಸ್ತೀರೋ? – ಈ ಪ್ರಶ್ನೆ ಹೆಣ್ಣು ಮತ್ತು ಹಿಂಸಾಚಾರವನ್ನು ಟಿ ಆರ್ ಪಿ ಏರಿಕೆಗೆ ಕ್ಯಟಲಿಸ್ಟ್ ನಂತೆ ಬಳಸಿಕೊಳ್ತಿರುವ ಮೀಡಿಯಾಗಳಿಗೂ ಅನ್ವಯಿಸುತ್ತೆ…
———————————————————————————————————————–
ಸತ್ತುಬಿದ್ದಿತ್ತು ಭಾರತ….
(ಇದು ನನ್ನ ಡಿಸೆಂಬರ್2, 2007ರ ಬರಹ)
ನಾವು ಭಾರತೀಯರು!”
ಅವಳಿಗೆ ಹೆಮ್ಮೆ. ಅಪ್ಪ, ಯಾವಾಗಲೂ ಹೇಳುವನು, “ಮಗಳೇ, ನಮ್ಮದು ಸುಸಂಸ್ಕೃತ ದೇಶ. ಹೆಣ್ಣಿಗೆ ಇಲ್ಲಿ ಸದಾ ಎತ್ತರದ ಸ್ಥಾನ”
ಕಾಸಗಲ ಬೊಟ್ಟಿಟ್ಟು ಬೈತಲೆ ತೆಗೆಯುವಾಗಲೆಲ್ಲ ಅವಳ ಮುಖದಲ್ಲಿ ಗತ್ತಿನ ನಗು,
“ಜಗತ್ತಿಗೆ ಮರ್ಯಾದೆಯ ಪಾಠ ಹೇಳಿಕೊಟ್ಟವರು ನಾವೇ!”
* * *
ದಿನಾ ಅಮ್ಮನ ವಟ ವಟ.
ಮಗಳು ಹಿಂಗೆ ಬಾವುಟ ಹಿಡಿದು ಹಾದಿಬೀದಿ ಸುತ್ತಿದ್ರೆ ನಾಳೆ ಯಾರು ಮದುವೆಯಾಗ್ತಾರೆ?”
ಅಪ್ಪನಿಗೆ ನಗು. ಝಾನ್ಸಿ ರಾಣಿ, ದುರ್ಗಾ ಭಾಭಿ… ಹತ್ತಾರು ಹೆಸರು ಹೇಳಿ ಕನವರಿಸುವನು.
ಮನೆ ಮುದ್ದಿನ ಮಗಳು ಅಲ್ಲೆಲ್ಲೋ ನಡು ರಸ್ತೆಯಲ್ಲಿ ” ಮುರ್ದಾಬಾದ್ ಮುರ್ದಾಬಾದ್” ಕೂಗುತ್ತ ನಿಲ್ಲುವಳು.
ಅಮ್ಮ, ‘ಹುಡುಗಾಟದ ಹುಡುಗಿ’ ಅಂದು ಮುಖ ತಿರುವಿದರೆ, ಅಪ್ಪ, ‘ ಹೋರಾಟದ ಹುಡುಗಿ!’ ಅಂತ ಸೆಡ್ಡು ಹೊಡೆದು ಮೀಸೆ ತಿರುವುವನು!!
* * *
ಮತ್ತೆ ಮತ್ತೊಂದು ಕರಿ ಬಾವುಟದ ದಿನ. ಬಯಲಲ್ಲಿ ಹುಡುಗರು, ಬಗಲಲ್ಲಿ ಇವಳು.
ಪ್ರತಿಭಟನೆಯ ಕಾವಿಗೆ ಊರಿಗೆ ಊರೇ ಸುಡುತ್ತಿತ್ತು. ಮೊದಲು ಕಲ್ಲೆಸೆದವರು ಯಾರೋ? ಜೇನು ಗೂಡು ಚದುರಿತ್ತು.
ನ್ಯಾಯಕ್ಕೆ ನಿಂತ ದಂಡು ಚೆಲ್ಲಾಪಿಲ್ಲಿ. ಗಂಡು ಹುಳಗಳು ಎಲ್ಲಿಂದಲೋ ದೌಡಾಯಿಸಿ ದೌಡಾಯಿಸಿ ಬಂದವು.
ಊಹೂಂ… ಇವಳು ಅಲ್ಲಾಡಲಿಲ್ಲ.
” ನನ್ನಲ್ಲಿ ಸತ್ಯವಿದೆ. ನನ್ನಲ್ಲಿ ನ್ಯಾಯವಿದೆ!”
* * *
ಹೌದು. ಅವಳಲ್ಲಿ ಎಲ್ಲವೂ ಇತ್ತು. ಕಿಚ್ಚು ಹಚ್ಚುವ ಕೆಚ್ಚಿತ್ತು. “ನಾವು ಭಾರತೀಯರು”- ನಂಬಿಕೆ ಇತ್ತು.
ಅವಳು ಹಾಗೆ ನಂಬುತ್ತ ನಿಂತಿರುವಾಗಲೇ…..
ಕಾರು- ಬಂಗಲೆಯ ಗಂಡಸರು ಅವಳ ಮೇಲೇರಿ ಬಂದರು. ಊರು ಕೇರಿ ಅಟ್ಟಾಡಿಸಿ ಬಟ್ಟೆ ಹರಿದು ಒಗೆದರು.
ಜೊತೆಯ ಹುಡುಗರ ಶೌರ್ಯ ಸೊರಸೊರ ಸೋರಿಹೋಗಿ ಷಂಡರಂತೆ ಮರದ ಮರೆಯಲ್ಲಿ ಬೇರು ಬಿಟ್ಟು ನಿಂತಿದ್ದರು!
ಸತ್ಯ, ಚಿಂದಿಯಾಗಿ ಬಿದ್ದಿತ್ತು.
ನ್ಯಾಯ ಸಾಯುತ್ತಿದೆ!- ಇವಳು ಕನಲಿದಳು. ನಿಂತಲ್ಲಿಂದ ಕದಲಿದಳು.
ಅಪ್ಪನ ಪಾಠ ತಲೆಯಲ್ಲಿ ಗಿರಗಿರಗಿರ ಗಿರಕಿ…
ಓ! ಇದು ಯಾವ ನೆಲ? ಎಲ್ಲಿ ನನ್ನ ಜನ!?
ನಂಬಿಕೆ ಸೋತ ಗಳಿಗೆಯಲ್ಲೇ ಕಾಲು ಎಡವಿ ಬಿದ್ದಳು.
ಎದುರಿಗೊಬ್ಬ ಬಿಳಿ ಬೂಟಿನ ಗಂಡಸು.
ಎಲ್ಲೆಲ್ಲಿಯ ಹೊಲಸು ಮೆಟ್ಟಿ ಬಂದಿದ್ದನೋ!? ಅದೇ ಬೂಟು ಕಾಲನೆತ್ತೆತ್ತಿ ಜೀವ ಸ್ಥಳಕ್ಕೆ ಒದ್ದ.
ಝಾಡಿಸಿ ಝಾಡಿಸಿ ಒದ್ದ.
ಹಾಗೆ ಅಂವ ತನ್ನ ‘ಗಂಡಸು’ತನವನ್ನ ಸಾಬೀತುಪಡಿಸುತ್ತಿದ್ದರೆ, ದೂರದಲ್ಲೊಬ್ಬ ಚೌಕಟ್ಟನೆಯ ಕ್ರಾಪಿನ ಹುಡುಗ, ನೀಟಾಗಿ ನಿಂತು ಫೋಟೋ ಕ್ಲಿಕ್ಕಿಸುತ್ತಿದ್ದ!
* * *
ಬಟ್ಟೆ ಕಳೆದು ಸಾಕಷ್ಟು ಹೊತ್ತಾಗಿದ್ದರೂ, ಈಗ ಅವಳಿಗೆ ತಾನು ಬೆತ್ತಲಾಗಿದ್ದೇನೆ ಅನಿಸತೊಡಗಿತ್ತು…
ಅವಳ ಪಾಲಿನ ಹೆಮ್ಮೆಯ ಭಾರತ, ಸದ್ದಿಲ್ಲದೆ ಸತ್ತು ಬಿದ್ದಿತ್ತು!





ನಮಸ್ಕಾರ ಮೇಡಂ. ನಿಮ್ಮ ಲೇಖನ ಓದಿದೆ. ಚೆನ್ನಾಗಿದೆ. ಇಂಥಾ ಲೇಖನಗಳು ನಿಮ್ಮಿಂದ ಹೆಚ್ಚು ಹೆಚ್ಚು ಬರಲಿ ಎಂದು ಹಾರೈಸುತ್ತೇನೆ. ಆದರೆ ಇನ್ನೊಂದು ವಿಷಯ ನನ್ನನ್ನು ತುಂಬಾ ಕಾಡ್ತಾ ಇದೆ. ಅದೇನೆಂದರೆ, ಎಲ್ಲಿಯಾದರೂ ಒಬ್ಬ ವ್ಯಕ್ತಿಗೆ ಅನ್ಯಾಯ ಆಗುತ್ತಿದೆ ಎಂದರೆ, ನಮ್ಮ ಮಾಧ್ಯಮದವರು ತಮ್ಮ ಕ್ಯಾಮೆರಾಗಳನ್ನು ಹಿಡಿದುಕೊಂದು ಹೋಗಿ ನೀಟಾಗಿ ರೆಕಾರ್ಡ್ ಮಾಡಿ ಸೈ ಅನ್ನಿಸಿಕೊಳ್ಲೋಕೆ ಹಂಬಲಿಸೋದು. ಅದು ನನಗೆ ನಿಜಕ್ಕೂ ಬೇಸರ ತರಿಸುತ್ತೆ. ಅದು ಮಹಿಳೆಯ ಮೇಲಿನ ದೌರ್ಜನ್ಯ ಆಗಿರಲಿ, ಅಥವಾ ಇನ್ನ್ಯಾವುದೇ ಘಟನೆ ಆಗಿರಲಿ… ಬರೀ ಅದನ್ನು ರೆಕಾರ್ಡ್ ಮಾಡೋದೇ ಮಹಾ ಪುಣ್ಯದ ಕೆಲಸ ಅಂತ ಮಾಡ್ತಾರೆ. ಸ್ವಲ್ಪಾನಾದ್ರೂ ಮಾನವೀಯತೆ ಬೇಡ್ವ ? ಕಣ್ಣ ಮುಂದೆ ನಡೀತಾ ಇರೋ ಇಂಥ ದೌರ್ಜನ್ಯ ಗಳನ್ನ ತಡೆಯೋಕೆ ಇವರಿಗೆ ಯಾಕೆ ಆಗೋಲ್ಲ ? ಅಂಥಾ ಒಂದು ಸಣ್ಣ ಪ್ರಯತ್ನವನ್ನು ಇವರು ಮಾಡೋದಿಲ್ಲ.
ಮೇಡಂ, ನಿಮಗೆ ನೆನಪಿರಬಹುದು… ಕೆಲ ವರ್ಷಗಳ ಹಿಂದೆ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಆಗಿತ್ತು. ಒಬ್ಬ ರೈತ ಗುಂಡೇಟು ತಿಂದು, ನರಳುತ್ತ ರಸ್ತೆ ಮೇಲೆ ಬಿದ್ದಿದ್ದ. ಇನ್ನೊಬ್ಬ ರೈತನಿಗೂ ಅದೇ ಪರಿಸ್ಥಿತಿ. ಟಿವಿ ಕ್ಯಾಮೆರಾಗಳು ಬರೀ ಅದನ್ನು ಶೂಟ್ ಮಾಡೋದ್ರಲ್ಲಿ ಸಮಯ ಹಾಳು ಮಾಡಿದರೇ ಹೊರತು ಯಾರೊಬ್ಬರೂ ಆ ಗಾಯಗೊಂಡ ರೈತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ. ಅಂದು ಮಾಧ್ಯಮದವರು ಅನ್ನಿಸಿಕೊಂಡವರಲ್ಲಿ (ನಿರ್ಜನ ರಸ್ತೆಯಾಗಿದ್ದ ಅಲ್ಲಿ, ಯಾರೂ ಇರಲಿಲ್ಲ. ಗೋಲಿಬಾರ್ ಮಾಡಿದ ಪೊಲೀಸರೂ ಅಲ್ಲಿರಲಿಲ್ಲ.) ಒಬ್ಬರಾದರೂ ಗಾಯಗೊಂಡ ರೈತರನ್ನು ಬೇಗನೆ ಆಸ್ಪತ್ರೆಗೆ ಆ ಜೀವಗಳು ಪಾಯಶಃ ಉಳಿಯುತ್ತಿದ್ದವು. ಆದರೆ ನಮ್ಮ ಮಾದ್ಯಮಗಳಿಗೆ ಅದು ಬೇಕಿರಲಿಲ್ಲ. ಅವರಿಗೆ ತಮ್ಮ ಟಿ.ಆರ್. ಪಿ. ಹೆಚ್ಚಿಸೋದರ ಮೇಲಷ್ಟೇ ಗಮನ. ಇದು ‘ಉತ್ತಮ ಸಮಾಜಕ್ಕಾಗಿ’ ಅಂತ ಪೋಸು ಕೊಡೊ ಮಾದ್ಯಮದ ಸಾಮಾಜಿಕ ಕಾಳಜಿ! ಕೇವಲ ಹಾವೇರಿ ಘಟನೆಯಷ್ಟೇ ಅಲ್ಲ. ಇಂಥ ಹಲವಾರು ಘಟನೆಗಳಿವೆ.
ಮುಂದೊಂದು ದಿನ, ಎಲ್ಲೋ ಒಂದು ದರೋಡೆ ನಡೀತಾ ಇರೋ ಮಾಹಿತಿ ಸಿಕ್ಕರೆ, ಕೊಲೆ ನಡೆಯುತ್ತೆ ಅನ್ನೋ ಮಾಹಿತಿ ಸಿಕ್ಕರೆ ಅಥವಾ ಯಾವುದೊ ಒಬ್ಬ ಹೆಣ್ಣಿನ ಮೇಲೆ ಅತ್ಯಾಚಾರ ನಡೀತಾ ಇದೆ ಅನ್ನೋದರ ಮಾಹಿತಿ ಸಿಕ್ಕರೆ, ನಮ್ಮ ಮಾಧ್ಯಮದವರು ಅಲ್ಲಿಗೂ ಹೋಗಿ ಅಂಥಾ ಹೀನ ಕೃತ್ಯಗಳನ್ನೆಲ್ಲ ನೇರ ಪ್ರಸಾರವನ್ನೇ ಮಾಡಬಹುದು. ನಾವೆಲ್ಲರೂ ಅದನ್ನು ಕ್ರಿಕೆಟ್ ಮ್ಯಾಚ್, ಒಲಿಂಪಿಕ್ಸ್ ಪಂದ್ಯಗಳಂತೆ ನೇರ ಪ್ರಸಾರದಲ್ಲಿ ನೋಡಬಹುದೇನೋ ಅಲ್ವಾ.
ಪಕ್ಕದ ಮನೆಗೆ ಬೆಂಕಿ ಬಿದ್ದರೆ, ಅದರಲ್ಲಿ ನಮ್ಮ ಬೆಲೆ ಕಾಲು ಹ್ಯಾಗೆ ಬೇಯಿಸಿಕೊಳ್ಳಬೇಕು ಅನ್ನೋದನ್ನಷ್ಟೇ ಕಲಿತಿರೋ, ಅದೇ ನಾವು ಸಮಾಜಕ್ಕೆ ಏನೋ ಸಹಾಯ ಮಾಡ್ತಾ ಇದೀವಿ ಅಂತ ಅನ್ಕೊಂಡಿರೋ ಇಂಥಾ ಬೇಷರಂ ಮಾದ್ಯಮಗಳಿಗೆ ನಮ್ಮ ಧಿಕ್ಕಾರವಿರಲಿ. ಇಂದು ಪಕ್ಕದ ಮನೆ ಹಬ್ಬಿರುವ ಬೆಂಕಿಯಿಂದ ತಮ್ಮ ಹೊಟ್ಟೆ ಹೊರೆದುಕೊಳ್ಲೋದೇ ಆದರೆ, ಆ ಬೆಂಕಿ ಒಂದಲ್ಲ ಒಂದು ದಿನ ನಮ್ಮ ಮನೆಗಳಿಗೂ ಹಬ್ಬಬಹುದು ಎಂಬ ಎಚ್ಚರವಿರಲಿ.