ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 5, 2012

11

ಗಡ್ಕರಿಯ ಅ”ವಿವೇಕ” ಮತ್ತು ಸಂಘದ “ಸ್ವಾಮಿ”ನಿಷ್ಠೆ…!

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

“ಇನ್ನೊಬ್ಬ ವಿವೇಕಾನಂದನಿದ್ದಿದ್ದರೆ ಅವನಿಗೆ ತಿಳಿಯುತಿತ್ತು – ಈ ವಿವೇಕಾನಂದ ಏನು ಮಾಡಿದ್ದಾನೆ ಎಂದು… ಇರಲಿ, ಕಾಲಾಂತರದಲ್ಲಿ ಮತ್ತೆಷ್ಟು ಮಂದಿ ವಿವೇಕಾನಂದರು ಉದಿಸಲಿರುವರೋ!” ಸ್ವಾಮೀಜಿ ದೇಹತ್ಯಾಗದ ದಿನ ತಮ್ಮಷ್ಟಕ್ಕೆ ತಾವೇ ಹೇಳಿಕೊಂಡ ಮಾತುಗಳಿವು. ನಿಜ ವಿವೇಕಾನಂದ ಮಾಡಿ ಹೋಗಿದ್ದೇನು? ಯಾರನ್ನಾದರು ಕೇಳಿ ನೋಡಿ, ತಟ್ಟನೆ “ಅವರು ಸರ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದರು” ಅಂತಲೇ ಹೇಳುತ್ತಾರೆ..ಮುಂದೇನು ಮಾಡಿದ್ದರು ಅಂತ ಕೇಳುವಷ್ಟರಲ್ಲಿ ಮಾತು ತಡವರಿಸುತ್ತದೆ… ಬಹುಷಃ ಇದೆಲ್ಲವನ್ನೂ ಅರಿತೇ ಸ್ವಾಮೀಜಿ ಬಹುಷಃ ಮೇಲಿನ ಮಾತನ್ನು ಹೇಳಿದ್ದರು ಅನ್ನಿಸುತ್ತದೆ.

ಆದರೆ,ಮುಂದೊಂದು ದಿನ ತಾನು ಪ್ರತಿಪಾದಿಸುತ್ತಿರುವ “ರಾಷ್ಟ್ರೀಯತೆ(?)” ಅನ್ನುವ ಪದವನ್ನು ಹಿಡಿದು ಪಕ್ಷವೊಂದು ಉದಯಿಸಬಹುದು ಮತ್ತು ಅದಕ್ಕೊಬ್ಬ ಮೇಧಾವಿ ಅಧ್ಯಕ್ಷ ಬಂದು ಅವನು “ಸ್ವಾಮಿ ವಿವೇಕಾನಂದರ ಬುದ್ದಿಮತ್ತೆಯನ್ನು ಮುಂಬೈನ ಕಪ್ಪು ಜಗತ್ತಿನ ಕಳ್ಳನಾಗಿದ್ದವನ ಬುದ್ದಿ ಮತ್ತೆಗೆ ಸರಿಸಮ” ಅಂತೇಳಬಹುದು ಅನ್ನುವುದನ್ನು ಮಾತ್ರ ಊಹಿಸಿರಲಿಕ್ಕಿಲ್ಲ…!

ಹೋದ ಬಂದ ಕಡೆಯೆಲಲ್ಲೆಲ್ಲ ವಿವೇಕಾನಂದರ ಫೋಟೋ ಇರಿಸಿ “ಯುವ ದಿನ” ಆಚರಿಸುವ ಪಕ್ಷ/ಸಂಘಕ್ಕೆ ಗಡ್ಕರಿ ಹೇಳಿಕೆ ಅಂತ ಮಹಾಪರಾಧವೇನು ಅನ್ನಿಸಿಲ್ಲ ಅನ್ನುವುದೇ ವಿಪರ್ಯಾಸ.ಕೆಲ ವರ್ಷಗಳ ಹಿಂದೆ ಕರಾಚಿ ನೆಲದಲ್ಲಿ ನಿಂತು ಅಡ್ವಾಣಿ “ಜಿನ್ನಾ ಜಾತ್ಯಾತೀತವಾದಿ”ಯಾಗಿದ್ದರು ಅನ್ನುವ ಸತ್ಯವನ್ನು ಹೇಳಿದಾಗ ನಿಂತ ನಿಲುವಲ್ಲೇ ಅವರನ್ನು ಮಾಡದ ತಪ್ಪಿಗೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನಕಾರಿಯಾಗಿ ನಡೆಸಿಕೊಂಡಿದ್ದ ಸಂಘಕ್ಕೆ, ಈಗ ತಮ್ಮ ಪ್ರೀತಿಯ ನಾಗಪುರದ ಹುಡುಗ ಸ್ವಾಮೀ ವಿವೇಕಾನಂದರನ್ನು ಯಕಶ್ಚಿತ್ ಕಳ್ಳನೊಬ್ಬನ ಜೊತೆ ಹೋಲಿಸಿದಾಗ ಏನು ಮಾಡಬೇಕು ಅನ್ನಿಸುತ್ತಿಲ್ಲವಾದರೆ,ಅಲ್ಲಿಗೆ ಸಂಘದ “ಸ್ವಾಮಿ” ನಿಷ್ಠೆ ಅರ್ಥವಾಗದೇನು?

ಎಲ್ಲ ರಾಜಕಾರಣಿಗಳಂತೆ ಗಡ್ಕರಿ ತಮ್ಮ ಮಾತಿಗೆ ಸ್ಪಷ್ಟನೆ ನೀಡುತ್ತ “ತಮ್ಮ ಮಾತನ್ನು ತಿರುಚಲಾಗಿದೆ” ಅನ್ನುವ ಅದೇ ಹಳೆ ರಾಜಕಾರಣಿಗಳ ಡೈಲಾಗ್ ಹೇಳಿದ್ದಾರೆ.ಮೊನ್ನೆ ಕಾನೂನು ಸಚಿವರು ಕೇಜ್ರಿವಾಲ್ಗೆ ಪ್ರಾಣ ಬೆದರಿಕೆ ಹಾಕಿ ಕಡೆಗೆ ಇದೇ ಹಳಸಲು ಸಮಜಾಯಿಷಿ ನೀಡಿದ್ದು.ಜನರ ಕಿವಿ ಮೇಲೆ ಹೂ ಇಡುವುದು ಬಹಳ ಸುಲಭ ಅನ್ನುವುದು ಈ ರಾಜಕಾರಣಿಗಳ ಅಭಿಪ್ರಾಯವಿರಬಹುದು.

ಜಿನ್ನಾ ಮುಸ್ಲಿಂ ಅನ್ನುವ ಕಾರಣಕ್ಕೋ ಅಥವಾ ದೇಶ ಒಡೆದ ಅನ್ನುವ ಕಾರಣಕ್ಕೋ ಅಡ್ವಾಣಿ ಹೇಳಿದ ಸತ್ಯವನ್ನೋ ಜೀರ್ಣಿಸಿಕೊಳ್ಳಲಾಗದ ಸಂಘಕ್ಕೆ, ಸಹಸ್ರಾರು ವರ್ಷ ಪರಕೀಯರ ಕಪಿಮುಷ್ಟಿಯಲ್ಲಿ ಸಿಕ್ಕಿ ನರಳಿ ತನ್ನತನವನ್ನೇ ಮರೆತು ಕೀಳರಿಮೆಯ ಭಾವನೆಯಲ್ಲಿ ನರಳುತಿದ್ದ ಧರ್ಮ/ಧರ್ಮೀಯರನ್ನು ತನ್ನ ಮಾತಿನ ಚಿಲುಮೆಯಿಂದ ಇಡಿ ಜಗತ್ತೇ ತಿರುಗಿ ನೋಡುವಂತೆ ಮಾಡಿದ ಸ್ವಾಮಿ ವಿವೇಕಾನಂದರು ಸಂಘದ ದೃಷ್ಟಿಯಲ್ಲಿ “ಜಿನ್ನಾ” ಗಿಂತ ತೂಕ ಇಲ್ಲದವರೇನು?ಸಂಘವನ್ನು,ಸಂಘದ ಹಿಂದೂ ಧರ್ಮವನ್ನು ಟೀಕಿಸುವ ಎಡಪಂಥೀಯರೇ,ವಿವೇಕಾನಂದರು ಪ್ರತಿಪ್ರಾದಿಸಿದ ಹಿಂದೂ ಧರ್ಮದ ಬಗ್ಗೆಯಾಗಲಿ ಅಥವಾ ವಿವೇಕಾನಂದರ ಬಗ್ಗೆಯಾಗಲಿ ಎಂದಿಗೂ ಇಷ್ಟು ಕೇವಲವಾಗಿ ಮಾತನಾಡಿದ್ದಿಲ್ಲ.ವಿವೇಕಾನಂದರನ್ನು ಟೀಕಿಸಲೇಬೇಕು ಅಂತ ಹೊರಟ ಕೆಲವರಿಗೆ ಸಿಕ್ಕಿದ್ದು “ಮಾಂಸಹಾರ,ಧೂಮಪಾನ” ಇಂತವಷ್ಟೆ…!

ಕಳೆದ ವರ್ಷ ದಿನೇಶ್ ಅಮೀನ್ ಮಟ್ಟು ವಿವೇಕಾನಂದರ ಆಹಾರ ಪದ್ಧತಿಯ ಬಗ್ಗೆ ಬರೆದಾಗ ಶಿವಮೊಗ್ಗದ ಪ್ರಜಾವಾಣಿ ಕಚೇರಿ ನುಗ್ಗಿದ್ದ ಸ್ವಾಮಿ ವಿವೇಕಾನಂದ ಅಭಿಮಾನಿಗಳು ಯಾಕೋ ಬಿಜೆಪಿಯ ಕಚೇರಿಯೊಳಗೆ ನುಗ್ಗುವ ಧೈರ್ಯ ಮಾಡಿಲ್ಲವಲ್ಲ..! ಯಾಕೆ ಗಡ್ಕರಿ,ಬಿಜೆಪಿ ಇವರಿಗೆ ಸ್ವಾಮೀಜಿಗಿಂತ ದೊಡ್ಡವರೇನು?

“ಬಿಜೆಪಿ”ಗೂ ನಮಗೂ ಸಂಬಂಧವಿಲ್ಲ ,ಗಡ್ಕರಿಯನ್ನು ಇರಿಸಿಕೊಳ್ಳುವುದು ಬಿಜೆಪಿಗೆ ಬಿಟ್ಟ ವಿಚಾರ ಅಂತ ಸಂಘ ಎಷ್ಟೇ ಸಮಜಾಯಿಷಿ ನೀಡಿದರೂ, ಅಡ್ವಾಣಿಯವರನ್ನು “ಜಿನ್ನಾ” ಹೇಳಿಕೆ ಮುಂದಿಟ್ಟುಕೊಂಡು ಹಿಂದೆ ಸರಿಸಿದವರು ಯಾರು ಅನ್ನುವುದು ಅರ್ಥವಾಗದೇ ಇರುತ್ತದೆಯೇನು? ಜಿನ್ನಾ ಬಗ್ಗೆ ಮಾತನಾಡಿದ ಅಡ್ವಾಣಿಯ ತಲೆದಂಡವಾಗುವುದಾದರೆ, ತಾನು ಹಗಲು-ರಾತ್ರಿ ಜಪ ಮಾಡುವ “ರಾಷ್ಟ್ರೀಯತೆ,ಹಿಂದೂ ಧರ್ಮ” ಅನ್ನುವುದನ್ನು ಪುನಃ ಸಂಸ್ಥಾಪನೆ ಮಾಡಿಹೋಗಲೆಂದೇ ಜನಿಸಿದ್ದ ಮಹಾಪುರುಷನ ಬಗ್ಗೆ ಕೀಳಾಗಿ ಮಾತನಾಡಿದ “ಗಡ್ಕರಿ” ಯ ತಲೆದಂಡ ಮಾಡುವುದಿಲ್ಲವೇ? ಮಾಡುವುದಿಲ್ಲವೆಂದಾದರೆ,ಅಲ್ಲಿಗೆ ನಿಮ್ಮ “Double Standard” ಏನು ಅನ್ನುವುದು ಇನ್ನು ಸ್ಪಷ್ಟವಾದಂತೆಯೇ ಸರಿ…
ಚಿತ್ರ ಕೃಪೆ : http://www.sanghparivar.org

11 ಟಿಪ್ಪಣಿಗಳು Post a comment
  1. mahendra kumar's avatar
    mahendra kumar
    ನವೆಂ 6 2012

    ವಿವೇಕಾನಂದರನ್ನ ಅರ್ಥ ಮಾಡಿಕೊಳ್ಳಲು ಯೋಗ್ಯತೆ ಇಲ್ಲದ ಈ ಜನ ಅವರನ್ನ ಮತ್ತು ಅವರ ಆದರ್ಶಗಳನ್ನ ದುರ್ಬಳಕೆ ಮಾಡಿಕೊಂಡಿದ್ದೇ ಹೆಚ್ಚು.. ಅವರನ್ನ ಬುದ್ದಿವಂತರು ಎಂದು ಕರೆದದ್ದೇ ಮಹಾಪರಾಧ. ಬುದ್ದಿವಂತರು ಎಂದು ಕರೆಯುವುದು ಗಡ್ಕರಿಯಂತಾ ವ್ಯಾಪಾರಿಗಳನ್ನ, ವೆಂಕಯ್ಯ ನಾಯ್ಡು ಅಂತಹಾ ರಾಜಕಾರಣಿಯನ್ನ, ಅರುಣ್ ಜೇಟ್ಲಿಯಂತಹಾ ಅವಕಾಶವಾದಿಯನ್ನ, ಎಂತಹಾ ಪರಿಸ್ಥಿತಿಯನ್ನೂ ತಮಗೆ ಬೇಕಾದ ಹಾಗೆ ಬದಲಾಯಿಸಿ ಕೊಳ್ಳುವ ಸಂಘ ಪರಿವಾರದ ಪ್ರಮುಖರನ್ನ, ದೇಶದ ಕಾನೂನಿನ ದುರ್ಬಳಕೆ ಮಾಡಿಕೊಂಡು ಕರಾಳ ಲೋಕ ನಿರ್ಮಿಸಿಕೊಂಡಿರುವ ದೇಶ ದ್ರೋಹಿ ದಾವೂದ್ ನನ್ನ…
    ಸ್ವಾಮೀ ವಿವೇಕಾನಂದರನ್ನ, ರಾಮ ಕೃಷ್ಣ ಪರಮ ಹಂಸರನ್ನ,ಬುದ್ದ-ಬಸವಣ್ಣ ನವರನ್ನ, ಹಾಗೇ ನಾರಾಯಣ ಗುರುಗಳನ್ನ ಹೀಗೇ ಇವರನ್ನೆಲ್ಲಾ ಜ್ನಾನಿಗಳು ಅಂತ ಕರೀತಾರೆ.. ಇಂತಹಾ ಸಣ್ಣ ವ್ಯತ್ಯಾಸಗಳೂ ಗೊತ್ತಿಲ್ಲದಮೇಲೆ ಅಂತವರ ಹೆಸರು ಹೇಳಿಕೊಂಡು ಅಂತವರಿಗೆ ಅವಮಾನಿಸುವ ಕೆಲಸ ಮಾಡಬಾರದಲ್ವಾ…?

    ಉತ್ತರ
    • ಒಂದು ವೇಳೆ ಗಡ್ಕರಿಯ ಬದಲು ಬೇರೆ ಪಕ್ಷದವರ್ಯಾರಾದರೂ ಈ ಮಾತನ್ನು ಹೇಳಿದ್ದರೆ ಇಷ್ಟೊತ್ತಿಗೆ ಸಂಘದ ದೇಶ ಭಕ್ತಿ,ಸ್ವಾಮಿ ನಿಷ್ಠೆ ಜಾಗೃತವಾಗಿರುತಿತ್ತು

      ಉತ್ತರ
      • SSNK's avatar
        ನವೆಂ 7 2012

        ಇದು ನಿಮ್ಮ ಅನಿಸಿಕೆ ಅಷ್ಟೇ.
        ಗಡ್ಕರಿಯವರು ವಿವೇಕಾನಂದರನ್ನಾಗಲೀ ಅವರ ಬುದ್ಧಿಯನ್ನಾಗಲೀ ಹೋಲಿಸಿಲ್ಲ ಮತ್ತು ಅದು ಅವರ ಉದ್ದೇಶವೂ ಅಲ್ಲವೆಂಬುದು ಆವರ ಮಾತನ್ನು ಪೂರ್ಣ ಓದಿದಾಗ ತಿಳಿಯುತ್ತದೆ.
        ವಿವೇಕಾನಂದರ ಉತ್ತಮ ಚಿಂತನೆ ಮತ್ತು ಕಾರ್ಯಗಳಿಂದ ಅವರ ಬುದ್ಧಿವಂತಿಕೆ ಸಾರ್ಥಕವಾಯಿತು.
        ಬುದ್ಧಿಯಿದ್ದೂ ಅದನ್ನು ದಾವೂದ್ ಇಬ್ರಾಹಿಂನಂತೆ ಕೆಟ್ಟ ಚಿಂತನೆ ಮತ್ತು ಕಾರ್ಯಗಳಿಗೆ ಉಪಯೋಗಿಸಿದರೆ ಬುದ್ಧಿವಂತಿಕೆ ಇದ್ದದ್ದೂ ವ್ಯರ್ಥ.
        ಇದು ಅವರು ತಿಳಿಸಲು ಯತ್ನಿಸಿರುವುದು. ಇದರಲ್ಲಿ ಏನು ತಪ್ಪಿದೆ ಹೇಳಿ?
        ನಾನು ತಿಳಿಸಿದ ಮಂಕುತಿಮ್ಮನ ಕಗ್ಗದಲ್ಲೂ ಇದೇ ರೀತಿಯ ಉದಾಹರಣೆ ಇರುವುದು.
        ರಾಮನಿದ್ದಾಗ ರಾವಣನೂ ಇದ್ದ ಎನ್ನುವುದರ ಅರ್ಥವೇನು ಮತ್ತು ಅದರ ಅಗತ್ಯವೇನು?
        ಅಲ್ಲಿ ಡಿವಿಜಿಯವರು ತಾವು ಹೇಳುತ್ತಿರುವುದನ್ನು ಅರ್ಥೈಸಲು ರಾಮ-ರಾವಣರ ಉದಾಹರಣೆ ತೆಗೆದುಕೊಂಡಿದ್ದಾರೆ. ನೀವು ಅದನ್ನು “ರಾಮನನ್ನು ರಾವಣನಿಗೆ ಹೋಲಿಸಿಬಿಟ್ಟಿದ್ದಾರೆ” ಎಂದು ಅಂದುಕೊಂಡರೆ ಎಡವುತ್ತೀರಿ.

        ನಾನು ಮೊದಲೇ ಕೇಳಿದಂತೆ, ಗಡ್ಕರಿಯವರು ತಿಳಿಸುತ್ತಿರುವ ವಿಷಯವನ್ನು ಸರಿಯಾಗಿ ಅರ್ಥ ಮಾಡಿಸಲು ಅದಕ್ಕಿಂತ ಉತ್ತಮ ಉದಾಹರಣೆಯನ್ನು ನೀವೇಕೆ ಕೊಡಲು ಯತ್ನಿಸುತ್ತಿಲ್ಲ!?

        ಇಲ್ಲಿ ನಾನು ಸಮರ್ಥಿಸುತ್ತಿರುವುದು ಗಡ್ಕರಿಯನ್ನಲ್ಲ. ಅವರ ಮಾತಿನಲ್ಲಿ ನನಗೇನೂ ತಪ್ಪು ತಿಳಿಯುತ್ತಿಲ್ಲ. ನೀವು ಅದಕ್ಕಿಂತ ಉತ್ತಮ ಉದಾಹರಣೆ ನೀಡಿದ ನಂತರ ನನ್ನ ನಿಲುವಿನಲ್ಲಿ ತಪ್ಪಿದ್ದರೆ ಸರಿಪಡಿಸಿಕೊಳ್ಳುವೆ.

        ಉತ್ತರ
  2. SSNK's avatar
    ನವೆಂ 6 2012

    ಇಲ್ಲಿ ವಿವೇಕಾನಂದರ ಬುದ್ಧಿವಂತಿಕೆಯ ಕುರಿತಾಗಿ ಮಾತನಾಡುತ್ತಿಲ್ಲ. ಹಾಗೆಯೇ, ಅವರ ಬುದ್ಧಿವಂತಿಕೆಯನ್ನು ಯಾರೊಡನೆಯೂ ಹೋಲಿಸಲಾಗುತ್ತಿಲ್ಲ.
    ಸಂದರ್ಭವನ್ನು ಅರ್ಥಮಾಡಿಕೊಳ್ಳದೆ ವಿಷಯದ ಕುರಿತಾಗಿ ಮಾತನಾಡುವುದು ಸರಿಯಲ್ಲ. ಇಂಗ್ಲಿಷಿನಲ್ಲಿ ಒಂದು ನಾಣ್ಣುಡಿಯಿದೆ: Take the spirit, not the words.

    ಗಡ್ಕರಿಯವರು ಇಲ್ಲಿ ಹೇಳಲು ಪ್ರಯತ್ನಿಸಿರುವುದು, ವ್ಯಕ್ತಿಯ ಬುದ್ಧಿಗಿಂತ ಕಾರ್ಯವೇ ಮುಖ್ಯವೆಂದು.
    ಆ ಸಂದರ್ಭಕ್ಕೆ ಸರಿಹೊಂದುವಂತೆ ಅವರು ಉಪಯೋಗಿಸಿರುವ ಉದಾಹರಣೆಗಿಂತ ಒಳ್ಳೆಯ ಉದಾಹರಣೆಯನ್ನು ದಯವಿಟ್ಟು ನೀಡಿ ನೋಡುವಾ.

    ಡಿ.ವಿ.ಜಿಯವರ ಈ ಕಗ್ಗವನ್ನೊಮ್ಮೆ ಓದಿಕೊಳ್ಳಿ:
    ರಾಮನಿರ್ದೊಂದು ರಾವಣನೊಬ್ಬನಿರ್ದನಲ
    ಭೀಮನಿರ್ದಂದು ದುಃಶಾಸನನೋರ್ವನ್
    ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು
    ರಾಮಭಟನಾಗು ನೀಂ ಮಂಕುತಿಮ್ಮ||

    ನಿಮ್ಮ ಮಾತಿನ ಪ್ರಕಾರ ಡಿವಿಜಿಯವರು ರಾಮನನ್ನು ರಾವಣನಿಗೆ ಹೋಲಿಸಿದ್ದಾರೆ ಅಲ್ಲವೆ?

    ಉತ್ತರ
    • ರಾಮ,ರಾವಣ ಎಲ್ಲಿ? ವಿವೇಕಾನಂದ ಮತ್ತು ಆ ಕಳ್ಳ ಎಲ್ಲಿ? ಇದೆಂತ ನರೇಂದ್ರ.ನೀವು ಈ ಪರಿ ಸಮರ್ಥನೆಗೆ ನಿಲ್ಲುತ್ತೀರ ಅಂದುಕೊಂಡಿರಲಿಲ್ಲ.
      ಗಡ್ಕರಿ ಅವರ ಮೊದಲ ಹೇಳಿಕೆಯಲ್ಲಿ ನೇರವಾಗಿಯೇ ಹೋಲಿಕೆ ಮಾಡಿದ್ದಾರಲ್ಲ “ಸೈಕಾಲಜಿ ಪ್ರಕಾರ, ವಿವೇಕಾನಂದ ಮತ್ತು ದಾವೂದ್ ಬುದ್ದಿ ಮತ್ತೆ ಸರಿಸಮವಾಗಿದೆ” ಅನ್ನುತ್ತಾರಲ್ಲ,ಈ ಮನುಷ್ಯನಿಗೇನು ತಲೆಕೆಟ್ಟಿದೆಯೇ? ಮತ್ತದಕ್ಕೆ ಸ್ಪಷ್ಟನೆ ಕೊಡುವಾಗ ಹೇಳಿದ್ದೇ ಬೇರೆ. ನನ್ನ ಸಿಟ್ಟು ಆ ಮೊದಲಿನ ಮಾತಿಗೆ.

      ಇನ್ನು ನಾನು ಇದನ್ನು ಹೇಗೆ ಹೇಳುತಿದ್ದೇ ಅಂತ ಕೇಳಿದಿರಿ.ಖಂಡಿತ ವಿವೇಕಾನಂದರನ್ನು ಕಳ್ಳನ ಜೊತೆ ಈಕ್ವೇಟ್ ಮಾಡುವಷ್ಟು ಮುಟ್ಟಾಳ ನಾನಲ್ಲ… ಗಡ್ಕರಿ ಸ್ಪಷ್ಟನೆ ನೀಡಲು ಹೇಳಿದ(ಬರೆದುಕೊಟ್ಟ?) ಮಾತಿದೆಯಲ್ಲ ಹಾಗೆಯೇ ಮೊದಲಿಗೆ ಹೇಳಿದ್ದರೆ ವಿವಾದವೆಲ್ಲಿರುತಿತ್ತು?

      ದಿನೇಶ್ ಅಮಿನ್ ಮಟ್ಟು ವಿವೇಕಾನಂದರ ಬಗ್ಗೆ ಬರೆದಾಗ ಉರಿದುಬಿದ್ದವರೆಲ್ಲ, ಇವತ್ತು ಗಡ್ಕರಿಯ ಪರ ನಿಂತಿದ್ದು ನೋಡಿ ಆಶ್ಚರ್ಯವಾಯಿತು…! ಎದುರಿಗಿರುವ ಜನರನ್ನು ನೋಡಿ ನನ್ನ ನಿಲುವುಗಳು ಬದಲಾಗುವುದಿಲ್ಲ.

      ಹಾಗೆಯೇ,ಈ ವಿಷಯದಲ್ಲಿ ಸಂಘದ ಸ್ವಾಮಿ ನಿಷ್ಠೆಯು ಸಾಬೀತಾಗಿದೆ.

      ಉತ್ತರ
  3. Shankar's avatar
    Shankar
    ನವೆಂ 7 2012

    ನರೇಂದ್ರರವರ ಮಾತಿನಂತೆ…

    ಶ್ರೀ ವಾಜಪೇಯಿ ಮತ್ತು ದಾವೂದ್ ಇಬ್ರಾಹಿಂ… ಈ ಇಬ್ಬರ ಬುದ್ದಿವಂತಿಕೆಯ ಮಟ್ಟ ಒಂದೇ..ಆದರೆ ಒಬ್ಬರು ಭಯೋತ್ಪಾದಕರು, ಇನ್ನೊಬ್ಬರ ಬುದ್ಧಿ ಸಂಘ ಕಟ್ಟಲು ಬಳಕೆಯಾಯಿತು ಎಂದಿದ್ದರೆ ಆಗುತ್ತಿತ್ತಲ್ಲವೋ? ಯಾಕೆ ವಿವೇಕಾನಂದರನ್ನು ಕರೆತಂದರು? ಹೇಗೆ ಗಡ್ಕರಿಯವರು ವಿವೇಕಾನಂದರ ಬುದ್ಧಿಮತ್ತೆಯನ್ನು ಅಳೆದರು. ಇಷ್ಟಕ್ಕೂ ವೀರ ಸನ್ಯಾಸಿಯಾಗಿ, ಧರ್ಮ ಸಂಸ್ಥಾಪನೆಗೆ ಮಾನವತೆಗೆ ಭಾರತೀಯತೆಗೆ ಬದುಕು ಮುಡುಪಿಟ್ಟಿದ್ದ ವಿವೇಕಾನಂದರು ಬುದ್ದಿವಂತರೋ ಅಲ್ಲವೋ ಯಾರು ಬಲ್ಲರು? ಅವರದು ಬುದ್ಧಿವಂತರಲ್ಲದೇ ಕೂಡಾ ಬದ್ಧತೆಯಿದ್ದವರಾಗಿರಬಹುದು. ಹಾಗೆ ಒಬ್ಬ ಬೀದಿ ಕಳ್ಳ, ಕೊರಮ, ಸಮಾಜಘಾತುಕ ಖಂಡಿತವಾಗಿ ಬುದ್ಧಿವಂತಿಕೆಯನ್ನು ಹೊಂದಿರಲೇ ಬೇಕಾಗುತ್ತದೆ! ಇಲ್ಲದಿದ್ದರೆ ಮೊದಲ ಅಪರಾಧಕ್ಕೇ ಜೈಲು ಪಾಲಾಗುತ್ತಾನೆ!
    “ಕಿತ್ತೂರು ರಾಣಿ ಚೆನ್ನಮ್ಮಳೂ, ಎಲ್‌ಟಿಟಿಇ ದನುವೂ ಬುದ್ಧಿವಂತಿಕೆಯಲ್ಲಿ ಸಮಾನರೇ ಇರಬಹುದು, ಆದರೆ ಅವಳು ದೇಶಕ್ಕಾಗಿ ಮಡಿದಳು ಇವಳು ಮತ್ತೊಂದು ಉದ್ದೇಶಕ್ಕೆ” ಎಂದು ಹೋಲಿಕೆ ಮಾಡಿದರೆ ಅದು ಸಹನೀಯವೇ? ಯಾರೇ ಆಗಲೀ, ಈ ವಿಷಯದಲ್ಲಿ ಸುಮ್ಮನೆ ಸಂಘವನ್ನು ಒಪ್ಪಿಟ್ಟುಕೊಳ್ಳಲು ಪ್ರಯತ್ನಮಾಡಿ ಮಾನಗೇಡಿಗಳಾಗದಿರುವುದು ಒಳ್ಳೆಯದು!

    ಉತ್ತರ
    • SSNK's avatar
      ನವೆಂ 7 2012

      > ಶ್ರೀ ವಾಜಪೇಯಿ ಮತ್ತು ದಾವೂದ್ ಇಬ್ರಾಹಿಂ… ಈ ಇಬ್ಬರ ಬುದ್ದಿವಂತಿಕೆಯ ಮಟ್ಟ ಒಂದೇ..ಆದರೆ ಒಬ್ಬರು
      > ಭಯೋತ್ಪಾದಕರು, ಇನ್ನೊಬ್ಬರ ಬುದ್ಧಿ ಸಂಘ ಕಟ್ಟಲು ಬಳಕೆಯಾಯಿತು ಎಂದಿದ್ದರೆ ಆಗುತ್ತಿತ್ತಲ್ಲವೋ?
      ಹಾಗೇ ಆಗಲಿ. ಅದರಲ್ಲಿ ತಪ್ಪೇನು?
      ಇಲ್ಲಿ ಮಾಡುತ್ತಿರುವುದು ವ್ಯಕ್ತಿಗಳ ಅಥವಾ ವ್ಯಕ್ತಿಗಳ ಬುದ್ಧಿಮಟ್ಟದ ಹೋಲಿಕೆಯಲ್ಲ ಎನ್ನುವುದು ಅರ್ಥವಾದರೆ ಸಮಸ್ಯೆಯಿಲ್ಲ.
      ಬುದ್ಧಿಯನ್ನು ಒಳ್ಳೆಯದಕ್ಕೆ ಉಪಯೋಗಿಸುವುದು ಮುಖ್ಯ ಎನ್ನುವುದನ್ನು ತಿಳಿಸಲು ಇಬ್ಬರು ವ್ಯಕ್ತಿಗಳನ್ನು ಹೆಸರಿಸಿದ್ದಾರೆ ಅಷ್ಟೇ.

      > ಎಂದು ಹೋಲಿಕೆ ಮಾಡಿದರೆ ಅದು ಸಹನೀಯವೇ?
      ಮುಖ್ಯ ವಿಷಯಕ್ಕೆ ಗಮನ ಕೊಡದೆ, ಉದಾಹರಣೆಗೆ ಕೊಟ್ಟಿರುವ ವ್ಯಕ್ತಿಗಳ ಕುರಿತಾಗಿಯೇ ಚರ್ಚಿಸುತ್ತಿರುವುದು ನೋಡಿದರೆ, ತೆಂಗಿನಕಾಯಿಗಿಂತ ಕರಟಕ್ಕೇ ಹೆಚ್ಚು ಮಹತ್ವ ಬಂದಂತೆ ಕಾಣುತ್ತಿದೆ.

      ಉತ್ತರ
      • Balachandra Bhat's avatar
        ನವೆಂ 7 2012

        ಕುಮಾರ್,
        ವಿವೇಕಾನಂದರ ಮತ್ತು ದಾವೂದ್ ರ ಬುದ್ಧಿಮತ್ತೆಯ ಅಂಕಿ ಅಂಶ ಗಡ್ಕರಿಗೆ ಎಲ್ಲಿಂದ ಸಿಕ್ಕಿತು? ಒಂದು ವೇಳೆ ಅಂಕಿ ಅಂಶಗಳು ಲಭ್ಯವಿದ್ದಿದ್ದರೆ, ಅದು ಸರಿಯಾಗಿದ್ದರೆ ಅವರ ಮಾತನ್ನು ಒಪ್ಪಿಕೊಳ್ಳಲೇ ಬೇಕಾಗಿತ್ತು. ಸುಮ್ಮನೆ ಉದಾಹರಿಸಲು ಆದರೂ ತಕ್ಕ ಮಟ್ಟಿಗೆ objective ಆಗಿರಬೇಕಲ್ಲವೇ?

        ಉತ್ತರ
        • SSNK's avatar
          ನವೆಂ 7 2012

          > ವಿವೇಕಾನಂದರ ಮತ್ತು ದಾವೂದ್ ರ ಬುದ್ಧಿಮತ್ತೆಯ ಅಂಕಿ ಅಂಶ ಗಡ್ಕರಿಗೆ ಎಲ್ಲಿಂದ ಸಿಕ್ಕಿತು?
          ಸ್ವಾಮಿ, ಇದಕ್ಕೆ ವಿತ್ತಂಡವಾದ ಎಂದು ಹೇಳುತ್ತಾರೆ.

          ಉತ್ತರ
          • Balachandra Bhat's avatar
            ನವೆಂ 9 2012

            ವಿತಂಡವಾದ ಯಾವುದು ಸ್ವಾಮಿ? ಉದಾರನೆಗೊಸ್ಕರವಾದರೂ ಸರಿಯಾದ ಉದಾರಣೆ ಬಳಸಬೇಕಲ್ಲವೇ? ಇಲ್ಲದಿದ್ದರೆ ಗಡ್ಕರಿ ಮತ್ತು ವಿವೇಕಾನಂದರನ್ನು ತಮ್ಮ ಉದಾರಣೆಯಲ್ಲಿ random ಆಗಿ ಬಳಸಿದ್ದರೆಂದರೆ ಅವರ ನಿರ್ಲಕ್ಶತನ ಸಾಭೀತಾಗುತ್ತದೆ…

            ಉತ್ತರ
  4. Shankar's avatar
    Shankar
    ನವೆಂ 8 2012

    ನನಗನ್ನಿಸೋದು ನರೇಂದ್ರರವರದ್ದು ವಿತಂಡವಾದ,
    ಕೊಚ್ಚೆಯಲ್ಲಿರುವ ಹಂದಿ ಮತ್ತು ನಿತಿನ್ ಗಡಕರಿ – ಇಬ್ಬರಿಗೂ ಜೀವವಿದೆ. ಆದರೆ ಅವರು ತಿನ್ನೋದೆ ಬೇರೆ, ಇದು ತಿನ್ನೋದೆ ಬೇರೆ ಎನ್ನುವ ಅಸಂಬದ್ಧವಾದ ಹೋಲಿಕೆಗೂ ದಾವೂದ್ ಮತ್ತು ಸ್ವಾಮೀಜಿಯವರ ನಡುವಿನ ಹೋಲಿಕೆಗೂ ವ್ಯತ್ಯಾಸವಿಲ್ಲ. ಇಲ್ಲಿ ಹೋಲಿಕೆ ಮುಖ್ಯ, ಯಾವುದನ್ನು ಹೋಲಿಸಿದ್ದೇವೆ ಅನ್ನುವುದಲ್ಲಾ ಎನ್ನುವುದು ಪಕ್ಕಾ ವಿತಂಡವಾದ!

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments