ವಿಷಯದ ವಿವರಗಳಿಗೆ ದಾಟಿರಿ

Archive for

2
ಮೇ

ದೇವನೂರು ಮಹಾದೇವರ ಪ್ರತಿಕ್ರಿಯೆ ಮತ್ತು ನನ್ನ ಗೊಂದಲಗಳು

-ಡಾ.ಸಂತೋಷ್ ಕುಮಾರ‍್ ಪಿ.ಕೆ

ಪ್ರಜಾವಾಣಿಯಲ್ಲಿ ದೇವನೂರು ಮಹಾದೇವ ರವರು ಬರೆದ ಲೇಖನಕ್ಕೆ ಪ್ರತಿಕ್ರಿಯೆ.

Vachana Charcheನನ್ನ ವಿದ್ಯಾರ್ಥಿ ಜೀವನದಿಂದಲೂ ದೇವನೂರು ಮಹಾದೇವ ಎಂಬ ಆದರ್ಶವ್ಯಕ್ತಿಯ ಕುರಿತು ಕೇಳಿದ್ದೆ, ಹಾಗೂ ಕೆಲವೊಮ್ಮೆ ನೋಡುವ ಭಾಗ್ಯವೂ ಒದಗಿತ್ತು. ಕನ್ನಡ ಬಂಡಾಯ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಶಾಂತಿ ಮತ್ತು ಅಹಿಂಸಾ ಮಾರ್ಗವಾಗಿ ಹೋರಾಡುತ್ತಿರುವುದು ಅವರ ವ್ಯಕ್ತಿತ್ವದ ಆಕರ್ಷಣೆಯಾಗಿದೆ. ಇದಕ್ಕೆ ಮಾರುಹೋದ ಹಲವಾರು ಯುವಸಮುದಾಯಗಳು ಅವರನ್ನು “ಆಧುನಿಕ ಸಂತ” ಎಂಬಂತೆ ಬಿಂಬಿಸುತ್ತವೆ. ಅಷ್ಟು ಶಾಂತಚಿತ್ತ ಮತ್ತು ಧೀಮಂತ ಹೋರಾಟಗಾರೆಂದೆ ಖ್ಯಾತಿ ಪಡೆದ ದೇವನೂರು ರವರು ಏನೇ ಬರೆದರೂ ಅದನ್ನು ಓದಲು ನನ್ನನ್ನೂ ಸೇರಿ ಅಪಾರ ಅಭಿಮಾನಿಗಳ ಬಳಗವೇ ಇದೆ. ವಚನ ಕುರಿತ ಚರ್ಚೆಗೆ ಅವರ ಪ್ರತಿಕ್ರಿಯೆಯನ್ನು ಓದಿದ ಮೇಲೆ ಅವರ ಮೇಲಿದ್ದ ನನ್ನ ಗೌರವ, ನಂಬಿಕೆಗಳು ಆ ಲೇಖನವನ್ನು ಅವರೇ ಬರೆದಿದ್ದಾ ಎಂಬ ಅನುಮಾನವನ್ನು ಮೂಢಿಸಿದೆ. ಅದೇನೇ ಇದ್ದರೂ ದೇವನೂರು ಮಹಾದೇವ ರವರು ಕೆಲವು ತಪ್ಪುನಂಬಿಕೆಗಳ ಹಿನ್ನೆಲೆಯಲ್ಲಿ ಈ ಲೇಖನವನ್ನು ಬರೆದಿದ್ದಾರೆ, ಅವುಗಳನ್ನು ನನ್ನ ಓದಿನ ಮಿತಿಯಲ್ಲಿ ಚರ್ಚಿಸಲು ಬಯಸುತ್ತೇನೆ.

೧. ಲೇಖನದ ಪ್ರಾರಂಭದಲ್ಲಿ  ಒಂದು ಉದಾಹರಣೆಯನ್ನು ನೀಡುವ ಮೂಲಕ ಅಂಕಿ ಸಂಖ್ಯೆಯ ಆಧಾರವಾದ ವಿವರಣೆಯನ್ನು ವಿರೋಧಿಸಿದ್ದಾರೆ: ಅದೆಂದರೆ “ತಾಯಿಯನ್ನು ’ತಾಯಿ” ಎಂದು ಇಷ್ಟು ಸಾರಿ (ಅಂಕಿ ಸಂಖ್ಯೆಗಳ ಲೆಕ್ಕದಲ್ಲಿ) ಕರೆಯದಿದ್ದರೆ ಬಂಜೆ ಎಂದು ಕರೆದು ದಿಗ್ವಿಜಯ ಸಾಧಿಸಿಬಿಡುತ್ತಾರೆ”. ಇಲ್ಲಿ ತೆಗೆದುಕೊಂಡಿರುವ ಉದಾಹರಣೆಯನ್ನು ಮತ್ತೊಂದು ರೀತಿಯಲ್ಲಿ ಇಡಬಹುದು, ಒಲ್ಲೊಬ್ಬರು ಮಹಿಳೆ ಇದ್ದಾರೆ ಹಾಗೂ ಮಗನ ವಯಸ್ಸಿನ ವ್ಯಕ್ತಿಯೊಬ್ಬ ಇದ್ದಾನೆ ಎಂದಿಟ್ಟುಕೊಳ್ಳಿ. ಆಕೆಗೆ ಅಪಾರ ಆಸ್ತಿ ಇದ್ದು ಬೇರೆ ಯಾರೂ ವಾರಸ್ದಾರರು ಇಲ್ಲ ಎಂದಿಟ್ಟುಕೊಳ್ಳುವ, ಅವಳ ಆಸ್ತಿಯನ್ನು ಕಬಳಿಸಲು ಯಾರೋ ಆಕೆಯನ್ನು ಅಮ್ಮ ಅಮ್ಮ ಎಂದು ನೂರು ಸಾವಿರ ಲಕ್ಷ ಬಾರಿ ಕರೆಯುತ್ತಾರೆ ಎಂದಾದರೆ, ಅವರ ನಡುವೆ ಇರುವುದು ತಾಯಿ ಮಕ್ಕಳ ಸಂಬಂಧವೆ? ಅಥವಾ ಬೇರೆ ತರಹದ ಸಂಬಂಧವೆ? ಇಲ್ಲಿ ಆಸ್ತಿಗೋಸ್ಕರ ಆತ ಎಷ್ಟು ಬಾರಿ ತಾಯಿ ಎಂದು ಕರೆದರೂ ಆಕೆ ಆತನಿಗೆ ತಾಯಿಯಾಗಲು ಸಾಧ್ಯವಿಲ್ಲ, ಇದನ್ನು ಪ್ರಮಾಣೀಕರಿಸುವುದು ಹೇಗೆ? ಹೇಗೆಂದರೆ ಅವರ ನಡುವೆ ನಿಜವಾಗಿಯೂ ತಾಯಿ-ಮಗನ ಸಂಬಂಧವಿದೆಯೇ? ಎಂದು ಪರೀಕ್ಷೆ ಮಾಡುವುದು. ಆ ಪರೀಕ್ಷೆಯನ್ನೇ ಮಾಡದೆ ಕೆಲವು ಬಾರಿ ಆತ ಆಕೆಯನ್ನು ತಾಯಿ ಎಂದು ಕರೆದಿದ್ದಾನೆ ಆದ್ದರಿಂದ ಆಕೆ ಆತನ ತಾಯಿಯೇ ಎಂದು ನಿರ್ಣಯಕ್ಕೆ ಬರುವುದು ತೀರಾ ಅವಾಸ್ತವಿಕವಾಗುತ್ತದೆ. ಅಂತೆಯೇ ಜಾತಿ, ಕುಲ ಎಂಬ ಪದಗಳು ವಚನಗಳಲ್ಲಿ ಇದ್ದ ಮಾತ್ರಕ್ಕೆ ಅವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡದೆ ಜಾತಿ ವಿರೋಧ ಎಂದು ನಿರ್ಣಯಕ್ಕೆ ಬರುವುದು ಅವಸರದ ತೀರ್ಮಾನವಾಗುತ್ತದೆ. ಹಾಗೆ ನೋಡಿದರೆ  ಅಂಕಿ ಅಂಶಗಳ ಮೂಲಕ ವಚನಗಳನ್ನು ಅರ್ಥೈಸುವುದು ಮುಖ್ಯವಾದ ಗುರಿ ನಮ್ಮದಲ್ಲ ಹಾಗೂ ಅದರ ಆಧಾರದ ಮೇಲೆಯೇ ವಚನಗಳ ಕುರಿತ ವಾದವೂ ಬೆಳೆದಿಲ್ಲ, ಬದಲಿಗೆ ವಚನಗಳನ್ನು ಸಮಗ್ರವಾಗಿ ನೋಡಿದಾಗ ಹೇಗೆ ಕಾಣುತ್ತದೆ ಎಂಬುದನ್ನು ವಾದಿಸುವ ಸಂದರ್ಭದಲ್ಲಿ ನಗಣ್ಯವಾಗಿ ಅಥವಾ ಅಷ್ಟೇನೂ ಪ್ರಮುಖವಲ್ಲದ ವಿಷಯ ಅದಾಗಿದೆ.

ಮತ್ತಷ್ಟು ಓದು »