ಈಶ್ವರಪ್ಪ ಅವರ ಎದುರು ನಿಂತು ಗೆದ್ದ ಕೆ.ಬಿ.ಪ್ರಸನ್ನಕುಮಾರ್ ಅವರ ಕುರಿತು
– ಪಿ.ಬಿಂದುಮಾಧವಿ, ಹೈದರಾಬಾದ್
ನಮ್ಮಲ್ಲಿ ಅನೇಕರು, ಇಂದಿನ ಸರ್ಕಾರ ಸರಿಯಾಗಿಲ್ಲ, ಎಲ್ಲೆಲ್ಲೂ ಭ್ರಷ್ಟಾಚಾರ, ಚುನಾವಣೆಗೆ ನಿಂತ ಯಾವ ಅಭ್ಯರ್ಥಿಯೂ ಪ್ರಾಮಾಣಿಕರಲ್ಲ, ಹಾಗಾಗಿ ನಾವು ಮತ ಏಕೆ ಚಲಾಯಿಸಬೇಕು ಎಂಬ ಜಿಜ್ನಾಸೆಯಲ್ಲೇ ಅನೇಕ ಸಂವತ್ಸರಗಳನ್ನು ಕಳೆಯುತ್ತೇವೆ. ಸರಿಯಾದ ಅಭ್ಯರ್ಥಿಯಿಲ್ಲ ಎಂದಾದರೆ ನಾನೇ ಏಕೆ ಚುನಾವಣೆಗೆ ನಿಲ್ಲಬಾರದು ಎಂದು ಎಷ್ಟು ಮಂದಿ ಧೈರ್ಯ ಮಾಡುತ್ತಾರೆ ಹೇಳಿ? ನಮಗೆ ನಾವೇ ಆ ಪ್ರಶ್ನೆಯನ್ನು ಮಾಡಿಕೊಂಡರೆ, ನಾವು ಕೊಟ್ಟಿಕೊಳ್ಳುವ ಉತ್ತರ, ಅಯ್ಯೋ ಬಿಡು, ನಮಗೆ ರಾಜಕೀಯದಲ್ಲಿ ಹಿಂದಿಲ್ಲ ಮುಂದಿಲ್ಲ, ಅದರ ಗಾಳಿ ಗಂಧದ ಪರಿಚಯವಿಲ್ಲ, ನಾನು ಹೋಗಿ ರಾಜಕೀಯದಲ್ಲಿ ಏಗಲಾರೆ ಎಂದುಕೊಳ್ಳುತ್ತೇವೆ. ಆದರೆ ಈ ರೀತಿ ಯಾವುದೇ ಹಮ್ಮು ಬಿಮ್ಮು ಇಲ್ಲದೇ ರಾಜಕೀಯಕ್ಕೆ ಧುಮುಕಿ, ಪ್ರಾಮಾಣಿಕವಾಗಿ ಜನಸೇವೆ ಮಾಡಿ ಈ ಬಾರಿಯ ಚುನಾವಣೆಯಲ್ಲಿ ಈಶ್ವರಪ್ಪ ಅವರ ಎದುರಿಗೆ ನಿಂತು ಗೆದ್ದ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್.
ಇವರ ತಂದೆ ಕೃಷ್ಣಮೂರ್ತಿ, ತಾಯಿ ಭಾಗೀರಥಿ ಬಾಯಿ ಇಬ್ಬರೂ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ಇವರಿಗೆ ಯಾವುದೇ ರೀತಿಯ ರಾಜಕೀಯ ಹಿನ್ನೆಲೆಯಿಲ್ಲ. ಬಂಧು ಬಾಂಧವರಲ್ಲಿ ಯಾರೂ ರಾಜಕೀಯ ರಂಗ ಪ್ರವೇಶ ಮಾಡಿಲ್ಲ. ಆದರೂ ಇವರು ರಾಜಕೀಯಕ್ಕೆ ಧುಮುಕಿದ್ದು ಹೇಗೆ?
ಶಿವಮೊಗ್ಗದ ಹಳೇ ತೀರ್ಥಹಳ್ಳಿ ರಸ್ತೆಯ ವಟಾರವೊಂದರಲ್ಲಿ ವಾಸಿಸುತ್ತಿದ್ದ ಇವರು ಚಿಕ್ಕಂದಿನಲ್ಲೇ ಪಿತೃವಿಯೋಗವನ್ನು ಎದುರಿಸಬೇಕಾಯಿತು. ಕುಟುಂಬಕ್ಕೆ ಆಧಾರವಾಗಲಿ ಎಂದು ಅವರು ಆಗಿನಿಂದಲೇ ಮನೆಮನೆಗೆ ದಿನಪತ್ರಿಕೆ ಹಂಚುವುದು ಇತ್ಯಾದಿ ಕೆಲಸಗಳನ್ನು ಮಾಡತೊಡಗಿದರು. ಇವರ ದೊಡ್ದಮ್ಮ ಶ್ರೀಮತಿ ಮಧುರಾಬಾಯಿ ಇವರಿಗೆ ಸ್ನಾನ ಸಂಧ್ಯಾವಂದನೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸಲು ಹೇಳಿದ್ದರು. ಹಾಗಾಗಿ ಮುಂಜಾನೆ ಏಳುವ, ಸ್ನಾನ ಸಂಧ್ಯಾವಂದನೆಗಳನ್ನು ಮಾಡುವ, ದಿನಪತ್ರಿಕೆ ಹಂಚಲು ಸೂರ್ಯೋದಯಕ್ಕೂ ಮುನ್ನವೇ ಏಳುವ ಅಭ್ಯಾಸಗಳನ್ನು ಆಗಿನಿಂದಲೇ ಮೈಗೂಡಿಸಿಕೊಂಡವರು ಪ್ರಸನ್ನಕುಮಾರ್. OTroad ನಲ್ಲಿದ್ದ ಇವರ ಸಮವಯಸ್ಕರೆಲ್ಲಾ ಇವರ ಗೆಳೆಯರೇ. ಆಗಿನಿಂದಲೇ ಯಾವುದೇ ಜಾತಿ ಧರ್ಮದ ಭೇಧವಿಲ್ಲದೇ ಎಲ್ಲಾ ಧರ್ಮ, ಹಾಗೂ ಜಾತಿಯ ಹುಡುಗರೂ ಇವರ ಮಿತ್ರವೃಂದದಲ್ಲಿದ್ದರು. ನಾನೂ ಸಹ ಇವರ ವಟಾರದಲ್ಲೇ ಇದ್ದವಳು. ಬೇಸಿಗೆ ರಜದಲ್ಲಿ ಮಧ್ಯರಾತ್ರಿಯವರೆಗೂ ಐಸ್ ಪೈಸ್ ಆಡುತ್ತಿದ್ದುದು, ನಾನು ಚಿಕ್ಕವಳಾಗಿದ್ದರಿಂದ ನನ್ನನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಪರಿಗಣಿಸುತ್ತಿದ್ದುದು ನನಗೆ ಇಂದಿಗೂ ನಿನ್ನೆ ಮೊನ್ನೆಯ ವಿಷಯದಂತೆ ನೆನಪಿದೆ!