ವಿಷಯದ ವಿವರಗಳಿಗೆ ದಾಟಿರಿ

Archive for

17
ಮೇ

ಸಾಮಾಜಿಕ ಸಂಶೋಧನೆ ಯಾಕಾಗಿ?

– ಪ್ರೊ.ಜೆ.ಎಸ್.ಸದಾನಂದ

Vachana Charche{ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನಕ್ಕೆ ಪ್ರತಿಕ್ರಿಯೆ, ಈ ಲೇಖನವನ್ನು ಪ್ರಜಾವಾಣಿಗೆ ಬಹಳ ಹಿಂದೆಯೇ ಕಳುಹಿಸಿದ್ದು ಪ್ರಜಾವಾಣಿಯಲ್ಲಿ ಮಾತ್ರ ಇನ್ನೂ ಪ್ರಕಟಿಸಲಾಗಿಲ್ಲ}

ದೇವನೂರು ಮಹಾದೇವ ಅವರ ಲೇಖನದಲ್ಲಿ (ಪ್ರಜಾವಾಣಿ ದಿನಾಂಕ: 29/4/2013) ನಮಗೆ ಕಾಣುವುದು ನಮ್ಮ ಸಂಶೋಧನೆಯ ಬಗ್ಗೆ ಇರುವ ಕೋಪ, ಅಸಹನೆ ಹಾಗೂ ತಿರಸ್ಕಾರ. ಇದಕ್ಕೆ ಕಾರಣವೇನು? ಅವರನ್ನು ಸ್ವಲ್ಪಮಟ್ಟಿಗೆ ಬಲ್ಲ ನನಗೆ ಅನಿಸುವುದಿಷ್ಟು. ಇಂತಹ ಸಿಟ್ಟು ಅಸಹನೆಗೆ ಮೂಲ ಕಾರಣ ಸಮಾಜದಲ್ಲಿರುವ ಅನ್ಯಾಯ, ಶೋಷಣೆ ಮುಂತಾದ ನಕಾರಾತ್ಮಕ ಅಂಶಗಳನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಗುರಿಯ ಬಗ್ಗೆ ಅವರಿಗಿರುವ ಬದ್ಧತೆ ಹಾಗೂ ಅಂತಹ ಅನ್ಯಾಯ, ಶೋಷಣೆಗಳಿಗೆ ಮೂಲ ಕಾರಣ ಯಾವುದು ಎನ್ನುವುದು ಎನ್ನುವುದರ ಕುರಿತು ಅವರಿಗಿರುವ ದೃಢ ನಂಬಿಕೆ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯದ ಹೊರತು ನಮ್ಮ ಸಮಾಜದ ಅನ್ಯಾಯಗಳನ್ನು ಸರಿಪಡಿಸಲಾಗದು ಎನ್ನುವುದರ ಬಗ್ಗೆ ಅವರಿಗೆ ಯಾವ ಸಂಶಯವೂ ಇಲ್ಲ. ಅವರು ಮುಟ್ಟಬೇಕಾದ ಗುರಿ ಹಾಗೂ ಆ ನಿಟ್ಟಿನಲ್ಲಿ ಅವರು ಸಾಗುತ್ತಿರುವ ಮಾರ್ಗದ ನಡುವೆ ಯಾವ ವ್ಯತ್ಯಾಸವೂ ಅವರಿಗೆ ಕಾಣಿಸುವುದಿಲ್ಲ. ಹಾಗಾಗಿ ಸಾಗುತ್ತಿರುವ ಮಾರ್ಗದ ಕುರಿತು ಎತ್ತಲಾಗುವ ಪ್ರಶ್ನೆಗಳು ಮುಟ್ಟಬೇಕಾದ ಗುರಿಯನ್ನೇ ಪ್ರಶ್ನಾರ್ಹಗೊಳಿಸುವಂತೆ ಅಥವಾ ಅಂತಹ ಗುರಿಗಳಿಂದ ನಮ್ಮನ್ನು ವಿಮುಖಗೊಳಿಸುವ ಹುನ್ನಾರದಂತೆ ಅವರಿಗನಿಸುತ್ತಿದೆ.

ಅವರ ಈ ಅನಿಸಿಕೆ ಎಷ್ಟರಮಟ್ಟಿಗೆ ಸರಿ? ಈ ಪ್ರಶ್ನೆಗೆ ಉತ್ತರಿಸಬೇಕಾದರೆ ಬಾಲುರವರು ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ ಎನ್ನುವ ಪ್ರಾಕ್ಕಲ್ಪನೆಯನ್ನು (ಇದೊಂದು ಸಂಶೋಧನೆಯ ಮುಖಾಂತರ ಸಾಬೀತಾಗಬೇಕಾದ ಪ್ರಾಕ್ಕಲ್ಪನೆ ಮಾತ್ರ) ಏಕೆ ಮುಂದಿಡುತ್ತಾರೆ ಎನ್ನುವುದರ ಹಿನ್ನೆಲೆಯನ್ನು ನಾವು ನೋಡಬೇಕು. ಭಾರತದಲ್ಲಿ ಜಾತಿವ್ಯವಸ್ಥೆಯ ಸ್ವರೂಪ ಹಾಗು ಅದರ ಪರಿಣಾಮಗಳ ಕುರಿತು ಈಗಾಗಲೇ ಅಸಂಖ್ಯಾತ ಸಂಶೋಧನಾ ಗ್ರಂಥಗಳು ಹೊರಬಂದಿವೆ. ಜಾತಿವ್ಯವಸ್ಥೆಯ ಸ್ವರೂಪದ ಬಗ್ಗೆ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವನ್ನು ನಾವು ಕಾಣುವುದಿಲ್ಲ. ಅದಕ್ಕೆ ತದ್ವಿರುದ್ದವಾಗಿ ಭಾರತದಲ್ಲಿ ಎಲ್ಲಡೆ ಕಂಡುಬರುವ ಜಾತಿಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವಿಲ್ಲ ಎನ್ನುವುದುನ್ನು ಎಲ್ಲಾ ವಿದ್ವಾಂಸರೂ ಹೆಚ್ಚು ಕಡಿಮೆ ಒಪ್ಪುತ್ತಾರೆ. ಬಾಲು ಅವರ ಪ್ರಕಾರ ಇದ್ಕಕೆ ಮುಖ್ಯ ಕಾರಣ ಈ ಎಲ್ಲಾ ಸಂಶೋಧನೆಗಳು ಜಾತಿವ್ಯವಸ್ಥೆ ಎನ್ನುವುದು ಹಿಂದೂ ರಿಲಿಜನ್ನ ಪ್ರಧಾನ ಲಕ್ಷಣ ಎನ್ನುವ ಇದುವರೆಗೆ ಯಾವುದೇ ಸಂಶೋಧನೆಯಿಂದ ಸಾಬೀತಾಗದ ನಂಬಿಕೆಯನ್ನು ಆಧರಿಸಿವೆ. ಹಿಂದೂ ರಿಲಿಜನ್ ಎನ್ನುವುದು ಅಸ್ತಿತ್ವದಲ್ಲಿ ಇದೆ ಮತ್ತು ಭಾರತದಲ್ಲಿರುವ ಎಲ್ಲಾ ಜಾತಿಗಳು ಅದರ ನ್ಯೆತಿಕ ನಿರ್ಬಂಧದಲ್ಲಿ ಬಂದಿಸಲ್ಪಟ್ಟಿವೆ ಎನ್ನುವುದು ಒಂದು ಸಾಮಾನ್ಯ ನಂಬಿಕೆಯಾಗಿ ಮುಂದುವರೆದುಕೊಂಡು ಬಂದಿದೆಯೇ ಹೊರತು ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳನ್ನು ಯಾರಿಗೂ ಕೊಡಲು ಸಾಧ್ಯವಾಗಿಲ್ಲ.

ಮತ್ತಷ್ಟು ಓದು »

17
ಮೇ

ಹೇಗೆ ಹೇಳಲಿ? ಏನು ಹೇಳಲಿ?

– ಪ್ರೊ.ರಾಜಾರಾಮ ಹೆಗಡೆ
Vachana Charche ದೇವನೂರು ಮಹಾದೇವರವರ ಲೇಖನಕ್ಕೆ ಪ್ರತಿಕ್ರಿಯೆ {ಪ್ರಜಾವಾಣಿಯಲ್ಲಿ ಅಪ್ರಕಟಿತ ಲೇಖನ}

ದೇವನೂರು ಮಹಾದೇವರ ಪ್ರತಿಕ್ರಿಯೆಯನ್ನು ಓದಿದ ನಂತರ, ಅವರು ಏನನ್ನು ಹೇಗೆ ಹೇಳಿದ್ದಾರೆ ಎಂಬುದನ್ನು ಕಂಡ ನಂತರ ಅವರನ್ನು ಕಾಡಿದ ಆ “ಹೇಗೆ ಹೇಳಲಿ? ಏನು ಹೇಳಲಿ?” ಎಂಬ ಪ್ರಶ್ನೆ ಈಗ ಅವರದಕ್ಕಿಂತ ನನ್ನದೇ ಆಗಿದೆ. ಅವರು ನಮ್ಮ ಕುರಿತು ಏಕೆ ಇಂಥ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟ. ಅವರಿಗೆ ಸಿಟ್ಟಿದೆ. ದೇವನೂರರು ಒಂದು ಸಮೂಹದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೀವನ ಈ ಕುರಿತಾಗಿಯೇ ಒಂದು ಹೋರಾಟ ಎಂದರೂ ತಪ್ಪಿಲ್ಲ. ಇಷ್ಟನ್ನು ಖಚಿತವಾಗಿ ಹೇಳಬಲ್ಲಷ್ಟು ನಾನು ಅವರನ್ನು ಬಲ್ಲೆ. ಹಾಗೂ ಅದನ್ನು ಗಮನಿಸುವುದು ಮುಂದಿನ ಸಂವಾದಕ್ಕೆ ನಿರ್ಣಾಯಕ ಎಂಬುದಾಗಿ ನನಗನಿಸುತ್ತದೆ. ಏಕೆಂದರೆ ಯಾರದೇ ಪ್ರಾಮಾಣಿಕತೆಯ ಮೇಲೆ ಅಪನಂಬಿಕೆಯನ್ನಿಟ್ಟು ಬೌದ್ಧಿಕ ಚರ್ಚೆಯನ್ನು ಪ್ರಾರಂಭಿಸುವುದರಿಂದ ಚರ್ಚಿಸತಕ್ಕ ವಿಷಯಕ್ಕೆ ನ್ಯಾಯ ಸಲ್ಲುವುದಿಲ್ಲ.

ನಮ್ಮ ದುರುದ್ದೇಶದ ಕುರಿತು ಅವರು ಕಟ್ಟಿಕೊಂಡಿರುವ ಚಿತ್ರಗಳನ್ನು ಅವರ ಲೇಖನದ ಮೂಲಕ ಗ್ರಹಿಸುತ್ತ ಹೋದಾಗ ನಮ್ಮ ಕುರಿತು ಯಾವ ರೀತಿಯ ಚಿತ್ರಣವು ಅವರ ವಲಯದಲ್ಲಿ ಗಟ್ಟಿಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ದೃಷ್ಟಾಂತ ಸಿಕ್ಕಂತಾಯಿತು. ಹಾಗಂತ ಇದೇನೂ ನನಗೆ ಆಘಾತ ನೀಡಲಿಲ್ಲ. ಈ ಥೆರಪಿಯನ್ನು ನನಗೆ ಹಾಗೂ ನನ್ನ ಗುಂಪಿಗೆ ನಾವು ಬಾಲು ಜೊತೆ ಸೇರಿ ಸಂಶೋಧನೆ ಪ್ರಾರಂಭಿಸಿದಾಗಿನಿಂದಲೂ ನೀಡಲಾಗುತ್ತಿದೆ. ಸಂಶೋಧನೆ ಮಾಡುವುದು ಕೇವಲ ಬೌದ್ಧಿಕ ಪ್ರಶ್ನೆಯೊಂದೇ ಅಲ್ಲ, ಅದು ಪ್ರವಾಹದ ವಿರುದ್ಧ ಈಜುವ ಕೆಲಸ ಕೂಡ ಆಗಿದೆ ಎಂಬುದು ನಮಗೆ ಈಗಾಗಲೇ ಅನುಭವ ವೇದ್ಯವಾಗಿದೆ. ನಮ್ಮ ದುರುದ್ದೇಶದ ಕುರಿತು ಹುಟ್ಟುತ್ತಿರುವ ಕಥೆ ಸಾಕಷ್ಟು ಬೇರುಬಿಡುತ್ತಿದೆ ಎಂಬುದನ್ನು ಪ್ರಜಾವಾಣಿ ಪ್ರತಿಕ್ರಿಯೆಗಳಿಂದ ಮನಗಾಣುತ್ತಿದ್ದೇನೆ. ದೇವನೂರರೇ ಕೊಟ್ಟ ಆಡಿನ ಕಥೆಯಂತೆ ಹತ್ತಾರು ಮಂದಿ ಒಂದು ಸುಳ್ಳನ್ನು ಹೇಳುತ್ತಿದ್ದರೆ, ಹಾಗೂ ನಾವು ಸುಮ್ಮನೇ ಇದ್ದರೆ ಜನ ಅದನ್ನೇ ಸತ್ಯವೆಂದು ನಂಬಿಬಿಡುವ ಸಾಧ್ಯತೆಯಿದೆ. ಒಂದೊಮ್ಮೆ ನಮ್ಮ ಸಂಶೋಧನೆಯು ದೇವನೂರರು ಅಂದುಕೊಂಡಂತೇ ಯಾವುದೇ ಮಾನವ ಸಮುದಾಯದ ಅಹಿತವನ್ನು ಬಯಸುವ ದುರುದ್ದೇಶವನ್ನು ಹೊಂದಿಲ್ಲ ಅಂತಾದರೆ, ಈ ನಿಟ್ಟಿನಲ್ಲಿ ಈಗಿರುವ ಜ್ಞಾನದ ಮಿತಿಗಳನ್ನು ಕಳೆದು ಇನ್ನೂ ಹೆಚ್ಚು ಸ್ಪಷ್ಟತೆಯನ್ನು, ನ್ಯಾಯವನ್ನು ಸಾಧಿಸುವುದು ಅಂತಾದರೆ, ದೇವನೂರರ ನೋವಿಗೆ ಇರಬಹುದಾದ ಕಾರಣಗಳೇ ಮಾಯವಾಗುತ್ತವೆ. ಮುಂದೆ ಅವರ ಜೊತೆ ಅರ್ಥಪೂರ್ಣ ಸಂವಾದ ಸಾಧ್ಯವಾಗಬಹುದು ಎಂಬ ಆಶಯದಿಂದ ಈ ಲೇಖನ.

ಮತ್ತಷ್ಟು ಓದು »