ಸಾವರ್ಕರ್ ಮತ್ತು ನೆಹರೂ : ಹೋಲಿಸಬಾರದ ವ್ಯಕ್ತಿಗಳು
– ಚಕ್ರವರ್ತಿ ಸೂಲಿಬೆಲೆ
(ಮೇ ೨೮) ಸಾವರ್ಕರ್ ಜನ್ಮ ದಿನ. ಈ ಸಂಧರ್ಭದಲ್ಲಿ ಭಾರತದ ದಿಕ್ಕು ಬದಲಿಸಿದ ಇಬ್ಬರು ವ್ಯಕ್ತಿಗಳ ತುಲನಾತ್ಮಕ ಬರಹ ಇಲ್ಲಿದೆ. ಯಾರು ಯಾವ ಬಗೆಯಲ್ಲಿ ದಿಕ್ಕು ಬದಲಿಸಿದರು ಅಥವಾ ತಪ್ಪಿಸಿದರು ಎನ್ನುವುದು ಓದುಗರ ವಿವೇಚನೆಗೆ ಬಿಟ್ಟಿದ್ದು…
ಇತಿಹಾಸದ ಪುಟಗಳು ಅದೆಷ್ಟು ಬೇಗ ಹಿಂದೆ ಹಿಂದೆ ಹೋಗಿಬಿಡುತ್ತವಲ್ಲ! ಒಂದು ಪುಟವನ್ನು ತಿರುವಿಹಾಕಿದಂತೆ ಆ ಪುಟದಲ್ಲಿರುವ ಸಂಗತಿಗಳನ್ನೆಲ್ಲಾ ಮರೆತುಬಿಟ್ಟರೆ ಮುಗಿದೇಹೋಯಿತು. ನೆನಪಿಟ್ಟುಕೊಂಡು ಮುಂದಡಿ ಇಡುವವ ಮಾತ್ರ ವಿಜಯಿಯಾದಾನು. ನಮ್ಮ ಇತಿಹಾಸ ಒಂಥರಾ ಸೆಮಿಸ್ಟರ್ ಪದ್ಧತಿಯ ಶಿಕ್ಷಣದಂತಾಗಿಬಿಟ್ಟಿದೆ. ಈ ಸೆಮಿಸ್ಟರ್ ನಲ್ಲಿ ಕಲಿತದ್ದು ಮುಂದಿನ ಬಾರಿಗೆ ಬೇಕಾಗಲಾರದು. ಸದ್ಯಕ್ಕೆ ಸಾವರ್ಕರ್ ಭಾರತೀಯರ ಪಾಲಿಗೆ ಹಾಗೆಯೇ ಆಗಿಬಿಟ್ಟಿದ್ದಾರೆ. ಅವರು ಹುಟ್ಟಿ125 ವರ್ಷ ಕಳೆಯುವುದರೊಳಗಾಗಿ ಅವರು ಸಮಾಜದ ಕಣ್ಣಿಂದ ದೂರವೇ ಆಗಿಬಿಟ್ಟಿದ್ದಾರೆ. ಯಾವ ರಾಷ್ಟ್ರದ ಏಕತೆ- ಅಖಂಡತೆಗಾಗಿ; ಯಾವ ಪರಿಪೂರ್ಣ ಸಮಾಜದ ಪರಿಪೂರ್ಣ ಉನ್ನತಿಗಾಗಿ ತಮ್ಮ ಜೀವನವನ್ನೇ ತೇಯ್ದುಬಿಟ್ಟರೋ ಆ ವ್ಯಕ್ತಿ ಅದೇ ದೇಶದ ಸ್ಮೃತಿಯಿಂದ ದೂರವಾಗೋದು ದುರಂತವೇ ಸರಿ.
ಹಾಗೆ ನೋಡಿದರೆ ಕಳೆದ ಶತಕದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬೌದ್ಧಿಕವಾಗಿ ಹಾಗೆಯೇ ಪ್ರತ್ಯಕ್ಷವಾಗಿ ಪಾಲ್ಗೊಂಡ ಅಪರೂಪದ ಸಾಹಸಿ ಸಾವರ್ಕರರೇ ಎಂಬುದರಲ್ಲಿ ಅನುಮಾನವಿಲ್ಲ. ಸಿಕ್ಕಸಿಕ್ಕಲ್ಲಿ ಗುಂಡು ಹೊಡೆದು ಅದನ್ನೇ ಕ್ರಾಂತಿ ಎನ್ನುತ್ತಿರಲಿಲ್ಲ ಸಾವರ್ಕರ್. ಅವರ ಪ್ರತಿಯೊಂದು ಕೆಲಸದ ಹಿಂದೆ ಬೆಟ್ಟದಷ್ಟು ಚಿಂತನೆ, ಫಲಿತಾಂಶದ ನಂತರದ ಪರಿಸ್ಥಿತಿಯ ಕುರಿತು ಮುಂದಾಲೋಚನೆ- ಎಲ್ಲವೂ ಇರುತ್ತಿತ್ತು. ಅವರು ಲೇಖನಿ ಹಿಡಿದರೆ ಆ ಕಾಲಘಟ್ಟದ ಮಹಾಮಹಿಮ ಲೆಖಕರನ್ನೂ ಮೀರಿಸುವಷ್ಟು ಪ್ರತಿಭಾವಂತ. ಪಿಸ್ತೂಲು ಹಿಡಿದರೆ, ಎದುರಾಳಿಗಳ ರಕ್ತವೇ ತಣ್ಣಗಾಗುವಷ್ಟು ಕೆಚ್ಚೆದೆ. ಮಾತಿಗೆ ನಿಂತರೆ ಮೈಯೆಲ್ಲ ಕಿವಿಯಾಗಿ ಕೇಳಬೇಕೆನ್ನಿಸುವ ಮಧುರ ದನಿ, ಅಸ್ಖಲಿತ ವಿಚಾರಗಳ ಧಾರಾಪ್ರವಾಹ. ಬಿಡಿ. ಅಂತಹ ವ್ಯಕ್ತಿ ಯುಗಕ್ಕೊಬ್ಬರೇ!