ಎರಡು ರಾಷ್ಟ್ರೀಯ ಪಕ್ಷಗಳ ತುಲನೆ
– ಚಕ್ರವರ್ತಿ ಸೂಲಿಬೆಲೆ
ಬ್ರಿಟಿಷರ ಕೊನೆಯ ವೈಸ್‌ರಾಯ್ ಮೌಂಟ್ ಬ್ಯಾಟನ್. ಹಾಗಾದರೆ ಭಾರತದ ಮೊದಲ ವೈಸ್‌ರಾಯ್ ಯಾರು ಗೊತ್ತ? ಮತ್ಯಾರು? ಈ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ!
ನೆಹರೂ ಅತ್ಯಂತ ಶ್ರದ್ಧೆಯಿಂದ ಆಂಗ್ಲರ ರಾಜನೀತಿಯನ್ನು ಅರಿತುಕೊಂಡರು. ಅದನ್ನು ಹಂತಹಂತವಾಗಿ ಪ್ರಯೋಗಿಸಲಾರಂಭಿಸಿದರು. ಅಧಿಕಾರ ಕೈಗೆ ದಕ್ಕುವ ಮುನ್ನಿನ ಚುನಾವಣೆಗಳಲ್ಲಿ ತಮ್ಮ ಚಾಕಚಕ್ಯತೆಯನ್ನು, ವಿಭಜಿಸಿ ಗೆಲ್ಲುವ ತಂತ್ರವನ್ನು ಚೆನ್ನಾಗಿಯೇ ಬಳಸಿದರು. ಒಂದೆಡೆ ಮುಸಲ್ಮಾನರನ್ನು ಓಲೈಸಿ ಗೆಲ್ಲುವುದು, ಮತ್ತೊಂದೆಡೆ ಪಟೇಲರನ್ನು ಕಡು ಹಿಂದೂವಾಗಿ ಬಿಂಬಿಸಿ ಹಿಂದೂಗಳ ಮತವನ್ನು ಸೆಳೆದುಕೊಳ್ಳುವ ತಂತ್ರಗಾರಿಕೆ ಯಶಸ್ವಿಯಾಯ್ತು. ನೆಹರೂ ಪಕ್ಕಾ ಇಂಗ್ಲೀಶ್ ಬಾಬುವಾಗಿಬಿಟ್ಟರು. ಆಗಲೇ ಗಾಂಧೀಜಿ ಗಾಬರಿಯಿಂದ ಹೇಳಿದ್ದು, ‘ದೇಶ ವಿಭಜನೆಗೊಂಡು ಸ್ವಾತಂತ್ರ್ಯ ಬಂತು. ಇನ್ನು ಮುಂದೆ ಕಾಂಗ್ರೆಸ್ಸನ್ನು ವಿಸರ್ಜಿಸಿಬಿಡೋಣ.’ ಸ್ವತಃ ಗಾಂಧೀಜಿಗೆ ಅಸಹ್ಯವಾಗಿತ್ತು. ತಾನೇ ಮೂಲೆ ಮೂಲೆಗೆ ಕೊಂಡೊಯ್ದ ಕಾಂಗ್ರೆಸ್ಸು ಮುಂದೊಮ್ಮೆ ದೇಶದ ದುರ್ಗತಿಗೆ ಕಾರಣವಾಗುತ್ತದೆಂಬ ಸ್ಪಷ್ಟ ಅರಿವು ಅವರಿಗಿತ್ತು.
ಬಿಜೆಪಿಗೂ ಕಾಂಗ್ರೆಸ್ಸಿಗೂ ಒಂದು ಎದ್ದುಕಾಣುವಂತಹ ಭಿನ್ನತೆ ಇದೆ. ಒಂದು, ಕಾರ್ಯಕರ್ತರಿಂದಲೇ ನಿರ್ಮಾಣಗೊಂಡ, ಕೆಡರ್ ಆಧಾರಿತ ಪಕ್ಷ. ಮತ್ತೊಂದು, ಅಗತ್ಯ ಬಿದ್ದಾಗ ಕಾರ್ಯಕರ್ತರನ್ನು ಕೊಂಡುಕೊಳ್ಳುವ ಪಕ್ಷ. ಇವತ್ತಿಗೂ ನಾನು ಕಾಂಗ್ರೆಸ್ಸಿಗ ಎಂದು ಎದೆ ತಟ್ಟಿ ಹೇಳುವ ಸಾಮಾನ್ಯ ಕಾರ್ಯಕರ್ತರನ್ನು ತೋರಿಸಿ ನೋಡೋಣ. ಅಲ್ಲಿ ಕರುಳ ಸಂಬಂಧಗಳಿಲ್ಲ. ಅದೊಂಥರಾ ನಕಲು ಮಾಡಿಸಿ ನೂರು ಪ್ರತಿಶತ ಅಂಕ ಗಳಿಸುವ ಶಾಲೆಯಿದ್ದಂತೆ. ಆ ಶಾಲೆಯಲ್ಲಿ ಕೆಲಸ ನಡೆಯುವುದೇ ಕೊನೆಯ ಆರು ದಿನಗಳಲ್ಲಿ. ಹೀಗಾಗಿ ಬಂದ ಫಲಿತಾಂಶಕ್ಕೆ ಬೆನ್ನು ತಟ್ಟಿಕೊಳ್ಳುವವರು ಇರುತ್ತಾರೆಯೇ ಹೊರತು, ಆನಂದ ಪಡುವವರಲ್ಲ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಬಿಟ್ಟು ಹೊರಬಂದಾಗ ತಾನು ತಾಯಿಯ ಮಡಿಲಿನಿಂದ ಹೊರಗೆ ಬಂದುಬಿಟ್ಟಿದ್ದೇನೆಂದು ಯಾರಿಗೂ ಅನ್ನಿಸೋದೇ ಇಲ್ಲ. ಅಲ್ಲಿ ತಪ್ಪಾದಾಗ ಪ್ರಶ್ನೆ ಯಾರನ್ನು ಕೇಳಬೇಕೆಂದು ಯಾರಿಗೂ ಗೊತ್ತೇಇರುವುದಿಲ್ಲ. ಗೋಹತ್ಯೆ ನಿಷೇಧ ಹಿಂತೆಗೆದುಕೊಂಡಿದ್ದನ್ನು ಕೇಳಿ ಅನೇಕ ಕಾಂಗ್ರೆಸ್ಸಿಗರೇ ಗರಮ್ ಆಗಿದ್ದಾರೆ. ದುರ್ದೈವ, ಈ ದರ್ದನ್ನು ಯಾರೆದುರು ತೋಡಿಕೊಳ್ಳಬೇಕೆಂದು ಗೊತ್ತಿಲ್ಲವಷ್ಟೆ. ಮುಖ್ಯಮಂತ್ರಿ ಸ್ಥಾನ ಸಿಗದಿದ್ದುದಕ್ಕೆ ಖರ್ಗೆಯ ಬಳಗ ಜಿಲ್ಲೆ ಜಿಲ್ಲೆಗಳಲ್ಲಿ ರಾಡಿ ಎಬ್ಬಿಸಿತಲ್ಲ, ಅದಕ್ಕೆಲ್ಲ ಪ್ರಚಾರವೇ ಸಿಗಲಿಲ್ಲ ಏಕೆ? ಬಹಳ ಸಿಂಪಲ್ಲು. ಈ ರೀತಿ ಜೀವ ಕೊಡುವ ಕಾರ್ಯಕರ್ತರು ಅಲ್ಲಿಲ್ಲ; ಖರೀದಿಸಿದವರಿಗಾಗಿ ತಲೆಕೆಡಿಸಿಕೊಳ್ಳಬೇಕಿಲ್ಲ ಅಂತರ್ಥ! ಇಷ್ಟು ಮಾತ್ರ ಬಿಜೆಪಿಯೊಳಗೆ ಕಿರಿಕಿರಿಯಾಗಿಬಿಟ್ಟಿದ್ದರೆ ಮಾಧ್ಯಮಗಳಿಗೆ ಹಬ್ಬವಾಗಿಬಿಟ್ಟಿರುತ್ತಿತ್ತು. ಏಕೆ ಗೊತ್ತೇನು? ರಾಯಚೂರಿನಲ್ಲಾಗುವ ಒಂದು ಸಣ್ಣ ಬೆಳವಣಿಗೆಗೂ ಮಡಿಕೇರಿಯ ಕಾರ್ಯಕರ್ತ ನೊಂದುಕೊಳ್ಳುತ್ತಾನೆ. ಅವನ ಹೃದಯ ಕಂಪಿಸುತ್ತದೆ.