ವಿಷಯದ ವಿವರಗಳಿಗೆ ದಾಟಿರಿ

Archive for

15
ಆಕ್ಟೋ

ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 2

– ಮು.ಅ ಶ್ರೀರಂಗ ಬೆಂಗಳೂರು

ಕನ್ನಡ ಸಾಹಿತ್ಯ‘ನಿಲುಮೆ’ಯಲ್ಲಿ 13-8-14ರಂದು ಪ್ರಕಟವಾದ ಈ ಸರಣಿಯ ಮೊದಲ ಭಾಗದಲ್ಲಿ (ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 1) ಹೇಳಿದಂತೆ ‘ಕನ್ನಡ ಪ್ರಭ’ದಲ್ಲಿ ಪ್ರಕಟವಾದ ನನ್ನ  ‘ಇಂದಿನ ನಮ್ಮ ಜೀವನದಲ್ಲಿ ಸಾಹಿತ್ಯಕ್ಕೆ ಅವಕಾಶವಿದೆಯೇ?’ ಎಂಬ ಲೇಖನಕ್ಕೆ  ಓದುಗರಿಂದ ಐದು ಪ್ರತಿಕ್ರಿಯೆಗಳು ಬಂದಿದ್ದವು. ಆ ಪ್ರತಿಕ್ರಿಯೆಗಳ ಮುಖ್ಯಾಂಶಗಳನ್ನು ಮೊದಲಿಗೆ ನೋಡೋಣ

(1) ಸಾಹಿತ್ಯವೆಂದರೆ ನಮ್ಮೊಳಗಿನ ಅನುರಣ – ಜಿ ಎಸ್ ನಾಗೇಶ್ ಗುಬ್ಬಿ  (29-4-12)
ಇಂದಿನ ನಮ್ಮ ಜೀವನದಲ್ಲಿ ಸಾಹಿತ್ಯಕ್ಕೆ ಅವಕಾಶವಿದೆಯೇ?  ಎಂದು ಪ್ರಶ್ನಿಸಿ, ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನೂ ತಾವೇ ನೀಡಿದ್ದು ವಿಚಿತ್ರವೆನಿಸಿತು.  ಜತೆಗೆ ದೈನಂದಿನ ಒತ್ತಡಗಳಿಂದಾಗಿ ಸಾಹಿತ್ಯ ಕಡೆಗಣಿಸಲ್ಪಡುತ್ತಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಅವರು ದ್ವಂದ್ವದಲ್ಲಿದ್ದಾರೆಂಬುದು ಸ್ಪಷ್ಟ. ಅವರ ಅಭಿಪ್ರಾಯಕ್ಕೆ ನನ್ನ ಆಕ್ಷೇಪವಿದೆ. ನಮ್ಮಲ್ಲಿ ಬಹಳಷ್ಟು ಮಂದಿ ಸಾಹಿತ್ಯವೆಂದರೆ ಪುಸ್ತಕದ ಓದು ಅಥವಾ ಕವಿ ಸಾಹಿತಿಗಳ ಜೀವನವನ್ನು ಅರಿಯುವುದೆಂದು ತಪ್ಪಾಗಿ ಭಾವಿಸಿದ್ದಾರೆ. ಕವಿಗಳು ಸಾಹಿತಿಗಳು ವ್ಯಕ್ತಿ ಶೋಧದಲ್ಲಿ ನಿರತರಾದವರಲ್ಲ. ಸಮಷ್ಟಿ ಶೋಧ ಅವರ ಮೂಲ ಉದ್ದೇಶ. ಕೇವಲ ದೊಡ್ಡ ದೊಡ್ಡ ಕವಿಗಳನ್ನು ಸಾಹಿತಿಗಳನ್ನು ಓದಿಕೊಂಡ ಮಾತ್ರಕ್ಕೆ ನನಗೆ ಸಾಹಿತ್ಯ ಗೊತ್ತು ಎಂದು ಪರಿಭಾವಿಸಿದರೆ ಅವರಿಗಿಂತ ಮೂರ್ಖರು ಮತ್ತೊಬ್ಬರಿರಲಾರರು. ‘ಹಾಗೆಂದು ಅವರನ್ನು ಓದಬಾರದೆಂದಲ್ಲ. ಆದರೆ ನಿಮ್ಮೊಳಗೆ ನಿಮ್ಮದೇ ಆದ ಚಿಂತನೆಗಳಿಲ್ಲದಿದ್ದರೆ ಅದು ದಕ್ಕಲಾರದು’. ನಮ್ಮ ದೈನಂದಿನ ಜೀವನವನ್ನು ನಾನಾ ಉದಾಹರಣೆಗಳನ್ನು ಕೊಟ್ಟು ಶ್ರೀರಂಗ ಅವರು ಟೀಕಿಸಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗಲೇ ಹೋಂ ವರ್ಕ್ ಮುಗಿಸಿಕೊಳ್ಳುವ ಮಕ್ಕಳಿದ್ದಾರೆ. ಅಸೈನ್ ಮೆಂಟುಗಳನ್ನು ಅಚ್ಚುಕಟ್ಟಾಗಿ ರೆಡಿಮಾಡಿಕೊಳ್ಳುವ ಬಿ. ಎಡ್., ಡಿ.ಎಡ್.  ವಿಧ್ಯಾರ್ಥಿಗಳನ್ನು ಕಾಣಬಹುದು. ಭೈರಪ್ಪನವರ ಒಳಹೊಕ್ಕಂತೆ, ಅನಂತಮೂರ್ತಿಯವರನ್ನು ಆವಾಹಿಸಿಕೊಂಡಂತೆ ಚರ್ಚೆಗಿಳಿಯುವ ಸಾಹಿತ್ಯಾಭಿಮಾನಿಗಳಿದ್ದಾರೆ. ಇನ್ನು ಟಿ. ವಿ. ಧಾರಾವಾಹಿಗಳನ್ನು ನೋಡುತ್ತಾ ಸಾಂಸಾರಿಕ ಕಲಹಗಳಿಗೆ ಕಾರಣಗಳನ್ನು, ಪರಿಣಾಮಗಳನ್ನು ಅರಿಯುತ್ತಾ ತಮ್ಮ ಸಂಸಾರ ಹಾಗಾಗಬಾರದೆಂದು ಅಪೇಕ್ಷಿಸಿದ, ತಪ್ಪನ್ನು ತಿದ್ದಿಕೊಂಡ ಅನೇಕ ಕುಟುಂಬಗಳನ್ನು ಕಂಡಿದ್ದೇನೆ. ಚೆನ್ನಾಗಿ ನಿದ್ದೆ ಮಾಡಿ ಮೇಲೆದ್ದ ತಕ್ಷಣ ಸೊಗಸಾದ ಕವನ ರಚಿಸಿ ಬೆರಗುಗೊಳಿಸಿದವರಿದ್ದಾರೆ. ಭಾನುವಾರ ಶಾಪಿಂಗ್ ಮಾಲ್ ನಲ್ಲಿ ಅಡ್ಡಾಡುತ್ತಲೇ ಅಲ್ಲಿನ ‘ಸಾಲ ಮಾಡಿ ಸ್ನೇಹ ಕಳೆದುಕೊಳ್ಳಬೇಡಿ’ ಎಂಬ ಸ್ಲೋಗನ್ ನೋಡಿ  ಸಾಲ ಮತ್ತು ಸ್ನೇಹದ ಬಗ್ಗೆ ಆಲೋಚನಾಪರರಾಗುವವರನ್ನು ಕಾಣುತ್ತೇವೆ. ಇವತ್ತಿನ ಶಾಪಿಂಗ್ ಮಾಲ್ ಗಳಂತೂ ಸಾಹಿತ್ಯ ಮತ್ತು ಸಂಸ್ಕೃತಿಯ ತವರೇ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ನೋಡುವ ಕಣ್ಣು, ಕೇಳುವ ಕಿವಿ, ಅರಿಯುವ ಪ್ರಜ್ಞೆ ಇದ್ದರೆ ಸಾಕು. ಯಾವುದೇ ಸ್ಥಳದಲ್ಲಿದ್ದರೂ ಸಾಹಿತ್ಯಿಕ ಚಿಂತನೆಯನ್ನು ಅಂತರ್ಗತಗೊಳಿಸಿಕೊಳ್ಳಲು ಸಾಧ್ಯವಿದೆ. ಇಷ್ಟಕ್ಕೂ ಸಾಹಿತ್ಯದ ಅಧ್ಯಯನವೆಂದರೆ ಜನಜೀವನ, ಮಾನವನ ನಡುವಳಿಕೆಗಳ, ಸಮುದಾಯಗಳ ನಡುವಿನ ಸಂವೇದನೆಗಳನ್ನು ಕುರಿತದ್ದು. ಆದ್ದರಿಂದ ವಿಶೇಷವಾದ ಓದೇನೂ ಬೇಕಾಗಿಲ್ಲ. ಸಾಹಿತ್ಯವೆಂದರೆ ಕೇವಲ ಶಬ್ದಗಳ ಆಡಂಬರವಲ್ಲ.

ಮತ್ತಷ್ಟು ಓದು »