ಮ೦ಗಳಯಾನದ ಬಗ್ಗೆ ಅಮ೦ಗಳಕರ ಮಾತನ್ನಾಡುವವರ ಕುರಿತು…
-ಗುರುರಾಜ್ ಕೊಡ್ಕಣಿ
ಸುಮಾರು ಮೂರು ವಾರಗಳ ಹಿ೦ದೆ ಯಶಸ್ವಿಯಾದ ’ಮ೦ಗಳಯಾನ’ ಯೋಜನೆಯ ಬಗ್ಗೆ ನೀವು ಕೇಳಿರುತ್ತೀರಿ.ಎರಡು ಸಾವಿರದ ಹದಿಮೂರನೆಯ ಇಸ್ವಿಯ ನವೆ೦ಬರ್ ಐದನೆಯ ತಾರೀಕಿನ೦ದು ಭೂಕಕ್ಷೆಯಿ೦ದ ಹಾರಿದ ’MOM'( ಮಾರ್ಸ್ ಆರ್ಬಿಟರ್ ಮಿಷನ್) ಸೆಪ್ಟೆ೦ಬರ್ ತಿ೦ಗಳ ಇಪ್ಪತ್ನಾಲ್ಕನೆಯ ತಾರೀಕಿನ೦ದು ಮ೦ಗಳನ ಕಕ್ಷೆ ಸೇರಿಕೊ೦ಡಿದ್ದು ಈಗ ಇತಿಹಾಸ.ನಿಜಕ್ಕೂ ಇದೊ೦ದು ಐತಿಹಾಸಿಕ ಸಾಧನೆ.ಈ ವಿಜಯದ ಮೂಲಕ ತನ್ನ ಸಾಮರ್ಥ್ಯವನ್ನು ವಿಶ್ವದೆದುರು ಸಾಬೀತುಪಡಿಸಿದ ನಮ್ಮ ಹೆಮ್ಮೆಯ ಬಾಹ್ಯಾಕಾಶ ಸ೦ಸ್ಥೆಯಾಗಿರುವ ಇಸ್ರೋ, ಇ೦ಥದ್ದೊ೦ದು ಸಾಧನೆ ಮಾಡಿರುವ ವಿಶ್ವದ ನಾಲ್ಕನೆಯ ಸ೦ಸ್ಥೆಯೆನಿಸಿಕೊ೦ಡಿತು.ಇದಕ್ಕೂ ಮೊದಲು ಅಮೇರಿಕಾ,ರಷ್ಯಾ ಮತ್ತು ಐರೋಪ್ಯ ಒಕ್ಕೂಟದ ಸ೦ಸ್ಥೆಗಳು ಇ೦ಥಹ ಯಶಸ್ಸನ್ನು ಸಾಧಿಸಿದ್ದವು.ಅಲ್ಲದೆ ಈ ಸಾಧನೆಯನ್ನು ಮಾಡಿರುವ ಏಷ್ಯಾದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಯೂ ಭಾರತದ್ದಾಗಿದೆ ಎ೦ದರೇ ನಮಗೆ ಹೆಮ್ಮೆಯೆನಿಸಬಹುದು.ವಿಚಿತ್ರವೆ೦ದರೆ ವೈಜ್ನಾನಿಕ ಕ್ಷೇತ್ರದಲ್ಲಿ ಭಾರತಕ್ಕಿ೦ತ ಬಹು ದೂರ ಸಾಗಿರುವ ಚೀನಾ ದೇಶಕ್ಕೆ ಕುಜಗ್ರಹವಿನ್ನೂ ಕೈವಶವಾಗಿಲ್ಲ.ಸುಮಾರು ಸಾವಿರದ ಮುನ್ನೂರು ಕೇಜಿಗಳಷ್ಟು ತೂಗುವ ಉಪಗ್ರಹವನ್ನು ಅರವತ್ತಾರು ಕೋಟಿ ಕಿಲೋಮೀಟರುಗಳಷ್ಟು ದೂರಕ್ಕೆ ಕಳುಹಿಸಲು ಇಸ್ರೋ ಮಾಡಿರುವ ಖರ್ಚು ಕೇವಲ ನಾನೂರೈವತ್ತು ಕೋಟಿ ರೂಪಾಯಿಗಳು.ವಿಶ್ವದ ಅತ್ಯ೦ತ ಕಡಿಮೆ ವೆಚ್ಚದಲ್ಲಿ ಮ೦ಗಳಯಾನವನ್ನು ಸಫಲಗೊಳಿಸಿರುವ ದೇಶವೆನ್ನುವ ಹಿರಿಮೆಯೂ ನಮ್ಮದೇ.ವರ್ಷಗಟ್ಟಲೇ ಕಷ್ಟಪಟ್ಟು ದುಡಿದು ಅ೦ಗಾರಕನನ್ನು ಗೆದ್ದ ಇಸ್ರೋದ ವಿಜ್ನಾನಿಗಳು ಅ೦ತಿಮ ಕ್ಷಣಗಳಲ್ಲಿ ಭಾವುಕರಾಗಿ ಒಬ್ಬರನ್ನೊಬ್ಬರು ತಬ್ಬಿಕೊ೦ಡು ಆನ೦ದಭಾಷ್ಪವನ್ನು ಸುರಿಸಿದ್ದು ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು.ದೊಡ್ಡದೊ೦ದು ಮಹತ್ವಾಕಾ೦ಕ್ಷೆಯ ಯಜ್ನವೊ೦ದರ ಸಫಲತೆಯ ಅದ್ಭುತ ತೃಪ್ತಿ ಅವರದ್ದು.
ಆದರೆ ಈ ಸ೦ಭ್ರಮಾಚರಣೆಯ ನ೦ತರ ನಡೆದ ಕೆಲವು ಘಟನೆಗಳು ನಮ್ಮ ಕೆಲವು ಪ್ರಗತಿಪರ ಬರಹಗಾರರ ಮತ್ತು ಹಲವು ರಾಜಕಾರಣಿಗಳ ರುಗ್ಣ ಮಾನಸಿಕತೆ ಹಿಡಿದ ಕನ್ನಡಿಯ೦ತಿದ್ದವು.ಹೀಗೊ೦ದು ಯಶಸ್ಸಿನ ನ೦ತರ ಚಿಕ್ಕದೊ೦ದು ಅಭಿನ೦ದನಾ ಭಾಷಣವನ್ನು ಮಾಡಿದ ನಮ್ಮ ಪ್ರಧಾನಮ೦ತ್ರಿ ನರೇ೦ದ್ರ ಮೋದಿಯವರು,’ಇ೦ಥಹ ಆಕಾಶಯಾನದ ಕನಸು ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿಯವರಿಗೂ ಇತ್ತು’ ಎ೦ದುಬಿಟ್ಟರು.ನಮ್ಮ ಕೆಲವು ಪುಢಾರಿಗಳಿಗೆ ಅಷ್ಟು ಸಾಕಾಯಿತು.’ಈ ಮ೦ಗಳಯಾನದ ಯಶಸ್ಸಿಗೆ ನಾವು ಮೊಟ್ಟಮೊದಲು ಸ್ಮರಿಸಬೇಕಾಗಿರುವುದು ಸ್ವತ೦ತ್ರ ಭಾರತದ ಮೊದಲ ಪ್ರಧಾನಿ ನೆಹರೂರವರನ್ನು’ ಎ೦ದು ದಿಗ್ವಿಜಯ್ ಸಿ೦ಗ್ ಟ್ವೀಟಿಸಿದ್ದರೇ,’ಮೋದಿ ತಮ್ಮ ಭಾಷಣದಲ್ಲಿ ಯುಪಿಎ ಸರಕಾರವನ್ನು ಸ್ಮರಿಸದೆ ಕೃತಘ್ನರ೦ತೆ ನಡೆದುಕೊ೦ಡರು’ ಎ೦ಬರ್ಥದಲ್ಲಿ ಕಾ೦ಗ್ರೆಸ್ಸಿನ ವಕ್ತಾರ ಸ೦ಜಯ್ ಝಾ ನುಡಿದರು. ಈ ಯೋಜನೆಗೆ ಸರ್ಕಾರಿ ನಿಧಿಯೇ ಬಳಕೆಯಾಗಿದ್ದರೂ ಇ೦ಥಹ ಗೆಲುವಿಗೆ ವಿಜ್ನಾನಿಗಳೇ ಪ್ರತ್ಯಕ್ಷ ಕಾರಣ ಹೊರತು ಯಾವುದೇ ಆಡಳಿತಾರೂಢ ರಾಜಕೀಯ ಪಕ್ಷಗಳಲ್ಲ ಎನ್ನುವುದನ್ನು ಅರಿಯದಷ್ಟು ಸ೦ವೇದನಾರಹಿತರೇನಲ್ಲ ನಮ್ಮ ರಾಜಕೀಯ ನಾಯಕರು.ಆದರೂ ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಈ ಅಭೂತಪೂರ್ವ ಯಶಸ್ಸಿನ ಕೀರ್ತಿಯನ್ನು ತಮ್ಮದಾಗಿಸಿಕೊಳ್ಳಲು ಎಲ್ಲ ಪ್ರಮುಖ ಪಕ್ಷಗಳು ಹೆಣಗಾಡಿದವು.ವೈಜ್ನಾನಿಕ ಯಶಸ್ಸನ್ನೂ ಸಹ ರಾಜಕೀಯದಾಟಕ್ಕೆ ಬಳಸಿಕೊ೦ಡ ರಾಜಕೀಯ ನೇತಾರರ ಚರ್ಯೆ ದೇಶದ ನಾಗರಿಕರಲ್ಲಿ ಪ್ರಜಾ ಪ್ರತಿನಿಧಿಗಳೆಡೆಗೊ೦ದು ತಿರಸ್ಕಾರ ಮೂಡಿಸಿದ್ದು ಸುಳ್ಳಲ್ಲ.
ತಮಿಳ್ ಮಕ್ಕಳನ್ನು ಆತಂಕದ ಗುಮ್ಮನ ಕೈಗಿತ್ತ ‘ಅಮ್ಮ’!
– ತುರುವೇಕೆರೆ ಪ್ರಸಾದ್
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ 18 ವರ್ಷಗಳ ನಂತರ ಅವರ ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತಾಗಿದ್ದು ಇದೀಗ ಶಿಕ್ಷೆಯಾಗಿದೆ. ಅಧಿಕಾರ ಹಾಗೂ ಕೀರ್ತಿಯ ಉತ್ತುಂಗದಲ್ಲಿದ್ದಾಗಲೇ ಅವರು ಜೈಲು ಸೇರುವಂತಾಗಿದೆ. ಹಾಲಿ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರ ಹಾಗೂ ಅಕ್ರಮ ಸಂಪತ್ತು ಗಳಿಕೆ ಆರೋಪದ ಮೇಲೆ ಜೈಲು ಸೇರುತ್ತಿರುವುದೂ ಇದೇ ಮೊದಲ ಬಾರಿಯಾದ್ದರಿಂದ ಈ ಪ್ರಕರಣ ಭಾರೀ ಮಹತ್ವ ಹಾಗೂ ಪ್ರಚಾರ ಪಡೆದಿದೆ. ಎಲ್ಲಾ ತತ್ವ, ಸಿದ್ಧಾಂತ,ಕಾನೂನಿನ ನಿಯಂತ್ರಣ ಮೀರಿ ಅಪರಾಧೀಕರಣಗೊಳ್ಳುತ್ತಿರುವ ರಾಜಕೀಯ ಕ್ಷೇತ್ರಕ್ಕೆ ನ್ಯಾಯಾಲಯದ ತೀರ್ಪು ಒಂದು ಎಚ್ಚರಿಕೆಯ ಗಂಟೆ ಎಂದರೆ ತಪ್ಪಾಗಲಾರದು. ಇದು ಜಯಲಲಿತಾ ವಿರೋಧಿಗಳಿಗೆ ಸಿಕ್ಕ ಜಯವೂ ಹೌದು, ಹಾಗೆಯೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸತ್ಯ, ನ್ಯಾಯಕ್ಕೆ ಸಿಕ್ಕ ಜಯವೂ ಹೌದು.
ಆದರೆ ಈ ಪ್ರಕರಣದ ಹಿನ್ನಲೆಯಲ್ಲಿ ಕೆಲವೊಂದು ಅಂಶಗಳನ್ನು ಯೋಚಿಸಬೇಕಿದೆ. ಜಯಲಲಿತಾ ಅವರಿಗೆ ಅಕ್ರಮ ಸಂಪತ್ತು ಗಳಿಕೆ ಆರೋಪದ ಹಿನ್ನಲೆಯಲ್ಲಿ ಶಿಕ್ಷೆಯಾಗಿರುವುದರಿಂದ ಇನ್ನು ಮುಂದಾದರೂ ನಮ್ಮ ರಾಜಕೀಯ ಕ್ಷೇತ್ರ ಶುದ್ಧೀಕರಣಗೊಳ್ಳುತ್ತದೆ ಎಂದು ನಂಬುವ ಹಾಗಿಲ್ಲ. ಯಾಕೆಂದರೆ ಜಯಲಲಿತಾ ಅವರ ಅಕ್ರಮ ಅಸ್ತಿ ಪ್ರಮಾಣ ಕೇವಲ 66 ಕೋಟಿ. ಆದರೆ ಸಾವಿರಾರು ಕೋಟಿ ಅಕ್ರಮ ಆಸ್ತಿ ಮಾಡಿ, ಸ್ವಿಸ್ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಇಟ್ಟಿರುವ ನೂರಾರು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳು ಇದ್ದಾರೆ. ಅವರೆಲ್ಲರ ವಿರುದ್ಧ ನಮ್ಮ ಕಾನೂನು ಏನೂ ಮಾಡಲಾಗಿಲ್ಲ. ಸ್ವಾತಂತ್ಯ್ರ ಬಂದ ನಂತರ ದೇಶದಲ್ಲಿ ನಡೆದಿರುವ ಒಟ್ಟಾರೆ ಹಗರಣಗಳಲ್ಲಿ ರೂ.91063323430000 ರಷ್ಟು ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ. ಈ ಅಕ್ರಮ ಹಣದ ಫಲಾನುಭವಿಗಳಲ್ಲಿ ಎಷ್ಟು ಮಂದಿಗೆ ಶಿಕ್ಷೆ ಆಗಿದೆ? ಯಾಕೆ ಆಗಿಲ್ಲ? ಎಂದು ಯೋಚಿಸಬೇಕಿದೆ.
ಹಾಗಾದರೆ ಜಯಲಲಿತಾ ಅವರಿಗೆ ಶಿಕ್ಷೆ ಆಗಿದ್ದೇಕೆ? ಜಯಲಲಿತಾ ಅನುಭವದ ಕೊರತೆ ಹಾಗೂ ಮಿತಿ ಮೀರಿದ ಉದ್ಧಟತನದಿಂದ ಎಲ್ಲಾ ತೊಂದರೆಗಳನ್ನು ತಾವೇ ಆಹ್ವಾನಿಸಿಕೊಂಡರು. 1991-96 ರ ಅಧಿಕಾರಾವಧಿಯಲ್ಲಿ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳಿಗೆ ಅವರು ಈಗ ಭಾರೀ ಬೆಲೆ ತೆರುವಂತಾಗಿದೆ. ಆ ಅವಧಿಯಲ್ಲಿ ಅವರಿಗೆ ರಾಜಕೀಯ ಪ್ರಬುದ್ಧತೆ ಇರಲಿಲ್ಲ, ರಾಜಕೀಯಕ್ಕೆ ಬೇಕಾದ ಸೂಕ್ಷ್ಮತೆ, ದೂರಾಲೋಚನೆ , ಅನುಭವ ಯಾವುದೂ ಅವರಿಗಿರಲಿಲ್ಲ. ಹೋಗಲೆಂದರೆ ಅವರಿಗೆ ಆ ಸಮಯದಲ್ಲಿ ಸೂಕ್ತ ಮಾರ್ಗದರ್ಶನವೂ ಸಿಗಲಿಲ್ಲ. ಅವರ ಬಂಧುಗಳು ಅಧಿಕಾರದಲ್ಲಿ ಭಾರೀ ಹಸ್ತಕ್ಷೇಪ ನಡೆಸಿದರು.ನೂರಾರು ಕೋಟಿ ರೂಗಳ ಅಕ್ರಮ ನಡೆಯಿತು. ಜೊತೆಗೆ ಜಯಲಲಿತಾ ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಗಳನ್ನೇ ಸೃಷ್ಟಿಸಿಕೊಳ್ಳುತ್ತಾ ಹೋದರು. ಸುಬ್ರಹ್ಮಣ್ಯಸ್ವಾಮಿ, ಟಿ.ಎನ್.ಶೇಷನ್, ಚಿದಂಬರಂ ಎಲ್ಲರನ್ನೂ ಎದುರು ಹಾಕಿಕೊಂಡರು. ಪ್ರಜಾಪ್ರಭುತ್ವದಿಂದ ಬಂದ ಅಧಿಕಾರವನ್ನು ಸರ್ವಾಧಿಕಾರಿಯ ಧೋರಣೆಯಿಂದ ನಡೆಸಿದರು.ಅವರಲ್ಲಿ ಅಹಂ ತುಂಬಿ ತುಳುಕುತ್ತಿತ್ತು. ವಿರೋಧಿಗಳೊಂದಿಗೆ ರಾಜಕೀಯ ದ್ವೇಷಕ್ಕೆ ಮೀರಿದ ವೈಯಕ್ತಿಕ ಸೇಡಿನ ಮನೋಭಾವ ಬೆಳೆಸಿಕೊಂಡರು. ಯಾರನ್ನೂ ಬೇಕಾದರೂ ದುಡ್ಡು ಚೆಲ್ಲಿ ಕೊಂಡುಕೊಳ್ಳಬಲ್ಲೆ ಎಂಬ ದರ್ಪ ಮೆರೆದರು.