ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೧
– ಷಣ್ಮುಖ ಎ
ಸಹಪ್ರಾದ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ-577451
ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಷ್ಯತೆಯ ಆಚರಣೆಯ ಮೂಲಕ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಾ ಇವೆ. ಈ ರೀತಿಯ ದೌರ್ಜನ್ಯಗಳಿಂದ ದಲಿತರನ್ನು ರಕ್ಷಿಸಿ ಅವರನ್ನು ಅಸ್ಪೃಷ್ಯತೆಯ ಆಚರಣೆಗಳಿಂದ ಮುಕ್ತಿಗೊಳಿಸುವ ಒಂದು ಮಹಾಅಸ್ತ್ರವೆಂಬಂತೆ ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆಯನ್ನು ಭಾರತ ಸರ್ಕಾರ 1989ರಲ್ಲಿ ಜಾರಿಗೆ ತಂದಿದೆ. ಈ ಕಾಯಿದೆಯ ಜಾರಿಯಾದ ಎರಡು ದಶಕಗಳ ತರುವಾಯ ಈ ಕಾಯಿದೆಯ ಜಾರಿ ಮತ್ತು ಅದರ ಪರಿಣಾಮದ ಕುರಿತು ಚರ್ಚೆಗಳು ಮತ್ತು ಅಧ್ಯಯನಗಳು ನಡೆಯುತ್ತಿವೆ. ಬಹುತೇಕ ಈ ಚರ್ಚೆಗಳಲ್ಲಿನ ಸಾಮಾನ್ಯ ನಿಲುವೆಂದರೆ ಅಸ್ಪೃಷ್ಯತೆ ಆಚರಣೆಯ ವಿರುದ್ದ ಪ್ರಬಲವಾದ ಕಾಯಿದೆ ಇದ್ದರೂ ಇದರ ಪರಿಣಾಮಕಾರಿ ಜಾರಿಯಲ್ಲಿ ಅಧಿಕಾರಿಗಳು ಆಸಕ್ತಿವಹಿಸದಿರುವುದರಿಂದ ಈ ಕಾಯಿದೆಯಿಂದ ದಲಿತರಿಗೆ ಸಿಗಬೇಕಾದ ನ್ಯಾಯ ದೊರೆಯುತ್ತಿಲ್ಲ ಎನ್ನುವ ಸಾಮಾನ್ಯ ಆತಂಕ-ಕಾಳಜಿಗಳು ವ್ಯಕ್ತವಾಗುತ್ತಿವೆ.
ಪ್ರಸ್ತುತ ಲೇಖನವು ಈ ಆತಂಕಗಳ ವಾಸ್ತವತೆಯನ್ನು ಪರೀಕ್ಷಿಸಲು ಪ್ರಯತ್ನಿಸಿದೆ.ಸರ್ಕಾರವೇ ನಡೆಸಿರುವ ಈ ಕಾಯಿದೆಯ ಮೌಲ್ಯಮಾಪನ ಅಧ್ಯಯನ ವರಧಿಯ ಅಂಕಿಅಂಶಗಳು ಮತ್ತು ಅದರಲ್ಲಿನ ವಿವರಣೆಗಳನ್ನು ಆದರಿಸಿ ಈ ಕಾನೂನಿನಡಿಯಲ್ಲಿ ದಾಖಲಾಗಿರುವವ ಪ್ರಕರಣಗಳ ವಾಸ್ತವ ಸ್ಥಿತಿಯನ್ನು ಇಲ್ಲಿ ಪರೀಕ್ಷಿಸಲಾಗಿದೆ.
ಈ ವರದಿಯಲ್ಲಿ ಉಲ್ಲೇಖವಾಗಿರುವಂತೆ, ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದ ದಲಿತರು ಈ ಕಾನೂನಿನಿಂದ ದೊರೆಯುವ ಪರಿಹಾರ ಪಡೆದ ನಂತರ ಪ್ರಕರಣದ ಕುರಿತು ಆಸಕ್ತಿಯನ್ನು ಕಳೆದುಕೊಳ್ಳುವುದೇ ಪ್ರಕರಣಗಳು ಇತ್ಯರ್ಥಗೊಳ್ಳದಿರಲು ಮುಖ್ಯ ಕಾರಣವೆಂದು ಗುರುತಿಸುತ್ತದೆ. ಜೊತೆಗೆ, ಈ ಕಾನೂನಿನಡಿಯಲ್ಲಿ ಅಸ್ಪೃಷ್ಯತೆಯ ಆಚರಣೆಯ ಕಾರಣಕ್ಕೆ ದಾಖಲಾಗುವ ಪ್ರಕರಣಗಳು ಅತಿಕಡಿಮೆ ಇದ್ದು ಇತರೇ ಜಗಳ-ವ್ಯಾಜ್ಯಗಗಳೇ ಈ ಕಾಯಿದೆಯಡಿಯಲ್ಲಿ ದಾಖಲಾಗುತ್ತಿರುವ ಅಂಶವನ್ನು ಎತ್ತಿ ತೋರಿಸುತ್ತವೆ.ಈ ರೀತಿಯಲ್ಲಿ ಈ ಕಾಯಿದೆಯು ಅಸ್ಪೃಷ್ಯತೆಯ ಆಚರಣೆಯಲ್ಲದ ವಿಚಾರಗಳಿಗೆ (ದುರು)ಉಪಯೋಗವಾಗುತ್ತಿರುವುದಕ್ಕೆ ಈ ಕಾಯಿದೆ ರೂಪುಗೊಂಡಿರುವ ಸೈದ್ಧಾಂತಿಕ ಚೌಕಟ್ಟಿನಲ್ಲಿಯೆ ಸಮಸ್ಯೆ ಇರಬೇಕೆಂದು ಈ ಲೇಖನವು ತರ್ಕಿಸುತ್ತದೆ.
ಮುಖ್ಯವಾಗಿ, ಭಾರತೀಯ ಸಮಾಜದ ಕುರಿತ ಜಾತಿವ್ಯವಸ್ಥೆಯ ಚೌಕಟ್ಟಿನ ಹಿನ್ನೆಲೆಯಲ್ಲಿ ಕೆಳಜಾತಿ-ಮೇಲ್ಜಾತಿಗಳ ಕುರಿತು ವಸಾಹತುಶಾಹಿ ಸ್ಟೀರಿಯೋಟೈಪುಗಳು ಸಮಾಜವಿಜ್ಞಾನದಲ್ಲಿ ಹರಡಿಕೊಂಡಿದೆ. ಜಾತಿಗಳ ಕುರಿತ ಈ ರೀತಿಯ ಸ್ಟೀರಿಯೋಟೈಪುಗಳನ್ನು ಆಧರಿಸಿದ ನಿರೂಪಣೆಗಳಿಂದ ಹುಟ್ಟಿಕೊಂಡಿರುವ ಬೌದ್ಧಿಕ ವಲಯದಲ್ಲಿನ ಸಾಮಾನ್ಯ ಗ್ರಹಿಕೆಗಳು ಈ ಕಾಯಿದೆ ರೂಪಿತಗೊಳ್ಳಲು ಕಾರಣವಾಗಿದೆ. ಈ ಸಾಮಾನ್ಯಗ್ರಹಿಕೆಗಳು ಇಲ್ಲಿಯ ವಾಸ್ತವ ಸ್ಥಿತಿಯಾಗಿರದೇ ಇರುವುದರಿಂದ ಈ ಕಾಯಿದೆಯಿಂದ ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ನ್ಯಾಯಪಡೆಯುವುದಕ್ಕಿಂತ ಹೆಚ್ಚಾಗಿ ಲಾಭ ಪಡೆಯುವ ಕಡೆಗಷ್ಟೇ ಒಲವಿದೆ. ಅಲ್ಲದೆ ದಲಿತರ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಹೆಚ್ಚಾಗಿ ಈ ಕಾಯಿದೆಯು ಹಲವು ಹೊಸ ರೀತಿಯ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ ಎಂದು ಈ ಲೇಖನವು ವಾದಿಸುತ್ತದೆ. ಮತ್ತಷ್ಟು ಓದು