ವಿಜ್ಞಾನಿಗಳೇಕೆ ಪೂಜೆ ಮಾಡಬಾರದು?
– ಡಾ. ಪ್ರವೀಣ್ ಟಿ. ಎಲ್
ಉಪನ್ಯಾಸಕರು, ಕುವೆಂಪು ವಿಶ್ವವಿದ್ಯಾನಿಲಯ
ಮಂಗಳಯಾನದ ಯಶಸ್ವೀ ಕಾರ್ಯಾಚರಣೆ ಬಗ್ಗೆ ಇಡೀ ದೇಶವೇ ಸಂತಸಪಟ್ಟಿದೆ. ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತರ ಸಾಧನೆಯನ್ನು ಭಾರತೀಯ ವಿಜ್ಞಾನಿಗಳು ಮಾಡಿರುವುದು ಮಹಾನ್ ಸಾಧನೆಯೇ ಸರಿ. ಆದರೆ ಕೆಲವು ‘ಚಿಂತಕರು’ ಈ ಇಡೀ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದ ವಿಜ್ಞಾನಿ ರಾಧಾಕೃಷ್ಣನ್‍ರವರ ನಡೆಯ ಕುರಿತು ತಮ್ಮ ಕುಹಕ, ತಕರಾರುಗಳನ್ನು ಅಂತರ್ಜಾಲ, ಮತ್ತಿತರ ಕಡೆಗಳಲ್ಲಿ ಹರಿಯಬಿಡುತ್ತಿದ್ದಾರೆ. ರಾಧಾಕೃಷ್ಣನ್‍ರವರು ‘MOM’ ನ ಸಣ್ಣ ಮಾದರಿಯೊಂದನ್ನು ತಿರುಪತಿಗೆ ತಂದು, ತಮ್ಮ ಧರ್ಮಪತ್ನಿಯೊಡನೆ ಪೂಜಾ ಕಾರ್ಯಗಳನ್ನು ನೇರವೇರಿಸಿದ್ದು ಅವರ ಟೀಕೆಗೆ ಕಾರಣ.
ಉಡಾವಣೆಗೊಂಡ ‘MOM’ ಮಂಗಳನ ತಲುಪುವ ಮುಂಚೆಯೇ ಇದೊಂದು ವಿಫಲಯತ್ನವೇನೋ ಎಂಬಂತೆ ಕೆಲವರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದರು. ಇನ್ನೂ ಕೆಲವರು ವಿಫಲವಾಗಿದೆ ಎಂಬ ತೀರ್ಮಾನಕ್ಕೂ ಬಂದಿದ್ದರು. ಅಷ್ಟೇ ಅಲ್ಲದೇ ಈ ವಿಫಲತೆಗೆ ವಿಜ್ಞಾನಿಗಳು ತಿರುಪತಿಗೆ ತೆರಳಿ ‘ತಲೆಬೋಳಿಸಿ’ಕೊಳ್ಳದೇ ವಾಪಾಸಾದುದೇ ಪ್ರಮುಖ ಕಾರಣ ಎಂಬಂತೇ ಕುಹಕವಾಡಲು ಶುರುಮಾಡಿದರು. ಕುಹಕಗಳಿಗೆಲ್ಲಾ ಉತ್ತರವನ್ನು ವಿಜ್ಞಾನಿಗಳು ಈಗಾಗಲೇ ನೀಡಿದ್ದಾರೆ.
ಈ ‘ವೈಜ್ಞಾನಿಕ’ ಚಿಂತಕರ ಪ್ರಮುಖ ತಕರಾರೆಂದರೆ, ವಿಜ್ಞಾನಿಗಳು ದೇವಸ್ಥಾನಗಳಿಗೆ ತೆರಳಿ ತಾವು ತಯಾರಿಸಿದ ಆಯುಧದ ಪೂಜೆ ನೆರವೇರಿಸಿರುವುದು ಎಷ್ಟು ಸರಿ. ವಿಜ್ಞಾನಿಗಳಿಗೆ ವಿಶ್ವದ ಸೃಷ್ಟಿಯ ಕುರಿತು ವೈಜ್ಞಾನಿಕ ಕಾರಣಗಳು ತಿಳಿದಿದ್ದರೂ ಸಹಾ ದೇವರ ಅಸ್ತಿತ್ವವನ್ನು ನಂಬುತ್ತಾರೆ ಮತ್ತು ತಮ್ಮ ವೈಜ್ಞಾನಿಕ ಪ್ರಯೋಗಗಳಲ್ಲಿ ದೇವರ ಕೈವಾಡ ಇದೆ ಎಂದುಕೊಳ್ಳುವುದು ಅಜ್ಞಾನ/ ಮೂಢತೆ ಎಂಬುದವರ ವಾದ. ISRO ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಭಾರತ ಒಂದು ಜಾತ್ಯಾತೀತ ರಾಷ್ಟ್ರ ಎಂಬುದನ್ನು ರಾಧಾಕೃಷ್ಣನ್‍ರವರು ನೆನಪಿಡಬೇಕು ಎಂದು ಅಪ್ಪಣೆ ಹೊರಡಿಸುತ್ತಾರೆ.
ಮೇಲಿನ ತಕರಾರುಗಳು ಭಾರತದ ಕುರಿತ ಈ ಚಿಂತಕರ ಅಜ್ಞಾನವನ್ನೂ, ಅವೈಜ್ಞಾನಿಕತೆಯನ್ನೂ, ಮೌಢ್ಯತೆಯನ್ನೂ ಪ್ರದರ್ಶಿಸುತ್ತಿವೆ. ಈ ಚಿಂತಕರುಗಳು ತಪ್ಪಾದ ‘ಯೂರೋಪಿನ ಗ್ರಹಿಕೆ’ಗಳಿಂದ ಕೂಡಿದ ತಮ್ಮ ವಿವರಣೆಗಳನ್ನೇ ವೈಜ್ಞಾನಿಕ ಎಂದು, ತಾವೇ ವಿಜ್ಞಾನದ ಪಿತಾಮಹರೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಜೊತೆಗೆ ಯೂರೋಪಿನ ಸೆಕ್ಯುಲರ್ ಚಿಂತನೆಯ ನಕಲನ್ನು ಭಾರತದಲ್ಲಿ ವೈಜ್ಞಾನಿಕತೆಯ ಹೆಸರಲ್ಲಿ ವ್ಯಾಪಾರ ಮಾಡುತ್ತಿರುವುದು ಕಂಡುಬರುತ್ತದೆ. ವಿಜ್ಞಾನಿಗಳ ಈ ನಡೆಯನ್ನು ಅವೈಜ್ಞಾನಿಕ, ಮೌಢ್ಯ ಎನ್ನಲು ಕಾರಣ ಅವರ ಆಚರಣೆ ಮತ್ತು ನಂಬಿಕೆಗಳ ನಡುವಿನ ಸಂಬಂಧ. ಅಂದರೆ ಬಾಹ್ಯಾಕಾಶ ನೌಕೆಯ ಉಡಾವಣೆಗೂ ದೇವರ ಮೇಲಿನ ನಂಬಿಕೆಗೂ ಸಂಬಂಧ ಇದೆ ಎಂಬುದು. ದೇವರೇ ಬಂದು ಕ್ಷಿಪಣಿಯನ್ನು ಉಡಾವಣೆ ಮಾಡುತ್ತಾನೆ ಎಂದೇನೂ ವಿಜ್ಞಾನಿಗಳು ನಂಬಿಲ್ಲವಲ್ಲ. ಹಾಗಿದ್ದರೆ ಅವರು ವರ್ಷಗಟ್ಟಲೇ ಶ್ರಮಪಟ್ಟು ತಯಾರಿಸುವ ಅವಶ್ಯಕತೆಯಾದರೂ ಏನಿತ್ತು. ಅಲ್ಲದೇ ಅದಕ್ಕೆ ನಿರ್ದಿಷ್ಟ ಕಾಲಕ್ಕೆ ಬೇಕಾಗುವಷ್ಟು ಇಂಧನವನ್ನು, ಆಧುನಿಕ ತಂತ್ರಜ್ಞಾನವನ್ನು ಬಳಸುವ ಅಗತ್ಯವಾದರೂ ಏಕೆ?