ವಿಷಯದ ವಿವರಗಳಿಗೆ ದಾಟಿರಿ

Archive for

22
ಆಕ್ಟೋ

ದೀಪಾವಳಿ ಅಭ್ಯಂಜನ!

ತುರುವೇಕೆರೆ ಪ್ರಸಾದ್

Deepaಪ್ರತಿವರ್ಷ ದೀಪಾವಳಿ ಬರುತ್ತದೆ, ಹೋಗುತ್ತದೆ. ವರ್ಷದಿಂದ ವರ್ಷಕ್ಕೆ ದೀಪಾವಳಿ ಸಂಭ್ರಮದಲ್ಲಿ ನನ್ನ ಬೆಲೆ ಮಾತ್ರ ನಮ್ಮ ರೂಪಾಯಿ ತರ ಕೆಳಕ್ಕೆ ಕೆಳಕ್ಕೆ ಜಾರುತ್ತಲೇ ಹೋಗುತ್ತಾ ಪಾತಾಳ ಮುಟ್ಟುತ್ತಿದೆ. ಮದುವೆಯಾದ ಹೊಸದರಲ್ಲಿ ಢಂ..ಢಮಾರ್ ಅನ್ನುತ್ತಿದ್ದ ದೀಪಾವಳಿ ಈಗ ಟುಸ್ಸಾಗಿದೆ. ಆಗಿನ ಉಪಚಾರಕ್ಕೂ ಈಗಿನ ಸಂಭ್ರಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹೇಗೆ ಎಂದಿರಾ? ಕೇಳಿ ಹೇಳ್ತೀನಿ..!

ಮದುವೆಯಾದ ಹೊಸದರಲ್ಲಿ ದೀಪಾವಳಿಗೆಂದು ಮಾವನ ಮನೆಗೆ ಹೋದಾಗ ಅದೇನು ಉಪಚಾರ? ಅದೇನು ಗೌರವ..? ಬೆಳಿಗ್ಗೆ ಎದ್ದ ಕೂಡಲೇ ಹೆಂಡತಿ ಟವಲ್ ಹಿಡಿದು ನಗುನಗುತ್ತಾ ಹಿಂದೆಯೇ ಬರುತ್ತಿದ್ದಳು. ಮನೆಯ ಬಾಗಿಲುದ್ದಕ್ಕೂ ಅಕ್ಕ ಪಕ್ಕದಲ್ಲಿಟ್ಟಿರುತ್ತಿದ್ದ ಕೆರಕ( ಸಗಣಿ ಉಂಡೆ) ತುಳಿಯದಂತೆ ಎಚ್ಚರ ವಹಿಸುತ್ತಿದ್ದಳು. ಸಗಣಿಯನ್ನು ಮೈ ಕೈಗೆಲ್ಲಾ ಬಳಿದುಕೊಂಡು ತಟಪಟ ತಟ್ಟುತ್ತಾ ಕೆರಕನ ಸೃಷ್ಟಿಯಲ್ಲಿ ನಿರತರಾಗಿರುತ್ತಿದ್ದ ಚಿಲ್ಟಾರಿಗಳನ್ನು ಏಯ್! ಸ್ವಲ್ಪ ಇರ್ರೋ! ಇವರಿಗೆ ಸಿಡಿಯುತ್ತೆ ಎಂದು ನನ್ನನ್ನು ಸೆರಗಲ್ಲಿ ಮರೆಮಾಡಿಕೊಂಡು ಬಚ್ಚಲಿಗೆ ಕರೆದೊಯ್ಯುತ್ತಿದ್ದಳು. ಒಮ್ಮೆ ಬಾಗಿಲ ಪಕ್ಕ ಇಟ್ಟಿದ್ದ ಇಂತದ್ದೊಂದು ಸಗಣಿ ಉಂಡೆಯನ್ನು ತುಳಿದೇ ಬಿಟ್ಟಿದ್ದೆ. ಆಗಂತೂ ನನ್ನ ಹೆಂಡತಿ ಬಾಂಬ್ ತುಳಿದೆ ಎನ್ನುವಂತೆ ಮನೆಯವರ ಮೇಲೆಲ್ಲಾ ಎಗರಾಡಿ ನನ್ನ ಕಾಲಿಗೆ ಎರಡು ಮೂರು ಟ್ರಿಪ್ ಅಭಿಷೇಕ ಮಾಡಿಸಿ, ಅದಕ್ಕೆ ಘಂ ಎನ್ನುವ ಗಂದದೆಣ್ಣೆ ಪೂಸಿ ಪುಣ್ಯಾಹ ಮಾಡಿ ಸಗಣಿ ವಾಸನೆಯಿಂದ ಮುಕ್ತವಾಗಿಸಿದ್ದಳು.

ಈಗ ಮದುವೆಯಾಗಿ 20 ವರ್ಷಗಳ ನಂತರ ಸೀನೇ ಬೇರೆ! ದೀಪಾವಳಿ ಪ್ರಾರಂಭವಾಗುವುದೇ ನನ್ನ ಸುಗುಣೆ ಹೆಂಡತಿಯ ಸಗಣಿ ಸುಪ್ರಭಾತದಿಂದ! ಏನ್ರೀ! ಇನ್ನು ಮಲಗೇ ಇದೀರಿ? ಸಗಣಿ ಯಾವಾಗ್ರೀ ಹಾಕೋದು?’ ಎಂದು ಕೂಗಿದರೆ ಅಕ್ಕ ಪಕ್ಕದ ಮನೆಯವರು ಏನಂದ್ಕೊಬೇಕು ಹೇಳಿ? ಗಂಡ ಸಗಣಿ ಹಾಕುವ ದನ ಎಂಬ ಸತ್ಯ ಜಗಜ್ಜಾಹೀರಾದರೆ ನನ್ನ ಮರ್ಯಾದೆ ಗತಿ ಏನು ಎಂದು ಇವಳು ಸ್ವಲ್ಪವಾದರೂ ಯೋಚಿಸಿದ್ದಾಳಾ? ನಾನು ಮೇಲೆದ್ದು ಸಗಣಿ ಹಾಕುವ ದನ ಹುಡುಕಿ ಮನೆ ಮನೆ, ಹಟ್ಟಿ ಹಟ್ಟಿ ತಿರುಗಬೇಕಿತ್ತು. ಯಾರದ್ದೋ ಕೊಟ್ಟಿಗೆಯಲ್ಲಿ ಸಗಣಿಗಾಗಿ ಕಾದು ನಿಂತವರ ಹಿಂದೆ ನಿಂತು ದನ ಕೊಟ್ಟಿಗೆಯಲ್ಲಿ ಸಗಣಿ ಹಾಕುವ ತನಕ ಕಾದು ಆ ಸಗಣಿ ಭೂಸ್ಪರ್ಶ ಮಾಡುವ ಮುಂಚೆಯೇ ಡೈವ್ ಹೊಡೆದು ಅದನ್ನು ಅಂಗೈಯಲ್ಲಿ ಹಿಡಿಯಬೇಕಿತ್ತು.ಆಗ ನನಗೆ ಚಿಕ್ಕ ಹುಡುಗನಾಗಿದ್ದಾಗ ಉಡುಸಲಮ್ಮ ಉತ್ಸವದ ಮುಂದೆ ಸೋಮಂಗೆ ಬಾಳೆಹಣ್ಣಿನ ರಸಾಯನ ಮಣೆ ಹಾಕಿದಾಗ ಹುಡುಗರು ಅದಕ್ಕೆ ಮುಗಿ ಬೀಳುತ್ತಿದ್ದುದು ನೆನಪಾಗುತ್ತಿತ್ತು. ದೇವರೇ ಎಂತ ಕಾಲ ಬಂತಪ್ಪ ? ಎಂದು ಸಗಣಿಯನ್ನು ಎರಡೂ ಕೈಲಿ ಹಿಡಿದು ಬರುವಾಗ ದಾರಿಯುದ್ದಕ್ಕೂ ಆಂಟಿಯರು ಕಿಸಕ್ಕನೇ ನಗುತ್ತಿದ್ದರು. ಕೆಲವರಂತೂ ತಲೆಲಿರೋದನ್ನ ಕೈಗೆ ಯಾಕೆ ತಕ್ಕೊಂಡ್ರಿ?’ ಅಂತ ತಮಾಷೆ ಮಾಡಿದ್ದೂ ಇತ್ತು. ಇನ್ನು ಕೆಲವರು ಆಂಟಿಯರು ದಡಾರನೆ ಮನೆಯಿಂದಾಚೆ ಹೊಸಲು ದಾಟಿ ಓಡಿ ಬಂದು ಅಂಕಲ್! ಒಂದು ಗಜುಗ ಸಗಣಿ ಕೊಡ್ತೀರಾ? ನಮ್ಮೆಜಮಾನರು ಸಗಣಿ ಹುಡುಕಿಕೊಂಡು ಎಲ್ಲಿ ಹಾಳಾಗಿ ಹೋದ್ರೋ! ಇನ್ನೂ ಬಂದಿಲ್ಲ ಎಂದು ಸಗಣಿ ಹುಡುಕಲು ಹೋದ ಗಂಡಂದಿರಿಗೆ ಹಿಡಿಶಾಪ ಹಾಕುತ್ತಾ ನನ್ನ ಕೈಯ್ಯಿಂದ, ಮೊರದಿಂದ ಸಗಣಿ ಬಾಚಿಕೊಂಡು ಹೋಗುತ್ತಿದ್ದರು.

Read more »