ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
– ವಿನಾಯಕ ಹಂಪಿಹೊಳಿ
ತರ್ಕ ಮನುಷ್ಯನಿಗಿರುವ ಒಂದು ಅತ್ಯುತ್ತಮ ಸಾಧನ. ಇದನ್ನು ಆಧರಿಸಿ ಮಾನವ ತನ್ನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ವಿಜ್ಞಾನವಂತೂ ತರ್ಕದ ಆಧಾರದ ಮೇಲೆಯೇ ಬೆಳೆದಿರುವಂಥದ್ದು. ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕಕ್ಕೆ ವಿಜ್ಞಾನದಂತೆ ಮೊದಲನೇ ಪ್ರಾಶಸ್ತ್ಯವಿಲ್ಲವಾದರೂ, ತರ್ಕವನ್ನು ಸಂಪೂರ್ಣವಾಗಿ ಬಿಟ್ಟು ನಿಂತಿಲ್ಲ. ಪಾಶ್ಚಿಮಾತ್ಯ ರಿಲಿಜನ್ನುಗಳಿಗೂ ಭಾರತೀಯ ದರ್ಶನಗಳಿಗೂ ಇರುವ ಮುಖ್ಯ ವ್ಯತ್ಯಾಸ ಈಗಾಗಲೇ ನಿಲುಮೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಹೀಗಾಗಿ ಅವುಗಳ ವ್ಯತ್ಯಾಸದ ಕಡೆಗೆ ಹೆಚ್ಚು ಗಮನ ಕೊಡದೇ ಇವೆರಡರಲ್ಲೂ ತರ್ಕದ ಸ್ಥಾನವೇನು ಎಂಬುದರ ಬಗ್ಗೆ ಚರ್ಚಿಸೋಣ.
ವಿಜ್ಞಾನದಲ್ಲಿ ತರ್ಕ:
ಗಣಿತೀಯ ತರ್ಕ ಪದ್ಧತಿಯನ್ನು ವಿಜ್ಞಾನ ಅಳವಡಿಸಿಕೊಂಡಿದೆ. ಗಣಿತೀಯ ತರ್ಕದಲ್ಲಿ ’ಅಥವಾ’, ’ಮತ್ತು’, ’ಆದರೆ’ ಮುಂತಾದ ಸಂಬಂಧಗಳು ಮುಖ್ಯವಾಗಿರುತ್ತವೆ. ಎಲ್ಲ ವೈಜ್ಞಾನಿಕ ಸಿದ್ಧಾಂತಗಳೂ ಒಂದು ಗಣಿತೀಯ ತರ್ಕವೊಂದನ್ನು ಸಾಧಿಸಲು ಪ್ರಯತ್ನಿಸುತ್ತವೆ. ಕಾರಣ ಗಣಿತೀಯ ತರ್ಕದಿಂದ ಸಾಧಿಸಲ್ಪಟ್ಟ ಸಿದ್ಧಾಂತಗಳಲ್ಲಿ ಮೂಲ ಊಹೆಯು ತಪ್ಪಾಗಿಲ್ಲದಿದ್ದ ಪಕ್ಷದಲ್ಲಿ ಸಿದ್ಧಾಂತವು ಎಂದಿಗೂ ಸುಳ್ಳಾಗದು. ಐನ್ಸ್ಟೈನರ ಮಾತುಗಳಲ್ಲಿ ಹೇಳುವದಾದರೆ “ವೈಜ್ಞಾನಿಕ ಸಿದ್ಧಾಂತವೆಂಬುದು ಕೇವಲ ಕೆಲವೇ ಊಹೆಗಳನ್ನಾಧರಿಸಿ ನಿರ್ಮಿಸಿದ ಗಣಿತೀಯ ಮಾದರಿ”. ಉದಾಹರಣೆಗಾಗಿ ಅವರ ಸಾಪೇಕ್ಷತಾ ಸಿದ್ಧಾಂತವನ್ನೇ ತೆಗೆದುಕೊಳ್ಳೋಣ. ಅದರಲ್ಲಿ ಅವರು ಮಾಡಿದ ಊಹೆಗಳು ಎರಡೇ. ಮೊದಲನೇಯದು ಭೌತಿಕ ಕ್ರಿಯೆಗಳು ಎಲ್ಲ ರೀತಿಯ ಕಲ್ಪಿತ ಚೌಕಟ್ಟುಗಳಲ್ಲಿ ಒಂದೇ ತೆರನಾಗಿ ಅನ್ವಯವಾಗುತ್ತವೆ. ಎರಡನೇಯದು ಬೆಳಕಿನ ವೇಗ ಆ ಎಲ್ಲ ರೀತಿಯ ಕಲ್ಪಿತ ಚೌಕಟ್ಟುಗಳಲ್ಲಿ ಒಂದೇ ಆಗಿರುತ್ತದೆ. ಎಲ್ಲಿಯವರೆಗೆ ಈ ಊಹೆಗಳನ್ನು ನಿರಾಕರಿಸುವ ಪ್ರಕರಣಗಳು ಬೆಳಕಿಗೆ ಬರುವದಿಲ್ಲವೋ ಅಲ್ಲಿಯವರೆಗೂ ಸಾಪೇಕ್ಷತಾ ಸಿದ್ಧಾಂತ ಸತ್ಯವೇ.
ಇಲ್ಲಿ ಇನ್ನೊಂದು ಅಂಶವನ್ನು ಗಮನದಲ್ಲಿಡಬೇಕು. ನ್ಯೂಟನ್ನಿನ ಸಿದ್ಧಾಂತಕ್ಕೆ ಇತಿಮಿತಿಗಳು ಗೊತ್ತಾದಾಗ ಐನ್ಸ್ಟೈನ್ ಸಾಪೇಕ್ಷತಾ ಸಿದ್ಧಾಂತವನ್ನು ಮುಂದಿಟ್ಟರು. ಅದರರ್ಥ ನ್ಯೂಟನ್ನಿನ ಸಿದ್ಧಾಂತ ಅವೈಜ್ಞಾನಿಕವೆಂದಲ್ಲ. ಈಗಲೂ ಬಾಹ್ಯಾಕಾಶ ಸಂಸ್ಥೆಗಳು ನ್ಯೂಟನ್ನಿನ ನಿಯಮಗಳನ್ನೇ ಅನುಸರಿಸಿ ಉಪಗ್ರಹಗಳನ್ನು ಉಡಾಯಿಸುತ್ತವೆ. ಕೇವಲ ಗುರುತ್ವ ಶಕ್ತಿಯ ಪ್ರಭಾವ ಸೂಕ್ಷ್ಮಕಣಗಳ ಮೇಲೆ ಹೇಗಾಗುತ್ತದೆ ಎಂಬುದನ್ನು ಅರಿಯಲಷ್ಟೇ ಸಾಪೇಕ್ಷತಾ ಸಿದ್ಧಾಂತವನ್ನು ಅನುಸರಿಸಲಾಗುತ್ತದೆ. ಹೀಗಾಗಿ ವಿಜ್ಞಾನಕ್ಕೆ ಅತ್ಯಂತ ಸತ್ಯವಾದ ಸಿದ್ಧಾಂತಕ್ಕಿಂತ, ಕರಾರುವಾಕ್ಕಾಗಿ ಲೆಕ್ಕ ಮಾಡುವ ಮಾದರಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತದೆ. ಬೆಳಕು ಕಣವೇ ಅಥವಾ ತರಂಗವೇ ಎಂಬ ಜಿಜ್ಞಾಸೆಗೆ ಹೋಗದೇ ಯಾವ ಊಹೆಯನ್ನಿಟ್ಟುಕೊಂಡರೆ ಪ್ರಸಕ್ತ ಪ್ರಸಂಗಗಳನ್ನು ಗಣಿತೀಯವಾಗಿ ವಿವರಿಸಲು ಸಾಧ್ಯವೋ ಹಾಗೇ ಊಹಿಸಿ ಮುನ್ನಡೆಯುತ್ತದೆ. ಹೀಗಾಗಿ ವಿಜ್ಞಾನ ಮತ್ತು ವೈಜ್ಞಾನಿಕ ಅನ್ವೇಷಣೆಗಳಿಗೆ ಹೆಚ್ಚು ಮಹತ್ವ ಬಂದಿದೆ ಎಂದರೂ ತಪ್ಪಾಗಲಾರದು.
ಇನ್ನೊಂದು ಉದಾಹರಣೆ ಕೊಟ್ಟು ನೋಡಬಹುದು. ಸುನಾಮಿ, ಭೂಕಂಪದಂಥ ನೈಸರ್ಗಿಕ ಆಪತ್ತುಗಳು ಬರುವ ಮುಂಚೆಯೇ ಕೆಲವು ಪಕ್ಷಿಗಳು ಮತ್ತು ಪ್ರಾಣಿಗಳು ಅಂಥ ಜಾಗಗಳನ್ನು ಬಿಟ್ಟು ದೂರ ಓಡಿರುವದನ್ನು ಅನೇಕರು ಕಂಡುಕೊಂಡಿದ್ದಾರೆ. ಇದಕ್ಕೆ ಕಾರಣವನ್ನು ಹುಡುಕುವದು ಅವಶ್ಯಕ ಕಾರಣ ಅದನ್ನು ಅರಿತರೆ ಮನುಷ್ಯರೂ ರಕ್ಷಿಸಿಕೊಳ್ಳಬಹುದು. ಇದಕ್ಕೆ ಭಗವಂತ ಪ್ರಾಣಿಗಳ ಬಳಿ ಬಂದು ಇಲ್ಲಿಂದ ಹೋಗಿ ಎಂದು ಅಪ್ಪಣೆ ಕೊಟ್ಟಿದ್ದಾನೆ ಎಂದು ಹೇಳಿ ಕಾರಣ ನೀಡಬಹುದು. ಆದರೆ ಇದನ್ನು ಗಣಿತೀಯವಾಗಿ ಸಾಧಿಸಲಾಗದು. ಗಣಿತೀಯ ಆಧಾರದ ಮೇಲೆ ಸಾಧಿಸಲು ಸಾಧ್ಯವೇ ಹಾಗಿದ್ದರೆ?
ಖಂಡಿತ ಸಾಧ್ಯವಿದೆ. ಭೂಕಂಪದ ಉದಾಹರಣೆ ತೆಗೆದುಕೊಳ್ಳೋಣ. ಭೂಕಂಪವಾದಾಗ, ಶಬ್ದಗಳು ಭೂಗರ್ಭದಲ್ಲಿ ಉತ್ಪತ್ತಿಯಾಗುತ್ತವೆ. ಹೆಚ್ಚು ಕಂಪನಾಂಕವುಳ್ಳ ಶಬ್ದಗಳು ಅಲ್ಲಿಯೇ ಶಮನಗೊಳ್ಳುತ್ತವೆ. ಆದರೆ ಹೆಚ್ಚು ತರಂಗಾಂತರವುಳ್ಳ ಶಬ್ದಗಳು ಭೂಮೇಲ್ಮೈವರೆಗೂ ಪಸರಿಸುತ್ತವೆ. ಮನುಷ್ಯರ ಕಿವಿ ಅವುಗಳನ್ನು ಕೇಳಿಸಿಕೊಳ್ಳಲಾರದು. ಆದರೆ ಪ್ರಾಣಿಗಳ ಕಿವಿ ಇಂಥ ಸೂಕ್ಷ್ಮ ತರಂಗಗಳನ್ನು ಆಲಿಸಬಲ್ಲವು. ಇದೇ ವಿವರಣೆಯನ್ನು ಗಣಿತೀಯ ಸಮೀಕರಣಗಳ ಮೂಲಕ ಸಾಧಿಸುವದು ಅತ್ಯಂತ ಸುಲಭ.
ಈಗ ನಮ್ಮ ಮುಂದೆ ಎರಡು ಮಾದರಿಗಳಿವೆ, ಒಂದು ಭಗವಂತ ಅವುಗಳಿಗೆ ಅಪ್ಪಣೆ ಕೊಟ್ಟಿದ್ದಾನೆ ಎಂಬ ಭಾವ-ನಂಬಿಕೆಯಿಂದ ಬೆಳೆದ ಅಗಣಿತೀಯ ಮಾದರಿ. ಇನ್ನೊಂದು ವೈಜ್ಞಾನಿಕವಾದ ಗಣಿತೀಯ ಮಾದರಿ. ಈ ಎರಡು ಮಾದರಿಗಳಲ್ಲಿ ಸತ್ಯ ಯಾವದು ಎಂಬುದಕ್ಕಿಂತ ಹೆಚ್ಚು ಮುಖ್ಯ ಯಾವ ಮಾದರಿ ಮನುಷ್ಯರಿಗೆ ಹೆಚ್ಚು ಸಹಾಯಕ ಎಂಬುದು. ಮೊದಲನೇ ಮಾದರಿ ಸತ್ಯವೋ ಸುಳ್ಳೋ ಗೊತ್ತಿಲ್ಲ ಏಕೆಂದರೆ ಪ್ರಾಣಿಗಳ ಅನುಭವ ಪ್ರಾಣಿಗಳೇ ಹೇಳಬೇಕು. ನಾವೇನಿದ್ದರೂ ಊಹಿಸಬಹುದು. ಆದರೆ, ಖಂಡಿತ ಎರಡನೇ ಮಾದರಿಯೇ ಹೆಚ್ಚು ಸಹಾಯಕ ಏಕೆಂದರೆ ಪ್ರಾಣಿ ಪಕ್ಷಿಗಳಿಲ್ಲದಿರುವ ಪ್ರದೇಶಗಳಲ್ಲಿ ಇಂಥ ಸೂಕ್ಷ್ಮ ತರಂಗಗಳನ್ನು ಪತ್ತೆ ಹಚ್ಚುವ ಯಂತ್ರಗಳನ್ನು ನಿರ್ಮಿಸುವದು ಮನುಷ್ಯನಿಗೆ ಕಷ್ಟವೇನಲ್ಲ. ಮತ್ತು ಅಂಥ ಯಂತ್ರಗಳಿಂದ ಪೂರ್ವ ಮುನ್ಸೂಚನೆ ಪಡೆದು ಜೀವ ರಕ್ಷಣೆ ಮಾಡಿಕೊಳ್ಳುವದೂ ದುಸ್ತರವೇನಲ್ಲ. ಹೀಗಾಗಿ ರಿಲಿಜನ್ನು ದರ್ಶನಗಳನ್ನೂ ಮೀರಿ ಇಂದು, ವಿಜ್ಞಾನ ಹೆಚ್ಚು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಕಾರಣ ಅದು ಅನುಸರಿಸುವದು ಕರಾರುವಾಕ್ಕಾದ ಗಣಿತೀಯ ತಾರ್ಕಿಕ ಪದ್ಧತಿ.
ಕೆಲವೊಮ್ಮೆ ಗಣಿತೀಯವಲ್ಲದ ತರ್ಕವೂ ವಿಜ್ಞಾನದ ದಿಕ್ಕನ್ನು ಬದಲಿಸಿದ ಉದಾಹರಣೆಗಳಿವೆ. ಉದಾಹರಣೆಗೆ, ನ್ಯೂಟನ್ ತನ್ನ ವಿಶ್ವದ ಮಾದರಿಯನ್ನು ಮುಂದಿಟ್ಟಾಗ ಆ ವಿಶ್ವಕ್ಕೆ ಉದಯ-ವಿಕಸನ-ನಾಶಗಳು ಇರಲಿಲ್ಲ. ಅದು ಒಂದು ಅನಂತ ನಕ್ಷತ್ರಗಳು ಪರಸ್ಪರರ ಆಕರ್ಷಣೆಯಿಂದಾಗಿ ಸ್ಥಿರವಾಗಿ ನಿಂತ ಮಾದರಿಯಾಗಿತ್ತು. ಇಲ್ಲಿ ಕಾಲವು ಅನಂತವಾಗಿತ್ತು. ಆದರೆ ಓಲ್ಬರ್ ಮುಂತಾದ ತತ್ತ್ವಶಾಸ್ತ್ರಜ್ಞರು ಇಲ್ಲಿ ತಮ್ಮ ತರ್ಕವನ್ನು ಮುಂದೊಡ್ಡಿದರು. ಒಂದು ವೇಳೆ ಕಾಲವು ಅನಾದಿಯಾದರೆ, ನಕ್ಷತ್ರಗಳ ಉರಿಯುವಿಕೆಯೂ ಅನಾದಿ ಅನಂತವಾಗಬೇಕಲ್ಲವೇ? ಆದರೆ ಹಾಗಿಲ್ಲ, ನಕ್ಷತ್ರಗಳ ಗಾತ್ರ ಅನಂತವಲ್ಲ, ಅವುಗಳಿಗೆ ಹುಟ್ಟು ಸಾವುಗಳಿವೆ. ಮುಂದೊಂದು ದಿನ ನಕ್ಷತ್ರಗಳ ಇಂಧನ ಖಾಲಿಯಾಗುತ್ತದೆ. ಅನಾದಿ ಕತ್ತಲೆ ಮತ್ತು ಅನಂತ ಕತ್ತಲೆಗಳ ಮಧ್ಯೆ ಅಲ್ಪಕಾಲದ ನಕ್ಷತ್ರಗಳ ಬೆಳಕು ಏಕೆ ಇರಬೇಕು. ಅಲ್ಲದೇ ಅನಾದಿಕಾಲದಿಂದ ಹೊತ್ತುರಿಯದ ನಕ್ಷತ್ರ ಒಮ್ಮೆಲೇ ಏಕೆ ಹೊತ್ತುರಿಯುತ್ತಿದೆ? ಇದನ್ನು ಉತ್ತರಿಸಲಾಗದ ಕಾರಣ ನ್ಯೂಟನ್ನಿನ ವಿಶ್ವದ ಮಾದರಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತರ್ಕವನ್ನೊಡ್ಡಿದ್ದರು. ಇದೇ ತರ್ಕವೇ ಮುಂದೆ ನ್ಯೂಟನ್ನಿನ ಸಿದ್ಧಾಂತದಲ್ಲಿನ ಇತಿಮಿತಿಗಳನ್ನು ಹುಡುಕಲು ಮತ್ತು ಸಾಪೇಕ್ಷತಾ ಸಿದ್ಧಾಂತ ಮತ್ತು ತನ್ಮೂಲಕ ಮಹಾಸ್ಫೋಟ ಸಿದ್ಧಾಂತಕ್ಕೆ ನಾಂದಿ ಹಾಡಿತು. ಯೂಕ್ಲಿಡಿಯನ್ ಆಕಾಶದ ಕಲ್ಪನೆಯಿಂದ ರೀಮನ್ ಆಕಾಶ ಮತ್ತು ಹಿಲ್ಬರ್ಟ್ ಆಕಾಶದ ಕಲ್ಪನೆಯತ್ತ ವಿಜ್ಞಾನ ಮುಂದುವರೆಯಿತು.
ವಿಜ್ಞಾನದ ಒಂದು ಸಂಗತಿಯನ್ನು ನಾವು ಮೆಚ್ಚಲೇಬೇಕು. ಒಬ್ಬ ವಿಜ್ಞಾನಿಯ ಸಿದ್ಧಾಂತ ತಪ್ಪೆಂದು ಸಾಬೀತಾದಲ್ಲಿ, ಅಥವಾ ತರ್ಕಬದ್ಧವಾಗಿಲ್ಲದಿದ್ದಲ್ಲಿ, ಆ ವಿಜ್ಞಾನಿ ಅದನ್ನು ಒಪ್ಪಿಕೊಳ್ಳುತ್ತಾನೆ. ಉದಾಹರಣೆಗೆ ಕ್ವಾಂಟಂ ಸಿದ್ಧಾಂತ ಹೊಸದಾಗಿ ಬಂದಾಗ ಅದರಲ್ಲಿ ಸಂಭವನೀಯತೆ, ಅನಿಶ್ಚಿತತೆ ಐನ್ಸ್ಟೈನರಿಗೆ ಇಷ್ಟವಾಗಿರಲಿಲ್ಲ. “ದೇವರು ಪಗಡೆಯಾಡುವದಿಲ್ಲ” ಎಂದು ಅನಿಶ್ಚಿತತೆಯನ್ನು ಸಾರುವ ಸಿದ್ಧಾಂತಗಳನ್ನು ವಿರೋಧಿಸಿದರು. ಆದರೆ ತಮ್ಮ ಸಾಪೇಕ್ಷ ಸಿದ್ಧಾಂತದ ಇತಿಮಿತಿಗಳನ್ನು ಮೀರಿ ನಿಂತ ಆ ಸಿದ್ಧಾಂತವನ್ನು ಮನಗಂಡು ಅದನ್ನು ಒಪ್ಪಿಕೊಂಡು ಅದರಲ್ಲಿ ತಮ್ಮ ಅನ್ವೇಷಣೆಯನ್ನು ಮುಂದುವರೆಸಿದರು. ವಿಜ್ಞಾನಿ ಯಾವತ್ತೂ ತನ್ನ ನಂಬಿಕೆಗೆ ಗಂಟು ಬೀಳುವದಿಲ್ಲ. ರಿಲಿಜನ್ನುಗಳು ವಿಶ್ವದ ಉಗಮವನ್ನು ಹೇಳುತ್ತಿದ್ದವು. ಆದರೆ ವಿಜ್ಞಾನ ಸ್ಥಿರ-ವಿಶ್ವದ ಮಾದರಿಯನ್ನು ಮುಂದೊಡ್ಡಿತ್ತು. ಯಾವಾಗ ವಿಜ್ಞಾನಕ್ಕೆ ಸ್ಥಿರ-ವಿಶ್ವದ ಮಾದರಿಯಲ್ಲಿ ಇತಿಮಿತಿಗಳು ಕಂಡು ಬಂದವೋ, ವಿಶ್ವದ ಉಗಮಕ್ಕೆ ಸೂಕ್ತ ಆಧಾರಗಳು ದೊರಕಿತೋ, ಆ ಕ್ಷಣವೇ, ವಿಶ್ವದ ಉಗಮದ ಸಿದ್ಧಾಂತವನ್ನು ಒಪ್ಪಿಕೊಂಡಿತು. ನಿಜವಾಗಿಯೂ ಇದು ಆರೋಗ್ಯಕರವಾದ ಬೆಳವಣಿಗೆ.
ಆದರೆ ಗಣಿತೀಯ ತಾರ್ಕಿಕ ವ್ಯವಸ್ಥೆಯಿಂದ ಆಚೆಯಿರುವ ಪ್ರಕ್ರಿಯೆಗಳ ಬಗ್ಗೆ ವಿಜ್ಞಾನವು ಯೋಚಿಸುವ ಗೊಡವೆಗೇ ಹೋಗುವದಿಲ್ಲ. ಉದಾಹರಣೆಗೆ ಗಂಡು ಹೆಣ್ಣಿನ ಆಕರ್ಷಣೆಯ ಕಾರಣವನ್ನು ಅದು ರಾಸಾಯನಿಕ ಕ್ರಿಯೆಗಳಿಗಳಿಂದಾಚೆ ವಿವರಿಸಲು ಹೋಗುವದಿಲ್ಲ. ಜೀವವಿಜ್ಞಾನವೂ ದೇಹವನ್ನು ಭೌತಿಕ-ರಾಸಾಯನಿಕ ಕ್ರಿಯೆಗಳ ಮಿಶ್ರಣ ಎಂದೇ ತಿಳಿಯುತ್ತದೆ. ಜೈವಿಕ ಕ್ರಿಯೆಗಳಲ್ಲಿನ ಏಕತಾನತೆಯ ಅಧ್ಯಯನ ಅದರ ಅವಶ್ಯಕತೆಯಲ್ಲ. ಡಿ.ಎನ್.ಎ. ಎನ್ನುವದು ಎ,ಟಿ,ಜಿ,ಸಿ,ಯು ಎಂಬ ರಾಸಾಯನಿಕಗಳ ಸರಪಳಿ. ಹಾಗಂತ ನಾವೇ ಒಂದು ಸರಪಳಿ ರಾಸಾಯನಿಕವಾಗಿ ಮಾಡಿಟ್ಟರೆ ಅದು ಡಿ.ಎನ್.ಎ. ಆಗುವದಿಲ್ಲ. ಅದರ ಕಾರಣ ಏನೆಂಬುದು ಜೈವಿಕ ವಿಜ್ಞಾನಕ್ಕೆ ಬೇಕಾಗಿಲ್ಲ. ಮನಸ್ಸಿನ ಭಾವನೆಗಳು, ಜಗತ್ತಿನ ಹುಟ್ಟಿಗೆ ಕಾರಣಗಳು ಇಂಥವುಗಳ ಅಧ್ಯಯನಕ್ಕೆ ತೊಡಗುವದಿಲ್ಲ. ಮನೋವಿಜ್ಞಾನವೆಂಬ ಶಾಸ್ತ್ರ ಇರುವದಾದರೂ ಕೂಡ ಅದು ಗಣಿತೀಯ ತರ್ಕವನ್ನು ಅನುಸರಿಸುವದಿಲ್ಲ, ಮನಸ್ಸಿನ ಗಣಿತೀಯ ಸಮೀಕರಣ ಹಾಕುವದಿಲ್ಲ. ಮತ್ತು ಮನೋವಿಜ್ಞಾನದ ಸಿದ್ಧಾಂತಗಳು ಕೆಲವೇ ಕೆಲವು ಊಹೆಗಳನ್ನಾಧರಿಸಿ ನಿರ್ಮಿಸಲ್ಪಟ್ಟಿರುವದೂ ಅಲ್ಲ. ಹೀಗೆಯೇ ಸಮಾಜವಿಜ್ಞಾನವೂ ಕೂಡ ಗಣಿತೀಯ ಪದ್ಧತಿಯನ್ನು ಅನುಸರಿಸುವದಿಲ್ಲ.
ಹೀಗಾಗಿ ವಿಜ್ಞಾನ ಚೆನ್ನಾಗಿ ಬೆಳೆದಮೇಲೂ ಕೂಡ ರಿಲಿಜನ್ನುಗಳು ದರ್ಶನಗಳು ಇನ್ನೂ ಸಮಾಜದಿಂದ ಮರೆಯಾಗಿಲ್ಲ. ಕಾರಣ ಕೇವಲ ಗಣಿತವನ್ನನುಸರಿಸುವ ಭೌತ ಜಗತ್ತೊಂದೇ ಪ್ರಪಂಚವಲ್ಲ. ಜೀವನದಲ್ಲಿನ ಘಟನೆಗಳು, ಸಮಸ್ಯೆಗಳು, ಇವುಗಳಿಗೂ ಮನುಷ್ಯ ಕಾರಣ ಹುಡುಕುತ್ತಾನೆ. ಮನುಷ್ಯನ ಸಮಸ್ಯೆಗಳು ಕೇವಲ ಭೌತಿಕವಲ್ಲ. ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಗಾಗಿ ಹಲವಾರು ಕಾನೂನು, ನಿಯಮಗಳನ್ನು ಹಾಕಿಕೊಳ್ಳುತ್ತಾನೆ. ಅಂಥ ನಿಯಮಗಳಿಗೂ ಸರಿಯಾದ ತರ್ಕವೊಡ್ಡುತ್ತಾನೆ. ಇಲ್ಲಿ ರಿಲಿಜನ್ನುಗಳು ಮತ್ತು ದರ್ಶನಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
Trackbacks & Pingbacks