ವಿಷಯದ ವಿವರಗಳಿಗೆ ದಾಟಿರಿ

ಜೂನ್ 24, 2015

3

ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಭಾರತೀಯ ಶಿಕ್ಷಣ ವ್ಯವಸ್ಥೆಅಂಡಮಾನ್ ದ್ವೀಪದ,’ಬೋ’ ಎಂಬ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರ ಹೆಸರು ಬೋ ಎಸ್ಸರ್.ಈಕೆ ‘ಬೋ’ ಭಾಷೆ ಮಾತನಾಡಬಲ್ಲ ಬುಡಕಟ್ಟು ಜನಾಂಗದ ಕೊನೆಯ ಕೊಂಡಿಯಾಗಿದ್ದರು.೨೦೧೦ರಲ್ಲಿ,ತನ್ನ ೮೫ನೇ ವಯಸ್ಸಿನಲ್ಲಿ ಬೋ ಎಸ್ಸರ್ ಮರಣಹೊಂದುವುದರೊಂದಿಗೆ “ಬೋ” ಎಂಬ ಬುಡಕಟ್ಟು ಭಾಷೆಯೂ ಮಣ್ಣಾಯಿತು.ಭಾರತದಂತಹ ಸಾವಿರಾರು ಭಾಷೆಗಳಿರುವ ನೆಲದಲ್ಲಿ ಇಂತ ಅದಿನ್ನೆಷ್ಟು ಭಾಷೆಗಳು ಹೀಗೆ ಮಣ್ಣಾಗಿವೆಯೋ ಗೊತ್ತಿಲ್ಲ.ಒಂದು ಭಾಷೆ ಮಣ್ಣಾಗುವುದೊರೊಂದಿಗೆ ಆ ಭಾಷೆಯ ಜೊತೆಗೆ ಬೆಸೆದುಕೊಂಡ ಸಂಸ್ಕೃತಿ,ಆಚರಣೆಗಳು,ನೋವು,ನಲಿವುಗಳೂ ಮಣ್ಣಾಗುತ್ತವೆ.

ಭಾರತದಂತ ಅಗಾಧ ವೈವಿಧ್ಯಮಯ ದೇಶದಲ್ಲಿ ಭಾಷೆಯ ಕುರಿತ ಚರ್ಚೆಗಳಲ್ಲಿ ಎದ್ದು ಕಾಣುವುದು,ಈ ದೇಶಕ್ಕೊಂದು ರಾಷ್ಟ್ರ ಭಾಷೆಯ ಅಗತ್ಯವಿದೆಯೇ ಅಥವಾ ಲಿಂಕಿಂಗ್ (ಸಂವಹನ) ಭಾಷೆಯ ಅಗತ್ಯವಿದೆಯೇ ಎನ್ನುವುದು.ಇದರ ಜೊತೆಗೆ ಶಿಕ್ಷಣದ ಮಾಧ್ಯಮ ಯಾವುದಿರಬೇಕು ಎನ್ನುವ ವಿಷಯ ಬಂದಾಗ,ಚರ್ಚೆಯನ್ನು ಎರಡು ಹಾದಿಯಲ್ಲಿ ತಂದು ನಿಲ್ಲಿಸಬಹುದು.

ಪರಿಸರದ ಭಾಷೆಯಲ್ಲಿ ಶಿಕ್ಷಣ ನೀಡುವುದು ಒಂದು ಹಾದಿಯಾದರೇ,ಇನ್ನೊಂದು ಹಾದಿ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಮತ್ತು ಅದರ ಲಾಭ.

ಸಂವಹನ ಭಾಷೆಯಾಗಿ ಮತ್ತು ಶಿಕ್ಷಣದ ಮಾಧ್ಯಮವಾಗಿ ಇಂಗ್ಲೀಷ್

ರಾಷ್ಟ್ರಭಾಷೆಯ ಕುರಿತು ಈ ದೇಶದಲ್ಲಿ ಚರ್ಚೆಯಾದಗಲೆಲ್ಲ ಒಂದು ಗುಂಪು, ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಪರಿಗಣಿಸಬೇಕು ಎಂದರೆ,ಇನ್ನೊಂದು ಗುಂಪು ಈ ರಾಷ್ಟ್ರಕ್ಕೆ ರಾಷ್ಟ್ರಭಾಷೆಯ ಅಗತ್ಯವಿಲ್ಲ.ಸಂವಹನ ಭಾಷೆ (ಲಿಂಕಿಂಗ್ ಲಾಂಗ್ವೇಜ್)ಯಾಗಿ ಇಂಗ್ಲೀಷ್ ಇರಲಿ ಎಂದು ವಾದಿಸುತ್ತಾರೆ. ಇಂಗ್ಲೀಷನ್ನು ಸಂವಹನ ಭಾಷೆ ಎಂದು ನಮ್ಮ ಸಂವಿಧಾನದಲ್ಲಿ ಒಪ್ಪಿಕೊಳ್ಳಲಾಗಿದೆ.ಇದರಿಂದ ಭಾರತದ ಅಷ್ಟೂ ಜನ ಸಾಮಾನ್ಯರೆಲ್ಲ ಇಂಗ್ಲೀಷಿನಲ್ಲಿ ಪರಸ್ಪರ ಸಂವಾದ ಮಾಡಿಕೊಳ್ಳುತಿದ್ದಾರೇನು ಎಂದು ನೋಡಿದರೆ,ವಾಸ್ತವ ಹಾಗೇನಿಲ್ಲ ಎಂದು ತಿಳಿಯುತ್ತದೆ.ಇಂಗ್ಲೀಷ್ ಎಂಬುದು ಓದಿಕೊಂಡ ವರ್ಗಗಳು ‘ ಕಾರ್ಪೋರೇಟುಗಳಲ್ಲಿ,ದೊಡ್ಡ ದೊಡ್ಡ ನಗರಗಳಲ್ಲಿ,ಸರ್ಕಾರದ ಕಡತಗಳಲ್ಲಿ,ಹೈಕೋರ್ಟು,ಸುಪ್ರೀಂ ಕೋರ್ಟುಗಳಲ್ಲಿ” ಸಂವಾದಿ ಭಾಷೆಯಾಗಿ ಬಳಕೆಯಾಗುತ್ತದೆ.ಉಳಿದಂತೆ,ಭಾರತದ ಜನಸಾಮಾನ್ಯರು ಬಳಸುವುದು ಅವರವರಿಗೆ ತಿಳಿದ ಭಾಷೆಯನ್ನೇ.ಹೀಗಿದ್ದರೂ ಇಂಗ್ಲೀಷ್ ನಮ್ಮನ್ನು ಬೆಸೆಯುತ್ತದೆ ಎನ್ನುವುದೋ ಅಥವಾ ಬಹುಜನರು ಮಾತನಾಡುವ ಭಾಷೆಯೇ ಎಲ್ಲರ ಸಂವಾದಿ ಭಾಷೆಯಾಗಬೇಕು ಎನ್ನುವುದೋ ಎಷ್ಟು ಸರಿ? ಈ “ಇಂಗ್ಲೀಷ್ ಮತ್ತು ಹಿಂದಿ” ಎರಡರಾಚೆಗೆ ಭಾರತದ ಭಾಷಾ ಚರ್ಚೆ ಸಾಗಲಾರದೇ? ಆ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಿದೆ.

ಇಂಗ್ಲೀಷ್ ಅನ್ನು ಸಂವಹನ ಭಾಷೆಯಾಗಿ (ಲಿಂಕಿಂಗ್ ಲಾಂಗ್ವೇಜ್) ಮತ್ತು ಶಿಕ್ಷಣ ಮಾಧ್ಯಮವಾಗಿ ಬೆಂಬಲಿಸುವವರ ವಾದವೇನೆಂದರೆ,ಇವತ್ತು ಇಂಗ್ಲೀಷ್ ಎನ್ನುವುದು ಅನ್ನಕೊಡುವ ಭಾಷೆಯಾಗಿದೆ ಮತ್ತು ಜಗತ್ತಿನ ಜೊತೆ ಭಾರತ ಸಂವಾದಿಯಾಗಲು ಸಹಾಯಕವಾಗಿದೆ ಎನ್ನುವುದು.ಅಂದರೆ, ಭಾರತದಲ್ಲಿ ಇಂಗ್ಲೀಷ್ ಮಾಧ್ಯಮದ ಶಿಕ್ಷಣವಿರುವುದರಿಂದಲೇ ಭಾರತ ಈ ಪರಿ ಅಭಿವೃದ್ಧಿ ಹೊಂದಿದೇ ಎನ್ನುವವರೆಗೂ ಇವರ ವಾದಗಳು ಸಾಗುತ್ತವೆ. ಈ ವಾದವೂ ಸತ್ಯವಾದರೇ, ಇಂಗ್ಲೀಷ್ ಶಿಕ್ಷಣ ಮಾಧ್ಯಮವಿರುವ ಎಷ್ಟು ದೇಶಗಳು ಇವತ್ತು ಅಭಿವೃಧಿಯ ಪಥದಲ್ಲಿವೆ ಮತ್ತು ಇಂಗ್ಲೀಷ್ ಶಿಕ್ಷಣ ಮಾಧ್ಯಮವಿಲ್ಲದ ಎಷ್ಟು ದೇಶಗಳು ದಿವಾಳಿ ಅಂಚಿನಲ್ಲಿವೆ ಎನ್ನುವುದನ್ನು ನೋಡಬೇಕಾಗುತ್ತದೆ.

‘Gross national product (GNP) per capita’ ಆಧಾರದ ಮೇಲೆ ಜಗತ್ತಿನ ೨೦ ಶ್ರೀಮಂತ ಮತ್ತು ೨೦ ಬಡರಾಜ್ಯಗಳನ್ನು ಮತ್ತು ಆಯಾ ದೇಶಗಳ ಮೂಲ ಭಾಷೆ ಮತ್ತು ಶಿಕ್ಷಣ/ಲಿಂಕಿಗ್ ಭಾಷೆಗಳು ಯಾವುದು ಎಂಬುದನ್ನು ಪಟ್ಟಿ ಮಾಡೋಣ.(೫ ಮಿಲಿಯನ್ ಗಿಂತ ಕಡಿಮೆ ಜನಸಂಖ್ಯೆಯಿರುವ ದೇಶಗಳನ್ನು ಉತ್ತಮ ಅಂಕಿ ಅಂಶಗಳ ಲೆಕ್ಕಾಚಾರಕ್ಕಾಗಿ ಹೊರಗಿಡಲಾಗಿದೆ)

೨೦ ಶ್ರೀಮಂತ ರಾಷ್ಟ್ರಗಳು

೨೦ ಶ್ರೀಮಂತ ರಾಷ್ಟ್ರಗಳು

ಬ್ರಿಟನ್,ಅಮೇರಿಕಾ,ಆಸ್ಟ್ರೇಲಿಯಾಗಳನ್ನು ಬಿಟ್ಟರೆ,ಮೇಲಿನ ಬಹುತೇಕ ರಾಷ್ಟ್ರಗಳ ಮೂಲ ಭಾಷೆಯೇ ಅಲ್ಲಿನ ಅಧಿಕೃತ ಮತ್ತು ಶಿಕ್ಷಣದ ಭಾಷೆಯಾಗಿ ಬಳಕೆಯಾಗಿದೆ.ಈ ಪಟ್ಟಿಯಲ್ಲಿರುವ ಯುರೋಪ್ ರಾಷ್ಟ್ರಗಳನ್ನು ಹೊರತು ಪಡಿಸಿ ನೋಡಿದರೆ ಜಪಾನ್,ಕೊರಿಯಾದಂತಹ ಏಷಿಯಾದ ದೇಶಗಳು,ಇಸ್ರೇಲ್ ನಂತಹ ಮಧ್ಯಪ್ರಾಚ್ಯದ ದೇಶವೂ ನಮಗೆ ಕಾಣಿಸುತ್ತವೆ.ಇವತ್ತು ಜಪಾನ್,ಕೊರಿಯಾದ ಕಂಪೆನಿಗಳು ಜಾಗತಿಕವಾಗಿ ಹೆಸರು ಮಾಡಿವೆ.ಅವರ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣವೆಲ್ಲ ಇರುವುದು ಅವರ ನೆಲದ ಭಾಷೆಯಲ್ಲಿಯೇ ಹೊರತು ಇಂಗ್ಲೀಷ್ ಭಾಷೆಯಲ್ಲಿ ಅಲ್ಲ. ಒಟ್ಟಾರೆಯಾಗಿ ಜಗತ್ತಿನ ೨೦ ಶ್ರೀಮಂತ ರಾಷ್ಟ್ರಗಳ ಪೈಕಿ ೩-೪ ಇಂಗ್ಲೀಷ್ ಭಾಷೆಯನ್ನು ಬಳಸುತಿದ್ದರೆ,ಉಳಿದವು ಬಹುತೇಕ ಆಯಾ ನೆಲದ ಭಾಷೆಯನ್ನೇ ಬಳಸಿ ಏಳ್ಗೆ ಸಾಧಿಸಿವೆ.

೨೦ ಬಡ ರಾಷ್ಟ್ರಗಳು

೨೦ ಬಡ ರಾಷ್ಟ್ರಗಳು

ಈ ಬಡರಾಷ್ಟ್ರಗಳ ಪಟ್ಟಿಯಲ್ಲಿರುವ ಬಹುತೇಕ ಎಲ್ಲಾ ದೇಶಗಳು ವಸಾಹತು ಆಳ್ವಿಕೆಗೆ ಒಳಪಟ್ಟಿದ್ದವು.ಹಾಗಾಗಿಯೇ ಆ ದೇಶಗಳ ಅಧಿಕೃತ ಭಾಷೆ ಮತ್ತು ಶಿಕ್ಷಣದ ಮಾಧ್ಯಮ ಯುರೋಪಿನದ್ದಾಗಿದೆ.ಅಂದರೆ, ಈ ದೇಶದ ಜನರ ಭಾಷೆ ಅವರ ಶಿಕ್ಷಣದ ಮತ್ತು ಸರ್ಕಾರದ ಆಳ್ವಿಕೆಯ ಭಾಷೆಯಾಗಿಲ್ಲ. ಉದಾಹರಣೆಗೆ,ತನ್ನ ನೆಲದ ಭಾಷೆಯಾದ ‘ಚಿಚೆವಾ’ವನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿದರೂ,ಶಿಕ್ಷಣ ಮಾಧ್ಯಮವಾಗಿ ಇಂಗ್ಲೀಷ್ ಅನ್ನು ಉಳಿಸಿಕೊಂಡಿರುವ ‘ಮಾಲಾವಿ’ ದೇಶದ,ದೊಡ್ಡ ವಿಶ್ವವಿದ್ಯಾಲಯವಾದ ‘ಮಾಲಾವಿ ವಿವಿ’ಯಲ್ಲಿ ಪ್ರವೇಶಪಡೆಯಲು “ಇಂಗ್ಲೀಷ್ ಭಾಷೆಯ ಜ್ಞಾನ“ ವಿರುವುದು ಅತ್ಯಗತ್ಯವಾಗಿದೆ.ಅಂದರೆ, ಚಿಚೇವಾ ಭಾಷೆ ಗೊತ್ತಿದ್ದರೂ ಮತ್ತು ಪ್ರತಿಭಾವಂತನಾಗಿದ್ದರೂ ಮಾಲಾವಿ ದೇಶದವರು,ಅವರದೇ ದೇಶದ ವಿವಿಯಲ್ಲಿ ಜಾಗ ಪಡೆಯಲಾರರು.ಕಾರಣ ಅವರದಲ್ಲದ ಭಾಷೆಯ ಜ್ಞಾನ ಅವರಿಗಿಲ್ಲದಿರುವುದು! ಅಂದರೆ, ಇಂಗ್ಲೀಷ್ ಶಿಕ್ಷಣದಿಂದಾಗಿ ಒಂದು ವರ್ಗ ಉನ್ನತ ಶಿಕ್ಷಣದಿಂದ ವಂಚಿತವಾಗುತ್ತಿದೆ ಎಂದಾಯಿತಲ್ಲವೇ? ಇದು ಕೇವಲ ಮಾಲಾವಿ ದೇಶದ ಕತೆಯಲ್ಲ ಭಾರತದ್ದೂ ಹೌದು.

ಮುಂದುವರಿಯುವುದು…

ಚಿತ್ರಕೃಪೆ :http://globaleducation-jeetendra.blogspot.in

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments