ಎಷ್ಟೂ ಅಂತ ಮಾನಸಿಕ ಮಾಲಿನ್ಯ ಹರಡುತ್ತೀರಿ?
– ಜೆಬಿಆರ್ ರಂಗಸ್ವಾಮಿ
ನಮ್ಮ ಸಾಹಿತ್ಯಲೋಕದ ದೇವೇಗೌಡರಾದ ಮಾನ್ಯ ದೇ.ಜವರೇಗೌಡರು ಕ್ರೈಸ್ತರ ಸಭೆಯಲ್ಲಿ ಮಾತಾಡಿದ್ದಾರೆ. ಅಸಮಾನತೆ ಬೋಧಿಸುವ ಹಿಂದೂ ಧರ್ಮದ ಮೇಲೆ ಕೊಂಚವೂ ಗೌರವವಿಲ್ಲವಂತೆ.ಅದು ಧರ್ಮವೇ ಅಲ್ಲವೆಂದು ಕಿಡಿಕಾರಿದರಂತೆ! 25 ವರ್ಷದಿಂದ ಕ್ರಿಸ್ತನನ್ನು ಪೂಜಿಸುತ್ತಿದ್ದಾರಂತೆ ! ಕ್ರಿಸ್ತ ಮಾತ್ರ ಸಮಾನತೆಯನ್ನು ಸಾರಿದ್ದಾರಂತೆ. ಹಿಂದೂಧರ್ಮದವರಿಗೆ ತಾರತಮ್ಯವನ್ನು ಬಿಡಲೂ ಮನಸ್ಸಿಲ್ಲವಂತೆ . . .ಅಂತ ಅದೇನೇನೋ ಹೇಳಿಕೊಂಡು ಸನ್ಮಾನ ಸ್ವೀಕರಿಸಿದ್ದಾರೆ. ( ಪ್ರಜಾವಾಣಿ 30-08-2015 )
ಅವರಿಗೆ ಹಿತವೆನಿಸಿದರೆ ಯೇಸುವನ್ನೋ ಮತ್ತೊಬ್ಬರನ್ನೋ ಆರಾಧಿಸಿಕೊಳ್ಳಲಿ.ಅದು ಅವರ ವೈಯುಕ್ತಿಕ.ಅದನ್ನು ಕಟ್ಟಿಕೊಂಡು ಏನೂ ಆಗಬೇಕಾಗಿಲ್ಲ.ಆದರೆ ಆ ಸಭೆಯಲ್ಲಿ ಅನಗತ್ಯವಾಗಿ ಹಿಂದೂಧರ್ಮವನ್ನು ಹೀಗೆಳೆದು ಮಾತಾಡುವ ಅಗತ್ಯವಿತ್ತೇ? ನೂರುವರ್ಷದ ಬದುಕಿನಲ್ಲಿ ಏನೇನೋ ಓದಿರುವ ಅವರಿಗೆ,ಪ್ರಪಂಚದ ಎಲ್ಲ ಧರ್ಮಗಳಲ್ಲೂ ಅಸಮಾನತೆ,ಕ್ರೌರ್ಯ,ಮೂಢಾಚರಣೆಗಳು ಇರುವುದು ತಿಳಿದೇ ಇಲ್ಲವೇ? ಸರ್ವರನ್ನೂ ಸಮಾನವಾಗಿ ಕಾಣುವ ತತ್ವಬೋಧೆ,ಮೌಲ್ಯಗಳು ಎಲ್ಲಧರ್ಮಗಳಲ್ಲೂ ಇದೆ. ನಿಜ.ಆದರೆ ಅವೇ ಮೌಲ್ಯ ಸಿದ್ಧಾಂತಗಳನ್ನು ಅವು ಇರುವ ಹಾಗೆಯೇ ಸರ್ವರೆಲ್ಲರೂ ಸಮಾನವಾಗಿ ಆಚರಿಸಬಲ್ಲ ಒಂದೇ ಒಂದು ಧರ್ಮ ಯಾವುದಾದರೂ ಈ ಭೂಲೋಕದಲ್ಲಿದೆಯೇ?
ಒಂದು ಸಾವಿನ ಸುತ್ತ ಬುದ್ಧಿಜೀವಿಗಳ ಭೂತಕುಣಿತ
– ರೋಹಿತ್ ಚಕ್ರತೀರ್ಥ
ಕಲ್ಬುರ್ಗಿಯವರ ಸಾವು ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ಯಾರೋ ಇಬ್ಬರು ಅಪರಿಚಿತರು ಬೈಕ್‍ನಲ್ಲಿ ಮನೆವರೆಗೆ ಬಂದು ತಾವು ನಿಮ್ಮ ವಿದ್ಯಾರ್ಥಿಗಳು ಎಂದು ಹೇಳಿಕೊಂಡು ಕಲ್ಬುರ್ಗಿ ಎದುರು ಬಂದು ನಿಂತು ಅವರ ಹಣೆಯ ಸಹಸ್ರಾರಕ್ಕೆ ಗುರಿಯಿಟ್ಟು ಗುಂಡು ಹೊಡೆದು ಪರಾರಿಯಾದರು. ಕ್ಷಣಮಾತ್ರದಲ್ಲಿ ಕಲ್ಬುರ್ಗಿ ನೆಲಕ್ಕುರುಳಿದರು. ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಸುದ್ದಿ ಭಾನುವಾರದ ಮುಂಜಾನೆ ಹತ್ತೂವರೆ ಹೊತ್ತಿಗೆಲ್ಲ ರಾಜ್ಯಾದ್ಯಂತ ಸಂಚಲನ ಹುಟ್ಟಿಸಿತು. ಕೊಲೆ ಯಾಕಾಗಿ ಆಗಿದೆ, ಯಾರು ಮಾಡಿದ್ದಾರೆ ಎನ್ನುವುದರ ಕುರಿತು ಯಾರಿಗೂ, ಪೋಲೀಸರಿಗೂ ಮಾಹಿತಿ ಇರಲಿಲ್ಲ. ಆದರೆ, ಕೊಲೆ ನಡೆದು ಅರ್ಧತಾಸಿನಲ್ಲೇ ಈ ಕೊಲೆಯನ್ನು ಪೂರ್ವದಲ್ಲೇ ನಿಯೋಜಿಸಿದ್ದವರಂತೆ ಹತ್ತುಹಲವು ಸಾಹಿತಿಗಳು, ಪಂಡಿತರು ಮಾಧ್ಯಮಗಳಲ್ಲಿ ಕಾಣಿಸಿಕೊಂಡು “ಇದಕ್ಕೆ ಸಂಘಪರಿವಾರವೇ ಕಾರಣ. ಕಲ್ಬುರ್ಗಿಯವರ ವಿಚಾರವನ್ನು ಸಹಿಸಿಕೊಳ್ಳಲಾಗದೆ ಶೂಟ್ ಮಾಡಿ ಉಸಿರು ನಿಲ್ಲಿಸಿದ್ದಾರೆ” ಎಂದು ಹೇಳತೊಡಗಿದರು. ಬರಗೂರು ರಾಮಚಂದ್ರಪ್ಪ ಟಿವಿ ಜೊತೆಗೆ ಮಾತಾಡುತ್ತ ಎಷ್ಟೊಂದು ಕರಾರುವಾಕ್ಕಾಗಿ ಈ ಕೊಲೆಯ ವಿವರಗಳನ್ನು ಕೊಟ್ಟರೆಂದರೆ ಅವರೇ ಸಂಘಿಗಳ ಜೊತೆ ಕೂತು ಈ ಕೊಲೆಯನ್ನು ರೂಪಿಸಿದ್ದರೋ ಎಂಬ ಅನುಮಾನ ನೋಡುಗನಿಗೆ ಬರಬೇಕು, ಹಾಗಿತ್ತು! ಅತ್ತ ದೊಡ್ಡ ಬುದ್ಧಿಜೀವಿಗಳು ಟಿವಿ ಮಾಧ್ಯಮದಲ್ಲಿ ತಮ್ಮ ಚಿಂತನೆ ಹರಿಯಬಿಡುತ್ತಿದ್ದರೆ ಇತ್ತ ಮರಿ ಬುದ್ಧಿಜೀವಿಗಳು ಫೇಸ್‍ಬುಕ್ ಮತ್ತು ಟ್ವಿಟ್ಟರ್ ಮಾಧ್ಯಮಗಳಲ್ಲಿ ಸಂಘಪರಿವಾರ ಮತ್ತು ಕೋಮುವಾದಿಗಳನ್ನು ಹೀಯಾಳಿಸತೊಡಗಿದರು. ಕೆಲವರು ಕಲ್ಬುರ್ಗಿಯನ್ನು ಕೊಂದವನು ಆಧುನಿಕ ಗೋಡ್ಸೆ ಎಂದರು. ಸಂಜೆಯ ಹೊತ್ತಿಗೆ ಮತ್ತೆ ಟೌನ್‍ಹಾಲಿನೆದರು ಸೇರಿದ್ದ ಪ್ರಗತಿಪರ ಮತ್ತು ತಳಸ್ಪರ್ಶಿ ಚಿಂತಕರಿಗೆ ಯಾರು ಕೊಲೆಗಾರ ಎನ್ನುವುದು ರುಪಾಯಿಗೆ ಹದಿನಾರಾಣೆ ಸ್ಪಷ್ಟವಾಗಿತ್ತು!