ವಿಷಯದ ವಿವರಗಳಿಗೆ ದಾಟಿರಿ

Archive for

11
ಸೆಪ್ಟೆಂ

ನಿಮಗೆ ನಮಸ್ಕಾರ

– ತೇಜಸ್ವಿನಿ ಹೆಗಡೆ,ಬೆಂಗಳೂರು

ಕೆ.ಎಸ್ ನರಸಿಂಹ ಸ್ವಾಮಿಕೆ.ಎಸ್.ನರಸಿಂಹ ಸ್ವಾಮಿಯವರ ಕವನಗಳ ಕಡೆ ನನ್ನ ಗಮನ ಮೊತ್ತ ಮೊದಲ ಬಾರಿ ಹೋಗಿದ್ದು ನಾನು ಹೈಸ್ಕೂಲ್‍ನಲ್ಲಿದ್ದಾಗ. ಅವರ ಪ್ರಥಮ ಕವನ ಸಂಕಲನವಾದ `ಮೈಸೂರು ಮಲ್ಲಿಗೆ’ಯ ಕವಿತೆಗಳನ್ನು ಬಳಸಿಕೊಂಡು, ಅದೇ ಸಂಕಲನದ ಶೀರ್ಷಿಕೆ ಹಾಗೂ ಸುಮಧುರ ಸಂಗೀತದೊಂದಿಗೆ ಹೊರಬಂದ ಜನಪ್ರಿಯ ಕನ್ನಡ ಚಲಚಿತ್ರವನ್ನು ನೋಡಿದ ಮೇಲೇ! ಆವರೆಗೂ ಈ ಕವಿಯ ಹೆಸರು ಕೇಳಿದ್ದೆನಾದರೂ, ಹೆಚ್ಚು ಓದಿರಲಿಲ್ಲ. `ಮೈಸೂರು ಮಲ್ಲಿಗೆ’ ಕನ್ನಡ ಚಲನಚಿತ್ರದಲ್ಲಿ `ದೀಪವು ನಿನ್ನದೆ ಗಾಳಿಯೂ ನಿನ್ನದೇ ಆರದಿರಲಿ ಬೆಳಕು…’ ಅನ್ನೋ ಹಾಡನ್ನು ಸುಧಾರಾಣಿ ಕಣ್ತುಂಬಿಕೊಂಡು ಹಾಡಿದ್ದು ಕಂಡು ನನ್ನ ಕಣ್ಣೂ ಒದ್ದೆಯಾಗಿತ್ತು. ಚಿತ್ರದಲ್ಲಿ ಬರುವ ಘಟನೆಯ ತೀವ್ರತೆಗೂ ಮೀರಿ ಕೆ.ಎಸ್.ಎನ್ ಅವರ ಆ ಹಾಡು ನನ್ನ ಎದೆ ತಟ್ಟಿ, ಬೇರಾವುದೋ ಘಟ್ಟಕ್ಕೆ ಕೊಂಡೊಯ್ದು, ಮುಂದೆ ಅವರ ಇನ್ನಷ್ಟು ಕವಿತೆಗಳ ಓದುವಿಕೆಗೆ ಕಾರಣವಾಗಿತ್ತು. ಹಾಗಿತ್ತು ಆ ಕವಿತೆಯ ಸಾಹಿತ್ಯದ ಶಕ್ತಿ! ಚಲನಚಿತ್ರದಲ್ಲಿ ಒಂದು ಸೀಮಿತ ಘಟನೆಗಷ್ಟೇ ಈ ಹಾಡನ್ನು ಬಳಸಿಕೊಳ್ಳಲಾಗಿದ್ದು, ಅದರಿಂದಾಗಿ ಒಂದು ನಿರ್ಧಿಷ್ಟ ಪರಿಮಿತಿಯ ಅರ್ಥ ಪಡೆದುಕೊಂಡ ಈ ಅದ್ಭುತ ಕವಿತೆಯನ್ನು ಯಾವೆಲ್ಲಾ ಆಯಾಮದಲ್ಲಿ ಅರ್ಥೈಸಿಕೊಳ್ಳಬಹುದು, ಈ ಕವಿತೆಯ ಒಳಾರ್ಥ ಅದೆಷ್ಟು ತೀವ್ರವಾಗಿದೆ ಎಂಬುದನ್ನೆಲ್ಲಾ ಚಿಂತಿಸಿದಾಗ ಹೊಳೆದ ಅರ್ಥಗಳು ಇಲ್ಲಿವೆ. ನಾನಿಲ್ಲಿ ಅವರ ಎರಡು ಸುಂದರ ಕವಿತೆಗಳನ್ನು ವಿಶ್ಲೇಷಿಸುವ ದೊಡ್ಡ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ. ಇದು ನನ್ನ ಸೀಮಿತ ಪರಿಮಿತಿಗೆ ದಕ್ಕಿದ್ದು ಎಂಬುದನ್ನೂ ಮೊದಲೇ ಹೇಳಿಬಿಡುತ್ತಿರುವೆ.

ಕೆ.ಎಸ್.ನ ಅವರ ಹುಟ್ಟು, ವಿದ್ಯಾಭ್ಯಾಸ, ವೃತ್ತಿ, ಪ್ರವೃತ್ತಿ, ಅವರ ಸಂಕಲನಗಳ ವಿವರಣೆ, ಅವರ ಅಸೀಮ ಪ್ರತಿಭೆಗೆ ಸಿಕ್ಕ ಪುರಸ್ಕಾರಗಳು, ಪ್ರಶಸ್ತಿಗಳು ಎಲ್ಲವೂ ಸವಿವರವಾಗಿ ಎಲ್ಲೆಡೆ ಲಭ್ಯವಿವೆ. ಅವರ `ಮೈಸೂರು ಮಲ್ಲಿಗೆ’, `ಉಂಗುರ’, `ದೀಪದ ಮಲ್ಲಿ’ ಇತ್ಯಾದಿ ಸಂಕಲನಗಳಲ್ಲಿರುವ ಕವಿತೆಗಳೆಲ್ಲಾ ಭಾವಗೀತೆಗಳಾಗಿದ್ದು, ನವೋದಯ ಶೈಲಿಯಲ್ಲಿವೆ. `ತೆರೆದ ಬಾಗಿಲು’ ಸಂಕಲನದಿಂದ ಅವರು ನವ್ಯ ಶೈಲಿಗೆ ಹೊರಳಿದ್ದನ್ನು ಗುರುತಿಸಬಹುದಾಗಿದೆ. ಅವರೇ ಹೇಳಿಕೊಂಡಂತೆ ಅವರು ಬರೆದದ್ದರಲ್ಲಿ ಹೆಚ್ಚಿನವು ದಾಂಪತ್ಯ ಗೀತೆಗಳು. ಅವರನ್ನು ಪ್ರೇಮ ಕವಿ, ಒಲವಿನ ಕವಿ ಎಂದೆಲ್ಲಾ ಹೊಗಳಿದರೂ, ಅವರದ್ದು ದಾಂಪತ್ಯದ ಚೌಕಟ್ಟಿನೊಳರಳಿದ ಪ್ರೇಮದ ಲಾಲಿತ್ಯ ಎನ್ನಬಹುದು. ಜನಪದದ ಸೊಗಡು, ಅಲ್ಲಿಯ ಮಣ್ಣಿನ ಕಂಪು, ಪುಟ್ಟ ಗಂಡ-ಹೆಂಡಿರ ಬೆಚ್ಚನೆಯ ಪ್ರೀತಿ, ವಿರಹ, ಶಾನುಭೋಗರ ಮಗಳ ಚೆಲುವು ಆಹಾ ಎಲ್ಲವೂ ಸೊಗಸು, ಸುಂದರ, ಆಹ್ಲಾದಕರ! ಅವರ ಆ ಕವಿತೆಗಳನ್ನೋದುವಾಗ ಆಗುವ ರಸಾನುಭೂತಿ ಅನಿರ್ವಚನೀಯ! ಹಾಗಾಗಿಯೇ ಅವರ `ಮೈಸೂರು ಮಲ್ಲಿಗೆ’ ಕವನ ಸಂಕಲನ ಅತಿ ಹೆಚ್ಚು ಜನಪ್ರಿಯತೆ ಪಡೆಯಿತು, ಈಗಲೂ ಜನರ ಮನೆ-ಮನಗಳಲ್ಲಿ ಹಾಡಾಗಿದೆ.

ಮತ್ತಷ್ಟು ಓದು »