ವಿಷಯದ ವಿವರಗಳಿಗೆ ದಾಟಿರಿ

Archive for

31
ಆಗಸ್ಟ್

ನಮ್ಮದಲ್ಲದ ಭಾರತದ ರಾಜಕೀಯ ಇತಿಹಾಸ

ಡಾ. ಸಂತೋಷ್ ಕುಮಾರ್ ಪಿ.ಕೆ

north_horizontalಭಾರತದ ಪ್ರಾಚೀನ ಕಾಲದ ರಾಜಕೀಯ ಚಿಂತನೆ ಎಂಬುದು ಬಹುತೇಕವಾಗಿ ರಾಜ್ಯಶಾಸ್ತ್ರಜ್ಞರಿಗೆ ಅಪ್ರಸ್ತುತವಾಗಿದೆ. ಇದಕ್ಕೆ ಪ್ರಧಾನವಾಗಿ ಎರಡು ಕಾರಣಗಳನ್ನು ನೋಡಬಹುದು, ಒಂದು, ಕಾಲಾಂತರದ ಬದಲಾವಣೆ, ಹಾಗೂ ಎರಡು, ನಮ್ಮೆಲ್ಲಾ ರಾಜಕೀಯ ಚಿಂತನೆ ಮತ್ತು ಅಳವಡಿಸಿಕೊಂಡಿರುವ ರಾಜಕೀಯ ವ್ಯವಸ್ಥೆಗಳೆಲ್ಲವೂ ಆಧುನಿಕ ಪಾಶ್ಚಾತ್ಯ ರಾಷ್ಟ್ರಗಳಿಂದ ಪ್ರೇರೇಪಿತವಾಗಿರುವುದರಿಂದ ಭಾರತೀಯ ಚಿಂತನೆಯ ಅಗತ್ಯತೆ ನಮಗೆ ಕಾಣಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗಲೂ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಮಾತ್ರ ಕೌಟಿಲ್ಯನ ಸಿದ್ಧಾಂತ, ಮಹಾಭಾರತದ ಕೆಲವು ಭಾಗಗಳು, ಹಾಗೂ ಹಲವಾರು ನೀತಿಸಾರಗಳನ್ನು ಪರೀಕ್ಷೆಯ ದೃಷ್ಟಿಯಿಂದ ಓದುತ್ತಿರುತ್ತಾರೆ. ಇದರ ಒಟ್ಟಿಗೆ ಹಲವಾರು ವಿದ್ವಾಂಸರುಗಳೂ ಸಹ ಪ್ರಾಚೀನತೆಯ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೂ ವಿದ್ಯಾರ್ಥಿಗಳ ಓದು, ವಿದ್ವಾಂಸರ ಅಧ್ಯಯನಗಳು ಆಧುನಿಕ ರಾಜಕೀಯ ವ್ಯವಸ್ಥೆಗೆ ಯಾವುದೇ ಕೊಡುಗೆಯನ್ನು ನೀಡುವ ಭರವಸೆಗಳಿಲ್ಲ, ಕಾರಣ ಆಧುನಿಕ ಸಮಸ್ಯೆಗಳಿಗೆ ಆಸಕ್ತಿದಾಯಕವಾದ ಪರಿಹಾರವನ್ನು ಹುಡುಕುವ ಯಾವ ಲಕ್ಷಣಗಳೂ ಸಹ ಗೋಚರಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಪ್ರಾಚೀನ ಭಾರತದ ರಾಜಕೀಯ ಚಿಂತನೆ ಅನಾಸಕ್ತಿಯ ವಿಷಯವಾಗಿಯೇ ಮುಂದುವರಿಯುತ್ತಿದೆ.

ಪ್ರಾಚೀನ ಭಾರತವನ್ನು ಅಧ್ಯಯನ ನಡೆಸುವುದು ಚರಿತ್ರೆಕಾರರ ಕೆಲಸವೇ ಆಗಿದ್ದರೂ ಸಹ, ಅಲ್ಲಿನ ರಾಜಕೀಯ ವಿಚಾರ ಧಾರೆಗಳನ್ನು ಪತ್ತೆಹಚ್ಚುವುದು, ಅಧ್ಯಯನ ನಡೆಸುವುದು ರಾಜ್ಯಶಾಸ್ತಜ್ಞರ ಜವಾಬ್ದಾರಿಯೂ ಹೌದು. ಆದರೆ, ರೊಮಿಲಾ ಥಾಪರ್, ಅಲ್ಟೇಕರ್, ಆರ್.ಎಸ್.ಶರ್ಮಾ, ಡಿ.ಡಿ.ಕೋಸಾಂಬಿ ಇನ್ನೂ ಮುಂತಾದ ‘ಇತಿಹಾಸಕಾರ’ರಿಗೆ ಮಾತ್ರ ಇಂತಹ ಅಧ್ಯಯನಗಳು ಮುಖ್ಯವಾಗುತ್ತಿರುವುದು ಹಾಗೂ ರಾಜ್ಯಶಾಸ್ತ್ರಜ್ಞರುಗಳು ಅದನ್ನು ಅವಗಾಹನೆಗೆ ತಮ್ಮ ತೆಗೆದುಕೊಳ್ಳದೆ ಇರುವುದು ವಾಸ್ತವಾಗಿದೆ. ರಾಜಕೀಯ ಚಿಂತನೆಗಳ ಕುರಿತೇ ಅಧ್ಯಯನ ನಡೆಸುವವರು ಇತಿಹಾಸದ ಚಿಂತನೆಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸದೇ ಹೋದರೆ ಪ್ರಾಚೀನ ರಾಜಕೀಯ ಚಿಂತನೆಗೆ ಪ್ರವೇಶ ದೊರಕುವುದು ಕಷ್ಟಸಾಧ್ಯ.

ಮತ್ತಷ್ಟು ಓದು »

31
ಆಗಸ್ಟ್

ಸಲ್ಲೇಖನ ವ್ರತದ ನಿಷೇಧದ ಹಿಂದಿನ ವಸಾಹತುಶಾಹಿ ಪ್ರಜ್ಞೆ

– ಡಂಕಿನ್ ಝಳಕಿ, India Platform

ಸಲ್ಲೇಖನ ವ್ರತಸಲ್ಲೇಖನ ವ್ರತದ ಆಚರಣೆ ಆತ್ಮಹತ್ಯೆಗೆ ಸಮಾನ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ರಾಜಸ್ಥಾನ ಉಚ್ಚ ನ್ಯಾಯಾಲಯವು ಈ ವ್ರತವನ್ನು ಕಾನೂನು ಬಾಹಿರವೆಂದು ಘೋಷಿಸಿ, ಇದನ್ನು ಭಾರತೀಯ ದಂಡ ಸಂಹಿತೆ 306 ಹಾಗು 309ರ ಅನುಸಾರ ಶಿಕ್ಷಾರ್ಹ ಅಪರಾಧ ಎಂದು ತೀರ್ಪನ್ನು ನೀಡಿದೆ. ದಂಡ ಸಂಹಿತೆ 306ರ ಪ್ರಕಾರ ಆತ್ಮಹತ್ಯೆಗೆ ಪ್ರೇರಣೆ ನೀಡುವುದು ಮತ್ತು 309ರ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸುವುದು ಎರಡೂ ಶಿಕ್ಷಾರ್ಹ ಅಪರಾಧ. ಈ ಪ್ರಕಾರ ಸಲ್ಲೇಖನ ವ್ರತವನ್ನು ಕೈಗೊಳ್ಳುವ ವ್ಯಕ್ತಿಯ ಜೊತೆಗೆ ಈ ವ್ರತದಲ್ಲಿ ಭಾಗಿಯಾಗುವ ಪ್ರತಿಯೋರ್ವನೂ, ಅಂದರೆ ಇಡಿಯ ಜೈನ ಸಂಪ್ರದಾಯವನ್ನೂ ಬಹುಶಃ ಕಟಕಟೆಗೆ ಎಳೆಯಬಹುದು. ಹೀಗೆ ಭಾರತೀಯ ಸಂಪ್ರದಾಯವೊಂದನ್ನು, ಅದನ್ನು ಆಚರಿಸುವವರನ್ನು ಅಪರಾಧೀ ಸ್ಥಾನಕ್ಕೆ ಎಳೆಯುತ್ತಿರುವುದು (ಕ್ರಿಮಿನಲೈಸ್ ಮಾಡುತ್ತಿರುವುದು) ಇದೇ ಮೊದಲಲ್ಲ. ಕಳೆದ ಸುಮಾರು ಒಂದು ಸಾವಿರ ವರುಷಗಳ ಕಾಲ, ಎರಡು ವಸಾಹತುಶಾಹಿ ಆಳ್ವಿಕೆಗಳಡಿ ಭಾರತೀಯ ಸಂಪ್ರದಾಯಗಳು ಎದುರಿಸಿದ್ದು ಇದೇ ಪರಿಸ್ಥಿತಿ. ವಿಪರ್ಯಾಸವೆಂದರೆ ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದರೂ, ಈ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಬದುಕುವ ಹಕ್ಕಿನ ಉಲ್ಲಂಘನೆ ಎಂಬ ಅರ್ಥವಾಗದ ಪಾಶ್ಚಾತ್ಯ ಮತ್ತು ಕ್ರಿಶ್ಚಿಯನ್ ಚಿಂತನೆಯ ಹೆಸರಿನಲ್ಲಿ, ಸಾವಿರಾರು ವರುಷಗಳಿಂದ ನಡೆಯುತ್ತಾ ಬಂದಿರುವ ಭಾರತೀಯರ ಆಧ್ಯಾತ್ಮಿಕ ಆಚರಣೆಗಳನ್ನು ಹೀಗೆ  ತುಚ್ಛವಾಗಿ ಕಂಡು ಅವುಗಳ ಸಂಹಾರ ನಡೆಯುತ್ತಿರುವ ಇಂದಿನ ದಿನಗಳಲ್ಲಿ ನಾವು ಮಾಡಬೇಕಾದದ್ದು ಏನು? ಮತ್ತಷ್ಟು ಓದು »

31
ಆಗಸ್ಟ್

‘ಆತ್ಮಾಹುತಿ’ ಯಿಂದ ಆತ್ಮವಿಮರ್ಶೆ

– ಮನುಶ್ರೀ ಜೋಯಿಸ್

ವೀರ ಸಾವರ್ಕರ್ಮಹಾಭಾರತ, ರಾಮಾಯಣದಂತ ಯಾವುದೇ ಗ್ರಂಥವಾಗಲಿ ಮೊದಲ ಬಾರಿಗೆ ಓದುವಾಗ ಮನಸ್ಸಲ್ಲಿ ಒಂದು ವಿಶೇಷ ತನ್ಮಯ ಭಾವವಿರುತ್ತದೆ. ‘ವಿಶೇಷ’ ಏಕೆಂದರೆ ಇದು ಬೇರೆ ಪುಸ್ತಕಗಳಂತಲ್ಲದೆ ಸುತ್ತ-ಮುತ್ತ ಕೇಳಿದ, ಜೀವನದಲ್ಲಿ ಬೆರೆತ, ಅಜ್ಜಿ ಶುರು ಮಾಡಿದ ಒಂದು ಕುತೂಹಲದ ಕಥೆ. ಓದುವಾಗ ಬೇರೆ ಯುಗವನ್ನೇ ನೋಡಿ ಬಂದಂತಹ ಪುಳಕ, ಪಾತ್ರಗಳ ಜೀವನದಲ್ಲಿ ಭಾಗಿಯಾದಂತಹ ರೋಮಾಂಚನ. ಪೂರ್ವಜರ ಚರಿತ್ರೆಯೆಂದೆನೋ.. ಪುಸ್ತಕ ಮುಗಿದಾಗ ಮನಸು ತುಂಬಿ ಬರುತ್ತದೆ. ಇನ್ನು ಕೊನೆ ಅಧ್ಯಾಯದ ಪುಟಗಳಲ್ಲಿ ಕಣ್ಣಾಡಿಸುವಾಗ ಬಿಟ್ಟು ಹೋದ ಎಷ್ಟೋ ಹೆಜ್ಜೆ ಗುರುತುಗಳನ್ನು ಹಚ್ಚಿಕೊಂಡು ಬಿಟ್ಟಿರುತ್ತೇವೆ.

ಹೀಗೆ ಪುರಾಣಗಳಂತೆ ಮನಸಿಗೆ ಹತ್ತಿರವಾಗುವ, ಎತ್ತರದಲ್ಲಿ ನಿಲ್ಲುವ ಒಂದು ಅದ್ಭುತ ಕೃತಿ ಶಿವರಾಮುರವರ ‘ಆತ್ಮಾಹುತಿ’. ಇದು 1970 ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಪ್ರತಿಯೊಬ್ಬ ಭಾರತೀಯನು ತಿಳಿದಿರಬೇಕಾದ ಇತಿಹಾಸ ಇದು. ಓದಲೇ ಬೇಕಾದ the best book.

ಸ್ವಾತಂತ್ರ್ಯ ವೀರ ಸಾವರಕರ ರವರ ಜೀವನ ಚರಿತ್ರೆ. ಇದನ್ನು ಆತ್ಮಕಥೆಯಂತೆ ನಿರೂಪಿಸಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬನ ಉನ್ನತ ಧೇಯ್ಯೋದ್ದೇಶಗಳು ಹೇಗೆ ಮಹಾನ್ ವ್ಯಕ್ತಿತ್ವಕ್ಕೆ ಮೆಟ್ಟಿಲುಗಳಾಗುತ್ತವೆ ಎಂಬುದಕ್ಕೆ ನಿದರ್ಶನವಿದು. ಬಾಲಕನಿದ್ದಾಗ ಚಿಗುರುವ ದೇಶ ಭಕ್ತಿ ಇಡೀ ವಿಶ್ವಕ್ಕೆ ವ್ಯಾಪಿಸುವ ಕಥಾನಕವಿದು. ಹಿಂದುತ್ವದ ಅಮೋಘ ಪರಿಕಲ್ಪನೆಯನ್ನು ಅನಾವರಣಗೊಳಿಸುವ ಇವರ ಜ್ಞಾನ ಅಗಾಧ. ಇದೆಲ್ಲವನ್ನೂ ಕೇಳುವುದಕ್ಕಿಂತ ಅನುಭವಿಸ ಬೇಕೆಂದಿದ್ದರೆ ಆತ್ಮಾಹುತಿಯನ್ನು ಓದಲೇಬೇಕು ಬೇಕು.
ಮತ್ತಷ್ಟು ಓದು »

28
ಆಗಸ್ಟ್

“ನೀನು” ಯಾರು? ಸತ್ಯ ಶೋಧನೆಗೆ ಸಮಿತಿ

– ಪ್ರವೀಣ್ ಕುಮಾರ್ ಮಾವಿನಕಾಡು

ಉಪ್ಪಿಟುಇತ್ತೀಚೆಗಷ್ಟೇ ವಾಲ್ಮೀಕಿ ಯಾರು ಎನ್ನುವ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಸರ್ಕಾರ, ಹೇಗಾದರೂ ಮಾಡಿ ಮತ್ತೆ ಆ ಪುಸ್ತಕ ಜನರನ್ನು ತಲುಪಲು ಬಿಡಬಾರದು ಎನ್ನುವ ಕಾರಣಕ್ಕಾಗಿ ಆಯ್ದ ವ್ಯಕ್ತಿಗಳಿಂದ ಕೂಡಿದ ಸತ್ಯ ಶೋಧನಾ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಈಗ ಉಪೇಂದ್ರ ನಿರ್ದೇಶಿಸಿ ನಟಿಸಿದ ಉಪ್ಪಿ2 ಚಿತ್ರದಲ್ಲಿ ಬರುವ ‘ನೀನು’ ಅಂದರೆ ಯಾರು ಎನ್ನುವ ಬಗ್ಗೆ ಸತ್ಯಶೋಧನೆ ಕೈಗೊಳ್ಳಲು ಹಂಪೆನಾಗ್  ಅವರ ನೇತೃತ್ವದಲ್ಲಿ ಸರಕಾರ ಇನ್ನೊಂದು ಸತ್ಯಶೋಧನಾ ಸಮಿತಿಯನ್ನು ರಚಿಸಿದೆ! ಅಲ್ಲದೇ ಉಪೇಂದ್ರ ಅವರು ತಮ್ಮ ಚಿತ್ರಕ್ಕೆ ಉಪ್ಪಿಟ್ಟು ಎನ್ನುವ ಹೆಸರನ್ನೇ ಏಕೆ ಇಟ್ಟರು,ಬಹುಜನರು ಸೇವಿಸುವ ಇತರ ಮಾಂಸಾಹಾರದ ಹೆಸರನ್ನು ಏಕೆ ಇಡಲಿಲ್ಲ ಎನ್ನುವ ಬಗ್ಗೆಯೂ ಸಮಿತಿ ಚರ್ಚಿಸಿ ಸರ್ಕಾರಕ್ಕೆ ತನ್ನ ವರದಿ ಒಪ್ಪಿಸಲಿದೆ.

ಈ ಮೊದಲು ಕೆಲವು ಕಾರಣಗಳಿಗಾಗಿ ಉಪೇಂದ್ರ ರವರ ಈ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಲು ಸರ್ಕಾರ ಅಂದುಕೊಂಡಿತ್ತಾದರೂ ನಂತರ,ನ್ಯಾಯಾಲಯವು ಸರ್ಕಾರ ಕೊಡಲಿದ್ದ ಕಾರಣಗಳನ್ನು ಒಪ್ಪುವ ಸಾಧ್ಯತೆಗಳು ತೀರಾ ಕಮ್ಮಿ ಎನ್ನುವ ತಜ್ಞರ ಸಲಹೆಯ ಮೇರೆಗೆ ಈ ಸತ್ಯ ಶೋಧನಾ ಸಮಿತಿಯನ್ನು ರಚಿಸಿ ಆ ಸಮಿತಿಯಿಂದ ತಮಗೆ ಬೇಕಾದ ರೀತಿಯಲ್ಲಿ ವರದಿಯನ್ನು ಪಡೆದು ನಂತರ ಚಿತ್ರ ಪ್ರದರ್ಶನ ರದ್ದು ಮಾಡಲು ತೀರ್ಮಾನಿಸಿದೆ.ಆದ್ದರಿಂದ ಶ್ರೀ ಹಂಪೆನಾಗರಾಜು ಅವರ ನೇತೃತ್ವದಲ್ಲಿ ಆರು ಜನ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ.

ಮತ್ತಷ್ಟು ಓದು »

27
ಆಗಸ್ಟ್

ಮೇಕಿಂಗ್ ಆಫ್ ಸೂಪರ್‍ಮ್ಯಾನ್

– ರೋಹಿತ್ ಚಕ್ರತೀರ್ಥ

ಸೂಪರ್ಮ್ಯಾನ್ನಾನು ಶೇಕ್ ನಾಸಿರ್. ಕನಸಿನ ನಗರಿ ಮುಂಬೈಯಿಂದ ಬರೋಬ್ಬರಿ 296 ಕಿಲೋಮೀಟರ್ ದೂರದ ಮಾಲೆಗಾಂವ್ ಎಂಬ, ದಿನದ ಹನ್ನೆರಡು ಗಂಟೆ ಕರೆಂಟಿಲ್ಲದ ಪುಟ್ಟಹಳ್ಳಿಯ ಜಗತ್ಪ್ರಸಿದ್ಧ ಫಿಲ್ಮ್ ಡೈರೆಕ್ಟರ್. ನೀವು, ನಾನು ಮಾಡಿದ ಶೋಲೆ, ಶಾನ್ ಚಿತ್ರಗಳನ್ನು ನೋಡಿಯೇ ಇರುತ್ತೀರಿ. ನನ್ನ ವಿಶ್ವವಿಖ್ಯಾತ ಸೂಪರ್‍ಮ್ಯಾನ್ ಚಿತ್ರ ಕೂಡ. ಬಿಡಿ, ಸೂಪರ್‍ಮ್ಯಾನ್ ಕತೆ ಹೇಳೋ ಮೊದಲು, ನನ್ನ ಮತ್ತು ನಮ್ಮ ಹಳ್ಳಿಯ ಕತೆ ಸ್ವಲ್ಪ ಹೇಳ್ತೀನಿ. ಕತೆಗೆ ಮುನ್ನ ಪೀಠಿಕೆ, ಚಿತ್ರಕ್ಕೆ ಮುನ್ನ ಫ್ಲ್ಯಾಶ್‍ಬ್ಯಾಕ್ – ತುಸು ಇಂಟರೆಸ್ಟಿಂಗ್ ಆಗಿರುತ್ತೆ.

ಅಂದಹಾಗೆ, ನನ್ನೂರಿನ ಹೆಸರನ್ನು ನೀವು ಕೇಳಿರಬಹುದು, ಓದಿರಬಹುದು. ಕೋಮುಘರ್ಷಣೆಗೆ ಬಹಳ ಪ್ರಸಿದ್ಧವಾದ ಊರು ನನ್ನದು. ಹಳ್ಳಿಯ ನಡುಮಧ್ಯೆ ಗೌರಮ್ಮ ಬೈತಲೆ ತೆಗೆದ ಹಾಗೆ ಒಂದು ನದಿ ಹರಿಯುತ್ತೆ. ಅದರಾಚೆ ಹಿಂದೂಗಳು, ಈಚೆ ಮುಸ್ಲಿಮರು ಬದುಕ್ತಾ ಇದಾರೆ. ಇರೋರಲ್ಲಿ ಮುಕ್ಕಾಲುಭಾಗ ಮುಸ್ಲಿಮರೇ ಇರೋದು. ನಮ್ಮ ಬಿಕನಾಸಿ ಉದ್ಯೋಗಗಳಿಗೆ ಒಂದು ಹೆಸರು ಅಂತ ಕೂಡ ಇಲ್ಲ. ಗುಜರಿ, ಪೇಪರ್, ಚಾದಂಗಡಿ, ಗಾಡಿ ರಿಪೇರಿ, ಪಂಚರು, ಪ್ಲಂಬರ್, ಬಟ್ಟೆ ಅಂಗಡಿ, ಹಜಾಮತಿ – ಹೀಗೆ ಮಧ್ಯಾಹ್ನ ರೊಟ್ಟಿ ತಟ್ಟೋದಕ್ಕೆ ಆಗುವಷ್ಟು ಕೂಲಿ ಹುಟ್ಟಿದರೆ ಸಾಕು, ಅದೇ ಒಂದು ಉದ್ಯೋಗ. ಇವತ್ತು ಗಡ್ಡ ಹೆರೆದವನು ನಾಳೆ ಬೋರ್ಡು ಬರೀಬಹುದು, ನಿನ್ನೆ ಟೈರ್ ಹೊಲಿದು ಪಂಚರ್ ಹಾಕಿದೋನು ಇವತ್ತು ಟೈಲರ್ ಆಗಬಹುದು! ಒಟ್ಟಲ್ಲಿ ಹೇಳುವುದಾದರೆ, ಈ ಊರಿನ ಸಮಸ್ತರೂ ಸಕಲಕಲಾವಲ್ಲಭರು!

ಮತ್ತಷ್ಟು ಓದು »

25
ಆಗಸ್ಟ್

ಸ್ವಪ್ನ ಸಾರಸ್ವತ – ಎರಡು ಅನಿಸಿಕೆಗಳು

ಸ್ವಪ್ನ ಸಾರಸ್ವತ – ಕುಲ ಮತ್ತು ಕಾಲದ ಕಥೆ

– ನವೀನ ಗಂಗೋತ್ರಿ

ಸ್ವಪ್ನ ಸಾರಸ್ವತ'ನೆನಪಳಿಯದ ಕೃತಿಗಳ ಸಾಲಿನಲ್ಲಿ ಈ ಹೆಸರು ಎಂದಿಗೂ ಅಜರಾಮರ- ಸ್ವಪ್ನ ಸಾರಸ್ವತ. ಒಂದು ಕೃತಿ ಯಾಕೆ ಹಾಗೆ ಪದೇ ಪದೇ ಸ್ಮರಣೀಯವಾಗುತ್ತದೆ ಎನ್ನುವುದಕ್ಕೆ ಆ ಕೃತಿಯ ರೋಚಕತೆಯಾಗಲೀ, ಕಥೆಯ ಕಲ್ಪಕತೆ ಅಥವಾ ಕುತೂಹಲದ ತುದಿಯಲ್ಲಿ ನಿಲ್ಲಿಸುವ ಗುಣವಾಗಲೀ ಕಾರಣವಾಗದೆ ಆ ಕೃತಿಯು ತನ್ನ ಪಾತ್ರಗಳ ಮೂಲಕ ಮಾನವ ಬದುಕಿನ ಯಾವೆಲ್ಲ ಘಟ್ಟಗಳನ್ನು ತಾಕಬಲ್ಲದು,ಮತ್ತು ತಾತ್ತ್ವಿಕವಾಗಿ ಯಾವ ಅನಿಸಿಕೆಯನ್ನು ವ್ಯಕ್ತಪಡಿಸಬಲ್ಲದು ಎನ್ನುವುದು ಕಾರಣವಾಗುತ್ತದೆ. ಮಹಾಕಾವ್ಯಗಳಲ್ಲದೆ, ನಮ್ಮನಡುವೆ ಉಳಿದುಬಂದ ಯಾವುದೇ ಮೌಲಿಕ ಕೃತಿಯನ್ನು ತೆಗೆದುಕೊಂಡರೂ ಅದರ ಸಾರ್ವತ್ರಿಕ ಗುಣ ಇದುವೇ ಆಗಿರುತ್ತದೆ- ಮಾನವ ಬದುಕನ್ನು ಅದು ಕಾಣುವ ರೀತಿ ಮತ್ತು ಕಟ್ಟಿಕೊಡುವ ತಾತ್ತ್ವಿಕತೆ. ಬದುಕಿನ ಅರ್ಥದ ಬಗ್ಗೆ ಮನುಷ್ಯನಿಗಿರುವ ಆರದ ಕುತೂಹಲವೂ ಇದಕ್ಕೆ ಕಾರಣವಿದ್ದೀತು. ಎಷ್ಟೇ ರೋಚಕವಾದರೂ ಯಾವುದೋ ಸಾಮಾನ್ಯ ಪತ್ತೇದಾರಿ ಕಾದಂಬರಿ, ಯಾವುದೋ ಸಾಮಾನ್ಯ ಪ್ರೇಮ ಕಥೆ ನೆನಪಿರುವುದು ತುಂಬ ತುಂಬ ವಿರಳ. ಸಾರಸ್ವತದ ಚಿರಂಜೀವಿತ್ವ ಇರುವುದು ಅದರ ಚಿಂತನೆ ಮತ್ತು ತಾತ್ತ್ವಿಕ ಹಿನ್ನೆಲೆಯಲ್ಲಿ.

ಗೋವೆಯೆಂಬ ಪುಟ್ಟ ನಾಡಲ್ಲಿ ತಮ್ಮಪಾಡಿಗೆ ತಾವು ಬದುಕಿದ್ದ ಸಾರಸ್ವತ ಜನಾಂಗ, ಏಕಾ ಏಕಿ ಎರಗಿದ ಹುಂಬ ಪೋರ್ಚುಗೀಸರ ಭಯಂಕರ ಕಿರುಕುಳ ತಾಳಲಾರದೆ ತಮ್ಮ ಉಸಿರಿನ ನೆಲ ಬಿಟ್ಟು, ಬದುಕಲ್ಲಿ ಎಂದಿಗೂ ಕಂಡಿರದಿದ್ದ ಅರಿಯದ ನೆಲೆಗೆ ಎದ್ದುನಡೆದ ಕಥೆ ಅದು. ಕಥೆಯ ಹಂದರವಂತೂ ತುಂಬ ತುಂಬ ಸಂಕೀರ್ಣವಾಗಿದೆ. ಓದುವುದಕ್ಕೇ ಅದೊಂದುಬಗೆಯ ಏಕಾಗ್ರತೆಯನ್ನು ಬೇಡುವ ಈ ಕೃತಿ ತನ್ನ ಬರಹಗಾರನಲ್ಲಿ ಬೇಡಿದ ತಪಸ್ಸಿನ ಮೊತ್ತವನ್ನು ಕಲ್ಪಿಸಿ ಚಕಿತನಾಗುತ್ತೇನೆ.

ಸಮುದಾಯವೊಂದು ತನ್ನ ಜೀವನೆಲೆಯಂತಿರುವ ಭೂಭಾಗವನ್ನು ತೊರೆದು ಬರುವಾಗ ಅದೊಂದು ’ಕೇವಲ ಸ್ಥಾನಾಂತರಣ’ ಆಗಿರದೆ, ತಲೆಮಾರುಗಳನ್ನು ಪ್ರಭಾವಿಸುವ ಸಂಗತಿಯಾಗಿರುತ್ತದೆ ಎನ್ನುವುದು ಸಾರಸ್ವತವನ್ನು ಓದುವಾಗ ನಿಚ್ಚಳವಾಗುತ್ತದೆ. ತನ್ನ ಪರಿವಾರ, ಪರಿಸ್ಥಿತಿ, ಸಮೂಹದ ಸಮೇತ ಒಂದು ಕುಲ ಸ್ಥಾನಾಂತರವಾಗುವಾಗ ಯಾವುದೆಲ್ಲವನ್ನು ತನ್ನೊಡನೆ ಕೊಂಡೊಯ್ಯಬಹುದು? ಆಸ್ತಿ, ಹಣ, ಒಡವೆ, ಉಳಿಕೆ, ಗಳಿಕೆ- ಯಾವುದನ್ನು? ಸಾರಸ್ವತದ ದೃಷ್ಟಿ ಕೇಂದ್ರಗೊಳ್ಳುವುದು ಇದ್ಯಾವುದರ ಮೇಲೆಯೂ ಅಲ್ಲ, ಬದಲಿಗೆ ಆ ಹಂತದಲ್ಲಿ ಮನುಷ್ಯ ತುಂಬಾ ಗಾಢವಾಗಿ ಹೊತ್ತೊಯ್ಯಲು ಬಯಸುವುದೆಂದರೆ ತನ್ನ ತಲೆಮಾರುಗಳಿಗೆ ಸಾಕಾಗುವಷ್ಟು ನೆನಪನ್ನು, ಸಂಪ್ರದಾಯ ಆಚಾರ ಮತ್ತು ನಂಬುಗೆಗಳನ್ನು ಎಂಬ ನಿಲುಮೆಗೆ ಸಾರಸ್ವತ ಬರುತ್ತದೆ. ನೆಲ ಬಿಟ್ಟೆದ್ದು ಬಂದದ್ದೇ ಆಚಾರದ ಉಳಿಕೆಗಾಗಿ ಎಂಬಾಗ, ಹೊತ್ತೊಯ್ಯಬೇಕಿರುವುದು ಅದನ್ನೇ ಅಲ್ಲವೆ?

ಮತ್ತಷ್ಟು ಓದು »

24
ಆಗಸ್ಟ್

ಯು. ಆರ್. ಅನಂತಮೂರ್ತಿಯವರ “ಪ್ರಜ್ಞೆ ಮತ್ತು ಪರಿಸರ”

ಡಾ. ಪ್ರವೀಣ ಟಿ. ಎಲ್,ಕುವೆಂಪು ವಿಶ್ವವಿದ್ಯಾನಿಲಯ

URAಕಳೆದ ವರ್ಷ ತುಂಬಾ ಚರ್ಚೆಯಲ್ಲಿದ್ದು, ಈಗ ನಮ್ಮೊಂದಿಗಿಲ್ಲದ ಹಿರಿಯ ಸಾಹಿತಿ ಯು. ಆರ್ ಅನಂತಮೂರ್ತಿ. ಅವರು ಮೋದಿ ವಿರುದ್ಧ ನೀಡಿದ ಹೇಳಿಕೆಯಿಂದ ಹಿಡಿದು, ಅವರ ಅಂತ್ಯ’ಸಂಸ್ಕಾರ’ದ ನಂತರವೂ ಸುದ್ದಿಯಲ್ಲಿದ್ದರು. ಆ ಸಂದರ್ಭದಲ್ಲಿ ಅವರನ್ನು ಅರ್ಥಮಾಡಿಕೊಳ್ಳಲು ಸ್ವತಃ ಅವರ ಸಮರ್ಥಕರಿಗೂ, ವಿಮರ್ಶಕರಿಗೂ ಸ್ವಲ್ಪ ತ್ರಾಸವೇ ಆಯಿತು. ಆಗ ಕೆಲವರು ಅನಂತಮೂರ್ತಿಯವರ ನಿಲುವನ್ನು ‘ಕಪಟತನ’ ಎಂದು ಒರಟಾಗಿಯೂ, ಇನ್ನು ಕೆಲವರು ‘ದ್ವಂಧ್ವ’ ಎಂದೂ ತೀರ್ಪಿತ್ತರು.  ಅವರ ಗ್ರಹಿಕೆಯ ಸಂಪೂರ್ಣ ಚಿತ್ರಣವನ್ನು ನೀಡುವುದು ಈ ಲೇಖನದ ವ್ಯಾಪ್ತಿಯಲ್ಲಿ ಅಸಾಧ್ಯ. ಆದರೆ ಅವರು ಹಿಂದೂ ಸಂಪ್ರದಾಯಗಳ ‘ಆಂತರಿಕ ವಿಮರ್ಶಕ’ರಾಗಿ ಜೀವನದುದ್ದಕ್ಕೂ ಅದರ ಆಚರಣೆಗಳನ್ನು ಟೀಕಿಸುತ್ತಾ ಬಂದವರು, ಕೊನೆಗೆ ಆ ಸಂಪ್ರದಾಯದಂತೆಯೇ ತನ್ನ ಸಂಸ್ಕಾರ ನಡೆಯಬೇಕೆಂದು ಇಚ್ಚಿಸಿದ್ದು ದೊಡ್ಡ ಚರ್ಚೆಗೆ ಗ್ರಾಸವಾಯಿತು. ಈ ನಡೆಯು ಅವರ ಪ್ರಗತಿಪರ ಮಿತ್ರರಿಗೆ ನುಂಗಲಾರದ ತುತ್ತಾಗಿದ್ದು ಈಗ ಇತಿಹಾಸ. (ಅವರ ಕಾದಂಬರಿಯ ನಾರಾಣಪ್ಪನವರ ಸಂಸ್ಕಾರದಂತೆ ತನ್ನ ಸಂಸ್ಕಾರ ದೊಡ್ಡ ಸವಾಲಾಗದಿರಲಿ ಎಂದು ಬ್ರಾಹ್ಮಣ ಪರಂಪರೆಯಂತೆ ತಮ್ಮ ಅಂತ್ಯಸಂಸ್ಕಾರವಾಗಬೇಕೆಂಬ ಇಚ್ಚೆಯನ್ನು ವ್ಯಕ್ತಪಡಿಸಿದರೇನೋ!!)  ಆದರೆ ಹೀಗ್ಯಾಕೆ ಮಾಡಿದರು ಎಂಬ ಪ್ರಶ್ನೆಗೆ ಬಹುತೇಕರು ಸಮರ್ಪಕ ಉತ್ತರ ಹುಡುಕುವ ಬದಲಿಗೆ, ಅದನ್ನು ಬ್ರಾಹ್ಮಣರ ಕುತಂತ್ರಕ್ಕೋ, ಕಪಟತನಕ್ಕೋ ಸಂಬಂಧ ಕಲ್ಪಿಸಿ ಕೈತೊಳೆದುಕೊಂಡರು. ಆದರೆ ಅದನ್ನು ಗ್ರಹಿಸಲು ಯತ್ನಿಸಿದ ಕೆಲವರು ‘ಮೇಷ್ಟ್ರು ನಮ್ಮ ನಂಬಿಕೆಗೆ ಮೋಸ ಮಾಡಿದರು’ ಎಂದು ಅಲವತ್ತುಕೊಳ್ಳುವಲ್ಲಿಯೇ ತೃಪ್ತಿಹೊಂದಿದರು. ಆ ದ್ವಂದ್ವವನ್ನು ಅರ್ಥೈಸುವ ಚಿಕ್ಕ ಪ್ರಯತ್ನವೇ ಈ ಬರಹ.

ಮತ್ತಷ್ಟು ಓದು »

24
ಆಗಸ್ಟ್

ಆನುದೇವಾ ಹೊರಗಣವನು ಸೆಕ್ಯುಲರಿಸಂನಿಂದ

– ರಾಕೇಶ್ ಶೆಟ್ಟಿ

ಆನುದೇವಾ ಹೊರಗಣವನು ಸೆಕ್ಯುಲರಿಸಂಅರಸರ ಆಡಳಿತದಲ್ಲಿದ್ದು ಆ ನಂತರ ದಶಕಗಳಿಗೂ ಹೆಚ್ಚು ಕಾಲದ ಮಾವೋವಾದಿಗಳ ಹಿಂಸಾಚಾರದ ನಂತರ ಅರಸರ ಆಡಳಿತಕ್ಕೆ ತಿಲಾಂಜಲಿಯಿಟ್ಟು ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ ನೇಪಾಳಿಗಳು ಮತ್ತು ನೇಪಾಳ ಹೆಜ್ಜೆ-ಹೆಜ್ಜೆಗೂ ಸವಾಲುಗಳನ್ನು ಎದುರಿಸುತ್ತಲೇ ಸಾಗುತ್ತಲಿದೆ.ಪ್ರಜಾಪ್ರಭುತ್ವಕ್ಕೆ ಕಾಲಿಟ್ಟಂತೆ,ಹೊಸ ಸಂವಿಧಾನ ರಚಿಸುವ ನಿರ್ಧಾರಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಬಂದಿದ್ದರೂ ೨೦೦೬ರಿಂದ ಈ ಪ್ರಕ್ರಿಯೆ ನಾನಾ ವಿಘ್ನಗಳಿಂದ ಕುಂಟುತ್ತಲೇ ಸಾಗಿದೆ.ಇತ್ತೀಚೆಗೆ ನಡೆದ ಪ್ರಬಲ ಭೂಕಂಪದ ನಂತರ ದೊಡ್ಡ ಮನಸ್ಸು ಮಾಡಿ ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗೂಡಿ ಮತ್ತೆ ಈ ಕಾರ್ಯಕ್ಕೆ ಜೈ ಎಂದಿದ್ದವು.ಈಗ ಕಾರ್ಯ ಶುರುವಾದಂತೆ ಬಹಳಷ್ಟು ಪರ-ವಿರೋಧ ಪ್ರತಿಭಟನೆ ಚರ್ಚೆಗಳು ಶುರುವಾಗಿವೆ.

ಅವುಗಳಲ್ಲಿ ಒಂದು,ನೇಪಾಳದ ಭಾಗಗಳನ್ನು ಜನರ ಆಚರಣೆ-ಭಾಷೆಯ ಮೇಲೆ ಪ್ರತ್ಯೇಕವಾಗಿಸುವುದನ್ನು ವಿರೋಧ ವ್ಯಕ್ತವಾಗುತ್ತಿದೆ.ಈ ನಡೆ ಮುಂದೆ ನೇಪಾಳವನ್ನು ಇನ್ನಷ್ಟು ಚೂರು ಚೂರು ಮಾಡಲಿದೆ ಎಂಬ ದೂರದೃಷ್ಟಿಯುಳ್ಳವರು ನೇಪಾಳದಲ್ಲಿರುವುದು ನೇಪಾಳಿಗಳ ಪುಣ್ಯವೇ ಸರಿ.ಬಹುಷಃ ಅವರು ಭಾರತದ ಸ್ಥಿತಿಯಿಂದ ಪಾಠ ಕಲಿತಿರಬಹುದು.ಅದರಲ್ಲೂ ಮುಖ್ಯವಾಗಿ ಭಾರತದ ಈಶಾನ್ಯ ರಾಜ್ಯಗಳನ್ನು ನೋಡಿ.ಒಂದೆಡೆ ಮಿಷನರಿಗಳ ಚಿತಾವಣೆ,ಮತ್ತೊಂದೆಡೆ ಜನಾಂಗೀಯ ಆಧರಿತ ಉಗ್ರಪಡೆಗಳ ಹಿಂಸಾಚಾರಗಳಿಂದ ಈಗಾಗಲೇ ಎಂಟು ರಾಜ್ಯಗಳಾಗಿರುವ ಈಶಾನ್ಯ ಭಾಗವೂ ಇನ್ನೂ ಚೂರುಚೂರಾಗುವ ಆಂತಕವಿದ್ದೇ ಇದೆ.ಈಶಾನ್ಯ ರಾಜ್ಯಗಳ ಉದಾಹರಣೆಯೇಕೆ.ನೆರೆಯ ತಮಿಳುನಾಡಿನಲ್ಲಿಯೇ ಭಾಷೆ ಮತ್ತು ನಮ್ಮ ಸಂಸ್ಕೃತಿಯಗೇ ಪರಕೀಯವಾದ ’ದ್ರಾವಿಡ ಜನಾಂಗೀಯ’ ಎಂಬ ಹುಚ್ಚು ಕಲ್ಪನೆಯ ಚಳುವಳಿಯ ನೆಪದಲ್ಲಿ ಏನೆಲ್ಲಾ ಅಧ್ವಾನಗಳಾಯಿತು ಎಂಬುದನ್ನು ನೋಡಿದರೆ ಸಾಕಲ್ಲವೇ? ಈ ನಿಟ್ಟಿನಲ್ಲಿ ನೋಡಿದಾಗ ನೇಪಾಳಿಗಳ ಆತಂಕ ಸರಿಯಾಗಿದೆ ಎನಿಸುತ್ತದೆ.

ಮತ್ತಷ್ಟು ಓದು »

22
ಆಗಸ್ಟ್

ಡಾ. ಯು.ಆರ್ ಅನಂತಮೂರ್ತಿ ನೆನಪಿನಲ್ಲಿ

– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ಯು.ಆರ್ ಅನಂತಮೂರ್ತಿಕನ್ನಡದ ಶ್ರೇಷ್ಟ ಬರಹಗಾರ ಮತ್ತು ಚಿಂತಕ ಡಾ.ಯು.ಆರ್.ಅನಂತಮೂರ್ತಿ ನಿಧನರಾಗಿ ಅಗಸ್ಟ್ 22 ಕ್ಕೆ ಒಂದು ವರ್ಷವಾಯಿತು. ತಮ್ಮ ಸಮಗ್ರ ಸಾಹಿತ್ಯದ ಮೂಲಕ ಕನ್ನಡಕ್ಕೆ ಆರನೆ ಜ್ಞಾನಪೀಠ ತಂದುಕೊಟ್ಟು ಕನ್ನಡ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ ಡಾ.ಯು.ಆರ್.ಅನಂತಮೂರ್ತಿ ಅವರು ಸಂಸ್ಕಾರ, ಭವ, ಘಟಶ್ರಾದ್ಧ, ಬರ ಹೀಗೆ ಸಂಖ್ಯಾತ್ಮಕ ದೃಷ್ಟಿಯಿಂದ ಬೆರಳೆಣಿಕೆಯ ಕಾದಂಬರಿಗಳನ್ನು ಮತ್ತು ಕೆಲವು ಕಥಾ ಸಂಕಲನಗಳನ್ನು ಬರೆದು ಬರೆದದ್ದು ಕಡಿಮೆ ಎಂದೆನಿಸಿದರೂ ಅವರು ಬರೆದದ್ದೆಲ್ಲ ತುಂಬ ಮೌಲಿಕವಾದದ್ದು. 1960 ರ ದಶಕದಲ್ಲಿ ‘ಸಂಸ್ಕಾರ’ದಂಥ ಸಂಪ್ರದಾಯ ವಿರೋಧಿ ಕಾದಂಬರಿಯನ್ನು ಅದು ಕುರುಡು ನಂಬಿಕೆಗಳು ಅತ್ಯಂತ ಪ್ರಸ್ತುತವಾಗಿದ್ದ ದಿನಗಳಲ್ಲಿ ಬರೆಯಲು ಸಾಧ್ಯವಾಗಿದ್ದು ಮೂರ್ತಿಗಳಲ್ಲಿದ್ದ ಸಮಾಜದ ಕುರಿತಾದ ಕಳಕಳಿಗೆ ನಿಜವಾದ ದೃಷ್ಟಾಂತ. ಸಂಪ್ರದಾಯವನ್ನು ವಿರೋಧಿಸಿ ಬರೆಯಲು ತಮಗೆ ಹೇಗೆ ಸಾಧ್ಯವಾಯಿತು ಎನ್ನುವುದನ್ನು ತಮ್ಮ ಆತ್ಮಕಥನ ‘ಸುರಗಿ’ಯಲ್ಲಿ ಹೀಗೆ ಹೇಳಿಕೊಂಡಿರುವರು ‘ಅಪ್ಪ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ್ದ ಹೊಲದ ಕೆಲಸದ ಆಳನ್ನು ತಮ್ಮ ಸಮಕ್ಕೆ ಕೂಡಿಸಿಕೊಂಡು ಊಟ ಹಾಕುತ್ತಿದ್ದ ಅಂದಿನ ಮನೆಯ ವಾತಾವರಣವೇ ನಾನು ಬದುಕುತ್ತಿದ್ದ ವ್ಯವಸ್ಥೆಯನ್ನು ವಿರೋಧಿಸಿ ಬರೆಯಲು ಸ್ಪೂರ್ಥಿ ನೀಡಿತು’. ಸಂಪ್ರದಾಯಗಳು ಜಡ್ಡುಗಟ್ಟಿದ ಆ ದಿನಗಳಲ್ಲೇ ಅನಂತಮೂರ್ತಿ ಅವರು ಅಂತರ್ ಧರ್ಮೀಯ ವಿವಾಹವಾಗಿದ್ದು ಅವರೊಳಗಿನ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ. ಕೇವಲ ಉಪದೇಶಿಸದೆ ಹೇಳಿದ್ದನ್ನು ಸ್ವತ: ಕಾರ್ಯಗತ ಮಾಡಿತೋರಿಸಿದ ಅವರೊಳಗಿನ ಈ ಧಾಡಸಿತನದ ಗುಣವೇ ಅವರನ್ನು ವಿರೋಧಿಸುವವರಂತೆ ಮೆಚ್ಚುವ ಮತ್ತು ಅಭಿಮಾನಿಸುವ ಅಭಿಮಾನಿಗಳ ಪಡೆಯನ್ನೇ ಸೃಷ್ಟಿಸಿತು. ಡಾ.ಯು.ಆರ್.ಅನಂತಮೂರ್ತಿ ವೈಚಾರಿಕವಾಗಿ ಅತ್ಯಂತ ಪ್ರಬುದ್ಧರಾಗಲು ಮತ್ತು ತಾನು ಬದುಕುತ್ತಿದ್ದ ವ್ಯವಸ್ಥೆಯ ಅಪಸವ್ಯಗಳನ್ನು ವಿರೋಧಿಸುವಂತಾಗಲು ಅವರು ಪಡೆದ ಇಂಗ್ಲಿಷ್ ಶಿಕ್ಷಣವೂ ಕಾರಣವಾಯಿತು. ಬರ್ಮಿಂಗ್‍ಹ್ಯಾಮ್ ಯುನಿವರ್ಸಿಟಿಯಲ್ಲಿನ ಇಂಗ್ಲಿಷ್ ಶಿಕ್ಷಣ ಅವರನ್ನು ಬರಹಗಾರನ ಜೊತೆಗೆ ಒಬ್ಬ ಚಿಂತಕನನ್ನಾಗಿಯೂ ರೂಪಿಸಿತು. ಅದಕ್ಕೆಂದೇ ಅವರು ತಮ್ಮ ಬರಹ ಮತ್ತು ವೈಚಾರಿಕ ಚಿಂತನೆಗಳಿಂದ ತಾವು ಬದುಕುತ್ತಿದ್ದ ಸಮಾಜವನ್ನು ಕಾಲಕಾಲಕ್ಕೆ ಜಾಗೃತಗೊಳಿಸುತ್ತಲೇ ಬಂದರು. ಬರಹಗಾರನೊಬ್ಬ ಸಮಾಜದ ಸಮಸ್ಯೆಗಳು ಮತ್ತು ವ್ಶೆರುಧ್ಯಗಳಿಗೆ ಸದಾಕಾಲ ಮುಖಾಮುಖಿಯಾಗಿರಬೇಕು ಎನ್ನುವ ನಿಲುವು ಅವರದಾಗಿತ್ತು. ಉತ್ತಮವಾದದ್ದನ್ನು ಉತ್ತೇಜಿಸಿ ಮಾತನಾಡುತ್ತಿದುದ್ದಕಿಂತ ತಮಗೆ ಸರಿಕಾಣದ್ದನ್ನು ಅವರು ಖಂಡಿಸಿ ಮಾತನಾಡಿದ್ದೇ ಹೆಚ್ಚು. ಲೇಖಕ ಸತ್ಯನಾರಾಯಣ ಅವರು ಹೇಳುವಂತೆ ಲೇಖಕನಾದವನ ಕೆಲಸ ಸದಾಕಾಲ ಓದುಗರಿಗೆ ಪ್ರಿಯವಾದದ್ದನ್ನೇ ಹೇಳುವುದಲ್ಲ ಎನ್ನುವ ಮಾತು ಅನಂತಮೂರ್ತಿ ಅವರಿಗೆ ಹೆಚ್ಚು ಅನ್ವಯವಾಗುತ್ತದೆ. ಈ ಕಾರಣದಿಂದಲೇ ಅವರು ‘ಬರಹಗಾರ ಏನನ್ನೂ ಸುಲಭವಾಗಿ ಒಪ್ಪಿಕೊಳ್ಳದೆ ಎಲ್ಲವನ್ನೂ ಅನುಮಾನದಿಂದ ನೋಡಬೇಕು’ ಎಂದು  ಯುವಬರಹಗಾರರಿಗೆ ಕಿವಿಮಾತು ಹೇಳುತ್ತಿದ್ದರು.
ಮತ್ತಷ್ಟು ಓದು »

21
ಆಗಸ್ಟ್

ಮಾತೃಪ್ರೇಮಕ್ಕೂ ಒ೦ದು ವೈಜ್ಞಾನಿಕ ವಿವರಣೆಯಿದೆ ಗೊತ್ತಾ…?

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಮಾತೃ ಪ್ರೇಮತು೦ಬ ಪ್ರೀತಿಯಿ೦ದ ಮಗನನ್ನು ಬೆಳೆಸಿರುತ್ತಾಳೆ ತಾಯಿ.ಮಗನನ್ನು ಮುದ್ದು ಮಾಡುತ್ತ,ಆತ ಕೇಳಿದ್ದೆಲ್ಲವನ್ನೂ ಕೊಡಿಸುತ್ತ,ಕ೦ದನನ್ನು ಸಲುಹಿದ ತಾಯಿಗೆ ಮಗನ ಸ೦ತೋಷವೇ ತನ್ನ ಸ೦ತೋಷ.ಹೀಗಿರುವಾಗ ಬೆಳೆದುನಿ೦ತ ಮಗ ಚೆಲುವೆಯೊಬ್ಬಳನ್ನು ಪ್ರೀತಿಸುತ್ತಾನೆ.ಹುಡುಗಿಗೂ ಇವನನ್ನು ಕ೦ಡರೆ ಇಷ್ಟ.ಆದರೆ ಇವನಮ್ಮ ಅ೦ದರೆ ಕಷ್ಟ.ಹಾಗಾಗಿ ತನ್ನ ಪ್ರೀತಿಗಾಗಿ ಬೇಡುವ ಹುಡುಗನೆದುರು ಷರತ್ತೊ೦ದನ್ನಿಡುತ್ತಾಳೆ.’ತನ್ನ ಪ್ರೀತಿ ಬೇಕಾದರೆ ,ಹೆತ್ತಮ್ಮನ ಹೃದಯವನ್ನು ಕಿತ್ತು ತರಬೇಕು’.ಬೆಳೆದುನಿ೦ತ ಹುಡುಗನಿಗೆ ಈಗ ತಾಯಿ ಬೇಕಿಲ್ಲ.ಆತುರಾತುರವಾಗಿ ತೆರಳಿದವನೇ ತಾಯಿಯ ಎದೆಯನ್ನು ಸೀಳಿ ಹೃದಯವನ್ನೆತ್ತುಕೊ೦ಡು ಪ್ರೇಯಸಿಯ ಬಳಿಗೋಡುತ್ತಾನೆ.ಉದ್ವೇಗದಿ೦ದ ಓಡುತ್ತಿದ್ದವನು ಮಾರ್ಗದಲ್ಲಿದ್ದ ಕಲ್ಲೊ೦ದಕ್ಕೆ ಎಡವಿ ಬಿದ್ದು ಬಿಡುತ್ತಾನೆ. ‘ಅಮ್ಮಾ..’ ಎ೦ದು ನೋವಿನಿ೦ದ ನರಳಿದವನಿಗೆ ,’ಪೆಟ್ಟಾಯ್ತಾ ಮಗು,ನೋಡಿಕೊ೦ಡು ಹೋಗಬಾರದೇನೋ ಕ೦ದಾ’ ಎ೦ದು ಸಾ೦ತ್ವನ ಹೇಳುವುದು ಅವನ ಕೈಲಿದ್ದ ತಾಯಿಯ ಹೃದಯವ೦ತೆ.ಬಹುಶ; ಈ ಕತೆಯನ್ನು ನೀವೆಲ್ಲರೂ ಕೇಳಿರುತ್ತೀರಿ.ತಾಯಿಯ ಮಹತ್ವವನ್ನು ಸಾರುವ ಈ ಕತೆ ಸಾಕಷ್ಟು ಹಳೆಯದ್ದೇ.ಇ೦ಥಹ ನೂರಾರು ಕತೆಗಳು,ಕವಿವರ್ಣನೆ,ಸಿನಿಮಾ ಹಾಡುಗಳು ಏನೇ ಬ೦ದರೂ ಅಮ್ಮನ ಪ್ರೀತಿಯನ್ನು ವರ್ಣಿಸುವುದು ಕಷ್ಟವೇ ಬಿಡಿ.ಆಕೆಯ ಪ್ರೀತಿಗಿರುವ ಶಕ್ತಿಯೇ ಅ೦ಥದ್ದು.ಹುಟ್ಟಿದಾರಭ್ಯ ಮಗುವಿನ ಜೀವಕ್ಕೆ ಜೀವವಾಗುವವಳು ಅಮ್ಮ.ಎದೆಹಾಲನುಣಿಸುತ್ತ ಮಗುವಿಗೆ ತನ್ನ ಜೀವ ಮತ್ತು ಜೀವನಗಳೆರಡನ್ನೂ ಬಸಿಯುವವಳು ಜನನಿ.ಕೂಸಿಗಾಗಿ ತನ್ನ ಜೀವವನ್ನಾದರೂ ಆಕೆ ಒತ್ತೆಯಿಟ್ಟಾಳು.ಮನುಷ್ಯರು ಬಿಡಿ.ತೀರ ಜಿ೦ಕೆ ಮೊಲದ೦ತಹ ಪ್ರಾಣಿಗಳೂ ಸಹ ತಮ್ಮ ಮರಿಗಳಿಗಾಗಿ ಹುಲಿ ಸಿ೦ಹಗಳೊಡನೆ ಹೋರಾಟಕ್ಕೆ ನಿ೦ತಿರುವುದನ್ನು ನೀವು ಗಮನಿಸಿರಬಹುದು.ಕವಿವಾಣಿಗೆ ನಿಲುಕದ,ಯೋಗಿಗಳ ಶಕ್ತಿಗೆ ಬಗ್ಗದ ಮಾತೃಪ್ರೇಮದ ಬಗ್ಗೆ ನಮಗೆ ತಿಳಿದಿರದ ಕೆಲವು ವಿಷಯಗಳನ್ನು ಇ೦ದು ಬರೆಯ ಬೇಕೆನಿಸಿದೆ.

ಮತ್ತಷ್ಟು ಓದು »