ಸುಳ್ಸುದ್ದಿ : ಹಿಂದೂಪರ ಸಂಘಟನೆಗಳಿಂದಲೇ ಇನ್ನು ಬುದ್ಧಿಜೀವಿಗಳ ರಕ್ಷಣೆ !!
– ಪ್ರವೀಣ್ ಕುಮಾರ್ ಮಾವಿನಕಾಡು
ರಾಜ್ಯದಲ್ಲಿ ವಿಚಾರವಾದಿಯೆಂದು ಹೇಳಿಕೊಳ್ಳುವ ಯಾವುದೇ ವ್ಯಕ್ತಿಗೆ ಏನೇ ಆದರೂ ಅದಕ್ಕೆ ಯಾವುದೇ ಆಧಾರವಿಲ್ಲದೆಯೂ ಹಿಂದೂಪರ ಸಂಘಟನೆಗಳೇ ನೇರ ಹೊಣೆ ಹೊರಬೇಕಾಗಿದ್ದು, ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಿಂದೂಪರ ಸಂಘಟನೆಗಳೇ ನೇರವಾಗಿ ಅವರುಗಳ ರಕ್ಷಣೆಯ ಹೊಣೆಯನ್ನು ಹೊರಲು ಮುಂದಾಗಿವೆ!
ಎಲ್ಲಿ ಯಾರಿಗೆ ಏನೇ ಆಗಲೀ,ಸ್ಥಳಕ್ಕೆ ಪೊಲೀಸರು ಬರುವ ಮುನ್ನವೇ ಉಳಿದ ಬುದ್ಧಿಜೀವಿಗಳು ಮತ್ತು ಕೆಲವು ಪಕ್ಷಗಳು ಹಿಂದೂಪರ ಸಂಘಟನೆಗಳನ್ನೇ ಹೊಣೆ ಮಾಡಿ ಅವರನ್ನು ಅಪರಾಧಿ ಎಂದು ತೀರ್ಮಾನಿಸಿ ಶಿಕ್ಷೆಯ ಪ್ರಮಾಣವನ್ನೂ ಪ್ರಕಟಿಸಿಯಾಗಿರುತ್ತದೆ! ಆದ್ದರಿಂದ ಹಿಂದೂ ಸಂಘಟನೆಗಳಿಗೆ ಈ ಬುದ್ಧಿಜೀವಿಗಳು ‘ಬದುಕಿದ್ದರೂ ಕಷ್ಟ-ಸತ್ತರೂ ಕಷ್ಟ’ ಎಂಬಂತಾಗಿದೆ. ಈ ಸಂಕಟದಿಂದ ಪಾರಾಗಲು ಈ ಬೇಜವಬ್ದಾರಿ ಅವರುಗಳ ಒಂದು ಕೂದಲೂ ಕೊಂಕದಂತೆ ರಕ್ಷಣೆ ಮಾಡುವ ಜವಾಬ್ಧಾರಿಯನ್ನು ಇನ್ನು ಮುಂದೆ ನಮ್ಮ ಸಂಘಟನೆಗಳೇ ಹೊರಲಿವೆ ಎಂದು ಹೆಸರು ಹೇಳಲಿಚ್ಚಿಸದ ಹಿಂದೂಪರ ಸಂಘಟನೆಯ ಕಾರ್ಯಕರ್ತರೊಬ್ಬರು ತಿಳಿಸಿದರು.
“ವಿಚಾರವಾದಿಗಳ ರಕ್ಷಣಾ ಪಡೆ” ಎನ್ನುವ ಗಟ್ಟಿಮುಟ್ಟಾದ ಯುವಕರ ತಂಡವೊಂದನ್ನು ರಚಿಸಿದ್ದು,ಸುಮಾರು 2000 ಯುವಕರಿಗೆ ಈ ಬಗ್ಗೆ ಈಗಾಗಲೇ ತರಬೇತಿಯನ್ನು ನೀಡಲಾಗುತ್ತಿದೆ.ಇನ್ನು ಕೆಲವೇ ದಿನಗಳಲ್ಲಿ ಅವರನ್ನು ವಿಚಾರವಾದಿಗಳ ರಕ್ಷಣೆಗೆ ನೇಮಿಸಲಾಗುತ್ತದೆ.ಹಿರಿಯ “ಮಾಜಿ ಪತ್ರಕರ್ತ,ಹಾಲಿ ಬುದ್ದಿಜೀವಿ ಕಮ್ ರಾಜಕಾರಣಿ”ಯೊಬ್ಬರು ನೀಡಿದ, ಪ್ರಾಣಾಪಾಯವನ್ನೆದುರಿ -ಸುತ್ತಿರುವ ವಿಚಾರವಾದಿಗಳ ಜ್ಯೇಷ್ಠತಾ ಪಟ್ಟಿಯನ್ನಾಧರಿಸಿ ಮೇಲ್ವರ್ಗದ ಬುದ್ಧಿಜೀವಿಗಳಿಂದ ಹಿಡಿದು ಅತ್ಯಂತ ಕೆಳ ಹಂತದ ಬುದ್ಧಿಜೀವಿಗಳವರೆಗೂ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.