ವೀರಶೈವ ಸಂಪ್ರದಾಯ: ಕೆಲವು ಒಗಟುಗಳು
– ಚೈತ್ರ, ಕುವೆಂಪು ವಿಶ್ವವಿದ್ಯಾನಿಲಯ.
ಕರ್ನಾಟಕದಲ್ಲಿ ವೀರಶೈವ ಸಮುದಾಯವು ಹಲವಾರು ಚರ್ಚೆಗೆ ಒಳಪಟ್ಟಿದೆ. ತಮ್ಮ ಅಸ್ಮಿತೆಯ ಹುಡುಕಾಟಕ್ಕಾಗಿ ಶತಮಾನಗಳಿಂದ ಹೆಣಗಾಡುತ್ತಿರುವಂತೆ ಈ ಸಮುದಾಯ ಮೇಲ್ನೋಟಕ್ಕೆ ಕಂಡುಬಂದರೂ ಸಹ ಅದು ಭಾಗಶಃ ಸತ್ಯವಾದುದು. ಕಾರಣ, ಸಮುದಾಯಗಳೇ ಸ್ವಯಂ ಪ್ರೇರಣೆಯಿಂದ ತಮಗೊಂದು ಅಸ್ಮಿತೆ ಬೇಕೆಂಬ ಹಂಬಲದಿಂದ ನಡೆಸಿರುವ ಹೋರಾಟದಂತೆ ಅದು ಗೋಚರಿಸುವುದಿಲ್ಲ. ಬದಲಿಗೆ, ಸಮುದಾಯದ ನಾಯಕರುಗಳು, ವಿದ್ವಾಂಸರು, ರಾಜಕೀಯ ನೇತಾರರು, ಹಾಗೂ ಸಾಹಿತಿಗಳು ಇಂತಹ ಹೋರಾಟದ ಮಂಚೂಣಿಯಲ್ಲಿರುವುದು ಕಣ್ಣಿಗೆ ಕಾಣುವ ಸತ್ಯ. ಅವರ ಹೋರಾಟ ಅಸ್ಮಿತೆಗಾಗಿಯೋ ಅಥವಾ ಮತ್ಯಾವುದಾದರೂ ಉದ್ದೇಶಕ್ಕಾಗಿಯೋ ಎಂಬುದನ್ನು ಅರ್ಥೈಸಿಕೊಳ್ಳುವ ಮುನ್ನ ಆ ಸಮುದಾಯದ ಕುರಿತು ಯಾವ ನೆಲೆಗಳಲ್ಲಿ ಚರ್ಚೆಗಳಾಗಿವೆ ಎಂಬುದನ್ನು ನೋಡಬೇಕಾಗುತ್ತದೆ.
ಪ್ರಸ್ತುತ ಲೇಖನದಲ್ಲಿ ವೀರಶೈವ ಸಮುದಾಯದ ಕುರಿತ ವಿವರಣೆಗಳನ್ನು ಪರೀಶಿಲಿಸುವ ಮೂಲಕ ಆ ಸಮುದಾಯವು ನಮ್ಮ ಅರ್ಥಗ್ರಹಿಕೆಗೆ ಬರಲು ಸಾಧ್ಯವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು. ಈವರೆಗಿನ ವಿವರಣೆಗಳನ್ನು ಮೆಲುಕುಹಾಕಿದರೆ, ಅವುಗಳು ಪರಸ್ಪರ ವಿರುದ್ಧವಾಗಿಯೂ, ವಿಭಿನ್ನವಾಗಿಯೂ ಮತ್ತು ಕೆಲವು ಬಾರಿ ಒಂದಕ್ಕೊಂದು ಸಂಬಂಧವೇ ಇಲ್ಲದ ರೀತಿಯಲ್ಲಿ ನಿರೂಪಿತವಾಗಿರುವುದು ಗೋಚರಿಸುತ್ತದೆ. ಅಂದರೆ ಸ್ಪಷ್ಟವಾಗಿ ಅದೊಂದು ಒಗಟಾಗಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಆ ಒಗಟಿನ ಸ್ವರೂಪವನ್ನು ಅರ್ಥೈಸುವ ಪ್ರಯತ್ನವನ್ನು ಮಾಡಲಾಗುವುದು. ವೀರಶೈವ ಅಧ್ಯಯನಗಳು ಹಲವು ಆಯಾಮಗಳಲ್ಲಿ ವಿವಿಧ ಬಗೆಯಲ್ಲಿ ವೀರಶೈವರನ್ನು ನಿರೂಪಿಸುತ್ತವೆ. ಅಂತಹ ಚರ್ಚೆಗಳಲ್ಲಿ ಬಹುಮುಖ್ಯ ವಿಷಯವೆಂದರೆ, ವೀರಶೈವರನ್ನು ಎರಡು ರೀತಿಯಲ್ಲಿ ಗುರುತಿಸುತ್ತಿರುವುದಾಗಿದೆ. ಅಂದರೆ ವೀರಶೈವ ಧರ್ಮವು ಹಿಂದೂ ಧರ್ಮದ ಭಾಗವೆಂದು ಒಂದು ಗುಂಪು ಪ್ರತಿಪಾದಿಸಿದರೆ, ಅದಕ್ಕೆ ಪ್ರತಿಯಾಗಿ, ವೀರಶೈವ ಧರ್ಮ ಹಿಂದೂ ಧರ್ಮವನ್ನು ಪ್ರತಿಭಟಿಸಿ ಹುಟ್ಟಿರುವ ಧರ್ಮವಾಗಿದ್ದು, ಇದು ಪ್ರತ್ಯೇಕವಾದ ಸ್ವತಂತ್ರವಾದ ಧರ್ಮವಾಗಿದೆ ಎಂದು ಇನ್ನೊಂದು ಗುಂಪು ಪ್ರತಿಪಾದಿಸುತ್ತದೆ. ಈ ಎರಡು ರೀತಿಯ ಚಿಂತನೆಗಳನ್ನು ಹಲವಾರು ಚಿಂತಕರು ವಿಭಿನ್ನ ನೆಲೆಗಳಲ್ಲ್ಲಿ ತಮ್ಮ ವಾದವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮತ್ತಷ್ಟು ಓದು