ವಿಷಯದ ವಿವರಗಳಿಗೆ ದಾಟಿರಿ

Archive for

31
ಜನ

ಬುದ್ಧಿಜೀವಿಗಳೆಂಬ ಆಸ್ಥಾನ ವಿದೂಷಕರನ್ನು ಕಡೆಗಣಿಸಬೇಡಿ!

– ರೋಹಿತ್ ಚಕ್ರತೀರ್ಥ

ಕೋತಿ ಮತ್ತು ಬಾಳೆಹಣ್ಣುಜನವರಿ 28ನೇ ತಾರೀಕು ಮೈಸೂರು ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ಒಂದು ನುಡಿನಮನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇತ್ತೀಚೆಗೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲನಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮ ಅದು. ವಡ್ಡೇರ ಎಂಬ ಹಿಂದುಳಿದ ಜಾತಿಯ ತಂದೆಗೆ ಹುಟ್ಟಿದ ರೋಹಿತ್, ಹತ್ತು ವರ್ಷಗಳ ಹಿಂದೆಯೇ ಕ್ರಿಶ್ಚಿಯನ್ ಆಗಿ ಮತಾಂತರನಾಗಿದ್ದ ಎಂದು ದಾಖಲೆಗಳು ಹೇಳುತ್ತಿರುವಾಗ ಆತನನ್ನು ಬಲಾತ್ಕಾರವಾಗಿ ದಲಿತ ಎಂದು ಬಿಂಬಿಸಿ ಕಾರ್ಯಕ್ರಮ ಮಾಡಿದ್ದರ ಔಚಿತ್ಯ ಏನೋ ಗೊತ್ತಿಲ್ಲ. ಆತನ ಸಾವಿಗೆ ಕುಟುಂಬದೊಳಗಿನ ಜಗಳಗಳೇ ಕಾರಣವಾಗಿದ್ದವು ಎಂದು, ಆತನ ಮನೆಯವರನ್ನು ಸಂದರ್ಶಿಸಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವಿಸ್ತೃತವಾದ ವರದಿಯನ್ನು ಪ್ರಕಟಿಸಿದೆ. ಆದಾಗ್ಯೂ ಆತ ತನ್ನ ಕೊನೆಯ ಪತ್ರದಲ್ಲಿ ಬರೆಯದೇ ಇರುವ ವಿಷಯಗಳನ್ನು ತಾವಾಗಿ ಕಲ್ಪಿಸಿಕೊಂಡು ಸಾವನ್ನು ಯಾವ್ಯಾವುದೋ ಸಮಸ್ಯೆಗಳಿಗೆಲ್ಲ ತಗುಲಿ ಹಾಕುವುದಕ್ಕೆ ಬುದ್ಧಿಜೀವಿಗಳು ಮತ್ತು ಮಾಧ್ಯಮದ ಮಂದಿ ಪ್ರಯತ್ನಿಸುತ್ತಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ ಸರಕಾರಕ್ಕೆ ಮುಜುಗರ ತರುವುದೇ ಇವರೆಲ್ಲರ ಏಕೈಕ ಅಜೆಂಡಾ ಎಂಬುದು ಮತ್ತೆಮತ್ತೆ ಸಾಬೀತಾಗಿರುವ ಸತ್ಯ. ತಮ್ಮ ಕಾರ್ಯಸಾಧನೆಗಾಗಿ ಇವರು ಅಂತಾರಾಷ್ಟ್ರೀಯ ವೇದಿಕೆಗಳನ್ನು ಕೂಡ ನಿರ್ಲಜ್ಜೆಯಿಂದ ಬಳಸಿಕೊಳ್ಳಬಲ್ಲರು. ಬಿಬಿಸಿ ಮತ್ತು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳು ರೋಹಿತ್ ಆತ್ಮಹತ್ಯೆಯನ್ನು ಮುಂದಿಟ್ಟುಕೊಂಡು ಭಾರತದ ಮಾನ ಹರಾಜು ಹಾಕಿದ್ದೇ ಇದಕ್ಕೊಂದು ಜ್ವಲಂತ ನಿದರ್ಶನ.

ಇರಲಿ, ಆತನ ಸಾವಿಗೆ ಮಾನವೀಯ ನೆಲೆಯಲ್ಲಿ ದಲಿತ ಒಕ್ಕೂಟ ಕಾರ್ಯಕ್ರಮ ಯೋಜಿಸಿತ್ತು ಎಂದೇ ಹೇಳೋಣ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಬ್ಬರು ಘನ ಅತಿಥಿಗಳು ಆಡಿದ ಮಾತುಗಳಿಗೂ ಕಾರ್ಯಕ್ರಮದ ಆಶಯಕ್ಕೂ ತಾಳಮೇಳವೇ ಇರಲಿಲ್ಲ! ಒಬ್ಬ ಅತಿಥಿ ಕೆ.ಎಸ್. ಭಗವಾನ್, “ತ್ರೇತಾಯುಗದ ರಾಮನಿಗೆ ತನ್ನ ಪುರುಷತ್ವದ ಬಗ್ಗೆಯೇ ಸಂಶಯ ಇತ್ತು. ಹಾಗಾಗಿ ಎರಡು ಸಲ ಸೀತೆಯನ್ನು ಪರೀಕ್ಷೆಗೆ ಗುರಿಪಡಿಸಿದ. ಆ ಕಾಲದಲ್ಲಿ ಮಹಿಳೆಯರಿಗೂ ಆಸ್ತಿಯ ಹಕ್ಕು ಇದ್ದರೆ ಸೀತೆ ರಾಮನ ಜೊತೆ ವನವಾಸಕ್ಕೆ ಹೋಗುತ್ತಿರಲಿಲ್ಲ” ಎಂದರು. ಮುಂದುವರಿದು, “ರಾಮ ತನ್ನ ಪಟ್ಟಾಭಿಷೇಕದ ಕಾಲದಲ್ಲಿ 38 ಕೋಟಿ ರುಪಾಯಿಯ ಚಿನ್ನದ ನಾಣ್ಯಗಳನ್ನು ಪುರೋಹಿತರಿಗೆ ಕೊಟ್ಟ. ಹಾಗಾಗಿ ಪುರೋಹಿತಶಾಹಿಗಳು ರಾಮರಾಜ್ಯ ಬರಲಿ ಎನ್ನುತ್ತಿದ್ದಾರೆ” ಎಂಬ ಆಣಿಮುತ್ತುಗಳನ್ನು ಉದುರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎರಡನೇ ಅತಿಥಿ ಅದೇ ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಮಹೇಶ್ ಚಂದ್ರಗುರುಗಳು ಮೋದಿ, ಸ್ಮೃತಿ ಇರಾನಿ, ನೆಹರೂ ಮತ್ತು ವಿವಿಯ ಉಪಕುಲಪತಿ – ಎಲ್ಲರಿಗೂ ಹೋಲ್‍ಸೇಲ್ ಆಗಿ ಅವಾಚ್ಯಶಬ್ದಗಳಿಂದ ಬಯ್ದು ತನ್ನ ತೀಟೆ ತೀರಿಸಿಕೊಂಡರು. ಸಾಲದ್ದಕ್ಕೆ ಹುಚ್ಚ ವೆಂಕಟ್ ಸ್ಟೈಲ್‍ನಲ್ಲಿ ನನ್ ಎಕ್ಕಡಾ ನನ್ ಮಗಂದ್ ಎಂಬೆಲ್ಲ ಮುತ್ತಿನ ಹಾರದಂಥ ಪದಪುಂಜಗಳಿಂದ ತನ್ನ ಮಾತುಗಳನ್ನು ಕಳೆಗಟ್ಟಿಸಿ ಚಪ್ಪಾಳೆ ಗಿಟ್ಟಿಸಿದರು! ಈ ಇಬ್ಬರು ಪುಣ್ಯಾತ್ಮರು ಹೋದಲ್ಲೆಲ್ಲ ಏನು ಮಾತಾಡುತ್ತಾರೆನ್ನುವುದು ಇಡೀ ಜಗತ್ತಿಗೆ ಗೊತ್ತಿರುವಾಗ ಹುಡುಕಿ ಇಂಥವರನ್ನೇ ಕಾರ್ಯಕ್ರಮಕ್ಕೆ ಕರೆಸಿರುವುದನ್ನು ನೋಡಿದರೆ ದಲಿತ ಒಕ್ಕೂಟದ ಮುಖ್ಯ ಉದ್ಧೇಶ ರೋಹಿತ್‍ನಿಗೆ ಶ್ರದ್ಧಾಂಜಲಿ ಅರ್ಪಿಸುವುದಾಗಿರಲಿಲ್ಲ; ವಿವಾದದ ಬೆಂಕಿ ಹಾಕಿ ಅದರಲ್ಲಿ ಚಳಿ ಕಾಯಿಸಿಕೊಳ್ಳುವುದು ಮಾತ್ರವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.
ಮತ್ತಷ್ಟು ಓದು »

29
ಜನ

ನಿರ್ಭೀತಿಯೇ ಮೈವೆತ್ತಿರುವ ಆಸಾಮಿ,ಈ ಸುಬ್ರಮಣಿಯನ್ ಸ್ವಾಮಿ!

– ಸಹನಾ ವಿಜಯ್ ಕುಮಾರ್

ಸುಬ್ರಮಣ್ಯ ಸ್ವಾಮಿಸುಬ್ರಮಣಿಯನ್ ಸ್ವಾಮಿ! ಹೆಸರನ್ನು ಕೇಳಿದ ತಕ್ಷಣ ಎಂಥವರೂ ಎಚ್ಚೆತ್ತುಕೊಳ್ಳಲೇ ಬೇಕು. ಪ್ರತಿಕ್ರಿಯಿಸಲೇ ಬೇಕು. ಸಿಟ್ಟೋ, ಗೊಂದಲವೋ, ಹೆಮ್ಮೆಯೋ, ಪ್ರೀತಿಯೋ ಒಟ್ಟಿನಲ್ಲಿ ಯಾವುದಾದರೊಂದು ಭಾವವಂತೂ ಹೊಮ್ಮಲೇ ಬೇಕು! ಅವರನ್ನು ಉಪೇಕ್ಷೆ ಮಾಡಿ ತಲೆಯನ್ನೊಮ್ಮೆ ಅಡ್ಡಡ್ಡಲಾಗಿ ಕೊಡವಿಕೊಂಡು ಎದ್ದು ಬಿಡುವುದು ಎಂಥವರಿಗೂ ಸಾಧ್ಯವಿಲ್ಲ! ಮೊನ್ನೆ ಜನವರಿ 23ರಂದು ಮೈಸೂರಿನಲ್ಲಿ ಅವರನ್ನು ಭೇಟಿಯಾಗಲು ದೌಡಾಯಿಸುವಾಗ ಮನಸ್ಸಿನಲ್ಲಿ ಹಲವಾರು ಚಿತ್ರಗಳು. ಟಿವಿ ಚಾನೆಲ್‍ಗಳಲ್ಲಿ ವಾದಕ್ಕೆ ನಿಂತಾಗಲೆಲ್ಲ ಗುಂಡು ಹೊಡೆದ ಹಾಗೆ ಮಾತನಾಡುವ, ಎದುರಾಳಿಯನ್ನು ತಬ್ಬಿಬ್ಬುಗೊಳಿಸಿ ಮುಖದ ನೀರಿಳಿಸಿಬಿಡುವ ಅವರನ್ನು ನೇರಾನೇರ ಕಂಡು ಮಾತನಾಡುವ ಕಾತುರ. ಎದುರಿಗೆ ಹೋಗಿ ನಿಂತು ಸುರಿಸಿದ ಪ್ರಶ್ನೆಗಳ ಮಳೆಗೆ ಅವರದ್ದು ಸಿಡಿಲಬ್ಬರದ ಉತ್ತರ. ಸೆಕ್ಯುರಿಟಿಯವರ ಕೈಯಲ್ಲಿದ್ದ ಎಕೆ 47 ಬಂದೂಕನ್ನೂ ನಾಚಿಸುವಂಥ ಮಾತಿನ ವರಸೆ!

‘ಸರ್, ಸೋನಿಯಾ ಪ್ರಧಾನಿಯಾಗುವುದು ಕಾನೂನಿನ್ವಯ ಸಾಧ್ಯವಿಲ್ಲ ಎನ್ನುವ ವಿಷಯ ನೀವು ಹೇಳುವವರೆಗೂ (ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂರಿಗೆ ಪತ್ರ ಬರೆದು) ಯಾರಿಗೂ ಗೊತ್ತೇ ಇರಲಿಲ್ಲ, ಯಾವ ಸತ್ಯವನ್ನೇ ಆಗಲಿ ನೀವೇ ಶೋಧಿಸಬೇಕು, ನೀವಲ್ಲದೆ ಬೇರೆ ಯಾರೂ ದಿಕ್ಕಿಲ್ಲ ಎನ್ನುವ ಹಾಗಿಬಿಟ್ಟಿದೆಯಲ್ಲ, ಮುಂದೆ ಹೇಗೆ?’ ಎಂಬ ಕಳಕಳಿಯ ಪ್ರಶ್ನೆಗೆ ಅವರು ನಗುತ್ತಾ ಕೊಟ್ಟ ಉತ್ತರ – ‘ಅಯ್ಯೋ, ನನ್ನ ಕಥೆ ಈಗಲೇ ಮುಗಿದುಹೋಗುತ್ತದೆ ಅಂದುಕೊಂಡುಬಿಟ್ಟಿರೇನು? ಯಾರಿಗೆ ಗೊತ್ತು, ನಾನು ನೂರಿಪ್ಪತ್ತು ವರ್ಷಗಳ ಕಾಲ ಬದುಕಿದರೂ ಬದುಕಬಹುದು’ ಎಂದು! ‘ನಾನೊಬ್ಬ ಸಾಧಾರಣ ಹಿನ್ನೆಲೆಯಿಂದ ಬಂದಂಥ ಮನುಷ್ಯ. ಉಳಿದವರಿಗೂ ನನಗೂ ಇರುವ ಒಂದೇ ವ್ಯತ್ಯಾಸವೆಂದರೆ ನಾನು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ. ಗಾಂಧೀಜಿಯವರು ಇದ್ದುದೂ ಹಾಗೇ ಅಲ್ಲವೇ?’ ಎಂದು ತಿರುಗಿ ಪ್ರಶ್ನಿಸಿದರು ಸ್ವಾಮಿ.

ಮತ್ತಷ್ಟು ಓದು »

27
ಜನ

ನನ್ನ ಅನ್ನಭಾಗ್ಯ

– ಪ್ರೇಮಶೇಖರ

ತಿಂಡಿಅದು ಆಗಸ್ಟ್ 1984.  ಹದಿನೈದಿಪ್ಪತ್ತು ಕಿಲೋಮೀಟರ್ ದೂರದ ಡೆಲ್ಲಿ ಯೂನಿವರ್ಸಿಟಿಯಲ್ಲಿ ಎಂ.ಎ. ಮುಗಿಸಿ, ಮನೆಯಿಂದ ಐದಾರು ನಿಮಿಷಗಳ ನಡಿಗೆಯಷ್ಟು ಹತ್ತಿರದಲ್ಲಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಸೇರಿದ್ದೆ, ಎಂ.ಫಿಲ್.ಗಾಗಿ.  ಕ್ಲಾಸುಗಳು ಆರಂಭವಾಗಿದ್ದವು.ಮನೆಯಲ್ಲಿ ನಾನೊಬ್ಬನೇ.ಉಳಿದವರೆಲ್ಲಾ ಮೈಸೂರಿಗೆ ಹೋಗಿದ್ದರಿಂದ ಹಾಗೂ ಇನ್ನೊಂದು ತಿಂಗಳವರೆಗೆ ದೆಹಲಿಗೆ ಹಿಂತಿರುಗುವ ಯೋಚನೆ ಅವರ್ಯಾರಲ್ಲೂ ಇಲ್ಲದ್ದರಿಂದ ಅಲ್ಲಿಯವರೆಗೆ ನನ್ನ ಏಕಾಂತವಾಸ ನಿರ್ವಿಘ್ನವಾಗಿ ಸಾಗುವುದು ನಿಶ್ಚಿತವಾಗಿತ್ತು.ಏಕಾಂತವಾಸವೇನೋ ನನಗಿಷ್ಟವೇ.ಓದುತ್ತಾ, ಚಿತ್ರ ಬಿಡಿಸುತ್ತಾ ಕೂತುಬಿಟ್ಟೆನೆಂದರೆ ನನಗೆ ಸುತ್ತಲ ಪ್ರಪಂಚದ ಪರಿವೇ ಇರುತ್ತಿರಲಿಲ್ಲ. ಆದರೆ ಈಗೊಂದು ಪ್ರಾಬ್ಲಂ.  ಸುತ್ತಲ ಜಗತ್ತಿನ ಪರಿವೇ ಇಲ್ಲದಂತೆ ನನ್ನ ಜಗತ್ತಿನಲ್ಲಿ ನಾನಿರಲು ಅವಕಾಶ ಮಾಡಿಕೊಡುತ್ತಿದ್ದುದು ಅಕ್ಕ,ಕಾಲಕಾಲಕ್ಕೆ ಊಟತಿಂಡಿ ಚಾಯ್ ನಿಂಬುಪಾನಿಗಳನ್ನು ಸಪ್ಲೈ ಮಾಡುತ್ತಾ.  ಈಗ…?

ಆದರೆ ಪವಾಡವೊಂದು ಘಟಿಸಿಬಿಟ್ಟಿತು!

ನನ್ನ ಹೊಟ್ಟೆಪಾಡಿನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಕ್ಕೆ ಮೊದಲೇ ನೆರೆಯ ಮೂವರು ದಯಾದ್ರ ಮಹಿಳೆಯರು ಅಕ್ಕ ಹಿಂತಿರುಗುವವರೆಗೆ ನನ್ನನ್ನು ಜೀವಂತವಾಗಿಡುವ ಜವಾಬ್ದಾರಿಯನ್ನು ಸ್ವಇಚ್ಚೆಯಿಂದ ತೆಗೆದುಕೊಂಡುಬಿಟ್ಟರು.  ಮೂವರೂ ಸೇರಿ ಸಮಾಲೋಚನೆ ನಡೆಸಿ ಮಾಸಿಕ (ಅದರಾಚೆಗೂ ವಿಸ್ತರಿಸಲನುಕೂಲವಾದ ಫ್ಲೆಕ್ಸಿಬಿಲಿಟಿ ಅನುಚ್ಚೇದಗಳನ್ನೊಳಗೊಂಡ) ಯೋಜನೆಯೊಂದನ್ನು ರೂಪಿಸಿಬಿಟ್ಟರು.ಎಲ್ಲ ನಿರ್ಧರಿಸಿಕೊಂಡ ಮೇಲೇ ನನಗೆ ಹೇಳಿದ್ದು.

ಮತ್ತಷ್ಟು ಓದು »

26
ಜನ

ಸುಳ್ಸುದ್ದಿ : ರಾಜ್ಯದಲ್ಲಿ “ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ” ಅಸ್ತಿತ್ವಕ್ಕೆ

– ಪ್ರವೀಣ್ ಕುಮಾರ್ ಮಾವಿನಕಾಡು

Nilume Sulsuddi - Secular Terror Politicsದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ”ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ”ಅಸ್ತಿತ್ವಕ್ಕೆ ತರಲಾಗಿದ್ದು, ವೇದಿಕೆಗೆ ನೂತನ ಪದಾಧಿಕಾರಿಗಳನ್ನೂ ಸಹಾ ಆಯ್ಕೆ ಮಾಡಲಾಗಿದೆ.ಶಂಕಿತ ಭಯೋತ್ಪಾದಕರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಾಗೂ ಕೆಲ ಸುಧಾರಣೆಗಳ ಉದ್ದೇಶದಿಂದ ರಾಜ್ಯದಲ್ಲಿ “ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ” ಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಶ್ರೀಯುತ.ಕಾಣೇಶ್ ಜಲ್ಲಿಕಟ್ಟು ಹೇಳಿದರು.ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ವೇದಿಕೆಯ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರವಾಗಿದ್ದು ಆ ವೈವಿಧ್ಯತೆಯಲ್ಲಿ ಭಯೋತ್ಪಾದನೆಯೂ ಒಂದು ಸಂಸ್ಕೃತಿಯಾಗಿದೆ. ಆದರೆ ಇತ್ತೀಚಿಗೆ ಕೆಲವು ಪರಿವಾರಗಳು ಈ ದೇಶದಲ್ಲಿ ಏಕಸಂಸ್ಕೃತಿ ಹೇರುವ ಹುನ್ನಾರ ನಡೆಸಿದ್ದು ಭಯೋತ್ಪಾದಕರ ಮೂಲ ಸಂಸ್ಕೃತಿಯನ್ನು ನಾಶಪಡಿಸಲು ಯತ್ನಿಸುತ್ತಿವೆ ಎಂದು ಕಿಡಿಕಾರಿದರು.ಇಂತಹಾ ಸಂದರ್ಭದಲ್ಲಿ ಶಂಕಿತ ಭಯೋತ್ಪಾದಕರಿಗೆ ನೈತಿಕ ಬೆಂಬಲ ಅತ್ಯಗತ್ಯವಾಗಿದ್ದು ಅವರಿಗೆ ಬೆಂಬಲವಾಗಿ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.ಮುಂದಿನ ತಿಂಗಳು ವೇದಿಕೆಯವತಿಯಿಂದ ಶಂಕಿತ ಉಗ್ರಗಾಮಿಗಳನ್ನು ಸನ್ಮಾನಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಮತ್ತಷ್ಟು ಓದು »

25
ಜನ

ರೋಹಿತಾಶ್ವನು ಅಲ್ಲಿಂದ ಬರೆದ ಪತ್ರ

– ವಿಕ್ರಂ ಜೋಷಿ

ಕೊನೆಯ ಪತ್ರನೀವು ಇನ್ನೂ ನನ್ನ ಗುಂಗಿನಲ್ಲೇ ಇದ್ದೀರಂತ ಗೊತ್ತು. ನನ್ನ ಹೆಸರುವಾಸಿ ಮಾಡಿ, ನನ್ನ ವಂಶವನ್ನು ರಸ್ತೆಯಮೇಲೆ ತಂದ ಮಾಧ್ಯಮದವರಿಗೆ,ವೈಚಾರಿಕ ರಾಜಕಾರಣಿಗಳಿಗೇ ಧನ್ಯವಾದಗಳು. ನನ್ನಂತಹವರ ಸಾವಿಗೇ ಕ್ಯಾಮರಾ ಕಟ್ಟಿಕೊಂಡು ಕಾಯುತ್ತಿರುತ್ತಾರೆ.ನಿಜ ಬಯಲಿಗೆ ಬರಲಿ,ನೀವೆಲ್ಲಾ ಓದಲಿ ಅಂತ ಈ ಶೋಕ ಪತ್ರ ಬರೆದಿದ್ದು. ನನಗೆ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ತುಂಬಾ ಬೇಸರವಿದೆ.ನನ್ನದು ನಿಜವಾಗಿಯೂ ಆತ್ಮಹತ್ಯೆ ಅಲ್ಲ, ಕೊಲೆ. ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯುತ್ತಿರುವ ಈ ದೇಶದ ವಿರುದ್ಧ ಕೆಲ ದೇಶದ್ರೋಹಿಗಳು ಮಾಡುತ್ತಿರುವ ಸಂಚಿಗೆ ನಾನೂ ಒಬ್ಬ ಬಲಿ.ಕಡೆಗಾಲದಲ್ಲಿ ನನಗೆ ಸತ್ಯ ಅರಿವಾದರೂ, ಕಾಲ ಮಿಂಚಿ ಹೋಗಿತ್ತು. ಒಮ್ಮೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವ ಪ್ರವೃತ್ತಿ ನನ್ನದಲ್ಲ, ಇದನ್ನು ನೋಡಿಯೇ ಅಂದು ನನಗೆ ನೀನು ನಮ್ಮ ಮುಂದಿನ ನಾಯಕ ಎಂಬ ಮಹಾದಾಶೆ ತೋರಿಸಿದ್ದರಬೇಕು.

ಕಾಲೇಜಿಗೆ ಸೇರಿದಾಗಿನಿಂದ ನನಗೆ ಒಂದು ದಿನವೂ ಓದಲು ಅವಕಾಶ ಸಿಕ್ಕಿಲ್ಲ.”ನೀನು ಹಿಂದುಳಿದವ ಹಿಂದುಳಿದವ ಹೋರಾಡಬೇಕು”ಎಂಬ ಮಾತನ್ನು ಹೇಳಿ ಹೇಳಿ ನನ್ನ ಮನಸ್ಸು ತಿರುಗಿಸಿ ಬಿಟ್ಟರು,ಮೊದಲೇ ಬಿಸಿ ರಕ್ತದ ಯುವಕ.ನಾನು ನಂಬಿ ಕೆಟ್ಟೆ.ಕಾಲೇಜಿನಲ್ಲಿ ಓದುವುದನ್ನು ನಿಲ್ಲಿಸಿ ಹೀಗೆ ಹೋರಾಡುವುದನ್ನೇ ಮುಖ್ಯ ಭಾಗವಾಗಿ ಪರಿಗಣಿಸತೊಡಗಿದೆ, ಹೋರಾಡಿದ್ದಕ್ಕೆ ಬೇಸರವಿಲ್ಲ ಆದರೆ ಯಾಕೆ ಹೋರಾಡಿದೆ? ಯಾರಿಗೆ ಹೋರಾಡಿದೆ? ಯಾರು ಲಾಭ ಪಡೆದುಕೊಂಡರು? ಇಂದು ನನಗೆ ಅರ್ಥವಾಗುತ್ತಿದೆ, ಇಲ್ಲಿಯ ಮೆಟ್ಟಿಲಿನ ಮೇಲೆ ಕೂತು ನೋಡಿದಾಗ.

ಮತ್ತಷ್ಟು ಓದು »

22
ಜನ

ಆ ದಿನದ ಸಂಚಿಕೆಯಿಲ್ಲ…ತೊಳಲಾಟ ನಿಲ್ಲುವುದಿಲ್ಲ

– ಸಂದೀಪ್ ಶರ್ಮಾ ಮೂಟೇರಿ

ಕನ್ನಡ ಪತ್ರಿಕೆಗಳುವಿಜಯದಶಮಿಯ ದಿನ ಎಂದಿನಂತೆ ಬೆಳಿಗ್ಗೆ ಎದ್ದು ಬೆಳಗಿನ ಕಾರ್ಯಗಳನ್ನು ಮುಗಿಸಿ ಕಾಫಿ ಲೋಟವನ್ನು ಹಿಡಿದು ದಿನಪತ್ರಿಕೆಗಾಗಿ ಜಾಲಾಡಲು ಶುರುಮಾಡಿದೆ, ಇನ್ನು ಪೇಪರ್ ಹಾಕುವ ಹುಡುಗ ದಿನಪತ್ರಿಕೆಯನ್ನು ಹಾಕಿಲ್ಲವೇನೋ ಎಂದು ಮನಸ್ಸಿನಲ್ಲೆ ಹೇಳಿಕೊಂಡು ಹುಡುಕಲು ಯತ್ನಿಸಿದೆ, ಸಿಗಲಿಲ್ಲ. ಸಾಮಾನ್ಯವಾಗಿ ಪೇಪರ್ ಹಾಕುವ ಹುಡುಗ ಮಹಡಿಯ ಮೊಗಸಾಲೆಗೆ ಬಿಸಾಡುವ ಪ್ರಸಂಗ ಹೆಚ್ಚು ಎಂದು ತಿಳಿದು ಮೊಗಸಾಲೆಗೆ ಹೋಗಿ ನೋಡಿದರು ಪತ್ರಿಕೆಯ ಸುಳಿವಿಲ್ಲ. ಧರ್ಮಪತ್ನಿ ಒಗೆದಿದ್ದ ಬಟ್ಟೆಯನ್ನು ಹರಗಲು ಮೊಗಸಾಲೆಗೆ ಆಗಮಿಸಿದಾಗ ನಾನು ಪತ್ರಿಕೆಯವನಿಗಾಗಿ ಕಾಯುತ್ತಿರುವುದನ್ನು ಕಂಡು “ಏನು ಇಲ್ಲಿ ನಿಂತಿದ್ದೀರಿ?” ಎಂದು ಪ್ರಶ್ನಿಸಿದಳು. ನಾನು “ಪತ್ರಿಕೆಯವ ಇನ್ನು ಬರಲಿಲ್ಲವಲ್ಲ” ಎಂದೆ, ಅವಳು ಪುನರುಚ್ಚಿಸಿದಳು “ಎಲ್ರೀ ಬರ್ತಾನೆ, ಇವತ್ತು ಪತ್ರಿಕೆ ಬರೊಲ್ವಲ್ಲ, ನೆನ್ನೆ ಆಯುಧ ಪೂಜೆ ನಿಮಿತ್ತ ರಜೆ ಅಲ್ವೆ? ” ಎಂದಳು. ಹೌದಲ್ಲ, ನೆನ್ನೆ ತಾನೆ ಓದಿದ್ದ ನಾನು ಅಷ್ಟು ಬೇಗ ಮರೆತೆನೆ? ಎಂದು ಹಿಂದಿನ ದಿನದ ಬೆಳಗಿನ ಜಾವದ ಸಂದರ್ಭವನ್ನು ನೆನೆಸಿಕೊಂಡು ಒಳಗೆ ಬಂದೆ. ಬೆಳಗಿನ ಜಾವದ ಅಭ್ಯಾಸಬಲದಿಂದ ಮೊದಲು ಹುಡುಕುವುದೆ ಆ ದಿನದ ದಿನಪತ್ರಿಕೆಯನ್ನು, ವಾಚಕನ ದಿನಚರಿಯೆ ಹಾಗಲ್ಲವೆ?

ಒಳಗೆ ಬಂದರೆ ಕುಳಿತುಕೊಳ್ಳಲಾಗುತ್ತಿಲ್ಲ, ಕಾಫಿ ಹೀರುತ್ತಿದ್ದರು ಅದರ ರುಚಿಯು ಮನಸ್ಸಿಗೆ ನಾಟುತ್ತಿಲ್ಲ, ಅಂತರ್ಜಾಲ ಮೂಲಕ ಈ – ಪೇಪರ್ ಮೂಲಕವಾದರು ಸುದ್ದಿಗಳನ್ನು ತಿಳಿಯೋಣವೆಂದರೆ ಅಲ್ಲಿಯು ಇಲ್ಲ. ಸುದ್ದಿಗಳು ಜಾಲತಾಣದಲ್ಲಿ ದೊರಕುವುದರು ಕೂಡ ಪತ್ರಿಕೆಯನ್ನು ಕೈಯಲ್ಲಿ ಹಿಡಿದಷ್ಟು ಸಂತುಷ್ಟ ಮನೋಭಾವ ಹೊಂದಲು ಸಾಧ್ಯವೇ ಇಲ್ಲ. ವಿಧಿಯಿಲ್ಲದೆ ಹತ್ತು ದಿನಗಳ ಹಿಂದಿನ ಪತ್ರಿಕೆಯನ್ನು ಓದೋಣವೆಂದು ಅಂದುಕೊಂಡು ಹಳೆಯ ಪತ್ರಿಕೆಯನ್ನು ಕೈಗೆತ್ತಿಕೊಂಡಾಗ ಸಕಲ ಸುದ್ದಿಗಳು ಮನನ ಮಾಡಿದಂತೆ ಅದರ ಪದಗಳ ಲಾಲಿತ್ಯವು ಮನಸ್ಸಿಗೆ ನಾಟುತ್ತಿತ್ತು. ಕೂಡಲೇ ಎತ್ತಿಟ್ಟೆ. ನನ್ನ ತೊಳಲಾಟ ನೋಡಲಾರದೆ “ಏನ್ರಿ ! ಮುಖ್ಯವಾದ ವಸ್ತುವನ್ನು ಕಳೆದುಕೊಂಡವರ ತರಹ ಅತೃಪ್ತಿಯನ್ನು ಹೊಂದಿರುವವರಂತೆ ಕಾಣುತ್ತೀರಿ” ಎಂದಳು. “ಇವತ್ತಿನ ದಿನಪತ್ರಿಕೆ ಇಲ್ಲವಲ್ಲೆ” ಎಂದೆ. “ಅಯ್ಯೋ, ನೀವೋ…ನಿಮ್ಮ ದಿನಪತ್ರಿಕೆಯೋ..”ಎಂದು ಮೂದಲಿಸಿದಳು. “ನಿನಗೇನೆ ಗೊತ್ತು ಬಿಸಿ ಬಿಸಿ ಸುದ್ಧಿ ಹೇಳುವ ದಿನಪತ್ರಿಕೆಯ ತೂಕದ ವಿಷಯಗಳು” ಎಂದೆ. ತಲೆಚಚ್ಚಿಕೊಂಡು ತನ್ನ ಕೆಲಸದಲ್ಲಿ ಮಗ್ನಳಾದಳು. ನಾನು ನಿಂತಲ್ಲಿಯೆ ನಿಂತೆ ತೊಳಲಾಟವನ್ನು ಸಹಿಸಿಕೊಂಡು.

ಮತ್ತಷ್ಟು ಓದು »

21
ಜನ

ರೋಹಿತ್‌ ಬದುಕು ಮತ್ತು ಸಾವಿನ ಸುತ್ತ ರಾಜಕೀಯ

– ಇಂಚರ

ರೋಹಿತ್ ವೆಮುಲಾರೋಹಿತ್ ವೆಮುಲಾ – ಆತನ ವಯಸ್ಸು ಸುಮಾರು ೨೭ ವರ್ಷ, ಸಮಾಜ ವಿಜ್ಙಾನದಲ್ಲಿ ರಿಸರ್ಚ್ ಸ್ಕಾಲರ್, ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಓದು, ವಿದ್ಯಾರ್ಥಿ ಸಂಘಟನೆಗಳಲ್ಲಿ ಹುರುಪಿನಲ್ಲಿ ಪಾಲ್ಗೊಳ್ಳುತ್ತಿದ್ದವ….. ಇಷ್ಟೆಲ್ಲಾ ಇದ್ದರೂ ಆತ ಆತ್ಮಹತ್ಯೆ ಮಾಡಿಕೊಂಡದ್ದು ಏಕೆ?

೨೦೧೦ ರಲ್ಲಿ ಫೇಸ್ ಬುಕ್ಕಿಗೆ ಪ್ರವೇಶ ಪಡೆದ ಅವನು ಮೊದಮೊದಲಿಗೆ ಸಿನೆಮಾ ವಿಡಿಯೋ ತುಣುಕುಗಳನ್ನು, ಹೊಸ ವರ್ಷದ ಶುಭಾಶಯಗಳನ್ನು ಹಾಕಿಕೊಳ್ಳುತ್ತಿದ್ದವ, ನಂತರ ಪ್ರೀತಿ, ಪ್ರೇಮದ ಬಗೆಗಿನ ಪೋಸ್ಟ್ ಗಳು, ಹೆಣ್ಣುಮಕ್ಕಳನೆಲ್ಲಾ ಮೋಸ ಮಾಡುವ ಕ್ಯಾಟಗೆರಿಗೆ ಸೇರಿಸಿ ತಮಾಷೆ ಮಾಡುವಂತಹ ಪೋಸ್ಟ್ ಗಳನ್ನು ಹಾಕುತ್ತಿದ್ದವ, ತೀರಾ ಇತ್ತೀಚಿನ ಪೋಸ್ಟ್ ಗಳಲ್ಲಿ ಕೇವಲ ರಾಜಕೀಯಕ್ಕೆ ಸಂಬಂಧ ಪಟ್ಟ ಪೋಸ್ಟ್ ಗಳನ್ನೇ ಹಾಕಿಕೊಂಡಿರುವುದು ತಿಳಿಯುತ್ತದೆ. ಆತನ ತಂದೆ ಆಸ್ಪತ್ರೆಯೊಂದರಲ್ಲಿ ವಾಚ್ ಮ್ಯಾನ್, ತಾಯಿ ಟೇಲರ್. ಕಡು ಬಡತನದಿಂದ ಬಂದವ ಪಿಹೆಚ್ ಡಿ ಮಾಡಲು ವಿಶ್ವವಿದ್ಯಾಲಯಕ್ಕೆ ಸೇರುವುದು ಹರ ಸಾಹಸವೇ ಸರಿ. ಫೇಸ್ ಬುಕ್ಕಿನಲ್ಲಿ ಆತನ ಮನೆಯ ಫೋಟೋಗಳು, ಷೆಡ್ ನಂತಹ ಮನೆ, ಅದರ ಅಡುಗೆ ಮನೆ, ಅಪ್ಪನ ಯೂನಿ ಫಾರ್ಮ್ ನೇತಾಕಿರುವ ಹಗ್ಗ, ಅಮ್ಮನ ಹೊಲಿಗೆ ಯಂತ್ರದ ಫೋಟೋ, ಇವೆಲ್ಲವುಗಳ ಬಗ್ಗೆ ಅತ್ಯಂತ ಭಾವುಕನಾಗಿ ಬರೆದಿರುವ ರೀತಿ ನೋಡಿದಾಗ ಯಾರಿಗಾದರೂ ಆತನ ಭಾವುಕತೆ ಬಗ್ಗೆ ಅರ್ಥವಾಗುತ್ತದೆ. ತಾನಿದ್ದ ಹಾಸ್ಟೆಲಿನಲ್ಲಿ ವಿವೇಕಾನಂದರ ಫೋಟೋ ಮತ್ತು ಸಂದೇಶವನ್ನು ಹಾಕಿಕೊಂಡಿದ್ದವ, ಇದ್ದಕಿದ್ದಂತೆ ಇತ್ತೀಚೆಗೆ ವಿವೇಕಾನಂದರ ಬಗ್ಗೆ ಕೆಟ್ಟದಾಗಿ ಬರೆದದ್ದನ್ನು ನೋಡಿದರೆ ಈತನದು ಚಂಚಲ ಮನಸ್ಥಿತಿ ಎಂದು ತಿಳಿಯುತ್ತದೆ. ತನ್ನ ಡೆತ್ ನೋಟ್ ಕೂಡ ಕಾವ್ಯಾತ್ಮಕವಾಗಿ ಬರೆದಿದ್ದಾನೆಯೇ ಹೊರತು ತನ್ನ ಮನೆಯವರ ಬಗ್ಗೆ ಕಿಂಚಿತ್ತೂ ಕೂಡ ಯೋಚಿಸಿಲ್ಲ. ಮನಸ್ಸು ದುರ್ಬಲಗೊಂಡು, ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗುತ್ತದೆ. ಆತನ ಫೇಸ್ ಬುಕ್ ಡೈರಿ ಓದಿದಾಗ ಅಮಾಯಕ ಹುಡುಗನೊಬ್ಬನನ್ನು ನಮ್ಮ ರಾಜಕೀಯ ವ್ಯವಸ್ಥೆ (ಎಡ, ಬಲ, ದಲಿತ ಭೇದವಿಲ್ಲದೆ) ತುಳಿದದ್ದು ಅರ್ಥವಾಗುತ್ತದೆ. ಆತನ ಸಾವಿಗೆ ಇಡೀ ರಾಜಕೀಯ ವ್ಯವಸ್ಥೆ ಒಂದು ರೀತಿಯಲ್ಲಿ ಕಾರಣವಾದರೆ, ಅವನ ಅತಿ ಹೆಚ್ಚಿನ ಭಾವುಕತನ ಕೂಡ ಆತ್ಮಹತ್ಯೆಗೆ ಪ್ರೇರೇಪಿಸಿದೆ

ಮತ್ತಷ್ಟು ಓದು »

20
ಜನ

ಮಾಲ್ಡಾ ಗಲಭೆ ಮತ್ತು ಬಾಂಗ್ಲಾ ನುಸುಳುಕೋರರೆಂಬ ಟೈಂ ಬಾಂಬ್

– ರಾಕೇಶ್ ಶೆಟ್ಟಿ

ಮಾಲ್ಡಾನಾಲಗೆಯನ್ನು ಎಕ್ಕಡದಂತೆ ಬಳಸುವ ರಾಜಕಾರಣಿಗಳ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುವುದು ಸಮಾಜವಾದಿ ಪಕ್ಷದ ಅಜಂ ಖಾನ್. ಇತ್ತೀಚೆಗೆ ಆರೆಸ್ಸಿನ ನಾಯಕರ ಲೈಂಗಿಕತೆಯ ಬಗ್ಗೆ ಈತ ಕೆಟ್ಟದಾಗಿ ಮಾತನಾಡಿದ್ದರು. ಈತನಿಗಿಂತ ನಾನೇನೂ ಕಮ್ಮಿಯೆಂಬಂತೆ ಕಮಲೇಶ್ ತಿವಾರಿಯೆಂಬ ಹಿಂದೂ ಮಹಾಸಭದ ವ್ಯಕ್ತಿ ಪ್ರವಾದಿ ಮಹಮ್ಮದ್ ಅವರ ಬಗ್ಗೆ ಟೀಕೆ ಮಾಡಿದ್ದರು. ಮುಸ್ಲಿಮರು ಬೀದಿಗಿಳಿದರು,ತಿವಾರಿಯನ್ನು ಗಲ್ಲಿಗೇರಿಸಿ ಎಂದರು. ತಿವಾರಿಯ ಬಂಧನವಾಯಿತು.ಇದೆಲ್ಲಾ ನಡೆದಿದ್ದು ಕಳೆದ ಡಿಸೆಂಬರ್ ತಿಂಗಳಿನಲ್ಲಿ.

ಆದರೆ ಕಳೆದ ವಾರ ಜನವರಿ ೩ನೇ ತಾರೀಖು,ಬಂಗಾಳದ ಮಾಲ್ಡಾ ಜಿಲ್ಲೆಯ ಕಾಲಿಯಾ ಚಕ್ ಪ್ರದೇಶದಲ್ಲಿ ಈದ್ರಾ-ಈ-ಶರಿಯಾ ಎಂಬ ಸಂಘಟನೆ ಕಮಲೇಶನ ಹೇಳಿಕೆಯನ್ನು ಖಂಡಿಸಲೆಂದು ಪ್ರಚೋದನಕಾರಿ ಕರಪತ್ರವೊಂದನ್ನು ಹಂಚಿದೆ ಹಾಗೂ 3ನೇ ತಾರೀಖಿನ ಭಾನುವಾರ ಸುಮಾರು ಎರಡೂವರೆ ಲಕ್ಷದಷ್ಟು ಸಂಖ್ಯೆಯಲ್ಲಿದ್ದ ಗುಂಪು ಪ್ರತಿಭಟನೆಯಲ್ಲಿ ಹೊರಟಿದೆ.ಹಾಗೇ ಹೊರಡುವ ಮುನ್ನ ಪ್ರಚೋದನಕಾರಿ ಭಾಷಣವನ್ನು ಅವರ ತಲೆಗೆ ತುಂಬಲಾಗಿದೆ.ಮಾರಕಾಸ್ತ್ರಗಳನ್ನು ಹಿಡಿದು ಹೊರಟ ಉದ್ರಿಕ್ತ ಗುಂಪು ಕಾಲಿಯಾ ಚಕ್ ಪ್ರದೇಶದಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿಯಿಡುತ್ತ,ಮನೆಗಳಿಗೆ ದಾಳಿಯಿಡುತ್ತ,ಪೋಲಿಸ್ ಠಾಣೆಗೆ ನುಗ್ಗಿ ಅಲ್ಲಿದ್ದ ದಾಖಲೆಗಳು, ಪೋಲಿಸ್ ವಾಹನಗಳಿಗೂ ಬೆಂಕಿಯಿಟ್ಟು ದಾಂಧಲೆ ಮಾಡಿದ್ದರೆ.ಖುದ್ದು ಪೋಲಿಸರೇ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ.ಮತಾಂಧರು ದಾಳಿಯೆಬ್ಬಿಸಿ ಹೋದ ಎರಡು ದಿನಗಳ ನಂತರ ಪೋಲಿಸರು ಬೀದಿಗಿಳಿರುವುದಾಗಿ ಅಲ್ಲಿನ ಜನರು ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ.

ದಾದ್ರಿಯಲ್ಲಿ ನಡೆದ ಹತ್ಯೆಯೊಂದನ್ನು ಹಿಡಿದುಕೊಂಡು ದೇಶದ ಹೆಸರಿಗೆ ಮಸಿಬಳಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದ ಬುದ್ಧಿಜೀವಿಗಳು,ಸೆಕ್ಯುಲರ್ ಮೀಡಿಯಾಗಳು ಮಾಲ್ಡಾದ ಘಟನೆಯ ಬಗ್ಗೆ ತುಟಿಕ್ ಪಿಟಿಕ್ ಎನ್ನಲಿಲ್ಲ.ಮೊದಲಿಗೆ ಬಾಯಿಬಿಟ್ಟಿದ್ದು ಜೀ ನ್ಯೂಸಿನ ಸುಧೀರ್ ಚೌದರಿ,ಆ ನಂತರವೇ ಉಳಿದ ಚಾನೆಲ್ಲುಗಳು ಅನಿವಾರ್ಯವಾಗಿ ಬಾಯಿ ತೆರೆದವು.ಇಷ್ಟಾದರೂ ಬುದ್ಧಿಜೀವಿಗಳು ಬಾಯಿ ತೆಗೆಯಲಿಲ್ಲ.

ಮತ್ತಷ್ಟು ಓದು »

18
ಜನ

ಚೆಕಾಫ್ ನ ಕಥನಶಕ್ತಿಯ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತ…

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಅ೦ಟೋನ್ ಚೆಕಾಫ್ಇಳಿಸಂಜೆಯ ಹೊತ್ತಿನಲ್ಲಿ ಆ ಚಿಕ್ಕ ಹಳ್ಳಿಯ ರೈಲು ನಿಲ್ದಾಣದ ಆವರಣದಲ್ಲಿ ಮೆಲ್ಲಗೆ ನಡೆದುಕೊಂಡು ಹೋಗುತ್ತಿದ್ದ ನವದಂಪತಿಗಳಿಗದು ಶೃಂಗಾರದ ಸಮಯ.ಉತ್ಕಟ ಪ್ರೇಮದಿಂದ ಅವರಿಬ್ಬರು ಒಬ್ಬರನ್ನೊಬ್ಬರು ಅಂಟಿಕೊಂಡಿದ್ದರು.ಅವನ ಕೈಗಳು ಆಕೆಯ ಸೊಂಟವನ್ನು ಬಳಸಿದ್ದರೆ.ಆಕೆ ಪ್ರೀತಿಯ ಅಭಿವ್ಯಕ್ತಿಯೆನ್ನುವಂತೆ ತನ್ನ ತಲೆಯನ್ನು ಅವನ ಭುಜಕ್ಕೆ ಆನಿಸಿಕೊಂಡೇ ನಡೆದುಬರುತ್ತಿದ್ದಳು. ಆಗಸದಲ್ಲಿ ತೇಲುತ್ತಿದ್ದ ಮೋಡಗಳ ನಡುವೆ ಸುಮ್ಮನೇ ಇಣುಕಿದ ಚಂದ್ರ ,ಇವರಿಬ್ಬರ ಪ್ರೀತಿಯನ್ನು ಕಂಡು ಮೋಡಗಳ ನಡುವೆ ತನ್ನ ಮುಖವನ್ನು ಮುಚ್ಚಿಕೊಂಡ.ಹುಡುಗಿಯ ಸೌಂದರ್ಯ ಮತ್ತು ತುಸು ಹೆಚ್ಚೇ ಎನಿಸುವಷ್ಟು ಎದ್ದು ಕಾಣುತ್ತಿದ್ದ ಅವಳ ಸ್ತ್ರೀತ್ವ ಚಂದ್ರನಲ್ಲೂ ಅಸೂಯೆ ಮೂಡಿಸಿತೇನೊ ಎನ್ನುವಂತೆ ಭಾಸವಾಗುತ್ತಿತ್ತು.ಮುಸ್ಸಂಜೆಯ ನಸುಗತ್ತಲಲ್ಲಿ ಹಿತವಾಗಿ ಬೀಸುತ್ತಿದ್ದ ತಂಗಾಳಿಯ ತುಂಬೆಲ್ಲ ಹರಡಿಕೊಂಡಿದ್ದ ಕಾಡುಹೂವೊಂದರ ನಸುಗಂಪು ,ಸಂಜೆಯನ್ನು ಇನ್ನಷ್ಟು ಕಾವ್ಯಾತ್ಮಕವಾಗಿಸಿತ್ತು.ನಡುನಡುವೆ ಕಾಡಿನಲ್ಲೆಲ್ಲೋ ಕೂಗುತ್ತಿದ್ದ ಹಕ್ಕಿಯ ದನಿಯೂ ಹಿತವಾಗಿ ಕೇಳಿಸುತ್ತಿತ್ತು.

’ಓಹ್.! ಸಂಜೆಯೆನ್ನುವುದು ಎಷ್ಟು ಸುಂದರವಲ್ಲವೇ ಸಾಶಾ’,ಎಂದು ಮೆಲ್ಲಗೆತನ್ನ ಗಂಡನ ಕಿವಿಯೊಳಗೆ ಉಸುರಿದಳು ಬೆಡಗಿ .’ಒಂದು ಚಂದದ ಕನಸಿನಂತಿದೆ ನೋಡು ಈ ವಾತಾವರಣ.ಅಲ್ಲಲ್ಲಿ ಕಾಣುವ ಪೊದೆಗಳು,ರೈಲಿಹಳಿಗಳ ಪಕ್ಕಕ್ಕೆ ಅಷ್ಟಷ್ಟು ದೂರಕ್ಕೆ ನಿಲ್ಲಿಸಲಾಗಿರುವ ಉದ್ದನೆಯ ಲೋಹದ ಕಂಬಗಳು ಎಲ್ಲವೂ ಅದ್ಭುತವೇ.ಮನುಕುಲದ ಪ್ರಗತಿಯ ಪ್ರತೀಕವಾಗಿರುವ ರೈಲು ಕೂಡ ಅಪರೂಪದ ಸೌಂದರ್ಯವತಿ.ದೂರದಲ್ಲೆಲ್ಲೋ ಬರುತ್ತಿರುವ ರೈಲಿನ ಶಿಳ್ಳೆಯ ಶಬ್ದವನ್ನು ನಮ್ಮ ಕಿವಿಗೆ ತಲುಪಿಸುವ ಗಾಳಿಯದ್ದೂ ಒಂದು ಬಗೆಯ ಸೊಗಸಾದರೆ,ಈ ಸಂಜೆಯ ತಂಪಿನಲ್ಲಿ ಆ ಶಬ್ದವನ್ನು ಕೇಳುವುದು ಸಹ ಎಷ್ಟು ಹಿತವಾಗಿದೆ ಅಲ್ಲವೇ..’? ಎಂಬ ಪ್ರಶ್ನೆ ಆಕೆಯದ್ದು.
ಮತ್ತಷ್ಟು ಓದು »

18
ಜನ

ಮೌಢ್ಯದ ಪೊರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು

– ಮಹೇಶ ಕಲಾಲ್

ಅದಲು ಬದಲುಮೌಢ್ಯದ ಪೊರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು  ಸಾಹಿತ್ಯ, ಚರ್ಚಾ ಕೂಟಗಳಿಗೆ ಸದ್ವಿನಿಯೋಗಿಸುತ್ತಿರುವ ಹಿರಿಯ ಸಾಹಿತಿ ಬಸವರಾಜ ಶಾಸ್ತ್ರಿಯವರ ಸೇವಾಕಾರ್ಯ ಶ್ಲಾಘನೀಯವಾದದ್ದು.ಕಸವು ರಸವಾಗಲಿ, ಧ್ಯೇಯೋದ್ದೇಶಗಳು ಅದ್ವಿತೀಯ ಬೀಜಾಕ್ಷರಗಳಾಗಲಿ ಎಂಬ ದೃಷ್ಟಿಯಿಂದ ಪ್ರತಿಯೊಂದು ಕಾರ್ಯಕ್ಕೂ ಸಾಹಿತ್ಯ ಸೇವೆಯ ಅನುಪಮ ಅವಕಾಶವನ್ನು ಒದಗಿಸಿ, ಸಾಹಿತ್ಯ ಸೃಷ್ಟಿಯ ಜೊತೆಗೆ ವಾಗ್ದೇವಿಯ ವರಪುತ್ರರಿಗೆ ಆಹ್ವಾನವಿಯುತ್ತ ಇಳಿ ವಯಸ್ಸಿನಲ್ಲಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಸದಾ ತಾ ಮುಂದು ಎನ್ನುವು ಘೋಷಾ ವಾಕ್ಯದೊಂದಿಗೆ ಹಗಲಿರುಳೂ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಅದಲು-ಬದಲು ಕಥಾ ಸಂಕಲನ ಸತ್ಯದ ದಾರಿ ಹುಡುಕ ಹೊರಟ ಹರಿಶ್ಚಂದ್ರನ ಪಾಡಿನಂತಿದೆ.

ಮಹಿಳೆಯನ್ನು ಇಳೆಯಷ್ಟು ಕ್ಷಮಾಗುಣ ಸಂಪನ್ನಳು ಎಂಬಂತೆ ಬಸವರಾಜ ಶಾಸ್ತ್ರಿಯವರು ಇಲ್ಲಿ ಚಿತ್ರಿಸಿದ್ದಾರೆ. ತಮ್ಮ ಹಲವು ಕಥೆಗಳಲ್ಲಿ ಸ್ತ್ರೀ ಪ್ರಾಧ್ಯಾನ್ಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪುರುಷ ಪಾತ್ರಗಳ ಪ್ರಭಾವವಿದ್ದರೂ ಅಲ್ಲಿಯೂ ಮಹಿಳೆಯೇ ಕಥಾವಸ್ತುವನ್ನು ಪ್ರತಿನಿಧಿಸುತ್ತಾಳೆ. ಅವರ ಮಗ್ಗಲಿಗೆ ಬೇಕು ಮನೆಗೆ ಬೇಡ, ತ್ಯಾಗ, ವಾತ್ಸಲ್ಯ, ಅದಲು -ಬದಲು ಹೀಗೆ ತಮ್ಮ ಕತೆಗಳಲ್ಲಿ ಸ್ತ್ರೀಯನ್ನು ವಿಭಿನ್ನವಾಗಿ ಚಿತ್ರಿಸಿರುವುದು ಅವರ ಕಥಾಶೈಲಿಯಲ್ಲಿ ನಾವು ಕಾಣಬಹದು.

ಬಡತನವೆಂಬುದು ಜೇಡರ ಬಲೆ ಎಂಬ ಕಥಾ ವಸ್ತುವುಳ್ಳ ತ್ಯಾಗ ಕಥೆಯಲ್ಲಿ . ಶಿವನೇ ಇದೆಂತಹ ಪರೀಕ್ಷೆಯ ಕಾಲ. ಇವತ್ತು ಸಿಕ್ಕಿರುವುದು ಕೇವಲ ಅರ್ಧ ಸೇರು ಜೋಳ ಮಾತ್ರ. ಅದರಲ್ಲಿ ಮಾಡಿದ ಮೂರೇ ಮೂರು ರೊಟ್ಟಿಗಳನ್ನು ಆಗಲೇ ಮೂರು ಮಕ್ಕಳಿಗೆ ಹಂಚಿದ್ದಾಗಿದೆ. ಉಳಿದುದರಲ್ಲಿ ಅಂಬಲಿ ಕುದಿತಾ ಇದೆ. ಇದು ನನ್ನ ಮತ್ತು ಆ ಮಕ್ಕಳ ತಂದೆಯ ಪಾಲಿನದು ನಮ್ಮಿಬ್ಬರ ಪಾಲಿನದನ್ನು ಹಸಿದವಗೆ ಬಡಿಸುವ ಅಧಿಕಾರವಿದೆ. ಮೊದಲು ರೊಟ್ಟಿಯನ್ನು ಕೊಡದೆ ಕೇವಲ ಅಂಬಲಿಯನ್ನೇ ಬಡಿಸುವುದು ಹೇಗೆ ಎಂದು ಚಿಂತಿಸುತ್ತಾಳೆ.ಅಂಬಲಿಯು ಬಡತನದ ಸಂಕೇತ. ಅದನ್ನು ತೋರ್ಪಡಿಸುವುದು ಆ ಮನೆಯೊಡತಿ ಅನ್ನಪೂರ್ಣಮ್ಮಳಿಗೆ ಬೇಕಿಲ್ಲ. ಬಡತನ ಸ್ವಾಭಿಮಾನದ ಬದುಕನ್ನು ಕಲಿಸುತ್ತದೆ. ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿಯಾಗಿದೆ. ಹಾಗಾಗಿ ಅನ್ನಪೂರ್ಣಮ್ಮಳು ತನ್ನ ಮಕ್ಕಳ ಕೈಯಲ್ಲಿನ ಒಂದೊಂದೆ ರೊಟ್ಟಿಯನ್ನು  ತೆಗೆದುಕೊಂಡು ಹೋಗಿ ಆ ರೈತನಿಗೆ ಊಟ ಮಾಡಲು ಕೊಡುತ್ತಾಳೆ. ಮಕ್ಕಳ ಕೈಯಿಂದ ರೊಟ್ಟಿ ತೆಗೆದುಕೊಂಡು ಅತಿಥಿಗೆ ಉಣ ಬಡಿಸುವುದು ಅನ್ನಪೂರ್ಣಮ್ಮಳ ಸ್ವಾಭಿಮಾನದ ಹೃದಯವನ್ನು ತೋರಿಸುತ್ತದೆ.

ಮತ್ತಷ್ಟು ಓದು »