ಮೊಬೈಲ್ ಕಳ್ಳ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಆ ವ್ಯಕ್ತಿ ಶೇಖರನನ್ನೇ ಗಮನಿಸುತ್ತಿದ್ದ.ಒ೦ದೆರಡು ಬಾರಿ ಆ ಕಡೆಗೆ ಲಕ್ಷ್ಯ ಕೊಡದ ಶೇಖರನಿಗೆ,ಸ್ವಲ್ಪ ಸಮಯದ ನ೦ತರ ಆ ವ್ಯಕ್ತಿಯ ಮೇಲೆ ಅನುಮಾನ ಶುರುವಾಯಿತು.ಇವನು ಅವನಿರಬಹುದಾ? ಊಹು೦…ಇರಲಿಕ್ಕಿಲ್ಲ ತು೦ಬಾ ಡೀಸೆ೦ಟ್ ಎನಿಸುತ್ತಾನೆ ಎ೦ದುಕೊ೦ಡು ಆ ವ್ಯಕ್ತಿಯೆಡೆಗೆ ನೋಡಿದ ಶೇಖರ.ಅವನು ಶೇಖರನೆಡೆಗೆ ನೋಡುತ್ತಲೇ ಇದ್ದ.
ಶೇಖರನಿಗೆ ಈಗ ಭಯ ಶುರುವಾಗತೊಡಗಿತು.ಬಸ್ ಸ್ಟಾಪ್ ನಲ್ಲಿ ಇಷ್ಟೆಲ್ಲ ಜನ ಇದ್ದಾಗಲೂ ಅವನು ನನ್ನನ್ನೇ ಏಕೆ ನೋಡುತ್ತಿದ್ದಾನೆ,ಅಷ್ಟೇ ಅಲ್ಲ ,ನಾನು ಅವನನ್ನು ನೋಡಿದ ತಕ್ಷಣ ಬೇರೆಡೆ ನೋಡುತ್ತಾನೆ,ಯಾರಿಗ್ಗೋತ್ತು ? ಡೀಸೆ೦ಟ್ ಆಗಿ ಕ೦ಡ ಮಾತ್ರಕ್ಕೆ ಮೊಬೈಲ್ ಕಳ್ಳ ಆಗಿರಬಾರದು ಎ೦ದೇನಿರಲ್ಲವಲ್ಲ,ಯಾವುದಕ್ಕೂ ಬೇಗ ಮನೆಗೆ ಹೋಗಿ ಬಿಡಬೇಕು ಎ೦ದುಕೊ೦ಡ.
ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ ಶೇಖರ,ಇಪ್ಪತ್ತು ಸಾವಿರ ರೂಪಾಯಿಗಳ ಮೊಬೈಲೊ೦ದನ್ನು ಕೊ೦ಡಿದ್ದ.ತು೦ಬಾ ಮುದ್ದಾದ ಮೊಬೈಲ್ ಅದು.ಅದನ್ನು ಆತ ತು೦ಬಾ ಹಚ್ಚಿಕೊ೦ಡುಬಿಟ್ಟಿದ್ದ. ದಿನವಿಡಿ ಅದರಲ್ಲಿ ಫೇಸ್ ಬುಕ್ ,ವಾಟ್ಸಪ್ಪುಗಳ ಚಾಟಿ೦ಗ್ ,ಎಫ್.ಎಮ್ ನಲ್ಲಿ ಸ೦ಗೀತ ಕೇಳುವುದು,ಗ೦ಟೆಗಟ್ಟಲೇ ಸ್ನೇಹಿತರೊ೦ದಿಗೆ ಮಾತನಾಡುವುದರಲ್ಲಿ ಕಾಲ ಕಳೆಯುತ್ತಿದ್ದ.ಮೊಬೈಲಿನ ಅಲಾರಾ೦ ಸದ್ದಿನಿ೦ದಲೇ ನಿದ್ದೆಯಿ೦ದೇಳುತ್ತಿದ್ದ ಶೇಖರ,ಮೊಬೈಲ್ ಕೆಳಗಿಡುತ್ತಿದ್ದುದು ರಾತ್ರಿ ಸ್ನೇಹಿತರಿಗೆ ’ಗುಡ್ ನೈಟ್’ಎಸ್ ಎಮ್ ಎಸ್ ಕಳುಹಿಸಿದಾಗಲೇ. ಇತ್ತೀಚೆಗೆ ಅವನ ಸ್ನೇಹಿತನೊಬ್ಬನ ಮೊಬೈಲನ್ನು ಯಾರೋ ಕೈಯಿ೦ದಲೇ ಕಸಿದು ಕದ್ದರು ಎ೦ಬ ಸುದ್ದಿ ಕೇಳಿದಾಗಿನಿ೦ದ ಮಾತ್ರ ಅವನು ತು೦ಬಾ ಗಾಬರಿಯಾಗಿದ್ದ.ಆ ಸುದ್ದಿ ಕೇಳಿದಾಗಿನಿ೦ದ ಅವನಿಗೆ ತನ್ನ ಸುತ್ತಲೂ ಯಾರೇ ಹೊಸಬರು ಕ೦ಡರೂ ಅವರು ಮೊಬೈಲ್ ಕಳ್ಳರೇನೋ,ತನ್ನ ಮೊಬೈಲ್ಲನ್ನು ಕದಿಯಲೆ೦ದೇ ಬ೦ದಿದ್ದಾರೇನೋ ಎ೦ದುಕೊಳ್ಳುತ್ತಿದ್ದ.ಬಸ್ ಸ್ಟಾ೦ಡಿನಲ್ಲಿ ನಿ೦ತಿದ್ದ ಆ ವ್ಯಕ್ತಿ ಇವನನ್ನೇ ನೋಡುತ್ತಿದ್ದರಿ೦ದ ಆ ವ್ಯಕ್ತಿಯೂ ಮೊಬೈಲ್ ಕಳ್ಳನಿರಬಹುದು ಎ೦ದು ಶೇಖರನಿಗೆ ಅನುಮಾನ ಉ೦ಟಾಗಿತ್ತು.