ರೋಹಿತ್ ಬದುಕು ಮತ್ತು ಸಾವಿನ ಸುತ್ತ ರಾಜಕೀಯ
– ಇಂಚರ
ರೋಹಿತ್ ವೆಮುಲಾ – ಆತನ ವಯಸ್ಸು ಸುಮಾರು ೨೭ ವರ್ಷ, ಸಮಾಜ ವಿಜ್ಙಾನದಲ್ಲಿ ರಿಸರ್ಚ್ ಸ್ಕಾಲರ್, ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಓದು, ವಿದ್ಯಾರ್ಥಿ ಸಂಘಟನೆಗಳಲ್ಲಿ ಹುರುಪಿನಲ್ಲಿ ಪಾಲ್ಗೊಳ್ಳುತ್ತಿದ್ದವ….. ಇಷ್ಟೆಲ್ಲಾ ಇದ್ದರೂ ಆತ ಆತ್ಮಹತ್ಯೆ ಮಾಡಿಕೊಂಡದ್ದು ಏಕೆ?
೨೦೧೦ ರಲ್ಲಿ ಫೇಸ್ ಬುಕ್ಕಿಗೆ ಪ್ರವೇಶ ಪಡೆದ ಅವನು ಮೊದಮೊದಲಿಗೆ ಸಿನೆಮಾ ವಿಡಿಯೋ ತುಣುಕುಗಳನ್ನು, ಹೊಸ ವರ್ಷದ ಶುಭಾಶಯಗಳನ್ನು ಹಾಕಿಕೊಳ್ಳುತ್ತಿದ್ದವ, ನಂತರ ಪ್ರೀತಿ, ಪ್ರೇಮದ ಬಗೆಗಿನ ಪೋಸ್ಟ್ ಗಳು, ಹೆಣ್ಣುಮಕ್ಕಳನೆಲ್ಲಾ ಮೋಸ ಮಾಡುವ ಕ್ಯಾಟಗೆರಿಗೆ ಸೇರಿಸಿ ತಮಾಷೆ ಮಾಡುವಂತಹ ಪೋಸ್ಟ್ ಗಳನ್ನು ಹಾಕುತ್ತಿದ್ದವ, ತೀರಾ ಇತ್ತೀಚಿನ ಪೋಸ್ಟ್ ಗಳಲ್ಲಿ ಕೇವಲ ರಾಜಕೀಯಕ್ಕೆ ಸಂಬಂಧ ಪಟ್ಟ ಪೋಸ್ಟ್ ಗಳನ್ನೇ ಹಾಕಿಕೊಂಡಿರುವುದು ತಿಳಿಯುತ್ತದೆ. ಆತನ ತಂದೆ ಆಸ್ಪತ್ರೆಯೊಂದರಲ್ಲಿ ವಾಚ್ ಮ್ಯಾನ್, ತಾಯಿ ಟೇಲರ್. ಕಡು ಬಡತನದಿಂದ ಬಂದವ ಪಿಹೆಚ್ ಡಿ ಮಾಡಲು ವಿಶ್ವವಿದ್ಯಾಲಯಕ್ಕೆ ಸೇರುವುದು ಹರ ಸಾಹಸವೇ ಸರಿ. ಫೇಸ್ ಬುಕ್ಕಿನಲ್ಲಿ ಆತನ ಮನೆಯ ಫೋಟೋಗಳು, ಷೆಡ್ ನಂತಹ ಮನೆ, ಅದರ ಅಡುಗೆ ಮನೆ, ಅಪ್ಪನ ಯೂನಿ ಫಾರ್ಮ್ ನೇತಾಕಿರುವ ಹಗ್ಗ, ಅಮ್ಮನ ಹೊಲಿಗೆ ಯಂತ್ರದ ಫೋಟೋ, ಇವೆಲ್ಲವುಗಳ ಬಗ್ಗೆ ಅತ್ಯಂತ ಭಾವುಕನಾಗಿ ಬರೆದಿರುವ ರೀತಿ ನೋಡಿದಾಗ ಯಾರಿಗಾದರೂ ಆತನ ಭಾವುಕತೆ ಬಗ್ಗೆ ಅರ್ಥವಾಗುತ್ತದೆ. ತಾನಿದ್ದ ಹಾಸ್ಟೆಲಿನಲ್ಲಿ ವಿವೇಕಾನಂದರ ಫೋಟೋ ಮತ್ತು ಸಂದೇಶವನ್ನು ಹಾಕಿಕೊಂಡಿದ್ದವ, ಇದ್ದಕಿದ್ದಂತೆ ಇತ್ತೀಚೆಗೆ ವಿವೇಕಾನಂದರ ಬಗ್ಗೆ ಕೆಟ್ಟದಾಗಿ ಬರೆದದ್ದನ್ನು ನೋಡಿದರೆ ಈತನದು ಚಂಚಲ ಮನಸ್ಥಿತಿ ಎಂದು ತಿಳಿಯುತ್ತದೆ. ತನ್ನ ಡೆತ್ ನೋಟ್ ಕೂಡ ಕಾವ್ಯಾತ್ಮಕವಾಗಿ ಬರೆದಿದ್ದಾನೆಯೇ ಹೊರತು ತನ್ನ ಮನೆಯವರ ಬಗ್ಗೆ ಕಿಂಚಿತ್ತೂ ಕೂಡ ಯೋಚಿಸಿಲ್ಲ. ಮನಸ್ಸು ದುರ್ಬಲಗೊಂಡು, ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗುತ್ತದೆ. ಆತನ ಫೇಸ್ ಬುಕ್ ಡೈರಿ ಓದಿದಾಗ ಅಮಾಯಕ ಹುಡುಗನೊಬ್ಬನನ್ನು ನಮ್ಮ ರಾಜಕೀಯ ವ್ಯವಸ್ಥೆ (ಎಡ, ಬಲ, ದಲಿತ ಭೇದವಿಲ್ಲದೆ) ತುಳಿದದ್ದು ಅರ್ಥವಾಗುತ್ತದೆ. ಆತನ ಸಾವಿಗೆ ಇಡೀ ರಾಜಕೀಯ ವ್ಯವಸ್ಥೆ ಒಂದು ರೀತಿಯಲ್ಲಿ ಕಾರಣವಾದರೆ, ಅವನ ಅತಿ ಹೆಚ್ಚಿನ ಭಾವುಕತನ ಕೂಡ ಆತ್ಮಹತ್ಯೆಗೆ ಪ್ರೇರೇಪಿಸಿದೆ