ಚೆಕಾಫ್ ನ ಕಥನಶಕ್ತಿಯ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತ…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಇಳಿಸಂಜೆಯ ಹೊತ್ತಿನಲ್ಲಿ ಆ ಚಿಕ್ಕ ಹಳ್ಳಿಯ ರೈಲು ನಿಲ್ದಾಣದ ಆವರಣದಲ್ಲಿ ಮೆಲ್ಲಗೆ ನಡೆದುಕೊಂಡು ಹೋಗುತ್ತಿದ್ದ ನವದಂಪತಿಗಳಿಗದು ಶೃಂಗಾರದ ಸಮಯ.ಉತ್ಕಟ ಪ್ರೇಮದಿಂದ ಅವರಿಬ್ಬರು ಒಬ್ಬರನ್ನೊಬ್ಬರು ಅಂಟಿಕೊಂಡಿದ್ದರು.ಅವನ ಕೈಗಳು ಆಕೆಯ ಸೊಂಟವನ್ನು ಬಳಸಿದ್ದರೆ.ಆಕೆ ಪ್ರೀತಿಯ ಅಭಿವ್ಯಕ್ತಿಯೆನ್ನುವಂತೆ ತನ್ನ ತಲೆಯನ್ನು ಅವನ ಭುಜಕ್ಕೆ ಆನಿಸಿಕೊಂಡೇ ನಡೆದುಬರುತ್ತಿದ್ದಳು. ಆಗಸದಲ್ಲಿ ತೇಲುತ್ತಿದ್ದ ಮೋಡಗಳ ನಡುವೆ ಸುಮ್ಮನೇ ಇಣುಕಿದ ಚಂದ್ರ ,ಇವರಿಬ್ಬರ ಪ್ರೀತಿಯನ್ನು ಕಂಡು ಮೋಡಗಳ ನಡುವೆ ತನ್ನ ಮುಖವನ್ನು ಮುಚ್ಚಿಕೊಂಡ.ಹುಡುಗಿಯ ಸೌಂದರ್ಯ ಮತ್ತು ತುಸು ಹೆಚ್ಚೇ ಎನಿಸುವಷ್ಟು ಎದ್ದು ಕಾಣುತ್ತಿದ್ದ ಅವಳ ಸ್ತ್ರೀತ್ವ ಚಂದ್ರನಲ್ಲೂ ಅಸೂಯೆ ಮೂಡಿಸಿತೇನೊ ಎನ್ನುವಂತೆ ಭಾಸವಾಗುತ್ತಿತ್ತು.ಮುಸ್ಸಂಜೆಯ ನಸುಗತ್ತಲಲ್ಲಿ ಹಿತವಾಗಿ ಬೀಸುತ್ತಿದ್ದ ತಂಗಾಳಿಯ ತುಂಬೆಲ್ಲ ಹರಡಿಕೊಂಡಿದ್ದ ಕಾಡುಹೂವೊಂದರ ನಸುಗಂಪು ,ಸಂಜೆಯನ್ನು ಇನ್ನಷ್ಟು ಕಾವ್ಯಾತ್ಮಕವಾಗಿಸಿತ್ತು.ನಡುನಡುವೆ ಕಾಡಿನಲ್ಲೆಲ್ಲೋ ಕೂಗುತ್ತಿದ್ದ ಹಕ್ಕಿಯ ದನಿಯೂ ಹಿತವಾಗಿ ಕೇಳಿಸುತ್ತಿತ್ತು.
’ಓಹ್.! ಸಂಜೆಯೆನ್ನುವುದು ಎಷ್ಟು ಸುಂದರವಲ್ಲವೇ ಸಾಶಾ’,ಎಂದು ಮೆಲ್ಲಗೆತನ್ನ ಗಂಡನ ಕಿವಿಯೊಳಗೆ ಉಸುರಿದಳು ಬೆಡಗಿ .’ಒಂದು ಚಂದದ ಕನಸಿನಂತಿದೆ ನೋಡು ಈ ವಾತಾವರಣ.ಅಲ್ಲಲ್ಲಿ ಕಾಣುವ ಪೊದೆಗಳು,ರೈಲಿಹಳಿಗಳ ಪಕ್ಕಕ್ಕೆ ಅಷ್ಟಷ್ಟು ದೂರಕ್ಕೆ ನಿಲ್ಲಿಸಲಾಗಿರುವ ಉದ್ದನೆಯ ಲೋಹದ ಕಂಬಗಳು ಎಲ್ಲವೂ ಅದ್ಭುತವೇ.ಮನುಕುಲದ ಪ್ರಗತಿಯ ಪ್ರತೀಕವಾಗಿರುವ ರೈಲು ಕೂಡ ಅಪರೂಪದ ಸೌಂದರ್ಯವತಿ.ದೂರದಲ್ಲೆಲ್ಲೋ ಬರುತ್ತಿರುವ ರೈಲಿನ ಶಿಳ್ಳೆಯ ಶಬ್ದವನ್ನು ನಮ್ಮ ಕಿವಿಗೆ ತಲುಪಿಸುವ ಗಾಳಿಯದ್ದೂ ಒಂದು ಬಗೆಯ ಸೊಗಸಾದರೆ,ಈ ಸಂಜೆಯ ತಂಪಿನಲ್ಲಿ ಆ ಶಬ್ದವನ್ನು ಕೇಳುವುದು ಸಹ ಎಷ್ಟು ಹಿತವಾಗಿದೆ ಅಲ್ಲವೇ..’? ಎಂಬ ಪ್ರಶ್ನೆ ಆಕೆಯದ್ದು.
ಮತ್ತಷ್ಟು ಓದು
ಮೌಢ್ಯದ ಪೊರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು
– ಮಹೇಶ ಕಲಾಲ್
ಮೌಢ್ಯದ ಪೊರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು ಸಾಹಿತ್ಯ, ಚರ್ಚಾ ಕೂಟಗಳಿಗೆ ಸದ್ವಿನಿಯೋಗಿಸುತ್ತಿರುವ ಹಿರಿಯ ಸಾಹಿತಿ ಬಸವರಾಜ ಶಾಸ್ತ್ರಿಯವರ ಸೇವಾಕಾರ್ಯ ಶ್ಲಾಘನೀಯವಾದದ್ದು.ಕಸವು ರಸವಾಗಲಿ, ಧ್ಯೇಯೋದ್ದೇಶಗಳು ಅದ್ವಿತೀಯ ಬೀಜಾಕ್ಷರಗಳಾಗಲಿ ಎಂಬ ದೃಷ್ಟಿಯಿಂದ ಪ್ರತಿಯೊಂದು ಕಾರ್ಯಕ್ಕೂ ಸಾಹಿತ್ಯ ಸೇವೆಯ ಅನುಪಮ ಅವಕಾಶವನ್ನು ಒದಗಿಸಿ, ಸಾಹಿತ್ಯ ಸೃಷ್ಟಿಯ ಜೊತೆಗೆ ವಾಗ್ದೇವಿಯ ವರಪುತ್ರರಿಗೆ ಆಹ್ವಾನವಿಯುತ್ತ ಇಳಿ ವಯಸ್ಸಿನಲ್ಲಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಸದಾ ತಾ ಮುಂದು ಎನ್ನುವು ಘೋಷಾ ವಾಕ್ಯದೊಂದಿಗೆ ಹಗಲಿರುಳೂ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಅದಲು-ಬದಲು ಕಥಾ ಸಂಕಲನ ಸತ್ಯದ ದಾರಿ ಹುಡುಕ ಹೊರಟ ಹರಿಶ್ಚಂದ್ರನ ಪಾಡಿನಂತಿದೆ.
ಮಹಿಳೆಯನ್ನು ಇಳೆಯಷ್ಟು ಕ್ಷಮಾಗುಣ ಸಂಪನ್ನಳು ಎಂಬಂತೆ ಬಸವರಾಜ ಶಾಸ್ತ್ರಿಯವರು ಇಲ್ಲಿ ಚಿತ್ರಿಸಿದ್ದಾರೆ. ತಮ್ಮ ಹಲವು ಕಥೆಗಳಲ್ಲಿ ಸ್ತ್ರೀ ಪ್ರಾಧ್ಯಾನ್ಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪುರುಷ ಪಾತ್ರಗಳ ಪ್ರಭಾವವಿದ್ದರೂ ಅಲ್ಲಿಯೂ ಮಹಿಳೆಯೇ ಕಥಾವಸ್ತುವನ್ನು ಪ್ರತಿನಿಧಿಸುತ್ತಾಳೆ. ಅವರ ಮಗ್ಗಲಿಗೆ ಬೇಕು ಮನೆಗೆ ಬೇಡ, ತ್ಯಾಗ, ವಾತ್ಸಲ್ಯ, ಅದಲು -ಬದಲು ಹೀಗೆ ತಮ್ಮ ಕತೆಗಳಲ್ಲಿ ಸ್ತ್ರೀಯನ್ನು ವಿಭಿನ್ನವಾಗಿ ಚಿತ್ರಿಸಿರುವುದು ಅವರ ಕಥಾಶೈಲಿಯಲ್ಲಿ ನಾವು ಕಾಣಬಹದು.
ಬಡತನವೆಂಬುದು ಜೇಡರ ಬಲೆ ಎಂಬ ಕಥಾ ವಸ್ತುವುಳ್ಳ ತ್ಯಾಗ ಕಥೆಯಲ್ಲಿ . ಶಿವನೇ ಇದೆಂತಹ ಪರೀಕ್ಷೆಯ ಕಾಲ. ಇವತ್ತು ಸಿಕ್ಕಿರುವುದು ಕೇವಲ ಅರ್ಧ ಸೇರು ಜೋಳ ಮಾತ್ರ. ಅದರಲ್ಲಿ ಮಾಡಿದ ಮೂರೇ ಮೂರು ರೊಟ್ಟಿಗಳನ್ನು ಆಗಲೇ ಮೂರು ಮಕ್ಕಳಿಗೆ ಹಂಚಿದ್ದಾಗಿದೆ. ಉಳಿದುದರಲ್ಲಿ ಅಂಬಲಿ ಕುದಿತಾ ಇದೆ. ಇದು ನನ್ನ ಮತ್ತು ಆ ಮಕ್ಕಳ ತಂದೆಯ ಪಾಲಿನದು ನಮ್ಮಿಬ್ಬರ ಪಾಲಿನದನ್ನು ಹಸಿದವಗೆ ಬಡಿಸುವ ಅಧಿಕಾರವಿದೆ. ಮೊದಲು ರೊಟ್ಟಿಯನ್ನು ಕೊಡದೆ ಕೇವಲ ಅಂಬಲಿಯನ್ನೇ ಬಡಿಸುವುದು ಹೇಗೆ ಎಂದು ಚಿಂತಿಸುತ್ತಾಳೆ.ಅಂಬಲಿಯು ಬಡತನದ ಸಂಕೇತ. ಅದನ್ನು ತೋರ್ಪಡಿಸುವುದು ಆ ಮನೆಯೊಡತಿ ಅನ್ನಪೂರ್ಣಮ್ಮಳಿಗೆ ಬೇಕಿಲ್ಲ. ಬಡತನ ಸ್ವಾಭಿಮಾನದ ಬದುಕನ್ನು ಕಲಿಸುತ್ತದೆ. ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿಯಾಗಿದೆ. ಹಾಗಾಗಿ ಅನ್ನಪೂರ್ಣಮ್ಮಳು ತನ್ನ ಮಕ್ಕಳ ಕೈಯಲ್ಲಿನ ಒಂದೊಂದೆ ರೊಟ್ಟಿಯನ್ನು ತೆಗೆದುಕೊಂಡು ಹೋಗಿ ಆ ರೈತನಿಗೆ ಊಟ ಮಾಡಲು ಕೊಡುತ್ತಾಳೆ. ಮಕ್ಕಳ ಕೈಯಿಂದ ರೊಟ್ಟಿ ತೆಗೆದುಕೊಂಡು ಅತಿಥಿಗೆ ಉಣ ಬಡಿಸುವುದು ಅನ್ನಪೂರ್ಣಮ್ಮಳ ಸ್ವಾಭಿಮಾನದ ಹೃದಯವನ್ನು ತೋರಿಸುತ್ತದೆ.