ಸುಳ್ಸುದ್ದಿ : ರಾಜ್ಯದಲ್ಲಿ “ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ” ಅಸ್ತಿತ್ವಕ್ಕೆ
– ಪ್ರವೀಣ್ ಕುಮಾರ್ ಮಾವಿನಕಾಡು
ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ”ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ”ಅಸ್ತಿತ್ವಕ್ಕೆ ತರಲಾಗಿದ್ದು, ವೇದಿಕೆಗೆ ನೂತನ ಪದಾಧಿಕಾರಿಗಳನ್ನೂ ಸಹಾ ಆಯ್ಕೆ ಮಾಡಲಾಗಿದೆ.ಶಂಕಿತ ಭಯೋತ್ಪಾದಕರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಾಗೂ ಕೆಲ ಸುಧಾರಣೆಗಳ ಉದ್ದೇಶದಿಂದ ರಾಜ್ಯದಲ್ಲಿ “ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ” ಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಶ್ರೀಯುತ.ಕಾಣೇಶ್ ಜಲ್ಲಿಕಟ್ಟು ಹೇಳಿದರು.ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ವೇದಿಕೆಯ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರವಾಗಿದ್ದು ಆ ವೈವಿಧ್ಯತೆಯಲ್ಲಿ ಭಯೋತ್ಪಾದನೆಯೂ ಒಂದು ಸಂಸ್ಕೃತಿಯಾಗಿದೆ. ಆದರೆ ಇತ್ತೀಚಿಗೆ ಕೆಲವು ಪರಿವಾರಗಳು ಈ ದೇಶದಲ್ಲಿ ಏಕಸಂಸ್ಕೃತಿ ಹೇರುವ ಹುನ್ನಾರ ನಡೆಸಿದ್ದು ಭಯೋತ್ಪಾದಕರ ಮೂಲ ಸಂಸ್ಕೃತಿಯನ್ನು ನಾಶಪಡಿಸಲು ಯತ್ನಿಸುತ್ತಿವೆ ಎಂದು ಕಿಡಿಕಾರಿದರು.ಇಂತಹಾ ಸಂದರ್ಭದಲ್ಲಿ ಶಂಕಿತ ಭಯೋತ್ಪಾದಕರಿಗೆ ನೈತಿಕ ಬೆಂಬಲ ಅತ್ಯಗತ್ಯವಾಗಿದ್ದು ಅವರಿಗೆ ಬೆಂಬಲವಾಗಿ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.ಮುಂದಿನ ತಿಂಗಳು ವೇದಿಕೆಯವತಿಯಿಂದ ಶಂಕಿತ ಉಗ್ರಗಾಮಿಗಳನ್ನು ಸನ್ಮಾನಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.