ವಿಷಯದ ವಿವರಗಳಿಗೆ ದಾಟಿರಿ

Archive for

29
ಫೆಬ್ರ

ಸುಳ್ಸುದ್ದಿ: ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ಮೇಲೆ ಅಮೀರ್ ಖಾನ್ ಕಣ್ಣು!

– ಪ್ರವೀಣ್ ಕುಮಾರ್ ಮಾವಿನಕಾಡು
sulsuddi      ಅಸಹಿಷ್ಣುತೆ ಹೇಳಿಕೆಯಿಂದ ಸ್ನ್ಯಾಪ್ ಡೀಲ್ ನ ಜಾಹೀರಾತಿನಿಂದ ಹೊರಹಾಕಲ್ಪಟ್ಟಿದ್ದ ಬಾಲಿವುಡ್ ನಟ ಅಮೀರ್ ಖಾನ್ ಕಣ್ಣು ಇದೀಗ ಇದುವರೆಗೂ ಅಬ್ಬಾಸ್ ನಟಿಸುತ್ತಿದ್ದ ಹಾರ್ಪಿಕ್ ಜಾಹೀರಾತಿನ ಮೇಲೆ ಬಿದ್ದಿದೆ! ಜಾಹೀರಾತಿನಲ್ಲಿ ದೇಶದ ಪರವಾಗಿ ಮಾತನಾಡುವ ವ್ಯಕ್ತಿ ಹೊರಗೆ ದೇಶದ ಮಾನ ತೆಗೆಯುವ ಮಾತನ್ನಾಡಿದ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಇನ್ಕ್ರೆಡಿಬಲ್ ಇಂಡಿಯಾ ಜಾಹೀರಾತಿನಿಂದಲೂ ಹೊರ ಹಾಕಲ್ಪಟ್ಟ ನಂತರ ಅಮೀರ್ ಖಾನ್,ಮೊದಲ ಬಾರಿಗೆ ತನ್ನ ಕೈಯಲ್ಲಿ ಯಾವುದೇ ಜಾಹೀರಾತಿಲ್ಲದೇ ಕುಳಿತುಕೊಳ್ಳುವಂತಾಗಿದೆ.

ಇದೇ ಸಮಯದಲ್ಲಿ ನಟ ಅಬ್ಬಾಸ್ ನೊಂದಿಗಿನ ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ನ ಜಾಹೀರಾತಿನ ಒಪ್ಪಂದದ ಅವಧಿ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿರುವ ಕಾರಣ ಶತಾಯ ಗತಾಯ ಹಾರ್ಪಿಕ್ ಕಂಪನಿಯ ರಾಯಭಾರಿಯಾಗಲೇಬೇಕೆಂದು ನಿರ್ಧರಿಸಿರುವ ಅಮೀರ್,ತನ್ನ ಕಾರ್ಯದರ್ಶಿಯ ಮೂಲಕ ಈಗಾಗಲೇ ಕಂಪನಿಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.ದಂಗಾಲ್ ಹೀರೋನ ಈ ನಡೆಯಿಂದ ಕಂಗಾಲ್ ಆಗಿರುವ ಹಾರ್ಪಿಕ್ ಹೀರೋ ಜಾಹೀರಾತನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

      ಈ ಬಗ್ಗೆ ಮಾತನಾಡಿದ ನಟ ಅಮೀರ್ ಖಾನ್,ನಾನು ಇದುವರೆಗೂ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದೇನೆ.ಇನ್ನು ಮುಂದೆಯೂ ನಟಿಸುತ್ತೇನೆ.ನಾನು ಮತ್ತು ನನ್ನ ಕುಟುಂಬ ಭಾರತವನ್ನು ಅಪಾರವಾಗಿ ಪ್ರೀತಿಸುತ್ತೇವೆ.ನಾವು ಈ ದೇಶವನ್ನು ಬಿಟ್ಟು ಹೋಗುವ ಬಗ್ಗೆ ಯಾವುದೇ ನಿದ್ದೆ ಬಾರದ ರಾತ್ರಿಯಲ್ಲೂ ಸಮಾಲೋಚಿಸಿಲ್ಲ.ಒಂದು ವೇಳೆ ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ನ ಜಾಹೀರಾತಿನಲ್ಲಿ ನಟಿಸುವ ಅವಕಾಶ ದೊರೆತರೆ ಅದರಿಂದ ಬರುವ ಸಂಭಾವನೆಯ ಶೇ.೫೦ ರಷ್ಟು ಮೊತ್ತವನ್ನು ಪಾಕೀಸ್ತಾನದಲ್ಲಿ ಬಾಂಬ್ ದಾಳಿಯಿಂದ ಸಂತ್ರಸ್ತರಾದ ಜನರಿಗೆ ನೆರವಾಗಲು ಬಳಸುವುದಾಗಿ ಹೇಳಿದರು.

ಈ ನಡುವೆ ಬೆಂಗಳೂರಿನ ಜಾತ್ಯಾತೀತ ಶಾಸಕ ಜಮೀರ್ ಅಹಮ್ಮದ್ ಅವರನ್ನು ಭೇಟಿಯಾದ ಅಬ್ಬಾಸ್,ಈ ವಿಷಯದಲ್ಲಿ ತನಗೆ ಸಹಾಯ ಮಾಡಬೇಕೆಂದು ಕೋರಿದರು.ಅವರಿಗೆ ಪ್ರತಿಕ್ರಿಯಿಸಿದ ಜಮೀರ್,ಜಾತ್ಯಾತೀತರ ನಡುವೆ ಈ ರೀತಿಯ ಸ್ಪರ್ಧೆ ಒಳ್ಳೆಯದಲ್ಲ.ನಮ್ಮ ಹಿರಿಯರ ಮುಂದೆ ಈ ವಿಷಯವನ್ನಿಟ್ಟು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು.ಎಲ್ಲಾ ಜಾತ್ಯಾತೀತರ ಕಂಪನಿಗಳ ಉತ್ಪನ್ನಗಳ ಪ್ರಚಾರಕ್ಕೂ ರಾಯಭಾರಿಗಳನ್ನಾಗಿ ಜಾತ್ಯಾತೀತರನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಫ಼ತ್ವಾ ಹೊರಡಿಸುವ ಬಗ್ಗೆ ತಾನು ಈಗಾಗಲೇ ನಮ್ಮ ವೈಯುಕ್ತಿಕ ಕಾನೂನು ಮಂಡಳಿ ಮತ್ತು ಶಾಹಿ ಇಮಾಂ ಬುಖಾರಿಯವರ ಜೊತೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಕೆಲವೇ ದಿನಗಳಲ್ಲಿ ಈ ಬಗ್ಗೆ ಫ಼ತ್ವಾ ಹೊರಬೀಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನಮ್ಮ ದೇಶದ ಸಂವಿಧಾನದಲ್ಲಿ ಫ಼ತ್ವಾಗಳಿಗೆ ಮಾನ್ಯತೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಮೀರ್,ನಮ್ಮ ವೈಯುಕ್ತಿಕ ಕಾನೂನಿನಲ್ಲಿ ಸಂವಿಧಾನಕ್ಕೇ ಮಾನ್ಯತೆಯಿಲ್ಲ ಎಂದು ಸ್ವಲ್ಪ ಖಾರವಾಗಿಯೇ ಉತ್ತರಿಸಿದರು.

ಮುಂದಿನ ಶುಕ್ರವಾರ ಡಿ.ಎಸ್.​ಯು.ಮುಖಂಡ ಉಮರ್ ಖಾಲಿದ್ ನ ನೇತೃತ್ವದಲ್ಲಿ ಬನಾರಸ್ ಹಿಂದೂ ವಿ.ವಿ.ಸೇರಿದಂತೆ ದೇಶದ ಹದಿನೆಂಟು ವಿಶ್ವವಿದ್ಯಾಲಯಗಳಲ್ಲಿ ಅಮೀರ್ ಖಾನ್ ಪರ ಘೋಷಣೆ ಕೂಗಿ ಹಾರ್ಪಿಕ್ ಜಾಹೀರಾತಿನಲ್ಲಿ ನಟಿಸಲು ಅವರಿಗೆ ಬೆಂಬಲ ವ್ಯಕ್ತಪಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದೇ ವೇಳೆ ಪಾಕೀಸ್ತಾನದ ಪ್ರಧಾನಿ ನವಾಜ್ ಷರೀಫ್‌ ಲಾಹೋರ್ ನಲ್ಲಿ ಇಂದು ಮಾತನಾಡುತ್ತಾ,ಮುಂದಿನ ತಿಂಗಳು ಅಮೇರಿಕಾದಲ್ಲಿ ನಡೆಯುವ ಪರಮಾಣು ಶೃಂಗಸಭೆಯಲ್ಲಿ ಈ ವಿಷಯದ ಬಗ್ಗೆ ಅಲ್ಲಿನ ಅಧ್ಯಕ್ಷರ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.

    ಕೆಲ ರಾಜಕೀಯ ಪಕ್ಷಗಳೂ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ಹಲವು ಪ್ರಗತಿಪರ ಸಂಘಟನೆಗಳು ‘ದೇಶದಲ್ಲಿ ಜಾತ್ಯಾತೀತರ ನಡುವೆ ನಡೆಯುತ್ತಿರುವ ಈ ರೀತಿಯ ಅನಾರೋಗ್ಯಕರ ಸ್ಪರ್ಧೆಗೆ ಮೋದಿ ಸರ್ಕಾರದ ಷಡ್ಯಂತ್ರವೇ ಕಾರಣ’ ಎಂದು ಆರೋಪಿಸಿದ್ದು,ಮುಂದಿನ ಸೋಮವಾರದಂದು ಖಾಸಗಿ ಜಾಹೀರಾತಿನಲ್ಲಿ ಜಾತ್ಯಾತೀತರಿಗೆ ಮೀಸಲಾತಿಗೆ ಒತ್ತಾಯಿಸಿ ದೇಶದಾದ್ಯಂತ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿವೆ.ಈ ಬಗ್ಗೆ ಸರ್ಕಾರ ಶೀಘ್ರವಾಗಿ ಕಾನೂನು ತರದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿಯೂ ಅವು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ!

ಒಟ್ಟಿನಲ್ಲಿ ಎಲ್ಲವೂ ಅಮೀರ್ ಖಾನ್ ಅಂದುಕೊಂಡಂತೆಯೇ ಆದರೆ ಇನ್ನು ಕೆಲವೇ ದಿನಗಳಲ್ಲಿ ಅಮೀರ್ ಖಾನ್ ಕೂಡಾ ಅಬ್ಬಾಸ್ ನಂತೆಯೇ ನೇರವಾಗಿ ನಿಮ್ಮ ಶೌಚಾಲಯ ಕೋಣೆಗೆ ನುಗ್ಗುವ ದಿನ ದೂರವಿಲ್ಲ!!

*ವಿ.ಸೂ:ಈ ಸುದ್ದಿಯು ಕೇವಲ ಕಾಲ್ಪನಿಕವಾಗಿದ್ದು ಮೇಲೆ ಹೆಸರಿಸಿದ ಆಯಾ ಪಕ್ಷ,ವ್ಯಕ್ತಿ,ಸಂಸ್ಥೆ,ಸಂಘಟನೆಗಳ ಇದುವರೆಗಿನ ನಡವಳಿಕೆಗಳನ್ನಾಧರಿಸಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿಯೇ ಹೊರತೂ ಯಾರನ್ನೂ ನೋಯಿಸುವ ಅಥವಾ ಅವಮಾನಿಸುವ ಉದ್ದೇಶದ್ದಲ್ಲ. 

28
ಫೆಬ್ರ

ಬರ್ನಾಲ್ ಗೋಸ್ವಾಮಿ

– ರೋಹಿತ್ ಚಕ್ರತೀರ್ಥ

“ನೀನು, ನಿನ್ನಂಥವರು ಈ ವಿಶ್ವವಿದ್ಯಾಲ17-Arnab-Goswamiಯದಲ್ಲಿ ಸೇರಿಕೊಂಡು ಗಬ್ಬೆಬ್ಬಿಸುತ್ತಿದ್ದೀರಿ. ಉಗ್ರಗಾಮಿಗಳ ಪರವಾಗಿ ಘೋಷಣೆ ಕೂಗುವಾಗ ನಿನಗೆ ಆತ್ಮಸಾಕ್ಷಿ ಚುಚ್ಚಬೇಕಾಗಿತ್ತು. ಆದರೆ ಅದರ ಲವಲೇಶವೂ ನಿನಗೆ ಇರುವ ಹಾಗಿಲ್ಲ. ಹೇಳು, ನಿನ್ನಂಥ ದೇಶದ್ರೋಹಿಗಳಿಗೆ ನಾವ್ಯಾಕೆ ತೆರಿಗೆ ದುಡ್ಡು ಕಟ್ಟಿ ಓದಿಸಬೇಕು? ಅಲ್ಲಿ ಹದಿನೈದು ಸಾವಿರ ಅಡಿ ಎತ್ತರದಲ್ಲಿ, ಮೈನಸ್ 50 ಡಿಗ್ರಿ ಉಷ್ಣಾಂಶದಲ್ಲಿ ನಿಂತು ದೇಶ ಕಾಯುತ್ತಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಇಂದು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಅವರ ಬದಲು ನಿನ್ನಂಥವರು ಇಂದು ದೇಶದ ದಾರಿತಪ್ಪಿದ ಯುವಕರಿಗೆ ರೋಲ್ ಮಾಡೆಲ್ ಆಗುತ್ತಿದ್ದೀರಲ್ಲ, ದುರಂತ! ದುರಂತ ಇದು!” ಎಂದು ಅಬ್ಬರಿಸುತ್ತಿದ್ದನಾತ. ಹಾಗೆ ಭಾರತದ ಎಲ್ಲ ದೇಶಭಕ್ತರ ಪರವಾಗಿ ಆತ ಗುಡುಗುತ್ತಿದ್ದರೆ ಉತ್ತರಿಸಬೇಕಿದ್ದ ಉಮರ್ ಖಾಲಿದ್‍ನಿಗೆ ಉಸಿರುಕಟ್ಟಿದಂತಾಗಿತ್ತು. “ಬಾಯ್ತೆಗೆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತೀರಿ. ನಿಮ್ಮ ಸ್ವಾತಂತ್ರ್ಯ ಕೂಡ ಸೆಲೆಕ್ಟಿವ್. ಬೇಕಾದವರ ಪರವಾಗಿ ಮಾತಾಡಲು ಮಾತ್ರ ಅದನ್ನು ಬಳಸುತ್ತೀರಿ. ಅದೇ ನಿಮ್ಮ ಶತ್ರುಗಳ ಪರವಾಗಿ ಬೇರೆಯವರು ಮಾತಾಡಿದಾಗ ಅವರ ಮೇಲೆ ಹಲ್ಲೆಗೆ ಮುಂದಾಗುತ್ತೀರಿ. ಬೆಂಕಿಬಿತ್ತು ನಿಮ್ಮ ಸ್ವಾತಂತ್ರ್ಯಕ್ಕೆ!” ಎಂದು ಆತ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದರೆ ಗಲಭೆ ಎಬ್ಬಿಸಿದ್ದ ವಿದ್ಯಾರ್ಥಿಗಳ ಪರ ವಾದಿಸಲು ಬಂದಿದ್ದ ಮಂದಿ ಬಾಲ ಸುಟ್ಟ ಬೆಕ್ಕಿನಂತಾಗಿದ್ದರು.

       ಅವನು ಅರ್ಣಬ್ ಗೋಸ್ವಾಮಿ. ಚುಟುಕಾಗಿ ಹೇಳಬೇಕೆಂದರೆ ಕರ್ಣಪಿಶಾಚಿ. ಟೈಮ್ಸ್ ನೌ ಎಂಬ ಆಂಗ್ಲ ಸುದ್ದಿವಾಹಿನಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಆತನ “ನ್ಯೂಸ್ ಅವರ್” ಕಾರ್ಯಕ್ರಮ ಪ್ರಸಾರವಾಗುತ್ತದೆ. ಇದರ ವಿಶೇಷತೆಯೇನೆಂದರೆ ಕಾರ್ಯಕ್ರಮದ ಮೊದಲ ಐದು ನಿಮಿಷದಲ್ಲಿ ಅರ್ಣಬ್ ಅಂದಿನ ಚರ್ಚೆಯ ಪ್ರಮುಖ ವಿಷಯ ಏನು ಎಂಬುದನ್ನು ತಿಳಿಸುತ್ತಾನೆ. ನಂತರದ ಐವತ್ತೈದು ನಿಮಿಷ ಸುಮಾರು ಹತ್ತು-ಹನ್ನೆರಡು ಜನ ತಾರಕ ಸ್ವರದಲ್ಲಿ ವಾಕ್ಸಮರ ನಡೆಸಿಕೊಳ್ಳುತ್ತಾರೆ. ಒಟ್ಟಿಗೆ ತಂದುಹಾಕಿದರೆ, ಕೇವಲ ಎರಡೇ ನಿಮಿಷದಲ್ಲಿ ಅವರೆಲ್ಲರೂ ಪರಸ್ಪರರನ್ನು ಗುದ್ದಿ ನೆಲಕ್ಕೆ ಕೆಡವಿ ಚೂರಿ ಹಾಕಿ ಬೆಂಕಿ ಕೊಟ್ಟುಕೊಂಡು ಸರ್ವನಾಶವಾಗುತ್ತಾರೆ ಅನ್ನಿಸುವಷ್ಟು ಭೀಕರವಾಗಿ ಅವರೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಇದು ನ್ಯೂಸ್ ಅವರೋ ನಾಯ್ಸ್ ಅವರೋ ಎಂಬ ಗೊಂದಲ ಕಾರ್ಯಕ್ರಮದ ಪ್ರತಿ ವೀಕ್ಷಕನಲ್ಲಿ ಮೂಡುವಂತಿರುತ್ತದೆ. ಶಬ್ದವನ್ನು ಡೆಸಿಬಲ್‍ಗಳಲ್ಲಿ ಅಳೆಯುತ್ತಾರೆ; ಕರ್ಕಶತೆಯನ್ನು ಅರ್ಣಬ್ ಎಂಬ ಮಾನದಲ್ಲಿ ಅಳೆಯುತ್ತಾರೆ ಎಂಬ ಜೋಕಿದೆ. ಆತನ “ನೇಷನ್ ವಾಂಟ್ಸ್ ಟು ನೋ” ಎಂಬ ಪದಪುಂಜ ಬಹಳ ಪ್ರಸಿದ್ಧ. ದೇಶಕ್ಕೆ ಖಂಡಿತಾ ಬೇಕಾಗಿಲ್ಲ; ಉತ್ತರ ಬೇಕಾಗಿರುವುದು ನಿನಗೆ ಮಾತ್ರ. ಹಾಗಾಗಿ ನಿನ್ನ ರೆಡಿಮೇಡ್ ಡೈಲಾಗನ್ನು ಬದಲಾಯಿಸಿ ಅರ್ಣಬ್ ವಾಂಟ್ಸ್ ಟೂ ನೋ ಅನ್ನು ಮಾರಾಯ ಎಂದು ಹೇಳಿದವರುಂಟು. ಈತ ರಾಜಕೀಯದ ಹಲವು ಆಷಾಢಭೂತಿ ಮುಖಗಳನ್ನು ಹೊರಗೆಳೆದ; ಹಲವರ ನಿಜಬಣ್ಣ ಬಯಲು ಮಾಡಿದ; ಇಂಥವರು ಮಾಧ್ಯಮದಲ್ಲಿ ಬೇಕು ಎನ್ನುವವರದ್ದು ಒಂದು ಗುಂಪಾದರೆ ಈತನಿಂದಾಗಿಯೇ ಮಾಧ್ಯಮದ ಪಾವಿತ್ರ್ಯ ಹೋಯಿತು; ಅರಚಾಟ – ದೋಷಾರೋಪಣೆಗಳೇ ಸಂವಾದವೆನ್ನುವ ಭ್ರಮೆ ಹಿಡಿಸಿ ಆರೋಗ್ಯಕರ ಚರ್ಚೆಯನ್ನು ಹಳ್ಳ ಹಿಡಿಸಿದ ಭೂಪನೀತ ಎನ್ನುವವರಿದ್ದಾರೆ. ನೀವು ಒಪ್ಪುತ್ತೀರೋ ಬಿಡುತ್ತೀರೋ, ಅದು ಅರ್ಣಬ್‍ನಿಗೆ ಮುಖ್ಯವಲ್ಲ. ವಿಮರ್ಶಕರು “ಅದೊಂದು ಡಬ್ಬಾ ಸಿನೆಮ” ಎಂದು ಹುಯಿಲೆಬ್ಬಿಸಿದರೂ ಮುನ್ನೂರು ಕೋಟಿ ಬಾಚುವ ಸಲ್ಮಾನ್‍ಖಾನ್ ಸಿನೆಮಗಳಂತೆ ಅರ್ಣಬ್‍ನ ಟಿವಿ ಕಾರ್ಯಕ್ರಮ. ಹಾಗಾಗಿ ಟೀಕಾಕಾರರತ್ತ ಅವನದ್ದು ಡೋಂಟ್ ಕೇರ್.

ಮತ್ತಷ್ಟು ಓದು »

26
ಫೆಬ್ರ

ಪ್ರೀತಿಯ ನೆಹರೂಜಿ,ನೆಮ್ಮದಿಯಾಗಿರಬೇಕಲ್ಲ? ಕಂಗ್ರಾಜುಲೇಷನ್ಸ್!

– ಪಲ್ಲವಿ ರಾವ್

ನೆಹರೂಅಂತೂ ಭಾರತದ ಯುವ ಜನತೆಗೆ ದೇಶವೆಂದರೆ ಭೌಗೋಳಿಕ ಇರುವಿಕೆಯೇ ಅರ್ಥಹೀನ, ಇಲ್ಲಿನ ನಂಬಿಕೆಗಳೆಲ್ಲವೂ ಅವೈಜ್ನಾನಿಕ, ಆಚರಣೆಗಳೆಲ್ಲ ತುಚ್ಚ , ಹೆಮ್ಮೆ ಪಡುವಂತದ್ದೂ ಇಲ್ಲೇನೂ ಇಲ್ಲ , ದೇಶವೆಂದರೆ ತಾಯಿ ಅನ್ನುವ ಕಲ್ಪನೆಯೇ ಬುಲ್ಶಿಟ್ ಅನ್ನುವ ಮನೋಭಾವವನ್ನು ನಿಮ್ಮ ಕನಸಿನ ವೈಜ್ನಾನಿಕ ಆಧುನಿಕ ಪಾಶ್ಚಾತ್ಯ ಶಿಕ್ಷಣ ಬಹಳ ಯಶಸ್ವಿಯಾಗಿ ಬಿತ್ತಿದೆ. ನೀವು ಬಹಳವಾಗಿ ಆರಾಧಿಸಿದ ಇತಿಹಾಸ ತಜ್ನರಿಂದ ಬರೆಸಿದ ಇತಿಹಾಸ ಈ ದೇಶದ ತರುಣರಲ್ಲಿ ಸಿನಿಕತೆಯನ್ನು,ದೇಶ ಕಾಯುವ ಸೈನಿಕರ ಬಗ್ಗೆ ತಿರಸ್ಕಾರವನ್ನೂ ಪ್ರಜಾಪ್ರಭುತ್ವದ ಬುನಾದಿಯ ಮೇಲೆ ದಾಳಿ ನಡೆಸಿದವರನ್ನೂ ಆರಾಧಿಸುವ ಮಟ್ಟಕ್ಕೆ ಬೆಳೆಸಿದೆ. ನೀವು ಇದನ್ನೇ ಬಯಸಿದ್ದೀರಿ ಅಲ್ವ? ಪ್ರತಿಯೊಂದನ್ನೂ ಪ್ರಶ್ನಿಸುವ, ತಿರಸ್ಕರಿಸುವ ಎಡಬಿಡಂಗಿ ಮನೋಭಾವವನ್ನೇ ವೈಜ್ನಾನಿಕ ಎಂದು ಅರ್ಥೈಸಿದ್ದವರಿಗೆ ಇಂದಿನ ವಿಶ್ವವಿದ್ಯಾನಿಲಯಗಳ ದಿಕ್ಕುದೆಶೆ ಇಲ್ಲದ ಭವಿಷ್ಯದ ಬಗ್ಗೆ ಕನಸು, ದೇಶದ ಬಗ್ಗೆ ಕಾಳಜಿ ಎರಡೂ ಇಲ್ಲದ ಸಿನಿಕ ಯುವಭಾರತ ಹೆಮ್ಮೆ ತಂದಿರಬೇಕು ,

ಕಂಗ್ರಾಜ್ಯುಲೇಷನ್ಸ್!

ನೀವು ಮತ್ತು ನಿಮ್ಮ ಕುಟುಂಬದ ಸ್ವತ್ತಾಗಿ ಹೋದ ಪಕ್ಷಕ್ಕೆ ಭಾರತದ ಬಗ್ಗೆ ಪ್ರೀತಿ, ಹೆಮ್ಮೆ ಹುಟ್ಟುವುದಾದರೂ ಹೇಗೆ? ಸದಾ ಪಾಶ್ಚಾತ್ಯ ಚಿಂತನೆ, ಅಲ್ಲಿನ ವಿದ್ಯಾಲಯಗಳ ಓದು, ಅಲ್ಲಿನದೇ ಬದುಕನ್ನು ಕಂಡ ನಿಮ್ಮವರಿಗೆ ಈ ದೇಶ ಬರಿಯ ಮೂಢನಂಬಿಕೆಗಳ , ಜಾತಿಗಳ, ತಾರತಮ್ಯದ ಆಡೊಂಬೊಲವಾಗಿಯೇ ಕಂಡಿತ್ತು. ನೀವೇನೋ ಡಿಸ್ಕವರಿ ಆಫ್ ಇಂಡಿಯ ಬರೆದುಬಿಟ್ಟಿರಿ. ಆದರೆ ನಿಮ್ಮ ಮರಿ ಮಕ್ಕಳಿಗೆ ಅದರ ಕಲ್ಪನೆಯಾದರೂ ಇದೆ ಅಂದು ಕೊಂಡಿದ್ದೀರ? ನೀವು ಅಷ್ಟೆಲ್ಲ ಕಾಳಜಿಯಿಂದ ಜತನವಾಗಿ ಅತ್ಯಂತ ಚಾಣಾಕ್ಶತನದಿಂದ ಅಡೆತಡೆಗಳನ್ನು ನಿವಾರಿಸಿ , ಕಾದಿಟ್ಟ ದೇಶಾಡಳಿತದ ಕಿರೀಟ ಕೈ ತಪ್ಪಿದ ಸಂಕಟದಲ್ಲಿ ನಿಮ್ಮದೇ ವಂಶದ ಕುಡಿ ದೇಶದ್ರೋಹಿಗಳಿಗೂ ಜೈಕಾರ ಹಾಕುತ್ತಾನೆ. ನಮಗವನ ಬಗ್ಗೆ ನಿರೀಕ್ಶೆಗಳೇನೂ ಇಲ್ಲ ಬಿಡಿ. ಎಷ್ಟಾದರೂ ಏನೂ ಬೆಳೆಯದ ಹಿಮದ ಮರುಭೂಮಿಯನ್ನೂ ಬೇರೆ ದೇಶಕ್ಕೆ ಕೊಟ್ಟರೇನೂ ತೊಂದರೆ ಇಲ್ಲ ಅಂದವರಲ್ಲವೆ ನೀವೂ? ನಿಮ್ಮ ವಾರಸುದಾರರು ನಿಮ್ಮ ಜೀನ್ಗಳಿಗೆ ನ್ಯಾಯ ಸಲ್ಲಿಸುತ್ತಿದ್ದಾರೆ ಬಿಡಿ. ಭಾರತದ ಸಾರ್ವಭೌಮತೆ ವಿಚ್ಛಿದ್ರವಾದರೂ ಚಿಂತೆ ಇಲ್ಲ, ಅವರ ಆಡಳಿತ ನಡೆಸಲು ತುಂಡು ಉಳಿದರೆ ಸಾಕು ಅನ್ನುತ್ತ ಭಾರತವನ್ನು ತುಂಡಾಗಿಸಲು ಹೋರಾಡುವವರ ಜತೆ ಧರಣಿ ಕೂರುತ್ತಿದ್ದಾರೆ. ನೀವು ಮಗಳನ್ನು ಪಟ್ಟಕ್ಕೇರಿಸಿದಾಗ ಇದನ್ನೇ ನಿರೀಕ್ಷಿಸಿದ್ದಿರೇನೋ ಅಲ್ವ?

ಮತ್ತಷ್ಟು ಓದು »

25
ಫೆಬ್ರ

ಟಿಪ್ಪು ಜಯಂತಿಗೆ ಕೊಡವರ ಭರ್ಜರಿ ಗಿಫ್ಟ್ “ಕಾಂಗ್ರೆಸ್ ಮುಕ್ತ ಕೊಡಗು”

– ಅನಿರುದ್ಧ ಎಸ್.ಆರ್ , ಭದ್ರಾವತಿ

BJP Wಕೋಮುವಾದಿ”ಗಳಿಗೆ ಕೊಡವರ ಗಿಫ್ಟ್ – ಓಲೈಕೆ ರಾಜಕಾರಣವೆಂಬ ರಕ್ತ ಬೀಜಾಸುರನ ಸಂಹಾರ ಆರಂಭ

ಓಲೈಕೆ ರಾಜಕಾರಣ ಎಂಬ ರಕ್ತಬೀಜಾಸುರನನ್ನು ಸ್ವಚ್ಛಂದವಾಗಿ ಬೆಳೆಸಿ, ಒಡೆದಾಳುವ ನೀತಿಯೇ ತಮ್ಮ ಧ್ಯೇಯವೆಂಬಂತೆ ನಡೆದುಕೊಂಡು ಬರುತ್ತಿರುವ ನೆಹರೂ ಕುಟುಂಬ ಅಂದರೆ ಸೋ ಕಾಲ್ಡ್ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ರಾಷ್ಟ್ರ ರಾಜಕಾರಣದಲ್ಲಿ ಎಬ್ಬಿಸಿರುವ ಹೊಲಸನ್ನು ತೊಳೆಯಲು ಇನ್ನೆಷ್ಟು ದಶಕಗಳು ಬೇಕೋ. ಆದರೆ, ತನ್ನ ಸ್ವಾರ್ಥಕ್ಕಾಗಿ ಅಮಾಯಕರನ್ನು ಬಲಿ ಕೊಡುವ, ಅಸಹಾಕಯಕರನ್ನೇ ಮೆಟ್ಟಿಲನ್ನಾಗಿ ಮಾಡಿಕೊಳ್ಳುವ ಇವರ ಪರಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತ ಮಾನ ಮೂರಾಬಟ್ಟೆಯಾಗಿದೆ.

ಆರಂಭದಲ್ಲಿ ಹೇಳಿದ ರಕ್ತಬೀಜಾಸುರನ ಪ್ರಸ್ತಾಪಕ್ಕೆ ಉದಾಹರಣೆ ಟಿಪ್ಪು ಜಯಂತಿಯ ಅಂಗವಾಗಿ ಮಡಿಕೇರಿಯಲ್ಲಿ ನಡೆದ ಮೆರವಣಿಗೆ ಹಾಗೂ ಅದರ ಮೂರ್ತ ರೂಪ ಗಲಭೆ. ಹಿಂದೂ ಸಂಘಟನೆ ಹಾಗೂ ರಾಜ್ಯದ ನಾಗರಿಕರ ತೀವ್ಯ ವಿರೋಧದ ನಡೆವೆಯೂ ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಯಂತಿಗೆ ಅನುಮತಿ ನೀಡಿದ ಸಿದ್ಧರಾಮಯ್ಯ ಸರ್ಕಾರದ ನೀಚ ಕೃತ್ಯಕ್ಕೆ ವಿಎಚ್ ಪಿ ಮುಖಂಡ ದೇವದಂಡ ಕುಟ್ಟಪ್ಪ ಬಲಿಯಾಗಿದ್ದರು. ಅಂದು ನಡೆದ ಗಲಭೆಯಲ್ಲಿ ಎಲ್ಲಿಂದಲೋ ಬಂದವರು ಅಟ್ಟಹಾಸ ಮೆರೆದು, ತಮ್ಮ ವಿಕೃತ ಮನಸ್ಥಿತಿಯ ಸುಖಕ್ಕಾಗಿ ಅಮಾಯಕನನ್ನು ಕೊಂದರು. ಪ್ರಕರಣ ಕುರಿತಂತೆ ಇತ್ತೀಚಿಗೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಕುಟ್ಟಪ್ಪ ಸಾವು ಆಕಸ್ಮಿಕವಲ್ಲ ಕೊಲೆ ಎನ್ನುವುದನ್ನು ಸ್ಪಷ್ಟೀಕರಿಸಿದ್ದರು.

ಮತ್ತಷ್ಟು ಓದು »

24
ಫೆಬ್ರ

ಇಲ್ಲಿ ಅಸಹಿಷ್ಣುತೆಯಿದೆ!

Dedicated to our purva paksha and uttara- paksha debating tradition. With gratitude to the purva-pakshins (opponents) I have learned from. May we engage in this intellectual yajna, with mutual respect.

-ನವೀನ ಗಂಗೋತ್ರಿ

ದಿ ಬ್ಯಾಟಲ್ ಫಾರ್ ಸಂಸ್ಕೃತ್ರಾಜೀವ್ ಮಲ್ಹೋತ್ರಾ ತಮ್ಮ ಇತ್ತೀಚಿನ ಹೊಸ ಪುಸ್ತಕ, ‘ದಿ ಬ್ಯಾಟಲ್ ಫಾರ್ ಸಂಸ್ಕೃತ್’ ನ ಅರ್ಪಣೆಯಲ್ಲಿ ಈ ರೀತಿ ಬರೆಯುತ್ತಾರೆ. ಈ ನೆಲದಲ್ಲಿ ಒಂದು ಕಾಲಕ್ಕೆ ಉತ್ತುಂಗ ತಲುಪಿದ್ದ ಮತ್ತು ಮಹತ್ತರ ಗೌರವಕ್ಕೆ ಪಾತ್ರವಾಗಿದ್ದ ’ವಾಕ್ಯಾರ್ಥ’ ಪರಂಪರೆ ಅಥವಾ ವಾದ ಪ್ರತಿವಾದದ ಸಂಸ್ಕೃತಿಯ ಕುರಿತು ಆ ಪುಸ್ತಕ ಧ್ವನಿಯೆತ್ತುತ್ತದೆ. ಹಾಗೆ ದನಿಯಾಗಲೇ ಬೇಕಾದ ಕಾಲಖಂಡದಲ್ಲಿ ನಾವಿದ್ದೇವೆಂಬುದು ವಿಷಯ.

ನಮ್ಮ ವೇದಗಳು, ಸ್ಮೃತಿಗಳು, ನಮ್ಮ ಕಥೆ, ಪುರಾಣ, ಕಾವ್ಯ, ಶಾಸ್ತ್ರ, ಕಲಾಪ್ರಕಾರ ಮತ್ತು ಸಮಾಜದ ವ್ಯವಸ್ಥೆಯನ್ನೆಲ್ಲ ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವೇ ಇಲ್ಲ ಅನ್ನುವ ಭರದಲ್ಲಿ ನಾವಿದ್ದರೆ ನಮ್ಮದೆಲ್ಲವನ್ನೂ ತಮ್ಮ ಸಮಾಜ ಮತ್ತು ತಮ್ ತಮ್ಮ ನಾಗರಿಗಕತೆಯ ಅರಿವಿನ ಪರಿಧಿಯಲ್ಲಿ ಅರ್ಥವಿಸಿಕೊಂಡು ವ್ಯಾಖ್ಯಾನ ಬರೆಯುವ ಹುಕಿಯೊಂದು ಪಶ್ಚಿಮ ರಾಷ್ಟ್ರಗಳ ವಿದ್ವಾಂಸರಲ್ಲಿ ಬಹುಕಾಲದಿಂದ ಚಾಲ್ತಿಯಲ್ಲಿದೆ. ಭಾರತದ ಬಗ್ಗೆ ತಿಳಿದುಕೊಳ್ಳುವ ಅಗತ್ಯ ನಮಗೆ ಕಾಣಿಸಿದಾಗೆಲ್ಲ ಈ ಪಶ್ಚಿಮದ ವಿದ್ವಾಂಸರು ಬರೆದದ್ದನ್ನು ಓದದೇ ಇರಲು ಸಾಧ್ಯವೇ ಇಲ್ಲ ಅನ್ನುವಷ್ಟು ಸಂಗತಿಗಳನ್ನೀಗಾಗಲೇ ಅವರು ಬರೆದಾಗಿದೆ. ಜಗತ್ತು ಮುನ್ನೂರರವತ್ತು ಡಿಗ್ರಿ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿ ನಮ್ಮ ಕುರಿತಾಗಿ ಜಗತ್ತಿನೆಲ್ಲ ಮೂಲೆಗಳಿಂದ ಬರುವ ಚಿಂತನೆಗಳಿಗೆ ನಾವು ಕಿವಿಯಾಗಲೇ ಬೇಕಾಗುತ್ತದೆನ್ನಿ. ಆದರೆ ಅದೇ ಹೊತ್ತಿನಲ್ಲಿ ನಮ್ಮ ಕುರಿತಾದ ವಿಮರ್ಶೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದೂ ಮತ್ತು ಅವರ ಕುರಿತಾದ ಆಮೂಲಾಗ್ರ ಅಧ್ಯಯನಮಾಡುವುದೂ ನಮಗೆ ಮುಖ್ಯವಾಗಬೇಕಿತ್ತು. ದುರದೃಷ್ಟವಶಾತ್ ನಾವು ಆ ಹಾದಿಯಲ್ಲಿ ತುಂಬಾ ತುಂಬಾ ಹಿಂದಿದ್ದೇವೆ. ಭಾರತೀಯವಲ್ಲದ ಆಬ್ರಹಾಮಿಕ್ ರಿಲಿಜನ್ನುಗಳ ಒಳಸುಳಿ ಮತ್ತು ಹುಳುಕುಗಳ ಬಗ್ಗೆ ತಾತ್ತ್ವಿಕವಾದ ಮರುಪ್ರಶ್ನೆಯನ್ನು ಹುಟ್ಟುಹಾಕುವುದಂತಿರಲಿ, ನಮ್ಮ ಕುರಿತಾಗಿಯೂ ಸರಿಯಾದ ಅವಗಾಹನೆಯೇ ಇಲ್ಲದಂಥಾ ಸ್ಥಿತಿಯಲ್ಲಿ  ನಾವಿದ್ದೇವೆ.

’ದಿ ಬ್ಯಾಟಲ್ ಫಾರ್ ಸಂಸ್ಕೃತ್’- ಪುಸ್ತಕವು ಬರಿಯ ಸಂಸ್ಕೃತ ಭಾಷೆಯೊಂದರ ಬಗ್ಗೆ ಮಾತ್ರವೇ ಕಾಳಜಿಯ ದನಿಯೆತ್ತದೆ, ಸಮಗ್ರವಾಗಿ ನಮ್ಮ ಚಿಂತನ ಪರಂಪರೆಯ ಸಧ್ಯದ ಅವಸ್ಥೆಯನ್ನೂ ಚರ್ಚಿಸುತ್ತದೆ. ಅದನ್ನು ಕಳಕೊಂಡ ನಾವು ಇವತ್ತಿಗೆದುರಿಸುತ್ತಿರುವ ಬೌದ್ಧಿಕ ಅಪಾಯಗಳನ್ನು ವಿಶ್ಲೇಷಿಸುತ್ತದೆ. ನಮ್ಮ ಸುತ್ತಲೂ ಸುದ್ದಿ ಮಾಡುವ ಕನ್ನಡದ ಬೌದ್ಧಿಕ ಲೋಕವನ್ನು ಪ್ರಸ್ತುತ ಪುಸ್ತಕದ ಹಿನ್ನೆಲೆಯಲ್ಲಿ ನೋಡೋಣ.

ಮತ್ತಷ್ಟು ಓದು »

22
ಫೆಬ್ರ

ಭಾರತದ ಎಡಪಂಥೀಯರು ದೇಶವಿರೋಧದತ್ತೇಕೆ ಸಾಗುತ್ತಾರೆ?

– ವಿನಾಯಕ್ ಹಂಪಿಹೊಳಿ

ಕಮ್ಯುನಿಸ್ಟ್ಭಾರತದಲ್ಲಿ ಇಂದು ಎಡಪಂಥವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ಪಡೆದರೂ, ಶಿಕ್ಷಣ ಕ್ಷೇತ್ರದ ಎಲ್ಲ ಆಯಕಟ್ಟಿನ ಜಾಗಗಳನ್ನು ಆವರಿಸಿದರೂ, ಸೋಶಿಯಲ್ ಮೀಡಿಯಾ ಹೊರತುಪಡಿಸಿ ಬಹುತೇಕ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಎಡಪಂಥೀಯ ಚಿಂತನೆಯನ್ನೇ ಪ್ರಸಾರ ಮಾಡಿದ್ದರೂ, ಸರ್ಕಾರೀ ಪ್ರಶಸ್ತಿಗಳಲ್ಲಿ ಬಹುತೇಕ ಪಾಲನ್ನು ಎಡಪಂಥೀಯರಿಗೆ ಮೀಸಲಿಟ್ಟಿದ್ದರೂ, ಹಲವಾರು ಜನಪರ ಸರ್ಕಾರೀ ಯೋಜನೆಗಳು ಎಡಪಂಥೀಯ ಚಿಂತನೆಯನ್ನೇ ಅವಲಂಬಿಸಿಕೊಂಡಿದ್ದರೂ ಅದೇಕೋ ಬಹುತೇಕ ಭಾರತೀಯರು ಮಾತ್ರ ಎಡಪಂಥವನ್ನು ಒಪ್ಪಿಕೊಂಡೇ ಇಲ್ಲ.

ಎಡಪಂಥ ಶಬ್ದವು ಫ್ರೆಂಚ್ ಕ್ರಾಂತಿಯ ಅವಧಿಯಲ್ಲಿ ಹುಟ್ಟಿರುವ ಶಬ್ದವಾದರೂ ಕಾಲಕ್ರಮದಲ್ಲಿ, ಸೋಶಿಯಾಲಿಸಂ, ಕಮ್ಯುನಿಸಂ ಮುಂತಾದ ಕಲ್ಪನೆಗಳನ್ನು ಒಳಗೊಳ್ಳುತ್ತ ಹೋಯಿತು. ಸಮಾಜದಿಂದ ಹೆಚ್ಚು ಪ್ರಯೋಜನ ಪಡೆಯಲಾಗದವರ ಕುರಿತು ವಿಶೇಷ ಕಾಳಜಿಯನ್ನು ತೋರಿಸುವದು ಎಡಪಂಥದ ತತ್ತ್ವ. ಬಹುಸಂಖ್ಯಾತ ರಿಲಿಜನ್ನಿನವರಿಂದ ತುಳಿತಕ್ಕೊಳಗಾಗುವ ಅಲ್ಪಸಂಖ್ಯಾತ ರಿಲಿಜನ್ನಿನ ಜನರ ಕುರಿತು ಕಾಳಜಿ ತೋರಿಸುತ್ತದೆ. ಶ್ರೀಮಂತರಿಂದ ಅನ್ಯಾಯಕ್ಕೊಳಗಾದ ಬಡವರ ಪರವಾಗಿ ನಿಲ್ಲುತ್ತದೆ. ಒಟ್ಟಿನಲ್ಲಿ ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಎಂಬ ಆದರ್ಶ ಸ್ಥಾಪಿಸುವದೇ ಇದರ ಉದ್ದೇಶ.

ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗೆ ಕಾರಣವಾಗುವ ಪ್ರತಿಯೊಂದನ್ನೂ ಎಡಪಂಥವು ವಿರೋಧಿಸುತ್ತದೆ. ಬಹುಸಂಖ್ಯಾತರಿರುವ ರಿಲಿಜನ್ನಿನ ಜನರಿಂದ ಅಲ್ಪಸಂಖ್ಯಾತರ ರಿಲಿಜನ್ನಿನ ಜನರಿಗೆ ಸಾಮಾಜಿಕ ಅನ್ಯಾಯಗಳಾಗುವದರಿಂದ ರಿಲಿಜನ್ನುಗಳನ್ನು ವಿರೋಧಿಸುತ್ತದೆ. ಖಾಸಗೀ ಉದ್ಯಮಗಳಿಂದಾಗಿ ಆರ್ಥಿಕ ಸಂಪತ್ತುಗಳು ಉದ್ದಿಮೆದಾದರಲ್ಲಿಯೇ ಕ್ರೋಢೀಕರಣಗೊಳ್ಳುವದರಿಂದ ಖಾಸಗೀಕರಣವನ್ನು ವಿರೋಧಿಸುತ್ತದೆ. ರೈತರು ಬೆಳೆಯುವ ಬೆಳೆಯನ್ನು ಸಂಗ್ರಹಿಸಿಟ್ಟುಕೊಳ್ಳುವ ಜಮೀನುದಾರರನ್ನು ವಿರೋಧಿಸುತ್ತದೆ.

ಮತ್ತಷ್ಟು ಓದು »

22
ಫೆಬ್ರ

ವೋಟ್ ಬ್ಯಾಂಕ್ ಮದ್ದಾನೆಗೆ ಸಿಲುಕಿ ನರಳಿದ ಸಿಸಿಸಿ

– ಅನಿರುದ್ಧ ವಸಿಷ್ಟ,ಭದ್ರಾವತಿ

ಏಕರೂಪ ನಾಗರಿಕ ಸಂಹಿತೆ – ಸುಪ್ರೀಂ ಕೋರ್ಟ್ V/S ಜಮಾತೆ ವಿಚಾರಧಾರೆ

ಸಮಾನ ನಾಗರೀಕ ಸಂಹಿತೆವ್ಯಾಪಾರಕ್ಕೆಂದು ಭಾರತಕ್ಕೆ ಬಂದು ದೇಶದ ಸಂಪತ್ತನ್ನು ಕೊಳ್ಳೆ ಹೊಡೆದದ್ದು ಮಾತ್ರವಲ್ಲದೇ, ದೇಶವನ್ನು ದಾಸ್ಯದ ಸಂಕೋಲೆಯಲ್ಲಿ ಬೀಳಿಸಿ, ಅಬ್ಬರಿಸಿದ ಬ್ರಿಟೀಷರ ಒಡೆದಾಳುವ ನೀತಿಯ ಮನಸ್ಥಿತಿ, ಭಾರತೀಯ ವಂಶವಾಹಿಯಲ್ಲಿ ಸೇರಿಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಆದರೆ,ಇವರನ್ನು ಓಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆವೆಂದು ಬೀಗುವ ಅಹಿಂಸಾವಾದಿ(?)ಗಳ ಕಾಂಗ್ರೆಸ್, ಎಲ್ಲ ಕ್ರೆಡಿಟ್‌ನ್ನು ತನ್ನ ತೆಕ್ಕೆಗೆ ಹಾಕಿಕೊಂಡದ್ದು ಮಾತ್ರವಲ್ಲದೇ, ಬ್ರಿಟೀಷರ ಒಡೆದಾಳುವ ನೀತಿಯನ್ನೇ ಮೈಗೂಡಿಸಿಕೊಂಡಿತು. ಭಾರತೀಯ ಸ್ವಾತಂತ್ರ್ಯದ ಜನಕ ಮಹಾತ್ಮ ಗಾಂಧಿಯವರ ಮಾತನ್ನು ಧಿಕ್ಕರಿಸಲು ಆರಂಭಿಸಿದ ಜವಹರಲಾಲ್ ನೆಹರೂ,ತಮ್ಮಿಚ್ಚೆಗೆ ಬಂದಂತೆ ಸರ್ಕಾರ ನಡೆಸಲು ಆರಂಭಿಸಿದ್ದು ಮಾತ್ರವಲ್ಲದೇ, ದೇಶದ ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿ, ಶಾಶ್ವತಗೊಳಿಸಲು ಯೋಚಿಸಿ, ವೋಟ್ ಬ್ಯಾಂಕ್ ಎಂಬ ಅನಿಷ್ಟ ಪದ್ದತಿಯನ್ನು ಭಾರತದ ರಾಜಕಾರಣಕ್ಕೆ ಕೊಡುಗೆಯನ್ನಾಗಿ ನೀಡಿದರು.

ಇದರ ಪರಿಣಾಮ, ಬ್ರಿಟೀಷರಂತೆ ಒಡೆದಾಳುವ ನೀತಿಯನ್ನು ೬೦ ವರ್ಷಗಳ ಕಾಲ ಕಾಂಗ್ರೆಸ್ ಅನುಸರಿಸಿಕೊಂಡು ಬಂದದ್ದಲ್ಲದೇ, ಜಾತ್ಯತೀತ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಕೇವಲ ಸಂವಿಧಾನದ ಪೀಠಿಕೆಗೆ ಮಾತ್ರ ಸೀಮಿತವಾಗಿಸಿ, ಓಲೈಕೆ ರಾಜಕಾರಣದ ವಿಷಬೀಜವನ್ನು ಬಿತ್ತಿ, ಹೆಮ್ಮರವನ್ನಾಗಿ ಬೆಳೆಸಿದೆ. ಪರಿಣಾಮ, ಜಾತ್ಯತೀತ ರಾಷ್ಟ್ರದಲ್ಲಿ ಜಾತಿ, ಧರ್ಮಗಳೇ ಇಂದು ಎಲ್ಲ ಕ್ಷೇತ್ರಗಳ ಪ್ರಮುಖ ವಿಚಾರ ಹಾಗೂ ವಿವಾದಗಳಾಗಿ ಪರಿವರ್ತನೆಯಾಗಿದ್ದು, ವಿಶ್ವ ಭ್ರಾತೃತ್ವವನ್ನು ಪ್ರಪಂಚಕ್ಕೆ ಸಾರಿದ ಭಾರತದ ಮಾನವನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿತ್ತು. ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ ಈ ವಿಚಾರಗಳು ಸಂವಿಧಾನದ ಮೂಲ ಆಶಯ ಹಾಗೂ ಈ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯನ್ನೇ ಉಲ್ಲಂಘಿಸುವ ಮಟ್ಟಕ್ಕೆ ಧರ್ಮಾಧಾರಿತ ಕಾನೂನು ಹಾಗೂ ವ್ಯವಸ್ಥೆಗಳನ್ನು ರೂಪಿಸಿ, ಬೀಗಲು ಅವಕಾಶ ಮಾಡಿಕೊಟ್ಟಿದೆ.ಅಭಿವೃದ್ಧಿಶೀಲ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳು, ಭಾರತವನ್ನು ವಿಶ್ವಗುರುನ್ನಾಗಿಸುವತ್ತ ಹೊರಳಿಸುತ್ತಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಈ ವಿಚಾರಕ್ಕೆ ದೇಶದೊಳಗಿರುವ ಇಂತಹ ಅನಿಷ್ಟ ಪದ್ದತಿಗಳು ತೊಡಕಾಗುತ್ತವೆ.ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಮಾನ ನ್ಯಾಯ ಒದಗಿಸಲು ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬೇಕಾದ ಅವಶ್ಯಕತೆ ಇದೆ. ಭಾರತ ಸಂವಿಧಾನ ಪೀಠಿಕೆಯಲ್ಲಿ ಹೇಳಿರುಂತೆ ಜಾತ್ಯತೀತ ಹಾಗೂ ಸಮಾನತೆಯನ್ನು ದೇಶದಲ್ಲಿ ವಾಸ್ತವವಾಗಿ ಜಾರಿಗೊಳಿಸಬೇಕಾದರೆ, ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಲೇಬೇಕು.
ಮತ್ತಷ್ಟು ಓದು »

18
ಫೆಬ್ರ

ಯಕ್ಷಗಾನ ಕರಾವಳಿಯ ಜನರ ತಲೆಕೆಡಿಸಿ ವಾತಾವರಣ ಕಲುಷಿತಗೊಳಿಸಿದೆಯೇ?

ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ

ಯಕ್ಷಗಾನಈ ಪ್ರಶ್ನೆ ಬಂದಿದ್ದು ತಮ್ಮನ್ನು ತಾವು ಮಹಾನ್ ಲೇಖಕ ಎಂದು ಬಿಂಬಿಸಿಕೊಂಡು ಪ್ರಚಾರಕ್ಕಾಗಿ ಹಾತೊರೆಯುವ ವ್ಯಕ್ತಿಯೊಬ್ಬನ ಪೇಸ್ಬುಕ್ ಗೋಡೆ ಬರಹದಿಂದಾಗಿ.  ಕೆಲವರು ತಾನು ಬರೆದ ಕೆಲ ಪುಸ್ತಕಗಳಿಗೆ ಬಿಟ್ಟಿ ಪ್ರಚಾರಕೊಡಲು ಅಥವಾ ಅವಾರ್ಡು ಬಾಚಿಕೊಳ್ಳಲು ಮುಖ್ಯ ಅಸ್ತ್ರವಾಗಿ ಬಳಸುವುದು ಹಿಂದೂ ಧರ್ಮ ಅಥವಾ ಈ ನೆಲದ ಕಲೆ, ಸಂಸ್ಕೃತಿಯ ಅವಹೇಳನ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಅದೇ ರೀತಿ ಅದಕ್ಕೆ ಪೂರಕವಾದ ಧೋರಣೆ ಹೊಂದಿರುವ ಸರಕಾರವೂ ಇರುವುದರಿಂದ ಇದು ಅವರನ್ನು ಮೆಚ್ಚಿಸುತ್ತೆ . ಧಾರ್ಮಿಕ ಭಾವನೆಯನ್ನು ಕೆರಳಿಸಿ ಪ್ರಚಾರ ಪಡೆಯುವುದು ಬಹಳ ಸುಲಭದ ದಾರಿ .ಯಾಕೆಂದರೆ ಮೊನ್ನೆ ತಾನೆ  ಪ್ರೊಫೆಸರ್ ಭಗವಾನರು ಮಾಡಿದ್ದು ಇದನ್ನೇ ,ಇಲ್ಲದೇ ಹೋದಲ್ಲಿ ಅತ್ಯಂತ ಕೆಟ್ಟದಾಗಿ ಅನುವಾದ ಮಾಡಿದ ಲೇಖಕನೊಬ್ಬನಿಗೆ ಪ್ರಶಸ್ತಿ ಬರುವುದು ಸಾಧ್ಯವಿತ್ತೇ? ಇರಲಿ ಬಿಡಿ ಇಲ್ಲಿ ಋಣಾತ್ಮಕ ವಿಚಾರಗಳಿಗೆ ಮಹತ್ವ ಜಾಸ್ತಿನೇ ಸಿಗೋದು ಆದರೆ ಕರಾವಳಿಯ ಗಂಡುಕಲೆ  ಯಕ್ಷಗಾನದ ಬಗೆಗಿನ ಮೂರ್ಖತನದ ಹೇಳಿಕೆಗೆ ಪ್ರತಿಕ್ರಿಯೆ  ಕೊಡಬೇಕೆನಿಸಿತು.ಯಾಕೆಂದರೆ ನಾನೊಬ್ಬ ಯಕ್ಷಗಾನದ ಅಭಿಮಾನಿ.

ನನ್ನ ಊರು ಕೊಣಾಜೆ, ನನ್ನ ಮನೆಯ ಪಕ್ಕದಲ್ಲಿ ವರ್ಷಂಪ್ರತಿ ಯಕ್ಷಗಾನ ನಡೆಯುತ್ತೆ. ಅದನ್ನು ನಡೆಸುವುದು ದುರ್ಗಾಪರಮೇಶ್ವರಿ ಸೇವಾ ಸಮಿತಿಯವರು ಅಲ್ಲಿರುವ ಸದಸ್ಯರು ಎಲ್ಲರೂ ಸೇರಿ ದುಡ್ಡು ಹಾಕಿ ಆ ಯಕ್ಷಗಾನ ನಡೆಸುವಂತದ್ದು. ಆ ಸಮಿತಿಯಲ್ಲಿ ೬೦ ಜನ ಹಿಂದೂಗಳ ಜೊತೆ ಮೂರು ಮಂದಿ ಮುಸ್ಲಿಂ ಸದಸ್ಯರು ಸೇರಿ, ನಮ್ಮ ಜೊತೆ ಕೂಡಿಕೊಂಡು ಕೆಲಸ ಮಾಡಿ ಯಕ್ಷಗಾನ ಮಾಡಿಸುವುದು ಹಲವು ವರ್ಷದಿಂದ ನಡೆದುಕೊಂಡು ಬಂದದ್ದು .ಇದೇ ರೀತಿ ಮಂಗಳೂರು ನಗರಭಾಗದಲ್ಲಿ ಕ್ರಿಶ್ಚನ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ವರು ಅತೀ ವೈಭವಯುತವಾಗಿ ನಡೆಸುವ ಯಕ್ಷಗಾನವು ಕೂಡಾ ಕರಾವಳಿಯ ಸೌಹಾರ್ದತೆಗೆ ಹಿಡಿದ ಕನ್ನಡಿ. ಆಟ ನಡೆಯುವ ಬಯಲಿನಲ್ಲಿ ವ್ಯಾಪಾರಿಗಳು ನಡೆಸುವ ಬುರ್ಜಿ ,ಸುಕುನಪ್ಪ ,ನೈಯಪ್ಪ ,ಸೋಜಿ ,ಕುರ್ಲಾರಿ ಮಾರಾಟದಲ್ಲಿ ಅನ್ಯಮತೀಯರೇ ಜಾಸ್ತಿ .ಇಲ್ಲಿ ಯಾವ ವಾತಾವರಣ ಹೇಗೆ ಕಲುಷಿತ ವಾಯಿತು ? ಎಂದು ಆ ‘ಲೇಖಕ’ರೇ  ಹೇಳಬೇಕು

ಮತ್ತಷ್ಟು ಓದು »

18
ಫೆಬ್ರ

ಅಂಬಿಕಾತನಯದತ್ತರ “ ಬೆಳಗು” – ಶ್ರೀ ಅರವಿಂದರ “ ಚಿನ್ಮಯದ ಆತ್ಮದೀಪ ”

– ಪುಟ್ಟು ಕುಲಕರ್ಣಿ,ಕುಮಟಾ

ಬೇಂದ್ರೆ ಮತ್ತು ಅರಬಿಂದೋವರಕವಿ ಅಂಬಿಕಾತನಯದತ್ತರು , ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುವ ಮುನ್ನ ಮಾಡಿದ ಭಾಷಣದಲ್ಲಿ ಒಂದು ಸಾಲು ಹೀಗಿದೆ, ‘ ನನ್ನ “ಬೆಳಗು” ಮತ್ತು “ಹಕ್ಕಿ ಹಾರುತಿದೆ” ಕವನಗಳನ್ನು ಮುಗ್ಧ ವಿದ್ಯಾರ್ಥಿಗಳಿಗೆ ಕಲಿಸಿ ಕೊಡಲಾಗುತ್ತಿದೆ. ಆದರೆ ಅದನ್ನು ಕಲಿಸುತ್ತಿರುವ ಶಿಕ್ಷಕರು ಆ ವಿದ್ಯಾರ್ಥಿಗಳಿಗಿಂತ ಮುಗ್ಧರಾಗಿದ್ದಾರೆ….. “ . ಈ ಸಾಲುಗಳನ್ನು ಓದಿದಾಗ , ಇಲ್ಲಿಯವರೆಗೂ “ಬೆಳಗು” ಕವನದ ಬಗೆಗೆ ಬಂದ ವಿಶ್ಲೇಷಣೆಗಳ ಕುರಿತು ಕವಿಗೆ ತೃಪ್ತಿ ಇಲ್ಲವೆಂದು ತೋರುತ್ತಿದೆ. ಹಾಗಾದರೆ ಈ “ಬೆಳಗು” ಮತ್ತು “ಹಕ್ಕಿ ಹಾರುತಿದೆ ನೋಡಿದಿರಾ” ಕವನಗಳನ್ನು ಬೇರೊಂದು ಆಯಾಮದಿಂದ ವಿಶ್ಲೇಷನೆ ಮಾಡಬೇಕೆ? ಹಾಗಿದ್ದಲ್ಲಿ ಅದಕ್ಕೆ ಇರುವ ಮಾನಕಗಳೇನು? ಯಾವ ಅಥವಾ ಯಾರ ಪ್ರಭಾವದಲ್ಲಿ ಈ ಕವನಗಳು ರೂಪಿತಗೊಂಡಿವೆ? ಬೌದ್ಧಿಕ ಹಂತದ ಶಬ್ದಜಾಲದ ಹೊರತಾಗಿಯೂ , ಪ್ರಜ್ಞಾ ವಲಯದ ಆಚೆಯಲ್ಲಿ ಸಾಗಿ ಅನಂತಾನಂತದ ಜೊತೆಗೆ ಜೋಡಣೆಯಾಗಬಲ್ಲ ಅನೂಹ್ಯವಾದದು ಏನಾದರೂ ಇಲ್ಲಿ ಹೇಳಲ್ಪಡುತ್ತಿದೆಯೋ?

ಇಲ್ಲಿರುವ ಶಬ್ದಮಾಧುರ್ಯದ ಆಚೆ ಇರುವ “ ಏನನ್ನೋ” ಕವಿ ಈ “ಬೆಳಗು” ಕವನದಲ್ಲಿ ಅಡಗಿಸಿದ್ದಾನೆ. ಈ “ಬೆಳಗು” ಕೇವಲ ನಾಮಪದವೋ, ಕ್ರಿಯಾಪದವೋ ಅಥವಾ ವಿಶೇಷಣವೋ ಅಥವಾ ಎಲ್ಲವೂ ಆಗಿ ಅರ್ಥಗರ್ಭಿತವಾಗಿದೆಯೋ?

“ಬೆಳಗು” ನಾಮಪದವಾಗಿ ಉಷೆಯ ಕಾಲವೆಂದು ಸರ್ವವಿದಿತ. ಆದರೆ ಅದೇ ಬೆಳಗು ಕ್ರಿಯಾಪದವಾಗಿ ಹೊಳೆ, ಆರತಿಯೆತ್ತು ಎನ್ನುವ ಅರ್ಥವನ್ನೂ ಹೇಳುತ್ತಿದೆ. ಹೊಳೆಯುವ , ಮಿನುಗುವ ವಿಶೇಷಣದಲ್ಲೂ ಸಹಿತ ಮಿಂಚುತ್ತಿದೆ. ಹಾಗಾದರೆ ಇಲ್ಲಿರುವ ಬೆಳಗು ಯಾವುದು? ಚುಮುಚುಮು ಬೆಳಗೇ? ಪೆರ್ವೆಳಗೆ ? ಬಳ್ಳಿವೆಳಗೆ ? ಬೆರಕೆವೆಳಗೆ? ಬೆಳ್ವೆಳಗೆ? ಹೀಗೆ ಹತ್ತಾರು ಹಂತದ ಪ್ರಶ್ನೆಗಳನ್ನು ನಿಲ್ಲಿಸುತ್ತಿದೆ. ಬೆಳಗೊಂದಿಸು ಎನ್ನುವದಕ್ಕೆ ಕಾಂತಿಗೊಳಿಸು ಎನ್ನುವ ಅರ್ಥವೂ ಇದೆ ಈ ಎಲ್ಲ ಹಂತದ ಸ್ವಾನುಭವವನ್ನು ಆ ಉಷೆಯ ಸಮಯದ ತೋಷದಲ್ಲಿ ಕಂಡೇ ಅನುಭವಿಸಬೇಕು. ಯಾವ ಶಬ್ದದದಲ್ಲಿ ಹೇಳಿದರೂ ಆ ಅನುಭಾವ ಸಿಕ್ಕಲಾರದು.

ಮತ್ತಷ್ಟು ಓದು »

17
ಫೆಬ್ರ

ಏಕರೂಪ ನಾಗರಿಕ ಸಂಹಿತೆ – ಸುಪ್ರೀಂ ಕೋರ್ಟ್ V/S ಜಮಾತೆ ವಿಚಾರಧಾರೆ

– ಅನಿರುದ್ಧ ವಸಿಷ್ಟ,ಭದ್ರಾವತಿ

ಅರಾಜಕತೆ ತಂದೊಡ್ಡದಿರಲಿ ಧರ್ಮಾಧಾರಿತ ಕಾನೂನು

Uniform Civil Codeಪ್ರಜಾಪ್ರಭುತ್ವ ದೇಶದಲ್ಲಿರುವ ಭಾರತೀಯರಿಗೆ ದೇಶದ ಸಂವಿಧಾನವೇ ಮೇಲ್ಪಂಕ್ತಿಯಾಗಿದ್ದು, ಸಂವಿಧಾನವೇ ಅಂತಿಮವಾದುದು. ಧರ್ಮ ಗ್ರಂಥಗಳಾದ ರಾಮಾಯಣ, ಮಹಾಭಾರತ, ಕುರಾನ್, ಬೈಬಲ್‌ಗಳು ಆಯಾ ಧರ್ಮದ ಅನುಯಾಯಿಗಳ ವೈಯಕ್ತಿಕವಾಗಿರಬೇಕು.ಆದರೆ,ವೋಟ್ ಬ್ಯಾಂಕ್ ರಾಜಕಾರಣದ ಫಲವಾಗಿ ಸರ್ಕಾರಗಳು ಕೈಗೊಂಡ ನಿರ್ಧಾರಗಳು ಸಂವಿಧಾನ ವಿರುದ್ಧ ನಡೆಯಲು ಪ್ರೇರಣೆಯಾಗುತ್ತವೆ ಎಂದರೆ ಅದು ಪ್ರಜಾಪ್ರಭುತ್ವದ ದುರಂತವೇ ಹೌದು.೩೦೦ ವರ್ಷಗಳ ಕಾಲ ಬ್ರಿಟೀಷರಿಂದ ಆಳಿಸಿಕೊಂಡ ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದರೂ, ಒಂದು ರೀತಿಯಲ್ಲಿ ಸರ್ವಾಧಿಕಾರಿ ಮನಸ್ಥಿತಿಯನ್ನೆ ಇಂದಿಗೂ ಹೊಂದಿದೆ ಎಂದರೆ ತಪ್ಪಲ್ಲ. ಇದು ಕೇವಲ ಆಳುವ ಪಕ್ಷಗಳ ಮನಸ್ಥಿತಿ ಮಾತ್ರವಲ್ಲ, ದೇಶದ ಪ್ರತಿ ಧರ್ಮ ಹಾಗೂ ಜಾತಿಗಳಲ್ಲಿ ಇದು ಹಾಸು ಹೊಕ್ಕಾಗಿದೆ.

೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ರೂಪಿಸಲಾದ ಸಂವಿಧಾನ ಮಹೋನ್ನತ ಆಶಯಗಳನ್ನು ಹೊಂದಿದೆ.ಸಂವಿಧಾನವೇ ಭಾರತೀಯರಿಗೆ ಒಂದು ರೀತಿಯಲ್ಲಿ ಸವೋತ್ತಮ ಎಂದರೂ ತಪ್ಪಲ್ಲ. ಆದರೆ, ಸಂವಿಧಾನ ಆಶಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಯಾವುದೇ ಸರ್ಕಾರ ಅಥವಾ ಧರ್ಮಗಳು ನಡೆದುಕೊಂಡಾಗ ಅದನ್ನು ನ್ಯಾಯಾಂಗದಲ್ಲಿ ಪ್ರಶ್ನೆ ಮಾಡುವ ಅಧಿಕಾರವನ್ನು ಇದೇ ಸಂವಿಧಾನ ಕಲ್ಪಿಸಿದೆ. ಆದರೆ, ಯಾವುದೇ ಒಂದು ಒಳ ವ್ಯವಸ್ಥೆ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಿಸುತ್ತದೆ ಎಂದರೆ ಹೇಗೆ?

ಮತ್ತಷ್ಟು ಓದು »