ರೋಹಿತಾಶ್ವನು ಅಲ್ಲಿಂದ ಬರೆದ ಪತ್ರ
– ವಿಕ್ರಂ ಜೋಷಿ
ನೀವು ಇನ್ನೂ ನನ್ನ ಗುಂಗಿನಲ್ಲೇ ಇದ್ದೀರಂತ ಗೊತ್ತು. ನನ್ನ ಹೆಸರುವಾಸಿ ಮಾಡಿ, ನನ್ನ ವಂಶವನ್ನು ರಸ್ತೆಯಮೇಲೆ ತಂದ ಮಾಧ್ಯಮದವರಿಗೆ,ವೈಚಾರಿಕ ರಾಜಕಾರಣಿಗಳಿಗೇ ಧನ್ಯವಾದಗಳು. ನನ್ನಂತಹವರ ಸಾವಿಗೇ ಕ್ಯಾಮರಾ ಕಟ್ಟಿಕೊಂಡು ಕಾಯುತ್ತಿರುತ್ತಾರೆ.ನಿಜ ಬಯಲಿಗೆ ಬರಲಿ,ನೀವೆಲ್ಲಾ ಓದಲಿ ಅಂತ ಈ ಶೋಕ ಪತ್ರ ಬರೆದಿದ್ದು. ನನಗೆ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ತುಂಬಾ ಬೇಸರವಿದೆ.ನನ್ನದು ನಿಜವಾಗಿಯೂ ಆತ್ಮಹತ್ಯೆ ಅಲ್ಲ, ಕೊಲೆ. ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯುತ್ತಿರುವ ಈ ದೇಶದ ವಿರುದ್ಧ ಕೆಲ ದೇಶದ್ರೋಹಿಗಳು ಮಾಡುತ್ತಿರುವ ಸಂಚಿಗೆ ನಾನೂ ಒಬ್ಬ ಬಲಿ.ಕಡೆಗಾಲದಲ್ಲಿ ನನಗೆ ಸತ್ಯ ಅರಿವಾದರೂ, ಕಾಲ ಮಿಂಚಿ ಹೋಗಿತ್ತು. ಒಮ್ಮೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವ ಪ್ರವೃತ್ತಿ ನನ್ನದಲ್ಲ, ಇದನ್ನು ನೋಡಿಯೇ ಅಂದು ನನಗೆ ನೀನು ನಮ್ಮ ಮುಂದಿನ ನಾಯಕ ಎಂಬ ಮಹಾದಾಶೆ ತೋರಿಸಿದ್ದರಬೇಕು.
ಕಾಲೇಜಿಗೆ ಸೇರಿದಾಗಿನಿಂದ ನನಗೆ ಒಂದು ದಿನವೂ ಓದಲು ಅವಕಾಶ ಸಿಕ್ಕಿಲ್ಲ.”ನೀನು ಹಿಂದುಳಿದವ ಹಿಂದುಳಿದವ ಹೋರಾಡಬೇಕು”ಎಂಬ ಮಾತನ್ನು ಹೇಳಿ ಹೇಳಿ ನನ್ನ ಮನಸ್ಸು ತಿರುಗಿಸಿ ಬಿಟ್ಟರು,ಮೊದಲೇ ಬಿಸಿ ರಕ್ತದ ಯುವಕ.ನಾನು ನಂಬಿ ಕೆಟ್ಟೆ.ಕಾಲೇಜಿನಲ್ಲಿ ಓದುವುದನ್ನು ನಿಲ್ಲಿಸಿ ಹೀಗೆ ಹೋರಾಡುವುದನ್ನೇ ಮುಖ್ಯ ಭಾಗವಾಗಿ ಪರಿಗಣಿಸತೊಡಗಿದೆ, ಹೋರಾಡಿದ್ದಕ್ಕೆ ಬೇಸರವಿಲ್ಲ ಆದರೆ ಯಾಕೆ ಹೋರಾಡಿದೆ? ಯಾರಿಗೆ ಹೋರಾಡಿದೆ? ಯಾರು ಲಾಭ ಪಡೆದುಕೊಂಡರು? ಇಂದು ನನಗೆ ಅರ್ಥವಾಗುತ್ತಿದೆ, ಇಲ್ಲಿಯ ಮೆಟ್ಟಿಲಿನ ಮೇಲೆ ಕೂತು ನೋಡಿದಾಗ.