ವಿಷಯದ ವಿವರಗಳಿಗೆ ದಾಟಿರಿ

Archive for

31
ಜನ

ಬುದ್ಧಿಜೀವಿಗಳೆಂಬ ಆಸ್ಥಾನ ವಿದೂಷಕರನ್ನು ಕಡೆಗಣಿಸಬೇಡಿ!

– ರೋಹಿತ್ ಚಕ್ರತೀರ್ಥ

ಕೋತಿ ಮತ್ತು ಬಾಳೆಹಣ್ಣುಜನವರಿ 28ನೇ ತಾರೀಕು ಮೈಸೂರು ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ಒಂದು ನುಡಿನಮನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇತ್ತೀಚೆಗೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲನಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮ ಅದು. ವಡ್ಡೇರ ಎಂಬ ಹಿಂದುಳಿದ ಜಾತಿಯ ತಂದೆಗೆ ಹುಟ್ಟಿದ ರೋಹಿತ್, ಹತ್ತು ವರ್ಷಗಳ ಹಿಂದೆಯೇ ಕ್ರಿಶ್ಚಿಯನ್ ಆಗಿ ಮತಾಂತರನಾಗಿದ್ದ ಎಂದು ದಾಖಲೆಗಳು ಹೇಳುತ್ತಿರುವಾಗ ಆತನನ್ನು ಬಲಾತ್ಕಾರವಾಗಿ ದಲಿತ ಎಂದು ಬಿಂಬಿಸಿ ಕಾರ್ಯಕ್ರಮ ಮಾಡಿದ್ದರ ಔಚಿತ್ಯ ಏನೋ ಗೊತ್ತಿಲ್ಲ. ಆತನ ಸಾವಿಗೆ ಕುಟುಂಬದೊಳಗಿನ ಜಗಳಗಳೇ ಕಾರಣವಾಗಿದ್ದವು ಎಂದು, ಆತನ ಮನೆಯವರನ್ನು ಸಂದರ್ಶಿಸಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವಿಸ್ತೃತವಾದ ವರದಿಯನ್ನು ಪ್ರಕಟಿಸಿದೆ. ಆದಾಗ್ಯೂ ಆತ ತನ್ನ ಕೊನೆಯ ಪತ್ರದಲ್ಲಿ ಬರೆಯದೇ ಇರುವ ವಿಷಯಗಳನ್ನು ತಾವಾಗಿ ಕಲ್ಪಿಸಿಕೊಂಡು ಸಾವನ್ನು ಯಾವ್ಯಾವುದೋ ಸಮಸ್ಯೆಗಳಿಗೆಲ್ಲ ತಗುಲಿ ಹಾಕುವುದಕ್ಕೆ ಬುದ್ಧಿಜೀವಿಗಳು ಮತ್ತು ಮಾಧ್ಯಮದ ಮಂದಿ ಪ್ರಯತ್ನಿಸುತ್ತಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ ಸರಕಾರಕ್ಕೆ ಮುಜುಗರ ತರುವುದೇ ಇವರೆಲ್ಲರ ಏಕೈಕ ಅಜೆಂಡಾ ಎಂಬುದು ಮತ್ತೆಮತ್ತೆ ಸಾಬೀತಾಗಿರುವ ಸತ್ಯ. ತಮ್ಮ ಕಾರ್ಯಸಾಧನೆಗಾಗಿ ಇವರು ಅಂತಾರಾಷ್ಟ್ರೀಯ ವೇದಿಕೆಗಳನ್ನು ಕೂಡ ನಿರ್ಲಜ್ಜೆಯಿಂದ ಬಳಸಿಕೊಳ್ಳಬಲ್ಲರು. ಬಿಬಿಸಿ ಮತ್ತು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳು ರೋಹಿತ್ ಆತ್ಮಹತ್ಯೆಯನ್ನು ಮುಂದಿಟ್ಟುಕೊಂಡು ಭಾರತದ ಮಾನ ಹರಾಜು ಹಾಕಿದ್ದೇ ಇದಕ್ಕೊಂದು ಜ್ವಲಂತ ನಿದರ್ಶನ.

ಇರಲಿ, ಆತನ ಸಾವಿಗೆ ಮಾನವೀಯ ನೆಲೆಯಲ್ಲಿ ದಲಿತ ಒಕ್ಕೂಟ ಕಾರ್ಯಕ್ರಮ ಯೋಜಿಸಿತ್ತು ಎಂದೇ ಹೇಳೋಣ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಬ್ಬರು ಘನ ಅತಿಥಿಗಳು ಆಡಿದ ಮಾತುಗಳಿಗೂ ಕಾರ್ಯಕ್ರಮದ ಆಶಯಕ್ಕೂ ತಾಳಮೇಳವೇ ಇರಲಿಲ್ಲ! ಒಬ್ಬ ಅತಿಥಿ ಕೆ.ಎಸ್. ಭಗವಾನ್, “ತ್ರೇತಾಯುಗದ ರಾಮನಿಗೆ ತನ್ನ ಪುರುಷತ್ವದ ಬಗ್ಗೆಯೇ ಸಂಶಯ ಇತ್ತು. ಹಾಗಾಗಿ ಎರಡು ಸಲ ಸೀತೆಯನ್ನು ಪರೀಕ್ಷೆಗೆ ಗುರಿಪಡಿಸಿದ. ಆ ಕಾಲದಲ್ಲಿ ಮಹಿಳೆಯರಿಗೂ ಆಸ್ತಿಯ ಹಕ್ಕು ಇದ್ದರೆ ಸೀತೆ ರಾಮನ ಜೊತೆ ವನವಾಸಕ್ಕೆ ಹೋಗುತ್ತಿರಲಿಲ್ಲ” ಎಂದರು. ಮುಂದುವರಿದು, “ರಾಮ ತನ್ನ ಪಟ್ಟಾಭಿಷೇಕದ ಕಾಲದಲ್ಲಿ 38 ಕೋಟಿ ರುಪಾಯಿಯ ಚಿನ್ನದ ನಾಣ್ಯಗಳನ್ನು ಪುರೋಹಿತರಿಗೆ ಕೊಟ್ಟ. ಹಾಗಾಗಿ ಪುರೋಹಿತಶಾಹಿಗಳು ರಾಮರಾಜ್ಯ ಬರಲಿ ಎನ್ನುತ್ತಿದ್ದಾರೆ” ಎಂಬ ಆಣಿಮುತ್ತುಗಳನ್ನು ಉದುರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎರಡನೇ ಅತಿಥಿ ಅದೇ ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಮಹೇಶ್ ಚಂದ್ರಗುರುಗಳು ಮೋದಿ, ಸ್ಮೃತಿ ಇರಾನಿ, ನೆಹರೂ ಮತ್ತು ವಿವಿಯ ಉಪಕುಲಪತಿ – ಎಲ್ಲರಿಗೂ ಹೋಲ್‍ಸೇಲ್ ಆಗಿ ಅವಾಚ್ಯಶಬ್ದಗಳಿಂದ ಬಯ್ದು ತನ್ನ ತೀಟೆ ತೀರಿಸಿಕೊಂಡರು. ಸಾಲದ್ದಕ್ಕೆ ಹುಚ್ಚ ವೆಂಕಟ್ ಸ್ಟೈಲ್‍ನಲ್ಲಿ ನನ್ ಎಕ್ಕಡಾ ನನ್ ಮಗಂದ್ ಎಂಬೆಲ್ಲ ಮುತ್ತಿನ ಹಾರದಂಥ ಪದಪುಂಜಗಳಿಂದ ತನ್ನ ಮಾತುಗಳನ್ನು ಕಳೆಗಟ್ಟಿಸಿ ಚಪ್ಪಾಳೆ ಗಿಟ್ಟಿಸಿದರು! ಈ ಇಬ್ಬರು ಪುಣ್ಯಾತ್ಮರು ಹೋದಲ್ಲೆಲ್ಲ ಏನು ಮಾತಾಡುತ್ತಾರೆನ್ನುವುದು ಇಡೀ ಜಗತ್ತಿಗೆ ಗೊತ್ತಿರುವಾಗ ಹುಡುಕಿ ಇಂಥವರನ್ನೇ ಕಾರ್ಯಕ್ರಮಕ್ಕೆ ಕರೆಸಿರುವುದನ್ನು ನೋಡಿದರೆ ದಲಿತ ಒಕ್ಕೂಟದ ಮುಖ್ಯ ಉದ್ಧೇಶ ರೋಹಿತ್‍ನಿಗೆ ಶ್ರದ್ಧಾಂಜಲಿ ಅರ್ಪಿಸುವುದಾಗಿರಲಿಲ್ಲ; ವಿವಾದದ ಬೆಂಕಿ ಹಾಕಿ ಅದರಲ್ಲಿ ಚಳಿ ಕಾಯಿಸಿಕೊಳ್ಳುವುದು ಮಾತ್ರವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.
ಮತ್ತಷ್ಟು ಓದು »