ವಿಷಯದ ವಿವರಗಳಿಗೆ ದಾಟಿರಿ

Archive for

14
ಜನ

ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ- ಭಾಗ೨

ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ ಭಾಗ೧

– ಪ್ರೇಮಶೇಖರ

ಶ್ರೀಯುತ ದಿನೇಶ್ ಅಮೀನ್,

ಮುಸ್ಲಿಮನಾಗಿರುವುದೆಂದರೆ.. ಬೊಳುವಾರುನಿಮ್ಮ ಉತ್ತರದ ಮೊದಲೆರಡು ಕಂತುಗಳನ್ನು ಓದಿ, ಅವುಗಳಲ್ಲಿನ ಕೊಂಕು ಮತ್ತಿತರ ನಕಾರಾತ್ಮಕ ಅಂಶಗಳನ್ನು ನಿರ್ಲಕ್ಷಿಸಿ, ಅವುಗಳಲ್ಲಿರುವ ವೈಚಾರಿಕತೆಯನ್ನಷ್ಟೇ ಗಮನಕ್ಕೆ ತೆಗೆದುಕೊಂಡೆ. ನಿಮ್ಮ ಮಾತುಗಳಿಗೆ ರೋಹಿತ್ ಚಕ್ರತೀರ್ಥರು ಸಮರ್ಪಕವಾಗಿಯೇ ಉತ್ತರಿಸಿದ್ದಾರೆ. ಆದಾಗ್ಯೂ, ನಿಮಗೆ ಉತ್ತರಿಸಬೇಕಾದ್ದು ನನ್ನ ಜವಾಬ್ಧಾರಿ ಎಂಬ ಅರಿವಿನಿಂದ ದೀರ್ಘ ವಿವರಣೆಗಳುಳ್ಳ ಪ್ರತಿಕ್ರಿಯೆಯನ್ನು ಸಿದ್ಧಪಡಿಸಿದ್ದೆ. ಇಸ್ಲಾಂ ಏಶಿಯಾ, ಯೂರೋಪ್ ಮತ್ತು ಆಫ್ರಿಕಾಗಳ ಬಹುಪಾಲು ನಾಡುಗಳಿಗೆ ಪ್ರಸರಿಸಿದ್ದು ಆಕ್ರಮಣದ ಮೂಲಕ ಎಂದು ಹೇಳಲು ಬಳಸಿದ ‘ಕತ್ತಿಯ ಮೂಲಕ’ ಎಂಬ ಮಾತನ್ನು ನೀವು ತಿಳಿದೋ ತಿಳಿಯದೆಯೋ ಅಪಾರ್ಥ ಮಾಡಿಕೊಂಡು ಕತ್ತಿಯ ಉಗಮದ ಬಗ್ಗೆ ಮಾತೆತ್ತಿ ಇಡೀ ಚರ್ಚೆಯನ್ನು ದಾರಿ ತಪ್ಪಿಸಲು ಹೋದ ನಿಮ್ಮ ವಾದಸರಣಿ; ಹಿಂದೂ-ಮುಸ್ಲಿಂ ಎಂದು ಧಾರ್ಮಿಕ ಸಂಘರ್ಷದ ಬಗ್ಗೆ ಹೇಳುತ್ತಲೇ ಹಠಾತ್ತಾಗಿ ಕಾಂಗ್ರೆಸ್-ಬಿಜೆಪಿ (ಗುಜರಾತ್ ೨೦೦೨-ದೆಹಲಿ ೧೯೮೪) ಎಂದು ರಾಜಕೀಯ ಆಯಾಮಕ್ಕೆ ಜಿಗಿಯುವ ನಿಮ್ಮ ಗೊಂದಲಮಯ ಚಿಂತನಾಧಾಟಿ; ರಕ್ತಪಾತಕ್ಕೆ ಸಂಬಂಧಿಸಿದಂತೆ ಹಿಂದೂಗಳ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಬಗ್ಗೆ ಪಕ್ಷಪಾತಿ ನಿಲುವು ತೋರುವ ನಿಮ್ಮ ವಿರೋಧಾಭಾಸಪೂರ್ಣ, ಅತಾರ್ಕಿಕ ನಡೆಗಳು- ಎಲ್ಲವುಗಳತ್ತ ಸೂಕ್ತ ಉದಾಹರಣೆಗಳ ಮೂಲಕ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸಿದ್ದೆ. ಅದು ನಮ್ಮ ನಾಡಿನ ಇತಿಹಾಸದ ಬಗ್ಗೆ, ವರ್ತಮಾನದ ಬಗ್ಗೆ ಒಂದು ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆಂದು ನಂಬಿದ್ದೆ. ಆದರೆ ನಿಮ್ಮ ನಾಲ್ಕನೆಯ ಕಂತನ್ನು ಓದಿದ ನಂತರ ನಿಮ್ಮೊಂದಿಗೆ ನಾಗರಿಕ ವಿಧಾನದಲ್ಲಿ ಸಂವಾದ ನಡೆಸುವುದು ಸಾಧ್ಯವಿಲ್ಲ ಎಂದರಿವಾಯಿತು. ಇಷ್ಟಾಗಿಯೂ, ಸುಮ್ಮನುಳಿದುಬಿಡುವುದೂ ಸರಿಯೆನಿಸಲಿಲ್ಲ. ಹೀಗಾಗಿ ಆ ದೀರ್ಘ, ವಿವರಣಾತ್ಮಕ ಉತ್ತರವನ್ನು ಬದಿಗಿರಿಸಿ ಒಂದೆರಡು ಮೂಲಭೂತ ಪ್ರಶ್ನೆಗಳನ್ನಷ್ಟೇ ಎತ್ತಿಕೊಂಡು ಆ ಬಗ್ಗೆ ಸಂಕ್ಷಿಪ್ತವಾಗಿ ನಿಮಗೆ ಕೆಲವು ಮಾತುಗಳನ್ನು ಹೇಳಲು ಇಲ್ಲಿ ಪ್ರಯತ್ನಿಸಿದ್ದೇನೆ. ಇವುಗಳಲ್ಲಿ ಹೆಚ್ಚಿನವು ನಾನು ಸ್ವಂತ ಅಧ್ಯಯನ, ಅವಲೋಕನ, ಚಿಂತನೆಯ ಮೂಲಕ ಗಳಿಸಿದವುಗಳಾದ್ದರಿಂದ ನಿಮಗೆ ಬೇರೆಲ್ಲೂ ಸಿಗಲಾರವು. “ನಾನು ಲೇಖಕನ ವ್ಯಕ್ತಿತ್ವವನ್ನು ಆತನ ಲೇಖನಗಳ ಮೂಲಕವೇ ಅರ್ಥಮಾಡಿಕೊಳ್ಳುತ್ತಾ ಬಂದವನು” ಎಂದು ವಾರದ ಹಿಂದೆ ಘೋಷಿಸಿದ ನೀವು ನಿಮ್ಮ ಮಾತಿಗೆ ಸತ್ಯವಾಗಿ ನಡೆದುಕೊಂಡಿದ್ದರೆ ಇದನ್ನೆಲ್ಲಾ ಹೇಳಬೇಕಾದ ಅಗತ್ಯ ನನಗೆ ಬರುತ್ತಲೇ ಇರಲಿಲ್ಲ.

ಮೊದಲಿಗೆ ಒಂದು ಸ್ಪಷ್ಟೀಕರಣ- ಮಾನವರೆಲ್ಲರೂ ಸಮಾನರು ಎಂಬ ಧೃಡನಂಬಿಕೆಯ ತಳಹದಿಯ ಮೇಲೆ ಗಟ್ಟಿಯಾಗಿ ನಿಂತು ಎಲ್ಲ ಬಗೆಯ ಹಿಂಸೆ, ಶೋಷಣೆ, ತಾರತಮ್ಯಗಳನ್ನು ತಿರಸ್ಕರಿಸುವುದು ನನ್ನ ಜೀವನಮೌಲ್ಯ. ವಿಮರ್ಶೆಯನ್ನು ಸ್ವಾಗತಿಸುವ ಧರ್ಮದ ವಿರುದ್ಧ ಪುಂಖಾನುಪುಂಖ ಹೇಳಿಕೆ ನೀಡುವ, ವಿಮರ್ಶೆಗೆ ಬದಲಾಗಿ ತಲೆದಂಡ ಕೇಳುವ ಧರ್ಮದ ಬಗ್ಗೆ ಜಾಣಮೌನ ವಹಿಸುವ ಚತುರಮತಿ ಬುದ್ಧಿಜೀವಿ ನಾನಲ್ಲ. ಅಲ್ಲದೇ, ಹಣ, ಪ್ರಶಸ್ತಿ, ಸ್ಥಾನಮಾನಗಳ ಹುಚ್ಚೂ ನನಗಿಲ್ಲ.

ಮತ್ತಷ್ಟು ಓದು »

14
ಜನ

ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೧

– ರೋಹಿತ್ ಚಕ್ರತೀರ್ಥ

Swami Vivekanandaಕೆಲ ವರ್ಷಗಳ ಹಿಂದೆ ವಿವೇಕಾನಂದರ ಮೇಲೆ ಅದೊಂದು ಲೇಖನ ಪ್ರಕಟವಾಗಿತ್ತು. ಭಗವಾನ್ ಗೀತೆಯನ್ನು ಸುಟ್ಟು ಹಾಕುತ್ತೇನೆ ಎಂದಮೇಲೆ ಏಕಾಏಕಿ ಆ ಪುಸ್ತಕದ ಸೇಲ್ಸ್ ಹೆಚ್ಚಾದಂತೆ, ವಿವೇಕರ ಮೇಲೆ ಬರೆದಿದ್ದ ಈ ಲೇಖನ ಪ್ರಕಟವಾದ ಮೇಲೆ ಹಲವು ತರುಣರು ವಿವೇಕಾನಂದರನ್ನು ಆಳವಾಗಿ ಅಭ್ಯಾಸ ಮಾಡಲು ಕೂತುಬಿಟ್ಟಿದ್ದರು! ಯಾಕೆಂದರೆ ವಿವೇಕರ ನಿಜಬಣ್ಣ ಬಯಲು ಮಾಡುವ ಉತ್ಸಾಹದಲ್ಲಿ ಲೇಖಕ ಬರೆದಿದ್ದ ಸಾಲುಗಳು ಆಘಾತ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಲೇಖನದ ತೊಂಬತ್ತೊಂಬತ್ತು ಭಾಗ ವಿವೇಕಾನಂದರನ್ನು ವಾಚಾಮಗೋಚರವಾಗಿ ತೆಗಳಿ, ಕೊನೆಯ ಒಂದೆರಡು ಸಾಲುಗಳಲ್ಲಿ “ಇಷ್ಟೆಲ್ಲ ಇದ್ದರೂ ಯಕಶ್ಚಿತ್ ಮನುಷ್ಯನೊಬ್ಬ ವಿವೇಕಾನಂದ ಆಗಲು ಸಾಧ್ಯ” ಎಂಬ “ತಿಪ್ಪೆ ಸಾರಿಸಿ” ಲೇಖನವನ್ನು ಮುಗಿಸಲಾಗಿತ್ತು. ಹೆತ್ತತಾಯಿಯನ್ನು ಅಸಹ್ಯ ಪದಗಳಿಂದ ನಿಂದಿಸಿ ಕೊನೆಗೆ “ಅವೇನೇ ಇದ್ದರೂ ನೀನು ತಾಯಿ” ಎಂದು ಹೇಳುವ ಧಾಟಿಯಲ್ಲಿ ಲೇಖಕರು ತನ್ನ ಜಾಣಮಾತುಗಳನ್ನು ಹೊಸೆದಿದ್ದರು. ವಿವೇಕಾನಂದರ ಬಗ್ಗೆ ಸರ್ವೇಸಾಧಾರಣವಾದ ಒಂದಷ್ಟು ಜನರಲ್ ಸಾಹಿತ್ಯವನ್ನು ಓದಿಕೊಂಡದ್ದು ಬಿಟ್ಟರೆ ನನಗೂ ಆ ಧೀಮಂತನ ಜೀವನದ ಹೆಚ್ಚಿನ ವಿವರಗಳು ತಿಳಿದಿರಲಿಲ್ಲ. ಲೇಖನದ ಅಪಪ್ರಚಾರವೊಂದು ನೆಪವಾಗಿ ನಾನೂ ವಿವೇಕಾನಂದರ ಬಗ್ಗೆ ಓದಲು ಕೂತೆ!

ಆ ಅಪಪ್ರಚಾರದ ಲೇಖನವನ್ನು ಓದುತ್ತಿದ್ದಾಗ ನನ್ನನ್ನು ತಡೆದುನಿಲ್ಲಿಸಿದ ಒಂದು ಸಾಲು ಹೀಗಿತ್ತು: ವಿವೇಕಾನಂದರು ಇಂಗ್ಲೀಷಿನಲ್ಲಿ 46 ಅಂಕ ಪಡೆದಿದ್ದರು; ಶಾಲಾಶಿಕ್ಷಕನಾಗುವ ಅರ್ಹತೆಯೂ ಇಲ್ಲ ಎಂಬ ಕಾರಣಕ್ಕೆ ಸ್ವತಃ ಈಶ್ವರಚಂದ್ರ ವಿದ್ಯಾಸಾಗರರು ಅವರನ್ನು ಕೆಲಸದಿಂದ ತೆಗೆದುಹಾಕಿದ್ದರು.ಈ ಮಾತುಗಳನ್ನು ಓದಿದಾಗ,ನನಗೆ ಥಟ್ಟನೆ ಆರ್.ಕೆ.ನಾರಾಯಣ, ಬನ್ನಂಜೆ ಗೋವಿಂದಾಚಾರ್ಯ, ಶ್ರೀನಿವಾಸ ರಾಮಾನುಜನ್, ಎವಾರಿಸ್ಟ್ ಗ್ಯಾಲ್ವ ನೆನಪಿಗೆ ಬಂದರು. ನಿಮಗೆ ಗೊತ್ತಿದೆಯೋ ಇಲ್ಲವೋ, ಭಾರತೀಯ ಇಂಗ್ಲೀಷ್ ಸಾಹಿತ್ಯಲೋಕದ ದಿಗ್ಗಜ ಆರ್.ಕೆ. ನಾರಾಯಣ್ ಕಾಲೇಜು ದಿನಗಳಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಫೇಲಾಗಿದ್ದರು! ಸಂಸ್ಕೃತದ ಪ್ರಕಾಂಡ ಪಂಡಿತ ಬನ್ನಂಜೆಯವರಿಗೆ ಎರಡು ಸಲ ಪ್ರವೇಶ ಪರೀಕ್ಷೆಗೆ ಕೂತರೂ ಸಂಸ್ಕೃತ ಕಾಲೇಜಿಗೆ ಸೇರಬೇಕಾದಷ್ಟು ಮಾರ್ಕು ಸಿಗಲಿಲ್ಲ! ಗಣಿತ ತಾರೆ ರಾಮಾನುಜನ್ ಎಫ್‍ಎ ಪರೀಕ್ಷೆಯಲ್ಲಿ ಫೇಲಾಗಿದ್ದ ಹುಡುಗ, ಮುಂದೆ ಕೇವಲ ಮೂವತ್ತು ವರ್ಷ ವಯಸ್ಸಲ್ಲೇ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿವಿಯಲ್ಲಿ ಬಿ.ಎ. ಪದವಿ ಪಡೆದು ಫೆಲೋ ಆಫ್ ರಾಯಲ್ ಸೊಸೈಟಿ ಆದರು! ಗಣಿತದ ಇನ್ನೊಂದು ಅದ್ಭುತ ಪ್ರತಿಭೆ; ಗ್ರೂಪ್ ಸಿದ್ಧಾಂತವೆಂಬ ಹೊಸ ಶಾಖೆಯನ್ನು ಹುಟ್ಟಿಸಿದ ಗ್ಯಾಲ್ವನಿಗೆ ತನ್ನ ಹುಟ್ಟೂರು ಪ್ಯಾರಿಸ್ಸಿನ ಎಕೋಲ್ ಪಾಲಿಟೆಕ್ನಿಕ್ ಎಂಬ ಕಾಲೇಜಿನ ಸಂದರ್ಶನದಲ್ಲಿ ಎರಡು ಸಲ ಮಂಗಳಾರತಿಯಾಗಿತ್ತು. ಯಾವುದೇ ವ್ಯಕ್ತಿಯ ಜೀವನ ನಿಂತ ನೀರಾಗಿರುವುದಿಲ್ಲ; ಅದು ನಿರಂತರ ಚಲನಶೀಲ. ಹಾಗೊಂದು ಊಧ್ರ್ವಗತಿ ಇರುವುದರಿಂದಲೇ ಸಾಮಾನ್ಯವ್ಯಕ್ತಿಗಳು ಮಹಾತ್ಮರಾಗುತ್ತಾರೆ ಎಂಬುದನ್ನು ಬಲ್ಲ ಯಾರಿಗೇ ಆಗಲಿ, ವಿವೇಕಾನಂದರು ಶಾಲೆ-ಕಾಲೇಜುಗಳಲ್ಲಿ ಕಡಿಮೆ ಮಾರ್ಕು ಪಡೆದರು ಎನ್ನುವುದು ಅವರನ್ನು ಅಳೆಯುವ ಮಾನದಂಡ ಅನ್ನಿಸುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೂ ತನ್ನ ಜೀವನದಲ್ಲಿ ಎದುರಾಗುತ್ತಹೋದ ಪಲ್ಲಟಗಳಿಗೆ ಎದೆಯೊಡ್ಡಿ ನಿಂತಾಗ ಮಾತ್ರ ಮಹಾತ್ಮನಾಗಬಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ, ಶಾಲೆಯಲ್ಲಿ 46 ಮಾರ್ಕು ಪಡೆದರು ಎಂಬ ಕಾರಣ ಕೊಟ್ಟು ಓದುಗರನ್ನು ಆಘಾತಗೊಳಿಸಿದ ಲೇಖನದಲ್ಲಿ ವಿವೇಕಾನಂದರ ಔನ್ನತ್ಯವನ್ನು ಅರಿತುಕೊಳ್ಳಲು ದಾರಿಯಾಗುವ ಇನ್ನಷ್ಟು ಆಘಾತಗಳಿರಬಲ್ಲವು ಎಂದು ಮನದಟ್ಟಾಯಿತು. ಅಲ್ಲಿಂದ ಮುಂದಕ್ಕೆ ನಾನು ಕಂಡುಕೊಂಡ ವಿವೇಕಾನಂದರ ನಿಜಚಿತ್ರಣ ಇಲ್ಲಿದೆ.

ಮತ್ತಷ್ಟು ಓದು »