ಗುರುವಾಗುವುದು ಇಷ್ಟು ಕಷ್ಟವೇ?
– ಶ್ರೀಕಾಂತ. ಎನ್, ಸಂಶೋಧನಾ ವಿದ್ಯಾರ್ಥಿ ಕುವೆಂಪು ವಿ.ವಿ
ನನಗೀಗ ಇಪ್ಪತ್ತೈದು ವಯಸ್ಸು. ಈಗ ನಾನು ಸಂಶೋಧನಾ ವಿದ್ಯಾರ್ಥಿ. ಇಲ್ಲಿಗೆ ಬರುವ ಮುನ್ನ ಎರಡು ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದೆ. ಅದರ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ತಲೆಯ ತುಂಬಾ ಹುಡುಗರಿಗೆ ಅದು ಹೇಳಬೇಕು ಇದು ಹೇಳಬೇಕು ಎಂದು ಹಿಂದಿನ ದಿನ ಘಂಟೆಗಟ್ಟಲೇ ತಯಾರಾಗಿ, ಡಸ್ಟರ್, ಚಾಕ್, ಅಟೆಂಡೆನ್ಸ್, ಸಣ್ಣ ಚೀಟಿ ಹಿಡಿದು ತರಗತಿಗೆ ಮೊದಲನೇ ಬಾರಿ ಹೊರಟ ನನಗೆ ದೊಡ್ಡ ಆಶ್ಚರ್ಯ ಕಾದಿತ್ತು. ಯುನಿವರ್ಸಿಟಿ ನೀನು ಗಣಿತ ಪಾಠ ಮಾಡಲು ಯೋಗ್ಯ ಎಂದು ಒಂದು ಕಾರ್ಡ್ ಕೊಟ್ಟು ಕಳುಹಿಸಿತ್ತೇ ಹೊರತು, ಹೇಗೆ ಪಾಠ ಮಾಡುವುದು ಎಂದು ತಿಳಿಸಿರಲಿಲ್ಲ. ನನಗಿಂತ ಎತ್ತರ & ದಪ್ಪ, ನೋಡಲು ಪ್ರಬುದ್ಧರಾಗಿ ಕಾಣುತ್ತಿದ್ದ ಹುಡುಗರು ಅನುಮಾನದೊಂದಿಗೆ ಎದ್ದು ನಿಂತಾಗ, ನನ್ನ ಊಹೆಗಳೆಲ್ಲಾ ತಲೆಕೆಳಗಾಯಿತು. ಪಾಠ ಹೇಗೆ ಮಾಡುವುದು, ಏನೇನೆಲ್ಲಾ ಹೊಸತು ಹೇಳಬೇಕು ಎಂದಷ್ಟೇ ಯೋಚಿಸಿ ಹೋದ ನನಗೆ, ನನ್ನ ದೇಹದ ಗಾತ್ರ ಕೂಡ ಮಾನದಂಡ ಎಂದು ತಿಳಿದಾಗ, ಹಿಂದಿನ ದಿನ ತಯಾರಾದದ್ದೆಲ್ಲಾ ಸೊನ್ನೆಯಿಂದ ಗುಣಿಸಿದ ಹಾಗೆ ನಾಶವಾಯಿತು. ಕೆಲವರಂತು, ಇವರು ಲೆಕ್ಚರ್ ಅಲ್ಲವೆಂದು ಭಾವಿಸಿಯೇ ಕುಳಿತಿದ್ದರು. ಎಲ್ಲರನ್ನು ಕೂಡಿಸಿ, ಜೋರಾಗಿ ಕೇಳುತ್ತಿದ್ದ ಹೃದಯ ಬಡಿತ ಎಣಿಸುತ್ತಾ, ನನ್ನನ್ನೇ ತಿನ್ನುವಂತೆ ನೋಡುತ್ತಿದ್ದ 60*2 ಕಣ್ಣುಗಳ ತೀವ್ರತೆ ತಡೆಯಲಾಗದೆ ಬೋರ್ಡ್ ಕಡೆ ತಿರುಗಿ ಅಳಿಸಿದ್ದ ಬೋರ್ಡನ್ನು ಮತ್ತೆ ಅಳಿಸುತ್ತಾ ನನ್ನನ್ನು ಸಮಾಧಾನ ಮಾಡಿಕೊಂಡೆ. ನನ್ನ ಸಹೋದ್ಯೋಗಿ ಹೇಳಿ ಕಳಿಸಿದಂತೆ ಮೊದಲು ನನ್ನ ಪರಿಚಯ ಮಾಡಿಕೊಂಡು, ಅವರ ಹೆಸರು ಕೇಳಿ, ಭಯದಿಂದ ನನಗೆ ತೋಚಿದ್ದು ಹೇಳಿ ಬಂದಾಗ, ಇಷ್ಟೊಂದು ಕಷ್ಟವೇ ಗುರುವಾಗೋದು ? ನನ್ನ ಕೆರಿಯರ್ ಆಯ್ಕೆ ತಪ್ಪೇ ! ಎಂದೆನಿಸಿತು.