ವಿಷಯದ ವಿವರಗಳಿಗೆ ದಾಟಿರಿ

Archive for

12
ಮಾರ್ಚ್

“ಯೇಗ್ದಾಗೆಲ್ಲಾ ಐತೆ ” (ಪುಸ್ತಕ ಪರಿಚಯ)

– ನಾಗೇಶ ಮೈಸೂರು

4046ಕನ್ನಡದಲ್ಲಿ ಪುಸ್ತಕಗಳು ಒಂದು ಮುದ್ರಣ ಕಾಣುವುದೇ ಕಷ್ಟ. ಹೆಚ್ಚು ಪುಸ್ತಕಗಳು ಅಚ್ಚಿನ ಮನೆಯ ಮುಖವನ್ನೆ ಕಾಣುವುದಿಲ್ಲ. ಅಂತದ್ದರಲ್ಲಿ ಪುಸ್ತಕವೊಂದು ಹತ್ತು ಬಾರಿಗೂ ಮೀರಿ ಮುದ್ರಣ ಭಾಗ್ಯ ಕಂಡಿದೆಯೆಂದರೆ ? ಖಂಡಿತ ಅದರಲ್ಲೇನೊ ವಿಶೇಷ ಇರಲೇಬೇಕು. ಹಾಗೆಂದುಕೊಂಡೇ ಬೆಂಗಳೂರಿಗೆ ಭೇಟಿಯಿತ್ತಾಗ ಕೊಂಡು ತಂದ ಪುಸ್ತಕ – ‘ಯೇಗ್ದಾಗೆಲ್ಲಾ ಐತೆ’. ೨೫ ಸಾವಿರಕ್ಕೂ ಅಧಿಕ ಪ್ರತಿಗಳು ಅಚ್ಚಾಗಿದ್ದೇ ಅಲ್ಲದೆ ಇತರ ನಾಲ್ಕು ಭಾಷೆಗಳಿಗೂ ಅನುವಾದವಾಗಿದ್ದು, ನಾಟಕದ ರೂಪದಲ್ಲು ಜನಮನ ತಲುಪಿದ್ದು – ಇದೆಲ್ಲಾ ನೋಡಿದರೆ ಚಾಪೆಯಡಿ ನುಸುಳುವ ನೀರಂತೆ ಹರಿದು ಜನಪ್ರಿಯವಾಗುವುದು ಈ ಪುಸ್ತಕದ ‘ಯೇಗ್ದಾಗೇ’ ಇರುವಂತೆ ಕಾಣುತ್ತಿದೆ.

ಒಂಬತ್ತಿಂಚಿನ ಪೀಜಾಗು ೩೦೦ ರಿಂದ ೬೦೦ ರೂಪಾಯಿ ಪೀಕುವ ಈ ಕಾಲದಲ್ಲಿ, ೧೪೦ ಪುಟಗಳ ಈ ಪುಸ್ತಕ, ಎಷ್ಟೋ ಕಡೆ   ತೆರುವ  ಕಾಫಿಯ  ಕಾಸಿಗಿಂತಲು   ಅಗ್ಗವಾಗಿ  ೬೦  ರೂಪಾಯಿಗೆ ಸಿಕ್ಕಿತ್ತು ! ರೆಸ್ಟೋರೆಂಟಿನಲ್ಲಿ ಹಿಂದೆಮುಂದೆ ನೋಡದೆ ಸಾವಿರಾರು ಸುರಿವ ನಮಗೆ – ವರ್ಷಕ್ಕೊಂದು  ಸಾರಿಯಾದರು ಕನ್ನಡ ಪುಸ್ತಕ ಕೊಳ್ಳುವುದು ‘ ಯೇಗ್ದಾಗೆ ಬರ್ದಿಲ್ಲ’ ಅಂತ ಕಾಣುತ್ತೆ. ಆದರು ಪ್ಲೀಸ್ – ಓದಲಿ, ಬಿಡಲಿ ಛಾನ್ಸ್ ಸಿಕ್ಕಿದ್ರೆ ಈ ಪುಸ್ತಕ ಮಾತ್ರ ಕೊಂಡುಕೊಂಡು ಬಿಡಿ. ಯಾಕೇಂದ್ರೆ ಈ ಪುಸ್ತಕ ಮಾರಿ ಬಂದ ಆದಾಯವೆಲ್ಲ ನೇರವಾಗಿ ಹೋಗೋದು ಬೆಳಗೆರೆಯ ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳಿಗೆ. ಓದದೇ ಇದ್ದರೂ ನಿಮ್ಮಿಂದ ಪುಕ್ಕಟೆಯಾಗಿ ಸಮಾಜ ಸೇವೆ ಮಾಡಿಸುತ್ತೆ ಈ ಪುಸ್ತಕ – ಅದೂ ತೀರಾ ಅಗ್ಗವಾಗಿ!

ಈ ಪುಸ್ತಕ ಮೂಲತಃ ಶ್ರೀ ಸಾಮಾನ್ಯನಂತಿದ್ದೂ ಅದ್ಭುತ ಯೋಗಿಯ ಬಾಳು ಬದುಕಿದ ಶ್ರೀ ಮುಕುಂದೂರು ಸ್ವಾಮಿಗಳ ‘ಪವಾಡ’ ವನ್ನು ಕುರಿತದ್ದು. ಪವಾಡವೆಂದರೆ ಇದು ಯಾವುದೊ ‘ಛೂ ಮಂತ್ರಕಾಳಿ’ಯ ತರದ ಬೂಟಾಟಿಕೆಯ ಪುಸ್ತಕವೆಂದು ಮೂಗು ಮುರಿಯಬೇಡಿ ತಾಳಿ… ಈ ಸ್ವಾಮಿಗಳನ್ನು ಹತ್ತಿರದಿಂದ ಕಂಡು ಅಲ್ಲೇನಾದರು ಢೋಂಗಿತನವಿತ್ತೆ ಎಂದು ಸ್ವತಃ ತಾವೇ ಅಳೆದು ನೋಡಲೆತ್ನಿಸಿದ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳು, ವಿಜ್ಞಾನದ ನಿಲುಕಿಗೆ ಸಿಗದ ನೂರಾರು ಘಟನೆ, ಅನುಭವಗಳಿಂದ ವಿಸ್ಮಿತರಾಗಿ ನೆನಪಿನ ಕೋಶದಿಂದ ಸಿಕ್ಕಷ್ಟನ್ನು ಹೆಕ್ಕಿ ಕೊನೆಗೆ ಈ ಪುಸ್ತಕರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ವೇಳೆ ಬರೆಯುವ ಉದ್ದೇಶದಿಂದಲೇ ಅಭ್ಯಸಿಸಿ ಬರೆದಿದ್ದರೆ ಈ ಪುಸ್ತಕ ಇನ್ನೂ ಹೇಗಿರುತ್ತಿತ್ತೊ ?!
ಮತ್ತಷ್ಟು ಓದು »