ಗೂಗಲ್ ಸರ್ಚ್ ಮಾಡಲು ಕೆಲವು ಸುಲಭ ಟ್ರಿಕ್ಸ್
-ಅವಿನಾಶ್ ಬಿ
ಹಿಂದೆಂದೂ ಗೂಗಲ್ ಎಂಬ ಕ್ಷಿಪ್ರ ಸಂಶೋಧಕ ಇರಲಿಲ್ಲ. ಮುಂದೆ ಅದು ಇಲ್ಲದೆ ಜೀವನವೇ ಮುಂದೆ ಸಾಗದು ಎಂಬಂತಹಾ ಪರಿಸ್ಥಿತಿ ನಿರ್ಮಾಣವಾಗಿರುವುದು ಹೆಚ್ಚಿನವರಿಗೆ ಗೊತ್ತು. ಅಂತರ್ಜಾಲದಲ್ಲಿ ಮಾಹಿತಿಯ ಹುಡುಕಾಟಕ್ಕೆ ಸಂಬಂಧಿಸಿದಂತೆ ಗೂಗ್ಲಿಸುವುದು ಎಂಬ ಕ್ರಿಯಾಪದವೇ ಹುಟ್ಟಿಕೊಂಡಿದೆ ಎಂದಾದರೆ, ಸರ್ಚ್ ಎಂಜಿನ್ ಗೂಗಲ್‌ನ ಸಾಮರ್ಥ್ಯ ಮತ್ತು ವ್ಯಾಪ್ತಿ ಎಷ್ಟೆಂಬುದು ವೇದ್ಯವಾಗುತ್ತದೆ. ಅಂತಹಾ ಗೂಗಲ್‌ನಲ್ಲಿ ಯಾವುದೇ ಮಾಹಿತಿ ಹುಡುಕುವುದಕ್ಕಾಗಿ ಕೆಲವೊಂದು ಸರಳವಾದ ಟ್ರಿಕ್ಸ್ ಇಲ್ಲಿದೆ. ನಿಮಗೆ ಉಪಯುಕ್ತವಾಗುತ್ತದೆ.
* ಯಾವುದೇ ನಿರ್ದಿಷ್ಟ ಪದ ಗುಚ್ಛ, ಉದಾಹರಣೆಗೆ ಒಂದು ಹಾಡಿನ ಬಗ್ಗೆ ಮಾಹಿತಿ ಬೇಕೆಂದಾದರೆ ಮತ್ತು ಆ ಪದಗಳು ಇರಲೇಬೇಕಾದ ಒಂದು ವಾಕ್ಯವನ್ನು ಹುಡುಕಿ ತೋರಿಸಬೇಕೆಂದಾದರೆ ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ಉದ್ಧರಣ ಚಿಹ್ನೆ (ಕೋಟ್ ಮಾರ್ಕ್ಸ್) ಬಳಸಿ. ಉದಾಹರಣೆಗೆ, “ಕನ್ನಡದಲ್ಲಿ ಬರೆಯುವುದು ಹೇಗೆ” ಅಂತ ಸರ್ಚ್ ಮಾಡಿದರೆ, ಆ ಮೂರೂ ಅಕ್ಷರಗಳು ಒಟ್ಟಾಗಿಯೇ ಇರುವ ಪುಟಗಳು ಮಾತ್ರವೇ ಕಾಣಸಿಗುತ್ತವೆ. ಕೋಟ್ ಮಾರ್ಕ್ ತೆಗೆದರೆ, ಕನ್ನಡ, ಬರೆಯುವುದು, ಹೇಗೆ ಎಂಬ ಅಕ್ಷಗಳಿರುವ ಎಲ್ಲ ಪುಟಗಳೂ ಕಾಣಸಿಗುತ್ತವೆ.