ವಿಷಯದ ವಿವರಗಳಿಗೆ ದಾಟಿರಿ

Archive for

8
ಮಾರ್ಚ್

ನನಗೆ ಅಜಾದಿ ಬೇಕು” ಎಂಬ ಆಕರ್ಷಕ ಅಪ್ರಬುದ್ಧತೆ!!

-ಸಂಕೇತ್ ಡಿ ಹೆಗಡೆ, ಸಾಗರ

images (14)ಫೇಸ್ಬುಕ್ಕಿನಲ್ಲಿ ಸುಮ್ಮನೆ ಜಾಲಾಡುತ್ತಿದ್ದಾಗ ವಾಕ್ಯವೊಂದು ಎಡತಾಕಿತು. “Strict parents raise best liars” ಅಂತ. ತೀರಾ ಸ್ಟ್ರಿಕ್ಟ್ ಪೋಷಕರ ಮಕ್ಕಳು ಅತ್ಯುತ್ತಮ ಸುಳ್ಳುಗಾರರಾಗುತ್ತಾರೆ ಅಂತ. ಸತ್ಯ. ಮಕ್ಕಳು ಸ್ವಚ್ಚಂದವಾಗಿ ಸ್ವತಂತ್ರ್ಯವಾಗಿ  ಅವರಷ್ಟಕ್ಕೆ ಬೆಳೆಯಲು ಬಿಡದಿದ್ದರೆ, ಅವರು ತಪ್ಪಿಸಿಕೊಳ್ಳಲು ಅದ್ಭುತ ಸುಳ್ಳುಗಳನ್ನು ಹೆಣೆಯಬಲ್ಲ ಪ್ರತಿಭಾವಂತರಾಗಿಬಿಡುತ್ತಾರೆ! ಮನುಷ್ಯ ಅಂತ ಅಲ್ಲ, ಸ್ವಾತಂತ್ರ್ಯ ಪ್ರತಿ ಜೀವಿಯ ಮೂಲಭೂತ ಹಕ್ಕು. ಆದರೆ… ತನ್ನ ಮಗುವಿಗೆ ಸ್ವಾತಂತ್ರ್ಯ ಕೊಡಬೇಕೆಂದು ತಾಯಿ ಮಗುವಿಗೆ ಸಂಪೂರ್ಣ ತನ್ನಷ್ಟಕ್ಕೆ ಬೆಳೆಯಲು ಬಿಟ್ಟರೆ ಏನಾಗುತ್ತೆ? ತನ್ನ ಮಗು ಸರ್ವತೋಮುಖವಾಗಿ ಬೆಳೆಯಬೇಕೆಂದು ತಂದೆ ಮಗುವನ್ನು ಸಂಪೂರ್ಣ ಸ್ವೇಚ್ಛೆಗೆ ಬಿಟ್ಟುಬಿಟ್ಟರೆ ಏನಾಗುತ್ತೆ? ಮಗು ಹಾದಿತಪ್ಪದೆ ಉಳಿದೀತೇನು? ಆಜಾದಿ ಸರಿ, ಆದರೆ ಅದು ಆರೋಗ್ಯಪೂರ್ಣ ಆಜಾದಿ ಆದರೆ ಮಾತ್ರ ಚಂದ. ಸುಮ್ಮನೆ ಬೀದಿತಪ್ಪಿದ ನಾಲ್ಕು ಹುಡುಗರು ಹಾದಿತಪ್ಪಿದ ಹಳೆಯ ಸಿದ್ದಾಂತವೊಂದನ್ನು ನಂಬಿ, ಮತ್ತೂ ನಾಲ್ಕು ಕುರಿಗಳನ್ನ ಸೇರಿಸಿ ಕೆಲಸಕ್ಕೆ ಬಾರದ so called ಕ್ರಾಂತಿ ಮಾಡುತ್ತೇವೆ, ಆಜಾದಿ ತರುತ್ತೇವೆ ಅಂತೆಲ್ಲ ಕೂಗಿದರೆ ಚಂದವಲ್ಲ, ಭಂಗ. ಅವರು ಕೇಳುತ್ತಿರುವುದು ಖಂಡಿತವಾಗಿಯೂ ಸ್ವಾತಂತ್ರ್ಯವನ್ನಲ್ಲ, ಸ್ವೇಚ್ಛೆಯನ್ನ, ಅರಾಜಕತೆ ತಂದಿಡುವ ಸ್ವೇಚ್ಛೆಯನ್ನ. ಅದನ್ನೇ ಸ್ವಲ್ಪ ಆಕರ್ಷಣೀಯವಾಗಿ “ನಮಗೆ ಭಾರತದಿಂದ ಸ್ವಾತಂತ್ರ್ಯ ಬೇಡ. ಭಾರತದಲ್ಲಿ ಬೇಕು” ಅಂತ ಕೇಳುತ್ತಿರುವುದು. ಪ್ರಥಮ ಬಾರಿಗೆ ಕೇಳುತ್ತಿರುವವನಿಗೆ “ಎಷ್ಟು ಸೊಗಸಾಗಿ ಮಾತಾಡ್ತಾನಪಾ” ಅನ್ನಿಸಬೇಕು.

ನನಗೆ ತೀರಾ ನಿಗೂಢವಾಗಿ ಕಾಣುವ ವಿಷಯ ಅಂದರೆ ಈ ಎಡಪಂಥೀಯ ಚಿಂತನೆ ಉಳ್ಳ ಬುದ್ಧಿಜೀವಿಗಳು, ಕನ್ನಯ್ಯನಂತವರೆಲ್ಲ ಯಾಕೆ ಹೀಗೆ ರಾಷ್ಟ್ರೀಯತೆಗೆ ವಿರೋಧವಾಗಿರುವ ಸಂಗತಿಗಳನ್ನೇ ಹೆಚ್ಚು ಇಷ್ಟಪಟ್ಟು ಪಸರಿಸುತ್ತಾರೆ ಎಂಬುದು. ಅವರಿಗೇನು ನಿಜವಾಗಿಯೂ ಸತ್ಯ ಗೊತ್ತಿಲ್ಲವ? ಭಾರತ ತನ್ನ ಪ್ರಜೆಗಳಿಗೆ ಬೇಕಾಬಿಟ್ಟಿ ಸ್ವಾತಂತ್ರ್ಯ ಕೊಟ್ಟಿದೆ ಎಂಬುದು. ನಾವು ನೀವು ಇರುವುದೂ ಒಂದೇ ಭೂಮಿಯಲ್ಲಿ, ಅಂಥವರಿರುವುದೂ ಒಂದೇ ಭೂಮಿಯಲ್ಲಿ, ಅಂಥದ್ದರಲ್ಲಿ ನಮಗೆ ಕಣ್ಣಿಗೆ ಹೊಡೆಯುವ ಸತ್ಯ ಅವರ ಕಣ್ಣಿಗೆ ಮಸುಬಾಗಿಯೂ ಕಾಣದೇನು? ಯಾಕೀ ಪೂರ್ವಗ್ರಹಪೀಡಿತ ರೋಗಗ್ರಸ್ಥ ಮನಸ್ಸು? ಖ್ಯಾತಿಯ ಚಿಂತೆಯಾ? ವೋಟಿನ ಚಿಂತೆಯಾ? ಕಾಸಿನ ಚಿಂತೆಯಾ? ಅಸ್ತಿತ್ವದ ಚಿಂತೆಯಾ? ಅಥವಾ ಪೊಳ್ಳು ಭ್ರಮೆಯನ್ನೇ ತಾನೂ ನಂಬಿ ಪರರನ್ನೂ ನಂಬಿಸುವುದು ಒಂದು ಮಾನಸಿಕ ಖಾಯಿಲೆಯಾ?

ಮತ್ತಷ್ಟು ಓದು »

8
ಮಾರ್ಚ್

ಮಹಿಳಾ ಅಸ್ತಿತ್ವದ ವಿವಿಧ ನೆಲೆಗಳು

– ರಾಜಕುಮಾರ.ವ್ಹಿ.ಕುಲಕರ್ಣಿ, ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನದ ನಿಮಿತ್ಯ ಈ ಲೇಖನ.

ಅಂತರಾಷ್ಟ್ರೀಯ ಮಹಿಳಾ ದಿನರಾಮಾಯಣದಲ್ಲಿ ಊರ್ಮಿಳೆ ಎನ್ನುವ ಪಾತ್ರವೊಂದಿದೆ. ಈಕೆ ಲಕ್ಷ್ಮಣನ ಹೆಂಡತಿ. ರಾಮ ಕಾಡಿಗೆ ಹೋಗುವ ಸಂದರ್ಭ ಅಣ್ಣನನ್ನು ಅನುಸರಿಸಿ ಲಕ್ಷ್ಮಣ ಸಹ ಕಾಡಿಗೆ ತೆರಳುತ್ತಾನೆ. ಕಾಡಿಗೆ ಹೋಗುತ್ತಿರುವ ಲಕ್ಷ್ಮಣನಿಗೆ ತನ್ನನ್ನೇ ನಂಬಿಕೊಂಡ ಜೀವವೊಂದಿದೆ ಎನ್ನುವ ನೆನಪಾಗುವುದಿಲ್ಲ. ಹೆಂಡತಿ ಸೀತೆಯನ್ನೂ ತನ್ನೊಂದಿಗೆ ಕಾಡಿಗೆ ಕರೆದೊಯ್ಯುತ್ತಿರುವ ರಾಮನಿಗೂ ತನ್ನ ತಮ್ಮ ಲಕ್ಷ್ಮಣನಿಗೂ ಪತ್ನಿ ಇರುವಳೆಂಬ ಸತ್ಯ ಗೋಚರವಾಗುವುದಿಲ್ಲ. ರಾವಣ ಸೀತೆಯನ್ನು ಅಪಹರಿಸಿದಾಗ ವಿರಹ ವೇದನೆಯಿಂದ ಬಳಲುವ ರಾಮ ತಮ್ಮ ಲಕ್ಷ್ಮಣನೆದುರು ಸೀತೆಯ ಅಗಲುವಿಕೆಯಿಂದಾದ ದುಃಖವನ್ನು ತೋಡಿಕೊಳ್ಳುತ್ತಾನೆ. ದಾರಿಯಲ್ಲಿ ಎದುರಾಗುವ ಮರ,ಗಿಡ,ಬಳ್ಳಿ,ನದಿ,ಬೆಟ್ಟಗಳನ್ನು ಮಾತನಾಡಿಸಿ ನನ್ನ ಸೀತೆಯನ್ನು ಕಂಡಿರಾ ಎಂದು ಪ್ರಲಾಪಿಸುತ್ತಾನೆ. ಹೀಗೆ ದು:ಖಿಸುತ್ತಿರುವ ರಾಮನಿಗೆ ಲಕ್ಷ್ಮಣನೂ ವಿರಹಾಗ್ನಿಯಿಂದ ಬಳಲುತ್ತಿರಬಹುದೆನ್ನುವ ಕಿಂಚಿತ್ ಸಂದೇಹವೂ ಮನಸ್ಸಿನಲ್ಲಿ ಸುಳಿಯದೇ ಹೋಗುತ್ತದೆ.ರಾಮ ರಾವಣನನ್ನು ಜಯಿಸಿ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರ್ಣಗೊಳಿಸಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳುತ್ತಾನೆ. ಹಾಗಾದರೆ ಆ ಹದಿನಾಲ್ಕು ವರ್ಷಗಳ ಕಾಲ ಪತಿಯಿಂದ ದೂರಾಗಿ ಊರ್ಮಿಳೆ ಅನುಭವಿಸಿದ ವೇದನೆ ಮತ್ತು ಸಂಕಟಗಳ ಕಥೆ ಏನು?. ರಾಮಾಯಣವನ್ನು ಓದುತ್ತಿರುವ ಘಳಿಗೆ ಓದುಗ ಊರ್ಮಿಳೆಯ ಪಾತ್ರದೊಂದಿಗೆ ಮುಖಾಮುಖಿಯಾವುದೇ ಇಲ್ಲ. ಭಾತೃತ್ವದ ಪ್ರಶ್ನೆ ಎದುರಾದಾಗ ಅದಕ್ಕೆ ಶ್ರೇಷ್ಠ ಉದಾಹರಣೆಯಾಗಿ ಲಕ್ಷ್ಮಣನ ಹೆಸರನ್ನು ಹೇಳುವ ನಾವು ಊರ್ಮಿಳೆಯನ್ನು ಮರೆತು ಬಿಡುತ್ತೇವೆ. ಹಾಗಾದರೆ ಊರ್ಮಿಳೆಯದೂ ಶ್ರೇಷ್ಠ ತ್ಯಾಗವಲ್ಲವೇ? ಹದಿನಾಲ್ಕು ವರ್ಷಗಳ ಕಾಲ ಗಂಡನಿಂದ ದೂರವೇ ಉಳಿದು ಆತನನ್ನು ಅಣ್ಣನ ಸೇವೆಗಾಗಿ ಪ್ರಾಂಜಲ ಮನಸ್ಸಿನಿಂದ ಕಳಿಸಿಕೊಟ್ಟ ಊರ್ಮಿಳೆಯ ವ್ಯಕ್ತಿತ್ವಕ್ಕೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದೊರೆಯಬೇಕಾದ ಮನ್ನಣೆ ಸಿಗಲೇ ಇಲ್ಲ. ಅಂದರೆ ಮಹಿಳೆಯನ್ನು ಪುರುಷ ಪ್ರಧಾನ ನೆಲೆಯಲ್ಲಿ ಶೋಷಣೆಗೊಳಪಡಿಸುತ್ತ ಬಂದಿರುವುದಕ್ಕೆ ನಮ್ಮ ಪ್ರಾಚೀನ ಪರಂಪರೆಯ ಒತ್ತಾಸೆಯಿದೆ ಎಂದರ್ಥ.ರಾಮಾಯಣ ಹಾಗೂ ಮಹಾಭಾರತದ ಕಾಲದಿಂದಲೂ ಸ್ತ್ರೀ ಶೊಷಣೆಯ ವಸ್ತುವಾಗಿಯೇ ಬಿಂಬಿತವಾಗುತ್ತ ಬಂದಿರುವಳು.

ಇತಿಹಾಸದ ಪಾತ್ರವೊಂದು ಸ್ತ್ರೀ ಶೋಷಣೆಯ ವಸ್ತುವಾಗಿ ಪುರುಷ ಪ್ರಧಾನ ವ್ಯವಸ್ಥೆಗೆ ಒತ್ತಾಸೆಯಾಗಿ ನಿಂತಾಗ ಇತಿಹಾಸದ ಮತ್ತೊಂದು ಪಾತ್ರವಾದ ಅಕ್ಕ ಮಹಾದೇವಿಯದು ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ ಹೊಸ ವ್ಯವಸ್ಥೆಯನ್ನು ಕಟ್ಟುವ ತಹತಹಿಕೆ. ಚೆನ್ನಮಲ್ಲಿಕಾರ್ಜುನನನ್ನೆ ತನ್ನ ಪತಿಯೊಂದು ಮಾನಸಿಕವಾಗಿ ಪರಿಭಾವಿಸಿದ ಅಕ್ಕ ಕೌಶಿಕ ರಾಜನ ಕಾಮನೆಗಳನ್ನು ಮೆಟ್ಟಿನಿಂತು ಮಹಿಳಾ ವಿಮೋಚನೆಗೆ ಹೊಸ ದಾರಿ ತೋರುತ್ತಾಳೆ. ಒಂದು ಪಾತ್ರದ ಮೂಲಕ ಸ್ತ್ರೀ ಶೊಷಣೆಗೆ ಸಾಕ್ಷಿಯಾದ ಇತಿಹಾಸ ಮತ್ತೊಂದು ಪಾತ್ರದ ಮೂಲಕ ಸ್ತ್ರೀ ವಿಮೋಚನೆಗೂ ಸಾಕ್ಷಿಯಾದದ್ದು ಇತಿಹಾಸದ ಮಹತ್ವಗಳಲ್ಲೊಂದು.ಇತಿಹಾಸದಿಂದ ಬಿಡುವಷ್ಟೇ ಪಡೆಯುವುದು ಕೂಡ ಬಹುಮುಖ್ಯವಾದದ್ದು.ನಮ್ಮ ನೆಲದ ಮಹಿಳೆಯರು ಅಕ್ಕ ಮಹಾದೇವಿಯ ಧೋರಣೆ ಹಾಗೂ ಪರುಷ ಸಮಾಜವನ್ನು ಧಿಕ್ಕರಿಸಿ ನಿಂತ ಆಕೆಯ ಮನೋಸ್ಥೈರ್ಯವನ್ನು ಬಳುವಳಿಯಾಗಿ ಪಡೆದು ಸ್ತ್ರೀ ವಿಮೋಚನೆಯ ಅನೇಕ ಸ್ಥಿತ್ಯಂತರಗಳಿಗೆ ಪ್ರಯತ್ನಿಸಿದರು.ಒಂದು ರೀತಿಯಲ್ಲಿ ಮಹಿಳೆ ತನ್ನ ಅಸ್ಮಿತೆಯನ್ನು (ಅಸ್ತಿತ್ವ) ವಿವಿಧ ನೆಲೆಗಳಲ್ಲಿ ಕಂಡುಕೊಳ್ಳಲು ಮಾಡಿದ ಪ್ರಯತ್ನವೂ ಅದಾಗಿತ್ತು.
ಮತ್ತಷ್ಟು ಓದು »