ವಿಷಯದ ವಿವರಗಳಿಗೆ ದಾಟಿರಿ

ಮೇ 4, 2016

1

ಕಾಡು ಮತ್ತು ಕ್ರೌರ್ಯ ( ಪುಸ್ತಕ ಪರಿಚಯ)

‍ನಿಲುಮೆ ಮೂಲಕ

– ನಾಗೇಶ ಮೈಸೂರು

kaadumattukrouryaಸಾಧಾರಣವಾಗಿ ತೇಜಸ್ವಿಯರ ಯಾವುದೇ ಪುಸ್ತಕವನ್ನು ಪರಿಚಯ ಮಾಡಿಸುವ ಅಗತ್ಯ ಇರುವುದಿಲ್ಲ. ಅವೊಂದು ರೀತಿ ‘ಸ್ವಯಂಭು’ ಪ್ರವೃತ್ತಿಯ ‘ಸ್ವಯಂದರ್ಶಿ’ ಜಾತಿಗೆ ಸೇರಿದವು. ಆದರೂ ಈ ಪುಸ್ತಕ ನೋಡಿದಾಗ ಒಂದು ಪರಿಚಯ ಮಾಡಿಸುವ ಅಗತ್ಯವಿದೆ ಎನಿಸಿತು. ಅದಕ್ಕೆ ಮೊದಲ ಕಾರಣ – ಇದು ೧೯೬೨ರಲ್ಲಿ ತಮ್ಮ ಎಂ.ಎ. ಮುಗಿಸಿದ ನಂತರದ ದಿನಗಳಲ್ಲಿ ತೇಜಸ್ವಿ ಬರೆದ ಮೊಟ್ಟಮೊದಲ ಕಾದಂಬರಿ. ನಾನಾ ಕಾರಣಗಳಿಂದ ಪ್ರಕಟವಾಗದೆ ತೀರಾ ಈಚೆಗೆ ಬೆಳಕು ಕಂಡ ಕೃತಿ. ಪ್ರಕಾಶಕರ ಮಾತಿನಲ್ಲೇ ಹೇಳಿದಂತೆ ಸ್ವರೂಪ ಮತ್ತು ನಿಗೂಢ ಮನುಷ್ಯರು ಬರೆದಾದ ಮೇಲೆ ಸ್ವತಃ ತೇಜಸ್ವಿಯವರೇ, ಈ ಪುಸ್ತಕ ಪ್ರಕಟಿಸುವ ಮಾತೆತ್ತಿದಾಗ ‘ಹೂಂ’ ಅಥವಾ ‘ಉಹೂಂ’ ಎರಡೂ ಅಲ್ಲದ ತಮ್ಮ ಕಥೆಗಳಷ್ಟೇ ನಿಗೂಢವಾದ ಮುಗುಳ್ನಗೆಯೊಂದನ್ನು ಬಿತ್ತರಿಸಿ ಸುಮ್ಮನಾಗಿಬಿಡುತ್ತಿದ್ದರಂತೆ. ಅಂತಹ ಪುಸ್ತಕವೊಂದು ಕೊನೆಗೂ ೨೦೧೩ ರಲ್ಲಿ, ಬರೆದ ಸುಮಾರು ಐವತ್ತು ವರ್ಷಗಳ ನಂತರ  ಪ್ರಥಮ ಮುದ್ರಣ ಭಾಗ್ಯ ಕಂಡಿತೆಂದ ಮೇಲೆ ಅದರ ಕುರಿತಾದ ಪರಿಚಯ ಸಾಕಷ್ಟು ಕುತೂಹಲಕಾರಿಯಾದ ವಿಷಯವೇ ಅಲ್ಲವೇ ? ಬಹುತೇಕ ತೇಜಸ್ವಿ ‘ಪರಮಾಭಿಮಾನಿ’ಗಳಿಗು ಈ ಪುಸ್ತಕ ಪರಿಚಿತವಿರಲಾರದೆಂಬ ಅನಿಸಿಕೆಯಲ್ಲಿ ಹೀಗೊಂದು ಪರಿಚಯದ ಯತ್ನ.

ಅಂದಹಾಗೆ ತೇಜಸ್ವಿಯವರ ನಂತರದ ಪುಸ್ತಕಗಳನ್ನು ಓದಿದವರಿಗೆಲ್ಲ ಒಂದು ಮುನ್ಸೂಚನೆ. ಈ ಪುಸ್ತಕ ಅವರ ಮೊದಲ ಕಾದಂಬರಿಯಾದ ಕಾರಣ ಹೊಸತಿನ ಆ ಸಂಧಿಕಾಲದ ತೇಜಸ್ವಿಯ ಮನಃಸ್ಥಿತಿ, ಚಿಂತನೆ, ಆಲೋಚನೆ, ದಿಟ್ಟತನ, ಒರಟು ಪ್ರಾಮಾಣಿಕತೆ ಎಲ್ಲವೂ ಇಲ್ಲಿ ಹಸಿಹಸಿಯಾಗಿ ಬಿಂಬಿತವಾಗಿರುವ ರೀತಿ ಸ್ವಲ್ಪ ವಿಚಿತ್ರವೆನಿಸಬಹುದು. ಆ ವಯಸಿನಲ್ಲಿರಬಹುದಾದ ಆದರ್ಶ, ಧಾರ್ಷ್ಟ್ಯ, ಪರಿಸರ ಮತ್ತು ವ್ಯವಸ್ಥೆಯ ಬಗೆಗಿನ ಆಪ್ಯಾಯತೆ-ಆಕ್ರೋಶ ಎಲ್ಲವೂ ಮೂರ್ತವಾಗುವ ತಹತಹಿಕೆಯಲ್ಲಿ ನಾವು ಕಂಡಿರದ ಒಂದು ಬೇರೆಯದೇ ಆದ ತೇಜಸ್ವಿಯ ಅನಾವರಣವಾದಂತಾಗುತ್ತದೆ. ಬಹುಶಃ ಆ ಬಿರುಸಿನ ವಯಸಿನಲ್ಲಿದ್ದ ಪ್ರಾಮಾಣಿಕ ಅನಾವರಣತೆಯ ದಿಟ್ಟತನ, ನಂತರದ ಬರಹಗಳಲ್ಲಿ ಪಕ್ವತೆಯ ಕಾರಣದಿಂದಲೋ, ಅತೀ ಪ್ರಾಮಾಣಿಕತೆಯುಂಟುಮಾಡುವ ಸಾರ್ವತ್ರಿಕ (ಅಪ್ರಕಟ) ಮುಜುಗರ ಅಥವಾ ನಾಚಿಕೆಗಳ ದೆಸೆಯಿಂದಲೋ ಮತ್ತಷ್ಟು ಅಮೂರ್ತವಾಗಿ ಆದರೆ ಅದರ ಪರ್ಯಾಯವಾದ ಸರಳತೆಯಾಗಿ ಹೊರಹೊಮ್ಮಿರುವುದು ಗೋಚರವಾಗುತ್ತದೆ. ಬರಹಗಾರನಾಗಿ ಅರಳತೊಡಗಿದ್ದ ತೇಜಸ್ವಿ ಇಲ್ಲಿ ದಟ್ಟ ವಿವರಗಳತ್ತ ಕೊಡುವ ಗಮನ ಮತ್ತು ಹೋಲಿಕೆ, ಸಾರೂಪ್ಯಗಳತ್ತ ತೋರುವ ಮೋಹ, ಆರಂಭಿಕ ದಿನಗಳಲ್ಲಿ ಅವರಿಗಿದ್ದ ‘ಪ್ರಬುದ್ಧತೆ ಮತ್ತು ಪಕ್ವತೆ’ಯನ್ನು ಬರಹಗಳಲ್ಲಿ, ಅಕ್ಷರ ಮತ್ತು ಪದಗಳಲ್ಲಿ ಬಲವಂತವಾಗಿಯಾದರೂ ಬಿಂಬಿಸಬೇಕೆನ್ನುವ ಹಂಬಲವನ್ನು ಪ್ರದರ್ಶಿಸುತ್ತವೆ; ಅದೇ ಹೊತ್ತಿನಲ್ಲಿ ಅವೆಲ್ಲಾ ತರದ ವ್ಯಾಮೋಹಗಳನ್ನು ಶೀಘ್ರದಲ್ಲೇ ತ್ಯಜಿಸಿ ನಾವೆಲ್ಲಾ ಪರಿಚಿತರಾಗಿರುವ ರೀತಿಯ ಬರಹದತ್ತ ವಾಲಿದ ಅದ್ಭುತವನ್ನು ಮನಗಾಣಿಸುತ್ತದೆ. ಈ ಅನಿಸಿಕೆ ಮೂಡುವುದೂ ಕೂಡ ಎರಡನ್ನು ಓದಿ ತುಲನೆ ಮಾಡುವುದರಿಂದಲೇ ಹೊರತು, ಒಂದರ ಹಂಗಿಲ್ಲದೆ ಮತ್ತೊಂದನ್ನು ಓದುವಾಗ ಎರಡೂ ತಮ್ಮದೇ ಆದ ಸ್ವಂತ ಛಾಪನ್ನು ಮೂಡಿಸುವ ವಿಶಿಷ್ಠ ಶೈಲಿಯದೆಂದು ತೀರ್ಮಾನಿಸುವಂತಹ ಛಾತಿಯುಳ್ಳವು. ಅದೇನೇ ಇದ್ದರೂ ಇಲ್ಲೊಂದು ತೇಜಸ್ವಿಯ ಅಪರಿಚಿತ ಮುಖದ ಅನಾವರಣವಾಗುವುದೆಂದು ನನ್ನ ಅನಿಸಿಕೆ ( ಮೊದಲ ಬಾರಿಗೆ ಸ್ವರೂಪ, ನಿಗೂಢ ಮನುಷ್ಯರು ಓದಿದಾಗ ನನಗೆ ಹೀಗೆ ಅನಿಸಿತ್ತಾದರೂ, ಈ ಪುಸ್ತಕದ ಮಟ್ಟದಷ್ಟು ಅನಿಸಿರಲಿಲ್ಲ).

ಬಹುಶಃ ಇಂತದ್ದೊಂದು ಸಂಭಾವಿತ ಅರಿವು ತೇಜಸ್ವಿಯವರಿಗು ಇತ್ತೇನೊ ? ಮೊದಲನೇ ಮುದ್ರಣದಲ್ಲಿ ಕೈಗೆ ಸಿಗದಿದ್ದ , ತದನಂತರ ಸಿಕ್ಕಿದ ‘ಓದುವ ಮುನ್ನ’ ಟಿಪ್ಪಣಿಯಲ್ಲಿ ತೇಜಸ್ವಿಯವರೇ ತಾವು ಈ ಕಾದಂಬರಿಯ ಬಗೆ ಏನೂ ಬರೆಯಹೋಗದೆ ಆ ಕಾಲದ ಜೀವನ ಸಂಧರ್ಭ, ಸುತ್ತಲಿನ ಸ್ಥಿತಿಗಳ ಬಗೆಗಿನ ವಿವರಣೆ, ವಿಶ್ಲೇಷಣೆಯ ಚರ್ಚೆಗಿಳಿಯುತ್ತಾರೆ ( ಅಂದಹಾಗೆ ಈ ಬರಹವೇ ಒಂದು ಅದ್ಭುತ ಲೇಖನ , ಮಿಸ್ ಮಾಡಿಕೊಳ್ಳದೆ ಓದಿ. ನನಗಂತೂ ಅದು ಆಗಿನ ತೇಜಸ್ವಿಯವರ ಮನಃಸತ್ವ, ದ್ವಂದ್ವ, ವೈಚಾರಿಕ ಪ್ರಬುದ್ಧತೆಗಳೆಲ್ಲದರ ಒಟ್ಟು ಒಳನೋಟ ನೀಡುವ ಪ್ರಬಂದದಂತೆಯೇ ಭಾಸವಾಯ್ತು). ಇಲ್ಲೂ ತೇಜಸ್ವಿಯವರು  ಪ್ರಾಮಾಣಿಕತೆಯ ದ್ವಂದ್ವ, ವಿಭಿನ್ನ ಪರಿಸಗಳಲ್ಲಿ ಅದನ್ನು ಅನ್ವಯಿಸುವಾಗ ಎದುರಿಸುವ ಗೊಂದಲಗಳ ತುಣುಕುಗಳನ್ನು ಕಾಣಿಸುತ್ತಲೇ, ಬರಹಗಾರನಾಗಿ ತಾವು ಎದುರಿಸಬೇಕಾದ ತಾತ್ವಿಕ ಮತ್ತು ಆಲೋಚನಾ ಕೋಟಲೆಗಳ ಒಂದು ಸೂಕ್ಷ್ಮಚಿತ್ರ ನೀಡಿ ಬಿಡುತ್ತಾರೆ. ಅದೆಲ್ಲವನ್ನು ಮೀರಿ ನನಗನಿಸಿದ್ದು – ಈ ಕಾದಂಬರಿ ಓದಿದವರ ಮನಸಿನಲ್ಲಿ ಏಳಬಹುದಾದ ಸೂಕ್ಷ್ಮ ತುಮುಲಗಳ ಅರಿವು ಆಗಲೇ ಇದ್ದಿರಬೇಕು ತೇಜಸ್ವಿಯವರಲ್ಲಿ. ಅದಕ್ಕೆ ಉತ್ತರವಾಗಿಯೇನೋ ಎಂಬಂತೆ ಇದೆ ಈ ‘ಓದುವ ಮುನ್ನ’ ದಲ್ಲಿ ಚರ್ಚಿಸಿರುವ ವಸ್ತು ವಿಷಯ ಚಿಂತನಾಲೋಚನೆಗಳು.

ಇನ್ನು ಕಾದಂಬರಿಯ ವಿಷಯಕ್ಕೆ ಬಂದರೆ – ಸೋಮು, ನಳಿನಿ, ಲಿಂಗ, ಗಿರಿಯ, ವೆಂಕ, ಕಾಡು ಮತ್ತು ಹಂದಿಗಳ ಮುಖ್ಯ ಪಾತ್ರಗಳ ಸುತ್ತ ಸುತ್ತುವ ಪತ್ತೆದಾರಿಯ ತರಹದ ಕಥಾನಕ. ಮೊದಲಿಗೆ ಹೆಸರೇ ಹೇಳುವಂತೆ ‘ಕಾಡು ಮತ್ತು ಕ್ರೌರ್ಯ’ ಇಲ್ಲಿನ ಮೂಲತಂತು. ಕಾಡು ಎನ್ನುವುದು ನಿಗೂಢತೆಯ ಸಂಕೇತ. ಪ್ರಕೃತಿಯ ಪರಮಾವತಾರವಾದ ಅದು ಹೇಗೆ ಪ್ರವರ್ತಿಸುವುದು ಎನ್ನುವುದು ಅನೂಹ್ಯ. ಚಂಚಲತೆ ಮತ್ತು ಅಸ್ಪಷ್ಟತೆ ಅದರ ಹಾಸುಹೊಕ್ಕಾದ ಸ್ವರೂಪ. ಅಲ್ಲಿ ಪ್ರೀತಿಯಿದ್ದಷ್ಟೆ ಕ್ರೌರ್ಯವೂ ಅಂತರ್ಗತ – ಅದರಲ್ಲಿರುವ ಜೀವ ನಿರ್ಜೀವ ಸರಕುಗಳ ಪ್ರಕಟಾಪ್ರಕಟ ರೂಪದಲ್ಲಿ. ಆದರೆ ಕಥೆಯ ಅಂತರಾಳಕ್ಕೆ ಹೊಕ್ಕುತ್ತಿದ್ದಂತೆಯೆ ಅರಿವಾಗತೊಡಗುತ್ತದೆ ಇದು ಬರಿ ಪ್ರಕೃತಿಯ ನಿಗೂಢತೆ ಮತ್ತು ಕ್ರೌರ್ಯದ ಕುರಿತಾದ ಕಥೆಯಲ್ಲ ಎಂದು. ಪ್ರತಿಯೊಂದು ಸಂಭಾವಿತ- ಅಸಂಭಾವಿತ ಮನಸಿನಲ್ಲೂ ಅಡಗಿ ಅಂತರಂಗದಲ್ಲೇನೋ ಇದ್ದರೂ, ಬಹಿರಂಗದಲ್ಲಿ ಮತ್ತೇನಾಗಿಯೊ ಅನಾವರಣವಾಗುತ್ತ, ತನ್ಮೂಲಕ ತನ್ನ ‘ಕಾಡಿನ ನಿಗೂಢತೆ’ ಮತ್ತು ಅದು ಪ್ರಚೋದಿಸುವ ಸೂಕ್ಷ್ಮವಾದ ಮೇಲ್ತೋರಿಕೆಗೆ ಕಾಣಿಸಿಕೊಳ್ಳದ ‘ಕ್ರೌರ್ಯ’ ವಾಗಿ ಪ್ರಕಟವಾಗುವ ಬಗೆಯನ್ನು ಅದ್ಭುತವಾಗಿ ಚಿತ್ರಿಸುತ್ತ ಸಾಗುತ್ತದೆ ಕಥಾನಕ. ಒಂದಕ್ಕೊಂದು ಸಂಬಂಧಿಸಿರದ ಅಂತರಂಗದ ತಿಕ್ಕಾಟ ಮತ್ತು ಬಾಹ್ಯದ ಸಂಘಟನೆಗಳು ಹೇಗೋ ಪರಸ್ಪರ ಸಂಘರ್ಷಿಸಿ ನಿಗೂಢ ಸ್ತರದಲ್ಲಿ ಅಯಾಚಿತ ಕ್ರೌರ್ಯವಾಗಿ ಹೊರಹೊಮ್ಮುತ್ತವೆನ್ನುವುದು ಇಲ್ಲಿ ಸೋಜಿಗ. ಹೀಗೆ ಸಾಗುತ್ತ ಕೊನೆಗೆ ಈ ನಿಗೂಢತೆ ಮತ್ತು ಕ್ರೌರ್ಯಗಳ ದೆಸೆಯಿಂದಾಗಿ ಸರಳ ಚಿತ್ರಣವಾಗಬಹುದಿದ್ದ ಬದುಕೊಂದು ಸಂಕೀರ್ಣ ಆಯಾಮ ಪಡೆದು , ಇನ್ನು ಕಟ್ಟಲೇ ಆಗದು ಎನ್ನುವ ಮಟ್ಟಿಗೆ ಮುರಿದುಹೋದಂತೆ ಬೆಳೆಯುವ ಪರಿ ಅಸಾಧಾರಣ. ಕೌತುಕವೆಂದರೆ ನಿಗೂಢತೆ ಮತ್ತು ಕ್ರೌರ್ಯಗಳ ಅದೇ ಸರಕು, ‘ಇನ್ನೇನು ಎಲ್ಲಾ ಮುಗಿದೇಹೋಯಿತು’ ಎನ್ನುವಂತಿದ್ದ ಹಂತದಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ನೀಡಿ ಕಥಾನಕದ ಹಾದಿಯನ್ನೆ ಬದಲಿಸಿಬಿಡುತ್ತದೆ. ಈ ತಂತ್ರಗಾರಿಕೆಯಲ್ಲಿ ಕಾದಂಬರಿಯಲ್ಲಿ ಚಡಪಡಿಸುತ್ತಿದ್ದ ಪ್ರತಿ ಪಾತ್ರವೂ – ನಳಿನಿಯಾಗಲಿ, ಸೋಮುವಾಗಲಿ, ಲಿಂಗನಾಗಲಿ, ವೆಂಕನಾಗಲಿ ಕಡೆಗೆ ಆ ಹಂದಿಯಾಗಲಿ – ಎಲ್ಲವೂ ತಮ್ಮದೇ ಆದ ರೀತಿಯ ಪರಿಹಾರದ ಮೋಕ್ಷವನ್ನು ಪಡೆದುಕೊಳ್ಳುವುದು ವಿಶಿಷ್ಠವಾಗಿ ಕಾಣುತ್ತದೆ.

ಇನ್ನು ಕತೆಯ ಅಂತರಾಳಕ್ಕಿಳಿದು ಗೂಡಾರ್ಥಗಳಿಗಾಗಿ ತಡಕಾಡಿದರೆ ಆಗ ತೋಚುವ ಭಾವಗಳೇ ಬೇರೆ. ಕ್ರೂರ ಕಾಡುಹಂದಿಯ ಚಿತ್ರಣ ನಮ್ಮೆಲ್ಲರ ನಿಗೂಢ ಮನಸಿನ ಕ್ರೌರ್ಯದ ಸಂಕೇತವಾಗಿಬಿಡುತ್ತದೆ. ಅದೇ ಮನದಾಳದ ಮೌಢ್ಯ ಮೂಢನಂಬಿಕೆಗಳ ಮೂರ್ತರೂಪವಾಗಿಬಿಡುತ್ತಾನೆ ವೆಂಕ. ಸ್ಪಷ್ಟತೆ ಅಸ್ಪಷ್ಟತೆಗಳ ನಡುವಿನ ತಾಕಲಾಟದಲ್ಲಿ ಪ್ರತಿಯೊಬ್ಬರೂ ಪ್ರತಿಯೊಬ್ಬರನ್ನೂ ಅನುಮಾನದಿಂದಲೇ ಕಾಣುವ ಅತಂತ್ರ ಭಾವ, ಅದರ ನಡುವೆಯೂ ಹೊಂದಿಕೊಂಡೇ ಹೋಗಬೇಕಾದ ಅನಿವಾರ್ಯತೆ ಮತ್ತು ಪ್ರೇರಕ ಸನ್ನಿವೇಶಗಳು – ಎಲ್ಲವೂ ಆಯಾ ಪಾತ್ರಗಳ ಮೂಲಕ ನಿರಂತರವಾಗಿ ಕಾಡುತ್ತ ಮನದಲ್ಲೊಂದು ಕಾಡನ್ನು ಹುಟ್ಟುಹಾಕಿ ಬಿಡುತ್ತವೆ. ಅದರ ತದನಂತರದ ಫಲಿತ ಚಿಂತನಾಲೋಚನಾ ಕ್ರೌರ್ಯಗಳನ್ನು ನಿಭಾಯಿಸಿಕೊಳ್ಳುವ ಹೊಣೆಯನ್ನು ಓದುಗರಿಗೆ ಬಿಡುತ್ತ !

ನೂರೈವತ್ತು ಪುಟಗಳ ನೂರಿಪ್ಪತ್ತು ರೂಪಾಯಿಯ (ಪುಸ್ತಕ ಪ್ರಕಾಶನ) ಈ ಪುಸ್ತಕ ಯಾವುದೇ ತೇಜಸ್ವಿಯವರ ಪುಸ್ತಕದಂತೆ ಅದೇ ಅದ್ಭುತ ಅನುಭವ, ಲೌಕಿಕಾಲೌಕಿಕತೆಗಳ ನಡುವಿನ ಅನುಭೂತಿಯನ್ನು ಎಂದಿನಂತೆ ಕಟ್ಟಿಕೊಡುತ್ತದೆ.

ತಪ್ಪದೆ ಓದಿ !

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments