ಬೀಭತ್ಸ…….!!(ಭಾಗ ೧)
ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಅದು ಜೂನ್ ಇಪ್ಪತ್ತೇಳನೆಯ ತಾರೀಖು. ಎಳೆಯ ಬಿಸಿಲಿನ್ನೂ ಭೂಮಿಯನ್ನು ಚುಂಬಿಸುತಿತ್ತು. ಮೈದಾನದುದ್ದಕ್ಕೂ ಆವರಿಸಿಕೊಂಡಿದ್ದ ಹಸಿರು ಹುಲ್ಲಿನ ನಡುನಡುವೆ ಬೆಳೆದುಕೊಂಡಿದ್ದ ಸಣ್ಣ ಗಿಡಗಳ ತುಂಬೆಲ್ಲ ಚಂದದ ಪುಷ್ಫಗಳು ಅರಳಿಕೊಂಡಿದ್ದವು. ಹಳ್ಳಿಯ ಅಂಚೆ ಕಚೇರಿ ಮತ್ತು ಬ್ಯಾಂಕುಗಳ ರಸ್ತೆಗಳು ಕೂಡುವ ಚೌಕದಲ್ಲಿ ನಿಧಾನವಾಗಿ ಹಳ್ಳಿಗರು ಸೇರಲಾರಂಭಿಸಿದ್ದರು. ಹಳ್ಳಿಯ ಚೀಟಿ ಎತ್ತುವಿಕೆಯ ಕಾರ್ಯಕ್ರಮ ಕೇವಲ ಒಂದೇ ದಿನದಲ್ಲಿ ಮುಗಿದು ಹೋಗುತ್ತದೆ. ಆದರೆ ಬೇರೆ ಕೆಲವು ಪಟ್ಟಣಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಕಡಿಮೆಯೆಂದರೂ ಎರಡು ದಿನಗಳಷ್ಟು ಕಾಲಾವಕಾಶ ಬೇಕು. ಕಡಿಮೆ ಜನಸಂಖ್ಯೆಯ ಕಾರಣದಿಂದಾಗಿ ಆ ಹಳ್ಳಿಯ ಜನ ಬೆಳಗ್ಗಿನ ಹತ್ತು ಗಂಟೆಗೆಲ್ಲ ಕಾರ್ಯಕ್ರಮ ಆರಂಭಿಸಿ, ಮಧ್ಯಾಹ್ನದ ಹೊತ್ತಿಗೆ ವಿಧಿವಿಧಾನಗಳನ್ನು ಪೂರೈಯಿಸಿ ಊಟಕ್ಕೆಂದು ತಮ್ಮತಮ್ಮ ಮನೆಗಳಿಗೆ ತೆರಳುತ್ತಿದ್ದರು.
ತಮಗಿರುವ ಕುತೂಹಲದಿಂದಾಗಿ ಸಹಜವಾಗಿಯೇ ಮಕ್ಕಳು ಎಲ್ಲಕ್ಕಿಂತ ಮುಂಚೆ ಚೌಕದ ಬಳಿ ಜಮಾಯಿಸುತ್ತಿದ್ದರು. ಬೇಸಿಗೆಯ ರಜಾದಿನಗಳು ಎನ್ನುವ ಸ್ವಾತಂತ್ರ್ಯವೂ ಮಕ್ಕಳ ಕುತೂಹಲಕ್ಕೆ ಸಮರ್ಥನೆಯೊದಗಿಸುತ್ತಿತ್ತು. ಆರಂಭದಲ್ಲಿ ಮೌನವಾಗಿ ಶುರುವಾಗುತ್ತಿದ್ದ ಹುಡುಗರ ಆಟ ಗದ್ದಲ ಗಲಾಟೆಗಳ ಆಟವಾಗಿ ಬದಲಾಗುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ. ರಜಾ ದಿನಗಳಲ್ಲೂ ಮಕ್ಕಳು ಹೆಚ್ಚಾಗಿ ತಮ್ಮ ಶಾಲೆಯ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದರು. ಬಾಬಿ ಮಾರ್ಟಿನ್ ಅದಾಗಲೇ ತನ್ನ ಜೇಬಿನ ತುಂಬ ಕಲ್ಲುಗಳನ್ನು ತುಂಬಿಕೊಂಡಿದ್ದ. ಅವನನ್ನೇ ಅನುಸರಿಸಿದ ಮಿಕ್ಕ ಹುಡುಗರೂ ಸಹ ಕಲ್ಲುಗಳನ್ನು ಒಟ್ಟುಗೂಡಿಸುವಲ್ಲಿ ನಿರತರಾದರು. ಬಾಬಿ, ಹ್ಯಾರಿ ಜೋನ್ಸ್ ಮತ್ತು ಡಿಕ್ಕಿ ಡೆಲಾಕ್ರೊಕ್ಸ್ ಎನ್ನುವ ಮೂವರು ಗೆಳೆಯರು ಸೇರಿ ನುಣ್ಣಗಿನ, ಗುಂಡಗಿನ ಬಗೆಬಗೆಯ ಕಲ್ಲುಗಳನ್ನು ಒಂದೆಡೆ ಸೇರಿಸಿ ಚಿಕ್ಕದ್ದೊಂದು ಗುಡ್ಡವನ್ನೇ ಮಾಡಿಕೊಂಡು ಅದರ ಕಾವಲು ಕಾಯುತ್ತಿದ್ದರು. ಬೇರೆ ಹುಡುಗರು ತಮ್ಮ ಕಲ್ಲುಗಳನ್ನು ಕದ್ದುಬಿಟ್ಟಾರೆಂಬ ಅನುಮಾನ ಅವರಿಗೆ. ಕೊಂಚ ದೂರದಲ್ಲಿಯೇ ಸೇರಿದ್ದ ಹುಡುಗಿಯರು ತಮ್ಮಷ್ಟಕ್ಕೆ ತಾವು ಮಾತನಾಡುತ್ತ ನಿಂತಿದ್ದರೂ,ವಾರೆಗಣ್ಣಿನಿಂದ ಹುಡುಗರ ಆಟವನ್ನೆಲ್ಲ ಅವರು ಗಮನಿಸುತ್ತಿದ್ದರು. ಎಳೆಯ ಮಕ್ಕಳು ಮಾತ್ರ ಇದ್ಯಾವುದರ ಪರಿವೆಯೂ ಇಲ್ಲದೇ ತಮ್ಮ ಪಾಡಿಗೆ ತಾವೆನ್ನುವಂತೆ ಮಣ್ಣಿನಲ್ಲಿ ಅಡುತ್ತಲೋ, ತಮ್ಮ ಪೋಷಕರ ಕೈಹಿಡಿದುಕೊಂಡೋ ನಡೆಯ ಬೇಕಾದ ಕಾರ್ಯಕ್ರಮಕ್ಕಾಗಿ ಕಾಯುತ್ತ ನಿಂತಿದ್ದರು.
ಕೆಲವೇ ಸಮಯದಲ್ಲಿ ಜನರ ಜಮಾವಣೆಯ ವೇಗ ಹೆಚ್ಚತೊಡಗಿತು. ತಮ್ಮ ತಮ್ಮ ಮಕ್ಕಳ ಮೇಲೆ ದೂರದಿಂದಲೇ ನಿಗಾ ವಹಿಸುತ್ತಿದ್ದ ಜನ, ಕಾಲ ಕಳೆಯುವಿಕೆಗಾಗಿ ಮಳೆಯ ಬಗ್ಗೆ, ಬೇಸಾಯದ ಬಗ್ಗೆ ಮಾತನಾಡಿಕೊಳ್ಳತೊಡಗಿದರು. ಹೆಚ್ಚುತ್ತಿರುವ ಆದಾಯ ತೆರಿಗೆಯ ಬಗ್ಗೆ ಚರ್ಚಿಸತೊಡಗಿದರು. ಮಕ್ಕಳು ಪೇರಿಸಿಟ್ಟಿದ್ದ ಕಲ್ಲಿನ ಗುಡ್ಡಗಳಿಂದ ಕೊಂಚ ದೂರದಲ್ಲಿಯೇ ನಿಂತು ತಮಾಷೆ ಮಾಡುತ್ತಿದ್ದ ಜನರ ಮುಖದಲ್ಲಿ ಚಿಕ್ಕದೊಂದು ಮಂದಹಾಸವಿತ್ತು. ತಮ್ಮ ಕುಟುಂಬದ ಪುರುಷರೊಡಗೂಡಿ ಸಭೆಗೆ ಬಂದ ಮಹಿಳೆಯರಲ್ಲಿ ಕೆಲವರು ಮಾಸಿದ ನಿಲುವಂಗಿ ಧರಿಸಿದ್ದರೆ, ಹಲವರು ಬೆಚ್ಚನೆಯ ಮೇಲಂಗಿಯನ್ನು ಧರಿಸಿದ್ದರು. ಪರಸ್ಪರ ಉಭಯ ಕುಶಲೋಪರಿಯ ಔಪಚಾರಿಕತೆಯ ನಂತರ ಮಹಿಳೆಯರೆಲ್ಲರೂ ತಮ್ಮ ಗಂಡಂದಿರತ್ತ ತೆರಳಿದರು. ತಮ್ಮ ತಮ್ಮ ಗಂಡಂದಿರ ಪಕ್ಕಕ್ಕೆ ಸರಿದು ನಿಂತ ಮರುಕ್ಷಣವೇ ಸ್ತ್ರೀಯರೆಲ್ಲ ತಮ್ಮ ಮಕ್ಕಳನ್ನು ಜೋರಾಗಿ ಕೂಗಿ ಕರೆಯಲಾರಂಭಿಸಿದ್ದರು. ಅಲ್ಲೆಲ್ಲೋ ಆಟವಾಡುತ್ತಿದ್ದ ಮಕ್ಕಳಿಗೆ ಪೋಷಕರ ಕರೆ ಕೇಳಿದ ತಕ್ಷಣ ರಸಭಂಗವಾದ ಅನುಭವ. ಹಾಗಾಗಿ ಐದಾರು ಬಾರಿ ಕರೆಯುವ ಮುನ್ನ ಯಾವ ಹುಡುಗರೂ ಸಹ ತಮ್ಮ ಪೋಷಕರತ್ತ ತೆರಳಲಿಲ್ಲ. ಬಾಬಿ ಮಾರ್ಟಿನ್ ತಕ್ಷಣಕ್ಕೆ ತನ್ನ ತಾಯಿಯ ಬಳಿಗೆ ತೆರಳಿದನಾದರೂ , ತುಂಟ ನಗೆಯೊಂದನ್ನು ಬೀರುತ್ತ ಪುನ: ಕಲ್ಲುಗಳ ಗುಡ್ಡದತ್ತ ಓಡಲಾರಂಭಿಸಿದ. ಆದರೆ ತನ್ನ ಅಪ್ಪನ ಗದರುವಿಕೆಯನ್ನು ಕೇಳಿದ ಮರುಕ್ಷಣವೇ, ಬೆದರಿ ಅಪ್ಪ ಮತ್ತು ಅಣ್ಣನ ನಡುವಿದ್ದ ಸಣ್ಣ ಜಾಗದಲ್ಲಿ ತೂರಿಕೊಂಡ.
ಹಳ್ಳಿಯ ಎಲ್ಲ ಪ್ರಮುಖ ಕಾರ್ಯಕ್ರಮಗಳನ್ನು ನಡೆಸುತ್ತಿದ್ದವನ ಹೆಸರು ಮಿಸ್ಟರ್ ಸಮ್ಮರ್ಸ್. ದುಂಡನೆಯ ಮೊಗದ ಉತ್ಸಾಹಿ ವ್ಯಕ್ತಿಯಾಗಿದ್ದ ಸಮ್ಮರ್ಸನಿಗೆ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವುದೆಂದರೆ ಎಲ್ಲಿಲ್ಲದ ಉತ್ಸಾಹ. ಆತ ಕೆಂಡದ ವ್ಯಾಪಾರಿಯಾಗಿದ್ದ. ಆತನ ಹೆಂಡತಿ ಬಂಜೆಯೆನ್ನುವ ಕಾರಣಕ್ಕೋ ಏನೋ ಹಳ್ಳಿಗರಿಗೆ ಅವನೆಡೆಗೊಂದು ಅವ್ಯಕ್ತ ಅನುಕಂಪ. ಚೌಕದ ಬಳಿ ಬಂದ ಆತ ಕಪ್ಪನೆಯ ಮರದ ಪೆಟ್ಟಿಗೆಯನ್ನು ತಂದಿದ್ದ. ಗಿಜಿಗಿಜಿಗುಡುತ್ತಿದ್ದ ಹಳ್ಳಿಗರ ಗಮನವನ್ನು ತನ್ನತ್ತ ಸೆಳೆಯುವ ಪ್ರಯತ್ನವೆನ್ನುವಂತೆ ಒಮ್ಮೆ ತನ್ನ ಕೈಯನ್ನು ಗಾಳಿಯಲ್ಲಿ ಆಡಿಸಿದ್ದ, ಸಮ್ಮರ್ಸ್, “ಮಹಿಳೆಯರೇ ಮತ್ತು ಮಹನೀಯರೇ, ಇಂದು ನಾನು ಬರುವುದು ಕೊಂಚ ತಡವಾಯಿತು, ನನ್ನನ್ನು ದಯವಿಟ್ಟು ಕ್ಷಮಿಸಿ” ಎಂದು ವಿನಂತಿಸಿಕೊಂಡ. ಅಷ್ಟರಲ್ಲಿ ಗ್ರಾಮದ ಪೋಸ್ಟಮಾಸ್ಟರ್, ಗ್ರೇವ್ಸ್ ಮೂರು ಕಾಲಿನ ಪೀಠವೊಂದನ್ನು ತಂದು ಸಭಾಂಗಣದ ನಡುಮಧ್ಯದಲ್ಲಿರಿಸಿದ. ಅದರ ಮೇಲೆ ಕಪ್ಪು ಮರದ ಪೆಟ್ಟಿಗೆಯನ್ನು ಇರಿಸಲಾಯಿತು. “ಪೆಟ್ಟಿಗೆಯನ್ನು ಕೊಂಚ ಸರಿಸಿ ಇಡಲು ಯಾರಾದರೂ ನನಗೆ ಸಹಾಯ ಮಾಡುವಿರಾ..”? ಎಂಬ ಸಮ್ಮರ್ಸನ ಮಾತುಗಳಿಗೆ ನೆರೆದಿದ್ದ ಜನರಿಗೇಕೋ ಸಣ್ಣ ಹಿಂಜರಿಕೆ. ಕೊನೆಗೂ ಮಾರ್ಟಿನ್ ಮತ್ತವನ ಹಿರಿಯ ಮಗ ಬಾಕ್ಸರ್ ಸಮ್ಮರ್ಸನ ನೆರವಿಗೆ ಬಂದರು. ಅವರಿಬ್ಬರೂ ಸೇರಿ ಪೀಠದ ಮೇಲಿದ್ದ ಕರಿಯ ಪೆಟ್ಟಿಗೆಯನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದರೆ, ಸಮ್ಮರ್ಸ್ ಪೆಟ್ಟಿಗೆಯಲ್ಲಿದ್ದ ಕಾಗದದ ಚೀಟಿಗಳನ್ನು ಕಲುಕುವಲ್ಲಿ ನಿರತನಾದ. ಚೀಟಿ ಎತ್ತುವಿಕೆಯ ಆಚರಣೆಯ ಅಸಲಿ ಸರಂಜಾಮುಗಳು ಕಳೆದು ಹೋಗಿ ಅದ್ಯಾವ ಕಾಲವಾಗಿತ್ತೋ ಹಳ್ಳಿಗರಿಗೆ ತಿಳಿಯದು. ಹಳ್ಳಿಯ ಅತ್ಯಂತ ಹಿರಿಯ ವಾರ್ನರ್ ಹುಟ್ಟುವುದಕ್ಕೂ ಮುನ್ನವೇ ಈಗಿರುವ ಕರಿಯ ಪೆಟ್ಟಿಗೆಯನ್ನು ಬಳಸಲಾಗುತ್ತಿತ್ತು. ತೀರ ಹಳೆಯದಾಗಿದ್ದ ಕರಿಯ ಪೆಟ್ಟಿಗೆಯನ್ನು ಬದಲಾಯಿಸಬೇಕೆನ್ನುವುದು ಸಮ್ಮರ್ಸನ ಆಶಯವಾಗಿತ್ತಾದರೂ, ತಲತಲಾಂತರಗಳಿಂದ ಬಳಸಲ್ಪಡುತ್ತಿದ್ದ ಕಪ್ಪು ಪೆಟ್ಟಿಗೆಯ ಬದಲಾವಣೆಗೆ ಜನರು ಒಪ್ಪಲಿಲ್ಲ. ಮುಂಚೆ ಬಳಕೆಯಲ್ಲಿದ ಪೆಟ್ಟಿಗೆಯ ಚೂರುಗಳನ್ನೇ ಬಳಸಿ ಪ್ರಸ್ತುತದ ಪೆಟ್ಟಿಗೆಯನ್ನು ರಚಿಸಲಾಗಿದೆಯೆನ್ನುವ ವದಂತಿಯೂ ಹಳ್ಳಿಗರಲ್ಲಿ ಮನೆಮಾಡಿತ್ತು. ಹಳ್ಳಿಯ ಹುಟ್ಟಿನ ಸಮಯದಲ್ಲೇ ಹುಟ್ಟಿಕೊಂಡ ಪೆಟ್ಟಿಗೆಯನ್ನು ಬದಲಾಯಿಸಲು ಹಳ್ಳಿಗರಿಗೇಕೋ ಭಯ. ಪ್ರತಿವರ್ಷವೂ ಚೀಟಿ ಎತ್ತುವಿಕೆಯ ಕ್ರಿಯೆ ಮುಗಿದ ನಂತರ ಸಮ್ಮರ್ಸ್, ಪೆಟ್ಟಿಗೆಯನ್ನು ಬದಲಾಯಿಸುವ ಕುರಿತು ಗ್ರಾಮಸ್ಥರಲ್ಲಿ ಮಾತನಾಡುತ್ತಿದ್ದನಾದರೂ, ಯಾರೂ ಆತನ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ವರ್ಷದಿಂದ ವರ್ಷಕ್ಕೆ ಕಪ್ಪು ಪೆಟ್ಟಿಗೆ ಕೊಳಕಾಗುತ್ತ ಸಾಗಿತ್ತು. ಅಸಲಿಗೆ ಪೆಟ್ಟಿಗೆಗೆ ಬಳಿದಿದ್ದ ಕರಿಯ ಬಣ್ಣ ಕಳಚಿ ಹೋಗಿ ,ಕಟ್ಟಿಗೆಯ ಬಣ್ಣ ಅಲ್ಲಲ್ಲಿ ಕಾಣಿಸಲಾರಂಭಿಸಿತ್ತು. ಪೆಟ್ಟಿಗೆಯ ಬಹುತೇಕ ಬಣ್ಣ ಮಾಸಿಹೋಗಿತ್ತು.
ಕಪ್ಪುಪೆಟ್ಟಿಗೆಯೊಳಗಿನ ಚೀಟಿಗಳನ್ನು ಸಮ್ಮರ್ಸ್ ಸರಿಯಾಗಿ ಕಲುಕುವವರೆಗೂ ಮಾರ್ಟಿನ್ ಮತ್ತವನ ಮಗ ಬಾಕ್ಸರ್, ಕರಿಯ ಪೆಟ್ಟಿಗೆಯನ್ನು ತಮ್ಮ ಕೈಗಳಿಂದ ಭದ್ರವಾಗಿ ಹಿಡಿದಿಟ್ಟುಕೊಂಡಿದ್ದರು. ಅನಾದಿ ಕಾಲದಿಂದಲೂ ನಡೆದು ಬರುತ್ತಿದ್ದ ಚೀಟಿ ಎತ್ತುವಿಕೆಯ ಆಚರಣೆಯ ಪದ್ದತಿಯಲ್ಲಿ ಅನೇಕ ಸಂಪ್ರದಾಯಗಳನ್ನು ಅದಾಗಲೇ ಕೈಬಿಟ್ಟಾಗಿತ್ತು. ಮೊದಮೊದಲು ಸಣ್ಣ ಸಣ್ಣ ಮರದ ತುಂಡುಗಳನ್ನು ಚೀಟಿಗಳಂತೆ ಬಳಸುತ್ತಿದ್ದ, ಹಳ್ಳಿಗರು ಹಳ್ಳಿಯ ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಪೆಟ್ಟಿಗೆಯ ಗಾತ್ರಕ್ಕೆ ಸರಿ ಹೊಂದುವಂತೆ ಕಾಗದದ ಚೀಟಿಗಳನ್ನು ಬಳಸಲಾರಂಭಿಸಿದರು. ಕಾರ್ಯಕ್ರಮದ ಹಿಂದಿನ ದಿನವೇ ಸಮ್ಮರ್ಸ್ ಮತ್ತು ಗ್ರೇವ್ಸ್ ಇಬ್ಬರೂ ಸೇರಿ ಚೀಟಿಗಳನ್ನು ರಚಿಸಿ ಪೆಟ್ಟಿಗೆಯೊಳಕ್ಕೆ ತುಂಬಿಟ್ಟುಕೊಂಡಿದ್ದರು. ಹಾಗೆ ಚೀಟಿಗಳಿಂದ ತುಂಬಲ್ಪಟ್ಟ ಪೆಟ್ಟಿಗೆಯನ್ನು ತನ್ನ ಇದ್ದಿಲಿನ ಕಾರ್ಖಾನೆಯೊಳಕ್ಕೆ ಸುರಕ್ಷಿತವಾಗಿ ಇರಿಸಿಕೊಂಡಿದ್ದ ಸಮ್ಮರ್ಸ್, ಮಾರನೇಯ ದಿನ ತಾನೇ ಖುದ್ದು ಅದನ್ನು ಹಳ್ಳಿಯ ಚೌಕದ ಬಳಿ ತಂದಿದ್ದ. ಆಚರಣೆ ಮುಗಿದ ನಂತರ ಕಪ್ಪುಪೆಟ್ಟಿಗೆ ಒಂದೊಂದು ಬಾರಿ ಒಂದೊಂದು ಸ್ಥಳದಲ್ಲಿರುತ್ತಿತ್ತು. ಸುಮಾರು ಒಂದು ವರ್ಷಗಳಷ್ಟು ಕಾಲ ಅದು ಗ್ರೇವ್ಸ್ ನ ಧಾನ್ಯದ ಕಣಜದಲ್ಲಿದ್ದರೇ, ಮತ್ತೊಂದು ವರ್ಷ ಹಳ್ಳಿಯ ಅಂಚೇ ಕಚೇರಿಯ ನೆಲಮಾಳಿಗೆಯಲ್ಲಿ ಅದನ್ನು ಇರಿಸಲಾಗಿತ್ತು. ಸುಮ್ಮನೇ ತಿಂಗಳುಗಳ ಕಾಲ ಮಾರ್ಟಿನ್ನನ ಕಿರಾಣಿ ಅಂಗಡಿಯ ಅಟ್ಟದ ಮೇಲೆ ಬಿದ್ದುಕೊಂಡಿದ್ದ ಸಂದರ್ಭವೂ ಇತ್ತು.
ಚೀಟಿ ಎತ್ತುವಿಕೆಯ ಪ್ರಕ್ರಿಯೆಗೂ ಮುನ್ನ ಮಿಸ್ಟರ್ ಸಮ್ಮರ್ಸ್ ಅನೇಕ ಪೂರ್ವತಯಾರಿಗಳನ್ನು ನಡೆಸುವುದು ಅವಶ್ಯಕವಾಗಿತ್ತು. ಮೊದಲು ಹಳ್ಳಿಯ ಪ್ರತಿಯೊಂದು ಕುಟುಂಬದ ಹಿರಿಯರ ಹೆಸರುಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕಿತ್ತು. ಪ್ರತಿಯೊಂದು ಕುಟುಂಬದ ಹಿರಿಯರ ಹೆಸರಿನ ಮುಂದೆ ಆ ಕುಟುಂಬದ ಪ್ರತಿಯೊಬ್ಬ ಸದಸ್ಯನ ಹೆಸರುಗಳನ್ನು ನಮೂದಿಸುವುದು ಅಗತ್ಯವಾಗಿತ್ತು. ಪ್ರತಿಬಾರಿಯೂ ಕಾರ್ಯಕ್ರಮವನ್ನು ಆರಂಭಿಸುವ ಸಮ್ಮರ್ಸನಿಗೆ ವಿಧಿಯುಕ್ತವಾದ ಪ್ರಮಾಣವಚನ ಕಾರ್ಯಕ್ರಮವನ್ನು ಪೋಸ್ಟ್ ಮಾಸ್ಟರ್ ನೆರವೇರಿಸುತ್ತಿದ್ದರು. ಕೆಲವು ದಶಕಗಳ ಹಿಂದೆ ಚೀಟಿ ಎತ್ತುವಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ನೆರೆದಿದ್ದ ಜನಕ್ಕೆ ವಿವರಿಸಿ ಹೇಳುವ ಪದ್ದತಿಯೂ ಇತ್ತೆನ್ನುವುದು ಊರಿನ ಹಿರಿಯರ ಅಂಬೋಣ. ಒಂದು ಸಣ್ಣ ಪ್ರಾರ್ಥನೆಯೊಂದನ್ನು ಮುಗಿಸಿ, ಸೇರಿದ್ದ ಜನರ ನಡುವೆ ನಿರೂಪಕನ ಸಣ್ಣದ್ದೊಂದು ನಡಿಗೆಯ ನಂತರವೇ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗುತ್ತಿದ್ದುದನ್ನು ಈಗಲೂ ಹಳ್ಳಿಯ ಮುದುಕರು ನೆನಪಿಸಿಕೊಳ್ಳುತ್ತಾರೆ. ಆದರೆ ಕಾಲಾನಂತರ ಹೆಚ್ಚಿನ ಸಂಪ್ರದಾಯಗಳು ನಶಿಸಿ ಹೋಗಿ, ಈಗ ಚೀಟಿಯನ್ನು ಎತ್ತಲು ಬರುವ ಸದಸ್ಯರೊಂದಿಗೆ ನಿರೂಪಕ ಔಪಚಾರಿಕವಾಗಿ ಒಂದೆರಡು ಮಾತುಗಳನ್ನಾಡುವ ಪದ್ದತಿ ಮಾತ್ರ ಉಳಿದುಕೊಂಡಿದೆ. ಹಾಗಾಗಿ ಹಳ್ಳಿಯ ಅದ್ಭುತ ವಾಗ್ಮಿಯಾಗಿದ್ದ ಸಮ್ಮರ್ಸನನ್ನೇ ಪ್ರತಿಬಾರಿ ಕಾರ್ಯಕ್ರಮದ ನಿರೂಪಕನಾಗಿ ನಿಯೋಜಿಸಲಾಗುತ್ತಿತ್ತು. ನೀಲಿ ಜೀನ್ಸ್ ಮತ್ತು ಬಿಳಿಯ ಅಂಗಿಯನ್ನು ಧರಿಸಿದ್ದ ಆತ ಯಾಂತ್ರಿಕವಾಗಿ ಕಪ್ಪುಪೆಟ್ಟಿಗೆಯ ಮೇಲೆ ತನ್ನ ಕೈಯನ್ನು ಇಟ್ಟುಕೊಂಡಿದ್ದ. ಕಾರ್ಯಕ್ರಮ ಆರಂಭವಾಗುವ ಕೆಲವೇ ಕ್ಷಣಗಳವರೆಗೂ ಆತ ಮಿ.ಗ್ರೇವ್ಸ್ ಮತ್ತು ಮಾರ್ಟಿನ್ ರೊಂದಿಗೆ ಸುದೀರ್ಘವಾದ ಚರ್ಚೆಯೊಂದರಲ್ಲಿ ತೊಡಗಿದ್ದ.
ಇನ್ನೇನು ಸಮ್ಮರ್ಸ್ ತನ್ನ ಚರ್ಚೆಯನ್ನು ನಿಲ್ಲಿಸಿ, ಜನರನ್ನುದ್ದೇಶಿಸಿ ಮಾತನಾಡಬೇಕೆನ್ನುವಷ್ಟರಲ್ಲಿ ಅವಸರವಸರವಾಗಿ ಜನರನ್ನು ಸೇರಿಕೊಂಡವಳು ಟೆಸ್ಸಿ ಹಚ್ಚಿಸನ್. ಉಣ್ಣೆಯ ನಿಲುವಂಗಿಯನ್ನು ಧರಿಸಿದ್ದ ಆಕೆ “ಇವತ್ತಿನ ದಿನ ನನಗೆ ಮರೆತೇ ಹೊಗಿತ್ತು ನೋಡಿ”ಎನ್ನುತ್ತ ಶ್ರೀಮತಿ ಡೆಲಾಕ್ರೋಕ್ಸನನ್ನು ನೋಡಿ ನಸುನಕ್ಕಳು. “ಬೆಳಿಗ್ಗೆಯೇ ನನ್ನ ಗಂಡ ಎದ್ದು ಹೊರಟಾಗ ಆತ ಬಹುಶ: ಕಟ್ಟಿಗೆ ತರಲೆಂದು ಕಾಡಿಗೆ ಹೋರಟರೆಂದು ನಾನು ಎಣಿಸಿದೆ. ಆದರೆ ನನ್ನ ಮಗನೂ ಸಹ ಕಾಣದಿದ್ದಾಗ ನನಗೆ ಇಂದು ಇಪ್ಪತ್ತೇಳು ಜೂನ್ ಎನ್ನುವುದು ಅಚಾನಕ್ಕಾಗಿ ಜ್ನಾಪಕಕ್ಕೆ ಬಂದಿತು” ಎನ್ನುತ್ತ ತನ್ನ ಒದ್ದೆಯಾದ ಕೈಗಳನ್ನು ತನ್ನ ನಿಲುವಂಗಿಯ ಮೇಲೊಮ್ಮೆ ಜೋರಾಗಿ ಉಜ್ಜಿಕೊಂಡಳು.”ತೊಂದರೆಯೇನಿಲ್ಲ ಬಿಡಿ, ಇನ್ನೂ ಕಾರ್ಯಕ್ರಮ ಆರಂಭವೇ ಅಗಿಲ್ಲ “ಎಂದ ಡೆಲಾಕ್ರೂಕ್ಸಳ ಮಾತುಗಳನ್ನು ಕೇಳಿ ಹಚ್ಚಿಸನ್ನಳಿಗೆ ಕೊಂಚ ಸಮಾಧಾನವಾಯಿತು. ಕೆಲ ಕ್ಷಣಗಳ ಕಾಲ ಅಲ್ಲಿಯೇ ನಿಂತ ಟೆಸ್ಸಿ, ಒಂಟೆಯಂತೆ ತನ್ನ ಕತ್ತನ್ನು ಎತ್ತರಿಸಿ ಅಲ್ಲಿ ಸೇರಿದ್ದ ಜನಸಮೂಹದ ನಡುವೆ ತನ್ನ ಗಂಡನಿಗಾಗಿ ಹುಡುಕಾಡತೊಡಗಿದಳು. ಕೊಂಚ ದೂರದಲ್ಲಿ ನಿಂತಿದ್ದ ತನ್ನ ಗಂಡ ಬಿಲ್ ಕಣ್ಣಿಗೆ ಬೀಳುತ್ತಲೇ ನೆರೆದಿದ್ದ ಜನರನ್ನು ತಳ್ಳಿಕೊಂಡು ತನ್ನ ಗಂಡನತ್ತ ನಡೆಯತೊಡಗಿದಳು. ಆಕೆಗಾಗಿ ಸರಿದು ಸ್ಥಳಾವಕಾಶ ಮಾಡಿಕೊಟ್ಟ ಜನರಲ್ಲಿ ಕೆಲವರು,”ಹೇಯ್ ಬಿಲ್, ಕಡೆಗೂ ನಿನ್ನ ಮಡದಿ ಬಂದಳು ನೋಡು”ಎಂದು ನುಡಿದದ್ದು ಟೆಸ್ಸಿಯ ಕಿವಿಗೂ ಬಿದ್ದಿತ್ತು. ಟೆಸ್ಸಿಯನ್ನು ನೋಡಿ ನಸುನಕ್ಕ ಸಮ್ಮರ್ಸ್ ಮಡದಿ, ಜೋ,” ಅಬ್ಭಾ..!! ಕಡೆಗೂ ಬಂದೆಯಲ್ಲ ಟೆಸ್ಸಿ, ಈ ಬಾರಿಯ ಆಚರಣೆ ನೀನಿಲ್ಲದೇ ಮಾಡಬೇಕಾಗುವುದೇನೋ ಎಂದುಕೊಂಡುಬಿಟ್ಟಿದ್ದೆ ನಾನು” ಎಂದು ನುಡಿದಳು. ಜೋಳನ್ನು ನೋಡಿ ಮರುನಕ್ಕ ಟೆಸ್ಸಿ, “ಹಾಗಾಗಬಾರದೆಂದೇ ಅಲ್ಲವೇ ಪಾತ್ರೆ ತೊಳೆಯುತ್ತಿದ್ದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ನಾನು ಇಲ್ಲಿಗೆ ಬಂದದ್ದು”ಎಂದಳು. ಟೆಸ್ಸಿಗಾಗಿ ಸರಿದು ಸ್ಥಳಾವಕಾಶ ಮಾಡಿಕೊಟ್ಟಿದ್ದ ಸಭೀಕರು ಆಕೆ ತನ್ನ ಪತಿಯನ್ನು ಕೂಡಿಕೊಳ್ಳುತ್ತಲೇ ಪುನ: ತಾವಾಗಲೇ ನಿಂತುಕೊಂಡಿದ್ದ ಸ್ಥಳಕ್ಕೆ ಮರಳಿದ್ದರು. ತಮ್ಮ ತಮ್ಮ ಹರಟೆಯಲ್ಲಿಯೇ ಮಗ್ನರಾಗಿದ್ದ ಹಳ್ಳಿಗರನ್ನು ತನ್ನತ್ತ ಸೆಳೆದದ್ದು , “ಕಾರ್ಯಕ್ರಮವನ್ನು ಆರಂಭಿಸೋಣವೇ”ಎಂಬ ಸಮ್ಮರ್ಸನ ನಿರ್ಭಾವುಕ ಮಾತು. ಅವನ ಧ್ವನಿ ಕೇಳಿದ ಜನರೆಲ್ಲ ಒಮ್ಮೆಲೆ ಗಂಭೀರರಾದರು. ಮಾತು ಮುಂದುವರೆಸಿದ ಸಮ್ಮರ್ಸ್, “ಹೌದು,ನಾವಿನ್ನು ಕಾರ್ಯಕ್ರಮವನ್ನು ಆರಂಭಿಸೋಣ.ಶೀಘ್ರವಾಗಿ ಆಚರಣೆಯನ್ನು ಮುಗಿಸಿದರೆ, ಬೇಗ ನಮ್ಮ ನಮ್ಮ ಮನೆಗಳತ್ತ ತೆರಳಿ ಉಳಿದ ಕೆಲಸಕಾರ್ಯಗಳತ್ತ ಗಮನಹರಿಸಬಹುದು.
ಇರಲಿ,ಈಗ ಇಲ್ಲಿ ಬರದೇ ಇರುವವರು ಯಾರಾದರೂ ಇದ್ದಾರಾ” ಎಂದು ಪ್ರಶ್ನಿಸಿದ. “ಮಿಸ್ಟರ್ ಡನ್ಬರ್” ಎಂದರು ಯಾರೋ. ಉಳಿದ ಕೆಲವರೂ ಹೌದೆನ್ನುವಂತೆ ತಲೆಯಾಡಿಸಿದರು. ಒಮ್ಮೆ ತನ್ನ ಬಳಿಯಿದ್ದ ಹೆಸರುಗಳ ಪಟ್ಟಿಯನ್ನು ಕೂಲಕುಂಶವಾಗಿ ಪರಿಶೀಲಿಸಿದ ಸಮ್ಮರ್ಸ್, “ಕ್ಲೈಡ್ ಡನ್ಬರ್ ಬಂದಿಲ್ಲವೇ..?? ಕೆಲವು ದಿನಗಳ ಹಿಂದೆ ಆತ ತನ್ನ ಕಾಲು ಮುರಿದುಕೊಂಡಿದ್ದಾನೆ ಎಂಬುದಾಗಿ ನಾನು ಕೇಳಿದ್ದೆ. ಬಹುಶಃ ಆತನಿನ್ನೂ ಗುಣಮುಖನಾಗಿಲ್ಲವೆನ್ನಿಸುತ್ತದೆ. ಈಗ ಆತನ ಪರವಾಗಿ ಇಲ್ಲಿ ಚೀಟಿ ಎತ್ತುವವರು ಯಾರು”? ಎಂದು ಪ್ರಶ್ನಾರ್ಥಕವಾಗಿ ನೆರೆದಿದ್ದ ಜನರನ್ನೊಮ್ಮೆ ನೋಡಿದ. “ನಾನು ಮಿಸ್ಟರ್ ಸಮ್ಮರ್ಸ್” ಎನ್ನುತ್ತ ತನ್ನ ಬಲಗೈಯನ್ನು ಗಾಳಿಯಲ್ಲಿ ಎತ್ತಿದವಳು ಡನ್ಬರನ ಮಡದಿಯೆನ್ನುವುದು ಸಮ್ಮರ್ಸನಿಗೂ ತಿಳಿದಿತ್ತು. “ಪತಿಗಾಗಿ ಪತ್ನಿ ಚೀಟಿ ಎತ್ತುವುದು ನಿಯಮಬಾಹಿರವೇನಲ್ಲ. ಆದರೆ ನಿನಗೆ ಪ್ರಾಪ್ತ ವಯಸ್ಕ ಮಕ್ಕಳ್ಯಾರೂ ಇಲ್ಲವೇ ..”? ಎಂದು ಕೇಳಿದ ಸಮ್ಮರ್ಸನ ಸಹಿತ ಅಲ್ಲಿ ನೆರೆದಿದ್ದ ಸರ್ವರಿಗೂ ಆಕೆಯ ಮಗನಿಗಿನ್ನೂ ಹದಿನಾರು ತುಂಬಿಲ್ಲವೆನ್ನುವುದರ ಅರಿವಿದೆ. ಆದರೆ ಹಾಗೆ ಕೇಳುವುದು ಹಿಂದಿನಿಂದಲೂ ಬಂದ ರೂಢಿ. ಅದು ಆಕೆಗೂ ಗೊತ್ತು. ಆಂಥದ್ದೊಂದು ಪ್ರಶ್ನೆಗೆ ವಿನಮ್ರಳಾಗಿ ಉತ್ತರಿಸುತ್ತ “ನನ್ನ ಮಗ ಹೊರೆಸನಿಗಿನ್ನೂ ಹದಿನಾರು ತುಂಬಿಲ್ಲ, ಹಾಗಾಗಿ ಈ ಬಾರಿ ನನ್ನ ಪತಿಯ ಪರವಾಗಿ ನಾನೇ ಚೀಟಿ ಎತ್ತಬೇಕಾಗಿದೆ” ಎಂದುತ್ತರಿಸಿದಳು. “ಹಾಗಿದ್ದರೆ ಸರಿ” ಎಂದ ಸಮ್ಮರ್ಸ್ ತನ್ನ ಕೈಯಲ್ಲಿ ಹಿಡಿದಿದ್ದ ಹೆಸರಿನ ಪಟ್ಟಿಯಲ್ಲೊಂದು ಸಣ್ಣ ಗುರುತು ಮಾಡಿಕೊಂಡ. “ಈ ಬಾರಿ ವ್ಯಾಟ್ಸನ್ನನ ಮಗನೂ ಚೀಟಿ ಎತ್ತುತ್ತಿದ್ದಾನೆಯೇ.”? ಎನ್ನುವುದು ಅವನ ನಂತರದ ಪ್ರಶ್ನೆಯಾಗಿತ್ತು. ಹಾಗವನು ಕೇಳುತ್ತಿದ್ದಂತೆಯೇ ಜನಜಂಗುಳಿಯ ನಡುವಿನಿಂದ ಮೇಲೆದ್ದಿತೊಂದು ಕೈ. “ಹೌದು ಸ್ವಾಮಿ, ಈ ಬಾರಿ ನಾನು ನನ್ನ ಮತ್ತು ನನ್ನ ಅಮ್ಮನ ಪರವಾಗಿ ಚೀಟಿ ಎತ್ತಲಿದ್ದೇನೆ” ಎಂದವನು ವ್ಯಾಟ್ಸನ್ನನ ಮಗ.
ಕೊಂಚ ಬೆದರಿದಂತೆ ಕಂಡು ಬರುತ್ತಿದ್ದ ಅವನನ್ನು ಹುರಿದುಂಬಿಸುತ್ತಿದ್ದ ಜನ “ನೀನು ನಿಜಕ್ಕೂ ಜವಾಬ್ದಾರಿಯುತ ಹುಡುಗ ಬಿಡು. ನಿನ್ನ ತಾಯಿಗೂ ನಿನ್ನಂಥಹ ಒಬ್ಬ ಮಗ ಬೇಕಿತ್ತು ನೋಡು” ಎನ್ನುತ್ತಿದ್ದರು. ಎಲ್ಲವೂ ಸರಿಯಾಗಿದೆ ಎನ್ನುವಂತೆ ಒಮ್ಮೆ ತಲೆಯಾಡಿಸಿದ ಸಮ್ಮರ್ಸ್, ” ಬಹುಶಃ ಎಲ್ಲರೂ ಬಂದಂತಾಯ್ತು ಎನ್ನಿಸುತ್ತದೆ. ಹಿರಿಯರಾದ ವಾರ್ನರ್ ಬಂದಿದ್ದಾರಾ ಅಂತ ಯಾರಾದರೂ ನೋಡಿ ಹೇಳಿ” ಎಂದು ಕೇಳಿದ. “ಇಲ್ಲಿದ್ದೇನೆ ಮಿಸ್ಟರ್ ಸಮ್ಮರ್ಸ್” ಎನ್ನುವ ವೃದ್ಧನ ಮಾತುಗಳಿಗೆ ಸಮ್ಮರ್ಸ್ ಸಣ್ಣದ್ದೊಂದು ತೃಪ್ತಿಕರ ನಗೆ ನಕ್ಕ. ಸಮ್ಮರ್ಸ್ ಕೊನೆಯ ಬಾರಿ ನಾಮಪಟ್ಟಿಯನ್ನು ಪರೀಶೀಲಿಸಿ ಮುಗಿಸುತ್ತಿದ್ದಂತೆ ನೆರೆದಿದ್ದ ಜನರಲ್ಲೊಂದು ಗಾಢ ಮೌನ ಆವರಿಸಿತು. ಒಮ್ಮೆ ತನ್ನ ಗಂಟಲನ್ನು ಸರಿಪಡಿಸಿಕೊಂಡ ಸಮ್ಮರ್ಸ್, “ಸರಿ ಈಗ ಎಲ್ಲರೂ ಈ ವರ್ಷದ ಚೀಟಿ ಎತ್ತುವಿಕೆಯ ಆಚರಣೆಗೆ ಸಿದ್ಧರಾಗಿ. ನಾನೀಗ ಒಂದೊಂದಾಗಿ ಹೆಸರುಗಳನ್ನು ಕರೆಯಲಾರಂಭಿಸುತ್ತೇನೆ. ಮೊದಲಿಗೆ ಪ್ರತಿಯೊಂದು ಕುಟುಂಬದ ಯಜಮಾನರು ಚೀಟಿಯನ್ನು ಎತ್ತಲಿದ್ದಾರೆ. ಇಲ್ಲಿ ನೆರೆದಿರುವ ಎಲ್ಲರೂ ಚೀಟಿಯೆತ್ತಿದ ನಂತರವೇ ಚೀಟಿಯನ್ನು ತೆರೆದುನೋಡುವ ಅವಕಾಶ. ಅಲ್ಲಿಯವರೆಗೆ ಯಾರೂ ಸಹ ತಾವು ಎತ್ತಿರುವ ಚೀಟಿಯನ್ನು ತೆರೆದು ನೋಡುವಂತಿಲ್ಲ ಎನ್ನುವುದು ಸರ್ವರಿಗೂ ತಿಳಿದಿದೆಯಲ್ಲವೇ..”? ಎಂದ.
ಚೀಟಿ ಎತ್ತುವಿಕೆಯ ಆಚರಣೆ ಹಳ್ಳಿಗರಿಗೆ ಹೊಸದೇನೂ ಅಲ್ಲ. ಅದರ ನಿಯಮಗಳೂ ಸಹ ಅವರಿಗೆ ಅಪರಿಚಿತವೇನಲ್ಲ. ಹಾಗಾಗಿ ಅಲ್ಲಿ ನೆರೆದಿದ್ದ ಅರ್ಧದಷ್ಟು ಜನ ಸಮ್ಮರ್ಸನ ಮಾತುಗಳನ್ನು ಕೇಳಿಸಿಕೊಳ್ಳಲೇ ಇಲ್ಲ. ಹೆಚ್ಚಿನವರು ಅಲ್ಲಿ ಮೌನವಾಗಿ ನಿಂತಿದ್ದರು. ಸುತ್ತಮುತ್ತ ನೋಡದೆ ಉಗುಳು ನುಂಗುತ್ತ ನಿಂತಿದ್ದ ಜನರತ್ತ ಒಮ್ಮೆ ನೋಡಿದ ಸಮ್ಮರ್ಸ ತನ್ನ ಒಂದು ಕೈಯನ್ನು ಗಾಳಿಯಲ್ಲಿ ಎತ್ತಿ “ಆಡಮ್ಸ್” ಎನ್ನುತ್ತ ಮೊದಲ ಹೆಸರನ್ನು ಕೂಗಿದ. ತನ್ನ ಹೆಸರನ್ನು ಕೇಳುತ್ತಲೇ ಜನರ ನಡುವಿನಿಂದ ಓಡುತ್ತ ತನ್ನತ್ತ ಬಂದಿದ್ದ ಆಡಮ್ಸ್ ನನ್ನು ನೋಡಿದ, ಸಮ್ಮರ್ಸ್ “ನಮಸ್ಕಾರ ಆಡಮ್ಸ್” ಎನ್ನುತ್ತ ಮುಗುಳ್ನಕ್ಕ. ಪ್ರತಿಯಾಗಿ “ನಮಸ್ಕಾರ ಸಮ್ಮರ್ಸ್” ಎಂದು ನಕ್ಕ ಆಡಮ್ಸ್ ನ ನಗೆಯಲ್ಲೊಂದು ನಾಟಕೀಯತೆ ಎದ್ದು ಕಾಣುತ್ತಿತ್ತು. ಮೂರು ಕಾಲಿನ ಪೀಠದ ಮೇಲಿಟ್ಟಿದ್ದ ಕಪ್ಪು ಪೆಟ್ಟಿಗೆಯಲ್ಲಿ ತನ್ನ ಕೈಯನ್ನು ಇಳಿಬಿಟ್ಟು ಅಲ್ಲಿದ್ದ ನೂರಾರು ಚೀಟಿಗಳ ಪೈಕಿ ಒಂದು ಚೀಟಿಯನ್ನೆತ್ತಿಕೊಂಡ ಆಡಮ್ಸ್. ತನ್ನ ಮುಷ್ಟಿಯಲ್ಲಿ ಚೀಟಿಯನ್ನು ಬಿಗಿಯಾಗಿ ಹುದುಗಿಸಿಟ್ಟುಕೊಂಡ ಚೀಟಿಯನ್ನು ತೆರೆದು ನೋಡುವುದು ಸಂಪ್ರದಾಯ ವಿರೋಧಿಯೆನ್ನುವುದು ಅವನಿಗೆ ತಿಳಿದಿತ್ತು. ಹಾಗೆ ಹಿಡಿದುಕೊಂಡ ಚೀಟಿಯನ್ನೆತ್ತಿಕೊಂಡು ಮರಳಿ ತನ್ನ ಸ್ವಸ್ಥಾನಕ್ಕೆ ತೆರಳಿದ ಆಡಮ್ಸ್ ತನ್ನ ಪೋಷಕರಿಂದ ಕೊಂಚ ದೂರದಲ್ಲಿ ನಿಂತುಕೊಂಡ. “ಆಲೆನ್” ಎಂದು ಮತ್ತೊಂದು ಹೆಸರನ್ನು ಕರೆದ ಸಮ್ಮರ್ಸ. ಆಲೆನ್ ಬಂದವನೇ ಚೀಟಿಯನ್ನೆತ್ತಿಕೊಂಡು ತನ್ನ ಸ್ಥಾನಕ್ಕೆ ಮರಳಿದ. ನಿಧಾನವಾಗಿ ಚೀಟಿ ಎತ್ತುವಿಕೆಯ ಪ್ರಕ್ರಿಯೆ ವೇಗವನ್ನು ಪಡೆದುಕೊಂಡಿತು. “ಅಂಡರ್ಸನ್,ಬೆಂಥಾಮ್” ಎನ್ನುತ್ತ ಒಂದೊಂದಾಗಿ ಹೆಸರುಗಳನ್ನು ಕೂಗತೊಡಗಿದ ಸಮ್ಮರ್ಸ್
(ಮು೦ದುವರೆಯುವುದು)
Trackbacks & Pingbacks