ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 26, 2016

3

ಬ್ರಹ್ಮರ್ಷಿ ನಾರಾಯಣ ಗುರುಗಳ ಮೇಲೇಕೆ ಬೌದ್ಧಿಕ ವಿಧ್ವಂಸಕರ ವಕ್ರದೃಷ್ಟಿ?

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ
narayanaguru-24-1472006537ಕೆಲವರ್ಷಗಳ ಹಿಂದೆ ಉತ್ತರ ಭಾರತದ ಎಲ್ಲೋ ಬಾಂಬ್ ಸ್ಪೋಟಿಸಿದವರನ್ನು ಹಿಡಿಯಲು ಭಯೋತ್ಪಾದನಾ ನಿಗ್ರಹ ದಳ ಮಂಗಳೂರಿಗೆ ಆಗಮಿಸಿತ್ತು. ಭಯೋತ್ಪಾದಕರು ತಲೆಮರೆಸಿಕೊಂಡಿದ್ದಾರೆ ಎನ್ನಲಾದ ಉಲ್ಲಾಳ ಪ್ರದೇಶದ ಒಂದು ಊರೊಳಗೂ ಅವರು ನುಗ್ಗಿ ಭಯೋತ್ಪಾದಕರನ್ನೂ ಹಿಡಿದಿದ್ದರು. ಆದರೆ ಭಯೋತ್ಪಾದನಾ ನಿಗ್ರಹ ದಳವೆಂಬ ಚಾಲಾಕಿಗಳ ತಂಡವನ್ನು ಸ್ಥಳೀಯರು ಊರಿಂದ ಜಪ್ಪಯ್ಯ ಎಂದರೂ ಹೊರಹೋಗಬಿಡಲಿಲ್ಲ. ಜನರು ಕಾಶ್ಮೀರದಲ್ಲಿ ಕಲ್ಲೆಸೆಯುವವರಂತೆ ಅಧಿಕಾರಿಗಳಿದ್ದ ಕಾರುಗಳತ್ತ ಕಲ್ಲೆಸೆದರು, ಟಯರುಗಳನ್ನು ಸುಟ್ಟು ರಸ್ತೆಗೆಸೆದರು. ಹೀಗೆ ಮಾಡಿದವರೇನೂ ಬಾಂಗ್ಲಾ ವಲಸಿಗರಲ್ಲ. ಲಷ್ಕರ್ ತೊಯಿಬಾದವರಲ್ಲ. ಎಲ್ಲರೂ ಕರಾವಳಿಯ ಬ್ಯಾರಿಗಳೆಂಬ ಸ್ಥಳೀಯ ಮುಸ್ಲಿಮರು. ಶಂಕಿತ ಭಯೋತ್ಪಾದಕನೂ ತಮ್ಮಂತೆ ಒಬ್ಬ ಮುಸಲ್ಮಾನ ಎಂಬ ಒಂದೇ ಒಂದು ಕಾರಣಕ್ಕೆ ಸ್ಥಳೀಯರು ಹಾಗೆ ವರ್ತಿಸಿದ್ದರು. ಆದರೂ ನಮ್ಮಲ್ಲಿ ಭಯೋತ್ಪಾದನೆಗೆ ಧರ್ಮವಿಲ್ಲ! ವಿಚಿತ್ರವೆಂದರೆ ಆಗ ಕರಾವಳಿಯ ರಕ್ಷಕರೆಂಬಂತೆ ವರ್ತಿಸುವ ಮಂಗಳೂರಿನ ಸಮಸ್ತ ಬುದ್ಧಿಜೀವಿಗಳು, ಬಾಂಬುಗಳನ್ನೇ ಅಕ್ಷರಗಳಾಗಿ ಬರೆಯುವವರಾರೂ ‘ಬ್ಯಾರಿಗಳು ಬಲ್ಲವರಾಗಬೇಕು’ ಎಂದು ತಲೆಕೆಟ್ಟವರಿಗೆ ಬುದ್ಧಿಹೇಳಲಿಲ್ಲ.

ಕರಾವಳಿಯ ಕೆಲವು ಕೃಷಿ ಪ್ರದೇಶವನ್ನೊಮ್ಮೆ ನೋಡಬೇಕು. ಅಲ್ಲಿ ಸಮೃದ್ಧ ಭತ್ತದ ಗದ್ದೆಯಿರುತ್ತದೆ. ದನದ ಕೊಟ್ಟಿಗೆಯಿರುತ್ತದೆ. ಭಾಕಿಮಾರು ಗದ್ದೆ ಎಂಬ ದೇವರ ಗದ್ದೆಗಳೂ ಇರುತ್ತವೆ. ನೇಗಿಲು-ನೊಗಗಳೂ ಇರುತ್ತವೆ. ದನಗಳು ಓಡಾಡುವ ಕಟ್ಟಪುಣಿಗಳೂ ಇರುತ್ತವೆ. ಆದರೆ ದನಗಳ ಸುಳಿವಿಲ್ಲ. ಈ ದನಗಳೆಲ್ಲಿ ಹೋದವು ಎಂದು ಆ ಮನೆಯವರನ್ನೊಮ್ಮೆ ವಿಚಾರಿಸಿ ನೋಡಿದರೆ ಎಲ್ಲರೂ ಹೇಳುವುದು ಒಂದೇ ಮಾತು. ಆತ ಅನಕ್ಷರಸ್ಥನಾಗಿರಬಹುದು, ಭಜರಂಗದಳ-ಸಂಘಪರಿವಾರ ಗೊತ್ತಿಲ್ಲದವನೂ ಆಗಿರಬಹುದು. ಎಲ್ಲರೂ ಹೇಳುವುದು ಒಂದೇ ಉತ್ತರ ‘ರಾತ್ರಿ ಬ್ಯಾರಿಗಳು ಬಂದು ಕದ್ದುಕೊಂಡುಹೋದರು ಮಾರ್ರೆ, ಎಂಥಾ ಅವಸ್ತೆ ನೋಡಿ’ ಅವರೆಲ್ಲರ ಪ್ರಕಾರ ದನ ಕದಿಯುವವರೆಲ್ಲರೂ ಬ್ಯಾರಿಗಳಲ್ಲದೆ ಬೇರಾರೂ ಅಲ್ಲ. ಆಗ ಕೂಡಾ ಹಗಲು ಹೊತ್ತಲ್ಲಿ ಡಿ ಸಿ ಕಚೇರಿಯ ಎದುರು ಕೋಮುವಾದದ ಬಗ್ಗೆ ಮಾತನಾಡಿ ಸಂಜೆ ಹೊತ್ತಿಗೆ ಹೊಳೆದಂಡೆಯ ರೆಸಾರ್ಟುಗಳಲ್ಲಿ ಹೆಂಡ ಹೀರುವ ಬುದ್ಧಿಜೀವಿಗಳು, ಬಾಂಬುಗಳನ್ನೇ ಅಕ್ಷರ ರೂಪದಲ್ಲಿ ಕಟ್ಟಿಕೊಡುವವರಾರೂ ‘ಬ್ಯಾರಿಗಳು ಬಲ್ಲವರಾಗಬೇಕು’ ಎನ್ನಲಿಲ್ಲ.

ಕರಾವಳಿಯ ಯಾವನೇ ಸಭ್ಯ ವ್ಯಕ್ತಿ ಇಂದು ಬ್ಯಾರಿಗಳೊಡನೆ ವ್ಯವರಿಸುವುದು ಅಪಾಯಕಾರಿ ಎಂದೇ ಭಾವಿಸುತ್ತಾನೆ. ಈ ಸ್ಥಿತಿ ಯಾಕೆ ಬೆಳೆಯಿತು? ಇವನ್ನೆಲ್ಲಾ ಬ್ಯಾರಿ ಮುಖಂಡರು, ಬ್ಯಾರಿಗಳ ಹಿತೈಷಿಗಳು ಗಂಭೀರ ಎಂದು ಪರಿಗಣಿಸಿಲ್ಲವೇಕೆ? ವಾಸ್ತವ ಹೀಗಿದ್ದರೂ ಯಾವ ದೊಣ್ಣೆನಾಯಕನೂ ‘ಬ್ಯಾರಿಗಳು ಬಲ್ಲವರಾಗಬೇಕು’ ಎಂದು ಬುದ್ಧಿವಾದ ಹೇಳಲಿಲ್ಲ. ಇಷ್ಟೇ ಅಲ್ಲ. ಕರಾವಳಿಯಲ್ಲಿ ಉದ್ದುದ್ದಕ್ಕೆ ಮಹಿಳಾ ಸಮಾನತೆ, ಮಹಿಳಾ ಹಕ್ಕುಗಳ ಬಗ್ಗೆ ಮಾತಾಡುವ ಬುದ್ಧಿವಂತರಾರೂ ಬ್ಯಾರಿ ಸಮಾಜದ ಪುಟ್ಟಮಕ್ಕಳ ಶಿಕ್ಷಣದ ಬಗ್ಗೆ ಮಾತಾಡಿಲ್ಲ. ಪ್ರೈಮರಿಗೆ ಹೋಗುವ ಮಕ್ಕಳಿಗೇಕೆ ಬುರ್ಖಾ ಎಂದು ಯಾರೂ ಕೇಳಿಲ್ಲ. ಅದೂ ಬಿಡಿ ಕೊಲ್ಲಿಗೆ ಹೋದವರು “ಭಯೋತ್ಪಾದನೆಯ ಕೂಪಕ್ಕೆ ಬೀಳದಿರಿ’ ಎಂದು ಕಿವಿಮಾತು ಹೇಳಿಲ್ಲ. ಯಾರೂ ‘ಜಾಕಿರ್ ನಾಯಕನೆಂಬವನು ಸಮಾಜ ಕಂಟಕ, ಆತನಿಂದ ಬ್ಯಾರಿಗಳು ದೂರವಿರಬೇಕು’ ಎಂದು ಹೇಳಿಲ್ಲ. ಬದಲಿಗೆ ಕಳೆದ ಬೇಸಿಗೆಯಲ್ಲಿ ಮಂಗಳೂರಿನ ಹಣವಂತ ಬ್ಯಾರಿಗಳು ಆತನ ಸ್ವಾಗತಕ್ಕೆ ನಿಂತುಬಿಟ್ಟಿದ್ದರು. ಆಗಲೂ ಕರಾವಳಿಯ ಬುದ್ಧಿಜೀವಿಗಳು, ಭಯೋತ್ಪಾದನೆಯ ವಿರುದ್ಧ ಬರೆಯುವವರಾರೂ ಬ್ಯಾರಿಗಳು ಬಲ್ಲವರಾಗಬೇಕು ಎನ್ನಲಿಲ್ಲ.

ವಿಚಿತ್ರವೆಂದರೆ ಈಗ ಅವರೆಲ್ಲರೂ ಕರಾವಳಿಯ ಬಿಲ್ಲವರೆಲ್ಲರೂ ಬಲ್ಲವರಾಗಬೇಕು ಎನ್ನುತ್ತಿದ್ದಾರೆ. ನಿಜಕ್ಕೂ ಬಲ್ಲವರಾಗಬೇಕಾದವರು ಬಿಲ್ಲವರಾ? ಬ್ಯಾರಿಗಳಾ? ಯಾರು ಬಲ್ಲವರಾದರೆ ಕರಾವಳಿ ಉಳಿಯುತ್ತದೆ, ಕರಾವಳಿ ಶಾಂತಿಯ ಗೂಡಾಗುತ್ತದೆ ಎಂಬುದು ಗೊತ್ತಿದ್ದರೂ ಕೆಲವರು ಬಿಲ್ಲವರತ್ತಲೇ ಬೊಟ್ಟು ಮಾಡುತ್ತಿದ್ದಾರೆ. ಅಂದರೆ ಈಗ ಕರಾವಳಿಯ ಬಿಲ್ಲವರು ಬುದ್ಧಿಜೀವಿಗಳ ಟಾರ್ಗೇಟ್ ಆಗಿದ್ದಾರೆ. ಬೆಂಗಳೂರಲ್ಲಿ ಕುಳಿತವರು ಅವರನ್ನು ಟಾರ್ಗೇಟ್ ಮಾಡಿದ್ದಾರೆ. ಕರಾವಳಿಯ ಅತಿ ದೊಡ್ಡ ಸಮುದಾಯ ಬಿಲ್ಲವರು ಬಲ್ಲಿದರಾಗದೇ ಇದ್ದಿದ್ದರೆ, ಬಿಲ್ಲವರು ದಿಕ್ಕು ತಪ್ಪಿದ್ದರೆ ಕರಾವಳಿಯ ಪರಿಸ್ಥಿತಿ ಇಂದು ಹೀಗಿರುತ್ತಿತ್ತೇ? ಕರಾವಳಿಯ ಮತಾಂಧ ಶಕ್ತಿಗಳನ್ನು ಮಟ್ಟಹಾಕುವಲ್ಲಿ ಬಿಲ್ಲವರ ಶ್ರಮವನ್ನು ಯಾರಾದರೂ ಮರೆಯಲಾದೀತೆ? ಅವರ ಬಲಿದಾನದ ಪರಂಪರೆಯ ಬಗ್ಗೆ ಯಾವ ಬಿಲ್ಲವೇತರ ತಾನೇ ಎರಡು ಮಾತಾಡಬಲ್ಲ? ಪ್ರಾಮಾಣಿಕತೆ ಮತ್ತು ಮುಗ್ದತೆಯ ಮೂರ್ತರೂಪದಂತಿರುವ ಬಿಲ್ಲವರ ಧರ್ಮ ನಿಷ್ಠೆ, ದೇಶನಿಷ್ಠೆ ಬುದ್ಧಿಜೀವಿಗಳ ಆಡಿಕೊಳ್ಳುವ ಸರಕಾಯಿತೇ? ಇವರಿಗೆಲ್ಲಾ ಬಿಲ್ಲವರಾರೆಂದಾದರೂ ಗೊತ್ತೇ?

ಸಂಶೋಧಕರು ಬಿಲ್ಲವರ ಮೂಲದ ಬಗ್ಗೆ ಮೂರು ವಾದಗಳನ್ನು ಮಂಡಿಸುತ್ತಾರೆ. ಅವರನ್ನು ಬಿಲ್ಲುಗಾರರು ಎಂದವರಿದ್ದಾರೆ, ನಾಟಿ ವೈದ್ಯರು ಎಂದವರಿದ್ದಾರೆ, ಒಂದು ಕಾಲದಲ್ಲಿ ಪೂಜೆಪುನಸ್ಕಾರಗಳನ್ನು ಮಾಡುತ್ತಿದ್ದ ಪೂಜಾರಿಗಳೆಂದೂ ಹೇಳಿದವರಿದ್ದಾರೆ. ಈ ವಾದಗಳೇನೇ ಇರಲಿ, ಎಲ್ಲಾ ವಾದಗಳನ್ನು ಪರಿಗಣಿಸಿದರೂ ಅವರು ಬಲ್ಲಿದರೇ ತಾನೇ? ಬ್ಯಾರಿಗಳಿಗೇಕೆ ಅವರ ಬಗ್ಗೆ ಚಿಂತೆ? ಅಥವಾ ಹೆದರಿಕೆ? ಕೋಟಿಚೆನ್ನಯ್ಯರ ಕಾಲದಿಂದಲೂ ಯಾವೊಬ್ಬ ಬಿಲ್ಲವನೂ ಸಜ್ಜನರಿಗೆ ಕಂಟಕವಾಗಿ ಬದುಕಿದ ಉದಾಹರಣೆಗಳಿಲ್ಲ. ವಿಪರ್ಯಾಸವೆಂದರೆ ತಾನೊಬ್ಬ ಬಿಲ್ಲವರ ಬೌದ್ಧಿಕ ನಾಯಕ ಎಂದುಕೊಳ್ಳುವ ವ್ಯಕ್ತಿ ಇಂದು ಬಿಲ್ಲವರ ನಿಷ್ಠೆಯ ಬಗ್ಗೆ ಸಂದೇಹ ಪಡುತ್ತಿದ್ದಾನೆ. ಎಲ್ಲಿ ಅರಸುತನದ ದಬ್ಬಾಳಿಕೆಯ ವಿರುದ್ಧ ಸೆಟೆದುನಿಂತ ಕೋಟಿ ಚೆನ್ನಯ್ಯರು? ಎಲ್ಲಿಯ ಅರಸುಗಳ ಬೂಟುನೆಕ್ಕುವ ಗೂಂಡಾಗಿರಿ ಸ್ವಭಾವದ ಅವಕಾಶವಾದಿ? ಪೇಪರಲ್ಲಿ ಬರೆಯುತ್ತಿದ್ದನೆಂಬ ಒಂದೇ ಕಾರಣಕ್ಕೆ ಇಡೀ ಸಮುದಾಯದ ಬಗ್ಗೆ ಮಾತಾಡುವ ಹಕ್ಕು ಈತನಿಗಿದೆಯೇ?

ಈಗ್ಗೆ ನಲ್ವತ್ತು ವರ್ಷಗಳ ಹಿಂದಿನವರೆಗೂ ಬಿಲ್ಲವರ ಪರಿಸ್ಥಿತಿ ಹೇಗಿತ್ತೆಂದರೆ ಎಲ್ಲಾ ದೇವಸ್ಥಾನಗಳಿಗೆ ಅವರಿಗೆ ಪ್ರವೇಶವಿರಲಿಲ್ಲ. ಶಿಕ್ಷಣದ ಕೊರತೆಯಿತ್ತು, ಜೀತದ ಬದುಕು ನಡೆಯುತ್ತಿತ್ತು. ಈ ನಲ್ವತ್ತು ವರ್ಷಗಳವರೆಗೂ ಬಿಲ್ಲವರನ್ನು ಆ ಸ್ಥಿತಿಯಲ್ಲಿ ಇಟ್ಟವರಾರು? ಆಗೇನೂ ಸಂಘಪರಿವಾರ ಕರಾವಳಿಯಲ್ಲಿ ಬಲವಾಗಿರಲಿಲ್ಲ. ಯಾವೊಬ್ಬ ಬಿಲ್ಲವನೂ ಆಗ ಸಂಘದ ಸ್ವಯಂಸೇವಕನೂ ಆಗಿರಲಿಲ್ಲ. ಆಗ ಕರಾವಳಿ ಕಮ್ಯುನಿಸ್ಟರ ಭದ್ರಕೋಟೆಯಾಗಿತ್ತು. ಹಾಗಾದರೆ  ಕಮ್ಯುನಿಸಂ ಏಕೆ ಬಿಲ್ಲವರ ಪರಿಸ್ಥಿತಿಯನ್ನು ಸುಧಾರಿಸಲಿಲ್ಲ? ಕಮ್ಯುನಿಸ್ಟರು, ಬೀಡಿ ಕಾರ್ಮಿಕರ ರಕ್ತ ಹೀರುತ್ತಾ, ಹಂಪನಕಟ್ಟೆಯ ಗೋಡೆಗಳಲ್ಲಿ ‘ಕೃಷ್ಣನೆಂಬವನು ವ್ಯಭಿಚಾರಿ, ರಾಮನೆಂಬವನು ಹೇಡಿ, ದೇವರೆಂಬುವವನೇ ಇಲ್ಲ’ ಎಂಬ ಅರ್ಥಹೀನ, ತಲೆಕೆಟ್ಟ ಬರಹಗಳನ್ನು ಬರೆಯುವುದರಲ್ಲಿ ವ್ಯಸ್ತರಾಗಿದ್ದ ಸಮಯದಲ್ಲೇ ಕರಾವಳಿಯ ಬಿಲ್ಲವ ಊಟಕ್ಕಿಲ್ಲದೆ ಪರದಾಡುತ್ತಿದ್ದ! ನೊಂದ ಬಿಲ್ಲವ ದೇವಸ್ಥಾನದ ಹೊರ ಪ್ರಾಂಗಣಕ್ಕೆ ಸುತ್ತುಹಾಕಿ ಬರುತ್ತಿದ್ದ. ಯಾವಾಗ ಸಂಘಪರಿವಾರ ಕರಾವಳಿಯಲ್ಲಿ ಬಲವಾಗತೊಡಗಿತೋ, ನಾರಾಯಣ ಗುರುಗಳನ್ನು ಹಿಂದು ಆಚಾರ್ಯ ಎಂದು ಅದು ಭಾವಿಸತೊಡಗಿತೋ ಅಂದಿನಿಂದ ಕರಾವಳಿಯಲ್ಲಿ ಬಿಲ್ಲವರ ಪರಿಸ್ಥಿತಿ ಬದಲಾಗತೊಡಗಿತು. ಕೆಲವು ಭಾಗಗಳಲ್ಲಿ ದೇವಸ್ಥಾನಗಳಿಗೆ ಪ್ರವೇಶವಿಲ್ಲದಿದ್ದ ಬಿಲ್ಲವರನ್ನು ಸಂಘಪರಿವಾರದ ಸದಸ್ಯರೇ ದೇವಸ್ಥಾನಗಳಿಗೆ ಕರೆತಂದರು. ಸಾವಿರಗಟ್ಟೆಯಲ್ಲಿ ಬಿಲ್ಲವ ಯುವಕರು ಆರೆಸ್ಸೆಸ್ ಶಾಖೆಗಳಿಗೆ ಹೋಗತೊಡಗಿದರು. ಶಾಖೆಗೆ ಹೋದವರಿಗೆಲ್ಲಿ ಮೇಲು-ಕೀಳು!? ಇಂದು ಬುದ್ಧಿಜೀವಿಗಳು ಹೇಳುವಂತೆ ನಾರಾಯಣ ಗುರುಗಳೇನು ಮಾರ್ಕ್ಸ್ ವಾದಿಗಳಾಗಿದ್ದರೇ? ಇಂದಿಗೂ ಕಟ್ಟರ್ ಅದ್ವೈತಿಗಳು ಶಂಕರಾಚಾರ್ಯರರ ನಂತರ ಬಂದ ಮಹಾ ಅದ್ವೈತಿ ಮಹಾತ್ಮರಲ್ಲಿ ರಮಣರು ಮತ್ತು ನಾರಾಯಣಗುರುಗಳು ಮಾತ್ರ ಎನ್ನುತ್ತಾರೆ. ಆದರೆ ಅದ್ವೈತ ಎಂದರೆ ಕೇಜಿಗೆಷ್ಟು ಎಂದು ಕೇಳುವ ಭಾಷಣ ಬರೆದುಕೊಡುವ ವ್ಯಕ್ತಿಗೆ ನಾರಾಯಣಗುರುಗಳು ಕೇವಲ ಬಿಲ್ಲವರ ಆಸ್ತಿಯೆಂಬಂತೆ ಕಾಣುತ್ತಾರೆ. ಏನೂ ಬೇಡ, ನಾರಾಯಣಗುರುಗಳೇಕೆ ಈಳವ ಶಿವನನ್ನು ಪ್ರತಿಷ್ಠಾಪಿಸಿದ್ದರು? ಒಂದು ವೇಳೆ ನಾರಾಯಣಗುರುಗಳು ಸೋಗಲಾಡಿ ಸೆಕ್ಯುಲರರೇ ಆಗಿದ್ದರೆ ಈಳವ ಅಲ್ಲಾನನ್ನೋ, ಈಳವ ಏಸುವನ್ನೋ ಏಕೆ ಸೃಷ್ಟಿಮಾಡಲಿಲ್ಲ? ಇಂದು ಪ್ರಚಲಿತವಿರುವ ಹಲವಾರು ಶಿವ ಸ್ತ್ರೋತ್ರಗಳಲ್ಲಿ ನಾರಾಯಣಗುರುಗಳ ಶಿವಸ್ತ್ರೋತ್ರ ಅತ್ಯದ್ಭುತವಾಗಿದೆ, ಉಳಿದ ಸ್ತ್ರೋತ್ರಗಳಿಗಿಂತ ಅದು ಎದ್ದುಕಾಣುತ್ತದೆ. “ಸೆಕ್ಯುಲರ್” ನಾರಾಯಣಗುರುಗಳಿಗೆ ಇದು ಹೇಗೆ ಸಾಧ್ಯವಾಯಿತು? ಅಲ್ಲದೆ ಸ್ವತಃ ನಾರಾಯಣಗುರುಗಳು ಸಂಸ್ಕೃತ ಬಲ್ಲವರಾಗಿದ್ದರು, ವೈದ್ಯಪದ್ಧತಿಯಲ್ಲಿ ನುರಿತವರಾಗಿದ್ದರು, ಯೋಗ ಪರಿಣತರಾಗಿದ್ದರು. ಇವೆಲ್ಲವೂ ಯಾವ ನಾರಾಯಣಗುರುಗಳನ್ನು ಬಿಲ್ಲವರ ಆಸ್ತಿ ಎಂದು ಮಂಡನೆ ಮಾಡುತ್ತಿದ್ದಾರೋ ಅಂಥ ಮಾಧ್ಯಮ ಸಲಹೆಗಾರರಿಗೆ ಇವೆಲ್ಲವೂ ಗೊತ್ತೇ ಇಲ್ಲವೇ? ಇವೆಲ್ಲಾ ಗೊತ್ತಿಲ್ಲ ಎಂದೇ ಅವರು ಸುಖಾಸುಮ್ಮನೆ ಕೋಪಾವಿಷ್ಠರಾಗುತ್ತಿರುತ್ತಾರೆಯೇ? ಈ ಮಾಧ್ಯಮ ಸಲಹೆಗಾರರೆಂದರೆ ಅಷ್ಟೊಂದು ದಡ್ಡರಿರುತ್ತಾರೆಯೇ? ಇವಿಷ್ಟು ಗೊತ್ತಿಲ್ಲದಿದ್ದರೂ ಅವರು ನಿಜವಾಗಿಯೂ ಬಿಲ್ಲವರೆಂಬುದು ಹೌದೇ?

ಇಂದಿಗೂ ಕರಾವಳಿಯ ಜನರು ಕೋಟಿ-ಚೆನ್ನಯ್ಯರನ್ನು ತಮ್ಮ ನೆಲದ ಮಹಾಪುರುಷರು ಎಂದುಕೊಳ್ಳುತ್ತಾರೆ. ಅವರ ಹುಟ್ಟೂರು ಪುತ್ತೂರಿನ ಪಂಜಕ್ಕೆ ಜಾತಿ ಭೇದವಿಲ್ಲದೆ ಜನ ದರ್ಶನಕ್ಕೆ ಹೋಗುತ್ತಾರೆ. ಇಷ್ಟಿದ್ದರೂ ಇದನ್ನು ಸಾಮರಸ್ಯ ಎಂದು ಒಪ್ಪಿಕೊಳ್ಳಲು ಕೆಲವರಿಗೆ ಕಷ್ಟ! ಅಲ್ಲದೆ ಕರಾವಳಿಯ ಬಿಲ್ಲವರಿಗೆ ತಾವು ಕೋಟಿ-ಚೆನ್ನಯ್ಯರ ಪೀಳಿಗೆಯವರು ಎಂಬ ಬಗ್ಗೆ ಭಾರೀ ಅಭಿಮಾನಗಳಿವೆ. ಅಧರ್ಮದ ವಿರುದ್ಧ ಸೆಟೆದು ನಿಲ್ಲುತ್ತಿದ್ದ, ಬಲಹೀನರಿಗೆ ಶಕ್ತಿಯಾಗುತ್ತಿದ್ದ, ಅನ್ಯಾಯವನ್ನು ಮುಲಾಜಿಲ್ಲದೆ ಪ್ರತಿಭಟಿಸುತ್ತಿದ್ದ ಕೋಟಿ-ಚೆನ್ನಯ್ಯರ ಮಾನಸಿಕತೆಯ ವಾರಿಸುದಾರರು ನಾವು ಎಂದು ಪ್ರತಿಯೊಬ್ಬ ಬಿಲ್ಲವ ಯುವಕ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಆ ಬುದ್ಧಿ ಬಿಲ್ಲವರ ಸ್ವಘೋಷಿತ ಬೌದ್ಧಿಕ ನಾಯಕ ಎಂದುಕೊಳ್ಳುವ ವ್ಯಕ್ತಿಗೆ ಜನ್ಮತಃ ಬರಲಿಲ್ಲವೆಂದರೆ ನಾವೇನು ಮಾಡೋಣ? ಕೋಟಿ-ಚೆನ್ನಯ್ಯರನ್ನು ಆದರ್ಶ ಎಂದು ಸ್ವೀಕರಿಸಿದ ಯಾವನಿಗೆ ತಾನೇ ಗೋ ಕಳ್ಳರನ್ನು, ತಮ್ಮ ಮನೆಯ ಹೆಣ್ಣುಮಕ್ಕಳನ್ನು, ಧರ್ಮದ್ರೋಹಿಗಳನ್ನು ಕ್ಷಮಿಸಲು ಸಾಧ್ಯ? ಒಂದು ವೇಳೆ ಧರ್ಮದ್ರೋಹಿಗಳ ಗೆಳೆತನ ಮಾಡಿಕೊಂಡರೆ ಆತ ಕೋಟಿ-ಚೆನ್ನಯ್ಯರ ವಾರಿಸುದಾರನಾದಾನೇ? ಈಗ ಬೆಂಗಳೂರಿನಲ್ಲಿ ಕುಳಿತು ಧರ್ಮದ್ರೋಹಿಗಳ ಪರ ವಕಾಲತ್ತು ವಹಿಸುತ್ತಿರುವವರಿಗೆ ಆ ಹಕ್ಕಿದೆಯೇ?

ಕರಾವಳಿಯ ಬಿಲ್ಲವರು ಸಂಘಪರಿವಾರದತ್ತ ವಾಲಲು ಮುಖ್ಯವಾದ ಕಾರಣ ಅವರ ಮೂಲಪುರುಷರ ಬಗೆಗಿನ ಭಕ್ತಿ, ಪ್ರೀತಿ ಮತ್ತು ಶ್ರದ್ಧೆ. ಸಂಘವಲ್ಲದೆ ಇನ್ನಾವ ಸಂಘಟನೆಯೂ ಆ ಆದರ್ಶವನ್ನು ಜಾಗೃತಗೊಳಿಸುವ ಸ್ಥಿತಿಯಲ್ಲಿ ಸದ್ಯಕ್ಕಿಲ್ಲ. ಅಂಥಲ್ಲಿ ಬಿಲ್ಲವರು ಸಂಘವನ್ನಲ್ಲದೆ ಇನ್ನಾವ ಸಿದ್ಧಾಂತವನ್ನು ಅಪ್ಪಿಕೊಳ್ಳಬೇಕಿತ್ತು? ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಬಿಲ್ಲವರು ದಸರಾ ನಡೆಸಲು ಬಿಡದೆ ಇನ್ನೇನು ಉರೂಸ್ ನಡೆಸಲು ಬಿಡಬೇಕಿತ್ತೇ? ದಸರಾ ಮೂಲಕ ನಾರಾಯಣಗುರುಗಳ ಕನಸು ಸಾಕಾರವಾಗಿಲ್ಲವೇ? ಕರಾವಳಿಯ ಜನರು ಜಾತಿಯ ಹಂಗಿಲ್ಲದೆ ತಮ್ಮ ಊರಿನ ಉತ್ಸವದಂತೆ ಅಲ್ಲಿ ಜೊತೆಯಾಗುತ್ತಾರೆ. ಒಂದು ವೇಳೆ ಕುದ್ರೋಳಿಯಲ್ಲಿ ವೈಭವದ ದಸರಾ ನಡೆಯದಿರುತ್ತಿದ್ದರೆ ಗೋಕರ್ಣನಾಥ ಕ್ಷೇತ್ರ ಇನ್ನೊಂದು ಅಮ್ನೆಷ್ಟಿಯೋ, ಇನ್ನೊಂದು ಜೆಎನ್ಒ ನೋ ಆಗುತ್ತಿರಲಿಲ್ಲವೇ? ಅವೆಲ್ಲವನ್ನೂ ಅರಿಯದ ಕೆಲವು ಚಿಲ್ಲರೆ ಬೆರಳೆಣಿಕೆಯ ಬುದ್ಧಿಜೀವಿ ಬಿಲ್ಲವರು ಗೋಕರ್ಣನಾಥನ ಜೀರ್ಣೋದ್ಧಾರಕ್ಕೆ ಶೃಂಗೇರಿ ಸ್ವಾಮಿಗಳನ್ನು ಕರೆಸಿ ನಾರಾಯಣ ಗುರುಗಳ ಸಮಾಜವಾದಕ್ಕೆ ಎಳ್ಳುನೀರು ಬಿಡಲಾಯಿತು ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ! ವಿಚಿತ್ರ ಎನಿಸುತ್ತದೆ. ಗೋಕರ್ಣನಾಥನ ಹೊಸ ದೇವಸ್ಥಾನವನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದವರು ವ್ಯಕ್ತಿ ಪೂಜೆಯ ಸಂಕೇತದಂತಿದ್ದ, ಭಾರತೀಯ ಫಿಲಾಸಫಿಯನ್ನು ಶತಾಯಗತಾಯ ತೆಗಳುತ್ತಿದ್ದ, ದೇವರ ಬಗ್ಗೆ ನಂಬಿಕೆಯಿಲ್ಲದ ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು. ಅಪಾತ್ರರಿಂದ ದೇವಸ್ಥಾನ ಉದ್ಘಾಟನೆಯಾದ ಕಾರಣಕ್ಕೆ ಪ್ರಧಾನಿಗಳು ಅಕಾಲ ಮೃತ್ಯುವಾದರು ಎಂದು ಇಂದಿಗೂ ಕರಾವಳಿಯ ಜನ ಮಾತಾಡಿಕೊಳ್ಳುತ್ತಿದ್ದಾರೆ. ಸಾಧಾರಣವಾಗಿ ಎಲ್ಲೂ ಕಾರ್ಯಕ್ರಮಕ್ಕೆ ಹೋಗದ ಶಂಕರ ಪೀಠದ ಶೃಂಗೇರಿ ಸ್ವಾಮಿಗಳು ನಾರಾಯಣಗುರುಗಳ ಮೇಲಿನ ಭಕ್ತಿಯಿಂದ ಗೋಕರ್ಣನಾಥ ಕ್ಷೇತ್ರಕ್ಕೆ ಬಂದರೆಂದರೆ ಅದು ಸಮರಸ ಸಮಾಜದ ಪ್ರತೀಕವಲ್ಲವೇ?

ಸಂಘಪರಿವಾರದ ಹೊರತಾಗಿ ಬಿಲ್ಲವ ಸಮಾಜದ ಏಳಿಗೆಯ ಕನಸು ಕಂಡವರು ಜನಾರ್ದನ ಪೂಜಾರಿಯವರು. ವಯಸ್ಸಾದಂತೆ ಕೊಂಚ ನಾಲಗೆ ಸಡಿಲವಾದ, ಹೊಳೆದದನ್ನು ಆಲೋಚಿಸದೆ ಮಾತಾಡಿಬಿಡುವ ಜನಾರ್ದನ ಪೂಜಾರಿಯವರ ಬಗ್ಗೆ ಏನೇ ಭಿನ್ನಾಭಿಪ್ರಾಯವಿರಲಿ. ಮಂಗಳೂರಿನ ದಸರಾವನ್ನು ದೇಶವ್ಯಾಪಿ ಹೆಸರು ಮಾಡಿದ ಶ್ರೇಯಸ್ಸು ಅವರಿಗೇ ಸಲ್ಲಬೇಕು. ಬಿಲ್ಲವರಲ್ಲಿ ರಾಜಕೀಯ ಶಕ್ತಿಯೂ ಇದೆ ಎಂಬುದನ್ನು ತೋರಿಸಿಕೊಟ್ಟವರು ಪೂಜಾರಿಗಳು. ಬಿಸಿರಕ್ತದ ಬಿಲ್ಲವ ಯುವಕರು ನಾಸ್ತಿಕ ಕಮ್ಯುನಿಸಂ ಬಲೆಗೆ ಸಿಕ್ಕು ಮಾದ್ಯಮ ಸಲಹೆಗಾರರಂತಾಗಬಾರದು ಎಂಬುದನ್ನು ತಡೆದವರವರು. ಕಾಂಗ್ರೆಸಲ್ಲಿದ್ದರೂ ದೇವಭಕ್ತರಾಗಿರಬಹುದು ಎಂಬುದನ್ನು ತೋರಿಸಿ ನಾರಾಯಣಗುರುಗಳ ತತ್ವದಂತೆ ಬದುಕಿ ತೋರಿಸಿದವರು ಅವರು. ಕೋಟಿ-ಚೆನ್ನಯ್ಯರ ಗರಡಿಗಳ ಜೊತೆಗೆ ಈಳವ ಶಿವನ ಅವಶ್ಯಕತೆಯೂ ಇದೆಯೆಂದು ಸಾರಿ ರಾಜಕೀಯ ನಡೆಗಾಗಿ ನಕಲಿ ಸೆಕ್ಯುಲರಿಸಮ್ಮಿನ ವೇಷ ಧರಿಸಿದರೂ ಅವರೇ. ಅಂದರೆ ಪೂಜಾರಿಗಳು ಬೆಂಗಳೂರಿನಲ್ಲಿ ಕುಳಿತವರಂತೆ ಖಾಲಿ ಆಸಾಮಿಯಲ್ಲ. ಶೃಂಗೇರಿ ಗುರುಗಳಿಂದ ಕುದ್ರೋಳಿ ದೇವಾಲಯದ ಉದ್ಘಾಟನೆ ಮಾಡಿಸಿದ್ದಕ್ಕೆ ಅವರು ವರ್ಣಾಶ್ರಮ ವ್ಯವಸ್ಥೆಯನ್ನು ಪಾಲಿಸುತ್ತಿದ್ದಾರೆ ಎಂಬ ನೆಪವೊಡ್ಡಿ ಆಕ್ಷೇಪ ವ್ಯಕ್ತಪಡಿಸಿ ತಾವು ಮಾಡುತ್ತಿರುವುದೂ ಬಿಲ್ಲವರನ್ನು ಎತ್ತಿಕಟ್ಟುವ ಜಾತಿವಾದ ಎನ್ನುವ ನೆನಪು ಪೂಜಾರಿಯವರಿಗೆ ಬಂದಿರಲಿಲ್ಲ.

ಈಗ ಕುದ್ರೋಳಿ ದೇವಸ್ಥಾನವನ್ನು ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ಸಂಘಟನೆಯ ಕೇಂದ್ರವನ್ನಾಗಿ ಬೆಳೆಸಬೇಕೆಂದು ಹುನ್ನಾರ ನಡೆಸುವವರಿಗೆ ಸಂಘಪರಿವಾರ ಸಮಾಜವನ್ನು ಒಡೆಯುತ್ತಿದೆ ಎನ್ನಲು ಯಾವ ನೈತಿಕ ಹಕ್ಕಿದೆ? ದಲಿತರು, ಹಿಂದುಳಿದ ಜಾತಿಗಳು ಎನ್ನುವಲ್ಲೇ ಅವರ ಮನೋಭಾವ ಪ್ರಕಟವಾಗುವುದಿಲ್ಲವೆ? ಹಿಂದೂಗಳನ್ನು ಜಾತಿಯ ಆಧಾರದಲ್ಲಿ ಒಡೆಯುವ ಇವರ ಹುನ್ನಾರಕ್ಕೆ ಸಂಘಪರಿವಾರ ಅಡ್ಡಲಾಗಿದೆಯೆಂಬ ಏಕೈಕ ಕಾರಣಕ್ಕಾಗಿ ಸಂಘಪರಿವಾರದ ವಿರುದ್ಧ ದ್ವೇಷ ಕಾರುವ ಇಂತಹ ಮನಃಸ್ಥಿತಿಗಳಿಂದಲೇ ಸಮಾಜದಲ್ಲಿ  ಕ್ಷೋಭೆ ಉಂಟಾದುದಲ್ಲವೇ? ದನಕಳ್ಳನೊಬ್ಬ ಸಾರ್ವಜನಿಕರಿಂದ ಏಟು ತಿಂದಾಗ ಅವನು ಬಿಲ್ಲವನೆಂಬ ಕಾರಣಕ್ಕೆ ಉದ್ದುದ್ದ ಲೇಖನ ಬರೆಯುವ ಪ್ರಭೃತಿಗಳಿಗೆ ಅದೇ ಬಿಲ್ಲವನೊಬ್ಬ ದನಗಳ್ಳರಿಂದ ಕೊಲೆಯಾದಾಗ ಯಾಕೆ ಕಣ್ಣೀರು ಬಂದಿಲ್ಲ? ಪರಶುರಾಮ ಸೃಷ್ಟಿಯ ನೆಲ ಕಂಡ ಅದೈತವಾದಿಯೊಬ್ಬರನ್ನು ಬಿಲ್ಲವರಿಗಷ್ಟೇ ಸೀಮಿತಗೊಳಿಸುವ ಸಂಕುಚಿತತೆಗೆ ಈ ಸೆಕ್ಯುಲರ್‌ವಾದಿಗೆ! ದೇವಾಲಯಗಳಿಂದ ಗರಡಿಗೆ ಬನ್ನಿ ಎನ್ನುವ ಮೌಢ್ಯ ನಿಷೇಧ ಕಾನೂನಿನ ಈ ಅಧ್ವರ್ಯು, ದೈವಗಳಿಗೆ ಅರ್ಪಿಸುವ ಹರಕೆಗಳನ್ನು ಹೇಗೆ ಒಪ್ಪುತ್ತಾರೆ? ಬಿಲ್ಲವರನ್ನು ಹಿಂದೂ ಸಮಾಜದಿಂದ ಪ್ರತ್ಯೇಕಿಸಿ ತಮ್ಮ ರಾಜಕೀಯದ ಬೇಳೆಬೇಯಿಸಿಕೊಳ್ಳುವ ಹುನ್ನಾರವಿದಲ್ಲವೇ? ಅಂಥಾ ನಾರಾಯಣಗುರುಗಳ ವ್ಯಕ್ತಿತ್ವವನ್ನೇ ತಿರುಚಿ ಸಮಾಜವಾದಿ ಮಾಡುವ ದುಷ್ಟಬುದ್ಧಿ ಈ ದೊಡ್ಡವರಿಗೆ? ಅದಕ್ಕಾಗಿ ಇಷ್ಟೊಂದು ಹಸೀ ಸುಳ್ಳುಗಳಾ?

3 ಟಿಪ್ಪಣಿಗಳು Post a comment
  1. ಆಗಸ್ಟ್ 26 2016

    ಅಂದ್ ಮಸ್ತ್ ವಿಚಾರ ಸತ್ಯೋ, ಅವ್ವು ಬಜೀ ಬಿಲ್ಲವರೆಂದ್ ಅತ್ತ್ , ಸಮಾಜೋದಾ ಮಾಂತಾ ಜಾನಂಗೋ ಟ್ಲಾ ಉಂಡು. ಇನಿ ಕುಡ್ಲ ವಾ ಊರು ಪೊಂಡಾಲ ಪೆತ್ತ ಸಾದಿ ಬರಿಟ್ ತಿಕುನಾ ಕಮ್ಮಿ. ಎರ್ಲೆನ್ಳ ದೂರುದ್ ಸುಖ ಈಜಿ ನಮ ಜನೊಕುಲೆ ಮಂತಿ ಗುಂಡಿ ಉಂದು.

    ಉತ್ತರ
  2. Umesh
    ಆಗಸ್ಟ್ 26 2016

    ಅತ್ಯುತ್ತಮ ಲೇಖನ. ಶ್ರೀ ನಾರಾಯಣ ಗುರುಗಳು ಅದ್ವೈತ ಸಿದ್ಧಾಂತದ ಮೇರು ಶಿಖರ. ಶ್ರೀ ಶಂಕರರ ನಂತರ ಬಂದ ಮಹಾನ್ ದಾರ್ಶನಿಕ. ನಾರಾಯಣ ಗುರುಗಳು ಬರೆದ ‘ದರ್ಶನಮಾಲಾ’ ನೂರು ಶ್ಲೋಕಗಳನ್ನು ಒಳಗೊಂಡಿರುವ ಅದ್ವೈತದ ಮೇರು ಕೃತಿ. ಇಂತಹ ಮಹಾತ್ಮರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಆ ಮೂಲಕ ಬಿಲ್ಲವ ಸಮಾಜವನ್ನು ಒಡೆಯುವ ಕಾಂಗ್ರೆಸ್ ಕೃಪಾಪೋಷಿತ ಹುಸಿ ಬುದ್ಧಿಜೀವಿ ಹಾಗು ಮಾಜಿ ಪತ್ರಕರ್ತ ಮಾಡುತ್ತಿರುವ ಪ್ರಯತ್ನ ಖೇದನೀಯ .

    ಉತ್ತರ
  3. vasu
    ಆಗಸ್ಟ್ 26 2016

    ಭಿಲ್ಲವರು ವಿಚಾರವಾದಿಗಳಾಗಬೇಕು. ಆದರೆ ಅವರಲ್ಲಿ ನಾಸ್ತಿಕತೆ, ದೇಶದ್ರೋಹ ಇತ್ಯಾದಿಗಳು ಮೂಡಬಾರದು. ಬಹುಶಃ ನಾರಾಯಣ ಗುರುಗಳು ಕೇರಳದಲ್ಲಿ ಜನಿಸದಿದ್ದರೆ ಅಲ್ಲಿನ ಎಳವಾ ಗಳ ಪರಿಸ್ಥಿತಿ ಹೇಗೆ ಇರುತ್ತಿತ್ತು ಎನ್ನುವುದನ್ನು ಊಹಿಸಲೂ ಅಸಾಧ್ಯ. ನಾರಾಯಣ ಗುರುಗಳು ಹಿಂದುಳಿದ ಇಳವಾ ಮತ್ತು ನಮ್ಮ ಕನ್ನಡದ ಭಿಲ್ಲವರಿಗೆ ಸಂಸ್ಕಾರಗಳನ್ನು ನೀಡಿದರು. ಅವರೂ ಸಹ ಯಜ್ಞೋಪವೀತವನ್ನು ಧರಿಸಲು ಹೇಳಿದರು. ಶಿವನ ದೇವಸ್ಥಾನದಲ್ಲಿ ಅವರು ಪ್ರಮುಖರಾದರು. ಸರಿ. ವೈಚಾರಿಕತೆಯನ್ನು ಇದಕ್ಕಿಂತಲೂ ಹೆಚ್ಚು ಪ್ರೀತಿಸಿ ಅದರಂತೆ ನಡೆಯಬೇಕಾದರ ಭಿಲ್ಲವರಿಗೆ ಇನ್ನೊಂದು ಆಯ್ಕೆ ಇದೆ. ಅದೆಂದರೆ ಆರ್ಯಸಮಾಜ ಸಂಸ್ಥೆ. ಈ ಸಂಸ್ಥೆ ಯಲ್ಲಿ ಜಾತಿ ಲಿಂಗ ಭೇದವಿಲ್ಲ. ನಿರಾಕಾರ ದೇವರ ಉಪಾಸನೆ ಇದೆ. ಎಲ್ಲವೂ ವೈದಿಕ ಪದ್ಧತಿಯಲ್ಲಿ ನಡೆಯುತ್ತದೆ. ಹಿಂದುಳಿದವರು , ಪರಿಶಿಷ್ಠ ಜಾತಿ ಮತ್ತು ಪಂಗಡಗಳಿಗೆ ಸಮಾಜದಲ್ಲಿ ಮತೀಇಯವಾಗಿಯೂ ಗೌರವ ಸ್ಥಾನವನ್ನು ಒದಗಿಸಿದ್ದು ಕೇವಲ ಸ್ವಾಮಿ ದಯಾನಂದರ ಅರ್ಯಸಮಾಜ. ನಾರಾಯಣ ಗುರುಗಳು ವಿಗ್ರಹರಾಧನೆಯನ್ನು ಬಿಡಲಿಲ್ಲ. ಆದರೆ ಸ್ವಾಮಿ ದಯಾನಂದರು ವಿಗ್ರಹಾರಾಧನೆಯನ್ನು ತೊರೆದರೂ, ವೈದಿಕ ಆದರ್ಶಗಳನ್ನು ಬಿಡಲಿಲ್ಲ. ವೈಚಾರಿಕತೆಯ ಪ್ರತಿರೂಪ ಸ್ವಾಮಿ ದಯಾನಂದರು. ಭಿಲ್ಲವರು ಆರ್ಯಸಮಾಜದ ಆಯ್ಕೆಯನ್ನು ಮಾಡಿಕೊಂಡು ಸಜ್ಜನ, ಸ್ವಾಭಿಮಾನಿ,, ದೇಶ ಭಕ್ತ ಮತ್ತು ವೈಚಾರಿಕವಾಗಿ ಬದುಕಲು ಸಾಧ್ಯವಿದೆ.

    ಉತ್ತರ

Leave a reply to Umesh ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments