ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 27, 2016

ಉಪನಿಷತ್ ವಾಙ್ಮಯ 2: ಆಮಿಷ ಒಡ್ಡದೆ ಉತ್ತರಿಸು; ಅರಿವಿನ ಮಟ್ಟವನೆತ್ತರಿಸು!

‍ನಿಲುಮೆ ಮೂಲಕ

– ಸ್ವಾಮಿ ಶಾಂತಸ್ವರೂಪಾನಂದ
ಉಪನಿಷತ್ ವಾಙ್ಮಯ :- ಉಪನಿಷತ್ ವಾಙ್ಮಯ 1

yama_nachiketaನಚಿಕೇತ ಯಮಸದನಕ್ಕೆ ಹೋದ. ಅಲ್ಲಿ ಮೂರು ದಿನ ಕಾದ. ಭೂಮಿಯಿಂದ ಸೂಕ್ಷ್ಮದೇಹಿಯಾಗಿ ಮೃತ್ಯುವಿನ ಲೋಕಕ್ಕೆ ಹೋಗುತ್ತಿರುವಾಗ ಅವನು ಒಬ್ಬನೇ ಇದ್ದದ್ದಲ್ಲ. ಅವನ ಮುಂದೆ ಸಾವಿರಾರು ಜನ, ಹಿಂದೆ ಸಾವಿರಾರು ಜನ ಸಾಗರದ ರೀತಿಯಲ್ಲಿ ಹೋಗುತ್ತಿದ್ದರಂತೆ. ಅವರೆಲ್ಲರೂ ಯಾವಾವುದೋ ಕಾರಣಕ್ಕೆ ತೀರಿಕೊಂಡರು. ಬದುಕಿನ ಯಾತ್ರೆ ಮುಗಿಸಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡವರು. ಭೂಮಿಯ ಮೇಲಿನ ವ್ಯವಹಾರಗಳನ್ನು ಮುಗಿಸಿ ಪರಲೋಕಕ್ಕೆ ಹೊರಟವರು. ಇಲ್ಲಿ ನಾವು ಉಪನಿಷತ್‍ಕಾರನ ಲೋಕಪ್ರಜ್ಞೆಯನ್ನು ಗಮನಿಸಬೇಕು. ಕತೆ ಕೇವಲ ನಚಿಕೇತ ಮತ್ತು ಯಮನ ಮಾತುಕತೆಯ ಸುತ್ತ ಸುತ್ತುವುದಾದರೂ ಉಪನಿಷತ್‍ಕಾರ ಇವೆಲ್ಲ ಸಣ್ಣಸಣ್ಣ ವಿವರಗಳನ್ನು ಕೂಡ ನಮ್ಮ ಕಣ್ಮುಂದೆ ತಂದು ಬೆಚ್ಚಿಬೀಳಿಸುತ್ತಾನೆ. ಭೂಮಿಯಲ್ಲಿ ಪ್ರತಿಕ್ಷಣದಲ್ಲೂ ನೂರಾರು ಜೀವಗಳು ಕೈಕಾಲು-ಪಪ್ಪುಸಗಳ ಕಾರ್ಯ ನಿಲ್ಲಿಸಿ ನಿಶ್ಚೇಷ್ಟಿತವಾಗುತ್ತಲೇ ಇರುತ್ತವೆ; ಪ್ರತಿ ನಿಮಿಷದಲ್ಲೂ ಅಸಂಖ್ಯಾತ ಜನರು ಮೃತ್ಯುವಿಗೆ ಪಕ್ಕಾಗುತ್ತಲೇ ಇರುತ್ತಾರೆ ಎಂಬ ಎಚ್ಚರಿಕೆಯನ್ನು ಓದುಗನಿಗೆ ಅದುಹೇಗೆ ಉಪನಿಷತ್ ದಾಟಿಸುತ್ತದೆ ನೋಡಿ! ಇಂಥ ನೂರಾರು ಜೀವರ ನಡುವಿನಲ್ಲಿ ನಚಿಕೇತನೂ ಇದ್ದ. ಅವನಿಗೆ ಭೂಲೋಕವನ್ನು ಬಿಟ್ಟು ಬಂದೆನಲ್ಲಾ ಎಂಬ ಚಿಂತೆಯೂ ಇರಲಿಲ್ಲ; ದೇವರ ಲೋಕ ಸೇರುವ ದಾರಿಯಲ್ಲಿದ್ದೇನೆಂಬ ಸಂತೋಷವೂ ಇರಲಿಲ್ಲ. ದುಃಖ ಸಂತೋಷಗಳಿಲ್ಲದ ಒಂದು ವಿಚಿತ್ರ ಸ್ಥಿತಿಯಲ್ಲಿ ಅವನು ಯಮಪುರಿಗೆ ಹೋದ.

ಅಲ್ಲಿ ಹೋದಾಗ ಯಮಕಿಂಕರರು ಅವನಿಗೆ ಜೀವರು ಹೇಗೆ ಬಗೆಬಗೆಯ ಶಿಕ್ಷೆಗಳನ್ನು ದಾಟಿ ಪವಿತ್ರಾತ್ಮರಾಗಿ ಬರುತ್ತಾರೆಂಬುದನ್ನು ತೋರಿಸಿದರಂತೆ. ಆಗ ನಚಿಕೇತ ಒಂದು ಸುಂದರವಾದ ಕಲ್ಪನೆಯನ್ನು ಮಾಡುತ್ತಾನೆ. ಅದೇನೆಂದರೆ, ಮನುಷ್ಯನ ಜೀವನ ಒಂದು ಸಸ್ಯದಂತೆ. ಗಿಡದಲ್ಲಿ ಬೆಳೆದುನಿಂತ ಫಲವನ್ನು ಕೊಯ್ದು ತರುತ್ತೇವೆ. ಪಾತ್ರೆಯಲ್ಲಿ ಬೇಯಿಸಿ ಅಡುಗೆ ತಯಾರಿಸುತ್ತೇವೆ. ನಮ್ಮ ಪಾಲಿಗೆ ಆ ಹಣ್ಣು, ತರಕಾರಿ ಅಥವಾ ಸೊಪ್ಪು ಸತ್ತಿತು ಎಂದೇ ಲೆಕ್ಕ. ಆದರೆ ಅದೇ ಫಲ ನಮ್ಮ ಹೊಟ್ಟೆಯನ್ನು ಸೇರಿ ನಾಳೆ-ನಾಡಿದ್ದರಲ್ಲಿ ಮಲಮೂತ್ರಗಳಲ್ಲಿ ದೇಹದಿಂದ ಹೊರಬಂದು ಮತ್ತೆ ಪ್ರಕೃತಿಯನ್ನು ಸೇರುತ್ತದೆ. ಮಣ್ಣಿನಲ್ಲಿ ಮಣ್ಣಾಗಿ ಮತ್ಯಾವುದೋ ಗಿಡದ ಆಹಾರವಾಗಿ ಒದಗಿಬರುತ್ತದೆ. ಗಿಡವನ್ನು ಬೆಳೆಸುತ್ತದೆ. ಜೀವರ ಚಕ್ರವೂ ಹೀಗೆಯೇ; ಅಂತ್ಯವೆಂದು ನಮ್ಮ ಲೌಕಿಕ ಪ್ರಪಂಚಕ್ಕೆ ಕಂಡರೂ ಅದು ಅಂತ್ಯವಲ್ಲ. ಜೀವನೆಂಬ ಚೈತನ್ಯ ಹಲವು ಜನ್ಮಗಳನ್ನು ಎತ್ತಿ ಹಲವು ಬಾರಿ ಯಮಕಿಂಕರರಲ್ಲಿ ಸಂಸ್ಕಾರ ಪಡೆದು ತನ್ನ ಚಕ್ರದಂಥ ಬಾಳುವೆಯನ್ನು ಮತ್ತೆ ಮತ್ತೆ ಅನುಭವಿಸುತ್ತಿರುತ್ತಾನೆ. ಸಸ್ಯಾಹಾರವನ್ನು ಮಡಕೆಯಲ್ಲಿ ಹಾಕಿ ಬೇಯಿಸಿದಂತೆಯೇ ಜೀವರು ಯಮಲೋಕದಲ್ಲಿ ಭಾಂಡಗಳಲ್ಲಿ ಬೇಯುತ್ತಿದ್ದಾರೆಂದು ಬಗೆಯುತ್ತಾನೆ ನಚಿಕೇತ.

ನಚಿಕೇತ ಯಮಸದನದಲ್ಲಿ ಮೂರು ದಿನಗಳನ್ನು ಕಳೆದ ಎನ್ನುತ್ತದೆ ಉಪನಿಷತ್ತು. ಆದರೆ ಭೂಮಿಯ ಕತೆ ಹೇಳುವಾಗ, ನಚಿಕೇತನ ತಂದೆಗೆ ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ತನ್ನ ಮಗ ಜೀವಂತವಾಗಿ ಎದ್ದು ಬರುವ ಪವಾಡವನ್ನು ಕಾಣುವಂತಾಯಿತು – ಎಂದು ಹೇಳುತ್ತಾರೆ. ಯಮನ ಮನೆಯಲ್ಲಿ ಮೂರು ದಿನಗಳನ್ನು ಕಳೆದದ್ದೇ ಆಗಿದ್ದರೆ ಆತ ಭೂಲೋಕಕ್ಕೆ ಮೂರು ದಿನಗಳ ನಂತರವೇ ಹಿಂತಿರುಗಬೇಕಿತ್ತಲ್ಲ ಎಂಬ ಪ್ರಶ್ನೆ ಮೂಡಬಹುದು. ಆದರೆ ಅವೆರಡನ್ನೂ ಬೇರೆ ಬೇರೆ ಕಾಲಮಾನಗಳು ಎಂದುಕೊಳ್ಳಬಹುದು. ನಚಿಕೇತ ಸೂಕ್ಷ್ಮರೂಪಿಯಾಗಿ ಯಮನ ಲೋಕಕ್ಕೆ ಹೋಗಿರುವುದರಿಂದ ಅಲ್ಲಿನ ಚೌಕಟ್ಟು ಬೇರೆ; ಕಾಲದ ವ್ಯಾಪ್ತಿ ಭಿನ್ನ ಎಂದು ಯೋಚಿಸಲಿಕ್ಕೆ ಅವಕಾಶವಿದೆ. ಅದೇನೇ ಇರಲಿ, ಆದರೆ ಆತ ಮೂರು ದಿನ ಕಾದ ಎಂದು ಹೇಳುವುದರಲ್ಲಿ ಏನನ್ನು ಹೇಳಹೊರಟಿದ್ದಾನೆ ಉಪನಿಷತ್‍ಕಾರ ಎಂದು ಯೋಚಿಸಬೇಕು. ನಚಿಕೇತ ಪುಟ್ಟ ಬಾಲಕ. ತನಗೆ ಗೊತ್ತಿಲ್ಲದ, ತಾನು ಇದುವರೆಗೆ ನೋಡದ, ಯಾರಿಂದಲೂ ಈ ಹಿಂದೆ ವರ್ಣನೆಯನ್ನು ಕೇಳಿರದಿದ್ದ ಒಂದು ವಿಚಿತ್ರ ಜಾಗಕ್ಕೆ ಬಂದಿದ್ದಾನೆ. ನಾವು ಯಾರ ಮನೆಗಾದರೂ ಹೋಗಿ, ಭೇಟಿಯಾಗಲಿದ್ದ ವ್ಯಕ್ತಿ ಇರಲಿಲ್ಲವೆಂದರೆ ವಾಪಸು ಬಂದುಬಿಡುತ್ತೇವಲ್ಲವೇ? ಅತ್ಯಂತ ಅಗತ್ಯದ ಕೆಲಸವಿದ್ದರಷ್ಟೇ ಸ್ವಲ್ಪ ಹೊತ್ತು ಕಾಯುವ ವ್ಯವಧಾನ ತೋರಿಸುತ್ತೇವೆ. ನಚಿಕೇತ ಯಮಸದನದಲ್ಲಿ ಕಾದ ಎಂದು ಹೇಳುವ ಮೂಲಕ ಉಪನಿಷತ್‍ಕಾರರು ಹೇಳಬಯಸಿದ್ದು ಕೂಡ ಇದೇ ಇರಬಹುದು. ಆ ಹುಡುಗ ತನ್ನ ತಂದೆಯ ಆಣತಿಗೆ ಬೆಲೆ ಕೊಟ್ಟು ಸುಮ್ಮನೆ ಹೋದದ್ದಲ್ಲ. ಹಾಗೇನಾದರೂ ಆಗಿದ್ದರೆ ಯಮನಿಲ್ಲ ಎಂಬ ಮಾತು ಕೇಳುತ್ತಲೇ ಖುಷಿಯಿಂದ ಕುಣಿದಾಡುತ್ತ ವಾಪಸು ಬಂದುಬಿಡುತ್ತಿದ್ದನೇನೋ! ಆದರೆ ನಚಿಕೇತ, ತನ್ನ ತಂದೆ ಹೇಳಿದರೆಂಬುದಕ್ಕಿಂತಲೂ ಮಿಗಿಲಾಗಿ ಸ್ವ-ಇಚ್ಛೆಯಿಂದ ಯಮಲೋಕಕ್ಕೆ ಬಂದಿದ್ದಾನೆ. ಯಮನನ್ನು ಭೇಟಿಯಾಗಬೇಕೆಂಬ ಉತ್ಕಟ ಅಪೇಕ್ಷೆಯಿಂದ ಬಂದು ನಿಂತಿದ್ದಾನೆ. ಸುತ್ತಮುತ್ತಲೂ ಯಮಕಿಂಕರರು ಜೀವಾತ್ಮರನ್ನು ಅಗ್ನಿಭಾಂಡಗಳಲ್ಲಿ ಬೇಯಿಸುವ ದೃಶ್ಯಾವಳಿಗಳನ್ನು ನೋಡಿಯೂ ಆ ಪುಟ್ಟ ಬಾಲಕ ಅಧೀರನಾಗದೆ ಉಳಿದಿದ್ದಾನೆಂದರೆ ಆತನ ಉತ್ಕಟತೆ ಎಷ್ಟಿರಬೇಕು!

ನಚಿಕೇತ ಹಗಲು-ರಾತ್ರಿಗಳನ್ನು ಅನ್ನಾಹಾರಗಳಿಲ್ಲದೆ ಕಳೆದ. ಯಮಲೋಕದ ಇತರ ಸದಸ್ಯರು ಬಂದು ಊಟ ಮಾಡಪ್ಪಾ ಎಂದರೂ ಕೇಳಲಿಲ್ಲ. ಯಮನನ್ನು ಕಾಣಲು ಬಂದಿದ್ದೇನೆ; ಅದು ಪೂರೈಸಿದ ಮೇಲೆಯೇ ಮಿಕ್ಕ ಕೆಲಸಗಳು ಎಂದು ಖಚಿತವಾಗಿ ಹೇಳಿಬಿಟ್ಟ. ಯಾವುದೇ ವಿಷಯವನ್ನು ತಿಳಿದುಕೊಳ್ಳಲು ಇಚ್ಛೆ ಇದ್ದರೆ ಸಾಲದು; ಅನನ್ಯವಾದ ಶ್ರದ್ಧೆಯೂ ಇರಬೇಕು. ಅಡಿಗರು ಹೇಳುತ್ತಾರಲ್ಲ, ಶ್ರೀರಾಮಚಂದ್ರನಂಥ ಉನ್ನತ ವ್ಯಕ್ತಿತ್ವವನ್ನು ಕಾವ್ಯಮುಖೇನ ಕಡೆಯಹೋದವನಿಗೆ ಚಿತ್ತವೇ ಹುತ್ತಗಟ್ಟಬೇಕು, ಎಂದು. ಕಾಯುವಿಕೆ ಇದ್ದರೆ ಮಾತ್ರ ಹುತ್ತಗಟ್ಟುವಿಕೆಯೂ ಸಾಧ್ಯ. ನಚಿಕೇತನಿಗೆ ಅಂಥ ಏಕಾಗ್ರತೆ, ತನ್ಮಯತೆ, ಕಾಯುವಿಕೆಗಳು ಸಾಧ್ಯವಿದ್ದವು. ಅವನನ್ನು ಪರೀಕ್ಷೆ ಮಾಡಲೆಂದೇ ಯಮಧರ್ಮರಾಯ ಮೂರು ದಿನ ಪ್ರಕಟವಾಗಲಿಲ್ಲವೋ ಏನೋ! ಸರಿ, ಯಮ ಬಂದ; ನಚಿಕೇತನನ್ನು ಅತಿಥಿಯೆಂದು ಆದರಿಸಿದ; ಊಟ-ಉಪಚಾರಗಳನ್ನು ಮಾಡಿದ; ತನ್ನ ರಾಜ್ಯವನ್ನು ನೋಡಿಕೊಂಡು ಬರಲು ರಥದಲ್ಲಿ ಕಳಿಸಿಕೊಟ್ಟ. ಅವೆಲ್ಲ ಪ್ರಾಥಮಿಕ ಉಪಚಾರಗಳಾದ ಮೇಲೆ ನಚಿಕೇತನ ಜೊತೆ ಸಂವಾದಕ್ಕೆ ಕೂತ. ನಚಿಕೇತನಿಗೆ ಮೂರು ವರಗಳನ್ನು ಕೊಟ್ಟಿದ್ದೂ ಅದರಲ್ಲಿ ಮೊದಲೆರಡನ್ನು ನಚಿಕೇತ ಬಳಸಿಕೊಂಡದ್ದೂ ಆಯಿತು. ಇಬ್ಬರೂ ಮೂರನೇ ಪ್ರಶ್ನೆಯತ್ತ ಬಂದರು. ನಚಿಕೇತ ಕೇಳಿದ:

ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇ ಅಸ್ತಿತ್ಯೇಕೇ ನಾಯಮಸ್ತೀತಿ ಚೈಕೇ|
ಏತದ್ವಿದ್ಯಾಮನುಶಿಷ್ಟಸ್ತ್ವಯಾsಹಂ ವರಾಣಾಮೇಷ ವರಸ್ತೃತೀಯಃ||

ಮನುಷ್ಯನು ಸತ್ತಮೇಲೆ ಇರುತ್ತಾನೆಂದು ಕೆಲವರು, ಇರುವುದಿಲ್ಲವೆಂದು ಕೆಲವರು – ಹೀಗೆ ಸಂಶಯವುಂಟಷ್ಟೆ. ನಿನ್ನಿಂದ ಅನುಶಿಷ್ಟನಾಗಿ ಈ ವಿಷಯವನ್ನು ತಿಳಿಯಲಿಚ್ಛಿಸುತ್ತೇನೆ. ಇದುವೇ ನಾನು ಕೇಳುತ್ತಿರುವ ಮೂರನೇ ವರ. – ಇದು ಈ ಮೇಲಿನ ಪದ್ಯದ ಮೇಲುಮೇಲಿನ ಅರ್ಥ. ನಚಿಕೇತ, ಯಮನಲ್ಲಿ, ಸತ್ತ ಮೇಲೆ ಏನಾಗುತ್ತದೆ ಎಂಬುದನ್ನು ಕೇಳಿದ ಎಂದೇ ಹಲವು ಶಾಸ್ತ್ರಕಾರರು ಪದ್ಯಾರ್ಥವನ್ನು ಬಿಡಿಸುತ್ತಾರೆ. ಹೇಳಿಕೇಳಿ ಯಮ ಮೃತ್ಯುದೇವತೆ. ಹಾಗಾಗಿ, ಆತನಲ್ಲಿ, ಮನುಷ್ಯ ಸತ್ತಮೇಲೆ ಏನಾಗುತ್ತಾನೆಂದು ಕೇಳುವುದರಲ್ಲಿ ಔಚಿತ್ಯವುಂಟೆಂದು ಹಲವರ ವಾದ. ಆ ಕ್ಷಣಕ್ಕೆ ಇದನ್ನು ಒಪ್ಪಬಹುದೆನ್ನಿಸಿದರೂ ನಚಿಕೇತ ಕೇಳಿದ ಪ್ರಶ್ನೆಯ ಅರ್ಥ ಬೇರೆಯೇ ಇರಬಹುದೆಂಬ ಸೂಚನೆ ಮುಂದಿನ ಪದ್ಯಗಳಲ್ಲಿ ಸಿಗುತ್ತದೆ.

ನಚಿಕೇತನ ಮೊದಲ ಎರಡು ಪ್ರಶ್ನೆಗಳಿಗೆ ಯಾವ ವಿರೋಧವನ್ನೂ ವ್ಯಕ್ತಪಡಿಸದೆ ಸಂತೋಷದಿಂದ ಪೂರೈಸಿದ್ದ ಯಮಧರ್ಮ, ಮೂರನೇ ಪ್ರಶ್ನೆಗೆ ಮಾತ್ರ ಧೃತಿಗೆಡುತ್ತಾನೆ. ಅಥವಾ ಹಾಗೆ ನಟಿಸುತ್ತಾನೆ. “ನಚಿಕೇತನೇ, ನೀನು ಕೇಳುತ್ತಿರುವ ಪ್ರಶ್ನೆ ಅದೆಷ್ಟು ಗಹನವಾದದ್ದೆಂದರೆ ದೇವತೆಗಳಿಗೂ ಅದರ ವಿಚಾರ ಪೂರ್ತಿಯಾಗಿ ತಿಳಿದಿಲ್ಲ. ಹಾಗಾಗಿ ಅದನ್ನೊಂದನ್ನು ಬಿಟ್ಟು ಬೇರೆಯದೇನನ್ನಾದರೂ ಕೇಳು” ಎಂದುಬಿಡುತ್ತಾನೆ. ಈ ಮಗುವಿಗೆ ತಾನು ಕೇಳಿದ ಪ್ರಶ್ನೆಯ ಆಳ-ಅಗಲಗಳು ಗೊತ್ತಿದೆಯೋ ಇಲ್ಲವೋ ಎನ್ನುವ ಸಣ್ಣ ಸಂಶಯವೊಂದು ಅವನ ಈ ಉತ್ತರದಲ್ಲಿದೆ. ಆದರೆ ನಚಿಕೇತನಿಗೋ, ತಾನೇನು ಕೇಳಿದ್ದೇನೋ ಅದರ ಪೂರ್ತಿ ಜ್ಞಾನ ಇರುವಂತಿದೆ. “ಯಮನೇ, ದೇವತೆಗಳಿಗೂ ಪೂರ್ಣ ತಿಳಿಯದೆ ಉಳಿದಿರುವ ವಿಷಯವನ್ನು ನಾನು ನಿನ್ನಲ್ಲಿ ಕೇಳಿದ್ದೇನೆಂಬ ಸಂಪೂರ್ಣ ಅರಿವು ನನಗೆ ಇದೆ. ನೀನು ಲೋಕದ ಧರ್ಮಾಧರ್ಮಗಳನ್ನು ವಿಶ್ಲೇಷಿಸುವ, ಸರಿ ತಪ್ಪುಗಳನ್ನು ನಿರ್ಣಯಿಸುವ ಮುತ್ಸದ್ದಿ; ಪಂಡಿತ. ದೇವತೆಗಳ ಲೋಕದ ಮಹಾನ್ ಜ್ಞಾನಿಯೊಬ್ಬನ ಸಮ್ಮುಖದಲ್ಲಿ ಕೂತು ಜ್ಞಾನವನ್ನು ಸಂಪಾದಿಸುವ ಅಪೂರ್ವ ಯೋಗವೊಂದು ನನಗಿಂದು ಸಿಕ್ಕಿದೆ. ಇದನ್ನು ವ್ಯರ್ಥಗೊಳಿಸಿ ಕೆಲಸಕ್ಕೆ ಬಾರದ ಸಣ್ಣಪುಟ್ಟ ಸಂಗತಿಗಳನ್ನು ನಿನ್ನಲ್ಲಿ ಕೇಳಲೇ? ಯಮನೇ, ಈ ಪ್ರಶ್ನೆಗೆ ನೀನಲ್ಲದೆ ಬೇರಾರೂ ಸಮರ್ಪಕ ಉತ್ತರ ಹೇಳಲಾರರು. ನೀನು ಕೃಪೆದೋರಬೇಕು. ನನ್ನ ಸಂಶಯ ನಿವಾರಿಸಬೇಕು” ಎಂದು ಬೇಡಿಕೊಳ್ಳುತ್ತಾನೆ ನಚಿಕೇತ.

ಅಲ್ಲಿಂದ ಮುಂದಕ್ಕೆ ಯಮಧರ್ಮ ನಚಿಕೇತನಿಗೆ ಒಡ್ಡುವ ಪ್ರಲೋಭನೆ ಸ್ವಾರಸ್ಯಕರವಾಗಿದೆ. “ಎಲೆ ಬಾಲಕನೇ, ನಿನ್ನ ಬಳಿ ಬೇರೊಂದು ವರ ಉಳಿದಿಲ್ಲವೆಂಬ ಕಾರಣಕ್ಕೆ ಈ ದೊಡ್ಡ ಪ್ರಶ್ನೆಯನ್ನು ನನ್ನೆದುರು ಇಡುತ್ತಿರುವೆಯಲ್ಲವೆ? ಆ ಚಿಂತೆಯೇ ಬೇಡ; ನಿನಗೆ ಅದೆಷ್ಟು ವರಗಳು ಬೇಕೋ ಕೇಳು! ದೀರ್ಘಾಯುಷ್ಯ ಪಡೆದ ಮಕ್ಕಳು, ಮೊಮ್ಮಕ್ಕಳನ್ನು ಬೇಕಾದರೆ ಕೇಳು. ಹಾಲು ಮೊಸರು ಬೇಕಾದಷ್ಟು ಕೊಡುವ ಗೋಸಂಪತ್ತನ್ನು ಕೇಳು. ಆನೆ, ಕುದುರೆ, ಚಿನ್ನದ ರಾಶಿ ಬೇಕಾದರೂ ಕೇಳು. ಎಷ್ಟು ಭೂಮಿಗೆ ಒಡೆಯನಾಗಬೇಕೆಂಬ ಆಸೆಯಿದೆಯೋ ಹೇಳು. ಭೂಲೋಕದಲ್ಲಿ ಅದೆಷ್ಟು ವರ್ಷಗಳ ಕಾಲ ಸುಖಸಂತೋಷದಿಂದ ಬದುಕಬೇಕೆಂಬ ಆಸೆಯುಂಟೋ ಹೇಳು. ಅವೆಲ್ಲವನ್ನೂ ಕೊಡುತ್ತೇನೆ; ಇದೊಂದು ವರವನ್ನು ಮಾತ್ರ ಕೇಳದಿರು!” ಎಂದುಬಿಡುತ್ತಾನೆ. ಅಷ್ಟಕ್ಕೇ ಬಿಟ್ಟನೇ? ಇಲ್ಲ! ಇನ್ನೂ ಮುಂದುವರಿದು, “ನೂರಿನ್ನೂರಲ್ಲ; ಸಾವಿರಾರು ವರ್ಷಗಳಿರುವ ಒಂದು ಕಲ್ಪದಷ್ಟು ಆಯುಸ್ಸನ್ನು ಬೇಡುತ್ತೀಯೋ? ಅದೂ ಸರಿಯೇ! ನಿನ್ನನ್ನು ಭೂಲೋಕದ ಚಕ್ರವರ್ತಿಯಾಗಿಸುತ್ತೇನೆ. ಮನುಷ್ಯನಾದವನಿಗೆ ಏನೇನು ಬಯಕೆಗಳಿರುತ್ತವೋ ಅವೆಲ್ಲ ಸುಖ-ಸಂಪತ್ತುಗಳೂ ನಿನ್ನ ಕಾಲಬುಡದಲ್ಲಿ ಬಿದ್ದಿರುವಂತೆ ಮಾಡುತ್ತೇನೆ. ಕೇವಲ ದೇವತೆಗಳಿಗೆ ಮೀಸಲಾದ ಅಪ್ಸರ ಸ್ತ್ರೀಯರನ್ನು ಬೇಕಾದರೂ ಕರೆದುಕೊಂಡು ಹೋಗಲು ಅನುಮತಿ ಕೊಡುತ್ತೇನೆ. ಎಲ್ಲಿ ಬೇಕಾದರೂ ಸಂಚರಿಸಲು ಅನುಕೂಲವಾದ ದೇವಲೋಕದ ವಾಹನಗಳನ್ನು ನಿನಗೆ ಕೊಡುತ್ತೇನೆ. ಮತ್ರ್ಯದಲ್ಲಿರದ ಸಂಗೀತ ವಾದ್ಯಗಳನ್ನು ನಿನ್ನ ಉಡಿಗೆ ಹಾಕುತ್ತೇನೆ. ಸ್ವರ್ಗದ ಹೆಣ್ಣುಗಳನ್ನು ನಿನ್ನ ಮನೆಯಲ್ಲಿ ಚಾಕರಿಗೆ ಬೇಕಾದರೂ ನೇಮಿಸಿಕೋ, ಸಂತೋಷದಿಂದ ಕಳಿಸಿಕೊಡುತ್ತೇನೆ. ಆದರೆ… ಆದರೆ, ಆ ಒಂದು ಪ್ರಶ್ನೆಯನ್ನು ಮಾತ್ರ ಬಿಟ್ಟುಬಿಡು!” ಎನ್ನುತ್ತಾನೆ.

ಹಾಗಾದರೆ ನಚಿಕೇತ ಕೇಳಿದ ಪ್ರಶ್ನೆ ಸಾಮಾನ್ಯವಾದದ್ದಲ್ಲ; ಅದರಲ್ಲೇನೋ ಗಹನವಾದ ಅಂಶವೇ ಅಡಗಿರಬೇಕೆಂದು ನಾವು ಅರ್ಥ ಮಾಡಿಕೊಳ್ಳಬಹುದು. ಪ್ರಶ್ನೆಯ ಅಂತರಾಳ ಕೇಳಿದ ನಚಿಕೇತನಿಗೆ ಅರ್ಥವಾಗಿದೆ, ಕೇಳಿಸಿಕೊಂಡ ಯಮನಿಗೂ ಅರ್ಥವಾಗಿದೆ. ಏನದು? ಸತ್ತ ಮೇಲೆ ಜೀವನಿಗೆ ಅಸ್ತಿತ್ವವಿದೆಯೋ ಇಲ್ಲವೋ ಎಂಬ ಪ್ರಶ್ನೆ ನಚಿಕೇತನದ್ದು ಎಂದು ಸಾಮಾನ್ಯರು ಅರ್ಥೈಸುತ್ತಾರೆ. ಭಾರತೀಯ ಶಾಸ್ತ್ರಗಳನ್ನು ಓದಿಕೊಂಡವರಿಗೆ ಇದೊಂದು ಬಾಲಿಶವಾದ ಅರ್ಥ ಎನ್ನಿಸುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ವೇದಗಳಿಂದ ಮೊದಲ್ಗೊಂಡು ಭಾರತದ ಯಾವ ಸಾಹಿತ್ಯವೂ ಮೃತ್ಯುವಿನ ನಂತರದ ಅಸ್ತಿತ್ವ ಬಗ್ಗೆ ಎಲ್ಲೂ ಸಂಶಯವನ್ನು ವ್ಯಕ್ತಪಡಿಸುವುದೇ ಇಲ್ಲ. ಚಾರ್ವಾಕರನ್ನು ಬಿಟ್ಟರೆ ಮಿಕ್ಕವರೆಲ್ಲರೂ ಮೃತ್ಯುವಿನ ನಂತರವೂ ಮನುಷ್ಯನಿಗೆ ಅಸ್ತಿತ್ವವಿದೆಯೆಂದು ಯಾವ ಸಂಶಯವೂ ಇಲ್ಲದೆ ಒಪ್ಪಿಕೊಂಡಿದ್ದಾರೆ. ಹಾಗಾಗಿ ಆ ಪ್ರಶ್ನೆಯನ್ನು ನಚಿಕೇತ ಕೇಳುವುದಾಗಲೀ, ಅದಕ್ಕೆ ಯಮಧರ್ಮನು ತಳಮಳಿಸಿದನೆಂದು ಹೇಳುವುದಾಗಲೀ ಸಮರ್ಪಕವಾಗಲಾರದು. ಅಲ್ಲದೆ ಸ್ವತಃ ಸತ್ತು ಯಮಲೋಕ ಸೇರಿರುವ ಹುಡುಗನೇ “ಸತ್ತ ನಂತರ ಅಸ್ತಿತ್ವವಿದೆಯೇ?” ಎಂದು ಕೇಳುವುದು ವಿಪರ್ಯಾಸವಾಗುತ್ತದೆ! ಹಾಗಾಗಿ ನಚಿಕೇತನ ಪ್ರಶ್ನೆಯನ್ನು ಬೇರೊಂದು ದೃಷ್ಟಿಕೋನದಿಂದ ವಿಮರ್ಶಿಸಬೇಕಾಗುತ್ತದೆ. ನಚಿಕೇತ ಸತ್ತವರು ಏನಾಗುತ್ತಾರೆ ಎಂದು ಕೇಳುವುದಿಲ್ಲ. ಪ್ರೇತವಾದವರು ಏನಾಗುತ್ತಾರೆ ಎಂದು ಕೇಳುತ್ತಾನೆ. ಪ್ರೇತ ಎಂದರೆ ಎತ್ತರಕ್ಕೆ ಏರಿದವರು ಎಂದು ಅರ್ಥವಿದೆ. ಎಲ್ಲಕ್ಕಿಂತ ಎತ್ತರಕ್ಕೆ ಏರುವುದು ಎಂದರೆ ಮೋಕ್ಷವನ್ನು ಸಂಪಾದಿಸುವುದು. ಇದು ಇಡೀ ಭಾರತೀಯ ಅಧ್ಯಾತ್ಮವಿದ್ಯೆಯ ಕೊಟ್ಟಕೊನೆಯ ಮೆಟ್ಟಿಲು. ಎಲ್ಲರ ಬಯಕೆಯೂ ಮೋಕ್ಷಸಾಧನೆಯೇ. ಮೋಕ್ಷವನ್ನು ಸಂಪಾದಿಸಿದ ಜೀವನಿಗೆ ಮತ್ತೆಮತ್ತೆ ಜನ್ಮವೆತ್ತುವ ತೊಂದರೆ ಇರುವುದಿಲ್ಲ. ಆತ ಅಸ್ತಿತ್ವದ ಎಲ್ಲ ಚಕ್ರಗಳ ಬಂಧನವನ್ನೂ ಬಿಡಿಸಿಕೊಂಡು ಪರಮಪದವನ್ನು ಸೇರುತ್ತಾನೆ. ಕೊಟ್ಟಕೊನೆಯ ಮೆಟ್ಟಿಲು ಏರುತ್ತಾನೆ. ಹಾಗಾಗಿ ನಚಿಕೇತನ ಪ್ರಶ್ನೆ ಸಾವಲ್ಲ; ಬದಲಾಗಿ ಮೋಕ್ಷಕ್ಕೆ ಸಂಬಂಧಪಟ್ಟಿದ್ದು. “ಯಮನೇ, ಜೀವಾತ್ಮನಿಗೆ ಮೋಕ್ಷ ಸಿಕ್ಕ ಮೇಲೆ ಏನಾಗುತ್ತದೆ? ಅದರಾಚೆಗಿನ ಸ್ಥಿತಿ ಹೇಗಿರುತ್ತದೆ? ಅಲ್ಲಿಯೂ ಜೀವ ದೇವರ ನಿಯಮಗಳಿಗೆ ಒಳಪಡುತ್ತದೆಯೇ? ಅಥವಾ ಯಾವ ಕಟ್ಟುಪಾಡುಗಳೂ ಇಲ್ಲದ ಸ್ಥಿತಿಯೇ? ಅಂಥದೊಂದು ಸ್ಥಿತಿ ಇದ್ದರೆ ಅದು ಹೇಗಿರುತ್ತದೆ?

ಸಾವಿನಾಚೆಗೇನಿದೆ ಎಂಬುದರ ಬಗ್ಗೆಯೇ ಗೊಂದಲಗಳಿರುವ ಮನುಷ್ಯರಿಗೆ ಮೋಕ್ಷವೆಂಬ ಅಂತಿಮ ಹಂತದ ಬಗ್ಗೆ ಏನೊಂದೂ ತಿಳಿದಿರಲು ಸಾಧ್ಯವಿಲ್ಲ. ಮಾತ್ರವಲ್ಲ, ಅದರ ಬಗ್ಗೆ ನಿನ್ನಂಥ ದೇವರಲ್ಲದೆ ಬೇರಾರಿಂದಲೂ ತಿಳಿಯುವ ಸಂಭವವೂ ಇಲ್ಲ. ನಾವು ಮನುಷ್ಯರು ರೂಪಿಸಿಕೊಳ್ಳುವ ಅರ್ಥಗಳು ಕುರುಡನೊಬ್ಬ ಆನೆಯ ಅಂಗಾಂಗಗಳನ್ನು ಮುಟ್ಟಿ ಅರ್ಥ ಮಾಡಿಕೊಂಡಂತೆ ಇರಬಹುದು ಅಷ್ಟೆ. ಹಾಗಾಗಿ, ಇದೀಗ ಅವಕಾಶ ಒದಗಿ ಬಂದದ್ದರಿಂದ ಕೇಳುತ್ತೇನೆ; ಮೋಕ್ಷದ ಸ್ಥಿತಿಯ ಬಗ್ಗೆ ಹೇಳು” ಎಂಬುದು ನಚಿಕೇತನ ಬೇಡಿಕೆ.
ಯಮ ಒಡ್ಡುವ ಪ್ರಲೋಭನೆಗಳಿಗೆ ಮರುಳಾಗದವರು ಯಾರು! ಭೂಲೋಕದ ಚಕ್ರವರ್ತಿಯಾಗಿಸುತ್ತೇನೆ, ಅಪ್ಸರೆಯರನ್ನು ಒದಗಿಸುತ್ತೇನೆ, ಸಂಪತ್ತಿನ ಬೆಟ್ಟವನ್ನೇ ತಲೆ ಮೇಲೆ ಸುರಿಯುತ್ತೇನೆ, ಸಾವಿರಾರು ವರ್ಷಗಳ ಆಯುಷ್ಯವನ್ನು ದಯಪಾಲಿಸುತ್ತೇನೆ ಎಂದೆಲ್ಲ ಹೇಳಿದಾಗ, ಅದನ್ನು ಬೇಡವೆನ್ನುತ್ತ ಕೊಡವಿಕೊಂಡು ಎದ್ದೇಳುವವರು ಯಾರಾದರೂ ಇದ್ದಾರೆಯೇ? ಒಂದು ವೇಳೆ ಇದ್ದದ್ದೇ ಆದರೆ ಅವರು ಶತಮೂರ್ಖರೇ ಆಗಿರಬೇಕು ಎಂಬುದು ನಮ್ಮ ಅಭಿಮತ ತಾನೇ? ಆದರೆ ನಚಿಕೇತನ ವರಸೆಯೇ ಬೇರೆ. “ಯಮನೇ, ನೀನು ಕೊಡಿಸುವ ಈ ನೃತ್ಯಗೀತಗಳಿಂದೇನು! ಇವೆಲ್ಲವೂ ನಶ್ವರ. ಈ ಜಗತ್ತು ನಿನ್ನೆಯಂತೆ ಇವತ್ತು ಇಲ್ಲ. ಇವತ್ತಿನಂತೆ ನಾಳೆ ಇರುವುದಿಲ್ಲ. ಇಲ್ಲಿ ನಾವು ಅನುಭವಿಸುವ ಎಲ್ಲ ಸುಖವೂ ಇಂದ್ರಿಯಗಮ್ಯವಷ್ಟೇ ಹೊರತು ಅದರಾಚೆಗೆ ನಮ್ಮನ್ನು ತಟ್ಟಲಾರವು. ಮತ್ತು ಎಲ್ಲ ಸುಖ-ಲೋಲುಪತೆಯೂ ನಮ್ಮನ್ನು ವೃದ್ಧಾಪ್ಯದತ್ತ ಕೊಂಡೊಯ್ಯುವ ಸಾಧನಗಳು. ಮೃತ್ಯುವೇ ಇಲ್ಲದ್ದನ್ನು ನೀನು ಇಲ್ಲಿ ಯಾರಿಗೂ ದಯಪಾಲಿಸಲಾರೆ. ನನಗೆ ಕಂಡು ಕೇಳರಿಯದ ಸಂಪತ್ತನ್ನು ಧಾರೆ ಎರೆಯುವುದಾಗಿ ಹೇಳುತ್ತಿದ್ದೀಯಲ್ಲವೆ? ಅವೆಲ್ಲವೂ ಒಂದಿಲ್ಲೊಂದು ದಿನ ಅಳಿಯಲೇಬೇಕು. ಹಣ ಮತ್ತು ಚಿನ್ನದಿಂದ ಮನುಷ್ಯರನ್ನು ತೃಪ್ತಿಪಡಿಸಬಹುದೆಂದು ತಿಳಿದಿದ್ದೀಯಾ? ದೇವತೆಗಳು ಚಿನ್ನದ ಮಳೆಯನ್ನೇ ಭೂಮಿಯಲ್ಲಿ ಹರಿಸಿದರೂ ಮತ್ತೂ ಬೇಕೆನ್ನುವ ಮರ್ಕಟ ಮನಸ್ಸು ಮನುಷ್ಯನದ್ದು. ಹಾಗಾಗಿ ಅಂಥ ಲೌಕಿಕ ಆಸೆಗಳಿಗೆ ನನ್ನನ್ನು ಬಂಧಿಸಲು ಯತ್ನಿಸಿ ಪ್ರಶ್ನೆಯನ್ನು ಮರೆಸಬೇಡ! ಯಮಧರ್ಮನೇ, ಯಾವ ಜ್ಞಾನವನ್ನು ನೀನೊಬ್ಬನೇ ನನಗೆ ಹರಿಸಲು ಸಾಧ್ಯವೋ, ಯಾವ ಜ್ಞಾನವು ನೀನು ಕೊಡುವ ಉಳಿದೆಲ್ಲ ಭೋಗ-ಭಾಗ್ಯಗಳಿಗಿಂತ ಮಿಗಿಲಾದದ್ದೋ, ಅಂಥ ಜ್ಞಾನವನ್ನು ನನಗೆ ಕೊಡು. ನನ್ನ ಪ್ರಶ್ನೆಗೆ ಉತ್ತರ ಕೊಡು, ಅಷ್ಟೇ ಸಾಕು!” ಎಂದು ಪಟ್ಟು ಹಿಡಿದುಬಿಟ್ಟ ನಚಿಕೇತ.

(ಮುಂದುವರಿಯುವುದು)

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments