ವಿಷಯದ ವಿವರಗಳಿಗೆ ದಾಟಿರಿ

ಜನವರಿ 21, 2017

3

ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ 1

‍ನಿಲುಮೆ ಮೂಲಕ

– ಮು. ಅ. ಶ್ರೀರಂಗ,ಬೆಂಗಳೂರು

oldman-walkingಪದ್ಮನಾಭರಾಯರು (ಪೀರಾಯರು) ಕೇಂದ್ರ ಸರ್ಕಾರದ ಗ್ರಾಹಕ  ಸೇವಾ  ಕಚೇರಿಯೊಂದರಲ್ಲಿ ಸುಮಾರು ಮೂವತ್ತು ಮೂರು ವರುಷ ಕೆಲಸಮಾಡಿ ಸ್ವಯಂ ನಿವೃತ್ತಿ ಹೊಂದಿ (ವಿ ಆರ್ ಎಸ್ ) ಇಂದಿಗೆ ಐದು ವರುಷಗಳಾದವು. ನಿನ್ನೆಯ ವರ್ತಮಾನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ನೌಕರರಿಗೆ ‘ಅಚ್ಛೆದಿನ್’ ಎನ್ನಬಹುದಾದ ಏಳನೇ ವೇತನ ಆಯೋಗದ ವರದಿ ಓದಿದ ಮೇಲೆ ತಾನು ಅವಸರ ಪಟ್ಟು   ವಿ ಆರ್ ಎಸ್ ತೆಗೆದುಕೊಂಡು,  ಮನೆಗೆ ಬರುತ್ತಿದ್ದ ಧನಲಕ್ಷ್ಮಿಗೆ ಬಾಗಿಲು ಹಾಕಿದೆನೇನೋ  ಎಂಬ  ಸಣ್ಣ ಎಳೆಯ ವಿಷಾದಾವೊಂದು ಅವರ ಮನಸ್ಸಿನಲ್ಲಿ ಬಂದಿದ್ದು ಸುಳ್ಳಲ್ಲ. ಇನ್ನೂ ಐದು ವರ್ಷ ಸರ್ವಿಸ್ ಬಾಕಿ  ಇತ್ತು. ಕಮ್ಮಿ ಎಂದರೂ ಒಂದು ಹತ್ತು ಹನ್ನೆರೆಡು ಲಕ್ಷ  ಹೆಚ್ಚಾಗಿ ಬರುತ್ತಿತ್ತು. ಅವರು ವಿ ಆರ್ ಎಸ್ ಅನ್ನು ತೀರಾ ಆತುರ ಪಟ್ಟು ತೆಗೆದುಕೊಂಡಿರಲಿಲ್ಲ. ತಮ್ಮ ಇಲಾಖೆಗೆ ಮೂರು ತಿಂಗಳ ಮುಂಚಿತವಾಗಿಯೇ ನೋಟಿಸ್ ಕೊಡಬೇಕಾಗಿತ್ತು. ಕೊಟ್ಟರು. ಆ ಅವಧಿಯಲ್ಲಿ ಒಮ್ಮೆ ತಮ್ಮ ಅರ್ಜಿಯನ್ನು ವಾಪಸ್ ತೆಗೆದುಕೊಂಡಿದ್ದರು. ಮತ್ತೆ ವಿ ಆರ್ ಎಸ್ ಗೆ ಅರ್ಜಿ ಹಾಕಿದರು. ಮೂರು ತಿಂಗಳ ಅವಧಿಯಲ್ಲಿ ಬೇಕಾದರೆ ಕೊನೆಯ ದಿನವೂ ಸಹ ವಿ ಆರ್ ಎಸ್ ಬೇಡ ಎಂದು ಅರ್ಜಿಯನ್ನು  ವಾಪಸ್ ಪಡೆಯುವ ಅವಕಾಶವಿತ್ತು. ಅವರ ಮೇಲಾಧಿಕಾರಿ ದೂರವಾಣಿಯಲ್ಲಿ ಮಾತಾಡಿ ‘ರಾಯರೇ ನಿಮ್ಮ ಫೈಲಿನಲ್ಲಿ ಮೂರು ಅರ್ಜಿಗಳಿವೆ. ಇಂದು ಕೊನೆಯ ಅವಕಾಶ. ಏನು ಮಾಡೋಣ ನೀವೇ ಹೇಳಿ’ ಎಂದಾಗ ಕುರುಕ್ಷೇತ್ರದ ಯುದ್ಧ ಇನ್ನೂ ನಡೆಯುತ್ತಿರುವಾಗಲೇ ಶರ ಶಯ್ಯೆಯಲ್ಲಿ ಮಲಗುವ ಪ್ರತಿಜ್ಞೆ ಮಾಡಿದ ಭೀಷ್ಮನಂತೆ ತಮ್ಮ ಸ್ವಯಂ ನಿವೃತ್ತಿಯ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದರು.

ಐದು ವರ್ಷಗಳ ಹಿಂದೆ ಗಾಂಧೀ ಜಯಂತಿ ಆದ ಮಾರನೇ ದಿನ ಅಕ್ಟೋಬರ್ ಮೂರರಂದು ಆಫೀಸು ಪ್ರಾರಂಭವಾದ ಮೇಲೆ ಹನ್ನೊಂದು ಗಂಟೆಯ ಹೊತ್ತಿಗೆ  ತಾವು ಕೆಲಸ ಮಾಡುತ್ತಿದ್ದ ಖುರ್ಚಿ ಬಿಟ್ಟು ಮೇಲೆದ್ದರು. ಅಂದು ಅವರ ಕಣ್ಣು ಸ್ವಲ್ಪ ಜಾಸ್ತಿಯೇ ಒದ್ದೆಯಾಯಿತು. ತಮ್ಮ ಕೆಲಸವನ್ನು  ಅವರು  ತುಂಬಾ  ಇಷ್ಟಪಟ್ಟು,ಬೇಸರವಿಲ್ಲದೆ ಮಾಡಿಕೊಂಡು ಬಂದಿದ್ದರು. ರಾಯರು  ತಮ್ಮ ಕೆಲವು ಮೇಲಾಧಿಕಾರಿಗಳು,ಕೆಲ ಸಹೋದ್ಯೋಗಿಗಳು ಹಾಗೂ ಗ್ರಾಹಕರ ಜತೆ ಸಾಕಷ್ಟು ಕಿರಿಕಿರಿ ಅನುಭವಿಸಿದ್ದರು. ಇಲ್ಲವೆಂದಲ್ಲ. ಆದರೆ ಅದೆಲ್ಲಾ part and parcel of the game ಎಂದು ಅಂದಂದಿಗೆ ಬಿಟ್ಟುಬಿಡುತ್ತಿದ್ದರು. ನಿನ್ನೆಯ ನ್ಯೂಸ್ ಪೇಪರ್ ಸುದ್ದಿ  ನೋಡಿದ ಮೇಲೆ, ಇಂದು ಬೆಳಗ್ಗೆ ಎದ್ದು ಕಾಫಿ ಕುಡಿದ ನಂತರ ತಮ್ಮ ಲ್ಯಾಪ್ ಟಾಪ್ ತೆಗೆದು  ಇಂಟರ್ನೆಟ್ ನಲ್ಲಿ ಗೂಗಲ್ ಸರ್ಚ್ ಗೆ ಹೋಗಿ ತಮ್ಮ ನಿವೃತ್ತಿ ವೇತನ ಎಷ್ಟು ಹೆಚ್ಚಾಗಬಹುದೆಂದು ನೋಡಿದರು. ಅವರು ತಮ್ಮ ಇಲಾಖೆಯ ಅಕೌಂಟ್ಸ್ ವಿಭಾಗದಲ್ಲಿ ಒಂದು ದಿನವೂ ಕೆಲಸ ಮಾಡಿದವರಲ್ಲ. ಇತರೇ ವಿಭಾಗದಲ್ಲೇ ತಮ್ಮ ಇಡೀ ಸರ್ವಿಸ್ ಮುಗಿಸಿದ್ದರು. ಹೀಗಾಗಿ ಏಳನೇ ವೇತನ ಆಯೋಗದ ಮುಖ್ಯಾಂಶಗಳನ್ನು ಓದಿದಾಗ  ಆ  ಗೂಢ, ತಾಂತ್ರಿಕ ಪದಗಳಾವುವೂ ಅವರಿಗೆ ಅರ್ಥವಾಗಲಿಲ್ಲ. ದುಡ್ಡು ಕೈಗೆ  ಬಂದಾಗ ಹೇಗೂ ತಿಳಿಯುತ್ತದಲ್ಲ ಎಂದು ನಿರ್ಲಿಪ್ತರಾಗಿ ಪೇಪರ್ ಓದಲು ಕುಳಿತರು.

 -೨-

ಮೈಸೂರು ಆನಂದರಾವ್ ಪದ್ಮನಾಭರಾವ್ ಎಂಬ ಹೆಸರು ಛೋಟಾ ಸಹಿಗಾಗಿ MAP ಆಯಿತು. ಕೆಲಸಕ್ಕೆ ಸೇರಿದ ಹೊಸತರಲ್ಲಿ ಸಹೋದ್ಯೋಗಿಗಳು, ಮೇಲಾಧಿಕಾರಿಗಳು ದಿನನಿತ್ಯದ ಕಚೇರಿ ಕೆಲಸದಲ್ಲಿ ‘ಪದ್ಮನಾಭರಾವ್’ ಎಂದು ಅಷ್ಟು ಉದ್ದದ ಹೆಸರನ್ನು ದಿನಕ್ಕೆ ಹತ್ತು ಹನ್ನೆರೆಡು ಬಾರಿ ಪೂರ್ತಿ ಕರೆಯಲು ಕಷ್ಟ ಪಡುವಂತಾಯಿತು. ದಕ್ಷಿಣ ಕರ್ನಾಟಕದವರಾದ ಅವರಿಗೆ ಹೆಸರಿನ ಜತೆ ಸೇರುವ  ಮನೆತನದ, ಊರಿನ ಹೆಗಡೆ, ಹಿತ್ತಲಮನಿ, ನಾಯಕ ಇತ್ಯಾದಿ ಸರ್ ನೇಮ್ ಇಲ್ಲ. ಮ್ಯಾಪ್ ಎಂದು ಕರೆಯುವುದು ಆಫೀಸಿನ ಶಿಷ್ಟಾಚಾರಕ್ಕೆ ಅಪಚಾರ ಮಾಡಿದಂತೆ. ಪದ್ಮ ರಾವ್ ಎಂದು ಹ್ರಸ್ವ ಮಾಡಿದರೆ ಹೆಂಗಸಿನ ಹೆಸರು; ಬರೀ ರಾವ್ ಎನ್ನಲು ಇನ್ನಿಬರು ರಾವ್ ಗಳು ಆಗಲೇ ಆ ಆಫೀಸ್ ನಲ್ಲಿ ಇದ್ದರು. ಒಬ್ಬರು ರಾಮರಾವ್ ಮತ್ತೊಬ್ಬರು ಗುರುರಾಜರಾವ್. ಹೀಗಾಗಿ ಅವರುಗಳು ಆರ್ ರಾವ್, ಜಿರಾವ್ ಆಗಿದ್ದರು. ಅದೇ ರೀತಿ ಈ ನಮ್ಮ ಪದ್ಮನಾಭರಾವ್ ಪೀರಾವ್, ಪೀರಾಯರಾಗಿ ಅವರ ನಿಜ ನಾಮಧೇಯವೇ ಮರೆತುಹೋಗುವಷ್ಟು ಖಾಯಂ ಆಗಿಹೋಯಿತು. ಕಳೆದ ಮಾರ್ಚಿಗೆ ರಾಯರಿಗೆ ಐವತ್ತೊಂಬತ್ತು ವರ್ಷ ತುಂಬಿತು. ಕೆಲಸದಲ್ಲಿದ್ದಿದ್ದರೆ ಮುಂದಿನ ವರ್ಷ ಹೊಸ ಪೇ ಸ್ಕೇಲಿನಲ್ಲಿ ಕೈತುಂಬಾ ಹಣ, ನಿವೃತ್ತಿವೇತನದ ಆರ್ಡರ್ ಪಡೆದು, ಸರ್ಕಾರಿ ವೆಚ್ಚದಲ್ಲಿ ಶಾಲು ಹೊಂದಿಸಿಕೊಂಡು, ಎರಡೂ ಕೈಗೆ ನಿಂಬೆಹಣ್ಣು, ಕೊರಳಿಗೊಂದು ಹೂವಿನಹಾರವನ್ನು ತಮ್ಮ ಮೇಲಧಿಕಾರಿಯಿಂದ ಹಾಕಿಸಿಕೊಂಡು ಮನೆಗೆ ಬರಬಹುದಿತ್ತು. ಐದು ವರ್ಷದ ಹಿಂದೆಯೇ ಇವನ್ನೂ ಅವರ ಆಫೀಸಿನವರೇ ಸೇರಿ ಮಾಡಿದ್ದರು. ಇಲ್ಲವೆಂದೆಲ್ಲ. ಕಳೆದು ಹೋದ ದಿನಗಳನ್ನು ಜ್ಞಾಪಿಸಿಕೊಂಡು ಪ್ರಯೋಜನವೇನು ಎಂದು ಒಮ್ಮೆ ತಲೆಕೊಡವಿ ನ್ಯೂಸ್ ಪೇಪರ್ ನಲ್ಲಿ ಮತ್ತೆ  ಮಗ್ನರಾದರು. ರಾಯರ ಆಸಕ್ತಿಗಳೂ ವಿಭಿನ್ನವಾದವು. ಯಾವುದನ್ನೂ ಹೆಚ್ಚು ಹಚ್ಚಿಕೊಂಡವರಲ್ಲ. ಈಗ ಮೊಬೈಲ್ ಅನ್ನೇ ತೆಗೆದುಕೊಳ್ಳಿ. ಲ್ಯಾಂಡ್ ಲೈನ್ ಫೋನಿಗೆ ಒಗ್ಗಿಹೋಗಿದ್ದ ಅವರಿಗೆ ಬೇಸಿಕ್ ಸೆಟ್ ಮೊಬೈಲ್ ಗೆ ಹೊಂದಿಕೊಳ್ಳಲು ಸುಮಾರು ಮೂರ್ನಾಲಕ್ಕು ತಿಂಗಳು ಹಿಡಿಯಿತು. ಯಾರಿಗೆ ಫೋನ್ ಮಾಡಬೇಕೋ ಆ ಮೊಬೈಲ್ ಸಂಖ್ಯೆ ಅಲ್ಲೇ ಸೇವ್ ಆಗಿದ್ದರೂ ಅದನ್ನು ಹುಡುಕುವುದು ಹೇಗೆ ಎಂದು  ಮೊದಮೊದಲಿಗೆ ತಿಳಿಯುತ್ತಿರಲಿಲ್ಲ. ಲ್ಯಾಂಡ್ ಲೈನ್ ಫೋನಿನಲ್ಲಿ ಬಟನ್ ಮೂಲಕ ಒಂದೊಂದೇ ಸಂಖ್ಯೆ ಒತ್ತಿ ಮಾಡುತ್ತಿದ್ದಂತೆ ಮೊಬೈಲ್ ನಲ್ಲೂ ಮಾಡುತ್ತಿದ್ದರು . ನಂತರ ಕಾಲೇಜು ಓದುತ್ತಿದ್ದ  ಮಕ್ಕಳಿಂದ ಸೇವ್ ಆಗಿದ್ದ ನಂಬರ್ ಹುಡುಕುವುದನ್ನು ಕಲಿತರು. ಹಾಗೇ ಒಂದೊಂದಾಗಿ ಹೊಸ  ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡುವುದು, sms ಮಾಡುವುದು ಕಲಿತರು. ನಂತರ ಒಂದೊಂದೇ ಹೆಜ್ಜೆ ಮುಂದುವರೆದು touch screen, smart phone, whatsapp ತನಕ ಬಂದಿದ್ದಾರೆ. ಇವೆಲ್ಲವನ್ನೂ ಕಲಿಯುವಾಗ, ಕಲಿತ ಹೊಸತರಲ್ಲಿ ಒಂದಷ್ಟು ಕುತೂಹಲವಿತ್ತು. ಈಗ ತೀರಾ ಅನಿವಾರ್ಯವಾದರೆ ಮಾತ್ರ. ವಾಟ್ಸಪ್ಪ್ ನಲ್ಲೇ ಮುಳುಗಿಹೋಗುವ ಮಂದಿ ಅಲ್ಲ ರಾಯರು. ದಿನಕ್ಕೆ ಒಂದು ಸಲ ಐದಾರು ನಿಮಿಷ ನೋಡಿದರೆ ಹೆಚ್ಚು. ಡೆಸ್ಕ್ ಟಾಪ್ ಕಂಪ್ಯೂಟರ್ ನಲ್ಲಿ ಸಿನಿಮಾ ನೋಡುವುದು, ಹಾಡು ಕೇಳುವುದು, ಸ್ನೇಹಿತರಿಗೆ ಈಮೈಲ್ ಕಳಿಸುವುದು ಇಷ್ಟು ಕಲಿತುಕೊಂಡಿದ್ದರು . ಮಕ್ಕಳು ಆ ಹಳೆಯ ಡಬ್ಬಾ ಕಂಪ್ಯೂಟರ್ ಅನ್ನು ಅಟ್ಟಕ್ಕೆ ಹಾಕಿ ಲ್ಯಾಪ್ ಟಾಪ್ ತಂದಾಗ ರಾಯರಿಗೆ ಬೇಸರವೇ ಆಯಿತು.

ಮಕ್ಕಳು ತಮ್ಮ ಓದು, ಕೆಲಸದ ನಡುವೆ ಒಂದೆರೆಡು ದಿನ ಲ್ಯಾಪ್ ಟಾಪ್ ಉಪಯೋಗಿಸುವ ಬಗ್ಗೆ ಹೇಳಿಕೊಟ್ಟರು. ಅಪ್ಪನ ಪ್ರಶ್ನೆಗಳಿಗೆ ಉತ್ತರ ಕೊಟ್ಟೂ ಕೊಟ್ಟೂ ಬೇಸರವಾಗಿ ಇದು ಹೇಳಿಕೊಟ್ಟರೆ ಬರಲ್ಲ. ನೀವೇ ಕಲಿಯಿರಿ ಎಂದು ಬಿಟ್ಟರು. ಕೊನೆಗೆ ಪೀರಾಯರು ಲ್ಯಾಪ್ ಟಾಪ್ ಎಂಬ ಮೋಹಿನಿಗೆ ಎಷ್ಟು ಅಡಿಕ್ಟ್ ಆದರೆಂದರೆ  facebook, ಯು ಟ್ಯೂಬ್, ಅರ್ನಾಬ್ ಗೋಸ್ವಾಮಿಯವರ times hour ನ debateಗಳ ಹಿಂದಿನ ಸಂಚಿಕೆಗಳು, ಹಳೆಯ ಹಿಂದಿ ಸಿನಿಮಾಗಳು ಒಂದೇ ಎರಡೇ? ಹೆಂಡತಿ, ಮಕ್ಕಳು ಅಷ್ಟು ಕಾಲ ಆ ಮೋಹಿನಿಯ ಜತೆ ಇರಬೇಡಿ; ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ದಿನಾ ಬೈಯಲು ಶುರು ಮಾಡಿದರು. ಆ ವೇಳೆಗೆ ರಾಯರಿಗೂ  ಸಾಕು ಎನಿಸಿತ್ತು.ಈಗ ವಾರಕ್ಕೊಮ್ಮೆ ತಮ್ಮ mail  inbox ನೋಡಿ  ಬೇಡದ ಈಮೈಲ್ ಗಳನ್ನೆಲ್ಲಾ ಡಿಲೀಟ್ ಮಾಡುತ್ತಾರೆ. ಅಷ್ಟೇ. ಆ ಮೋಹಿನಿಯ ಮೇಲಿನ ಆಸೆ ಈಗ  ಮೊದಲಿನಷ್ಟು ಇಲ್ಲ. ಯಾವುದನ್ನೂ ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳದ ರಾಯರ  ರೀತಿ ಕಂಡು  ಹೆಂಡತಿ ಮಕ್ಕಳಿಗೇ ಒಮ್ಮೊಮ್ಮೆ ಆಶ್ಚರ್ಯ ಆಗುತ್ತದೆ. ಜತೆಗೆ ಆತಂಕವೂ ಸಹ.  ಮಕ್ಕಳ ಓದು, ಕೆಲಸ, ಮದುವೆ ಎಲ್ಲಾ ಆಯಿತು. ಎಂದಾದರೊಂದು ದಿನ ಈ ಸಂಸಾರವೂ ಸಾಕೆಂದು ಯಾವುದಾದರೂ  ವೃದ್ಧಾಶ್ರಮಕ್ಕೋ,ಮಠಕ್ಕೋ, ಹಿಮಾಲಯಕ್ಕೋ ಹೊರಟುಹೋಗುತ್ತಾರೇನೋ ಎಂದು. ಮದುವೆಯಾದ ಹೊಸ ಬಿಸಿಯಲ್ಲಿ ಒಮ್ಮೆ  ಹೆಂಡತಿಗೆ  ತಮಗೆ ಆಲ್ ಇಂಡಿಯಾ ಪರ್ಮಿಟ್ ಇರುವ ಬಸ್ಸಿನ  ಡ್ರೈವರ್ ಅಥವಾ ಲಾರಿ ಡ್ರೈವರ್ ಆಗ ಬೇಕೆಂದು ಆಸೆಯಿತ್ತು. ಅದರಿಂದ ಬೇಕಾದಷ್ಟು ಊರು,ಪಟ್ಟಣ,ನಗರಗಳನ್ನು ಸುತ್ತಬಹುದಿತ್ತು ಎಂದಿದ್ದರು. ಅದ್ಯಾವುದೂ ಆಗದಿದ್ದರೆ  ಹಿಮಾಲಯಕ್ಕೆ ಹೋಗಿ ಸನ್ಯಾಸಿ ಆಗುವ ಬಯಕೆಯಿತ್ತೆಂದೂ   ಹೇಳಿದ್ದರು. ಆದರೆ ಸಂಸಾರ  ಕಟ್ಟಿಕೊಂಡ ಮೇಲೆ ಸನ್ಯಾಸಿ ಆಗುತ್ತೇನೆಂದು   ಹೋಗಬಾರದು. ಹೋದರೆ ತಪ್ಪು ಎಂದಿದ್ದರು. ಅದು ಮಕ್ಕಳನ್ನು ತಲುಪಿ ಈಗ ರಾಯರ ಹಿಮಾಲಯದ ಯಾತ್ರೆ  ಅವರ ಹೆಂಡತಿ  ಮತ್ತು ಮಕ್ಕಳಿಗೆ ಹಾಸ್ಯದ ವಸ್ತು ಆಗಿದ್ದರೂ  ಸಹ ಮುಖ್ಯವಾಗಿ ಅವರ ಹೆಂಡತಿಗೆ ಸ್ವಲ್ಪ  ಆತಂಕವೂ ಇತ್ತು.

 -೩-

ರಾಯರು ಹೊಸದಾಗಿ ಪ್ರಾರಂಭವಾಗಿದ್ದ ಕನ್ನಡ ದಿನಪತ್ರಿಕೆಯ ಮೊದಲ ಸಂಚಿಕೆಯನ್ನು ಕೈಯಲ್ಲಿ ಹಿಡಿದು ತಮ್ಮ ಫ್ಲ್ಯಾಟ್ ನ ಬಾಲ್ಕನಿಯಲ್ಲಿ ಹಾಕಿದ್ದ ಆರಾಮ ಖುರ್ಚಿಯಲ್ಲಿ ಕುಳಿತು ಕಾಫಿ ಕುಡಿಯುತ್ತಾ ಕೂತಿದ್ದರು. ಒಂದೊಂದೇ ಪುಟಗಳನ್ನು ತಿರುವಿಹಾಕುತ್ತಾ ಹಾಗೆಯೇ ಕಣ್ಣಾಡಿಸಿದರು. ನಮ್ಮ ಪತ್ರಿಕೆಯ ಸಿಬ್ಬಂದಿ ಎಂಬ ಪುಟದಲ್ಲಿ ಪ್ರಧಾನ ಸಂಪಾದಕರಿಂದ ಹಿಡಿದು ಜಿಲ್ಲಾ ವರದಿಗಾರರ ತನಕ ಅವರವರ ಫೋಟೋ ಮತ್ತು ಕಿರು ಪರಿಚಯವಿತ್ತು. ಈ ಪತ್ರಿಕೆಯವರೂ ಒಂದು ತರಹ ಐ ಟಿ ಮಂದಿಯಂತೆ. ಒಂದೇ ಪತ್ರಿಕೆಯಲ್ಲಿ ಜಾಸ್ತಿ ವರುಷ ಇರುವುದಿಲ್ಲ. ರೆಕ್ಕೆ  ಪುಕ್ಕ ಕಟ್ಟಿಕೊಂಡವರಂತೆ ಒಂದರಿಂದ ಮತ್ತೊಂದಕ್ಕೆ ಹಾರುತ್ತಿರುತ್ತಾರೆ. ರಾಯರು ಓದುತ್ತಿದ್ದ ಹಿಂದಿನ ಪತ್ರಿಕೆಯಲ್ಲಿದ್ದ ಪ್ರಧಾನ ಸಂಪಾದಕರನ್ನು ಆ ಪತ್ರಿಕೆಯನ್ನು ಕೊಂಡುಕೊಂಡ ಹೊಸ  ಮಾಲೀಕರು ‘ನಿಮ್ಮ ಸೇವೆ ನಾಳೆಯಿಂದ ನಮಗೆ ಬೇಡ’ ಎಂದು ಲೆಕ್ಕಾ ಚುಕ್ತಾ ಮಾಡಿ ಮನೆಗೆ ಕಳಿಸಿದ್ದರು. ಆ ಸಂಪಾದಕರ ಮೇಲೆ ಪ್ರೀತಿ ಇಟ್ಟಿದ್ದ ಒಂದಷ್ಟು ಜನ ಸಿಬ್ಬಂದಿಗಳೂ ರಾಜೀನಾಮೆ ನೀಡಿದರು. ಒಂದಾರು ತಿಂಗಳ ನಂತರ ಪ್ರಾರಂಭವಾದ ಈ ಹೊಸ ಪತ್ರಿಕೆಯಲ್ಲಿ ಅವರೆಲ್ಲಾ ಹೊಸ ಗೆಟಪ್ಪಿನಲ್ಲಿ ಮಿಂಚುತ್ತಿದ್ದರು. ಜತೆಗೆ ಒಂದಷ್ಟು ಜನ ಹೊಸ ಸಿಬ್ಬಂದ್ಧಿಯೂ ಇದ್ದರು. ಅದರಲ್ಲಿ ಒಂದು ಮುಖ, ಹೆಸರು ನೋಡಿದಾಕ್ಷಣ ರಾಯರಿಗೆ ಖುಷಿಯಾಯಿತು. ತಮ್ಮ ಕೆಲಸದ ಹೊಸದರಲ್ಲಿ ಸ್ನೇಹಿತನಾಗಿದ್ದ ಆತ ಬೇರೆ ಊರಿಗೆ ವರ್ಗವಾಗಿ ಹೋದ ನಂತರ ಸಂಪರ್ಕವೇ ತಪ್ಪಿ ಹೋಗಿತ್ತು. ಪತ್ರಿಕೆಯ ಎಡಿಟೋರಿಯಲ್ ವಿಭಾಗದ ಫೋನ್ ನಂಬರ್ ಅನ್ನು ತಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡರು. ಪತ್ರಿಕೆಯನ್ನು ಪಕ್ಕಕ್ಕಿಟ್ಟು ಫೋನ್ ಮಾಡೇ ಬಿಟ್ಟರು. ಆ ಕಡೆಯಿಂದ ಬರುವ ಧ್ವನಿಗಾಗಿ ಕಾದರು.

‘ರಾಜು ವಶಿಷ್ಠ ಇದ್ದಾರೇನಮ್ಮಾ? ಅವರ ಕ್ಯಾಬಿನ್ ಗೆ ಕನೆಕ್ಷನ್ ಕೊಡಕ್ಕಾಗುತ್ತಾ?’

. ‘ಸಾರಿ ಸರ್. ಇವತ್ತು  ನಮ್ಮ ಪತ್ರಿಕೆಯ ಮೊದಲನೇ ದಿನ. ಎಲ್ಲರೂ ಬ್ಯುಸಿ ಆಗಿದ್ದಾರೆ. ರಾಜ್ಯದ ವಾರ್ತಾ ಮಂತ್ರಿಗಳು ಬಂದಿದ್ದಾರೆ.ಏನಾದರೂ ಮೆಸೇಜ್ ಇದ್ದರೆ ಕೊಡಿ. ಅವರ ಕ್ಯಾಬಿನ್ ಗೆ ತಲುಪಿಸಬಹುದು.’
 ‘ಅಷ್ಟು ಮಾಡಮ್ಮ. ನನ್ನ ಹೆಸರು ಪದ್ಮನಾಭರಾವ್  ಅಂತ. ಮೊಬೈಲ್ ನಂಬರ್ ೮೧೫೭……… ಅವರಿಗೆ ಬಿಡುವಾದಾಗ ಕಾಂಟ್ಯಾಕ್ಟ್ ಮಾಡಕ್ಕೆ ಹೇಳಮ್ಮ. ಅಷ್ಟೇ’
‘ಓಕೆ ಸರ್’.
ಫೋನ್ ಇಟ್ಟಮೇಲೆ ಪೀರಾಯ ಅಂತ ಹೇಳಬೇಕಿತ್ತು. ಯಾರೋ ಪದ್ಮನಾಭರಾವ್ ಅಂತ ರಾಜು ಫೋನ್ ಮಾತಾಡ್ತಾನೋ ಇಲ್ವೋ? ಅಂತ ಅನುಮಾನವಾಯ್ತು.ಮತ್ತೆ ಫೋನ್ ಮಾಡಿದರು. ಎಂಗೇಜ್ ಆಗಿತ್ತು. ಹತ್ತು ನಿಮಿಷ ಬಿಟ್ಟು ಮತ್ತೆ ಮಾಡಿದರು. ಎಂಗೇಜ್ ಟೋನ್. ಅದು ಲ್ಯಾನ್ಡ್ ಲೈನ್ ಫೋನ್ ಬೇರೆ. ಮೊಬೈಲ್ ಆದ್ರೂ ಆಗಿದ್ರೆ ಒಂದು sms ಕಳಿಸಬಹುದಿತ್ತು. ನಾಲ್ಕೈದು ದಿನ ನೋಡೋಣ. ಅವನು ಬರದಿದ್ದರೆ ಆ ಪತ್ರಿಕೆಯ ಆಫೀಸ್ ಗೇ ಹೋದರಾಯ್ತು. ಅವಾಗ ಪೀರಾಯ ಅಂತಲೇ ಹೇಳಿದರಾಯ್ತು ಎಂದುಕೊಂಡು ಸುಮ್ಮನಾದರು.
.ರಾಜು ವಶಿಷ್ಠನ  ಹೆಸರು ಕಂಡ ಮೇಲೆ ಪತ್ರಿಕೆಯ ಇತರ ಸುದ್ದಿಗಳ ಮೇಲೆ ರಾಯರ ಗಮನ ಅಷ್ಟಾಗಿ ಹೋಗಲಿಲ್ಲ. ಸುಮ್ಮನೆ ಕಣ್ಣಾಡಿಸಿದರು. ಜಾಹೀರಾತುಗಳನ್ನು ನೋಡಿದರು. ಪತ್ರಿಕೆಯನ್ನು ಅಲ್ಲೇ ಬಿಟ್ಟು ಎದ್ದರು. ಹೆಂಡತಿಗೆ ತನ್ನ ಸ್ನೇಹಿತನ ಹೊಸ ಕೆಲಸ, ಹೊಸ ಅವತಾರದ ಬಗ್ಗೆ ಹೇಳಬೇಕೆನ್ನಿಸಿತು. ಅಡಿಗೆ ಮನೆಗೆ ಬಂದರು. ಮಗ ಸೊಸೆ ಕೆಲಸಕ್ಕೆ ಹೋಗಲು ತಯಾರಾಗಿದ್ದರು. ಅವರಿಗೆ ಲಂಚ್ ಬಾಕ್ಸ್ ರೆಡಿ ಮಾಡುತ್ತಾ ಇದ್ದ ಹೆಂಡತಿ,’ಏನು ರಾಯರಿಗೆ ಎರಡನೇ ಡೋಸ್ ಕಾಫಿ ಬೇಕೋ?’.
‘ಅಪ್ಪಾ ನಿನಗೂ ಅರವತ್ತಾಯಿತು. ಸ್ವಲ್ಪ ಕಾಫಿ ಕಮ್ಮಿ ಮಾಡಿ, ಹಣ್ಣಿನ ಜ್ಯೂಸ್ ಅಭ್ಯಾಸ ಮಾಡಿಕೊಳ್ಳಿ’ ಮಗನ ಉಪದೇಶ.
‘ಮಾವ ಹೋದವಾರ ನಾವು ಹೋಗಿದ್ದ ಫಂಕ್ಷನ್ ಅಲ್ಲಿ ಅತ್ತೇನ ನೋಡಿ ಎಲ್ಲರೂ  ಇನ್ನೂ ಎಷ್ಟು ಯಂಗ್ ಆಗಿದ್ದಾರೆ ನಿಮ್ಮ ಅತ್ತೆ ಅಂತ ಹೊಗಳಿದರು’  ಸೊಸೆ ಇಂಡೈರೆಕ್ಟ್ ಆಗಿ ಚುಚ್ಚಿದಳು.
ಹೆಂಡತಿ ವಾರೆಗಣ್ಣಿನಿಂದ ರಾಯರನ್ನು ನೋಡಿ ನಕ್ಕಳು.
‘ಅಲ್ರಯ್ಯಾ ನೀವೆಲ್ಲಾ  ನಾನು  ದಿನಾ ಕಳ್ಳ ಭಟ್ಟಿ ಸಾರಾಯಿ ಕುಡೀತೀನಿ ಅನ್ನೋಹಾಗೆ ಮಾತಾಡ್ತೀರಲ್ಲಾ. ನನಗೆ ಈಗ ಕಾಫಿ ಬೇಡ. ನನ್ನ ಹಳೇ ಸ್ನೇಹಿತ ರಾಜು ವಶಿಷ್ಠ ಅನ್ನೋನು ಇವತ್ತು ಹೊಸ  ಕನ್ನಡ ಪೇಪರ್ ಶುರುವಾಗಿದೆಯಲ್ಲ ಅದರ ಉಪಸಂಪಾದಕ ಆಗಿದ್ದಾನೆ. ಅದನ್ನು ಹೇಳೋಕ್ಕೆ ಅಂತ ಬಂದ್ರೆ ತಲಾ ತಟ್ಟಿ ಒಂದೊಂದು ಮಾತಾಡ್ತಿದೀರಲ್ಲಾ ……. ?’
‘ಹೂ ಮುಂದಕ್ಕೆ ಹೇಳಿ. ನೀವೆಲ್ಲಾ  ಹೀಗೆ ಹೇಳಿದರೆ ನಾನು ಹಿಮಾಲಯಕ್ಕೆ ಹೋಗುತ್ತೇನೆ ಅಂತ? ಯಾಕೆ ನಿಲ್ಲಿಸಿಬಿಟ್ಟಿರಿ?’.
ಹೆಂಡತಿಯೂ ಮಗ ಸೊಸೆಯ ಪರವಹಿಸಿ ಕಿಚಾಯಿಸಿದಾಗ ರಾಯರು ಅಡಿಗೆ ಮನೆಯಿಂದ ಹೊರಬಂದು,ಬಾಲ್ಕನಿಯಲ್ಲಿ ಕೂತರು.
‘ಸಾರಿ ಅಪ್ಪ’, ‘ಸಾರಿ ಮಾವ ಹೋಗಿಬಿಟ್ಟು ಬರ್ತೀವಿ’.  ಮಗ ಸೊಸೆಯ ಮಾತಿಗೆ ರಾಯರ ಮೌನ ಮುರಿಯುವ ಶಕ್ತಿಯಿರಲಿಲ್ಲ. .
ಮಗ ಸೊಸೆ ಹೊರಟಮೇಲೆ  ರಾಯರ ಹೆಂಡತಿ ಬಾಲ್ಕನಿಗೆ ಬಂದು ‘ಎಳೇ ಮಕ್ಕಳ ತರ ಮುಖ ಊದಿಸ್ಕೊತೀರಲ್ಲ.  ಏನೋ ಒಂದು ಜೋಕ್ ಮಾಡಿದೆವು. ಈಗ ಹೇಳಿ ಆ ರಾಜು ವಶಿಷ್ಠ ಅಂದ್ರೆ ನಾಲ್ಕೈದು  ಕಡೆ ಕೆಲಸ ಮಾಡಿ,ಬಿಟ್ಟು,  ನಾಟಕ, ಸಿನಿಮಾ  ಅಂತ ಓಡಾಡಿಕೊಂಡಿದ್ದು ಅಪ್ಪ ಮಾಡಿಟ್ಟಿದ್ದ ಆಸ್ತಿನೆಲ್ಲಾ ಕರಗಿಸಿ ಊರು ಬಿಟ್ಟು ಹೋಗಿದ್ದನಲ್ಲ ಅವನು ತಾನೇ? ಮೈಸೂರಿನಲ್ಲಿ ನಾವಿದ್ದಾಗ ನಮ್ಮ ಮನೆಗೂ ನಾಲ್ಕೈದು ಸಲ ಬಂದಿದ್ದನಲ್ಲ.’
 ರಾಯರು ಹೆಂಡತಿಯ ಕಡೆ ತಿರುಗಿ ನೋಡದೆ  ಬಾಲ್ಕನಿಯಿಂದ   ಬೀದಿಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ನೋಡುತ್ತಾ ‘ಹೂಂ  ಅಷ್ಟಾದರೂ ನಿನಗೆ ಜ್ಞಾಪಕ ಇದೆಯಲ್ಲಾ?’
‘ಈಗೇನು ಆತ ಮನೆಗೆ  ಬಂದ ದಿನ ಅವನಿಗೆ ಇಷ್ಟವಾದ ಅಡಿಗೆ ತಿಂಡಿ  ಮಾಡಿದರೆ ಆಯ್ತಲ್ಲ. ಬಿಡಿ. ಎದ್ದೇಳಿ ತಿಂಡಿ ತಿನ್ನೋಣ ಬನ್ನಿ. ಬಿ ಪಿ ಮಾತ್ರೆ ತೊಗೋಬೇಕಲ್ಲ?’.
-೪-
ರಾಯರು  ನಿನ್ನೆಯೆಲ್ಲಾ ಹೆಚ್ಚು ಮಾತಾಡಲಿಲ್ಲ. ಇಂದು ಬೆಳಗಿನಿಂದ ಅವರ ದಿನಚರಿ ಸ್ವಲ್ಪ ಬದಲಾಯಿತು. ಮಾಮೂಲಿಯಾಗಿ ಬೆಳಗ್ಗೆ  ಏಳು ಗಂಟೆಗೆ ಏಳುತ್ತಿದ್ದ ರಾಯರು ಆರಕ್ಕೇ ಎದ್ದರು. ಬೆಳಗಿನ ಮಾಮೂಲಿ ಕೆಲಸ ಮುಗಿಸಿದರು. ಪಂಚೆಯುಟ್ಟೇ ಬೆಳಗಿನ ವಾಕಿಂಗ್ ಗೆ ಹೋಗುತ್ತಿದ್ದವರು ಅಂದು ಪ್ಯಾಂಟ್ ಹಾಕಿಕೊಂಡು  ಫುಲ್ ತೋಳಿನ ಶರ್ಟ್ ತೊಟ್ಟು, ಅದರ ಮೇಲೆ ಶಾಲು ಹೊದ್ದರು. ಮೊಬೈಲ್ ಅನ್ನು ಶರ್ಟ್ ನ ಎಡಭಾಗದಲ್ಲಿ ಇಟ್ಟುಕೊಂಡರೆ ಹೃದಯಕ್ಕೆ ತೊಂದರೆ ಎಂದು ಪತ್ರಿಕೆಯೊಂದರಲ್ಲಿ ಓದಿದ್ದರು. ಅಂದಿನಿಂದ ಪ್ಯಾಂಟ್ ನ ಬಲಭಾಗದಲ್ಲಿ ಇಟ್ಟುಕೊಂಡರು. ಪ್ಯಾಂಟ್ ನಲ್ಲೂ ಇಡಬಾರದು ಇಟ್ಟರೆ ಪುರುಷತ್ವದ ಹರಣ ಆಗಬಹುದು ಎಂದೂ ಅದೇ ಪತ್ರಿಕೆಯಲ್ಲಿ ಬರೆದಿದ್ದರು. ರಾಯರಿಗೆ ನಗು ಬಂತು. ‘ಅದರ’ ಕೆಲಸ ಮುಗಿಯಿತಲ್ಲ ನನಗೇಕೆ ಚಿಂತೆ ಎಂದು ಇನ್ನೊಮ್ಮೆ ನಗು ಬಂತು. ವಯಸ್ಸು ಅರವತ್ತಾದರೂ ಈ ಪೋಲಿತನ ಹೋಗಲಿಲ್ಲವಲ್ಲ! ನನಗೆ ಮಾತ್ರ ಹೀಗೆಯೋ? ಅಥವಾ ಎಲ್ಲರೂ ಅಂತರಂಗದಲ್ಲಿ ಪೋಲಿಗಳೋ?. ಹೆಂಡತಿ ಅಡಿಗೆ ಮನೆಯಲ್ಲಿ ಬ್ಯುಸಿ ಆಗಿದ್ದಳು.’ವಾಕಿಂಗ್ ಗೆ ಹೊರಟೆ. ಬಾಗಿಲು ಹಾಕ್ಕೋ’ ಎಂದು ಉತ್ತರಕ್ಕೆ ಕಾಯದೆ ಚಪ್ಪಲಿ ಹಾಕಿಕೊಂಡು  ಹೊರಟರು. ಹಿಂದೆಯೇ ಬಂದ ಹೆಂಡತಿಗೆ  ರಾಯರ ಹೊಸ ವಾಕಿಂಗ್ ಡ್ರೆಸ್ ನೋಡಿ ಆಶ್ಚರ್ಯವಾಯಿತು. ಆಮೇಲೆ ಕೇಳಿದರಾಯಿತ್ತೆಂದು ಬಾಗಿಲು ಹಾಕಿಕೊಂಡಳು. ಬೆಳಗ್ಗೆ ತಿಂಡಿ ತಿನ್ನುವಾಗ ‘ಏನಿದು?  ಇವತ್ತು ರಾಯರಿಗೆ ತುಂಬಾ ಖುಷಿಯಾಗಿರುವಂತಿದೆ. ವಾಕಿಂಗ್ ಗೆ ಪ್ಯಾಂಟು, ಮೇಲೆ ಶಾಲು. ಒಳ್ಳೆ ಬುದ್ಧಿಜೀವಿ ತರಹ ಹೊರಟ್ಟಿದ್ದಿರಿ?’
‘ಇನ್ಮೇಲೆ ದಿನಾ ಹೀಗೇನೆ. ನಿನ್ನೆ ವಾಕಿಂಗ್ ಮಾಡುವಾಗ  ಒಬ್ಬರು ಸಿಕ್ಕಿದ್ದರು. ಅವರಿಗೂ ನನ್ನಷ್ಟೇ ವಯಸ್ಸು. ಅವ್ರು ಹೇಳಿದ್ರು ಬೆಳಗಿನ ಹೊತ್ತು ಸ್ವಲ್ಪ ಬ್ರಿಸ್ಕ್ ವಾಕಿಂಗ್ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೇದು. ನಿಮಗೆ ಅದು ಆಯಾಸ ಅಂತ ಅನಿಸದಿದ್ದರೆ ಮಾಡಿ. ಆಯಾಸ ಅಂತ ಅನಿಸಿದ್ರೆ ಬೇಡ ಅಂತ. ಅದಕ್ಕೆ ಇವತ್ತು ಟ್ರೈ ಮಾಡ್ದೆ. ಇವತ್ತೇನು ಅನಿಸಲಿಲ್ಲ. ನೋಡೋಣ ಒಂದು ವಾರ ಕಳಿಲಿ. ಬ್ರಿಸ್ಕ್ ವಾಕಿಂಗ್ ಗೆ ಪಂಚೆ ಸರಿಯಿಲ್ಲ ಅಂತ ಪ್ಯಾಂಟು ಅಷ್ಟೇ’.
‘ಉಪದೇಶ ಮಾಡಿದೋರು ಹೆಂಗಸರೋ ಗಂಡಸರೊ?’
‘ನೀವು ಹೆಂಗಸರು ಹಿಂದಿನ ಜನ್ಮದಲ್ಲಿ ಲಾಯರ್ ಆಗಿದ್ರೇನೋ? ಹೆಂಗಸಲ್ಲ ಮಾರಾಯ್ತಿ. ಗಂಡಸರೇ. ಅದಿರ್ಲಿ ಇವತ್ತು ರಾಜು ಫೋನ್ ಮಾಡಿದ್ದ. ಈ ಭಾನುವಾರ ಬೆಳಗ್ಗೆ ತಿಂಡಿಗೇ ಬರ್ತಾಯಿದ್ದಾನೆ.  ಮಧ್ಯಾಹ್ನ ಊಟಕ್ಕೂ  ಇಲ್ಲೇ ಇರಬಹುದು. ದಿನಾ ಕ್ಯಾಂಟೀನು, ಹೋಟಲ್ನಲ್ಲಿ ತಿಂದು ಬೇಜಾರಿಗಿದೆ ಕಣಯ್ಯಾ ಅಂದ. ಅವನ ಸಂಸಾರ, ಹೆಂಡತಿ, ಮಕ್ಕಳ ಬಗ್ಗೆ ಕುತೂಹಲದಿಂದ ಏನೂ ಕೇಳ್ಬೇಡ. ನಿನ್ನ ಮಗ ಸೊಸೆಗೂ ಹೇಳು’.
‘ಆಯ್ತಪ್ಪ. ನಿಮಗೆ ಬೇಸರ ಆಗೋ ತರಹ ನಾವ್ ನಡ್ಕೊಳದಿಲ್ಲ. ನಮಗೆ ಅಷ್ಟು ಗೊತ್ತಿಲ್ಲವೇ? ನೀವು ಫ್ರೀ ಆಗಿದ್ದೀರಿ ಅಂತ  ಪ್ರತಿ ಭಾನುವಾರ ಬಂದ್ರೆ ನನಗೆ ಎಲ್ಲೂ ಹೋಗಕ್ಕೆ ಆಗಲ್ವಲ್ಲ’.
‘ಅಲ್ವೇ ಅವನೇನು ಪೆದ್ದನೇ? ಅಷ್ಟು ಗೊತ್ತಾಗಲ್ವಾ ಅವನಿಗೆ?’
‘ಅಲ್ಲಾ ಸುಮ್ನೆ ಹೇಳ್ದೆ ‘.
ರಾಜು ವಸಿಷ್ಠ  ಭಾನುವಾರ ಬೆಳಗ್ಗೆ ಒಂಭತ್ತು ಗಂಟೆಗೆ ಸರಿಯಾಗಿ ಬಂದ. ವಾರವೆಲ್ಲಾ ದುಡಿದು ಸುಸ್ತಾಗಿದ್ದ ಮಗ ಸೊಸೆ ಆಗತಾನೆ ಎದ್ದು ಫ್ರೂಟ್ ಜ್ಯುಸ್ ಕುಡಿದು ವಾಕಿಂಗ್ ಗೆ ಹೊರಟಿದ್ದರು. ಮಾಮೂಲಿ ಒಂದೈದು ನಿಮಿಷ ಮಾತಾಡಿದರು. ‘ಭಾನುವಾರ ನಾನು ಬಂದಿದ್ದು  ನಿಮ್ಮ ಹಾಲಿಡೇ ಮೂಡ್ ಗೆ ತೊಂದ್ರೆ ಆಯಿತೇನೋ?’
‘ಇಲ್ಲ ಅಂಕಲ್. ನಿಮ್ಮನ್ನು ನೋಡಿ ಎಷ್ಟು ವರ್ಷ ಆಗಿತ್ತು.  ನೀವು ಅಪ್ಪ ಮಾತಾಡ್ತೀರಿ. ಒಂದರ್ಧ ಗಂಟೇಲಿ ವಾಕಿಂಗ್ ಮುಗಿಸಿ ಬರ್ತೀವಿ’.
‘ಪದ್ಮನಾಭ ಮೂರ್ನಾಲ್ಕು ದಿನಗಳ ಹಿಂದೆ ನಿನ್ನ ಜೊತೆ ಮಾತಾಡೋತನಕ ನೀನು ನನ್ನ ಹಳೇ  ಗೆಳೆಯ ಪೀರಾಯ ಹೌದೋ ಅಲ್ವೋ, ಬೇರೆ ಯಾರೋ ಏನೋ ಅನಿಸಿತ್ತು. ಆದ್ರೆ ಮೊದಲನೇ ದಿನವೇ ಫೋನ್  ಮಾಡಿ  ನನ್ನ ಬಗ್ಗೆ ವಿಚಾರಿಸಿಕೋ ಬೇಕಾದ್ರೆ ಯಾರೋ ನನಗೆ ಗೊತ್ತಿರೋರೇ ಇರಬೇಕೆಂದು ನಿನ್ನ ಮೊಬೈಲ್ ನಂಬರ್ ಸೇವ್ ಮಾಡಿಕೊಂಡು ಇವತ್ತು ಮಾಡ್ದೆ. ಹೊಸ ಪತ್ರಿಕೆ ನೋಡು. ಸ್ವಲ್ಪ ಕೆಲಸ ಜಾಸ್ತಿ. ಜತೆಗೆ ಹೊಸಬರಿಗೆ ದಿನಾ ಸಂಜೆ ಹೊತ್ತು ನಾವೊಂದು ನಾಲ್ಕೈದು ಜನ  ಅವರುಗಳಿಗೆ  ಹೇಗೆ ಬರೆಯಬೇಕು, ಸಂದರ್ಶನ ಮಾಡೋದು ಹೇಗೆ ಇವೆಲ್ಲಾ ಪಾಠ ಮಾಡ್ಬೇಕು’.
‘ಅಲ್ಲಯ್ಯ ರಾಜು ನೀನು ಸಿನಿಮಾ, ನಾಟಕ ಫೀಲ್ಡ್ ನಲ್ಲಿ ಇದ್ದೋನು. ಟಿ ವಿ ಯ ಯಾವುದಾದರೂ ಮನರಂಜನೆಯ ಚಾನೆಲ್ಲೋ, ನ್ಯೂಸ್ ಚಾನೆಲ್ಲೋ  ಸೇರೋದು ಬಿಟ್ಟು ಈ ಪೇಪರ್ ಕಡೆ ಯಾಕೆ ಬಂದೆ?’
‘ಅದೊಂದು ದೊಡ್ಡ ಕಥೆ. ನಡಿ ನಿನ್ನ ರೂಮ್ ಗೆ ಹೋಗೋಣ.’
ಅಷ್ಟರಲ್ಲಿ ರಾಯರ ಹೆಂಡತಿ ಇಬ್ಬರಿಗೂ ತಿಂಡಿ ತಂದರು .’ಮಧ್ಯಾಹ್ನ ಊಟ ಇವತ್ತು ನಮ್ಮ ಮನೆಯಲ್ಲೇ ಆಗಬೇಕು. ಎಷ್ಟು ವರ್ಷಗಳಾಗಿತ್ತು ನಿಮ್ಮನ್ನು ನೋಡಿ’
‘ಇಲ್ಲಮ್ಮ ಇವತ್ತು ಆಗಲ್ಲ.  ಹನ್ನೆರೆಡು ಗಂಟೆಗೆ ಒಂದು ಅರ್ಜೆಂಟ್ ಮೀಟಿಂಗ್ ಇದೆ. ಇನ್ನೇನು ಈ ಊರಿನಲ್ಲೇ ಮೂರ್ನಾಲ್ಕು ವರ್ಷ ಇರುತ್ತೇನಲ್ಲ. ಆಗಾಗ ಬರ್ತಿರ್ತೀನಿ. ನಿಮಗೇ ಬೇಸರವಾಗಬೇಕು. ಇದೆಲ್ಲಿ ಶನಿ  ಪ್ರತಿ ಭಾನುವಾರ ಬಂದು  ಮನೆಗೆ  ವಕ್ರಸ್ಸಕ್ಕೆ ಶುರು ಆಯ್ತಲ್ಲ  ಅಂತ’ .
‘ಅಲ್ಲಯ್ಯಾ ಇಷ್ಟು ವರ್ಷದ ಮೇಲೆ ಬಂದಿದೀಯ. ಸಂಜೆ ತನಕ ಇರ್ತೀಯಾ ಅಂದ್ರೆ ಆಚೆ ಕಡೆ ಕುದುರೆ ಕಟ್ಟಿಹಾಕಿ ಬಂದೋನತರ  ಆಡ್ತೀಯಲ್ಲ.’
‘ಇವತ್ತೊಂದು ದಿನ ಕಣಯ್ಯಾ ಪೀರಾಯ. ಬಾ ಹನ್ನೊಂದು ಗಂಟೆ ತನಕ ಸ್ವಲ್ಪ ಹಳೆ ವಿಷಯ  ಮಾತಾಡೋಣ’.
-೫-
ರಾಜು ವಸಿಷ್ಠ ಬಂದು ಹೋದ ಮೇಲೆ ಪೀರಾಯರ ವಯಸ್ಸು  ಹತ್ತಾರು ವರ್ಷ ಹಿಂದಕ್ಕೆ ಹೋದ ಹಾಗೆ ಆಗಿ, ವಾರವಾರದ ಬಿಪಿ ಚೆಕ್ ಏರು ಪೇರಾಗದೆ ನಾರ್ಮಲ್ ನಲ್ಲೇ ಇತ್ತು. ಮನೆಯಲ್ಲೇ ಬಿಪಿ ಚೆಕ್ ಮಾಡುವ ಒಂದು ಪುಟ್ಟ ಯಂತ್ರವನ್ನು ಮಗ onlineನಲ್ಲಿ ತರಿಸಿಕೊಟ್ಟ ಮೇಲೆ ತಿಂಗಳಿಗೊಂದು ಸಲ ಮಾತ್ರ ಕೌಂಟರ್ ಚೆಕ್ ಗೆಂದು ವೈದ್ಯರ ಬಳಿಗೆ ಹೋಗುತ್ತಿದ್ದರು. ವೈದ್ಯರೂ ಪರ್ವಾಗಿಲ್ಲ ನಾರ್ಮಲ್ ಆಗೇ ಇದೆ. ಗುಡ್ ಎಂದರು. ಒಂದು ಶನಿವಾರ ಪೀರಾಯರು ತಮ್ಮ ರೂಮ್ ನಲ್ಲಿ  ಸೂಟ್ ಕೇಸ್ ಗೆ ನಾಲ್ಕಾರು ಶರ್ಟು, ಪ್ಯಾಂಟು, ವಾಕಿಂಗ್ ಗೆಂದು ಒಂದೆರೆಡು ಟ್ರಾಕ್ ಪ್ಯಾಂಟು,ಒಂದು ಶಾಲು, ಜತೆಗೆ ನಾಲ್ಕಾರು ದಿನಗಳ ಹಿಂದೆ ಕೊಂಡ ಐದಾರು ಪುಸ್ತಕಗಳನ್ನು ಹಾಕಿಕೊಂಡರು.  ಪೀರಾಯರ ಹೆಂಡತಿ  ಹಾಲ್ ನಲ್ಲಿ ಮಧ್ಯಾನ್ಹದ ಹೊಸ ರುಚಿ, ಒಗ್ಗರಣೆ-ಸಾಸಿವೆ ಡಬ್ಬ ಇತ್ಯಾದಿಗಳ ಚಾನೆಲ್  ಜತೆಗೆ   ಗೋಳು ಕರೆಯುವ ಟಿ ವಿ ಧಾರವಾಹಿ ನೋಡುತ್ತಿದ್ದರು. ಊಟ ಮಾಡುವಾಗ ಹೇಳಿದರಾಯ್ತೆಂದು ಅಲ್ಲೇ ಸೋಫಾದಲ್ಲಿ ಕೂತರು.
ಹೆಂಡತಿ ನೋಡುತ್ತಿದ್ದ ಟಿ ವಿ ಧಾರವಾಹಿ ಮುಗಿಯಿತು. ಒಂದಷ್ಟು ಜಾಹೀರಾತುಗಳು ಶುರುವಾಯಿತು. ಇದೇ ಸಮಯ ಸರಿ ಎಂದು ‘ಆ ಟಿ ವಿಗೆ ಸ್ವಲ್ಪ ರೆಸ್ಟ್ ಕೊಡೆ. ಇನ್ನೂ ರಾತ್ರಿ ಬರುವ ಕಣ್ಣೀರ ಧಾರೆಗಳನ್ನು ನೋಡಬೇಕಲ್ಲ. ನಿನಗೊಂದು ವಿಷಯ ಹೇಳಬೇಕಿತ್ತು’.
ಟಿ ವಿ ಯನ್ನು ಮ್ಯೂಟ್ ಮಾಡಿ ‘ಹೂ ಹೇಳಿ ಮಹಾಸ್ವಾಮಿ’
‘ನೋಡು ಈ ನಾಟಕದ ಡೈಲಾಗ್ ಗಳೆಲ್ಲಾ ನನಗೆ ಹಿಡಿಸಲ್ಲಾ ಅಂತ ಅವತ್ತೇ ಹೇಳಿದ್ದೀನಿ. ನಾನು ನಾಳೆಯಿಂದ ಒಂದು ವಾರ ಆ ವಸಿಷ್ಠನ ಸ್ವಂತ ಊರಿಗೆ ಹೋಗಿ ಬರುತ್ತೇನೆ’.
‘ಅವನ ಅಪ್ಪ ಅಮ್ಮ ತೀರಿಹೋದರು ಅಂತ ಹೇಳಿದ್ರಿ . ಆ ಊರಿನ  ಅವನ ಮನೇಲಿ  ಯಾರಿದ್ದಾರೆ?’
‘ಅವನು ಎಲ್ಲಾ ಮಾರಿಕೊಂಡು ಊರೂರು ಅಲೆದರೂ ತೋಟ, ಅದರಲ್ಲಿನ ಒಂದು ಮನೆ ಉಳಿಸಿಕೊಂಡಿದ್ದಾನೆ. ಅವನ  ಅಪ್ಪನಿಗೆ ಅದರ ಮೇಲೆ ತುಂಬಾ ಆಸೆಯಿತ್ತಂತೆ. ಸಾಯುವ ಒಂದು ತಿಂಗಳ ಮುಂಚೆ ಆಸ್ಪತ್ರೆಯಲ್ಲಿದ್ದಾಗ  ಮಗನಿಗೆ ನೋಡಪ್ಪ  ನಿನ್ನ ದಾರಿಗೆ ನಾನು ಯಾವತ್ತೂ ಅಡ್ಡ ಬರಲಿಲ್ಲ. ನೀನು ನಮ್ಮ  ಊರಿನಲ್ಲಿ, ನಮ್ಮ ಮನೆಯಲ್ಲಿ ಇರುವುದಿಲ್ಲ ಅಂತ  ನನಗೆ ಗೊತ್ತು. ನಿನ್ನಮ್ಮ ನಿನ್ನದೇ ಕೊರಗಿನಲ್ಲಿ ಪ್ರಾಣ ಬಿಟ್ಟಳು. ಆ ತೋಟ ಮತ್ತು  ತೋಟದ  ಮನೆಯನ್ನು,  ಹಣ ಕಾಸಿಗೆ ನಿನಗೆ ತೀರಾ ಅನಿವಾರ್ಯ ಅನಿಸುವ ತನಕ ಮಾರ ಬೇಡ.  ನೀನು ನನ್ನ ತಿತಿ ಮಾಡದಿದ್ದರೂ ನಡೆಯುತ್ತದೆ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ ಎಂದಿದ್ದರಂತೆ.
‘ಅಪ್ಪನ ಸೆಂಟಿಮೆಂಟ್ ಗಾಗಿ ಅದನ್ನಾದರೂ ಉಳಿಸಿಕೊಂಡಿದ್ದಾನಲ್ಲ ಪುಣ್ಯಾತ್ಮ. ಕಥೆ ಚೆನ್ನಾಗಿದೆ; ಮುಂದುವರಿಸಿ’.
‘ಕಥೆ ಅಲ್ಲವೇ. ಸತ್ಯ’
‘ಈಗ ಅಲ್ಲಿಗೆ ನೀವು ಹೊರಟಿದ್ದೀರಿ’.
‘ಹೌದು. ನಾಳೆ ಬೆಳಗ್ಗೆ’.
‘ಅಲ್ಲಿ ನಿಮ್ಮ ಊಟ, ತಿಂಡಿ, ಕಾಫಿ?’
‘ಅದೇನೂ ಕಾಡೇ? ಹೇಗೋ ಆಗುತ್ತದೆ’.
 – ೬ –
ಪೀರಾಯರು ರಾಜು ವಸಿಷ್ಠನ ಊರಿಗೆ ಬಂದು ನಾಲ್ಕೈದು ದಿನಗಳಾಯ್ತು. ತೋಟದ ಮನೆಯಿಂದ ಪಟ್ಟಣ ಮೂರ್ನಾಲಕ್ಕು  ಕಿ ಮೀ ದೂರ ಇದ್ದರೂ ಅದೂ ಊರಿಗೆ ಸೇರಿಕೊಂಡಂತೆ ಆಗಿಹೋಗಿತ್ತು. ಎಲ್ಲಾ ಕಡೆ ಮನೆ, ಮನೆ, ಮನೆ. ಅಂಗಡಿಗಳು, ಹೋಟೆಲ್ ಗಳು.  ಬೆಂಗಳೂರಿನಲ್ಲಿರುವ ಎಲ್ಲಾ ಸವಲತ್ತುಗಳೂ ಇದ್ದವು. ವಸಿಷ್ಠನ ತೋಟದ ಜತೆ ಒಂದೆರಡು ತೋಟಗಳು ಮಾತ್ರ  ಸೈಟುಗಳಾಗದೇ ಉಳಿದಿದ್ದವು ಅಷ್ಟೇ. ರಾಯರು ತೋಟದ ಮನೆಗೆ ಹೋದ ಒಂದೆರೆಡು ದಿನಗಳ ಬಳಿಕ ಬೆಳಗ್ಗೆ ಅಲ್ಲೇ ವಾಕಿಂಗ್ ಮಾಡುತ್ತಿದ್ದರು. ಪಟ್ಟೆ ಪಟ್ಟೆ ಲುಂಗಿ,ಬಲಗೈನ ನಾಲ್ಕು ಬೆರಳಿಗೂ ಉಂಗುರ,ಕೊರಳಿಗೆ ಕಿರು ಬೆರಳಿನ ಗಾತ್ರದ ಚಿನ್ನದ ಸರ ಹಾಕಿಕೊಂಡಿದ್ದ ಪಕ್ಕದ ಮನೆಯಾತ ‘ಈ ಮನೇನ ನೀವು ಕೊಂಡುಕೊಂಡಿರಾ?’. ಎಂದು ಮಾತಿಗೆ ಶುರು ಮಾಡಿದ. ರಾಯರು ಇಲ್ಲ ಎಂದು ಚುಟುಕಾಗಿ ಉತ್ತರಿಸಿ ವಾಕಿಂಗ್ ಶುರುಮಾಡಿದರು.
‘ಮತ್ತೆ ನೀವಿಲ್ಲಿ?’
 ಈತ ಬಿಡುವ ಆಸಾಮಿಯಲ್ಲ ಎಂದು ರಾಯರು ತಾವಲ್ಲಿಗೆ ಬಂದಿರುವುದನ್ನು ಆತನಿಗೆ ಸಮಾಧಾನ ಆಗುವಷ್ಟರ ಮಟ್ಟಿಗೆ ವಿವರಿಸಲೇಬೇಕಾಯ್ತು. ಒಳ್ಳೆ ಶನಿಕಾಟ ಆಯ್ತಲ್ಲ ಎಂದು ಬೇಸರ ಒಂದು ಕಡೆ.
‘ನೋಡಿ ಸಾರ್ ನಿಮ್ಮ ಸ್ನೇಹಿತರಿಗೆ ನಾನು ನಾಲ್ಕೈದು ಬಾರಿ ಹೇಳಿ ನೋಡಿದೆ. ನೀವಂತೂ ಊರೂರು ತಿರುಗುವವರು. ಈ ತೋಟದಿಂದ ಬರುವ ಆದಾಯ ಅಷ್ಟರಲ್ಲೇ ಇದೆ. ಇರುವ ಒಂದಿಬ್ಬರು ಆಳುಗಳಿಗೆ ಕೂಲಿ ಬೇರೆ ದಂಡ. ಈ ಊರಿನಲ್ಲಿ ಈಗ ಇರುವ ರೇಟಿಗಿಂತ ಎರಡು ಪಟ್ಟು ಜಾಸ್ತಿ ಕೊಡಿಸುತ್ತೇನೆ. ಮಾರಿ ಬಿಡಿ. ಆ ದುಡ್ಡಿನಲ್ಲಿ ಬೆಂಗಳೂರಿನಲ್ಲಿ
 ಒಂದು ಒಳ್ಳೆ ಫ್ಲ್ಯಾಟ್ ತೊಗೊಂಡು ಆರಾಮಾಗಿರಿ ಅಂತ. ಕೇಳಬೇಕಲ್ಲ ನನ್ನ ಮಾತು? ಆ ವಿಷಯ ಬಿಟ್ಟು ಬೇರೇನಾದ್ರೂ ಇದ್ದರೆ ಮಾತಾಡಿ ಎಂದರು. ಅಲ್ಲ ನಾನು ಹೇಳಿದ್ದರಲ್ಲಿ ತಪ್ಪಿದೆಯೇ ನೀವೇ ಹೇಳಿ ಸ್ವಾಮೀ?’
‘ತಪ್ಪೇನಿಲ್ಲ. ಅಂದಹಾಗೆ ನೀವೇನು ಮಾಡಿಕೊಂಡಿದ್ದೀರಿ?’
‘ಹೀಗೆ ಅಲ್ಪ ಸ್ವಲ್ಪ ಕಾಂಟ್ರಾಕ್ಟ್ ಕೆಲಸ, ಸೈಟು,ಮನೆಗಳ ಬ್ರೋಕರ್ ಏಜೆನ್ಸಿನೂ ಒಂದಿದೆ. ಲಿಂಗೇಗೌಡ ಅಂತ ಹೆಸರು’.
ಆತನ ಮಾತು ಮುಗಿಯುತ್ತಿದ್ದ ಹಾಗೆ ತೋಟದ ಬಾಗಿಲ ಹತ್ತಿರ ಒಂದು ಹೋಂಡಾ ಆಕ್ಟಿವ್ ಬಂದು ನಿಂತಿತು.
ನೆರೆ ಮನೆಯಾತ ರಾಯರನ್ನು ಬಿಟ್ಟು ಟೂ ವೀಲ್ಹರ್ ಸದ್ದು ಬಂದ  ಕಡೆ ತಿರುಗಿ ‘ಬನ್ನಿ ಮೇಡಂ. ನೀವು ಹೇಳಿದಂತೆ ಮೂರ್ನಾಲಕ್ಕು  ಕಡೆ ಮನೆ ಬಾಡಿಗೆಗೆ ನೋಡಿದ್ದೇನೆ. ಈಗಲೇ ನೋಡೋಣ ಎಂದರೂ ನಾನು ರೆಡಿ. ಹೋಗೋಣ ನಡೀರಿ. ಅಲ್ಲಾ ಮೇಡಂ  ಈ ಊರಿಗೆ ಬಂದವರೆಲ್ಲಾ ಮನೆ ಸೈಟು ಅಂತ ಮಾಡಿಕೊಳ್ಳುತ್ತಿದ್ದಾರೆ. ನಿಮಗೆ ನಾನೂ ಹೇಳುತ್ತಲೇ ಇದ್ದೇನೆ. ನೀವೇಕೋ ಮನಸ್ಸು ಮಾಡ್ತಿಲ್ಲ’.
‘  ಹಣ ಬೇಕಲ್ಲ ಗೌಡ್ರೆ?’
‘ಏನ್ ಮೇಡಂ  ತಿಂಗಳಿಗೆ ಐವತ್ತು ಅರವತ್ತು ಸಾವಿರ ಸಂಬಳ ಬರೋ ನೀವೇ ಹೀಗೆಂದರೆ ಹೇಗೆ?. ನೀವು ಒಂದು ಫೋನ್ ಮಾಡಿದರೆ  ಸಾಕು ಬ್ಯಾಂಕ್ ನವರು ಸಾಲ ಕೊಡ್ತಾರೆ. ಯಾವ್ ಬ್ಯಾಂಕ್ ಅಲ್ಲಿ ನಿಮಗೆ ಸಾಲ ಬೇಕು ಹೇಳಿ. ನಾನು ಅರೇಂಜ್ ಮಾಡ್ತೀನಿ’.
ಆಕೆಗೆ ಈ ರಿಯಲ್ ಎಸ್ಟೇಟ್ ಆಸಾಮಿಯ ಕೊರೆತ  ಸಾಕೆನಿಸಿರಬಹುದು. ಮಾತು ಬದಲಿಸುತ್ತಾ ‘ಗೌಡ್ರೆ ವಸಿಷ್ಠ ಅವರ ತೋಟದ ಮನೆ ಬಾಗಿಲು ತೆಗೆದಿದೆಯಲ್ಲ. ಅವರು ಬಂದಿದ್ದಾರಾ?’
‘ಇಲ್ಲ ಅವರ ಸ್ನೇಹಿತರಂತೆ. ಪದ್ಮನಾಭರಾಯರು ಅಂತ ಅವರು ಬಂದಿದ್ದಾರೆ’.
ಅಷ್ಟರಲ್ಲಿ ಆತನ ಮೊಬೈಲ್ ರಿಂಗಾಯಿತು. ‘ಹಲೋ  ಅಣ್ಣಾ ನಾನು ಎಲ್ಲಾ ಹೇಳಿ ಸರಿಮಾಡಿದ್ದೇನೆ ನೀವು ಹನ್ನೊಂದು ಗಂಟೆಗೆ ಸಬ್ ರಿಜಿಸ್ಟ್ರಾರ್ ಆಫೀಸಿನ ಹತ್ತಿರ …….. ‘ಎಂದು ಮಾತಾಡುತ್ತಾ ತನ್ನ ಮನೆಯೊಳಗೆ ಹೋದ.
‘ಸರ್ ನಮಸ್ತೆ’ ಎನ್ನುತ್ತಾ  ಆ ಮೇಡಂ ತೋಟದ ಮುಂಬಾಗಿಲನ್ನು ದೂಡುತ್ತಾ ಒಳಬಂದಳು. ರಾಯರು ಮಾತಾಡುವ ಮೂಡಿನಲ್ಲಿರಲಿಲ್ಲ. ಆ ರಿಯಲ್ ಎಸ್ಟೇಟ್ ಆಸಾಮಿಯಿಂದ ತಪ್ಪಿಸಿಕೊಂಡಾಯ್ತು. ಇನ್ನು ಈಕೆಯಿಂದ ತಪ್ಪಿಸಿಕೊಂಡರೆ ಸಾಕಾಗಿತ್ತು. ಅನಿವಾರ್ಯವಾಗಿ ‘ನಮಸ್ತೆ’ ಎಂದರು.
‘ನಾನು ರಮಾದೇವಿ ಅಂತ. ಈ ಊರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ವಸಿಷ್ಠ ಅವರು ಹತ್ತು ಹದಿನೈದು ದಿನಗಳ ಹಿಂದೆ ಫೋನ್ ಮಾಡಿದ್ದಾಗ ಹೇಳಿದ್ದರು.  ನನ್ನ ಆಪ್ತ ಸ್ನೇಹಿತರೊಬ್ಬರು ಬರುತ್ತಾರೆ. ಪದ್ಮನಾಭರಾವ್ ಅಂತ  ಬಿಡುವಾದಾಗ ಒಮ್ಮೆ ಮಾತಾಡಿಸಿಕೊಂಡು ಬನ್ನಿ ಎಂದು’.
ವಸಿಷ್ಠನ ಹೆಸರು ಕೇಳಿ ರಾಯರಿಗೆ ಸ್ವಲ್ಪ ಸಮಾಧಾನವಾಯ್ತು. ಮಾತಾಡುವ ಹುರುಪು ಬಂತು.
‘ಹೌದೇನು ಸಂತೋಷ’
‘ನಾಳೆ ನಮ್ಮ ಕಾಲೇಜಿನಲ್ಲಿ ಒಂದು ವಿಚಾರ ಸಂಕಿರಣ ಇದೆ. ತಾವು ಬರಬೇಕು. ನೀವು ಬಂದಿದ್ದೀರೋ ಇಲ್ಲವೋ ಎಂದು ನೋಡಿದ ಹಾಗೂ ಆಯ್ತು; ಸಂಕಿರಣಕ್ಕೆ ಕರೆದ ಹಾಗೂ ಆಯ್ತು ಎಂದು ಬಂದೆ’ ಎನ್ನುತ್ತಾ ಆಹ್ವಾನ ಪತ್ರಿಕೆ ಮೇಲೆ ಪದ್ಮನಾಭರಾವ್ ಎಂದು ಹೆಸರು ಬರೆದು  ರಮಾದೇವಿ ರಾಯರ ಕೈಗಿಟ್ಟಳು.
ರಾಯರು ಪತ್ರಿಕೆ ಮೇಲಿದ್ದ ವಿಚಾರ ಸಂಕಿರಣದ ವಿಷಯ ನೋಡಿದರು. ‘ಸ್ತ್ರೀವಾದದ  ನೆಲೆಯಲ್ಲಿ ನವ್ಯೋತ್ತರ ಸಾಹಿತ್ಯದ ನೆಲೆ-ಬೆಲೆ’. ರಾಯರು ನಗು ತಡೆದು ಕೊಳ್ಳಲು ಪ್ರಯತ್ನಿಸಿದರು.ಆಗಲಿಲ್ಲ. ನಂತರ ‘sorry’ ಎಂದರು.
‘ಯಾಕೆ ಸರ್ ನಗು?’
‘ತಾವು ಬೇಸರ ಪಟ್ಟುಕೊಳ್ಳದಿದ್ದರೆ ಹೇಳುತ್ತೇನೆ’
‘ಇಲ್ಲ ಹೇಳಿ.ವಸಿಷ್ಠ ಅವರು ಹೇಳಿದ್ದಾರೆ. ನಿಮಗೆ ಸಾಹಿತ್ಯದಲ್ಲಿ, ಸಮಕಾಲೀನ ವಿಷಯಗಳಲ್ಲಿ ತುಂಬಾ ಆಸಕ್ತಿ ಅಂತ’
‘ಆಸಕ್ತಿಯಿತ್ತು. ಆದರೆ ಈಗ ಅಷ್ಟಿಲ್ಲ. ನಿಮಗೆ ನಾಳಿನ ಕಾರ್ಯಕ್ರಮದ ಕೆಲಸ ತುಂಬಾ ಇರಬೇಕು. ನಾಳೆ ಬರುತ್ತೇನೆ. ಮತ್ತೊಮ್ಮೆ ಮಾತೋಡೋಣ. ಆಗಬಹುದಲ್ವಾ’.
‘ಆಗಲಿ ಸರ್. ನಿಮ್ಮ ಅಭಿಪ್ರಾಯ ತಿಳಿಯಲು  ನನಗೆ ತುಂಬಾ ಆಸಕ್ತಿಯಿದೆ. ನೀವು ಮರೆತರೂ ನಾನು ಮರೆಯಲ್ಲ. ಬರ್ತೀನಿ ಸರ್ ನಾಳೆ ಬನ್ನಿ’ ಎಂದು ಹೇಳುತ್ತಾ ಆಕೆ  ಹೊರಟಳು.
ರಾಯರ ಬೆಳಗಿನ ವಾಕಿಂಗ್ ಗೆ ಇವತ್ತು ವಿಘ್ನ ವಾಯಿತು. ಇನ್ನೂ ಸ್ವಲ್ಪ ಓಡಾಡುವ ಮನಸ್ಸಿದ್ದರೂ ಪಕ್ಕದ ಮನೆಯ ಕೊರೆತದ ಆಸಾಮಿಯ ಕೈಗೆ ಸಿಕ್ಕರೆ ಕಷ್ಟ ಎಂದು ಮನೆಯ ಒಳಗೆ ಹೋದರು. ನಾಳೆಯಿಂದ ವಾಕಿಂಗ್ ಗೆ ಬೇರೆ ಜಾಗ ಹುಡುಕಬೇಕೆಂದು ಕೊಳ್ಳುತ್ತಾ  ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತು. ಆಹ್ವಾನ ಪತ್ರಿಕೆಯನ್ನು ಬಿಡಿಸಿ ನೋಡಿದರು. ಮೂರು ಗೋಷ್ಠಿಗಳು. ಬೆಳಗ್ಗೆ ಹತ್ತರಿಂದ ಮಧ್ಯಾಹ್ನ ನಾಲ್ಕರ ತನಕ. ಒಂದು ಗಂಟೆಗೆ ಊಟ, ಮಧ್ಯೆ ಎರಡು ಕಾಫಿ ಟೀ ಬ್ರೇಕ್. ಭಾಷಣಕಾರರ ಹೆಸರುಗಳು ರಾಯರಿಗೆ ಪರಿಚಿತವಾದದ್ದೇ. ಬೆಂಗಳೂರಿನ ಟೌನ್ ಹಾಲ್, ಫ್ರೀಡಂ ಪಾರ್ಕ್ ನಲ್ಲಿ ಧರಣಿಕೂತುಕೊಳ್ಳುವವರು; ದಿನ ಪತ್ರಿಕೆ, ಟ್ಯಾಬ್ಲಾಯ್ಡ್ ಗಳಲ್ಲಿ ಅಂಕಣಗಳನ್ನು ಬರೆಯುವವರು ,ಉಪನ್ಯಾಸಕರು,ಪ್ರೊಫೆಸರ್ ಗಳು, ಪತ್ರಕರ್ತರು. ಬೆಂಗಳೂರಿನಲ್ಲೇ ಇಂತಹ ವಿಚಾರಸಂಕಿರಣಗಳಿಗೆ ಜನಗಳು ಕಮ್ಮಿ ಆಗುತ್ತಿದ್ದಾರೆ. ಎಪ್ಪತ್ತು ಎಂಭತ್ತರ ದಶಕಗಳಲ್ಲಿ  ಜನರಿಗೆ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಇದ್ದಂತ  ಒಂದು ಕ್ರೇಜ್  ಈಗ ಅಷ್ಟಿಲ್ಲ.  ಇನ್ನು ಇಂತಹ ತಾಲ್ಲೋಕು ಮಟ್ಟದಲ್ಲಿ ಇರಬಹುದೇ? ಅದನ್ನು ನೋಡಲಾದರೂ ಹೋಗೋಣ ಎಂದುಕೊಳ್ಳುತ್ತಾ ಪಕ್ಕದಲ್ಲಿದ್ದ ದಿವಾನ್ ಮೇಲೆ ಹಾಗೆ ಮಲಗಿಕೊಂಡರು.
ಸಂಜೆ ವಾಕಿಂಗ್ ಮುಗಿಸಿ ಬಂದು ಪೀರಾಯರು ಒಂದು ನ್ಯೂಸ್ ಚಾನೆಲ್ ನೋಡುತ್ತಾ ಕೂತಿದ್ದರು. Exclusive ಎಂದು ದೃಶ್ಯಗಳ ಮೇಲೆ ಅಕ್ಷರಗಳು ಟಿ ವಿ ತೆರೆಯ ಮೇಲೆ ಬಂದು  ಹೋಗುತ್ತಿದ್ದವು. ಜತೆಜತೆಗೆ ವಾರ್ತಾ ವಾಚಕಿಯ ರನ್ನಿಂಗ್ ಕಾಮೆಂಟರಿ.  ಆಕೆ  ಅಧಿಕಾರಸ್ಥ ಪಕ್ಷದ ಸದಸ್ಯರೊಬ್ಬರ  ಶೃಂಗಾರ ಲೀಲೆಯನ್ನು ಸವಿಸ್ತಾರವಾಗಿ ವರ್ಣಿಸುತ್ತಿದ್ದಳು. ಮಧ್ಯೆ ಮಧ್ಯೆ ರಾಸಲೀಲೆ ನಡೆದ ಸ್ಥಳದಿಂದ  ಆ ಚಾನೆಲ್ ನ ಪ್ರತಿನಿಧಿಯ ವರ್ಣನೆ. ಮಾಮೂಲಿನಂತೆ ವಿರೋಧ ಪಕ್ಷಗಳು ಆ ಸದಸ್ಯನ ರಾಜೀನಾಮೆಗೆ  ಒತ್ತಾಯಿಸುತ್ತಿದ್ದವು. ರಾಯರು ಚಾನೆಲ್ ಬದಲಾಯಿಸಿದರು. ಆ ನ್ಯೂಸ್ ಚಾನೆಲ್ ನಲ್ಲಿ  ಸಹ ಆ ಪ್ರಕರಣದ  Exclusive ದೃಶ್ಯಾವಳಿಗಳು. ಇನ್ನು ಎರಡು ದಿನ ಈ ನ್ಯೂಸ್ ಅನ್ನು ನಾನಾ ರೀತಿಯಿಂದ ಎಳೆದಾಡುವ ತನಕ ಇವರಿಗೆ ಸಮಾಧಾನವಿಲ್ಲ ಎಂದು ಟಿ ವಿ ಆರಿಸಿದರು. ವಾಕಿಂಗ್ ಮುಗಿಸಿ ಬರುವಾಗ ತಂದಿದ್ದ ವಾರ ಪತ್ರಿಕೆಯನ್ನು ಓದೋಣ ಎಂದು ಕೊಂಡು ಈಸಿ ಚೇರ್ ಮೇಲೆ ಕುಳಿತು ಮೊದಲ ಪುಟ ತೆರೆದರು. ರಿಯಲ್ ಎಸ್ಟೇಟ್ ಆಸಾಮಿ ವಕ್ಕರಿಸಿಯಾನು ಎಂದು ಕೊಂಡು ಬಾಗಿಲು ಹಾಕಲು ಏಳುವಷ್ಟರಲ್ಲಿ ಆತನೇ ಬಂದ. ಒಳ್ಳೆ ನಕ್ಷತ್ರಿಕನ ಕಾಟಾವಾಯ್ತಲ್ಲ ನನಗೆ ಎಂದು ಕೊಂಡು ಸೌಜನ್ಯಕ್ಕೆ ಬನ್ನಿ ಎಂದರು. ಆತ ಬಿಡುವಾಗಿದ್ದ ಎನಿಸುತ್ತದೆ. ಈಸಿ ಚೇರ್ ಎದುರಿಗಿದ್ದ ಸೋಫಾ ಮೇಲೆ ಕುಳಿತ.
‘ಬೆಳಗ್ಗೆ ಬಂದಿದ್ದರಲ್ಲ ರಮಾದೇವಿ ಮೇಡಂ ನಿಮಗೆ ಪರಿಚಯವೇ ರಾಯರೇ?’
‘ಇಲ್ಲ ಇವತ್ತೇ ನೋಡಿದ್ದು’
‘ ಹೌದಾ?’
‘ಏಕೆ’
‘ಸುಮ್ಮನೆ ಹಾಗೇ ಕೇಳಿದೆ. ಅವರ ಊರು ನಮ್ಮ ಸ್ವಂತ  ಊರಿಗೆ ಹತ್ತಿರದ್ದು’
‘ಅಯ್ಯೋ ನೋಡಿ ರಾಯರೇ  ನಾನು ನನ್ನ  ಸ್ವಂತ ಊರೇ ನಿಮಗೆ ಹೇಳಲಿಲ್ಲ. ತುಮಕೂರು ಜಿಲ್ಲೆ  ಪಾವಗಡ ತಾಲೂಕಿನ ಒಂದು ಹಳ್ಳಿ. ರಾಮನಹಳ್ಳಿ ಅಂತ.   ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ಆ ತಾಲೂಕು ತೋಳಗಳ ಸುದ್ದಿಯಿಂದ ಕುಪ್ರಸ್ಸಿದ್ಧಿಗೆ ಬಂದಿತ್ತು. ತಮಗೆ ನೆನಪಿರಬಹುದು’
‘ಹೌದು ಪತ್ರಿಕೆಗಳಲ್ಲಿ ಓದಿದ್ದೆ. ಆ ಸುದ್ದಿ ನಿಜವೇ?’
‘ನನಗೆ ಆಗ ಏಳೆಂಟು ವರ್ಷ ಇರಬೇಕು. ಊರಲ್ಲಿ ಅದೇ ಸುದ್ದಿ. ಸಂಜೆ ನಾಲ್ಕೈದು ಗಂಟೆಯಾದರೆ ಸಾಕು. ಆ ಸುತ್ತಮುತ್ತಿನ ಊರಲ್ಲಿ ಯಾರೂ ಮನೆ ಬಿಟ್ಟು ಹೊರಗೆ  ಬರುತ್ತಿರಲಿಲ್ಲ. ತೋಳ ಅಂತ ಒಂದಷ್ಟು ಜನ; ತೋಳ ಅಲ್ಲ ಮಕ್ಕಳ ಕಳ್ಳರು ಆ ವೇಷ ಹಾಕಿಕೊಂಡು ಬರುತ್ತಿದ್ದಾರೆ. ಅವರು  ಕಾಲಿಗೆ  ಸ್ಪ್ರಿಂಗ್ ಹಾಕ್ಕೊಂಡಿರ್ತಾರೆ; ಮಕ್ಕಳು ಕಣ್ಣಿಗೆ ಬೀಳುವ ತನಕ ನಾಲ್ಕು ಕಾಲಲ್ಲಿ ಓಡಾಡುತ್ತಿರುತ್ತಾರೆ; ಸಿಕ್ಕ  ತಕ್ಷಣ ಮಕ್ಕಳನ್ನು  ಎತ್ತಿಕೊಂಡು  ಎರಡು ಕಾಲಲ್ಲಿ  ಚಂಗಂತ್ತ   ನೆಗೆದು ಓಡಿ ಹೋಗುತ್ತಾರೆ; ಹೀಗೆ ನಾನಾ ತರಹದ ಮಾತುಗಳು. ದಿನಾ ಅದೇ ಸುದ್ದಿ. ಆ  ಹಳ್ಳಿಲಿ ಬಂತಂತೆ; ನಮ್ಮೂರಿನ ಕೆರೆ ಹತ್ರ ಯಾರೋ ನೋಡಿದರಂತೆ . ಹೀಗೆ . ಮುಂದೇನಾಯ್ತೋ. ಒಂದೆರೆಡು ವರ್ಷ ಆದ ಮೇಲೆ  ಆ ಸುದ್ದಿ, ಹೆದರಿಕೆ ಎರಡೂ  ನಿಂತೋಯ್ತು.  ನನಗಂತೂ ಅಷ್ಟೇ ಜ್ಞಾಪಕ ಇರೋದು.  ಆ ಮೇಡಂ ಬಂದಿದ್ದರಲ್ಲ ಅವರ ಸ್ವಂತ ಊರಿಗೂ ನಮ್ಮೂರಿಗೂ ಮೂರ್ನಾಲಕ್ಕು ಮೈಲಿ ದೂರ ಅಷ್ಟೇ. ಪಾಪ ಅವರು ಮಲತಾಯಿಯಿಂದ ತುಂಬಾ ಕಷ್ಟ ಪಟ್ಟರು. ಈಗ ಪರವಾಗಿಲ್ಲ. ಆದರೇನು? ಒಂಟಿ ಜೀವ……….  . ಸರ್ಕಾರಿ  ಕಾಲೇಜಿನ ಕೆಲಸ. ಒಳ್ಳೆ ಸಂಬಳ ಬರತ್ತೆ. ಏನೇ ಆದರೂ ಹೆಣ್ಣು  ಒಬ್ಬಂಟಿ ಆದರೆ ಜನಗಳು  ನೋಡುವ  ದೃಷ್ಟಿನೇ ಬೇರೆ ತರ ಇರತ್ತಲ್ವ?’
‘ಏಕೆ ರಾಯರೇ. ನಾನು ಹೇಳಿದ್ದು ನಿಜಾನೋ ಸುಳ್ಳೋ?’
ರಾಯರಿಗೆ ಪೀಕಲಾಟಕ್ಕೆ ಸಿಕ್ಕಿಕೊಂಡ ಹಾಗಾಯ್ತು. ಈ ದಿನ  ಬೆಳಗ್ಗೆ  ಒಂದೈದು ನಿಮಿಷ ನೋಡಿದ ಆ ವ್ಯಕ್ತಿಯ ಬಗ್ಗೆ  ನಾನು ಏನು ಹೇಳಲಿ? ಸುಮ್ಮನಿರುವುದೇ ಲೇಸೆಂದು ಮೌನಕ್ಕೆ ಶರಣಾದರು.
‘ರಾಯರಿಗೆ  ನನ್ನ ಬಗ್ಗೆ ಬೇಜಾರಾಯ್ತೆನೋ? ಏನಪ್ಪಾ ಈ ಆಸಾಮಿ ಇಷ್ಟೊಂದು ಮಾತಾಡ್ತಾನೆ ಅಂತ’
‘ಹಾಗೇನಿಲ್ಲ’
‘ಆ ಮೇಡಂ ದುರಾದೃಷ್ಟ ನೋಡಿ. ಅವರಮ್ಮ  ಸತ್ತಾಗ ಹತ್ತು ವರ್ಷ. ಈಕೆನೇ ದೊಡ್ಡೋರು. ಒಬ್ಬಳು ತಂಗಿ ಇಬ್ಬರು ತಮ್ಮಂದ್ರು. ಅವರಪ್ಪ ಮಕ್ಕಳನ್ನು ನೋಡಿಕೊಳ್ಳೋಕ್ಕೆ  ಆಗತ್ತೆ ಅಂತ ತುಂಬಾ ಬಡವರ ಮನೆ ಹೆಣ್ಣನ್ನೇ ನೋಡಿ ಇನ್ನೊಂದು ಮದುವೆಯಾದ. ಅವಳು  ಒಂದೈದು ವರ್ಷ ಮೊದಲನೇ ಹೆಂಡ್ತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಂಡ್ಲು. ಯಾವಾಗ ತನಗೆ ಎರಡು ಗಂಡು ಮಕ್ಕಳಾಯ್ತೋ ಬಾಲ ಬಿಚ್ಚಿದಳು. ಗಂಡ ಎದುರಿದ್ದಾಗ ಒಂದು ಥರ ; ಆತ ಹೊಲ ಗದ್ದೆ ಕಡೆ ಹೋದಾಗ ಇನ್ನೊಂದು ಥರ .  ಗಂಡಂಗೆ  ದಿನಾ ತಲೆ  ತಿಂದೂ ತಿಂದೂ ಪಾಪ ಚೆನ್ನಾಗಿ ಓದುತ್ತಿದ್ದ ಹುಡುಗಿನ  ಸ್ಕೂಲ್ ಬಿಡಿಸಿ  ಹದಿನೈದು ವರ್ಷಕ್ಕೆ ಮದ್ವೆ ಮಾಡ್ಸಿ ಮನೆಯಿಂದ ಆಚೆ ಹಾಕಿದ್ಳು. ಹೋಗ್ಲಿ ಈಕೆ ಗಂಡ, ಅತ್ತೆ ಸರಿಯಾಗಿದ್ರ? ಹೆಂಗೋ ಜೀವನ ನಡಸ್ಕೊಂಡು ಹೋಗೋಣ ಅಂದ್ರೆ. ಅದೂ ಆಗ್ಲಿಲ್ಲ………. ‘ ಲಿಂಗೇಗೌಡರಿಗೆ ಇನ್ನೂ ಮಾತಾಡುವ ಹುಕ್ಕಿ ಇತ್ತು ಅನ್ಸತ್ತೆ. ಅಷ್ಟರಲ್ಲಿ  ಗೌಡ್ರ ಮೊಬೈಲ್ ರಿಂಗಾಯ್ತು.  ಇವನು ಮಾತಾಡಲು  ಎದ್ದು ಹೋಗ್ತಾನೆ . ಈಗಲಾದರೂ ಈ ಕೊರೆತದ ಪಾರ್ಟಿಯಿಂದ ಮುಕ್ತಿ ಸಿಗತ್ತೆ ಅಂತ ಅಂದು ಕೊಂಡ್ರು. ಆದ್ರೆ ಕೂತಲ್ಲೇ ಮಾತಾಡಲು ಶುರು ಮಾಡಿದ. ಆ ಕಡೆಯವನೂ ರಾಯರಿಗೂ ಕೇಳುವಂತೆ ದೊಡ್ಡ ಗಂಟಲಲ್ಲೇ
‘ಲಿಂಗೇಗೌಡ್ರ’
‘ಹ್ಞೂ ನಾನೇ ಹೇಳಿ. ನೀವ್ಯಾರೋ ಗೊತ್ತಾಗಲಿಲ್ಲ’
.’ ನಾನು ದ್ಯಾವಪ್ಪ ಅಂತ. ಯಲಹಂಕದಿಂದ. ಇಲ್ಲಿ ಬೋರಣ್ಣ ಅಂತ ನಿಮ್ಮ ಸ್ನೇಹಿತರು ಇದಾರಲ್ಲ ಅವರು ನಿಮ್ಮ ಮೊಬೈಲ್ ನಂಬರ್ ಕೊಟ್ರು …….’
‘ಹಾಂಗಾ. ಹೆಂಗವ್ರೆ ನಮ್ಮ ಅಣ್ಣಾವ್ರು?’
‘ಚೆನ್ನಾಗವ್ರೆ. ಬಿಸಿನೆಸ್ ಚೆನ್ನಾಗಿದೆ. ಅವರೇ ಮಾತಾಡಿ ನನ್ನ ನಿಮಗೆ ಪರಿಚಯ ಮಾಡ್ಸಿಕೊಡಬೇಕು ಅಂತಿದ್ರು. ಅವರ ಆಫೀಸಲ್ಲೇ ನಾನೂ ಕೂತಿದ್ದೆ. ಅಷ್ಟೊತ್ತಿಗೆ ಒಬ್ರು ಅರ್ಜೆಂಟಾಗಿ ಒಂದು ಮನೆ ಬೇಕು ಬನ್ನಿ ಅಂತ ಕರದ್ರು. ಕಾರು ಹತ್ತಕ್ಕೆ ಮುಂಚೆ ನಿಮ್ಮ ಹೆಸರು, ಫೋನ್ ನಂಬರ್ ಹೇಳಿ ನಾನು ಹೇಳಿದೆ ಅಂತ ನೀನೆ ಮಾತಾಡು, ನಾನು ರಾತ್ರಿಗೆ ಗೌಡ್ರತ್ತರ ಮಾತಾಡ್ತೀನಿ ಅಂದ್ರು’.
‘ಅಂದಂಗೆ ಏನ್ ವಿಷಯ?’
‘ದೊಡ್ಬಳ್ಳಾಪುರ ರೋಡ್ ಹತ್ರ ಒಂದು ಹತ್ತು ಸೈಟಿದೆ. ಅದ್ರ ಓನರ್ ಫಾರಿನ್ ಗೆ ಹೋಗೋ ಅರ್ಜೆಂಟಲ್ಲಿ ಇದಾರೆ. ನಾಳೆ ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ಬನ್ನಿ. ಸೈಟು ನೋಡಿ . ನಿಮಗೆ ಇಷ್ಟ ಆದರೆ ಮಾತಾಡಣ’.
‘ ಆಯ್ತು.. ರಾತ್ರಿ ಬೋರಣ್ಣ ಹತ್ರ ಮಾತಾಡ್ತೀನಿ. ಆಯ್ತು. ಫೋನ್ ಇಡ್ಲಾ?’
‘ರಾಯ್ರೆ ನಾನು ಹೊರಡ್ತೀನಿ.ದೊಡ್ಬಳ್ಳಾಪುರದ ಕಡೆ ಈಗ ಸೈಟುಗಳಿಗೆ ಒಳ್ಳೆ ಬೆಲೆ ಅಂತೆ.  ಆ ಊರಿನ ಕಡೆಯೋರು ಇಲ್ಲಿ ಮೂರ್ನಾಲಕ್ಕು ಜನ ನನಗೆ ಗೊತ್ತಿರೋರು ಇದಾರೆ. ಅವರನ್ನ ಮಾತಾಡಿಸ್ಕೊಂಡು  ಬರಬೇಕು.  ಒಂದು ನಾಕೈದು ದಿನ ಬಿಟ್ಟು ಬರ್ತೀನಿ. ನಿಮಗೆ ಏನಾದರೂ ಬೇಕಾದರೆ  ಸಂಕೋಚ ಪಟ್ಟ್ಕೋಬೇಡಿ. ನಮ್ಮನೆಲಿ ಕೆಲಸ ಮಾಡಿಕೊಂಡಿದ್ದಾನಲ್ಲ ಬಾಳಪ್ಪ ಅಂತ ಅವನಿಗೆ ಹೇಳಿರ್ತೀನಿ. ಕಾಂಪೌಂಡ್ ಹತ್ರ ನಿಂತು ಕೂಗಿದ್ರೆ ಸಾಕು ಬರ್ತಾನೆ. ಅವನು  ನಾಟಕದ ಕಂಪನಿಗಳಲ್ಲಿ  ಇದ್ದೋನು. ಸಿನಿಮಾ,ಟಿವಿ ಬಂದ ಮೇಲೆ ಕಂಪನಿ ನಾಟಕಗಳನ್ನ ಯಾರು ನೋಡ್ತಾರೆ ರಾಯ್ರೆ? ಅವೆಲ್ಲಾ ಪಾಪರ್ ಎದ್ದು ಹೋಗಿ ಮುಚ್ಚಿಹೋದ್ವು. ಈ ಬಾಳಪ್ಪ ಕೆಲಸ ಹುಡ್ಕೊಂಡು ಈ ಕಡೆ ಬಂದ.  ಕಂಪನಿ ನಾಟಕಗಳು ಗೊತ್ತಲ್ಲ ರಾಮಾಯಣ,ಕುರುಕ್ಷೇತ, ಸದಾರಾಮೇ ……… ಅವುಗಳ ಹಾಡನ್ನ ಚೆನ್ನಾಗಿ ಹಾಡ್ತಾನೆ. ಸಂಜೆ ಅವನಿಗೆ ಬಿಡುವಾದಾಗ ಬರ್ತಾನೆ. ನಿಮಗೂ ಬೇಸರ ಕಳೆಯತ್ತೆ. ಹಾಡು ಅಂದ್ರೆ ಸಾಕು. ಅವನಿಗೆ ಖುಷಿ. ಹಾಡ್ತಾನೆ. ಒಂದು ನಾಕು ದಿನ ಬಿಟ್ಟು  ಬರ್ತೀನಿ ರಾಯ್ರೆ. ನಿಮ್ಮತ್ರ ತುಂಬಾ ಮಾತಾಡೋದು ಇದೆ’.
ರಾಯರಿಗೆ ಅತಿ ಮಾತೆಂದರೆ ಅಲರ್ಜಿ. ತಮ್ಮ ಮನೆಯಲ್ಲೇ ಮಾತು ಕಮ್ಮಿ ಆಡೋರು. ಅಂಥೋರಿಗ ಈ ಡ್ರಿಲ್ಲಿಂಗ್ ಮಷೀನ್ ತರದ ಆಸಾಮಿ  ಗಂಟು ಬಿದ್ದಿದ್ದು ಹಿಂಸೆಯಾಯ್ತು. ಬೆಂಗಳೂರಿನ ಆ ಗಡಿಬಿಡಿ,ಸದ್ದು ಇವುಗಳಿಂದ ಬೇಸತ್ತು ತೋಟದ ಮನೆ ಅಂತ ಇಲ್ಲಿಗೆ ಬಂದ್ರೆ ಈ ಊರೂ ಮಿನಿ ಬೆಂಗಳೂರೇ ಆಗಿದೆ. ಜತೆಗೆ ಇನ್ನೂ ಮಾತಾಡೋದು ಬಾಕಿ ಇದೆಯಂತೆ. ನನ್ನ ಕರ್ಮ. ಆ ರಾಜು ವಶಿಷ್ಠ ನಾನು ನಾಲ್ಕೈದು ದಿನದಲ್ಲಿ ಬರ್ತೀನಿ. ನಾನು ಬರೋ ತನಕ ಇಲ್ಲೇ ಇರು ಅಂದಿದ್ದ. ರಾಯರಿಗೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎಂಬ ಸಂದಿಗ್ಧ ಪರಿಸ್ಥಿತಿ. ಹೂಂ ಆಯ್ತು. ನೋಡೋಣ ಎಂದು ಊಟ ಮಾಡಿ ಬಂದು ಮಲಗಿದರು. ಆದರೆ ನಿದ್ದೆ ಹತ್ತಲಿಲ್ಲ.  ರಾತ್ರಿ ವೇಳೆ ಮಲಗಿದ ಹತ್ತುಹದಿನೈದು ನಿಮಿಷದೊಳಗೆ  ನಿದ್ದೆ ಬರದಿದ್ದರೆ  ಅದೊಂದು  ಹಿಂಸೆ. ನರಕ. ಮೂರ್ನಾಲಕ್ಕು ಬಾರಿ ಜಲಬಾಧೆಗೆ ಹೋಗಿ ಬಂದರು. ಕೊನೆಗೆ ಬೆಳಗಿನ ಜಾವ ಮೂರರ ಹೊತ್ತಿಗೆ ನಿದ್ರಾದೇವಿ  ರಾಯರ ಮೇಲೆ ಕೃಪೆ ತೋರಿದಳು.
 (ಮುಂದುವರಿಯುತ್ತದೆ…)
3 ಟಿಪ್ಪಣಿಗಳು Post a comment
 1. M A Sriranga
  ಜನ 21 2017

  ಕಥೆಯ ಎರಡನೇ ವಿಭಾಗದಲ್ಲಿ times hour ಎಂದು ನಾನು ತಪ್ಪಾಗಿ ಟೈಪ್ ಮಾಡಿದ್ದೇನೆ. ಅದನ್ನು times now ಎಂದು ಓದಿಕೊಳ್ಳಬೇಕು.

  ಉತ್ತರ
 2. s ganapathi bhat
  ಜನ 21 2017

  chennagide,interesting,smooth reading, different topics

  ಉತ್ತರ

Trackbacks & Pingbacks

 1. ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೨ | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments