ವಿಷಯದ ವಿವರಗಳಿಗೆ ದಾಟಿರಿ

ಜನವರಿ 29, 2017

6

ಪ್ರಾಣಿಗಳ ಕ್ರೀಡೆ ಮತ್ತು ಐಡೆಂಟಿಟಿ

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

imagesಪೆಟಾ ಹಾಗೂ ಇನ್ನಿತರ ಪ್ರಾಣಿದಯಾ ಸಂಘದವರು ಪ್ರಾಣಿಗಳನ್ನು ಆಹಾರವಾಗಿ ಹೊರತುಪಡಿಸಿ ಉಳಿದೆಲ್ಲ ಕಾರ್ಯಸಾಧನೆಗಾಗಿ ಬಳಸಿಕೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸುತ್ತಾರೆ. ಅವುಗಳನ್ನು ಮೋಜಿಗಾಗಿ ಪಂದ್ಯಗಳಲ್ಲಿ ಬಳಸುವುದನ್ನು, ಮೆರವಣಿಗೆಯಲ್ಲಿ ಉಪಯೋಗಿಸುವುದನ್ನು, ಅವುಗಳ ಚರ್ಮದಿಂದ ಉಪಯೋಗಿ ವಸ್ತುಗಳನ್ನು ನಿರ್ಮಿಸುವುದನ್ನು, ಸರ್ಕಸ್ಸಿನಲ್ಲಿ ಪ್ರಾಣಿಗಳನ್ನು ಹೊಡೆದು ಪಳಗಿಸುವುದನ್ನು ವಿರೋಧಿಸುತ್ತಾರೆ. ಮೋಜಿಗಾಗಿ ಪ್ರಾಣಿಗಳನ್ನು ಹೊಡೆದೋಡಿಸುವ ಆಟಗಳನ್ನು, ಕೊಲ್ಲುವ ಆಚರಣೆಗಳನ್ನು, ನಿಷೇಧಿಸಬೇಕೆಂದು ಈ ಪ್ರಾಣಿದಯಾ ಸಂಘಗಳು ಪ್ರಯತ್ನಿಸುತ್ತವೆ. ಪ್ರಾಣಿದಯಾ ಸಂಘಗಳ ಈ ಕಾಳಜಿಯು ಜನಸಾಮಾನ್ಯ ಭಾರತೀಯರಿಗೆ ಮೇಲ್ನೋಟಕ್ಕೆ ಅರ್ಥವಾಗಿರುವಂತೆಯೇ ಭಾಸವಾಗುತ್ತದೆ.

ಆದರೆ ಪೆಟಾ ಭಾರತೀಯ ಸಂಪ್ರದಾಯದ ಜನರು ಪ್ರಾಣಿಗಳನ್ನು ಆದಿಕಾಲದಿಂದಲೂ ತಮ್ಮ ಕಾರ್ಯಸಾಧನೆಗಾಗಿ ಬಳಸಿಕೊಂಡು  ಅವುಗಳನ್ನು ಹಿಂಸಿಸುತ್ತ ಬಂದಿದ್ದಾರೆ ಎಂದು ಆರೋಪಿಸುತ್ತದೆ. ಜಲ್ಲಿಕಟ್ಟು, ಕಂಬಳದಂತಹ ಕ್ರೀಡೆಗಳಲ್ಲಿ, ಎತ್ತು ಹಾಗೂ ಕುದುರೆಯ ಬಂಡಿಗಳನ್ನು ನಡೆಸುವಾಗ ಆ ಪ್ರಾಣಿಗಳನ್ನು ಹೊಡೆಯಲಾಗುತ್ತದೆ. ಕೋಳಿಯಾಂಕದಲ್ಲಿ ಕೋಳಿಗಳನ್ನು ಹೊಡೆದಾಡಿಸಲಾಗುತ್ತದೆ. ಸನ್ಯಾಸಿಗಳು ಜಿಂಕೆಯ ಚರ್ಮವನ್ನು ಬಳಸುತ್ತಾರೆ. ಮೈಸೂರು ದಸರಾ ಮುಂತಾದ ಹಬ್ಬಗಳಲ್ಲಿ ಹಾಗೂ ಉಡುಪಿ, ಗುರುವಾಯೂರಿನ ದೇವಸ್ಥಾನಗಳಲ್ಲಿ ಆನೆಗಳನ್ನು ಪಳಗಿಸಲಾಗುತ್ತದೆ. ಹೀಗಾಗಿ ಭಾರತೀಯರಿಗೆ ಪ್ರಾಣಿಗಳ ಮೇಲೆ ದಯೆಯಾಗಲೀ, ಕರುಣೆಯಾಗಲೀ ಇಲ್ಲವೆಂದು ಹೇಳುತ್ತಾರೆ. ಈ ರೀತಿಯ ಆರೋಪಗಳು ಭಾರತೀಯರಿಗೆ ಅರ್ಥವಾಗುವದಿಲ್ಲ.

ಮಾಂಸಾಹಾರವನ್ನು ಪೆಟಾದಂತಹ ಪ್ರಾಣಿದಯಾ ಸಂಘಗಳು ಸಮರ್ಥಿಸುವದಿಲ್ಲವಾದರೂ ಮಾಂಸಾಹಾರವನ್ನು ವಿರೋಧಿಸುವದಿಲ್ಲ. ಆ ಸಂಘವನ್ನು ಸೇರಿಕೊಂಡಿರುವವರಿಗೆ ಸಸ್ಯಾಹಾರವನ್ನು ಒಪ್ಪಿಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ ಅಷ್ಟೇ. ಸಮುದ್ರ ಹಾಗೂ ನದಿಗಳಲ್ಲಿ ಮೀನುಗಾರಿಕೆಯನ್ನು, ಮಾಂಸದ ಅಂಗಡಿಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸುವದಿಲ್ಲ. ಇದಕ್ಕೆ ಕಾರಣವೇನು ಎಂದು ಕೇಳಿದರೆ, “ಬರಿ ಸಸ್ಯಾಹಾರದಿಂದಲೇ ಇಡೀ ಮಾನವ ಜನಾಂಗದ ಹೊಟ್ಟೆ ತುಂಬಿಸುವದು ಸಾಧ್ಯವಿಲ್ಲ.” ಎನ್ನುವ ಕಾರಣ ನೀಡುತ್ತಾರೆ. ಬಂಗಾಳದ ಟಾಂಗಾವನ್ನು ವಿರೋಧಿಸುವ ಇವರು, ಬೆಂಗಳೂರಿನ ರೇಸ್ ಕೋರ್ಸನ್ನು ವಿರೋಧಿಸುವದಿಲ್ಲ. ಜಲ್ಲಿಕಟ್ಟುವನ್ನು ನಿಷೇಧಿಸಲು ಕೋರ್ಟಿಗೆ ಹೋದಂತೆ ಬಕ್ರೀದ್ ಆಚರಣೆಗಳಲ್ಲಿ ನಡೆಯುವ ಕುರಿಗಳ ಮಾರಣಹೋಮದ ವಿರುದ್ಧ ಕೋರ್ಟಿಗೆ ಹೋಗುವದಿಲ್ಲ. ಈ ವ್ಯತ್ಯಾಸವು ಭಾರತೀಯರಿಗೆ ಅರ್ಥವಾಗುವದಿಲ್ಲ.

ಭಾರತದಲ್ಲಿ ಮಕ್ಕಳು ಸುಮ್ಮನೇ ಹೋಗುತ್ತಿರುವ ನಾಯಿಗೆ ಕಲ್ಲು ಹೊಡೆದರೆ ಹಾಗೆ ಮಾಡಬಾರದೆಂದು ಮಗುವಿಗೆ ತಾಯಿ ಗದರುತ್ತಾಳೆ. ಆದರೆ ಅದೇ ತಾಯಿ ಮಗುವಿಗೆ ಜ್ವರ ಬಂದಾಗ ಮಗು ಸರಿ ಹೋದರೆ, ಮಾರಿದೇವಿಗೆ ಕುರಿ ಅರ್ಪಿಸುವ ಹರಕೆಯನ್ನೂ ಹೊರುತ್ತಾಳೆ. ಹೊಸದಾಗಿ ಕ್ಯಾಮರಾದೊಂದಿಗೆ ಭಾರತಕ್ಕೆ ಬಂದ ಪ್ರವಾಸಿಗರು ತೆಗೆದಿಟ್ಟ ಹಳೆಯ ಫೋಟೋಗಳನ್ನು ನೋಡಿದರೆ, ಭಾರತೀಯರ ಫ್ಯಾಮಿಲಿ ಫೋಟೋಗಳಲ್ಲಿ ಅವರ ಎತ್ತು ಹಾಗೂ ಆಕಳುಗಳನ್ನೂ ಕಾಣಬಹುದು. ನಾನೂ ಕೂಡ ಚಿಕ್ಕವನಿದ್ದಾಗ ನಿಮ್ಮ ಮನೆಯಲ್ಲಿ ಯಾರೆಲ್ಲ ಇದ್ದಾರೆ? ಅಂತಾ ಕೇಳಿದರೆ, ನಾನು ಮನೆ ಜನರ ಜೊತೆ ಆಕಳುಗಳ ಹೆಸರನ್ನೂ ಹೇಳುತ್ತಿದ್ದೆ. ಪ್ರಾಣಿದಯಾ ಸಂಘದವರಿಗೆ ಭಾರತೀಯರ ಈ ಸ್ವಭಾವಗಳು ಅರ್ಥವಾಗುವದಿಲ್ಲ.

ಸಸ್ಯಾಹಾರವನ್ನಷ್ಟೇ ಸ್ವೀಕರಿಸುವ ಸಂಪ್ರದಾಯಗಳು, ತಮ್ಮ ದೇವಸ್ಥಾನಗಳಲ್ಲಿ ಕುರಿ ಕೋಣಗಳನ್ನು ಕಡಿಯಲು ಒಪ್ಪುವದಿಲ್ಲ. ಹಾಗೆಯೇ ಜೀವನದಲ್ಲಿ ಮಾಂಸಾಹಾರವನ್ನೂ ಸೇವಿಸುವದಿಲ್ಲ. ವಸಾಹತುಕಾಲಕ್ಕೂ ಮುಂಚೆ ಭಾರತದಲ್ಲಿ ಪ್ರಾಣಿಬಲಿಯನ್ನು ವಿರೋಧಿಸಿದ ಪ್ರತಿಯೊಬ್ಬ ಸಂತನು ಸಸ್ಯಾಹಾರವನ್ನೂ ಪ್ರತಿಪಾದಿಸುತ್ತಿದ್ದನು. ಆದರೆ ಈಗಿನ ಪ್ರಗತಿಪರ ಭಾರತೀಯರು ಕೇವಲ ಪ್ರಾಣಿಬಲಿಯನ್ನಷ್ಟೇ ವಿರೋಧಿಸುತ್ತಾರೆ ಹಾಗೂ ಮಾಂಸಾಹಾರವನ್ನು ಅವರವರ ಆಹಾರದ ಹಕ್ಕೆಂದು ಭಾವಿಸುತ್ತಾರೆ. ಪ್ರಾಚೀನ ಪ್ರಾಣಿಬಲಿಯ ವಿರೋಧಿಗಳಿಗಿರದಿದ್ದ ಅಸಮಂಜಸತೆಯೊಂದನ್ನು ಈಗಿನ ಪ್ರಾಣಿಬಲಿಯ ವಿರೋಧಿಗಳು ಏಕೆ ಬೆಳೆಸಿಕೊಂಡಿದ್ದಾರೆ ಎನ್ನುವದು ಭಾರತೀಯರಿಗಷ್ಟೇ ಅಲ್ಲ, ಸ್ವತಃ ಪ್ರಗತಿಪರರಿಗೂ ಅರ್ಥವಾಗಿಲ್ಲ.

ಭಾರತೀಯರಿಗೆ ಪ್ರಾಣಿದಯಾ ಸಂಘಟನೆಗಳ ಯೋಚನಾ ಧಾಟಿ ಅರ್ಥವಾಗದಿರುವದಕ್ಕೆ ಕಾರಣ ಈ ಸಂಘಟನೆಗಳು ಪ್ರಾಣಿಹಿಂಸೆಯನ್ನು ವ್ಯಾಖ್ಯಾನಿಸುವ ರೀತಿಯು ನಮಗೆ ಅರ್ಥವಾಗಿಲ್ಲ. ಪ್ರಾಣಿದಯಾ ಸಂಘಗಳು ಪ್ರಾಣಿಹಿಂಸೆಯನ್ನು ಪ್ರಾಣಿಗಳ ಹಕ್ಕುಗಳ ಉಲ್ಲಂಘನೆಯೆಂದು ವ್ಯಾಖ್ಯಾನಿಸುತ್ತದೆ. ನಮ್ಮ ಅಗತ್ಯತೆಗನುಗುಣವಾಗಿ ಪ್ರಾಣಿಗಳನ್ನು ಬಳಸಿಕೊಳ್ಳುವಾಗ ಪ್ರಾಣಿಗಳು ಆ ಕೆಲಸವನ್ನು ಚಾಟಿಯೇಟಿನ ಹೆದರಿಕೆಗೆ ಮಾಡುತ್ತವೆ. ಇದನ್ನು ಪ್ರಾಣಿದಯಾ ಸಂಘವು ಅದರ ಹಕ್ಕಿನ ಉಲ್ಲಂಘನೆಯೆಂದು ಭಾವಿಸುತ್ತದೆ. ಹಾಗಂತ ಸೊಳ್ಳೆ, ಜಿರಳೆಗಳ ಬಗ್ಗೆಯೇನೂ ಈ ಸಂಸ್ಥೆಗಳು ತಲೆಕೆಡಿಸಿಕೊಳ್ಳುವದಿಲ್ಲ. ಮಾನವನಿಗೆ ತಾವಾಗಿಯೇ ಯಾವ ಅಪಾಯವನ್ನೂ ಮಾಡದ ಪ್ರಾಣಿಗಳ ಹಕ್ಕುಗಳ ಬಗ್ಗೆ ಇವು ಹೆಚ್ಚಿನ ಮಹತ್ತ್ವವನ್ನು ನೀಡುತ್ತವೆ. ಎತ್ತು, ಕೋಣ ಮುಂತಾದ ಪ್ರಾಣಿಗಳು ಮೂಲತಃ ಪ್ರತಿಕ್ರಿಯೆಯಲ್ಲಿ ಮಾತ್ರ ಹಿಂಸೆಯನ್ನು ತೋರಿಸುವ ಪ್ರಾಣಿಗಳು. ನೀವು ಆಕಳ ಕೆಚ್ಚಲನ್ನು ಹಿಡಿಯದ ಹೊರತು ಅದಾಗೇ ಅಟ್ಟಿಸಿಕೊಂಡು ಬಂದು ವಿನಾಕಾರಣ ಒದೆಯುವದಿಲ್ಲ. ಚಾಟಿಯೇಟು ಬೀಳದ ಹೊರತು ಎತ್ತು ವೇಗವನ್ನು ಹೆಚ್ಚಿಸುವದಿಲ್ಲ. ಹೀಗಾಗಿ ಇಂತಹ ಪ್ರಾಣಿಗಳನ್ನು ಮಾನವ ತನ್ನ ಸ್ವಾರ್ಥಕ್ಕಾಗಿ ಪಳಗಿಸಿಕೊಳ್ಳುವದನ್ನು ಪೆಟಾ ತಾತ್ತ್ವಿಕವಾಗಿ ವಿರೋಧಿಸುತ್ತದೆ.

ಸಾಕುಪ್ರಾಣಿಗಳನ್ನು ಕಟ್ಟಿಹಾಕುವದು ಪ್ರಾಣಿಗಳ ಹಕ್ಕನ್ನು ಸ್ವಲ್ಪಪ್ರಮಾಣದಲ್ಲಿ ಉಲ್ಲಂಘಿಸಿದಂತೆಯಾದರೂ, ಈ ರೀತಿಯ ಅಲ್ಪಪ್ರಮಾಣದ ಉಲ್ಲಂಘನಯನ್ನು ಈ ಸಂಘಗಳು ಗಂಭೀರವಾಗಿ ಪರಿಗಣಿಸುವದಿಲ್ಲ. ಪ್ರಾಣಿಗಳ ಜೀವಕ್ಕೆ ಹಾಗೂ ಮನಸ್ಸಿಗೆ ಧಕ್ಕೆಯುಂಟು ಮಾಡುವ ಹಿಂಸೆಯನ್ನಷ್ಟೇ ಇವುಗಳು ನಿಷೇಧಿಸಬೇಕೆಂದು ಹೇಳುತ್ತವೆ. ಉದಾಹರಣೆಗೆ ಗೂಳಿಯ ಬಾಲವನ್ನು ತಿವಿದು ಉದ್ರೇಕಿಸುವ ಹಿಂಸೆ, ಪ್ರಾಣಿಗಳ ಕಾಲಿಗೆ ಲಾಳ ಹೊಡೆಯುವ ಹಿಂಸೆ, ರಾತ್ರಿಯಿಡೀ ಬೊಗಳುವ ನಾಯಿಗಳಿಗೆ ಬರೆ ನೀಡುವ ಹಿಂಸೆಯನ್ನು ಈ ಸಂಸ್ಥೆಗಳು ವಿರೋಧಿಸುತ್ತವೆ. ಬೀದಿನಾಯಿಗಳನ್ನು ಕೊಲ್ಲುವದನ್ನು ವಿರೋಧಿಸುತ್ತವೆ. ಆದರೆ ನಾಯಿಗಳಿಗೆ ಅರವಳಿಕೆ ನೀಡಿ ಅವುಗಳ ಸಂತಾನೋತ್ಪತ್ತಿಯನ್ನು ಹರಣ ಮಾಡುವ ಆಪರೇಶನ್ನುಗಳನ್ನು ವಿರೋಧಿಸುವದಿಲ್ಲ. ಅಂದರೆ ಮನುಷ್ಯನ ನಂಬಿಕೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ನಡೆಯುವ ಪ್ರಾಣಿಗಳ ಹಕ್ಕುಗಳ ಉಲ್ಲಂಘನೆಯನ್ನು ನಿಲ್ಲಿಸಲು ಈ ಸಂಸ್ಥೆಗಳು ಅಡ್ಡಿಪಡಿಸುವದಿಲ್ಲ. ಹಾಗೆಯೇ ತನ್ನ ಮನರಂಜನೆಗಾಗಿ ಪ್ರಾಣಿಗಳ ಜೀವಕ್ಕೆ ಹಾಗೂ ಮನಸ್ಸಿಗೆ ತೊಂದರೆಯಾಗದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ಅಲ್ಪಪ್ರಮಾಣದ ಹಕ್ಕುಗಳ ಉಲ್ಲಂಘನೆಯಾದರೆ ಈ ಸಂಸ್ಥೆಗಳು ತಲೆಕೆಡಿಸಿಕೊಳ್ಳುವದಿಲ್ಲ. ಆದರೆ ಅಂತಹ ಪ್ರಾಣಿಗಳಿಗೆ ಅತ್ಯಗತ್ಯವಾಗಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸಬೇಕೆಂದು ಅಂತಹ ಮನರಂಜನಾ ವ್ಯವಸ್ಥೆಗಳಿಗೆ ಒತ್ತಾಯಿಸುತ್ತವೆ. ಅಂತಹ ಸೌಲಭ್ಯಗಳು ಪ್ರಾಣಿಗಳಿಗೆ ಸಿಗದಿದ್ದಲ್ಲಿ ಕೋರ್ಟಿನ ಮೆಟ್ಟಿಲು ಹತ್ತಿ, ಆ ಸಂಸ್ಥೆಗಳನ್ನು ಮುಚ್ಚುವಂತೆ ಕೋರುತ್ತವೆ.

ಈ ಕಾರಣದಿಂದ, ರೇಸ್ ಕೋರ್ಸ್ ಸಂಸ್ಥೆಗಳು ಕುದುರೆಗೆ ಅಗತ್ಯವಿರುವ ಎಲ್ಲ ಸೌಲಭ್ಯತೆಗಳನ್ನೂ ನೀಡುವದರ ಮೂಲಕ, ಹಾಗೂ ರೇಸಿನಲ್ಲಿ ಕುದುರೆಗಳನ್ನು ಹೊಡೆಯದೇ ಓಡಿಸುವದರ ಮೂಲಕ ಕುದುರೆಯ ಹಕ್ಕಿನ ಉಲ್ಲಂಘನೆಯ ಪ್ರಮಾಣವು ಸಾಧ್ಯವಾದಷ್ಟು ಕಡಮೆಯಿರುವಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಈ ಕ್ರೀಡೆಗಳು ಪೆಟಾದಲ್ಲಿ ಪ್ರಾಣಿಹಿಂಸೆಯ ವ್ಯಾಪ್ತಿಯಲ್ಲಿ ಬರುವದಿಲ್ಲ. ಆದರೆ ಯುರೋಪಿನಲ್ಲಿ ಮೋಜಿನ ಹೆಸರಲ್ಲಿ ನಡೆಯುವ ಜಲಚರಗಳ ಮಾರಣಹೋಮವನ್ನು ನಿಷೇಧಿಸಲು ಒತ್ತಡ ಹೇರುತ್ತದೆ. ಜಲ್ಲಿಕಟ್ಟು ಹಾಗೂ ಕಂಬಳಗಳನ್ನು ನಿಷೇಧಿಸಬೇಕೆಂದು ಕೋರ್ಟಿನಲ್ಲಿ ವಾದ ಹೂಡುತ್ತದೆ. ಬಕ್ರೀದ್ ಆಚರಣೆಗೆ ಇಸ್ಲಾಂ ರಿಲಿಜನ್ನಿನ ಪವಿತ್ರಗ್ರಂಥವೇ ಅನುಮತಿ ನೀಡುವದರಿಂದ ಕೋರ್ಟಿಗೆ ಅವುಗಳನ್ನು ನಿಷೇಧಿಸುವದು ಸಾಧ್ಯವಿಲ್ಲ. ಆದರೆ ಜಲ್ಲಿಕಟ್ಟು, ಕಂಬಳ ಮುಂತಾದ ಆಚರಣೆಗಳಿಗೆ ಈ ರೀತಿಯ ಯಾವುದೇ ಗ್ರಂಥಾಧಾರಿತ ಅಪ್ಪಣೆಗಳಿಲ್ಲದಿರುವದರಿಂದ ಈ ಆಚರಣೆಗಳ ನಿಷೇಧ ಹೊರಡಿಸುವದು ಕೋರ್ಟಿಗೆ ಸುಲಭ.

ಲಿಬರಲ್ ಹಕ್ಕುಗಳ ಉಲ್ಲಂಘನೆಯ ದೃಷ್ಟಿಯಿಂದ ಒಂದಾನೊಂದು ಆಚರಣೆಯನ್ನು ನಿಷೇಧಿಸಿದಾಗ, ಅದನ್ನು ನಿಷೇಧಿಸಿರುವ ಕ್ರಮ ಜನರಿಗೆ ಅರ್ಥವಾಗುವದಿಲ್ಲ. ಇದಕ್ಕೆ ಕಾರಣ ಭಾರತೀಯರಿಗೆ ಹಕ್ಕಿನ ಪರಿಭಾಷೆ ಅರ್ಥವಾಗುವದಿಲ್ಲ. ಹಕ್ಕು ಎನ್ನುವ ಪರಿಕಲ್ಪನೆ ಸಾರ್ವತ್ರಿಕವಲ್ಲ. ಅದೊಂದು ಕ್ರಿಶ್ಚಿಯನ್ ಪರಿಕಲ್ಪನೆಯನ್ನು ರಿಲಿಜನ್ನಿನ ಸಂದರ್ಭದಿಂದ ಹೊರತೆಗೆದು ಸೆಕ್ಯುಲರೀಕರಿಸಿದ ರೂಪ. ರಿಲಿಜನ್ನೇ ಇಲ್ಲದ ನಮ್ಮ ದೇಶದಲ್ಲಿ ಇರುವ ಭಾಷೆಗಳಲ್ಲಿ ಹಕ್ಕಿಗೆ ಪರ್ಯಾಯವಾದ ಶಬ್ದಗಳೇ ಕಾಣಸಿಗುವದಿಲ್ಲ. ಹೀಗಾಗಿ ಜಲ್ಲಿಕಟ್ಟು ಹಾಗೂ ಕಂಬಳದ ನಿಷೇಧದ ಹಿಂದಿರುವ ತರ್ಕವು ಗೊತ್ತಾಗುವದಿಲ್ಲ. ಈಗ ನಮ್ಮ ದೇಶದಲ್ಲಿರುವ ಲಿಬರಲ್ ಚೌಕಟ್ಟು ಕ್ರಿಶ್ಚಿಯಾನಟಿಯ ಸೆಕ್ಯೂಲರ್ ರೂಪವೇ ಆಗಿದೆ. ರಿಲಿಜನ್ನಿನಲ್ಲಿ ಒಂದು ಆಚರಣೆ ಜಾರಿಗೆ ಬರಬೇಕಾದರೆ ಅದಕ್ಕೆ ಆ ರಿಲಿಜನ್ನಿನ ಪವಿತ್ರ ಗ್ರಂಥದಿಂದ ಸಮರ್ಥಿಸಿಕೊಳ್ಳಲು ಸಾಧ್ಯವಾಗಿರಬೇಕು ಇಲ್ಲವೇ ಆ ಗ್ರಂಥದಲ್ಲಿ ಆಚರಿಸಲು ಆದೇಶಿಸಿರಬೇಕು. ಹಾಗೆಯೇ ಲಿಬರಲ್ ಚೌಕಟ್ಟೂ ಕೂಡ ನಮ್ಮ ದೇಶದಲ್ಲಿ ಒಂದು ಆಚರಣೆಯನ್ನು ಅನುಮತಿಸಬೇಕಾದರೆ ಅದು ಆ ಜನರ ರಿಲಿಜನ್ನಿನ ಪುಸ್ತಕದಲ್ಲಿ ಉಲ್ಲೇಖಿಸಲ್ಪಡಬೇಕು ಇಲ್ಲವೇ ಲಿಬರಲ್ ಪರಿಕಲ್ಪನೆಗಳ ಮೂಲಕ ಸಮರ್ಥನೀಯವಾಗಿಸಬೇಕು.

ಸಂಪ್ರದಾಯದ ಜನರು ಇಂತಹ ಆಟಗಳನ್ನು ಮುಂದುವರೆಸಲು ಕಾರಣ ಅವುಗಳನ್ನು ಮುಂಚಿನಿಂದ ಆಡಿಸಿಕೊಂಡು ಬಂದಿರುವದು ಹಾಗೂ ಅವುಗಳನ್ನು ನಿಲ್ಲಿಸಲು ಲಿಬರಲ್ ಚೌಕಟ್ಟು ನೀಡುವ ಕಾರಣಗಳು ನಮಗೆ ಅರ್ಥವಾಗದಿರುವದು. ಸಂಪ್ರದಾಯಗಳು ಹಿಂದಿನಿಂದ ನಡದುಕೊಂಡು ಬಂದ ಆಚರಣೆಗಳನ್ನು ಮುಂದುವರೆಸಲು ಯಾವ ಕಾರಣವನ್ನೂ ಬೇಡುವದಿಲ್ಲ. ಆದರೆ ಇಂತಹ ಆಚರಣೆಗಳನ್ನು ನಿಲ್ಲಿಸಲು ಅದರದೇ ಆದ ಕಾರಣವನ್ನು ಬೇಡುತ್ತವೆ. ಲಿಬರಲ್ ಚೌಕಟ್ಟು ಹಕ್ಕಿನ ಪರಿಭಾಷೆಯಲ್ಲಿ ನೀಡುವ ಕಾರಣ ಭಾರತೀಯರಿಗೆ ಅರ್ಥವಾಗುವದಿಲ್ಲ. ಹೀಗಾಗಿ ಸಂಪ್ರದಾಯದ ಜನರಿಗೆ ಸರಕಾರವು ವಿನಾಕಾರಣ ನಮ್ಮ ಆಚರಣೆಗಳಲ್ಲಿ ಮೂಗು ತೂರಿಸುತ್ತಿದೆ ಎಂದೇ ಭಾವಿಸುತ್ತಾರೆ. ಅವರಿಗೆ ಸಂಪ್ರದಾಯವನ್ನು ಅನುಸರಿಸಲು ಅವಕಾಶ ಕೊಡುತ್ತಿಲ್ಲ ಎಂಬ ಭಾವನೆ ಒಡಮೂಡುತ್ತದೆ.  ಆದರೆ ಲಿಬರಲ್ ಚೌಕಟ್ಟು ರಿಲಿಜನ್ನಿನ ಪರಿಧಿಯಲ್ಲಿ ಬೆಳೆದಿದೆ. ಹೀಗಾಗಿ ಇಂಥ ಹಕ್ಕುಗಳ ಉಲ್ಲಂಘನೆಯ ಆಟಗಳನ್ನು ಒಪ್ಪಿಕೊಳ್ಳಬೇಕಾದರೆ ಅವುಗಳನ್ನ ಏಕೆ ನಡೆಸಬೇಕೆಂದು ವಿವರಿಸಬೇಕು. ಕೇವಲ ಹಿಂದಿನಿಂದ ನಡೆದುಕೊಂಡು ಬಂದಿದೆ ಎಂಬ ವಾದವು ಈ ಚೌಕಟ್ಟಿಗೆ ಸ್ವೀಕಾರಾರ್ಹವಲ್ಲ. ಹೀಗಾಗಿ ಅವುಗಳನ್ನು ಆ ಪ್ರಾಂತ್ಯದ ರಿಲಿಜನ್ನಿನ ಐಡೆಂಟಿಟಿಯಾಗಿ ನಿರೂಪಿಸಬೇಕು ಇಲ್ಲವೇ ಲಿಬರಲ್ ಪರಿಕಲ್ಪನೆಗೆ ಸಮರ್ಥನೀಯವಾಗಿಸಬೇಕು. ಹೀಗೆ ವಿವರಿಸಲಾರದ ಜನರು ತಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳಲು ಸರ್ಕಾರಕ್ಕೆ ಗೊತ್ತಾಗದಂತೆ ಕದ್ದು ಮುಚ್ಚಿ ಇಂತ ಆಟಗಳನ್ನು ಆಡಬೇಕಾಗುತ್ತದೆ.

ಲಿಬರಲ್ ಹಕ್ಕುಗಳ ಉಲ್ಲಂಘನೆಯ ಹೆಸರಲ್ಲಿ ಮಾಡಿದ ಸಾಂಪ್ರದಾಯಿಕ ಕ್ರೀಡೆಗಳ ನಿಷೇಧವನ್ನು ವಿರೋಧಿಸುವ ಪ್ರತಿಕ್ರಿಯೆಯು ಇಂಥ ಆಟಗಳನ್ನು ಸಮರ್ಥನೀಯವಾಗಿಸಲು ಮರುವ್ಯಾಖ್ಯಾನಿಸುವ ಅನಿವಾರ್ಯತೆಗೆ ಬೀಳುತ್ತದೆ. ಉದಾಹರಣೆಗೆ ಜಲ್ಲಿಕಟ್ಟನ್ನು ಪರಂಪರಾಗತವಾಗಿ ನಡೆಸಿಕೊಂಡು ಬಂದ ಕ್ರೀಡೆ ಎಂದು ಹೇಳದೇ, ಅದನ್ನು ತಮಿಳಿಗರ ಐಡೆಂಟಿಟಿಯೆಂದು ಪುನರ್ವ್ಯಾಖ್ಯಾನಿಸಬೇಕಾಗುತ್ತದೆ. ಈ ಆಟದ ನಿಷೇಧವನ್ನು ತಮಿಳಿಗರ ಐಡೆಂಟಿಟಿಯನ್ನು ನಾಶ ಮಾಡುವ ಹುನ್ನಾರವೆಂದು ಹೇಳಬೇಕಾಗುತ್ತದೆ. ಹಾಗೆಯೇ ಇನ್ನು ಕೆಲವರು ಈ ಕ್ರೀಡೆಗಳಿಂದ ಪ್ರಾಣಿಗಳ ದೈಹಿಕ ಸಾಮರ್ಥ್ಯದಲ್ಲಿ ಆಗುವ ಲಾಭಗಳನ್ನು ಮುಂದಿಟ್ಟುಕೊಂಡು ಇಂತಹ ಆಟಗಳಲ್ಲಿರುವ ಹಕ್ಕಿನ ಉಲ್ಲಂಘನೆಗಳನ್ನು ಸಮರ್ಥನೀಯವಾಗಿಸುತ್ತಾರೆ.

ಆದರೆ ಯಃಕಶ್ಚಿತ್ ಆಟವೊಂದು ಐಡೆಂಟಿಟಿ ಹೇಗಾಗುತ್ತದೆ ಎನ್ನುವದು ಇಲ್ಲಿ ಅರ್ಥವಾಗುವದಿಲ್ಲ. ಇಷ್ಟು ಪ್ರಸಿದ್ಧವಾಗಿರುವ ಕ್ರಿಕೆಟನ್ನು ಇಂಗ್ಲೆಂಡಿನ ಜನರ ಐಡೆಂಟಿಟಿ ಎಂದು ಭಾರತೀಯನೊಬ್ಬ ಭಾವಿಸುವದಿಲ್ಲವಷ್ಟೇ! ನೂರು ಜನ ತಮಿಳಿಗರಲ್ಲಿ ಒಬ್ಬರು ಆಡುವ ಈ ಆಟವು ಇಡೀ ತಮಿಳಿಗರ ಐಡೆಂಟಿಟಿ ಹೇಗಾಯಿತು ಎನ್ನುವದರಲ್ಲಿ ಸ್ಪಷ್ಟತೆಯಿಲ್ಲ. ಕಾವೇರಿಯ ವಿಷಯದಲ್ಲಿ ಕಿತ್ತಾಡಿಕೊಂಡಿದ್ದ ಎರಡು ರಾಜ್ಯದ ಜನರು ಜಲ್ಲಿಕಟ್ಟು ಹಾಗೂ ಕಂಬಳದ ವಿಷಯದಲ್ಲಿ ಏಕೆ ಪರಸ್ಪರ ಒಬ್ಬರಿಗೊಬ್ಬರು ಸಮರ್ಥನೆಗೆ ನಿಂತರು ಎನ್ನುವದು ಸ್ಪಷ್ಟವಾಗುವದಿಲ್ಲ. ಹಾಗೆಯೇ ಪ್ರಾಣಿಯೊಂದರ ಹಕ್ಕಿನ ಉಲ್ಲಂಘನೆಯಾಗದಂತೆ ಅದರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ನೂರಾರು ಸಾಧ್ಯತೆಗಳಿರುವಾಗ, ಹಕ್ಕುಗಳ ಉಲ್ಲಂಘನೆಯಾಗುವಂತಹ ಆಟಗಳು ಏಕೆ ಬೇಕು ಎನ್ನುವದರಲ್ಲೂ ಸ್ಪಷ್ಟತೆಯಿಲ್ಲ.

ಜಲ್ಲಿಕಟ್ಟು ಹಾಗೂ ಕಂಬಳದಂತಹ ಆಟಗಳನ್ನು ಆಡುವವರು ಇದು ನಮ್ಮ ಐಡೆಂಟಿಟಿಯ ಅಸ್ತಿತ್ವವನ್ನು ಸಾಬೀತುಪಡಿಸುವ ಆಟ ಎಂದು ಭಾವಿಸಿ ಆಡುವದಿಲ್ಲ. ಈ ರೀತಿಯ ಐಡೆಂಟಿಟಿಗಳು ಆ ಆಟಕ್ಕೆ ಸೇರದ ಸಂಪ್ರದಾಯಗಳ ಜನರನ್ನೂ ಕೂಡ ಹೋರಾಟದಲ್ಲಿ ತೊಡಗಿಸಿಕೊಳ್ಳುವದಕ್ಕಷ್ಟೇ ಸೀಮಿತವಾಗಿರುತ್ತವೆಯೇ ಹೊರತು ಜನರ ಮೂಲ ಅನುಭವವಾಗಿರುವದಿಲ್ಲ. ಆದರೆ ಈ ಐಡೆಂಟಿಟಿಗಳ ರಾಜಕಾರಣವು ಬೆಳೆಯುತ್ತಾ ಹೋದಂತೆ ಜನರಲ್ಲಿ ಇಲ್ಲದ ಕಂದಕವನ್ನು ಸೃಷ್ಟಿಸುತ್ತಾ ಸಾಗುತ್ತವೆ. ನೂರು ವರ್ಷಗಳ ಹಿಂದೆ ಕನ್ನಡಿಗರೂ ಇದ್ದರು ಹಾಗೂ ತಮಿಳಿಗರೂ ಇದ್ದರು. ಕಾವೇರಿ ನೀರಿಗೆ ಆಗಿನ ಜನರು ಕಟ್ಟಿಕೊಳ್ಳುತ್ತಿದ್ದ ಒಡ್ಡುಗಳ ಬಗ್ಗೆ ತಕರಾರೂ ಇತ್ತು. ಆದರೆ ಅವೆರಡಕ್ಕೂ ಸಂಬಂಧವಿರಲಿಲ್ಲ. ಈಗ ಭಾಷೆಯು ಐಡೆಂಟಿಟಿ ರಾಜಕಾರಣವಾಗುತ್ತಿದೆ. ಹೀಗಾಗಿ ಎರಡು ಭೌಗೋಳಿಕ ಪ್ರದೇಶಗಳ ನಡುವೆ ನೀರಿನ ಹಂಚಿಕೆಯೂ ಕೂಡ ಐಡೆಂಟಿಟಿ ರಾಜಕಾರಣದ ರೂಪವನ್ನು ಪಡೆದುಕೊಳ್ಳುತ್ತಿದೆ. ಮೈಸೂರು-ಬೆಂಗಳೂರಿಗೆ ಕಾವೇರಿ ನೀರಿನಲ್ಲಿ ಸಿಂಹಪಾಲು ಸಿಗಬೇಕೆಂದು ಬೆಳಗಾವಿಯಲ್ಲಿ ಹೋರಾಟ ನಡೆಯಬೇಕಾದರೆ ಈ ಭಾಷೆಯ ಹಾಗೂ ರಾಜ್ಯದ ಐಡೆಂಟಿಟಿ ರಾಜಕಾರಣವು ಬಳಸಲ್ಪಡಲೇಬೇಕು. ಹೀಗೆ ನಮ್ಮಲ್ಲಿ ಪ್ರಾಂತ್ಯ, ರಾಜ್ಯ, ಭಾಷೆ, ಜಾತಿಗಳ ವಿಷಯಗಳಲ್ಲಿ ಐಡೆಂಟಿಟಿ ಬೆಳೆಯುತ್ತ ಹೋದಂತೆಲ್ಲ ಜನರ ಮಧ್ಯೆ ಇರಬಾರದ ಕಂದಕಗಳು ಸೃಷ್ಟಿಯಾಗುತ್ತವೆ. ಇಂತಹ ವಾತಾವರಣಗಳು ನಿರ್ಮಾಣವಾದಂತೆ ಮುಂದಿನ ದಿನಗಳು ನಮಗೆ ಅತ್ಯಂತ ಕಠಿಣವಾಗಲಿವೆ. ಯಾವ ಲಿಬರಲ್ ಸೆಕ್ಯುಲರಿಸಂ ನಮ್ಮೆಲ್ಲ ವೈವಿಧ್ಯಮಯ ಸಂಪ್ರದಾಯಗಳನ್ನು ಒಗ್ಗೂಡಿಸಿ ಮುನ್ನಡೆಯುವ ನಿರ್ವಹಣೆಯನ್ನು ಹೊತ್ತಿತ್ತೋ ಅದೇ ಲಿಬರಲ್ ಸೆಕ್ಯುಲರಿಸಂ ವಿಧವಿವಿಧ ಐಡೆಂಟಿಟಿಗಳನ್ನು ಸೃಷ್ಟಿಸಿ ಇಲ್ಲದ ಒಡಕನ್ನು ಸೃಷ್ಟಿಸುತ್ತಿದೆ. ಹೀಗಾಗಿ ವಸಾಹತುವಿನಿಂದ ಹುಟ್ಟಿಕೊಂಡಿರುವ ಇಂಥ ಐಡೆಂಟಿಟಿಗಳನ್ನು ನಿರಾಕರಿಸುವ ಅಗತ್ಯತೆ ಹಿಂದೆಂದಿಗಿಂತಲೂ ಇದೆ. ಹಾಗೂ ಸಂಪ್ರದಾಯಗಳ ಕುರಿತು ಜನರಿಗಿರುವ ಭಾವನೆಗಳನ್ನು ಸರಿಯಾಗಿ ಅರಿಯಬೇಕಿದೆ.

ಜಲ್ಲಿಕಟ್ಟು ಹಾಗೂ ಕಂಬಳದಂತಹ ಸಾಂಪ್ರದಾಯಿಕ ಆಚರಣೆಗಳು ಮುಂದುವರಿಯಬೇಕೆಂಬುದು ಜನಸಾಮಾನ್ಯರ ಅಭಿಪ್ರಾಯವೆಂಬುದರಲ್ಲಿ ಎರಡು ಮಾತಂತೂ ಇಲ್ಲ. ಆದರೆ ನಾವು ಗಮನಿಸಬೇಕಾದ ಅಂಶವೇನೆಂದರೆ ಅಂತಹ ಆಚರಣೆಗಳನ್ನು ಏಕೆ ನಡೆಸಬೇಕೆಂಬುದಕ್ಕೆ ನಾವು ಯಾವ ಕಾರಣಗಳನ್ನು ನೀಡಬೇಕಾಗಿಲ್ಲ. ಏಕೆಂದರೆ ಸಂಪ್ರದಾಯಗಳ ಆಚರಣೆಗಳು ಯಾವ ಅಡ್ಡಿಯೂ ಇಲ್ಲದಿದ್ದಲ್ಲಿ ಹಾಗೆಯೇ ಮುಂದುವರೆಯುವ ಸ್ವಭಾವವನ್ನು ಹೊಂದಿರುತ್ತವೆ. ಹೀಗಾಗಿ ಈ ಆಟಗಳು ಮುಂಚಿನಿಂದಲೂ ನಡೆದುಕೊಂಡು ಬಂದಿವೆಯೆಂಬ ಅಂಶವೊಂದೇ ಇದನ್ನು ಮುಂದುವರೆಸಲು ಸಾಕು. ಹೀಗಾಗಿ ಯಾರಾದರೂ ಇಂಥ ಆಚರಣೆಗಳು ಏಕೆ ನಡೆಯಬೇಕು ಎಂದು ಕೇಳಿದರೆ ಅದನ್ನು ಐಡೆಂಟಿಟಿಯೆಂದೋ ಇಲ್ಲವೇ ಪ್ರಾಣಿಗಳ ಆರೋಗ್ಯಕ್ಕಾಗಿಯೆಂದೋ ಹೇಳಬೇಕಾಗಿಲ್ಲ. ಅದೊಂದು ಸಂಪ್ರದಾಯ ಹಾಗೂ ಅದನ್ನು ಪಾಲಿಸಿಕೊಂಡು ಬಂದ ಜನರಿಗೆ ಅದನ್ನು ನಿಲ್ಲಿಸಲು ಯಾವ ಕಾರಣಗಳೂ ಇಲ್ಲವಾಗಿರುವದರಿಂದ ಅವುಗಳು ನಡೆಯಬೇಕು ಎನ್ನುವದಷ್ಟೇ ಉತ್ತರವಾಗಬೇಕು.

ಇನ್ನು ಹಕ್ಕು ಎನ್ನುವ ಪರಿಕಲ್ಪನೆಯೂ ಕೂಡ ರಿಲಿಜನ್ನಿನ ಮೂಲವನ್ನೇ ಹೊಂದಿರುವದರಿಂದ ಅದೇನೂ ವೈಜ್ಞಾನಿಕ ವಿವರಣಾ ಪದ್ಧತಿಯೆಂದು ನಾವು ಭಾವಿಸಬೇಕಿಲ್ಲ. ಹಕ್ಕುಗಳ ಪರಿಕಲ್ಪನೆಯು ಸಾರ್ವತ್ರಿಕವಲ್ಲ. ಆ ಪರಿಕಲ್ಪನೆಯು ಇರುವದು ಕೇವಲ ರಿಲಿಜನ್ನಿನಲ್ಲಿ ಮಾತ್ರ. ಹೀಗಾಗಿ ಪ್ರಾಣಿಹಿಂಸೆಯನ್ನು ಪ್ರಾಣಿಗಳ ಹಕ್ಕುಗಳ ಉಲ್ಲಂಘನೆಯೆಂದು ವ್ಯಾಖ್ಯಾನಿಸುವ ರೀತಿಯನ್ನು ನಾವು ವೈಜ್ಞಾನಿಕವೆಂದು ಸ್ವೀಕರಿಸಬೇಕಿಲ್ಲ. ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಂಡು ಅವುಗಳನ್ನು ಗದ್ದೆಗಳಲ್ಲಿ, ಬಂಡಿ ಓಡಿಸುವಲ್ಲಿ, ಮೆರವಣಿಗೆಯಲ್ಲಿ ಹಾಗೂ ಪಂದ್ಯಗಳಲ್ಲಿ ಉಪಯೋಗಿಸಿಕೊಳ್ಳುವದನ್ನು ಪ್ರಾಣಿಹಿಂಸೆಯೆಂದು ವ್ಯಾಖ್ಯಾನಿಸಬೇಕಿಲ್ಲ. ಬಂಡಿಗೆ ನಾಯಿಯನ್ನು ಕಟ್ಟಿ ಬಲವಂತವಾಗೇನೂ ನಾವು ಎಳೆಸುವದಿಲ್ಲ. ಏಕೆಂದರೆ ಯಾವ ಪ್ರಾಣಿಗೆ ಯಾವುದು ಹಿಂಸೆ ಎನ್ನುವದನ್ನು ಸಾಂದರ್ಭಿಕವಾಗಿ ನಿರ್ಧರಿಸುವ ಪ್ರಕ್ರಿಯೆಯೊಂದನ್ನು ನಾವು ಹಿರಿಯರಿಂದ ಕಲಿತಿರುತ್ತೇವೆ. ಅದನ್ನು ಅವೈಜ್ಞಾನಿಕವೆಂದು ಪರಿಗಣಿಸಿ, ಹಕ್ಕಿನ ದೃಷ್ಟಿಯಲ್ಲೇ ನೋಡಬೇಕು ಎಂದು ಆಗ್ರಹಿಸುವದು ಲಿಬರಲಿಸ್ಟುಗಳಲ್ಲಿರುವ ಮೂಢನಂಬಿಕೆಯನ್ನು ತೋರಿಸುತ್ತದೆ.

ಹಾಗೆಯೇ ದೇವಸ್ಥಾನಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡಲು ತಪ್ಪೆಂದು ಭಾವಿಸಬೇಕಿಲ್ಲ. ಪ್ರಾಣಿಬಲಿಯು ಕ್ರಿಶ್ಚಿಯಾನಿಟಿಯಲ್ಲಿ ಮೂಢನಂಬಿಕೆಯೆಂದು ಕರೆಯಲ್ಪಡುತ್ತದೆ. ಅದಕ್ಕೆ ಅದರದೇ ಆದ ಕಾರಣವಿದೆ. ಕ್ರಿಸ್ತ ಶಿಲುಬೆಗೇರಿದ ಪ್ರಕ್ರಿಯೆಯನ್ನು ಇಡೀ ಮಾನವ ಸಮುದಾಯದ ಸಿನ್ ಅನ್ನು ಜಸ್ಟಿಫೈ ಮಾಡಲು ನೀಡಿದ ಕೊನೆಯ ಬಲಿಯೆಂದು ವಿಶ್ಲೇಷಿಸಲಾಗುತ್ತದೆ. ಹೀಗಾಗಿ ಈಗೇನಾದರೂ ಕ್ರಿಶ್ಚಿಯನ್ನೊಬ್ಬ ಬಲಿ ನೀಡಿದರೆ ಅದನ್ನು ಆ ನಂಬಿಕೆಗೆ ವಿರುದ್ಧವೆಂದು ಭಾವಿಸಲಾಗುತ್ತದೆ. ಆ ಕ್ರಿಶ್ಚಿಯನ್, ಕ್ರಿಸ್ತನ ಬಲಿಯನ್ನು ಒಪ್ಪುವದಿಲ್ಲ ಎಂದು ಅರ್ಥೈಸಲಾಗುತ್ತದೆ. ಹೀಗಾಗಿ ಕ್ರಿಶ್ಚಿಯಾನಿಟಿಯಲ್ಲಿ ಮಾಂಸಾಹಾರವು ಹಕ್ಕಾಗಿದ್ದರೂ, ಪ್ರಾಣಿಬಲಿಯು ಮೂಢನಂಬಿಕೆಯಾಗಿದೆ. ಆದರೆ ಹಕ್ಕುಗಳ ಕಲ್ಪನೆಯಾಗಲೀ, ಕ್ರಿಸ್ತನ ಬಲಿದಾನದ ಪರಿಕಲ್ಪನೆಯಾಗಲೀ ಇರದ ನಮ್ಮ ಸಮಾಜದಲ್ಲಿ ಮಾಂಸಾಹಾರವನ್ನು ಒಪ್ಪಿಕೊಂಡಿರುವ ಸಮುದಾಯಗಳು ತಾವು ತಿನ್ನುವ ಪ್ರಾಣಿಯನ್ನು ಮೊದಲು ದೇವರಿಗೆ ಸಮರ್ಪಿಸುವದನ್ನು ಮೂಢನಂಬಿಕೆಯೆಂದು ಭಾವಿಸಬೇಕಿಲ್ಲ. ಹಾಗೂ ಅವನ್ನು ಐಡೆಂಟಿಟಿಯ ಹೆಸರಲ್ಲಿ ಸಮರ್ಥಿಸಿಕೊಳ್ಳಬೇಕಾದ ದರ್ದೂ ಇಲ್ಲ.

6 ಟಿಪ್ಪಣಿಗಳು Post a comment
  1. sudarshana gururajarao
    ಫೆಬ್ರ 1 2017

    ಜೀವಪರ ನಾಗಿ
    ಸಲಾಂ ಸಾಬಿ ಉಸಿರೆತ್ತಿಲ್ಲ!!

    ಉತ್ತರ
  2. ಶೆಟ್ಟಿನಾಗ ಶೇ.
    ಫೆಬ್ರ 2 2017

    ಪಂಜಾಬಿನಲ್ಲಿ ಆಮ್ ಆದಮೀ ಪಕ್ಷಕ್ಕೇ ಈ ಬಾರಿ ಬಹುಮತ ಎಂದು ಸತ್ಯನಿಷ್ಠೆಯ ಪತ್ರಕರ್ತೆ ಸಾಗರಿಕ ಘೋಷ್ ಹೇಳಿದ್ದಾರೆ. ಅರವಿಂದ್ ಕೆಜರಿವಾಲ್ ಅವರ ನೇತೃತ್ವದಲ್ಲಿ ದೇಶದಲ್ಲಿ ಹೊಸ ಸಂಚಲನೆ ಸಂವೇದನೆ ಉಂಟಾಗಿದ್ದು ದೆಹಲಿ ಬಳಿಕ ಪಂಜಾಬಿನಲ್ಲಿ ಜನಸಾಮನ್ಯರ ಆಡಳಿತದ ಸ್ಥಾಪನೆಯಾಗಲಿದೆ. ಜಯಲಲಿತಾ ಸಾವಿನ ನಂತರ ತಮಿಳುನಾಡಿನಲ್ಲಿ ರಾಜಕೀಯ ಶೂನ್ಯ ತುಂಬಿಕೊಂಡಿದೆ. ತಮಿಳುನಾಡಿನಲ್ಲೂ ಆಂ ಆದಮೀ ಪಕ್ಷದ ಅಲೆ ಮೂಡುವ ಸಾಧ್ಯತೆ ಇದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಜಲ್ಲಿಕಟ್ಟು ವಿವಾದವನ್ನು ಹುಟ್ಟಿಸಲಾಯಿತು. ಜನರ ಭಾವನೆಗಳನ್ನು ಕೆರಳಿಸಿ ಅಸಲಿ ಸಮಸ್ಯೆಗಳನ್ನು ಮರೆಮಾಚಿಸುವ ನಾಟಕ ನಡೆದಿದೆ. ಜಲ್ಲಿಕಟ್ಟು ಅನ್ನು ದಲಿತರ ಅಲ್ಪಸಂಖ್ಯಾತರ ಆಹಾರದ ಹಕ್ಕಿನ ಜೊತೆಗೆ ಸಿಕ್ಕಿಸಿ ಒಂದೇ ಏಟಿಗೆ ಎರಡು ಹಕ್ಕಿಗಳ ಮಾರಣ ಹೋಮ ಮಾಡುವ ಹುನ್ನಾರ. ಆದರೆ ಪಂಜಾಬ್ ಚುನಾವಣಾ ಫಲಿತಾಂಶ ತಮಿಳುನಾಡಿನಲ್ಲಿ ಆಂ ಆದಮೀ ಪಕ್ಷದ ಅಲೆಯನ್ನು ಬೆಳೆಸುತ್ತದೆ. ಖಂಡಿತ.

    ಉತ್ತರ
    • ಮಾರ್ಕ್ಸ್ ಮಂಜು
      ಫೆಬ್ರ 2 2017

      Mr.Shetkar I thought you are follower of ಮಹರ್ಷಿ ಮಾರ್ಕ್ಸ್.But you seems to be follower of ಕ್ರೇಜಿ ಕ್ರಾಕ್ಸ್

      ಉತ್ತರ
      • ಶೆಟ್ಟಿನಾಗ ಶೇ.
        ಫೆಬ್ರ 2 2017

        ಕೆಜರಿವಾಲರ ಭಕ್ತ ನಾನಲ್ಲ! ಅವರ ಬೆಂಬಲಿಗ ಮಾತ್ರ. ಹಿಂದೆ ವಿ ಪಿ ಸಿಂಗ್, ಚಂದ್ರಶೇಖರ್, ಕಾನ್ಶೀರಾಮ್ ಮನಮೋಹನ್ ಸಿಂಗ್ ಅವರನ್ನು ರಾಜಕೀಯದಲ್ಲಿ ಬೆಂಬಲಿಸಿದ್ದೆ ಇಂದು ಕೆಜರಿವಾಲ್, ಮಾಯಾವತಿ, ನಿತೀಶ್ ಅವರನ್ನು.

        ಉತ್ತರ
        • ಮಾರ್ಕ್ಸ್ ಮಂಜು
          ಫೆಬ್ರ 3 2017

          I don’t see any Comrades name there!

          ಉತ್ತರ
          • ಶೆಟ್ಟಿನಾಗ ಶೇ.
            ಫೆಬ್ರ 3 2017

            ಜ್ಯೋತಿ ಬಸು + ನಂಬೂದರಿಪಾಡ್. ಈಗ ಪಿನರಾಯಿ ಕೂಡ ಓಕೆ, ಅಚ್ಯುತಾನಂದನ್ ಬೆಟರ್.

            ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments