ಯಾರು ಹಿತವರು ಯಡ್ಯೂರಪ್ಪನವರಿಗೆ..?
– ರಾಕೇಶ್ ಶೆಟ್ಟಿ
“ಕೊಟ್ಟ ಕುದುರೆಯನೇರಲರಿಯದೆ…” ವಚನದ ಸಾಲುಗಳು ಕರ್ನಾಟಕ ಬಿಜೆಪಿಯ ನಾಯಕರಿಗೆ ಸರಿಯಾಗಿ ಅನ್ವಯಿಸುತ್ತದೆ. ಎಪಿಎಂಸಿ,ಪಾಲಿಕೆ ಚುನಾವಣೆಗಳೆನ್ನದೇ ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿ ಗೆದ್ದು ಬರುತ್ತಿರುವ ಕಮಲ ಪಕ್ಷದ ಸುವರ್ಣ ಸಮಯದಲ್ಲೂ, ರಾಜ್ಯ ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಮಕಾಡೆ ಮಲಗಿ ಕಿರಗೂರಿನ ಗಯ್ಯಾಳಿಗಳಂತೆ ಕಾದಾಟಕ್ಕಿಳಿದಿದ್ದಾರೆ. ನಿನ್ನೆಯ ಸಂಘಟನೆ ಉಳಿಸಿ ಹೆಸರಿನ ಸಭೆ, ಅದಕ್ಕೆ ಪ್ರತಿಯಾಗಿ ನಡೆದ ಬೆಂಗಳೂರಿನ ಶಾಸಕ, ಸಂಸದರ ಪತ್ರಿಕಾಗೋಷ್ಟಿ, ನಾಯಕರೆನಿಸಿಕೊಂಡವರ ಏಕವಚನ ಪ್ರಯೋಗ, ಆರೋಪ-ಪ್ರತ್ಯಾರೋಪಗಳಿಂದಾಗಿ ನಿನ್ನೆ ಎಷ್ಟು ಮೆಗಾಧಾರವಾಹಿಗಳ ಟಿಆರ್ಪಿ ಕಡಿಮೆಯಾಯಿತೋ!
ದೇಶದ ಉಳಿದ ರಾಜ್ಯಗಳ ಬಿಜೆಪಿ, ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕಾರಣ ಮತ್ತು ಯುವ ಮನಸ್ಸುಗಳ ಆಲೋಚನಾ ಶಕ್ತಿಯಿಂದ ಮುಂದುವರೆಯುತ್ತಿದ್ದರೆ, ರಾಜ್ಯ ಬಿಜೆಪಿ ಮಾತ್ರ ಪುರಾತನ ಜಾತಿ ಮತ್ತು ಓಲೈಕೆ ರಾಜಕಾರಣವನ್ನೇ ನೆಚ್ಚಿಕೊಂಡಿದೆ.ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಮುಖಂಡರೊಬ್ಬರು, ಕುರುಬರಿಗಾಗಿ ಈಶ್ವರಪ್ಪ ಏನು ಮಾಡಿದ್ದಾರೆ? ಯಡ್ಯೂರಪ್ಪನವರೇ ಕನಕ ಜಯಂತಿ ಆರಂಭಿಸಿದ್ದು ಎಂದು ಹೇಳುತ್ತಿರುವುದನ್ನು ಕೇಳಿದೆ. ಆಗಾಗ್ಗೆ ಬರುವ ಜಯಂತಿಗಳ ನೆಪದಲ್ಲಿ ರಜೆಗಳನ್ನು ಕೊಟ್ಟು ಸರ್ಕಾರಿ ಯಂತ್ರವನ್ನು ನಿಲ್ಲಿಸುವ ಪರಿಪಾಠಗಳು ಕೊನೆಯಾಗಬೇಕೆಂಬ ಉದ್ದೇಶದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತವರು ‘ಜಯಂತಿ ರಜೆ’ಗಳನ್ನೇ ಕಿತ್ತೊಗೆಯುವಂತಹ ಕೆಲಸ ಮಾಡುತ್ತಿರುವಾಗ, ರಾಜ್ಯ ಬಿಜೆಪಿಯ ನಾಯಕರ ಮನಸ್ಥಿತಿ ಇನ್ನೂ ಜಯಂತಿ ರಾಜಕಾರಣದಲ್ಲೇ ಇರುವುದು ಇವರ ಯೋಚನಾ ಲಹರಿ ಯಾವ ಕಾಲದಲ್ಲಿದೆ ಎಂದು ಸೂಚಿಸುತ್ತದೆ. ಹಾಗೆ ನೋಡಿದರೇ ಕಾಂಗ್ರೆಸ್ಸಿನ ‘ಭಾಗ್ಯ’ ರಾಜಕಾರಣಕ್ಕೂ, ಬಿಜೆಪಿಯ ‘ಜಯಂತಿ’ ರಾಜಕಾರಣಕ್ಕೂ ಯಾವ ವ್ಯತ್ಯಾಸವಿದೆ ? ಇವೆಲ್ಲವನ್ನೂ ಪ್ರಶ್ನಿಸಬೇಕಾದ ಪತ್ರಿಕೆಗಳು ಮಾಡುತ್ತಿರುವುದಾದರೂ ಏನು?