ಬಾಹುಬಲಿ ಹಾಗೂ ಬುದ್ಧಿಜೀವಿಗಳು
– ವಿನಾಯಕ ಹಂಪಿಹೊಳಿ
ಇತ್ತೀಚೆಗೆ ಬಿಡುಗಡೆಯಾದ ಬಾಹುಬಲಿ-೨ ಚಿತ್ರವು ಉಳಿದೆಲ್ಲ ಚಿತ್ರಗಳ ದಾಖಲೆಗಳನ್ನೆಲ್ಲ ಮುರಿದು ಇತಿಹಾಸವನ್ನು ಸೃಷ್ಟಿಸಿತು. ಒಂದು ಸಾವಿರ ಕೋಟಿ ಗಳಿಸಿದ ಮೊತ್ತಮೊದಲ ಭಾರತೀಯ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜನರು ಬಾಹುಬಲಿ ಚಿತ್ರದ ಎರಡೂ ಸರಣಿಗಳನ್ನು ಮನಸಾರೆ ಆನಂದಿಸಿದರು. ಬಾಹುಬಲಿಯ ಮೊದಲ ಭಾಗದಲ್ಲಿ ಕಂಡು ಬಂದಿದ್ದ ಹಲವಾರು ತಾಂತ್ರಿಕ ಹಾಗ ನಟನೆಯ ನ್ಯೂನತೆಗಳನ್ನೆಲ್ಲ ತಿದ್ದಿಸಿ, ರಾಜಮೌಳಿ ಎರಡನೇ ಭಾಗವನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟರು. ಕಥೆಯ ಮೊದಲ ಭಾಗದಲ್ಲಿ ಕಾಡುವ ಎಲ್ಲ ಪ್ರಶ್ನೆಗಳಿಗೂ ಕಾರಣವನ್ನು ಒದಗಿಸಿ, ಯಾವ ಪ್ರಶ್ನೆಯನ್ನೂ ಹಾಗೇ ಉಳಿಸಿಕೊಳ್ಳದೇ, ಕಥೆಯನ್ನು ಮುಗಿಸಿದ ಕೀರ್ತಿ ರಾಜಮೌಳಿಗೆ ಸಲ್ಲಬೇಕು.
ಯುದ್ಧದ ದೃಶ್ಯಗಳಂತೂ ಎರಡೂ ಚಿತ್ರಗಳಲ್ಲಿ ಬಹಳ ಚೆನ್ನಾಗಿ ಮೂಡಿಬಂದಿವೆ. ನಮ್ಮ ಪೂರ್ವಜರು ಯಾವೆಲ್ಲ ತಂತ್ರಗಳನ್ನು ಅನುಸರಿಸಿ ಯುದ್ಧಗಳನ್ನು ನಡೆಸಿದ್ದಾರೋ, ಅವೆಲ್ಲವುಗಳನ್ನೂ ರಾಜಮೌಳಿಯವರು ಕಲಾತ್ಮಕವಾಗಿ ತೋರಿಸಿದ್ದಾರೆ. ಮೇಲ್ನೋಟಕ್ಕೆ ಈ ಎಲ್ಲ ಯುದ್ಧತಂತ್ರಗಳೂ ರಾಜಮೌಳಿಯ ಕಲ್ಪನೆಯಂತೆ ಕಂಡರೂ, ಅವುಗಳಲ್ಲಿ ಬಹಳಷ್ಟು ತಂತ್ರಗಳನ್ನು ಹಿಂದೆ ನಮ್ಮ ಕ್ಷತ್ರಿಯರು ಅನುಸರಿಸಿರುವದಕ್ಕೆ ಚಾರಿತ್ರಿಕ ದಾಖಲೆಗಳಿವೆ. ಶಿವಗಾಮಿ, ದೇವಸೇನಾ, ಅವಂತಿಕಾ ಅಂಥ ಸ್ತ್ರೀ ಪಾತ್ರಗಳೂ ಕ್ಷಾತ್ರಗುಣಗಳಿಂದ ಕೂಡಿದ್ದವು. ಇದೂ ಕೂಡ ನಮ್ಮ ಚರಿತ್ರೆಯಲ್ಲಿ ಹೋರಾಡಿದ ವೀರ ವನಿತೆಯರನ್ನೇ ಬಿಂಬಿಸುತ್ತದೆ.