ದಾಸ ಸಾಹಿತ್ಯ ಮಾರುವೇಷದ ಕಾರ್ಯಾಚರಣೆ – ಕನಕದಾಸ ಬಲೆಯೊಳಗೆ ಬಿದ್ದ ಮಿಕ !!!
– ಡಾ. ರೋಹಿಣಾಕ್ಷ ಶಿರ್ಲಾಲು
ಕನ್ನಡ ಉಪನ್ಯಾಸಕರು,ವಿವೇಕಾನಂದ ಕಾಲೇಜು, ಪುತ್ತೂರು
ನಮ್ಮ ಶಾಲಾ ಕಾಲೇಜು ಪಠ್ಯ ಪುಸ್ತಕಗಳು ಹೇಗಿರಬೇಕು ಎನ್ನುವ ಚರ್ಚೆ ಬಹುಕಾಲದಿಂದಲೂ ನಡೆದುಬಂದಿದೆ. ಶಿಕ್ಷಣ ತಜ್ಞರು ಶೈಕ್ಷಣಿಕ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ , ವಿದ್ಯಾರ್ಥಿಗಳ ಮನೋಭಾವ, ಬದಲಾದ ಕಾಲಮಾನ, ಔದ್ಯೋಗಿಕ ಅವಕಾಶ ಇವೇ ಮೊದಲಾದ ಸಂಗತಿಗಳನ್ನು ಕಣ್ಮುಂದೆ ಇರಿಸಿಕೊಂಡು ಪಠ್ಯಗಳನ್ನು ಸಿದ್ಧ ಮಾಡಬೇಕಾಗುತ್ತದೆ. ಪ್ರಾಥಮಿಕ ಶಾಲಾ ಪಠ್ಯದಿಂದ ತೊಡಗಿ ಸ್ನಾತಕೋತ್ತರರ ಪದವಿಯಂತಹ ಉನ್ನತ ಶಿಕ್ಷಣದ ವರೆಗಿನ ಪಠ್ಯಗಳಿಗೂ ಅದರದ್ದೇ ಆದ ಉದ್ದೇಶ ಮತ್ತು ಗುರಿ ಇರುತ್ತದೆ. ಪಠ್ಯವೊಂದು ಅಂತಿಮವಾಗಿ ಓದುವ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸುವಂತೆಯೂ,ಕುತೂಹಲವನ್ನು ಬೆಳೆಸುವಂತೆಯೂ ಇರಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಪಠ್ಯವೊಂದನ್ನು ಓದಿದ ವಿದ್ಯಾರ್ಥಿಯು ಮುಂದೆ ಆ ವಿಷಯದಲ್ಲಿ ಇನ್ನಷ್ಟು ಸಂಗತಿಗಳನ್ನು ಆಸಕ್ತಿಯಿಂದ ಓದುವಂತೆ ಪ್ರೆರೇಪಿಸಬೇಕೇ ವಿನಃ ಅದು ಓದಿನ ಕೊನೆಯಾಗುವಂತೆ ಮಾಡಬಾರದು ಎನ್ನುವುದೂ ಸತ್ಯ. ವಿದ್ಯಾರ್ಥಿಗಳ ಆಲೋಚನೆಯನ್ನು ವಿಸ್ತರಿಸುವಲ್ಲಿ, ಮನಸ್ಸನ್ನು ಇನ್ನಷ್ಟು ಮುಕ್ತವಾಗಿ ಇರಿಸುವಲ್ಲಿ ಪೂರಕವಾಗಿರಬೇಕೇ ಹೊರತು ಅವರ ಆಲೋಚನೆಗಳಿಗೆ ಪೂರ್ಣವಿರಾಮ ಹಾಕಿ ಯಾರೋ ಹೇರಿದ ಚಿಂತನೆಯ ದಾಸ್ಯಕ್ಕೆ ತಳ್ಳಬಾರದು.
ಉದಾಹರಣೆಗೆ,ಪದವಿ ಹಂತದಲ್ಲಿ ಕನ್ನಡ ಸಾಹಿತ್ಯ ವಿಷಯವನ್ನು ಮೇಜರ್ ವಿಷಯವಾಗಿ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ತಮ್ಮ ಮೂರು ವರ್ಷಗಳ ಪದವಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವಾಗ ಕನ್ನಡ ಸಾಹಿತ್ಯದ ವಿಸ್ತಾರ, ಆಳ ಅಗಲಗಳನ್ನು ಪರಿಚಯಿಸಿಕೊಳ್ಳುವಂತೆ ಪ್ರಾತಿನಿಧಿಕ ಪಠ್ಯಗಳನ್ನು ಅಭ್ಯಾಸಿಸಲಾಗುತ್ತದೆ. ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲಿ ಈ ವಿಷಯವನ್ನು ಅಭ್ಯಾಸ ಮಾಡಿದರೂ ಓದಿದ ಪ್ರಾತಿನಿಧಿಕ ಪಠ್ಯಗಳು ಬೇರೆ ಬೇರೆ ಯಾದರೂ ಅವುಗಳ ನಡುವೆ ಒಂದು ಸಾಮಾನ್ಯ ಸ್ವರೂಪ ಸಮಾನವಾಗಿರುತ್ತದೆ. ಇದಕ್ಕಾಗಿ ಈಗಾಗಲೇ ಒಪ್ಪಿತವಾದ ಮಾದರಿಯೂ ಇದೆ.
ಸಾಹಿತ್ಯ ಪಠ್ಯದ ಭಾಗವೇ ಆಗಿ ಸಾಹಿತ್ಯ ಚರಿತ್ರೆಯನ್ನೂ ಓದುವಾಗ ಈಗಾಗಲೇ ಪ್ರಾಜ್ಞರಿಂದ ರಚನೆಯಾದ ಸಾಹಿತ್ಯ ಚರಿತ್ರೆಯ ಸಂಗ್ರಹರೂಪವನ್ನು ಪಠ್ಯವಾಗಿ ನೀಡಲಾಗುತ್ತದೆ. ಪಠ್ಯ ಪುಸ್ತಕಗಳ ಸಂಪಾದಕರು ಬೇರೆ ಬೇರೆ ಸೆಮಿಸ್ಟರ್‍ಗಳಿಗೆ ಹಂಚಿಹೋಗುವಂತೆ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ವಿವಿಧ ಪ್ರಕಾರ, ಸಾಹಿತ್ಯ ರೂಪಗಳ ಉಗಮ ವಿಕಾಸದ ಕುರಿತು ಚರಿತ್ರೆಯನ್ನು ಸಂಗ್ರಹಿಸಿ ನೀಡುತ್ತಾರೆ. ಆ ಮೂಲಕ ಭವಿಷ್ಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಆಡಳಿತ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳೂ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳಲು ರಾಜ್ಯಾದ್ಯಂತ ಒಂದೇ ಮಾದರಿಯ ಚರಿತ್ರೆಯ ಪಠ್ಯಗಳು ಅನುಕೂಲಕರವಾಗಿ ಒದಗಿ ಬರುತ್ತಿತ್ತು. ಸಾಹಿತ್ಯ ಚರಿತ್ರೆ ಎನ್ನುವುದು ವಸ್ತುನಿಷ್ಟವಾಗಿ ಅಧಿಕೃತ ದಾಖಲೆಗಳ ನೆರವಿನಿಂದ ರೂಪುಗೊಳ್ಳುವ ಒಂದು ಶಾಸ್ತ್ರ. ಹಲವು ಮಾದರಿಯ ಸಾಹಿತ್ಯ ಚರಿತ್ರೆ ಕೃತಿಗಳು ನಮ್ಮೆದುರಿಗಿದ್ದರೂ ವಿದ್ಯಾರ್ಥಿಗಳು ತರಗತಿ ಪಠ್ಯವಾಗಿ ಓದಬೇಕಾದ ಚರಿತ್ರೆಯಂತೂ ಅತಿಯಾದ ವಿಶ್ಲೇಷಣೆಯ ಭಾರದಿಂದ ಕುಸಿದು, ಲೇಖಕರ ಸೈದ್ಧಾಂತಿಕ ದೃಷ್ಟಿ ಧೋರಣೆಯಿಂದ ದಾರಿ ತಪ್ಪಿಸುವಂತಿರಬಾರದು. ವಿವಿಧ ಕಾಲಘಟ್ಟದ ಸಾಹಿತ್ಯ ಪ್ರಕಾರಗಳನ್ನು ಅವುಗಳ ಸಾಮಾನ್ಯ ಸ್ವರೂಪ, ಗುಣ ಲಕ್ಷಣ,ಸಾಹಿತ್ಯಿಕ ವೈಶಿಷ್ಟ್ಯ ಮತ್ತು ಆ ಕಾಲಘಟ್ಟದ ಒಂದಷ್ಟು ಮುಖ್ಯರಾದ ಕೃತಿಕಾರರ ಪರಿಚಯವನ್ನು ಇಲ್ಲಿ ನೀಡಬೇಕಾಗುತ್ತದೆ. ಇದು ಹೊಸದಾಗಿ ಓದಿಗೆ ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿ ಯಾವುದೇ ಪೂರ್ವಾಗ್ರಹಗಳಿಲ್ಲದೆ, ತನ್ನದೇ ಅನುಭವ-ನಿಲುವುಗಳಿಂದ ಕೃತಿಗಳನ್ನು ಅಧ್ಯಯನ ಮಾಡಲು ಸಾದ್ಯವಾಗುತ್ತದೆ.ಈ ರೀತಿಯ ಅಭ್ಯಾಸ ನಡೆದಾಗ ಸಾಹಿತ್ಯದ ನಿಷ್ಪಕ್ಷಪಾತ ಗ್ರಹಿಕೆ ಮೌಲ್ಯಮಾಪನಕ್ಕೆ ಸಾದ್ಯವಾಗುತ್ತದೆ. ರಂ.ಶ್ರಿ.ಮುಗಳಿ, ಎಂ.ಎಂ.ಕಲ್ಬುರ್ಗಿ, ಕೀರ್ತಿನಾಥ ಕುರ್ತಕೋಟಿ,ಎಲ್.ಎಸ್.ಶೇಷಗಿರಿರಾವ್ ಮೊದಲಾದವರು ವೈಯಕ್ತಿಕವಾಗಿ, ಬೆಂಗಳೂರು, ಮೈಸೂರು ವಿ.ವಿ.ಗಳು ಸಾಹಿತ್ಯ ಚರಿತ್ರೆಯ ಹಲವು ಸಂಪುಟಗಳನ್ನು ಪ್ರಕಟಿಸಿದ್ದು ವಿದ್ಯಾರ್ಥಿಗಳ ಪಠ್ಯಕ್ಕೆ ಇವುಗಳನ್ನು ಆಕರವಾಗಿ ಬಳಸಿಕೊಳ್ಳಲಾಗುತ್ತಿತ್ತು.
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯ ಬಿ.ಎ ನಾಲ್ಕನೇ ಸೆಮಿಸ್ಟರ್‍ನ ಕನ್ನಡ ಮೇಜರ್ ವಿದ್ಯಾರ್ಥಿಗಳಿಗಾಗಿ ಪ್ರಕಟಿಸಿದ ‘ ಸಾಹಿತ್ಯ ಸೊಡರು ’ ಎನ್ನುವ ಪಠ್ಯಪುಸ್ತಕವನ್ನು ಪ್ರಕಟಿಸಿದ್ದು ಇದರಲ್ಲಿ ಕೀರ್ತನೆಯ ಚರಿತ್ರೆ ಪ್ರಕಟಿಸಿದ್ದಾರೆ. ಸಾಹಿತ್ಯ ಚರಿತ್ರೆಯ ಓದು ವಿದ್ಯಾರ್ಥಿಗಳಿಗೆ ವಿಶಾಲ ಕಡಲಿನ ಪರಿಚಯವಿದ್ದಂತೆ.ಅದು ಅವರನ್ನು ಕಡಲಿಗಿಳಿಯುವ ಸಾಹಸಿಗಳನ್ನಾಗಿಸಬೇಕೇ ಹೊರತು, ಕಡಲನ್ನು ಕಂಡು ಭಯಗೊಂಡೋ, ಹೇಸಿಗೆ ಪಟ್ಟುಕೊಂಡೋ ಹಿಂತಿರುಗಿ ಓಡುವಂತೆ ಮಾಡಬಾರದು.
‘ಸಾಹಿತ್ಯ ಸೊಡರು’ ಪಠ್ಯದ ಕೀರ್ತನಾ ಸಾಹಿತ್ಯ ಚರಿತ್ರೆಯನ್ನು ಓದಿದ ಮೇಲೆ ಯಾರಿಗಾದರೂ ‘ಇದು ಆರಂಭಿಕ ಹಂತದ ಓದುಗರಾದ ವಿದ್ಯಾರ್ಥಿಗಳಿಗೆ ಕೊಡಲು ಯೋಗ್ಯವಾಗಿದೆಯೆ?’ ಎಂಬ ಪ್ರಶ್ನೆಯನ್ನು ಹುಟ್ಟಿಸದೇ ಇರದು. ಪಠ್ಯದ ಭಾಗವಾಗಿ ಒಂದು ಅಥವಾ ಎರಡು ಕೀರ್ತನೆಗಳನ್ನಷ್ಟೇ ಓದಿರುವ ವಿದ್ಯಾರ್ಥಿಗೆ ಕೀರ್ತನೆ ಎಂಬ ಸಾಹಿತ್ಯ ಪ್ರಕಾರದ ಬಗೆಗೆ ದ್ವೇಷವೋ, ವಿರೋಧವೋ ಹುಟ್ಟಬಹುದು. ಇಲ್ಲಿನ ಚರಿತ್ರೆ ನಿರೂಪಿಸುವಂತೆ ಕೀರ್ತನಾ ಸಾಹಿತ್ಯ ಜಾತಿಯ ಹಿತಾಸಕ್ತಿ ಯನ್ನು ಕಾಯ್ದುಕೊಳ್ಳುವ ಹುನ್ನಾರವೇ ಆಗಿದ್ದರೆ, ಜಡ ಶಾಸ್ತ್ರ ಪ್ರಮಾಣಗಳನ್ನು ಪುನರುತ್ಪಾಧಿಸುವ ಚಳವಳಿಯಾದರೆ, ಸಾಹಿತ್ಯ ಪಠ್ಯವಾಗಿ ಕೀರ್ತನೆಗಳನ್ನು ಯಾಕೆ ಬೋಧಿಸಬೇಕು? ಕನಕದಾಸರಾಗಲೀ, ಪುರಂದರ ದಾಸರಾಗಲೀ, ಅಥವಾ ಅವರ ಸಂಬಂಧಿಕರ್ಯಾರದರೂ ಮಂಗಳೂರು ವಿ.ವಿ.ಗೆ ಮನವಿ ಕೊಟ್ಟು ನಮ್ಮದೊಂದು ಪದ್ಯ ಸೇರಿಸಿ ಎಂದರೇ? ಇಲ್ಲವಾದರೆ ಈಗಷ್ಟೇ ಕೀರ್ತನಾ ಸಾಹಿತ್ಯವೆಂಬ ಪ್ರಕಾರದ ಓದಿಗೆ ತೆರೆದುಕೊಳ್ಳುತ್ತಿರುವ ವಿದ್ಯಾರ್ಥಿ ಸಮುದಾಯವನ್ನು ಕೀರ್ತನಾ ಸಾಹಿತ್ಯವೆಂಬ ಒಂದು ಸಮೃದ್ಧ ಸಾಹಿತ್ಯ ಪ್ರಕಾರದ ಓದಿನಿಂದ ದೂರ ಮಾಡಿದಂತಲ್ಲವೇ? ಯಾವ ಪೂರ್ವಾಗ್ರಹಗಳೂ ಇಲ್ಲದೆ ಸಾಹಿತ್ಯವನ್ನು ಓದಿ ತಾನೇ ಒಂದು ನಿಲುವಿಗೆ ,ಗ್ರಹಿಕೆಗೆ ಸಿದ್ಧಗೊಳ್ಳಬೇಕಾದ ವಿದ್ಯಾರ್ಥಿಗಳನ್ನು ಹೀಗೆ ದಾರಿ ತಪ್ಪಿಸಿ ಸುಳ್ಳು ಬೋಧನೆಯನ್ನು ಮಾಡಿದರೆ ಉಪಯೋಗವೇನು?
ವಿಚಿತ್ರವೆಂದರೆ ಇದೇ ವಿದ್ಯಾರ್ಥಿಯು ಪ್ರಥಮ ವರ್ಷದಲ್ಲಿ ಅಧ್ಯಯನ ಮಾಡುವಾಗ ಸಾಂದರ್ಭಿಕವಾಗಿ ಕೀರ್ತನೆ ಪಠ್ಯವನ್ನು ಓದುವಾಗ ಅಲ್ಲಿ “ಕೀರ್ತನಾ ಸಾಹಿತ್ಯ ಭಕ್ತಿ ಮಾರ್ಗದ ಒಂದು ಪ್ರಧಾನ ಧಾರೆ. ಒಂದು ಜೀವಂತ ಶಕ್ತಿಯಾಗಿ ಈ ಸಾಹಿತ್ಯ ಪರಂಪರೆ ವಿಜೃಂಭಿಸಿತು.ಹದಿನಾರನೇ ಶತಮಾನ ದಾಸ ಸಾಹಿತ್ಯದದ ಸುವರ್ಣಯುಗ, ಶ್ರೇಷ್ಟ ದಾಸರು ಕೀರ್ತನೆಗಳ ಮೂಲಕ ಜನರ ಹತ್ತಿರಕ್ಕೆ ತಲುಪಿದರು, ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಒಂದು ಗರಿ” ಎಂಬ ವಿವರಣೆಯನ್ನು ನೀಡಲಾಗಿದೆ. ದ್ವಿತೀಯ ವರ್ಷದಲ್ಲಿ ಅದೇ ವಿದ್ಯಾರ್ಥಿ ಕೀರ್ತನೆಯನ್ನು “ ಸಮೂಹ ಪರತೆಯ ಹೆಸರಿನಲ್ಲಿ ನಡೆದ ಮಾರುವೇಷದ ಕಾರ್ಯಾಚರಣೆ,ಜಡ ಶಾಸ್ತ್ರ ಪ್ರಮಾಣಗಳನ್ನು ಪುನರುತ್ಪಾಧಿಸುವ ಯಥಾಸ್ಥಿತಿವಾದದ ಕಸರತ್ತು, ಶ್ರೇಣೀಕೃತ ವ್ಯವಸ್ಥೆಯಲ್ಲಿ ಜಾತಿಯ ಹಿತಾಸಕ್ತಿಯನ್ನು ಅಚ್ಚುಕಟ್ಟಾಗಿ ಕಾಯ್ದುಕೊಳ್ಳುವ ಹುನ್ನಾರ” ಎಂದು ಓದಬೇಕಾಗಿದೆ. ಹಾಗಾದರೆ ಇದು ಕೀರ್ತನೆಗಳ ದೋಷವೇ ಬರೆದವರ ಕಾಮಾಲೆ ಕಣ್ಣಿಗೆ ಕಂಡ ದೋಷವೇ? ವೈಷ್ಣವ ಭಕ್ತಿ ಚಳವಳಿ ಜಡ ಶಾಸ್ತ್ರಪ್ರಮಾಣವನ್ನೆ ಪುನರುತ್ಪಾಧಿಸುವ ಯಥಾಸ್ಥಿತಿವಾದ ಕಸರತ್ತು.ಜಾತಿಯ ಹಿತಾಸಕ್ತಿಯನ್ನೇ ಅಚ್ಚುಕಟ್ಟಾಗಿ ಕಾಯ್ದುಕೊಳ್ಳುವ ಹುನ್ನಾರ! ದಾಸ ಸಾಹಿತ್ಯ ಮತತತ್ವ ಪ್ರಸಾರದ ಗುರಿಯುಳ್ಳದ್ದು, ಕುಲ ಅಥವಾ ಜಾತಿಯನ್ನು ನಿರಾಕರಿಸುವುದಿಲ್ಲ. ವೇದ ಉಪನಿಷತ್ ಗಳ ಹುಟ್ಟನ್ನಾಧರಿಸಿದ ಶ್ರೇಷ್ಟತೆ ಕನಿಷ್ಟತೆಗಳಿಗೆ ನೀಡಿದ ಸಮ್ಮತಿ!!ಸನಾತನವಾದದ ಮಾರುವೇಷ!!! ಪುರಂದರ ದಾಸರ ಕೀರ್ತನೆಗಳಲ್ಲಿ ಸಮಾನತೆಯ ಪರವಾಗಿರದ ಪಾರಂಪರಿಕತೆಯನ್ನೇ ಸ್ಥರಗೊಳಿಸುವ ಶಾಸ್ತ್ರಪುರಾಣಗಳನ್ನು ಪ್ರತಿಪಾದಿಸುವ ತತ್ವಗಳ ವಾಹಕ ಎನ್ನುತ್ತಾರೆ. ಇನ್ನೂ ಒಂದೆರಡು ಕೀರ್ತನೆಯನ್ನು ಓದಿಕೊಳ್ಳುವಷ್ಟರಲ್ಲೇ ವಿದ್ಯಾರ್ಥಿಯ ಮನಸಿನಲ್ಲಿ ಹೀಗೊಂದು ಸುಳ್ಳನ್ನು ಅಚ್ಚು ಹಾಕಿಸಿಬಿಟ್ಟರೇ ಮುಂದೆ ಅವರೇ ಅಧ್ಯಾಪಕರೋ,ವಿಮರ್ಶಕರೋ ಆದರೆ ಇದೇ ಸುಳ್ಳಿನ ತುತ್ತೂರಿಯನ್ನೆ ಊದಿಕೊಂಡು ಹೋದರೆ ಸಾಹಿತ್ಯದ ನಿಜಸ್ವರೂಪಕ್ಕೆ ಧಕ್ಕೆಯಾದಂತೆ ಅಲ್ಲವೇ?
‘ಭಕ್ತಿ ಎಂದರೆ ಅಮಲು’ ಎಂದು ಹೇಳುತ್ತಾ, ಇಡೀ ದಾಸ ಸಾಹಿತ್ಯವನ್ನು ಮತ ತತ್ವ ಪ್ರಸಾರದ ಉದ್ದೇಶವುಳ್ಳದ್ದು ಎಂದು ನಕಾರಾತ್ಮಕವಾಗಿ ಹೇಳುತ್ತಿದೆಯೇ ಹೊರತು ಇಂತಹ ಭಕ್ತಿಯ ತತ್ವ ಪ್ರಸಾರವನ್ನು ಮಾಡಬೇಕಾಗಿ ಬಂದ ಮದ್ಯಕಾಲೀನ ಪ್ರಭುತ್ವಗಳು ಹುಟ್ಟುಹಾಕಿದ ಮತೀಯ ಆಕ್ರಮಣ ಹಾಗೂ ಅವುಗಳಿಂದ ಪಾರು ಮಾಡುವ ಉದ್ದೇಶವಿತ್ತೆನ್ನುವುದರ ಬಗೆಗೆ ಚಕಾರವನ್ನೂ ಎತ್ತುವುದಿಲ್ಲ. ಮಿಷನರಿಗಳಾಗಿ ಕರ್ನಾಟಕಕ್ಕೆ ಬಂದ ಕಿಟ್ಟೆಲ್ , ಇ.ಪಿ.ರೈಸ್ ಮೊದಲಾದವರು ಮತ ಪ್ರಸಾರದ ಉದ್ದೇಶಕ್ಕಾಗಿಯೇ ಬರೆದ ಕನ್ನಡದ ಬೈಬಲ್, ಮತ್ತಾಯನ ಸುವಾರ್ತೆ, ಹೊಸ ಒಡಂಬಡಿಕೆ ಕೃತಿಗಳನ್ನು ಹೇಳುವಾಗ ಸಾಹಿತ್ಯ ಚರಿತ್ರೆಯಲ್ಲಿ ಇವುಗಳು ಕನ್ನಡದ ಉತ್ತಮ ಕೃತಿಗಳಾಗಿವೆ,ಕನ್ನಡದಲ್ಲಿ ಬೈಬಲ್ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ,ಕನ್ನಡಕ್ಕೆ ಉಪಯುಕ್ತ ಕಾಣಿಕೆ ಎಂದು ವರ್ಣಿಸಲಾಗುತ್ತದೆ. ( ಬೇರೊಂದು ಪಠ್ಯದಲ್ಲಿ) ಆದರೆ ಭಾರತೀಯ ಪರಂಪರೆಯ ಭಕ್ತಿಯನ್ನು, ವೇದ ಸ್ಮೃತಿಗಳ ಸಾರವನ್ನು ಸರಳವಾಗಿ ಜನರಿಗೆ ತಿಳಿಸಿದ ಕೀರ್ತನೆಗಳು ಮತತತ್ವ ಪ್ರಸಾರದ ಸಾಮಾಗ್ರಿಯಾಗಿ ಕಾಣಲಾಗುತ್ತದೆ. ದೇಗುಲ, ತೀರ್ಥಕ್ಷೇತ್ರ,ದಾನ,ಮೋಕ್ಷಗಳೆನ್ನುವ ಭಾರತೀಯ ಪರಂಪರೆಯ ಮೌಲ್ಯಗಳು ನಾಸ್ತಿಕ ವಾದಸರಣಿಯ ‘ಜಡ ರಚನೆ’ಯಾಗಿ ಕಾಣಿಸಿಕೊಳ್ಳುತ್ತದೆ.ದಾಸಕೂಟವೇ ಸನಾತನವಾದದ ಮಾರುವೇಷವೆಂದು ವಿವರಿಸಲಾಗಿದೆ.
ಇಡೀ ಕೀರ್ತನಾ ಸಾಹಿತ್ಯದ ಚರಿತ್ರೆಯು ಎಷ್ಟು ನಕಾರಾತ್ಮಕವಾಗಿದೆ ಎಂದರೆ ಕೊನೆಗೂ ಕೀರ್ತನಾ ಸಾಹಿತ್ಯ ಎಂದರೆ ಏನು ಎನ್ನುವುದಕ್ಕಿಂತ ಅದು ಏನಲ್ಲ ಎಂದೇ ವಿವರಿಸುವುದರಲ್ಲೇ ಪಠ್ಯದ ಲೇಖಕ ಮುಳುಗಿದ್ದಾರೆ. ‘ಜಾತಿತತ್ವವನ್ನು ಮೀರದ ,ದೇಗುಲ ,ತೀರ್ಥಕ್ಷೇತ್ರಗಳನ್ನು ನಿರಾಕರಿಸದ,ವೇದ ಸ್ಮೃತಿಗಳನ್ನು ವಿರೋಧಿಸದ, ದ್ವೈತಾದ್ವೈತವನ್ನು ದಾಟದ, ಕ್ರಾಂತಿಕಾರಿ ಎನ್ನಲಾಗದ’ ಎನ್ನುವ ನಿರೂಪಣೆಯ ಆಂತರ್ಯದಲ್ಲಿ ಕೀರ್ತನಾ ಸಾಹಿತ್ಯ ಹೇಗಿದೆಯೋ ಅದನ್ನು ಹಾಗೇ ಸ್ವಿಕರಿಸಿ, ಒಪ್ಪಿ,ವಿವರಿಸುವ ಸಹೃದಯ ಭಾವಕ್ಕಿಂತ ತಾನು ಅಪೇಕ್ಷಿಸುವ ಇನ್ನೇನೋ ಇರಬೇಕಿತ್ತು ಎಂದು ಬಯಸುವ ‘ಇಸಂ’ನ ಪ್ರಚೋದನೆಯೇ ಇಲ್ಲಿದೆ.
ಇಂತಹ ಕಣ್ಣಿಗೆ ಪುರಂದರ ದಾಸರು ‘ ಸಮಾನತೆಯ ಪರವಾಗಿರದ, ಪಾರಂಪರಿಕತೆಯನ್ನೆ ಸ್ಥಿರಗೊಳಿಸುವ ಶಾಸ್ತ್ರ ಪುರಾಣಗಳು ಪ್ರತಿಪಾದಿಸುವ ತತ್ವಗಳ ವಾಹಕನಾಗಿ,ಅದನ್ನು ಹಂಚುವವನಾಗಿ’ ಕಾಣುತ್ತಾರೆ. ಲೇಖಕನ ಅತಿ ಬುದ್ಧಿವಂತಿಕೆಗೆ ತೋರಿದ ಹತ್ತಾರು ಸಂಶಯಗಳನ್ನು,ಆ ಸಂಶಯಗಳಿಗೆ ಯಾವ ಆಧಾರಗಳು ಇಲ್ಲದಿದ್ದರೂ ಈಗತಾನೇ ಸಾಹಿತ್ಯ ಚರಿತ್ರೆಯ ಅಭ್ಯಾಸಕ್ಕೆ ತೊಡಗಿದ ಮನಸ್ಸುಗಳಿಗೆ ವರ್ಗಾಯಿಸುವುದು ಪಠ್ಯಪುಸ್ತಕ ರಚನೆಯ ತತ್ವಕ್ಕೆ ವಿರುದ್ಧವಾದದ್ದು.
ತನ್ನನ್ನು ಹೊಲೆಯದಾಸ, ಕುರುಬದಾಸ, ಮಾದಿಗದಾಸ ಎಂದು ಹೇಳಿಕೊಳ್ಳುತ್ತಲೇ ತನ್ನ ಕುಲಮುಕ್ತಿಯ ಮಾತುಗಳನ್ನಾಡಿದ ಕನಕನನ್ನು ಕುರುಬ ನಾಯಕ, ಶೂದ್ರ ದಾಸ ಎಂದು ಹೇಳುವುದರ ಮೂಲಕ ಅವರ ಕಾವ್ಯದ ಹಿರಿಮೆಯನ್ನೇ ಗೌಣವಾಗಿಸಿ, ಜಾತಿಯನ್ನೆ ಎತ್ತಿ ತೋರಿಸುವ ಸಂಚಿದೆ. ಈ ಮನಸ್ಥಿತಿ ಕನಕನ್ನು ಕುರುಬನೆಂದು ದೂರ ಇಟ್ಟ ಮನಸ್ಥಿತಿಗಿಂತ ಭಿನ್ನವೆಂದು ಹೇಗೆ ತಾನೇ ಹೇಳಲು ಸಾಧ್ಯ? ಕನಕನ ಕವಿತ್ವದ ಹಿರಿಮೆಯನ್ನು “ಮಾರುವೇಷದ ಕೂಟದೊಳಗೆ ಸಿಕ್ಕಿಕೊಂಡ ಕವಿ,ಬಲೆಯೊಳಗೆ ಬಿದ್ದ ಮಿಕ,ಬಲೆಯನ್ನು ನೆಲೆ ಎಂದು ಭ್ರಮಿಸಿರುವವನು” ಎನ್ನುವ ಮಾತಿನ ಮೂಲಕ ಕನಕನನ್ನು ವಿಚಾರಹೀನನನ್ನಾಗಿ ಕಾಣಲಾಗಿದೆ.ಆತ್ಮವಾದಿ ದರ್ಶನಗಳೆಂದು ವೇದ ಉಪನಿಷದ್‍ಗಳನ್ನು ಮತ್ತೆ ಖಂಡಿಸುತ್ತಾ, ವೇದ ಉಪನಿಷತ್ ಗಳ ಒಂದೂ ಸಾಲನ್ನೂ ಓದದ ವಿದ್ಯಾರ್ಥಿಗಳ ಮೆದುಳು ಮನಸು ಕೆಡಿಸುವ ‘ಕಪಟ ವಿಚಾರವಾದ’ ಇಲ್ಲಿ ಕೆಲಸ ಮಾಡಿದೆ.ಪಠ್ಯದಲ್ಲಿ ‘ಪಾವಿತ್ರ್ಯನಾಶ’ದ ( ಸಿದ್ಧ ಪಂಥಗಳು ಪಾವಿತ್ರ್ಯನಾಶವನ್ನು ಮಾಡಿತು ಎಂಬ ವಿವರಣೆಯೂ ಇಲ್ಲಿದೆ) ಸಂಭ್ರಮ ಇದೆಯೇ ಹೊರತು ಸಾಹಿತ್ಯಾಭ್ಯಾಸದ ಸಹೃದಯತೆ ಕಾಣುವುದಿಲ್ಲ.
ಸಾಹಿತ್ಯವನ್ನುೀ ರೀತಿಯಲ್ಲಿ ನೋಡಬೇಕಾದಾಗತ್ಯವಿದೆ
yaavudo ganji giraki baredirabeku