ಧರ್ಮ ಮತ್ತು ಅಂಧತ್ವ
-ಡಾ ಅಶೋಕ್ ಕೆ ಆರ್.
ಆಗ ನಾನು ಕಲ್ಬುರ್ಗಿಯಲ್ಲಿ ಓದುತ್ತಿದ್ದೆ. ಗೆಳೆಯನೊಬ್ಬನನ್ನು ಕಾಣುವ ಸಲುವಾಗಿ ಕಲ್ಬುರ್ಗಿಯಿಂದ ಲಿಂಗಸೂರು ಕಡೆಗೆ ಹೋಗುವ ಬಸ್ಸನ್ನೇರಿದೆ. ದಾರಿ ಮಧ್ಯದಲ್ಲಿ ಕುಟುಂಬವೊಂದು ಬಸ್ಸಿನೊಳಗೆ ಬಂತು. ಮಗ, ಸೊಸೆ ಮತ್ತು ಅತ್ತೆ ಎಂಬುದು ಅವರ ಮಾತಿನಿಂದ ಅರಿವಾಗುತ್ತಿತ್ತು. ಅದು ಮುಸ್ಲಿಂ ಕುಟುಂಬವೆಂದು ತಿಳಿದಿದ್ದು ಬುರ್ಖಾ ಧರಿಸಿದ್ದ ಸೊಸೆಯ ಉಡುಪಿನಿಂದ. ಉತ್ತರ ಕರ್ನಾಟಕದ ಕಡೆ (ನಂತರದ ದಿನಗಳಲ್ಲಿ ಕರಾವಳಿ ಭಾಗದಲ್ಲೂ ಕಂಡಂತೆ) ಮುಸ್ಲಿಮರನ್ನು ಅವರ ಮಾತಿನ ದಾಟಿಯಿಂದ ಗುರುತು ಹಿಡಿಯಲಾಗುವುದಿಲ್ಲ ನಮ್ಮ ಹಳೆ ಮೈಸೂರು ಭಾಗದಲ್ಲಿ ಗುರುತಿಸುವಂತೆ, ಮತ್ತು ಬಹುತೇಕ ಎಲ್ಲ ಕನ್ನಡ ಚಿತ್ರಗಳಲ್ಲೂ ತೋರಿಸಿರುವಂತೆ. ಅಂದು ಬಸ್ಸೇರಿದ ಕುಟುಂಬದಲ್ಲಿ ಅತ್ತೆ ಉತ್ತರ ಕರ್ನಾಟಕದ ಕಡೆಯ ಸೀರೆಯನ್ನು ಉಟ್ಟಿದ್ದರು, ಸೊಸೆ ಬುರ್ಖಾಧಾರಿಯಾಗಿದ್ದರು.
ಕಳೆದೊಂದು ವಾರದಿಂದ ಅಂತರ್ಜಾಲ ತಾಣಗಳಲ್ಲಿ ಬುರ್ಖಾದ ಬಗೆಗಿನ ಚರ್ಚೆ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಮೇಲಿನ ಘಟನೆ ನೆನಪಾಯಿತು. ‘ನಾನು ವಿವಾದದ ವಿಷಯಗಳನ್ನು ಎತ್ತಿಕೊಂಡು ಮಾತನಾಡುತ್ತಿದ್ದೇನೋ ಅಥವಾ ನಾನು ಮಾತನಾಡಿದ್ದೆಲ್ಲವೂ ವಿವಾದವಾಗುತ್ತೋ ಗೊತ್ತಿಲ್ಲ’ ಎಂದೇ ಮಾತುಗಳನ್ನಾರಂಭಿಸಿದ್ದ ದಿನೇಶ್ ಅಮೀನ್ ಮಟ್ಟುರವರ ಮಾತುಗಳು ಮತ್ತೆ ಚರ್ಚೆಗಳೊಂದಷ್ಟನ್ನು ಹುಟ್ಟುಹಾಕಿವೆ. ಪತ್ರಕತ್ರ ಬಿ.ಎಂ.ಬಷೀರ್‍ರವರ “ಬಾಡೂಟದ ಜೊತೆ ಗಾಂಧಿ ಜಯಂತಿ” ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ. ಅವರು ಮೋದಿಯ ಬಗ್ಗೆ, ಮಾಧ್ಯಮದ ಬಗ್ಗೆ, ಮಂಗಳೂರಿನ ಕೋಮು ಸಾಮರಸ್ಯದ ಬಗ್ಗೆ, ಆ ಕೋಮು ಸಾಮರಸ್ಯದಿಂದಲೇ ಹುಟ್ಟಿದ ಕೋಮುವಾದತನದ ಬಗ್ಗೆ, ಕೋಮುವಾದಿಗಳ ಅಟ್ಟಹಾಸದ ನಡುವೆಯೇ ನಿಜ ಜಾತ್ಯತೀತ ಮನೋಭಾವದ ಧರ್ಮಸಹಿಷ್ಣುಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಕೊನೆಗೆ ಅವರ ಭಾಷಣ ಚರ್ಚೆಗೊಳಗಾಗುತ್ತಿರುವುದು ಅವರು ಪ್ರಸ್ತಾಪಿಸಿದ ಬುರ್ಖಾ ಪದ್ಧತಿಯ ಬಗೆಗೆ ಮಾತ್ರ! ಅವರು ಬುರ್ಖಾ ವಿಷಯಕ್ಕೆ ಬರುವುದಕ್ಕೆ ಮೊದಲು ಮುಸ್ಲಿಂ ಸಮಾಜದ ಒಳಬೇಗುದಿಗಳನ್ನು ಸಮಾಜದ ಮುಂದೆ ತೆರದಿಡುವ ಕೆಲಸವನ್ನು ಬೋಳುವಾರ ಮೊಹಮದ್, ಸಾರಾ ಅಬೂಬಕ್ಕರ್, ಫಕೀರ್ ಮೊಹಮದ್ ಕಟ್ಪಾಡಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರು ಹಾಕಿದ ದಾರಿಯಲ್ಲಿ ಜ್ಯೋತಿಯನ್ನಿಡಿದು ನಡೆಯುವವರ ಕೊರತೆ ಎದ್ದು ಕಾಣುತ್ತಿದೆ ಎಂಬ ಮಾತುಗಳನ್ನು ಹೇಳಿದ್ದಾರೆ. ಬಿ.ಎಂ.ಬಷೀರ್ ಸ್ವಲ್ಪ ಸಾಫ್ಟ್ ಕಾರ್ನರಿನಲ್ಲಿ ಬರೆಯೋದು ಜಾಸ್ತಿ. ಮುಸ್ಲಿಂ ಸಮುದಾಯದ ತಲ್ಲಣಗಳು ಈ ಪುಸ್ತಕದಲ್ಲಿ ಕಾಣಸಿಗುತ್ತಿಲ್ಲ ಎಂದು ಸಲಹೆಯನ್ನು ಕೊಟ್ಟಿದ್ದಾರೆ. ಮುಸ್ಲಿಮನಾದವನು ಆ ಸಮುದಾಯದ ತಲ್ಲಣಗಳನ್ನು ಸಮರ್ಥವಾಗಿ ಬಿಂಬಿಸಲು ಸಾಧ್ಯ ಎಂಬುದು ಎಷ್ಟು ಸತ್ಯವೋ ಮುಸ್ಲಿಂ ಲೇಖಕನಾದ ಮಾತ್ರಕ್ಕೆ ಮುಸ್ಲಿಂ ಸಮುದಾಯದ ತಲ್ಲಣಗಳನ್ನಷ್ಟೇ ಬರೆಯಬೇಕು ಎಂಬುದೂ ಒಪ್ಪತಕ್ಕ ವಿಷಯವೇನಲ್ಲ. ಮತ್ತಷ್ಟು ಓದು 
ಸತ್ಯ ಕೂಡ ಚಲನಶೀಲ ಎಂದರಿವು ಮೂಡಿಸಿದ ಅನಂತಮೂರ್ತಿ
-ಡಾ ಅಶೋಕ್ ಕೆ ಆರ್.
ಜಾತ್ಯತೀತವಾಗಿಯೇ ಬದುಕಿ ಬರೆದು ಬೆಳೆದ ಅವರು ಕುಮಾರಸ್ವಾಮಿ, ದೇವೇಗೌಡರನ್ನು ಇದ್ದಕ್ಕಿದ್ದಂತೆ ಬೆಂಬಲಿಸಿಬಿಡುತ್ತಾರೆ, ಕೆಲವೇ ವರುಷಗಳಲ್ಲಿ ಜೀವನಪರ್ಯಂತ ವಿರೋಧಿಸಿಕೊಂಡೇ ಬಂದಿದ್ದ ಕಾಂಗ್ರೆಸ್ಸನ್ನು ಸಿದ್ಧರಾಮಯ್ಯನವರ ಮೇಲಿನ ನಂಬುಗೆಯಿಂದ ಗೆಲ್ಲಿಸಿ ಎಂದು ಪತ್ರಿಕಾ ಹೇಳಿಕೆ ಕೊಡುತ್ತಾರೆ. ಮೋದಿಯನ್ನು ವಿರೋಧಿಸುವ ಏಕೈಕ ಕಾರಣಕ್ಕೆ ಅದರಷ್ಟೇ ಅಪಾಯಕಾರಿ ಎಂಬ ಅರಿವಿದ್ದೂ ಕಾಂಗ್ರೆಸ್ಸಿಗೆ ಮತಹಾಕಿ ಎಂದು ಹೇಳಿಬಿಡುತ್ತಾರೆ. ಇನ್ನೊಂದೈದು ವರುಷಗಳು ಅವರು ಬದುಕಿದ್ದರೆ ಮೋದಿ ಸಂಪೂರ್ಣ ಸರಿಯಿಲ್ಲದಿದ್ದರೂ ಪರ್ಯಾಯಗಳಿಲ್ಲದ ಕಾರಣ, ಇರುವ ಪರ್ಯಾಯಗಳು ಮೋದಿಗಿಂತ ಅಪಾಯಕಾರಿಯಾಗಿರುವ ಕಾರಣ ಮೋದಿಯನ್ನೇ ಗೆಲ್ಲಿಸಿದರೆ ಒಳ್ಳೆಯದೇನೋ ಎಂದು ಹೇಳಿಕೆ ನೀಡಿದ್ದರೂ ಅನಂತಮೂರ್ತಿಯವರ ಬಗೆಗೆ ಅಚ್ಚರಿಯಾಗುತ್ತಿರಲಿಲ್ಲ. ಇದು ಅವಕಾಶವಾದಿತನ, ಸ್ವಾರ್ಥಕ್ಕಾಗಿ ಕ್ಷಣಕ್ಕೊಂದು ಬಣ್ಣ ಬದಲಿಸುವ ನೀಚತನ – ಇನ್ನು ಅನೇಕಾನೇಕ ರೀತಿಯಲ್ಲಿ ಅವರನ್ನು ಟೀಕಿಸಿದ್ದರೂ ಅವರದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುತಿರಲಿಲ್ಲವೇನೋ. ಯಾಕೆಂದರೆ ಅನಂತಮೂರ್ತಿ (ನಾನವರನ್ನು ಅವರ ಬರಹಗಳ ಮೂಲಕ ತಿಳಿದುಕೊಂಡಂತೆ) ಇದ್ದಿದ್ದೇ ಹಾಗೆ. ಸತ್ಯವೆಂಬುದು ಅವತ್ತಿನ ಆ ಮಟ್ಟಿಗಿನ ವಾಸ್ತವವೇ ಹೊರತು ಅದು ಸರ್ವಕಾಲಿಕ ಸತ್ಯವಾಗಲು ಸಾಧ್ಯವೇ ಇಲ್ಲ ಎಂಬುದು ಅವರ ಲೇಖನಗಳನ್ನು ಓದಿದಾಗ ಅರಿವಾಗುತ್ತದೆ.
ಉಂಡವರ ತೇಗು ಉಳಿದವರ ಕೊರಳ ಉರುಲಾಗದಿರಲಿ – ಯು.ಆರ್.ಎ
ಅನಂತಮೂರ್ತಿ ಕೆಲವರಿಗೆ ಮೇಷ್ಟ್ರಾಗಿ, ಕೆಲವರಿಗೆ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿಯಾಗಿ, ಇನ್ನು ಹಲವರಿಗೆ ಚಳುವಳಿಕಾರನಾಗಿ ದಕ್ಕಿದರೆ ಬಹುತೇಕರಿಗೆ ಅವರು ದಕ್ಕಿದ್ದು ಅವರ ಬರಹಗಳ ಮೂಲಕ ಲೇಖಕರಾಗಿ. ಅವರ ಕೆಲವು ಇತ್ತೀಚಿನ ಲೇಖನಗಳನ್ನು ಓದುತ್ತಿದ್ದಾಗ ಅವರ ಹಳೆಯ ಲೇಖನಗಳಲ್ಲಿ ಇದಕ್ಕೆ ತದ್ವಿರುದ್ದವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಂತಿತ್ತಲ್ಲ ಎಂಬ ಆಲೋಚನೆ ಮೂಡಿದರೆ ಅದು ಸಮಾಜದ ಚಲನಶೀಲತೆಯ ಬಗೆಗಿನ ನಂಬುಗೆಯನ್ನು ಧೃಡಪಡಿಸುತ್ತಿತ್ತೇ ಹೊರತು ಅನಂತಮೂರ್ತಿಯವರ ಅನುಕೂಲ ಸಿದ್ಧಾಂತವನ್ನಲ್ಲ. ಒಂದು ಇಸಂಅನ್ನು ಒಪ್ಪಿಕೊಂಡವರು ಆ ಇಸಂನಲ್ಲಿ ತಪ್ಪುಗಳಿದ್ದಾಗ್ಯೂ ಅದನ್ನೇ ಅಪ್ಪಿ ಒಪ್ಪಬೇಕೆನ್ನುವವರಿಗೆ ಅನಂತಮೂರ್ತಿ ದ್ವಂದ್ವದ ಮೂರ್ತಿಯಾಗಿ ಕಂಡಿದ್ದರೆ ಅಚ್ಚರಿಪಡಬೇಕಿಲ್ಲ. ಹಳೆಯ ಅಭಿಪ್ರಾಯ ತಪ್ಪಾಗಿದ್ದರೆ ಅದನ್ನು ಒಪ್ಪುವ ಗುಣ ಎಲ್ಲರಲ್ಲೂ ಕಾಣುವುದು ಕಷ್ಟಸಾಧ್ಯ. ಮತ್ತಷ್ಟು ಓದು 
ಸಾಹಿತ್ಯಕ್ಷೇತ್ರದ ಒಳಹೊರಗು-6
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಸಾಹಿತ್ಯ ಕ್ಷೇತ್ರದ ಒಳಹೊರಗು – 1
ಸಾಹಿತ್ಯ ಕ್ಷೇತ್ರದ ಒಳಹೊರಗು – 2
ಸಾಹಿತ್ಯ ಕ್ಷೇತ್ರದ ಒಳಹೊರಗು – 3
ಸಾಹಿತ್ಯ ಕ್ಷೇತ್ರದ ಒಳಹೊರಗು – 4
ನಾವಿಂದು ಬಹುಶಿಸ್ತು, ಬಹುಜ್ಞಾನದ ಯುಗದಲ್ಲಿದ್ದೇವೆ. ಅದರಲ್ಲೂ ಇದು ವಿಶೇಷಜ್ಞತೆಯ ಕಾಲ. ಎಲ್ಲದಕ್ಕೂ ಸ್ಪೆಶಲೈಸೇಶನ್ ಇರಬೇಕೆಂದು ಬಯಸುತ್ತೇವೆ. ಉಳಿದೆಲ್ಲ ಕ್ಷೇತ್ರಗಳಂತೆ ಸಾಹಿತ್ಯವನ್ನೂ ಇದು ಆವರಿಸಿದೆ. ಇಂಥ ವಿಶೇಷಜ್ಞತೆಯಲ್ಲಿ ಲಾಭವೂ ಇದೆ, ನಷ್ಟವೂ ಇದೆ. ಆಧುನಿಕ ಶಿಕ್ಷಣ ವ್ಯವಸ್ಥೆ ಬ್ರಿಟಿಷರ ಬಳುವಳಿಯಾಗಿ ನಮಗೆ ಬರುವವರೆಗೂ ಎಲ್ಲ ಜ್ಞಾನವನ್ನೂ ತತ್ತ್ವಶಾಸ್ತ್ರದ ಅಡಿಯಲ್ಲೇ ಅಧ್ಯಯನ ಮಾಡಲಾಗುತ್ತಿತ್ತು. ಆಗ ಗಣಿತ, ಸಾಹಿತ್ಯ, ಇತಿಹಾಸ, ಭಾಷೆ ಎಂದು ಬೇರ್ಪಡಿಸಿ ನೋಡುವ ಕ್ರಮ ಇರಲಿಲ್ಲ. ಇದರಿಂದ ಭಿನ್ನ ಜ್ಞಾನಗಳು ಒಂದೇ ಮರದ ವಿವಿಧ ಶಾಖೆಗಳಂತೆ ಪರಸ್ಪರ ಸಂಬಂಧವಿಟ್ಟುಕೊಳ್ಳಲು ಹಾಗೂ ಆ ಮೂಲಕ ಎಲ್ಲ ವಿಷಯಗಳಲ್ಲೂ ಮಾಹಿತಿ ಸಮವಾಗಿಯೂ ಸಮಗ್ರವಾಗಿಯೂ ಇರಲು ಅನುಕೂಲವಾಗುತ್ತಿತ್ತು. ಉದಾಹರಣೆಗೆ ಸಾಹಿತ್ಯ ಅಧ್ಯಯನದಲ್ಲಿ ಪ್ರಾಚೀನ ಕವಿಯೊಬ್ಬನ ಇತಿವೃತ್ತ ಹೇಳುವಾಗ ಅದಕ್ಕೆ ಇತಿಹಾಸ, ಹಸ್ತಪ್ರತಿಶಾಸ್ತ್ರ ಹಾಗೂ ಶಾಸನಶಾಸ್ತ್ರಗಳ ನೆರವು ಬೇಕೇ ಬೇಕು. ಸಾಹಿತ್ಯದ ವಿದ್ಯಾರ್ಥಿಗೆ ಈಗ ಬೇರೆಯಾಗಿರುವ ಈ ಎಲ್ಲ ಶಾಸ್ತ್ರಗಳ ಅರಿವೂ ಅಪೇಕ್ಷಣೀಯ. ಈಗೀಗ ಏನಾಗುತ್ತಿದೆ ನೋಡೋಣ. ವಿಶ್ವವಿದ್ಯಾನಿಲಯವೊಂದರಲ್ಲಿ ಇತಿಹಾಸ ವಿಭಾಗದ ಸಮ್ಮೇಳನವೋ ವಿಚಾರ ಸಂಕಿರಣವೋ ಅಥವಾ ಗೋಷ್ಠಿಯೋ ನಡೆಯುತ್ತದೆ. ಅದರಲ್ಲಿ ಇತಿಹಾಸ ವಿಭಾಗದವರದ್ದೇ ಮಾತು-ಚರ್ಚೆ. ಸಾಹಿತ್ಯ, ಶಾಸನಶಾಸ್ತ್ರ ವಿಭಾಗದವರು ಬೇಕಿದ್ದರೆ ತಾವೇ ಅಂಥದ್ದೊಂದು ಸಮ್ಮೇಳನ ಆಯೋಜಿಸಿಕೊಳ್ಳಬೇಕು. ತಮ್ಮ ಸಮ್ಮೇಳನಕ್ಕೆ ಬರಬೇಡಿ ಎಂದು ಇತಿಹಾಸದವರೇನೂ ಹೇಳುವುದಿಲ್ಲ. ಹಾಗಾಗಿ ಆ ಸಮ್ಮೇಳನದಲ್ಲಿ ಪ್ರೇಕ್ಷಕರಾಗಿ ಕುಳಿತೆದ್ದುಬರಬಹುದು. ವಿಜಯನಗರ ಅರಸರ ಕುರಿತ ಸಮ್ಮೇಳನವನ್ನು ಇತಿಹಾಸ ವಿಭಾಗ ಆಯೋಜಿಸಿದರೆ ಅಲ್ಲಿ ಶಾಸನತಜ್ಞರು, ಸಾಹಿತಿಗಳು ಇರಬೇಕಾದುದು ಅಗತ್ಯ. ಇಲ್ಲವಾದಲ್ಲಿ ಶಾಸನದವರು ತಮ್ಮ ಪಾಡಿಗೆ ಶಾಸನ ಓದಿ ಪಠ್ಯ ಬರೆದಿಡುವುದು, ಸಾಹಿತ್ಯದವರು ವಿಜಯನಗರ ಕಾಲದ ಸಾಹಿತ್ಯವನ್ನು ಸುಮ್ಮನೇ ಓದಿ ಇಡುವುದು, ಇತಿಹಾಸದವರು ಲಭ್ಯ ಐತಿಹಾಸಿಕ ದಾಖಲೆಗಳ ಪ್ರಕಾರ ತಮ್ಮ ಪಾಡಿಗೆ ತಾವು ಆ ಕಾಲದ ವಿಷಯವನ್ನು ದಾಖಲಿಸುವುದು ನಡೆದರೆ ಒಂದೊಂದು ವಿಷಯದಲ್ಲಿ ಒಂದೊಂದು ಮಾಹಿತಿಯ ಜೊತೆಗೆ ಅಸಮಗ್ರತೆಗೆ ದಾರಿಯಾಗಬಹುದು.
ಸಾಹಿತ್ಯ ಕ್ಷೇತ್ರದ ಒಳಹೊರಗು – 5
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಸಾಹಿತ್ಯ ಕ್ಷೇತ್ರದ ಒಳಹೊರಗು – 1
ಸಾಹಿತ್ಯ ಕ್ಷೇತ್ರದ ಒಳಹೊರಗು – 2
ಸಾಹಿತ್ಯ ಕ್ಷೇತ್ರದ ಒಳಹೊರಗು – 3
ಸಾಹಿತ್ಯ ಕ್ಷೇತ್ರದ ಒಳಹೊರಗು – 4
ಏನ ಬಂದಿರಿ, ಹದುಳವಿದ್ದಿರೆ ಎಂದೊಡೆ ನಿಮ್ಮ ಮೈಸಿರಿ ಹಾರಿ ಹೋಹುದೆ? ಎಂದು ಬಸವಣ್ಣನವರು ಅಂದೇ ಕೇಳಿದ್ದರು. ನಮ್ಮ ಜನರ ವರ್ತನೆಯನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು ಎನಿಸುತ್ತದೆ. ಮನೆಗೆ ಬಂದವರನ್ನು ಉಪಚರಿಸುವ ಸಂದರ್ಭದಲ್ಲಿ ಅವರು ಹೇಳಿದ ಜನರ ಸಣ್ಣತನದ ವರ್ತನೆ ಕುರಿತ ಈ ಮಾತಿನ ಆಶಯವನ್ನು ಬೇರೆ ಬೇರೆ ಕಡೆಗಳಲ್ಲೂ ಅನ್ವಯಿಸಬಹುದು. ಸಾಹಿತ್ಯ ಕ್ಷೇತ್ರದಲ್ಲಂತೂ ಇದಕ್ಕೆ ಮತ್ತೆ ಮತ್ತೆ ನಿದರ್ಶನಗಳು ದೊರೆಯುತ್ತವೆ. ಒಂದು ಘಟನೆ. ಸಮ್ಮೇಳನವೊಂದರಲ್ಲಿ ಹೊಸಬರೊಬ್ಬರು ಪ್ರಬಂಧ ಮಂಡಿಸಿದ್ದರು. ಉತ್ತಮ ಪ್ರಬಂಧವೆಂದು ಆ ಗೋಷ್ಠಿಯ ಅಧ್ಯಕ್ಷರೊಬ್ಬರು ಸಕಾರಣವಾಗಿ ವಿಶ್ಲೇಷಿಸಿ, ಅಭಿನಂದಿಸಿದರು. ಅದೇ ಪ್ರಬಂಧಕಾರರೊಂದಿಗೆ ಮತ್ತೆ ಮೂವರು ಪ್ರಬಂಧ ಮಂಡಿಸಿದ್ದರು. ಅವುಗಳಲ್ಲಿ ಒಂದು ಪ್ರಬಂಧ ನೀಡಲಾದ ವಿಷಯಕ್ಕೆ ಸಂಬಂಧವೇ ಇಲ್ಲದಂತಿದ್ದರೆ, ಮತ್ತೊಬ್ಬರು ಏನನ್ನೂ ಬರೆದುಕೊಂಡು ಬಂದಿರದೇ ಆಶುಕವಿತ್ವದಂತೆ ಅಲ್ಲೇ ತೋಚಿದ್ದನ್ನು ಒಂದಿಷ್ಟು ಹೇಳಿದ್ದರು. ಇನ್ನೊಬ್ಬರು ತಕ್ಕಮಟ್ಟಿಗೆ ವಿಷಯಕ್ಕೆ ನ್ಯಾಯ ಒದಗಿಸಿದ್ದರೆಂದು ಅಧ್ಯಕ್ಷತೆ ವಹಿಸಿದ್ದ ಹಿರಿಯರು ಹೇಳಿ ಅಂಥ ಗಂಭೀರ ಸಮ್ಮೇಳನಗಳಲ್ಲಿ ವಿಷಯ ಮಂಡನೆ ಹೇಗಿರಬೇಕೆಂದೂ ತಿಳಿಸಿದರು. ವೇದಿಕೆಯಿಂದ ಇಳಿದ ಮೇಲೆ ಉಳಿದ ಪ್ರಬಂಧಕಾರರು ಉತ್ತಮ ಪ್ರಬಂಧ ಮಂಡಿಸಿದ್ದ ವ್ಯಕ್ತಿಯನ್ನು ಅಭಿನಂದಿಸುವುದಿರಲಿ, ಸೌಜನ್ಯಕ್ಕೂ ಮಾತನಾಡಿಸದೇ ಆಜನ್ಮ ವೈರಿಯಂತೆ ಕಂಡು ಮುಖ ತಿರುಗಿಸಿಕೊಂಡು ಹೊರಟೇಹೋದರಂತೆ. ಅಧ್ಯಕ್ಷತೆ ವಹಿಸಿದ್ದವರಿಗೂ ಉತ್ತಮ ಪ್ರಬಂಧ ಮಂಡಿಸಿದ್ದವರಿಗೂ ಉಳಿದ ಪ್ರಬಂಧಕಾರರಿಗೂ ಮೊದಲು ಪರಿಚಯವೇ ಇರಲಿಲ್ಲ. ವೇದಿಕೆಯಲ್ಲೇ ಅವರೆಲ್ಲ ಮೊದಲಬಾರಿ ಮುಖ ನೋಡಿಕೊಂಡಿದ್ದು. ವಸ್ತುನಿಷ್ಠವಾಗಿ ಅಧ್ಯಕ್ಷರು ಹೇಳಿದ್ದರು ಅಷ್ಟೆ. ಆದರೆ ಅನಂತರ ಹೊರಗೆ ಖಾಸಗಿಯಾಗಿ ಉಳಿದ ಪ್ರಬಂಧಕಾರರು ಮಾತನಾಡುತ್ತ ಆ ಪ್ರಬಂಧ ಚೆನ್ನಾಗಿತ್ತು ಕಣ್ರೀ, ಅಲ್ಲೇ ಅವರಿಗೆ ಹೇಳಿದ್ದರೆ ಸುಮ್ಮನೇ ಅವರಿಗೆ ಸ್ಕೋಪು ಕೊಟ್ಟಂತಾಗುತ್ತದೆ ಎಂದು ಹೇಳಿಲ್ಲ ಅಷ್ಟೆ ಅಂದರಂತೆ! ಅದೇನೇ ಇರಲಿ. ಅಧ್ಯಕ್ಷತೆ ವಹಿಸಿದವರು ಹೇಳಿದ ಮಾತಿನಲ್ಲಿ ಹುರುಳಿರಲಿಲ್ಲ, ಅದೊಂದು ಕೆಟ್ಟ ಪ್ರಬಂಧವಾಗಿತ್ತು ಎಂದಾದರೆ ಅದರ ಚರ್ಚೆಗೆ ಅವಕಾಶವಿತ್ತು. ಆ ಕುರಿತು ಪ್ರಶ್ನೆಯೇ ಇರದಿದ್ದರೆ ಉತ್ತಮ ಪ್ರಬಂಧ ಮಂಡಿಸಿದವರನ್ನು ಅಭಿನಂದಿಸುವ ಔದಾರ್ಯವಾದರೂ ಬೇಡವೇ ಎಂಬುದು ಇಲ್ಲಿರುವ ಪ್ರಶ್ನೆ.
ಸಾಹಿತ್ಯಕ್ಷೇತ್ರದ ಒಳಹೊರಗು – 4
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಡಿವಿಜಿ ಹೇಳಿದರು: ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಗಸು! ಎಂಥಾ ಮಾತು! ಇದನ್ನು ಸಮಾಜ-ಕುಟುಂಬ ಸೇರಿದಂತೆ ಯಾವ ಕ್ಷೇತ್ರಕ್ಕೂ ಅನ್ವಯಿಸಬಹುದು. ಹಾಗೆಯೇ ಸಂಗೀತ, ಸಾಹಿತ್ಯಕ್ಕೂ ಅನ್ವಯಿಸಿ ನೋಡಬಹುದು. ಇದರಿಂದ ನಿರಾಸೆ ಕಾದಿದ್ದರೂ ಅಚ್ಚರಿ ಇಲ್ಲ.
ಮೈಸೂರಿನಲ್ಲಿ ವರ್ಷಗಳ ಹಿಂದೆ ಒಂದು ಕಾರ್ಯಕ್ರಮ. ಖ್ಯಾತ ನೃತ್ಯಗುರು, ಹಿರಿಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿ ಅವರಿಗೆ ಶಿಷ್ಯವೃಂದದಿಂದ ಅಭಿನಂದನೆ. ಆಮೇಲೆ ಅವರು ಮಾತನಾಡುತ್ತ, ನನ್ನ ಬಳಿ ಭರತ ನಾಟ್ಯ ಕಲಿಯಲು ಉತ್ಸಾಹದಿಂದಲೇ ಹೊಸಬರು ಬರುತ್ತಾರೆ. ನಾಲ್ಕಾರು ಹೆಜ್ಜೆಗಳನ್ನು, ಒಂದಿಷ್ಟು ಅಂಗಾಭಿನಯ ಕಲಿತು ವಿದೇಶಕ್ಕೆ ಹೋಗಿಬಿಡುತ್ತಾರೆ. ಹಣ ಮಾಡುವ ಹುಮ್ಮಸ್ಸು. ನಾಟ್ಯ, ನಟುವಾಂಗಗಳ ಬಗ್ಗೆ ಸಮಗ್ರ ಪರಿಜ್ಞಾನ ಪಡೆಯುವ ವ್ಯವಧಾನವೇ ಇಂದಿನ ತಲೆಮಾರಿನಲ್ಲಿ ಇಲ್ಲ ಎಂದು ಹೇಳಿದರು. ಅಸಾಧಾರಣ ಕಲಾವಿದೆಯಾದ ಅವರು ವಿಷಾದದಿಂದಲೇ ಈ ಮಾತು ಹೇಳಿದ್ದರು. ಕಲಿಕೆಯಲ್ಲಿನ ಶ್ರದ್ಧೆ ಕುರಿತ ಇದೇ ಮಾತು ಸಾಹಿತ್ಯಕ್ಕೂ ಸಲ್ಲುತ್ತದೆ. ಸಾಹಿತ್ಯ ಕ್ಷೇತ್ರ ಪ್ರವೇಶಿಸುವವರೆಲ್ಲ ವಿದೇಶಕ್ಕೆ ಹೋಗಿಬಿಡುವುದಿಲ್ಲ. ಕನ್ನಡ ಸಾಹಿತ್ಯ ಓದುದವವರ ಕಾರ್ಯವ್ಯಾಪ್ತಿಯೂ ದೇಶ, ಭಾಷೆಗಳ ಕಾರಣದಿಂದ ಸೀಮಿತವಾಗಿಹೋಗಿದೆ; ಅಥವಾ ಹಾಗೆ ಭಾವಿಸಲಾಗಿದೆ; ಅಥವಾ ತಮಗೆ ತಾವೇ ಮಿತಿಯನ್ನು ಇವರೇ ವಿಧಿಸಿಕೊಂಡುಬಿಡುತ್ತಾರೆ. ಸ್ನಾತಕೋತ್ತರ ಪದವಿ ಅಥವಾ ಪಿಎಚ್.ಡಿ ಪದವಿಯಲ್ಲಿ ಭಾಷಾ ಪ್ರಯೋಗವನ್ನು ಅರ್ಧಂಬರ್ಧ ಕಲಿತು ತಾವು ಚಿಂತಕರೆಂದೋ ಸಾಹಿತಿಗಳೆಂದೋ ಇಲ್ಲವಾದಲ್ಲಿ ಕೊನೆಗೆ ಲೇಖಕರೆಂದೋ ಬೋರ್ಡು ಹಾಕಿಕೊಂಡೇಬಿಡುತ್ತಾರೆ. ಜೊತೆಗೆ ಪತ್ರಿಕೆ, ಟಿವಿ ಕಾರ್ಯಕ್ರಮ ಇತ್ಯಾದಿಗಳ ಲಾಬಿ ಶುರು ಮಾಡಿ ಪ್ರಚಾರದ ಹಿಂದೆ ಹೋಗುತ್ತಾರೆ. ಅಲ್ಲಿಗೆ ಅವರ ಕಲಿಕೆ ಮುಗಿದಂತೆ. ಹಳೆಯದನ್ನು ತಿರುಗಿಯೂ ನೋಡದೇ ಹೊಸದನ್ನು ಅರಗಿಸಿಕೊಳ್ಳದೇ ಕಲಿತಷ್ಟೇ ವಿದ್ಯೆಯನ್ನು ತಿರುಚುತ್ತ ಚಾಲ್ತಿಯಲ್ಲಿ ಇರಲು ಬಯಸುತ್ತಾರೆ. ಇದು ಯುವ ಸಾಹಿತ್ಯಾಸಕ್ತರ ಒಂದು ಮುಖ.
ಅಮರು ಶತಕದೊಳಗೊಂದು ಇಣುಕುನೋಟ
– ಹಂಸಾನಂದಿ
ಅಮರುಕ ಎಂಟನೇ ಶತಮಾನದಲ್ಲಿದ್ದ ಒಬ್ಬ ಸಂಸ್ಕೃತ ಕವಿ. ಈಗ ಕಾಶ್ಮೀರದ ರಾಜನೆಂದೂ, ಮಾಹಿಷ್ಮತಿಯ ರಾಜನೆಂದೂ ಪ್ರತೀತಿಯಿದೆ. ಇವನು ಅಮರುಶತಕ ವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವ ಒಂದು ನೂರು ಪದ್ಯಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾನೆ. ಈ ಪದ್ಯಗಳ ವಿಷಯವೆಂದರೆ ಗಂಡು ಹೆಣ್ಣಿನ ನಡುವಿನ ಪ್ರೇಮ. ಅಮರುಕನ ಒಂದೊಂದು ಬಿಡಿಪದ್ಯವೇ ಒಂದೊಂದು ಕಾವ್ಯದಷ್ಟು ರಸವತ್ತಾಗಿರುತ್ತದೆಂದು ನಂತರದ ಕವಿಗಳು, ವಿಮರ್ಶಕರು ಹೊಗಳಿದ್ದಾರೆ. ಗಂಡು ಹೆಣ್ಣಿನ ನಡುವಿನ ನವಿರಾದ ಪ್ರೇಮ ವಿರಹ ದುಗುಡ ಮೊದಲಾದ ಎಲ್ಲ ಭಾವನೆಗಳನ್ನು ಚಿತ್ರಿಸುವುದರಲ್ಲಿ ಅಮರುಕನಿಗೆ ಅವನೇ ಸಾಟಿ. ಇವನ ಕಾವ್ಯದ ಹಲವು ಹಸ್ತಪ್ರತಿಗಳು ದೊರತಿದ್ದು ಮುಖ್ಯವಾಗಿ ಮೂರು ಪಾಠಾಂತರಗಳಿವೆ – ಇವುಗಳಲ್ಲಿ ಇರುವ ಪದ್ಯಗಳೆಲ್ಲ ಎಲ್ಲವೂ ಒಂದೇ ಆಗಿಲ್ಲ. ಅಲ್ಲದೆ, ನಂತರದ ಕೆಲವು ಕವಿಗಳೂ ಅಮರುಕನದ್ದೆಂದು ಕೆಲವು ಪದ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಉದಾಹರಿಸಿಯೂ ಇದ್ದಾರೆ. ಇವೆಲ್ಲಾ ಸೇರಿಸಿ, ಅಮರುಕನದ್ದೆಂದು ಹೇಳಲಾಗುವ ಸುಮಾರು ೧೬೦ ಪದ್ಯಗಳಿವೆ.
ಇವನ ಬಗ್ಗೆ ಇನ್ನೊಂದು ಕಥೆಯೂ ಇದೆ. ಮಂಡನಮಿಶ್ರರ ಹೆಂಡತಿ ಉಭಯಭಾರತಿಯ ಜೊತೆ ಆದಿಶಂಕರರ ವಾದ ನಡೆಯುತ್ತಿದ್ದಾಗ ಆಕೆ ಸಾಂಸಾರಿಕ ಜೀವನದ ಬಗ್ಗೆ ಪ್ರಶ್ನೆ ಮಾಡಲು, ಬಾಲ ಸನ್ಯಾಸಿಯಾಗಿದ್ದ ಶಂಕರರು ತಮ್ಮ ಅನುಭವದಿಂದಲೇ ಆ ಪ್ರಶ್ನೆಗೆ ಉತ್ತರಿಸಲು ಅಕಾಲದಲ್ಲಿ ಸತ್ತು ಹೋಗಿದ್ದ ಅಮರುಕನ ದೇಹದಲ್ಲಿ ಪರಕಾಯ ಪ್ರವೇಶಮಾಡಿದ್ದರೆಂದೂ, ಆ ಸಮಯದಲ್ಲಿ ಅವರು ಬರೆದ ಪದ್ಯಗಳೇ ಈ ಅಮರುಶತಕವೆಂದೂ ಕೆಲವು ಶಂಕರ ವಿಜಯ ಕಾವ್ಯಗಳು ಹೇಳುತ್ತವೆ. ಇವುಗಳ ಸತ್ಯಾಸತ್ಯತೆ ಹೇಗೇ ಇರಲಿ – ಅಮರು ಬರೆದ ಪದ್ಯಗಳು ಸಾವಿರದಿನ್ನೂರು ವರ್ಷಗಳ ನಂತರವೂ ರಸಿಕರ ಮನ ಸೆಳೆಯುತ್ತಿವೆ. ಅಂದ ಹಾಗೆ , ಎಸ್ ಎಲ್ ಭೈರಪ್ಪ ಅವರ ’ಸಾರ್ಥ’ ಕಾದಂಬರಿಯನ್ನು ಓದಿದ್ದವರಿಗೆ ಅದರಲ್ಲಿ ಬರುವ ಅಮರುಕನ ಪಾತ್ರ ನೆನಪಾದರೂ ಆಗಬಹುದೇನೋ.
ಅಮರುಕನ ಪದ್ಯಗಳು ಅವುಗಳ ಲಾಲಿತ್ಯಕ್ಕೆ ಹೆಸರುವಾಸಿ. ಹಾಗಾಗಿ ಅವುಗಳ ಅನುವಾದ ಸ್ವಲ್ಪ ಕಷ್ಟವೇ ಆದರೂ, ಮನಸ್ಸಿಗೆ ಬಹಳ ತೃಪ್ತಿ ಕೊಡುವಂತಹವು. ನಾನು ಮಾಡಿರುವ ಅನುವಾದಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ.
****
ಯಾವಾಗಲೋ ಒಮ್ಮೆ ನಾಯಕಿ ತನ್ನ ನಲ್ಲನಲ್ಲಿ ಹುಸಿಮುನಿಸು ತೋರಿದಳು. ಆದರೆ ಅದು ಸುಳ್ಳು ಎಂದರಿಯದ ಅವನು ದೂರವಾಗಿಬಿಟ್ಟ. ಈಗ ಇವಳಿಗೆ ಉಳಿದಿದ್ದೇನು? ಬರೀ ಒಂಟಿತನ. ತನ್ನ ಕೊರಗನ್ನು ಹೇಳಿಕೊಳ್ಳುವುದಕ್ಕೆ ಒಬ್ಬ ಗೆಳತಿಯಿದ್ದಾಳಲ್ಲ, ಸದ್ಯ! ಇಲ್ಲದಿದ್ದರೆ ಇವಳ ಪಾಡು ಏನಾಗುತ್ತಿತ್ತೋ! (ಅಮರುಶತಕ: ೧೫)
ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು
ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ
ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ
ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?
ಭೂತ ಪ್ರೇತ ಮತ್ತು ಸಾಹಿತ್ಯ…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ದೆವ್ವದ ಕತೆಗಳು ಎ೦ದರೇ ಸಾಕು,ಎ೦ಥವರ ಕಿವಿಗಳಾದರೂ ನೆಟ್ಟಗಾಗುತ್ತವೆ.ಚಿಕ್ಕವರು ,ದೊಡ್ಡವರು ಭೇದವಿಲ್ಲದೇ,ನ೦ಬವವರು,ನ೦ಬದವರು ಎನ್ನುವ ವ್ಯತ್ಯಾಸವಿಲ್ಲದೇ ಎಲ್ಲರೂ ದೆವ್ವದ ಕತೆಗಳನ್ನು ಕೇಳಲು ಇಷ್ಟಪಡುತ್ತಾರೆ.ದೆವ್ವದ ಕತೆಗಳು ನೀಡುವ ರೋಮಾ೦ಚನವೇ ಅ೦ಥದ್ದು.ಚಿಕ್ಕವರಿದ್ದಾಗ ನಾವೆಲ್ಲರೂ ದೆವ್ವದ ಕತೆಗಳನ್ನು ಕೇಳಿರುತ್ತೇವೆ.ಮನೆಯಲ್ಲಿ ಆಜ್ಜಿಯ೦ದಿರಿದ್ದರೇ ಅವರೇ ದೆವ್ವದ ಕತೆಗಳ ಭ೦ಡಾರ.ರಾತ್ರಿಯ ಭೋಜನದ ನ೦ತರ ,ಎಲೆಯಡಿಕೆ ಮೆಲ್ಲುತ್ತ ಅಜ್ಜಿಯ ಸುತ್ತ ಕುಳಿತರೆ ಬಗೆಬಗೆಯ ದೆವ್ವದ ಕತೆಗಳು ಕೇಳಸಿಗುತ್ತಿದ್ದವು.ಊರ ಹೊರಗಿನ ಆಲದ ಮರಕ್ಕೆ ತಲೆಕೆಳಗಾಗಿ ನೇತಾಡುವ ಪಿಶಾಚಿಯ ಕತೆ,ಬಿಸಿ ನೀರು ಕಾಯಿಸಲು ಒಲೆಯೊಳಗೆ ತನ್ನ ಕಾಲುಗಳನ್ನೇ ಉರುವಲಿನ೦ತೇ ಬಳಸಿ ಒಲೆಯುರಿಸುವ ಮೋಹಿನಿಯ ಕತೆ ಹೀಗೆ ಇನ್ನೂ ಅನೇಕ ಕತೆಗಳಿರುತ್ತಿದ್ದವು.ಕತೆಗಳನ್ನು ಕೇಳುತ್ತ ಕುಳಿತರೆ ಹೊತ್ತು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.ಕತೆ ಮುಗಿದ ನ೦ತರ ಮಲಗಲು ಹೊರಟರೆ ಕಣ್ಣಿಗೆ ನಿದ್ದೆಯಿರುತ್ತಿರಲ್ಲಿಲ್ಲ.ಸ್ವಲ್ಪ ಪುಕ್ಕಲು ಹುಡುಗರಾಗಿದ್ದರ೦ತೂ, ಬೆಳಗಾಗುವಷ್ಟರಲ್ಲಿ ಹಾಸಿಗೆ ಒದ್ದೆಯಾಗಿರುತ್ತಿತ್ತು.ಬರೀ ಭಾರತೀಯರು ಮಾತ್ರವಲ್ಲ,ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಸಹ ದೆವ್ವ ಭೂತಗಳ ಅತೀಮಾನುಷ ಕತೆಗಳಿಗೆ ಮರುಳಾಗಿರುವವರು ಕಡಿಮೆಯೇನಿಲ್ಲ.ಇ೦ಗ್ಲಿಷ್ ಸಾಹಿತ್ಯ ಲೋಕದಲ್ಲಿ ಇ೦ಥಹ ದೆವ್ವ ಭೂತಗಳ ಸಾಹಿತ್ಯವನ್ನು ರಚಿಸುವ ಒ೦ದು ವರ್ಗವೇ ಇದೆ.ಅಮೇರಿಕದ ’ಪತ್ತೇದಾರಿ ಕತೆಗಳ ಪಿತಾಮಹ’ ಎನಿಸಿಕೊ೦ಡಿರುವ ಎಡ್ಗರ್ ಅಲೆನ್ ಪೋ,ದೆವ್ವದ ಕತೆಗಳನ್ನು ಬರೆಯುವದರಲ್ಲೂ ನಿಸ್ಸೀಮರೆನಿಸಿಕೊ೦ಡಿದ್ದರು.ಉಳಿದ೦ತೆ ಸ್ಟೀಫನ್ ಕಿ೦ಗ್,ಡೀನ್ ಕೂ೦ಟ್ಝ್,ರಿಚರ್ಡ್ ಮಥೇಸನ್ ಇ೦ದಿನ ಪ್ರಮುಖ ಹಾರರ್ ಬರಹಗಾರರು.ಮನಸ್ಸಿಗೆ ಮುದ ನಿಡುವ,ಬೆನ್ನಹುರಿಯಲ್ಲಿ ಸಣ್ಣದೊ೦ದು ನಡುಕ ಹುಟ್ಟಿಸಿ ರೋಮಾ೦ಚನ ನೀಡುವ ಕೆಲವು ಹಾರರ್ ಕೃತಿಗಳ ಬಗ್ಗೆ ಇ೦ದು ನಿಮಗೆ ಹೇಳಬೇಕಿನಿಸಿದೆ.
ಸಾಹಿತ್ಯಿಕವಾಗಿ ಪ್ರಥಮ ಬಾರಿಗೆ ಪ್ರೇತಾತ್ಮಗಳ ಕತೆಗಳನ್ನು ಯಾವಾಗ ರಚಿಸಲಾಯಿತು ಎನ್ನುವುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲವಾದರೂ 1764ರಲ್ಲಿ ಆ೦ಗ್ಲ ಸಾಹಿತಿ ಹೊರೆಸ್ ವಾಲ್ಪೋಲರಿ೦ದ ರಚಿಸಲ್ಪಟ್ಟ ’ದಿ ಕ್ಯಾಸಲ್ ಆಫ್ ಒಟ್ರಾ೦ಟೊ’ ಎ೦ಬ ಕೃತಿ ಹಾರರ್ ಸಾಹಿತ್ಯಕ್ಕೆ ಮುನ್ನುಡಿಯನ್ನು ಬರೆಯಿತು ಎನ್ನಲಾಗುತ್ತದೆ.ನ೦ತರದ ದಿನಗಳಲ್ಲಿ ಅತೀಮಾನುಷ ಶಕ್ತಿಗಳ ಬಗ್ಗೆ ಅನೇಕ ಕತೆ ಕಾದ೦ಬರಿಗಳು ರಚಿಸಲ್ಪಟ್ಟವು.ಆದರೆ 1818ರಲ್ಲಿ ಪ್ರಕಟವಾದ ಬ್ರಿಟಿಷ್ ಲೇಖಕಿ,ಮೇರಿ ಶೆಲ್ಲಿಯ ’ಫ್ರಾ೦ಕೈನಸ್ಟೈನ್’ ಹಾರರ್ ಸಾಹಿತ್ಯ ವಲಯದಲ್ಲಿ ಹೊಸ ಅಲೆಯನ್ನೆಬ್ಬಿಸಿತು.ವಿಜ್ನಾನಿಯೊಬ್ಬ ಮನುಷ್ಯನ ಶವವೊ೦ದಕ್ಕೆ ಮರುಜೀವ ಕೊಡುವ ಕಥಾವಸ್ತುವುಳ್ಳ ಈ ಕತೆ ದೆವ್ವದ ಕತೆಯಾದರೂ ಹುಟ್ಟು ಸಾವುಗಳ ಬಗ್ಗೆ ಸವಾಲೆಸೆಯ ಬಯಸುವ ವಿಜ್ನಾನ ಮತ್ತು ವಿಜ್ನಾನಿಗಳ ಇತಿಮಿತಿಗಳನ್ನು ಹದವಾಗಿ ವಿವರಿಸುವಲ್ಲಿ ಯಶಸ್ವಿಯಾಗಿದೆ.1886ರಲ್ಲಿ ಸ್ಕಾಟಲ್ಯಾ೦ಡಿನ ಪ್ರಸಿದ್ಧ ಲೇಖಕ ಆರ್.ಎಲ್.ಸ್ಟಿವನ್ಸನ್ ಬರೆದ ’ಡಾಕ್ಟರ್ ಜೇಕಿಲ್ ಅ೦ಡ್ ಮಿ.ಹೈಡ್’ ಹಾರರ್ ಲೋಕದ ಮತ್ತೊ೦ದು ಯಶಸ್ವಿ ಬರಹ.ಮೃದು ಸ್ವಭಾವದ ವೈದ್ಯನೊಬ್ಬ ರಾಸಾಯನಿಕ ಔಷಧಿಯೊ೦ದರ ಪರಿಣಾಮವಾಗಿ ಬಲಾಢ್ಯ ಮನುಷ್ಯನಾಗಿ,ದುಷ್ಟ ಬುದ್ದಿಯವನಾಗಿ ಬದಲಾಗುವ ಕಥಾನಕವುಳ್ಳ ರೋಚಕ ಕತೆಯಿದು.ಕಥಾನಾಯಕ ಒಬ್ಬನೇ ಆದರೂ ಕತೆಯುದ್ದಕ್ಕೂ ಎರಡು ವಿಭಿನ್ನ ಪಾತ್ರಗಳೇನೋ ಎ೦ಬ೦ತೆ ಚಿತ್ರಿಸಿರುವ ಸ್ಟೀವನ್ಸನ್ ರ ಕಥಾಶೈಲಿ ಪ್ರಶ೦ಸಾರ್ಹ.
ಸಾಹಿತ್ಯ ಮತ್ತು ವಿಮರ್ಶೆ
– ಮು ಅ ಶ್ರೀರಂಗ ಬೆಂಗಳೂರು
ನಾನು ಈ ಲೇಖನ ಬರೆಯುತ್ತಿರುವ ಇವತ್ತಿನ ತನಕ (೨೯ ಮೇ ೨೦೧೪) ಡಾ. ಶ್ರೀಪಾದ ಭಟ್ ಅವರ ‘ಸಾಹಿತ್ಯ ಕ್ಷೇತ್ರದ ಒಳ ಹೊರಗು’ ಎಂಬ ಶೀರ್ಷಿಕೆಯಡಿಯಲ್ಲಿ ಮೂರು ಲೇಖನಗಳು ‘ನಿಲುಮೆ”ಯಲ್ಲಿ ಪ್ರಕಟವಾಗಿದೆ. (೨೭/೩/೨೦೧೪, ೧೨/೪ ಮತ್ತು ೨೪/೪). ಅವರ ಈ ಲೇಖನಗಳ ಬಗ್ಗೆ ‘ನಿಲುಮೆ’ಯಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನಾನೂ ಸಹ ಆ ಚರ್ಚೆಗಳಲ್ಲಿ ಭಾಗವಹಿಸಿದ್ದೆ. ಅಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯಗಳ ಮುಂದುವರಿದ ಭಾಗವಾಗಿ ಈ ಲೇಖನ ಬರೆದಿದ್ದೇನೆ. ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆ/ವಿಮರ್ಶಕರ ನಡುವೆ ಅಂತಹ ಸೌಹಾರ್ದಯುತ ಸಂಬಂಧವೇನೂ ಇಲ್ಲ. ಇವೆರಡರ ನಡುವೆ ಇರುವ ಅಷ್ಟಿಷ್ಟು ನಂಟನ್ನು ಆಗಾಗ ಕಗ್ಗಂಟಾಗಿಸುವ ಸನ್ನಿವೇಶವನ್ನು ‘ಶೀತಲ ಸಮರ’, ಮುಸುಕಿನೊಳಗಿನ ಗುದ್ದಾಟ’ ಅಥವಾ ‘ಬೂದಿ ಮುಚ್ಚಿದ ಕೆಂಡ’ ಇಂತಹ ವಿಶೇಷಣಗಳಿಂದ ವಿವರಿಸಬಹುದು. ಕಾಲಾನುಕಾಲಕ್ಕೆ ವಿಮರ್ಶೆಯ ಪರಿಭಾಷೆಗಳು (=ಲಕ್ಷಣ; ನಿರೂಪಣೆ) ಬದಲಾಗುತ್ತಾ ಬಂದಿವೆ. ವಿಮರ್ಶೆಯೆಂದರೆ ಏನು? ಎಂಬ ಮೂಲಭೂತ ಪ್ರಶ್ನೆಯಿಂದ ಹಿಡಿದು ,ವಿಮರ್ಶೆಯೆಂದರೆ (ಮತ್ತು ಆ ಮೂಲಕ ಪರೋಕ್ಷವಾಗಿ ಸಾಹಿತ್ಯವೆಂದರೆ) ‘ಹೀಗೆ ಇರತಕ್ಕದ್ದು’ ಎಂದು ವ್ಯಾಖ್ಯಾನಿಸುವ ಅತ್ಯುತ್ಸಾಹದ, ಆತುರದ ಮಾತುಗಳೂ ಬಂದು ಹೋಗಿವೆ.
ಕುವೆಂಪು ಅವರು ‘ಮಲೆಗಳಲ್ಲಿ ಮದುಮಗಳು’ಕಾದಂಬರಿಯಲ್ಲಿ ಒಂದೆರೆಡು ಲೈಂಗಿಕ ಪ್ರಸಂಗಗಳನ್ನು ವಿವರವಾಗಿ ವರ್ಣಿಸಿದಾಗ ‘ಪುಟ್ಟಪ್ಪನವರಿಗೆ ಈ ವಯಸ್ಸಿನಲ್ಲಿ ಈ ಚಪಲವೇಕೆ?’ ಎಂದು ಅಂದಿನ ನಮ್ಮ ಹಿರಿಯ ಸಾಹಿತಿಗಳು ಹೇಳಿದ್ದುಂಟು. ನವ್ಯಕಾವ್ಯ/ಸಾಹಿತ್ಯ ಬಂದಾಗ ಅದರಲ್ಲಿ ಕೆಲವೊಮ್ಮೆ ವಾಚ್ಯವಾಗಿ ಮತ್ತು ಕೆಲವುಬಾರಿ ಸೂಚ್ಯವಾಗಿ ಇರುತ್ತಿದ್ದ ಲೈಂಗಿಕ ಅಂಶಗಳು ಹಾಗು ಅದಕ್ಕೆ ಸಂಬಂಧಿಸಿದ ಪ್ರತಿಮೆ ಪ್ರತೀಕಗಳಿಂದ ಆ ಕಾಲದ ಹಿರಿಯರಿಗೆ ಇರುಸು ಮುರುಸು ಆಗಿದ್ದುಂಟು. ಗೋಪಾಲಕೃಷ್ಣ ಅಡಿಗರ ‘ಪ್ರಾರ್ಥನೆ’ ಕವನ ಪ್ರಕಟವಾದಾಗ (ಬಹುಶಃ ಪ್ರಜಾವಾಣಿ ಪತ್ರಿಕೆಯಲ್ಲಿರಬಹುದು) ಅದನ್ನು ಓದಿದ ಡಿ ವಿ ಜಿ ಅವರು ಬಹಳ ಸಿಟ್ಟಾಗಿ ಇಂತಹ ಬರವಣಿಗೆಯನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರಂತೆ. ಆಗಿನ ಮುಖ್ಯ ಮಂತ್ರಿ ನಿಜಲಿಂಗಪ್ಪನವರು ಅಡಿಗರಿಗೆ ‘ನಿಮ್ಮ ಮೇಲೆ ಇಂಥದ್ದೊಂದು ದೂರು ಬಂದಿದೆ. ಇದಕ್ಕೇನು ಉತ್ತರ’ ಎಂದು ಕೇಳಿ ಪತ್ರ ಬರೆದಿದ್ದರಂತೆ. (ವಿವರಗಳಿಗೆ ನೋಡಿ ಯು ಆರ್ ಅನಂತಮೂರ್ತಿ ಅವರ ‘ಸುರಗಿ’ ಪುಟ ೧೨೪ ಪ್ರಥಮ ಮುದ್ರಣ ೨೦೧೨ ಪ್ರಕಾಶಕರು–ಅಕ್ಷರ ಪ್ರಕಾಶನ ಹೆಗ್ಗೋಡು ಸಾಗರ) ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಸಾಮಾನ್ಯ ಜನರಿಗೂ ತಿಳಿಸುವ ರೀತಿಯಲ್ಲಿ ಸಾಹಿತ್ಯ ರಚಿಸ ಬೇಕೆಂದು ಬಂದ ಪ್ರಗತಿಶೀಲ ಸಾಹಿತ್ಯದ ಬಗ್ಗೆ ಮಾತನಾಡುತ್ತಾ ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರು ತಮ್ಮ “ಕವಲುದಾರಿಯಲ್ಲಿ ಕನ್ನಡ ವಿಮರ್ಶೆ” (ಪ್ರಕಾಶಕರು: ಪ್ರಸಾರಾಂಗ ಬೆಂಗಳೂರು ವಿ ವಿ ಬೆಂಗಳೂರು ೫೬) ಎಂಬ ಕೃತಿಯಲ್ಲಿ ಹೇಳಿದ ಒಂದು ಮಾತು ಗಮನಾರ್ಹವಾಗಿದೆ. ‘ಅನಕೃ’ ಮತ್ತು ಇತರ ಪ್ರಗತಿಶೀಲ ಸಾಹಿತಿಗಳು ‘ವೇಶ್ಯಾ ಸಮಸ್ಯೆಯನ್ನು ಚಿತ್ರಿಸಲು ಹೊರಟು ವೇಶ್ಯಾವಾಟಿಕೆಗಳ ಚಿತ್ರಣಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡರು ‘. ಇಂತಹ ಸಾಹಿತ್ಯವನ್ನು ಓದಿದಾಗ ಆಗುವ “ಆ ಕ್ಷಣದ” ಆಕರ್ಷಣೆ ಬಿಟ್ಟು ಬೇರೆ ಆಯಾಮಗಳನ್ನು ಅವು ನೀಡಲಾಗಲಿಲ್ಲ. ಪ್ರಗತಿಶೀಲರು ಕೇವಲ ವೇಶ್ಯಾ ಸಮಸ್ಯೆಯನ್ನು ಮಾತ್ರ ಚಿತ್ರಿಸಿದರು ಎಂದು ಇದರ ಅರ್ಥವಲ್ಲ. ಅವರು ಯಾವುದೇ ಒಂದು ಸಮಸ್ಯೆಯನ್ನು ಪರಿಭಾವಿಸಿದ ರೀತಿಗೆ ಇದು ಒಂದು ಉದಾಹರಣೆ ಅಷ್ಟೇ. ಅಂತಹ ಸನ್ನಿವೇಶದಲ್ಲೂ ನಾಲ್ಕಾರು ಗಟ್ಟಿ ಕೃತಿಗಳು ಪ್ರಗತಿಶೀಲರಿಂದ ಬಂದಿತು. ಅದೇ ಸಮಾಧಾನಪಟ್ಟುಕೊಳ್ಳಬಹುದಾದ ವಿಷಯ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭
— ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬
ಆವರಣ’ ಎಂಬ ವಿ-ಕೃತಿ ಸಂಗ್ರಹ: ಗೌರಿ ಲಂಕೇಶ್
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೩
-ಡಾ.ಶ್ರೀಪಾದ ಭಟ್, ತುಮಕೂರು
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೧
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೨
ಸಾಹಿತ್ಯದ ಮಾರ್ಕೆಟಿಂಗ್!
ಇಂದು ಎಲ್ಲ ಕ್ಷೇತ್ರಕ್ಕೂ ಅನಿವಾರ್ಯವಾದ ಮಾರ್ಕೆಟಿಂಗ್ ಸಾಹಿತ್ಯವನ್ನು ಬಿಡುತ್ತದೆಯೇ? ಹೇಳಿಕೇಳಿ ಸಾಹಿತ್ಯ ಎಂಬುದು ಪುಸ್ತಕೋದ್ಯಮದ ಭಾಗವಾಗಿ ಹೋಗಿದೆ. ಉದ್ಯಮ ಎಂದ ಮೇಲೆ ಮುಗೀತು. ಆದರ್ಶಗಳು ಏನಿದ್ದರೂ ಅದನ್ನು ಹಿಂಬಾಲಿಸಬೇಕಷ್ಟೆ. ಸಾಹಿತಿಗಳೆನಿಸಿಕೊಂಡವರು ಈ ಉದ್ಯಮವನ್ನು ಹಿಂಬಾಲಿಸುತ್ತಿದ್ದಾರೆ. ಕೆಲವೊಮ್ಮೆ ಇದು ಉಲ್ಟಾ ಆಗಿ ತಮಾಷೆಗಳೂ ಆಗುವುದುಂಟು. ಕನ್ನಡದಲ್ಲಿ ಎಲ್ಲೂ ಹೆಸರೇ ಕೇಳಿರದ ಸಂಪತ್ತೈಯ್ಯಂಗಾರ್ ಎಂಬ ಎಪ್ಪತ್ತು ದಾಟಿದ ವೃದ್ಧರೊಬ್ಬರಿಗೆ ತಮ್ಮ ಅರುವತ್ತು ವರ್ಷದ ಪಾಕಶಾಸ್ತ್ರದ ಪ್ರಾವೀಣ್ಯವನ್ನು ಕನ್ನಡದಲ್ಲಿ ದಾಖಲಿಸಬೇಕೆಂಬ ಹಂಬಲ ಹುಟ್ಟಿತು. ಅನುಭವವನ್ನು ಬರೆದರು. ಒಂದಿಷ್ಟು ಪುಟಗಳಾದವು. ಆಸಕ್ತರಿಗೆ ಓದಲು ನೀಡಿ ಸಲಹೆ ಕೇಳಿದರು. ಅದರಂತೆ ತಿದ್ದಿ ತೀಡಿ ಮತ್ತೆ ಬರೆದು ಒಂದು ಪುಸ್ತಕವಾಗುವಷ್ಟು ಬರೆದರು. ಅಚ್ಚುಮಾಡಿಸಲು ಹೆಸರಾಂತ ಪ್ರಕಾಶಕರ ಅಂಗಡಿ ಮುಂದೆ ದಿನಗಟ್ಟಲೆ ನಿಂತರು. ಅವರು ಕಾಣದ ಪ್ರಕಾಶಕರಿಲ್ಲ. ಆದರೆ ಎಲ್ಲರದೂ ಒಂದೇ ಉತ್ತರ-ಆಗಲ್ಲ ಹೋಗಿ. ಪುಟ ತೆರೆದು ನೋಡುವ ವ್ಯವಧಾನವೂ ಪ್ರಕಾಶಕರಿಗಿಲ್ಲ. ಯಾಕೆಂದರೆ ಈ ಅಯ್ಯಂಗಾರರು ಹೆಸರಾಂತ ಸಾಹಿತಿಗಳ ಶಿಫಾರಸು ಇಟ್ಟುಕೊಂಡವರಲ್ಲ, ಈಗಾಗಲೇ ಪಾಕಶಾಸ್ತ್ರದಲ್ಲಿ ಮಾಧ್ಯಮಗಳಲ್ಲಿ ಹೆಸರು ಮಾಡಿದವರೂ ಅಲ್ಲ. ಬೇರೆ ದಾರಿ ಕಾಣದೇ ಅಯ್ಯಂಗಾರರು ಸ್ವತಃ ಅಚ್ಚು ಹಾಕಿಸಲು ಮುಂದಾದರು. ಸ್ವಂತ ಹಣವಿಲ್ಲ. ಯಾವುದೋ ಡಿಟಿಪಿ ಸೆಂಟರಿಗೆ ಹಸ್ತಪ್ರತಿ ಕೊಟ್ಟರು. ಮೂರ್ನಾಲ್ಕು ತಿಂಗಳು ಅಲೆಸಿದ ಅಂಗಡಿಯಾತ ಟೈಪು ಮಾಡುವುದಿರಲಿ, ಮೂಲ ಹಸ್ತಪ್ರತಿಯನ್ನೇ ಕಳೆದು ಕೈಝಾಡಿಸಿದ!




