ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 18, 2012

1

ಶಾರ್ಟ್ ವೇವ್ ರೇಡಿಯೋ ಪ್ರಸಾರದಲ್ಲಿ ಕನ್ನಡದ ದನಿಯಿಲ್ಲ

‍ನಿಲುಮೆ ಮೂಲಕ

-ಸಾತ್ವಿಕ್ ಎನ್ ವಿ

ಕನ್ನಡಿಗನೊಬ್ಬ ತನ್ನ ಕೆಲಸದ ನಿಮಿತ್ತ ಕರ್ನಾಟಕದ ಹೊರಗೆ ಬದುಕಬೇಕಾಗಿ ಬಂದರೆ ಆತನಿಗೆ ಕನ್ನಡ ಆಕಾಶವಾಣಿ ಕೇಳಲು ಸಾಧ್ಯವಿಲ್ಲ. ಕಾರಣ, ಕಿರುತರಂಗಾಂತರ ಅಂದರೆ ಶಾರ್ಟ್‌ವೇವನಲ್ಲಿ ಕನ್ನಡದ ಯಾವುದೇ ಆಕಾಶವಾಣಿ ಕೇಂದ್ರ ಪ್ರಸಾರ ಮಾಡುತ್ತಿಲ್ಲ. ಆದರೆ ಇಂಥ ಪರಿಸ್ಥಿತಿ ಇತರೆ ಭಾಷಿಕರಿಗೆ ಇದೆಯೇ? ಇಲ್ಲ. ಕನ್ನಡವನ್ನು ಬಿಟ್ಟು ಮಿಕ್ಕೆಲ್ಲ ದಕ್ಷಿಣಭಾರತದ ಭಾಷೆಗಳಿಗೂ ಈ ಸೌಲಭ್ಯವಿದೆ.

ಏನಿದು ಕಿರುತರಂಗಾತರದಲ್ಲಿ ರೇಡಿಯೋ ಪ್ರಸಾರ?
ಬಾನುಲಿ ಪ್ರಸಾರದಲ್ಲಿ ಶಾರ್ಟ್ ವೇವ್(SW), ಮೀಡಿಯಂ ವೇವ್(MW) ಮತ್ತು ಫ್ರಿಕ್ವೇನ್ಸಿ ಮೊಡೊಲೇಷನ್ (FM) ಎಂಬ ಮೂರು ರೀತಿಯ ತರಂಗಾತರಗಳನ್ನು ಬಳಸಲಾಗುತ್ತದೆ. ಈಗ ಕರ್ನಾಟಕದ ಆಕಾಶವಾಣಿ ಕೇಂದ್ರಗಳು ಕೇವಲ ಎಂ.ಡಬ್ಲ್ಯೂ ಮತ್ತು ಎಫ್.ಎಂ ಗಳಲ್ಲಿ ಮಾತ್ರ ತಮ್ಮ ಕಾರ್ಯಕ್ರಮಗಳನ್ನು ಪ್ರಸರಿಸುತ್ತಿವೆ. ಆದರೆ ಎಂ.ಡಬ್ಲ್ಯೂ ಮತ್ತು ಎಫ್.ಎಂ ತರಂಗಗಳ ದೊಡ್ಡ ಕೊರತೆ ಎಂದರೆ ಈ ಅಲೆಗಳು ಬಹಳ ದೂರ ಚಲಿಸಲಾರವು. ಆದರೆ ಶಾರ್ಟ್ ವೇವ್ ಹಾಗಲ್ಲ. ಅದರ ಚಲನೆಯ ಶಕ್ತಿ ಖಂಡಾಂತರ ವ್ಯಾಪ್ತಿಯದ್ದು. ಇಂದು ನಾವು ಕೇಳುತ್ತಿರುವ ಬಿಬಿಸಿ, ವಾಯ್ಸ್ ಆಫ್ ಅಮೆರಿಕಾ, ರೇಡಿಯೋ ಸಿಲೋನ್, ಚೈನಾ ರೇಡಿಯೋ ಇಂಟರ್ ನ್ಯಾಷನಲ್ ಇತ್ಯಾದಿಗಳು ಇದೇ ತರಂಗಗಳನ್ನು ಬಳಸಿಕೊಳ್ಳುತ್ತವೆ. ಈ ತರಂಗಗಳನ್ನು ಬಳಸಿ ಪ್ರಪಂಚದ ಯಾವುದೇ ನಿರ್ದಿಷ್ಟ ಭಾಗಕ್ಕೆ ಪ್ರಸಾರವನ್ನು ತಲುಪಿಸಲು ಸಾಧ್ಯ. ಇದನ್ನು ಬೀಮಿಂಗ್ ಎಂದು ಕರೆಯಲಾಗುತ್ತದೆ.
ಆಕಾಶವಾಣಿಯು ತನ್ನ ವಿದೇಶಿ ಪ್ರಸಾರಕ್ಕಾಗಿ (overseas service) ಇದೇ ಅಲೆಗಳನ್ನು ಬಳಸಿಕೊಳ್ಳುತ್ತಿದೆ. ಇದರ ಪ್ರಸಾರಕ್ಕಾಗಿರುವ ಅತಿಶಕ್ತಿಶಾಲಿ ಪ್ರಸಾರಪ್ರೇಷಕ (Super power transmitter) ಇರುವುದು ಬೆಂಗಳೂರಿನ ಸಮೀಪದ ದೊಡ್ಡಬಳ್ಳಾಪುರದಲ್ಲಿ. ಆದರೆ ಆ ಅಲೆಗಳು ಕನ್ನಡವನ್ನು ಕೊಂಡೊಯ್ಯುವುದಿಲ್ಲ. ಸಿರಿಗಂಧ ಎಂಬ ಅರ್ಧಗಂಟೆಯ ಕನ್ನಡ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ ಬೇರೆ ಯಾವ ಸಮಯದಲ್ಲೂ ಕನ್ನಡ ಲಭ್ಯವಿಲ್ಲ. ಈ ಅಲ್ಪಾವಧಿಯ ಪ್ರಸಾರಕ್ಕಾಗಿಯೇ ಕನ್ನಡ ಸಾಹಿತಿಗಳು ಮತ್ತು ಸಂಘಟನೆಗಳು ಹೋರಾಟ ನಡೆಸಬೇಕಾಯಿತು ಎಂಬುದು ಗಮನಿಸಬೇಕಾದ ವಿಷಯ. ಇದು ವಿದೇಶಿ ಪ್ರಸಾರದಲ್ಲಿ ಕನ್ನಡದ ಉಪೇಕ್ಷೆಯ ಬಗೆಗಿನ ಚರ್ಚೆಯಾಯಿತು.

ಇನ್ನು ದೇಶದ ಒಳಗಿನ ಪ್ರಸಾರದ (Domestic Service) ವಿಷಯಕ್ಕೆ ಬರೋಣ. ಇಲ್ಲಿಯೂ ಕಿರುತರಂತಾತರಗಳನ್ನು ಬಳಸಿ ಅನೇಕ ಭಾಷೆಗಳಲ್ಲಿ ಪ್ರಸಾರ ನಡೆಯುತ್ತಿದೆ. ಇಲ್ಲೂ ಕನ್ನಡಕ್ಕೆ ಸೊನ್ನೆ.

ಕನ್ನಡ ಪ್ರಸಾರಕ್ಕೆ ಕಿರುತರಂಗಾಂತರಗಳೇ ಏಕೆ ಬೇಕು?
ಕರ್ನಾಟಕವು ಭೌಗೋಳಿಕವಾಗಿ ವಿಶಾಲವಾದ ರಾಜ್ಯ. ಅಲ್ಲದೇ ರಾಜ್ಯದ ಜನರು ತಮ್ಮ ಕಾರ್ಯಗಳ ಪ್ರಯುಕ್ತ ಇತರೆ ರಾಜ್ಯಗಳಲ್ಲಿ ಬದುಕುತ್ತಿದ್ದಾರೆ. ಇವರೆಲ್ಲರನ್ನು ತಲುಪಲು ಕಿರುತರಂಗಾಂತರಗಳ ಬಳಕೆ ಉಪಯುಕ್ತವಾಗಿದೆ. ಇದರಿಂದ ಇಡೀ ರಾಜ್ಯದ ಜನ, ಅಷ್ಟೇ ಏಕೆ ವಾತಾವರಣ ಸಹಕರಿಸಿದರೆ ಇಡೀ ದೇಶದ ಯಾವ ಭಾಗದಲ್ಲಿಯಾದರೂ ಕನ್ನಡವನ್ನು ನಿಮ್ಮ ಚಿಕ್ಕ ರೇಡಿಯೋ ಮೂಲಕ ಕೇಳಲು ಸಾಧ್ಯ. ಹಾಗಾಗಿ ಕನ್ನಡದ ಕೇಳ್ಮೆಗೆ ಇದು ಸಹಕಾರಿ. ದೇಶದ ಒಳಗಿನ ಪ್ರಸಾರಕ್ಕಾಗಿ (Domestic Service) ಕನಿಷ್ಠ ಒಂದಾದರೂ ಕಿರುತರಂಗಾಂತರ ಪ್ರಸಾರವಿದ್ದರೆ ಒಳಿತು. ಈ ರೀತಿಯ ವ್ಯವಸ್ಥೆ ಕನ್ನಡ ಬಿಟ್ಟು ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೂ ಇದೆ.

ಯಾಕಿಲ್ಲವೆಂದರೆ ನೀಡುವ ಕಾರಣಗಳು :
ಈ ಬಗ್ಗೆ ನೀವು ಆಕಾಶವಾಣಿ ತಾಂತ್ರಿಕ ಸಿಬ್ಬಂದಿಗಳಲ್ಲಿ (ಕರ್ನಾಟಕದ ಆಕಾಶವಾಣಿಗಳಲ್ಲಿರುವ ಹೆಚ್ಚಿನ ತಾಂತ್ರಿಕ ಸಿಬ್ಬಂದಿ ಹೊರರಾಜ್ಯದವರು ಎಂಬ ಮಾತಿದೆ) ವಿಚಾರಿಸಿದರೆ ಅವರು ಹೇಳುವ ಕಾರಣಗಳು ನಗೆ ತರಿಸುತ್ತವೆ.

೧.    ಕಿರುತರಂಗಾಂತರ ಪ್ರಸಾರಗಳನ್ನು ಸರ್ಕಾರ ಕಡಿಮೆ ಮಾಡುತ್ತಿದೆ. ಬೇರೆ ಪ್ರಸಾರಗಳಿಗೆ ಹೋಲಿಸಿದರೆ ಇದರ ವೆಚ್ಚ ಹೆಚ್ಚು. ಇದರಿಂದ ಸರ್ಕಾರ ಒಂದೊಂದೇ ಪ್ರಸಾರಗಳನ್ನು ನಿಲ್ಲಿಸುತ್ತಿದೆ. ಆದ್ದರಿಂದ ಕನ್ನಡ ಪ್ರಸಾರಕ್ಕೆ ಬೇಡಿಕೆ ಇಟ್ಟರೂ ಈ ಸೌಲಭ್ಯ ಸಿಗಲಾರದು.

೨.    ಕೇರಳ, ತಮಿಳುನಾಡಿನ ಜನರು ಹೊರರಾಜ್ಯ ಮತ್ತು ಹೊರರಾಷ್ಟ್ರಗಳಲ್ಲಿ ಇದ್ದಾರೆ. ಆಂಧ್ರಪ್ರದೇಶ ದೊಡ್ಡರಾಜ್ಯ. ಅಲ್ಲಿಗೆ ಕಿರುತರಂಗಾಂತರ ಪ್ರಸಾರದ ಅಗತ್ಯವಿದೆ. ಆದರೆ ಕರ್ನಾಟಕಕ್ಕೆ ಈ ಎರಡೂ ಅಂಶಗಳು ಅನ್ವಯಿಸುವುದಿಲ್ಲ.

೩.     ರೇಡಿಯೋ ಕೇಳುವವರೇ ಕಡಿಮೆ ಆಗಿರುವಾಗ ಕಿರುತರಂಗಾಂತರಗಳ ಮೂಲಕ ಕನ್ನಡ ಪ್ರಸಾರ ಮಾಡಿದರೆ ಸುಮ್ಮನೆ ದುಡ್ಡು ದಂಡ. ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಗುವುದು ಅನುಮಾನ

ಎಂಬ ಉತ್ತರಗಳು ನಿಮಗೆ ಸಿಗುತ್ತವೆ. ಇವು ಎಷ್ಟು ಪೂರ್ವಾಗ್ರಹ ಪೀಡಿತ ಎಂಬುದಕ್ಕೆ ಬೇರೆ ವಿವರಣೆ ಬೇಕಿಲ್ಲ.

ಕನ್ನಡಕ್ಕೆ ನೀಡಿರುವ ಚಾನೆಲ್‌ಗಳ ಸಂಖ್ಯೆಯೇ ಕಡಿಮೆ
ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಬಲ್ಲ ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ರಾಜಧಾನಿಗಳಲ್ಲಿ ಮೊದಲಿನಿಂದಲೂ ಹೆಚ್ಚು ಪ್ರಸಾರಗಳನ್ನು ನೀಡಲಾಗಿದೆ. ಅಲ್ಲಿನ ಅಕಾಶವಾಣಿಗಳನ್ನು ಎ, ಬಿ, ಸಿ ಕೇಂದ್ರಗಳಾಗಿ ವಿಂಗಡಿಸಿ ಮೂರು ನಾಲ್ಕು ಪ್ರಸಾರಗಳನ್ನು ನೀಡಲಾಗಿದೆ. ಬೆಂಗಳೂರು ಆಕಾಶವಾಣಿಯಲ್ಲಿ ಕೇವಲ ಒಂದು ಪ್ರಸಾರ ಮಾತ್ರ ಇದೆ. (ಎಫ್.ಎಂ ರೈನ್‌ಬೋ ಮತ್ತು ವಿವಿಧ ಭಾರತಿ ಇವು ಪ್ರತ್ಯೇಕ ಪ್ರಸಾರಗಳು. ಇವು ಎಲ್ಲ ರಾಜ್ಯಗಳಲ್ಲೂ ಇವೆ)

ಕನ್ನಡಕ್ಕೆ ಎಫ್.ಎಂ ಗೋಲ್ಡ್ ಚಾನೆಲ್ ಇಲ್ಲ
ಭಾರತದ ಎಲ್ಲ ಮೆಟ್ರೋ ನಗರಗಳಲ್ಲಿ ಈ ಹೆಸರಿನ ರೇಡಿಯೋ ಚಾನೆಲ್ ಇದೆ. ಆದರೆ ಬೆಂಗಳೂರಿನಲ್ಲಿ ಒಂದು ಕೋಟಿಗೂ ಮಿಕ್ಕಿ ಜನರಿದ್ದಾಗಲೂ ಕೂಡ ಈ ಚಾನೆಲ್ ಇನ್ನೂ ದಕ್ಕಿಲ್ಲ.

ಡಿಟಿಎಚ್ ನಲ್ಲೂ ಕನ್ನಡ ರೇಡಿಯೊ ಪ್ರಸಾರ ಅಸ್ಪಷ್ಟವಾಗಿದೆ
ದೂರದರ್ಶನವು ಡಿಡಿ ಡೈರೆಕ್ಟ್ ಪ್ಲಸ್ ಎಂಬ ಡಿಟಿಎಚ್ ಪ್ರಸಾರ ಮಾಡುತ್ತಿದೆ. ಇದರಲ್ಲಿ ಹಲವಾರು ರೇಡಿಯೋ ಚಾನೆಲ್‌ಗಳು ಕೂಡ ಲಭ್ಯವಿವೆ. ಇಲ್ಲಿಯೂ ಕನ್ನಡದ ಪ್ರಸಾರ ಕಳಪೆಯಾಗಿದೆ. ಬೇರೆ ಭಾಷೆಯ ಪ್ರಸಾರಗಳು ಧ್ವನಿಗುಣಮಟ್ಟ ಉತ್ತಮವಾಗಿದ್ದರೆ, ಕನ್ನಡವು ಬಹಳ ಹ್ರಸ್ವವಾಗಿ ಕೇಳುತ್ತದೆ. ಇದನ್ನು ಹಲವಾರು ಬಾರಿ ಕೇಳುಗರು ಸಂಬಂಧಿಸಿದವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ.

ಈ ಪ್ರಸಾರ ಪಡೆಯಲು ಮಾಡಬೇಕಾದುದು ಏನು?
ಕನ್ನಡ ಭಾಷೆಗೆ ಈ ಸೌಲಭ್ಯ ಸಿಗದೆ ಇರುವುದಕ್ಕೆ ಇರುವ ಕಾರಣಗಳನ್ನು ಪರಿಶೀಲಿಸೋಣ. ಕರ್ನಾಟಕವು ಜನಸಂಖ್ಯೆ, ಭೌಗೋಳಿಕ ಪ್ರದೇಶ ಇತ್ಯಾದಿ ಯಾವುದೇ ದೃಷ್ಟಿಯಿಂದಲೂ ಕಿರು ತರಂಗಾಂತರದ ಪ್ರಸಾರಕ್ಕೆ ಯೋಗ್ಯವಾಗಿದೆ. ಆದರೆ ಕೇಂದ್ರ ಸರ್ಕಾರದ ನಿರ್ಲ್ಯಕ್ಷ ಭಾವನೆಯಿಂದ ಕನ್ನಡಿಗರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹಿಂದೆ ಕನ್ನಡದವರೇ ವಾರ್ತಾ ಮತ್ತು ಪ್ರಸಾರ ಖಾತೆಯನ್ನು ನಿರ್ವಹಿಸಿದ್ದು ಉಂಟು. ಆದರೆ ಆ ಸಮಯದಲ್ಲಿ ಅವರಿಗೆ ತಮ್ಮ ತವರು ನೆಲದ ನೆನಪಾಗಲಿಲ್ಲ. ಕನ್ನಡಿಗರ ಉದಾರ ನೀತಿ ಇಲ್ಲಿಯೂ ಕೂಡ ಸೌಲಭ್ಯವಂಚಿತರನ್ನಾಗಿ ಮಾಡಿದೆ.

ಕೇಂದ್ರವು ಇತರೆ ರಾಜ್ಯಗಳಿಗೆ ನೀಡಿದ ಸೌಲಭ್ಯವನ್ನು ಕನ್ನಡಿಗರೂ ಕೇಳಬೇಕಾಗಿದೆ. ಜನರ ತೆರಿಗೆಯ ಹಣ ಜನರ ಸೌಲಭ್ಯಗಳಿಗೆ ಬಳಕೆಯಾಗಬೇಕು. ನಮ್ಮ ಮಂತ್ರಿ, ಸಚಿವರ ಮೇಲೆ ಈ ಸೌಲಭ್ಯವನ್ನು ಕೋರಿ ಮನವಿ ಮಾಡಿ ಒತ್ತಡ ತರಬೇಕು. ಆರುಕೋಟಿ ಕನ್ನಡಿಗರಿಗೆ ಒಂದು ಕಿರುತರಂಗಾಂತರ ಪ್ರಸಾರ ಅಗತ್ಯವಿದೆ ಎಂಬುದನ್ನು ಕೇಂದ್ರಕ್ಕೆ ಮನವರಿಕೆ ಮಾಡಬೇಕಾಗಿದೆ.

ಬಹಳ ಹಿಂದೆಯೇ ಬೇರೆ ಭಾಷೆಗಳಿಗೆ ಈ ಸೌಲಭ್ಯ ನೀಡಲಾಗಿದೆ. ಕನ್ನಡಿಗರು ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಸೌಲಭ್ಯವಂಚಿತರಾಗಬೇಕಾಗುತ್ತದೆ.

ವಿದೇಶದ ರೇಡಿಯೋ ಪ್ರಸಾರಗಳಲ್ಲೂ ಕನ್ನಡದ ಕಂಪು ಇಲ್ಲ
ಬಿಬಿಸಿ, ಸಿಲೋನ್, ಚೈನಾ ರೇಡಿಯೊ ಇಂಟರ್ ನ್ಯಾಷನಲ್, ವಾಯ್ಸ್ ಆಫ್ ಅಮೆರಿಕಾ ಇತ್ಯಾದಿ ವಿದೇಶಿ ರೇಡಿಯೊಗಳಲ್ಲಿ ಇಂಗ್ಲಿಷ್ ಭಾಷೆಯ ಪ್ರಸಾರದ ಜೊತೆಗೆ ತಮಿಳು, ಹಿಂದಿ, ಬಂಗಾಳಿ ಭಾಷೆಗಳಲ್ಲೂ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ (ಆಯಾ ಕೇಂದ್ರಗಳ ವೆಬ್‌ಸೈಟ್‌ನಲ್ಲಿ ಇದರ ಮಾಹಿತಿ ಇದೆ). ಆದರೆ ಆ ಕೇಂದ್ರಗಳಿಗೂ ಯಾಕೋ ಕನ್ನಡ ಬೇಡದ ಭಾಷೆಯಾಗಿ ಬಿಟ್ಟಿದೆ. ಈ ಬಗ್ಗೆ ಆಸಕ್ತರು ಆಯಾ ರೇಡಿಯೋ ಸ್ಟೇಶನ್‌ಗಳಿಗೆ ಪತ್ರ ಬರೆದು ಕನ್ನಡದ ವ್ಯಾಪ್ತಿವಿಸ್ತಾರಗಳನ್ನು ತಿಳಿಸಿ ಕನ್ನಡದ ಪ್ರಸಾರವನ್ನು ನೀಡುವಂತೆ ವಿನಂತಿಸಬಹುದಾಗಿದೆ.

************

ಈ ಲೇಖನವು ಈ ತಿಂಗಳ ಕರವೇ ನಲ್ನುಡಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಚಿತ್ರಕೃಪೆ: digibarn.com

1 ಟಿಪ್ಪಣಿ Post a comment
  1. kpbolumbu's avatar
    ಮೇ 15 2015

    ಕನ್ನಡದ ಪ್ರಸಾರಕ್ಕಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದವರಿಗಾದರೂ ಬೆಂಬಲ ನೀಡಬಲ್ಲಿರಾ? ಯಸ್ ಎಂದಾದರೆ ನಿಮಗೆ ನಮ್ಮ ಬೆಂಬಲವಿದೆ. ಹಾಗಲ್ಲದೆ ಕರ್ನಾಟಕದ ಹೊರಗಣ ಭಾರತದ ಇತರ ರಾಜ್ಯಗಳಲ್ಲಿ ಬದುಕುವವರು ಭಾಷಾವಾರು ವಿಂಗಡಣೆಯಲ್ಲಿ ನೀಡಲಾದ ಭಾಷೆಗೆ ಅಧೀನರಾಗಿ ನಡೆದುಕೊಳ್ಳತಕ್ಕದ್ದು ಎನ್ನುವವರಿಗೆ ನಮ್ಮ ಬೆಂಬಲವಿಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments