ವಿಷಯದ ವಿವರಗಳಿಗೆ ದಾಟಿರಿ

Archive for

2
ಏಪ್ರಿಲ್

ಮಂಕು ತಿಮ್ಮನ ಕಗ್ಗ – ರಸಧಾರೆ (೧೬)

– ರವಿ ತಿರುಮಲೈ

ಲೋಕಜೀವನ ಮಂಥನ

ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ  I
ವಲೆವಂತೆ ಲೋಕ ತಲ್ಲಣಿಸಿಹುದಿಂದು II
ಹಳೆಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ II
ತಳಮಳಕೆ ಕಡೆಯೆಂದು – ಮಂಕು ತಿಮ್ಮ II

ಇಳೆಯ ಬಿಟ್ಟಿನ್ನುಮೆತ್ತಲುಮೈದದ = ಇಳೆಯ+ ಬಿಟ್ಟು + ಇನ್ನು+ ಎತ್ತಲುಂ+ಐದದ, ಪ್ರೇತವಲೆವಂತೆ= ಪ್ರೇತವು + ಅಲೆವಂತೆ, ಕಡೆಯಂದು= ಕಡೆ+ ಎಂದು

ಇಳೆ = ಭೂಮಿ, ಎತ್ತಲುಂ= ಯಾವಕಡೆಗೂ, ಐದದ=ಸೇರದ, ಪ್ರೇತ= ಮರಣಾನಂತರದ ಪ್ರಯಾಣದಲ್ಲಿ ಇರುವ ಆತ್ಮದ ಸ್ಥಿತಿ. ತಲ್ಲಣಿಸಿಹುದು + ಒದ್ದಾಡುತ್ತಿದೆ.

ಈ ಭೂಮಿಯನ್ನು  ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ. ಹಳೆ ಧರ್ಮ ಸತ್ತಿದೆ. ಹೊಸ ಧರ್ಮ ಹುಟ್ಟಿಲ್ಲ ತಳಮಳಕೆ ಕಡೆ ಎಂದು ಮಂಕುತಿಮ್ಮ ಎಂದು ತಮ್ಮನ್ನು ತಾವೇ ಪ್ರಶ್ನಿಸುತ್ತಾ ಅದೇ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ.

ಭಾರತ  ದೇಶವು ಅನ್ಯ ದೇಶದವರ ಆಕ್ರಮಣಕ್ಕೆ ಬಲಿಯಾಗಿ, ಹಾಗೆ ಬಂದ ಆಕ್ರಮಣಕಾರರು ಈ ದೇಶದಲ್ಲೇ ನೆಲೆಯೂರಿ ನಿಂತಾಗ, ಅವರ ನಂಬಿಕೆಗಳು ವಿಶ್ವಾಸಗಳು ಅಚಾರ ವಿಚಾರಗಳು ಉಡುಗೆ ತೊಡಿಗೆಗಳ ಶೈಲಿ ಹೀಗೆ ಎಲ್ಲವೂ ನಮ್ಮ ದೇಶದ ಸಂಸ್ಕೃತಿಯ ಮೇಲೆ ತನ್ನ ಪರಿಣಾಮವನ್ನು ಬೀರುತ್ತ, ಕಾಲಕ್ರಮದಲ್ಲಿ ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ನೆಲೆ ನಿಂತಿತು. ಆಗ ಅದರದು ಬೇರೆಯೇ ರೂಪ. ಆ ರೂಪ ಹಳೆಯದನ್ನು ಬಿಡಲಾಗದೆ, ಹೊಸದನ್ನು ಸಂಪೂರ್ಣ ಅಳವಡಿಸಿಕೊಳ್ಳಲಾಗದೆ ಒಂದು ಹೊಸರೂಪವನ್ನೇ ತಾಳಿತು. ಆದರೆ ಆ ಹೊಸರೂಪದಲ್ಲೂ ಒಂದು ತಳಮಳ, ಒಂದು ಚಡಪಡಿಕೆ ಇತ್ತು. ಅತ್ತ ಹಳೆಯದನ್ನು ಬಿಟ್ಟರೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭಯ, ಇತ್ತ ಹೊಸದರ ಹೊಸತನದ ಮೋಜು. ಇವೆರಡರ ರೂಪವೇ ಒಂದು ಎಡಬಿಡಂಗಿ ಸ್ವರೂಪ. ಇಂದು ನಾವು ಇರುವುದೇ ಅಂತಹ ಸ್ಥಿತಿಯಲ್ಲಿ. ಇದನ್ನು ಶ್ರೀ ಗುಂಡಪ್ಪನವರು ” ಈ ಭೂಮಿಯನ್ನು  ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ” ಎಂದು ಹೇಳುತ್ತಾರೆ. ಇದು ಒಂದು ಉಪಮೆ ಅಷ್ಟೇ. ಸನಾತನದಲ್ಲಿ ಅಂತಹ ನಂಬಿಕೆ ಉಂಟು. ಅನ್ಯರಲ್ಲೂ  ಬೇರೆ ಬೇರೆ ರೂಪದಲ್ಲಿ ಆ ನಂಬಿಕೆ  ಉಂಟು. ಆದರೆ ತಮ್ಮನ್ನು ತಾವು ಪ್ರಗತಿಪರರು ಅಥವಾ ಬುದ್ಧಿಜೀವಿಗಳು ಎಂದು ಅಂದುಕೊಂಡಿರುವ ಕೆಲವರು, ಇದರ ಸೂಕ್ತತೆಯನ್ನು ಮತ್ತು ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ. ಹಾಗೆ ಪ್ರಶ್ನೆ ಮಾಡುವ, ಅಲ್ಲಗೆಳೆಯುವ ಮತ್ತು ಟೀಕಿಸುವ ಹಕ್ಕು ಅವರಿಗೆ ಉಂಟು.

ಹಾಗೆ ಹಳೆಯದನ್ನು ಬಿಟ್ಟೂ ಬಿಡದ ಹಂಗೆ, ಹೊಸದನ್ನು ಹಿಡಿದೂ ಹಿಡಿಯದ ಹಂಗೆ ಇಂದಿನ ಸಮಾಜದಲ್ಲಿ ಎಲ್ಲರೂ ಇದ್ದಾರೆ. ಅದಕ್ಕೆ ಹಲವಾರು ಕಾರಣಗಳು. ವಿಧ್ಯಾಭ್ಯಾಸದ ಕ್ರಮ ಬದಲಾವಣೆ, ಹೊಸ ಹೊಸ ಸಾಧನಗಳು ಮತ್ತು ಮಾಹಿತಿ ತಂತ್ರಜ್ಞಾನದ ಸ್ಫೋಟ, ಜಾಗತೀಕರಣ, ಹೀಗೆ ಹತ್ತು ಹಲವಾರು. ಹಿಂದೆ ಇದ್ದದ್ದು ಇಂದು ಇಲ್ಲ. ಇಂದು ಇರುವುದು ಮುಂದಿರುವುದಿಲ್ಲ. ಅಂತಹ ಸ್ಥಿತಿಯಲ್ಲಿ ಜನರು ಯಾವುದೇ ಒಂದು ನಿರ್ಧಿಷ್ಟತೆಯಲ್ಲಿ ಇರದೇ ಒಂದು ಅತಂತ್ರದ ಸ್ಥಿತಿಯಲ್ಲಿದ್ದಾರೆ ಎಂದು ಮಾನ್ಯ ಗುಂಡಪ್ಪನವರ ಹೇಳುತ್ತಾರೆ. ಭಾಷೆ, ಜೀವನದ ಶೈಲಿ, ಉದ್ಯೋಗ, ಸಂಪಾದನೆ ಎಲ್ಲವೂ ಇಂದಿನ ಜನಾಂಗದ ಮೇಲೆ ಪರಿಣಾಮ ಬೀರಿದೆ. ಇಂದು ನಾವು ಹೊಸದಾಗಿ ಕಾಣುತ್ತಿರುವ ಹೊಸ ವಿಧ್ಯಮಾನವೇನಲ್ಲ. ನಮ್ಮ ಭಾರತೀಯ ಇತಿಹಾಸದಲ್ಲೇ ಬೇರೆ ಬೇರೆ ಸಮಯಗಳಲ್ಲಿ ಇಂತಹ ಅತಂತ್ರ ಸ್ಥಿತಿಗಳನ್ನು ನೋಡಬಹುದು. ಅಂದಿನ ಭೌಗೋಲಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ಥಿತಿಗಳು ಅಂದಿಗೆ,  ಅಂದಿನ ಸ್ಥಿತಿಗೆ ಕಾರಣವಾಗುತ್ತದೆ.

ಚಾಣಕ್ಯನಂತಹ ಮುತ್ಸದ್ಧಿಗಳು ಬಂದಾಗ ಏನೋ ಒಂದು ರೀತಿಯ ಕಲರವ ಉಂಟಾಗಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು. ಆದರೆ ಸ್ವಾಭಾವಿಕವಾಗಿ ಮಾನ್ಯ  ಡಿ.ವಿ.ಜಿ ಯವರು ಹೇಳಿದಂತೆ ಮತ್ತೆ ಅದೇ ಅತಂತ್ರ ಸ್ಥಿತಿಗೆ ಒಗ್ಗಿ ಹೋಗುತ್ತದೆ ಇಡೀ ಸಮಾಜ. ಆದರೆ ಇಂತಹ ಪ್ರತಿಪಾದನೆಗಳಿಗೆ, ಕೆಲವು ವ್ಯಕ್ತಿಗಳು ಅಪವಾದವಾಗಿ ಭಿನ್ನವಾಗಿರಬಹುದು. ಶುದ್ಧ ಸತ್ವದಲ್ಲಿ ಯಾವುದು ಪುರಾತನವೋ ಯಾವುದು ಸನಾತನವೋ ಅದನ್ನು ಪಾಲಿಸುತ್ತಿರಬಹುದು. ಆದರೆ ಒಟ್ಟಾರೆ ಸಮಾಜವನ್ನು ನೋಡಿದಾಗ ಎಲ್ಲೋ ಏನೋ ಸರಿಯಿಲ್ಲ ಎನ್ನುವ ಭಾವನೆ ಬರುತ್ತದೆ. ಅದನ್ನೇ  ಡಿ.ವಿ.ಜಿ ಯವರು ” ಲೋಕ ತಲ್ಲಣಿಸಿಹುದಿಂದು” ಎಂದರು.

ಆದರೆ ನಾವು ನೋಡಬೇಕಾದದ್ದು ಏನೆಂದರೆ, ಇದು ಸರಿಯೇ ಎಂದು. ಬದಲಾವಣೆಯೇ ಪ್ರಪಂಚದ ಮೂಲ ಗುಣವಾದ್ದರಿಂದ ಇದು ಸರಿ. ಅಸ್ತಿತ್ವವನ್ನು ಕಳೆದುಕೊಳ್ಳುವುದರಿಂದ ಇದು ಸರಿಯಿಲ್ಲ. ಹಾಗಾಗಿ ಏನು ಮಾಡಬೇಕು. ಡಿ.ವಿ.ಜಿ ಯವರೆ ಮುಂದೆ ಯಾವುದೋ ಕಗ್ಗದಲ್ಲಿ ಹೇಳುತ್ತಾರೆ” ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಹೊಸ ಯುಕ್ತಿ ಹಳೆ ತತ್ವ…..” ಎಂದು. ಅಂದರೆ ನೈಸರ್ಗಿಕವಾದ ಮತ್ತು  ಸ್ವಾಭಾವಿಕವಾದ ಬದಲಾವಣೆ ಬೇಕು ಮತ್ತು ಆಗಬೇಕು. ಆದರೆ ಹೊಸತನ್ನು,  ಹಳೆಯ ಮತ್ತು ಕಾಲದಲ್ಲಿ ಪರಿಕಿಸಿ ನಿರೂಪಿಸಲ್ಪಟ್ಟು ಸರ್ವಕಾಲಕ್ಕೂ ಅನ್ವಯವಾಗುವಂತಾ ಸಿದ್ಧಾಂತಗಳ ( theories ) ಆಧಾರದಮೇಲೆ ಹೊಸತು ಪಲ್ಲವಿಸ ಬೇಕು. ಆಗ ಹಳತು ಅಂತರ್ಯದಲ್ಲಿ ಉಳಿದು ಹೊಸತು ಪಲ್ಲವಿಸಿ ಬೆಳೆದು ಹಳೆಯದಕ್ಕೆ ಹೊಳಪ್ಪಿತ್ತಂತೆ  ಆಗುತ್ತದೆ. ಹೊಸತು,  ಆ ಹೊಳಪಿನ ಬೆಳಕಲ್ಲಿ ಸುಂದರವಾಗಿ ಕಾಣುತ್ತದೆ. ಆಗ ಎರಡೂ ಸಮನ್ವಯಗೊಂಡು ಒಂದು ಹೊಸ ನೆಲೆ ಸಿಕ್ಕಂತಾಗುತ್ತದೆ.

ಆದರೆ ವಿಷಾದವೇನೆಂದರೆ ಇಂದು ಯಾರಿಗೂ ಹಳೆಯದು ಬೇಡ. ಅದರ ಅರ್ಥ ಬೇಡ. ಅದರ ಸತ್ವ ಬೇಡ. ಅದನ್ನು ಗೊಡ್ಡು ಸಂಪ್ರದಾಯ ಎಂದು ಮೂದಲಿಸುವ, ಜರಿಯುವ, ನೇಪಥ್ಯಕ್ಕೆ ಸರಿಸುವ ಇಂದಿನ ಜನಾಂಗವು  ಸತ್ಯವಾಗಲೂ ಗುಂಡಪ್ಪನವರು ಹೇಳಿದಂತೆ “ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ”.ಅಂತರ್ಪಿಶಾಚಿಗಳ ತರಹೆ ಇದ್ದಾರೆ.

ಎಲ್ಲರಲ್ಲೂ ಹಳೆಯ ಸತ್ವಯುತವಾದ ಸಿದ್ಧಾಂತಗಳ, ಸಂಸ್ಕೃತಿಯ, ಸಂಸ್ಕೃತಿಯನ್ನು ಒಳಗೊಂಡ  ಭಾಷೆ, ಸಾಹಿತ್ಯ, ಕಲೆ ಮುಂತಾದವುಗಳನ್ನು ಪುರುಜ್ಜೀವನ ಮಾಡಲು ಒಂದು ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಅಂತಹ ಪ್ರಯತ್ನ ಎಲ್ಲ ಅಯಾಮಗಳಿಂದಲೂ ಒಂದೇ ಸಲಕ್ಕೆ ಒಂದು ಸ್ಫೋಟದಂತೆ  ಆದಾಗ ಒಂದು ಸಕಾರಾತ್ಮಕವಾದ ಬದಲಾವಣೆಯನ್ನು ನಾವು ನೋಡಬಹುದು. ನಮ್ಮ ಭಾರತೀಯತೆಯನ್ನು, ಸಂಸ್ಕೃತಿಯನ್ನು ಉಳಿಸಬೇಕಾದರೆ ಅಂತಹ ಪ್ರಯತ್ನ ಅಗತ್ಯ.

ಬನ್ನಿ ಮಿತ್ರರೇ, ನಾವೂ ಅಂತಹ ಪ್ರಯತ್ನದಲ್ಲಿ ನಮ್ಮನ್ನು  ನಾವೇ ತೊಡಗಿಸಿಕೊಳ್ಳೋಣ. ಅಂತಹ ವಿಚಾರಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗೋಣ.

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.

******************************************************

2
ಏಪ್ರಿಲ್

‘ಕೋಮುವಾದ ಮತ್ತು ಮಹಿಳೆ’ ಎಂಬ ಲೇಖನಕ್ಕೊಂದು ಪ್ರತಿಕ್ರಿಯೆ

– ಡಾ.ಜಿ. ಭಾಸ್ಕರ ಮಯ್ಯ

ಸಬಿಹಾರವರ ಮಹಿಳೆ ಮತ್ತು ಕೋಮುವಾದ ಇಂದು ವಿವಾದಕ್ಕೆ ಒಳಗಾಗಿರುವುದು ಜನರ ಕೋಮುವಾದೀಕರಣದ ಪ್ರಕ್ರಿಯೆ ಎಷ್ಟೊಂದು ಉಲ್ಬಣಿಸಿದೆ ಎನ್ನುವುದಕ್ಕೆ ಸಾಕ್ಷಿ. ಸಬಿಹಾರವರ ಲೇಖನದ ಯಾವ ಒಂದು ವಾಕ್ಯವೂ ಅಸತ್ಯದಿಂದ ಕೂಡಿಲ್ಲ. ಪೂರ್ವಾಗ್ರಹಪೀಡಿತವಾಗಿಲ್ಲ. ಅದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಹಾಗೆ ನೋಡಿದರೆ, ಗುಜರಾತಿನ ಬಗ್ಗೆ ಲೇಖಕಿ ಹೇಳಿರುವುದು ಕಡಿಮೆಯೆ. ಅಲ್ಲಿಯ ನರಮೇಧ ಮತ್ತು ಮಹಿಳೆಯರ ಮೇಲಿನ ಭಯಾನಕ ಅತ್ಯಾಚಾರ ಮಧ್ಯಯುಗದ ಯಾವುದೇ ಧರ್ಮಯುದ್ಧ, ಕ್ರುಸೇಡ್ ಮತ್ತು ಜಿಹಾದ್‌ಗೆ ಕಡಿಮೆಯಿಲ್ಲ. ಮನುಷ್ಯತ್ವದಲ್ಲಿ ನಂಬಿಕೆ ಇರುವವರಿಗೆ ಆಕ್ರೋಶ ಉಂಟಾಗುವಂತಹ ಸನ್ನಿವೇಶದ ಚಿತ್ರಣವನ್ನು ಲೇಖಕಿ ಅತ್ಯಂತ ಸಹನೆಯಿಂದ ಉಲ್ಲೇಖಿಸುತ್ತಾರೆ. ಕೋಮುವಾದದ ವಿವಿಧ ಮುಖಗಳನ್ನು ಮತ್ತು ಆಯಾಮಗಳನ್ನು ಚರ್ಚಿಸುತ್ತಾರೆ. ಆದರೆ, ಲೇಖನದ ಆರಂಭದಲ್ಲಿ ಫಣಿರಾಜರವರು ಕೋಮುವಾದದ ಕುರಿತು ಹೇಳಿದ ಮಾತಿನ ಒಂದು ಉಲ್ಲೇಖವಿದೆ. ಅದು …ಬಹುಸಂಖ್ಯಾತರ ಸಂಸ್ಕೃತಿಗೆ ಅಲ್ಪಸಂಖ್ಯಾತರು ಹೊರಗಿನವರು ಎಂದು ವಾದಿಸಿ ದ್ವೇಷ ತಿರಸ್ಕಾರಗಳನ್ನು ಬೆಳೆಸುವುದೇ ಕೋಮುವಾದ – ಕೋಮೂವಾದಕ್ಕೆ ಇಂತಹ ಸರಳ ವ್ಯಾಖ್ಯೆ ಸರಿಯಲ್ಲ. ಫಣಿರಾಜ್ ಮತ್ತು ಜಿ. ರಾಜಶೇಖರ್ ಕೋಮುವಾದವನ್ನು ವಿರೋಧಿಸುವಲ್ಲಿ ನಿಷ್ಪಕ್ಷಪಾತಿಗಳಾಗಿರದೆ, ಒಂದು ಕೋಮಿನ ಕೋಮುವಾದದ ಕುರಿತು ಮೌನವಹಿಸುವುದು ಅಥವಾ ಅಂತಹ ಸಂಸ್ಥೆಗಳೊಂದಿಗೆ ಸಂಬಂಧವನ್ನಿರಿಸಿಕೊಳ್ಳುವುದು ನಿಜಕ್ಕೂ ಆಕ್ಷೇಪಾರ್ಹ. ಆದರೆ ಸಬಿಹಾರವರ ಬರವಣಿಗೆ ಈ ನಿಟ್ಟಿನಲ್ಲಿ ದೋಷಮುಕ್ತವಾಗಿದೆ. ಅವರು ಪಾಕಿಸ್ತಾನ, ಬಾಂಗ್ಲಾ ಮತ್ತು ತಸ್ಲೀಮಾ ನಜರೀನ್ ಅವರನ್ನು ಉಲ್ಲೇಖಿಸುತ್ತಾ ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯದ ಕುರಿತೂ ಹೇಳುತ್ತಾರೆ. ಸಬಿಹಾರವರ ಲೇಖನ ಈ ನಿಟ್ಟಿನಲ್ಲಿ ವಾಸ್ತವವಾದೀ, ಮಾನವತಾವಾದೀ ಬರವಣಿಗೆಯೆಂಬುದು ನಿಸ್ಸಂಶಯ.

ಮತ್ತಷ್ಟು ಓದು »

2
ಏಪ್ರಿಲ್

ಬೆಳೆ ಬೆಳೆಸಿದರಷ್ಟೆ ನೆಲದ ಒಡೆತನ

–  ಟಿ.ಎಂ.ಕೃಷ್ಣ

ಆಹಾರ ಧಾನ್ಯಗಳ ಬೆಲೆ ಒಂದೇ ಸಮನೆ ಗಗನಕ್ಕೇರುತ್ತಲೇ ಇದೆ. ಜನಸಾಮಾನ್ಯರೇನು- ಅಷ್ಟೋ ಇಷ್ಟೋ ಸ್ಥಿತಿವಂತರೇ ಜೀವನ ನಿರ್ವಹಿಸಲು ಸಾಧ್ಯವಾಗದಂತಾಗಿದೆ. ಕೆಳ, ಮದ್ಯಮ ವರ್ಗದವರು ತರಗೆಲೆಗಳಂತೆ ತತ್ತರಿಸತೊಡಗಿದ್ದಾರೆ. ಮುಂದುವರಿದ(?) ಮನುಷ್ಯನ ಅಗತ್ಯಗಳು ಅಗಣಿತವಾಗಿರಬಹುದಾದರೂ, ಮೂಲಭೂತ ಅಗತ್ಯವಾದ ಅನ್ನಾಹಾರಗಳ ಲಭ್ಯತೆ ಕಠಿಣವಾದರೆ ಏನಿದ್ದರೂ, ಯಾವುದೇ ತಂತ್ರಜ್ಞಾನವಿದ್ದರೂ ಅವೆಲ್ಲಾ ಅಪ್ರಸ್ತುತವಾಗಿಬಿಡುತ್ತವೆ. (ಚಿನ್ನದ ಕತ್ತಿ ಇದೆಯೆಂದು ಕುತ್ತಿಗೆ ಕೊಯ್ದುಕೊಳ್ಳಲಾದೀತೆ?)

ಅಗತ್ಯವಸ್ತುಗಳು ಕೈಗೆಟುಕದಂತಾಗಿರುವ ಈ ಸಂದರ್ಭದಲ್ಲಿ ಸರ್ಕಾರದ ಕಡೆ ಕೈ ತೋರಿಸುವುದು ಅನಿವಾರ್ಯವಾದರೂ, ಆಯಕಟ್ಟಿನ ಜಾಗಕ್ಕೆ ಕೈತೋರಿಸದಿರುವುದು ನಮ್ಮಲ್ಲಿನ ಪ್ರಜ್ಞಾವಂತರ ಪ್ರಜ್ಞೆಯ ಅವನತಿಯನ್ನು ಸೂಚಿಸುತ್ತದೆ. ಕುರಿಗಳು ಹಳ್ಳಕ್ಕೆ ಬಿದ್ದಂತೆ ಪ್ರತಿಯೊಬ್ಬರೂ ಪ್ರಸ್ತಾಪಿಸುತ್ತಿರುವುದು ಮಳೆ ಅಭಾವ, ಬೆಳೆನಷ್ಟ, ವ್ಯಾಪಾರಿಗಳು ಸೃಷ್ಟಿಸುತ್ತಿರುವ ಕೃತಕ ಅಭಾವ, ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ, ಜನಸಂಖ್ಯೆಯ ಹೆಚ್ಚಳ ಇತ್ಯಾದಿ…ಈ ಎಲ್ಲ ಕಾರಣಗಳಿಗೆ ನಿದರ್ಶನಗಳಿದ್ದರೂ, ಅವೆಲ್ಲಾ ತಾತ್ಕಾಲಿಕ ಅವ್ಯವಸ್ಥೆಗಳೇ ಹೊರತು ಮೂಲಭೂತ ಸತ್ಯಗಳಲ್ಲವೇ ಅಲ್ಲ.

ಮತ್ತಷ್ಟು ಓದು »

2
ಏಪ್ರಿಲ್

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ – ಪ್ರಗತಿಪರರು

– ಡಾ.ಭಾಸ್ಕರ್ ಮಯ್ಯ

ಆಧುನಿಕ ತತ್ವಶಾಸ್ತ್ರದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ. ವೇದಾಂತ ದರ್ಶನಕ್ಕೆ ನೂರಾರು ವ್ಯಾಖ್ಯಾನಗಳಿವೆ. ಆದರೆ ಅವುಗಳಲ್ಲಿ ಪ್ರಮುಖ ಸ್ಥಾನವಿರುವುದು `ಶಾಂಕರ ವೇದಾಂತ’ಕ್ಕೆ. ಆದರೆ, ಶಂಕರರು ವೇದಾಂತ ದರ್ಶನಕ್ಕೆ ವ್ಯಾಖ್ಯಾನ ಬರೆದಿರುವುದು ಭಾವವಾದೀ ದೃಷ್ಟಿಯಿಂದ ಶಂಕರರು ಭಾವವಾದದ ಮೇರು ಶಿಖರ ಎಂಬಲ್ಲಿ ಎರಡು ಮಾತಿಲ್ಲ. ಅವರಿಗೆ ಸರಿಗಟ್ಟುವ ಭಾವವಾಣಿ ದಾರ್ಶನಿಕರುಪಾಶ್ಚಾತ್ಯ ದರ್ಶನ ಶಾಸ್ತ್ರದಲ್ಲಿ ದೊರಕುವುದಿಲ್ಲ. ಆದರೆ, ವಿವೇಕಾನಂದರು ವೇದಾಂತಕ್ಕೆ ವ್ಯವಹಾರಿಕ ರೂಪವನ್ನು ಕೊಟ್ಟರು. ಈ ಬಗೆಯ ವ್ಯಾಖ್ಯಾನ ಕೂಡಾ ತತ್ವಶಾಸ್ತ್ರಕ್ಕೆ ನವನವೀನ.

ಅಗಾಧ ಪ್ರತಿಭೆ
1863ನೆಯ ಇಸವಿ ಜನವರಿ 12 ರಂದು ಕಲ್ಕತ್ತಾದ ಒಂದು ಕ್ಷತ್ರಿಯ ಕುಟುಂಬದಲ್ಲಿ ಜನಿಸಿದ ವಿವೇಕಾನಂದರು ಅಗಾಧ ಪ್ರತಿಭೆಯ ವ್ಯಕ್ತಿ. ಆ ಕಾಲದಲ್ಲಿಯೇ ಬಿ.ಎ. ಶಿಕ್ಷಣ ಮುಗಿಸಿದ ವಿವೇಕಾನಂದರು ( ಮೂಲ ಹೆಸರು ನರೇಂದ್ರನಾಥ) ವಿದ್ಯಾರ್ಥಿ ಜೀವನದಲ್ಲಿ ನಾಸ್ತಿಕರಾಗಿದ್ದರು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ಅವರ ಚಿಂತನಾ ಕ್ರಮವೇ ಬದಲಾಯಿತು.ರಾಮಕೃಷ್ಣರು ಮಹಾನ್ ಸಂತರಾಗಿದ್ದರೂ ಅನಕ್ಷರಸ್ತರು. ವಿವೇಕಾನಂದರು ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಪ್ರಖಾಂಡ ಪಂಡಿತರು. ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರು ಒಂದೇ ಜೀವನದ ಎರಡು ಮುಖಗಳು ಅಥವಾ ಒಂದೇ ಸತ್ಯದ ಎರಡು ರೂಪಗಳು. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ರಾಮಕೃಷ್ಣರು ಅನುಭೂತಿ  ಆದರೆ ವಿವೇಕಾನಂದರು ಅವರ ವ್ಯಾಖ್ಯಾನ ಅಭಿವ್ಯಕ್ತಿ.

ವಿವೇಕಾನಂದರು ಹಾರ್ಬರ್ತ್ ಸ್ಪೆನ್ಸರ್ ಹಾಗೂ ಜಾನ್ ಸ್ಟುವರ್ಟ್ರಮಿಲ್ ಅವರ ಪ್ರೇಮಿಯಾಗಿದ್ದರು. ಶೆಲಿ, ವರ್ಡ್ಸ್ವರ್ತ್ರ ದಾರ್ಶನಿಕತೆ, ಹೆಗಲ್ನ ವಸ್ತುನಿಷ್ಠ ಆದರ್ಶವಾದ ಹಾಗೂ ಫ್ರಾನ್ಸಿನ ರಾಜ್ಯಕ್ರಾಂತಿ ವಿವೇಕಾನಂದರನ್ನು ತೀವ್ರವಾಗಿ ಪ್ರಭಾವಿಸಿತ್ತು.
ವಿವೇಕಾನಂದರು ಕೇವಲ 39 ವರ್ಷಗಳ ಕಾಲ ಜೀವಿಸಿದ್ದರೂ ಅವರ ಸಂದೇಶ ಇವತ್ತಿನ ಕೋಮುವಾದಿ ರಾಜಕೀಯಕ್ಕೆ ಅತ್ಯಂತ ಪ್ರಬಲವಾದ ಶಸ್ತ್ರ. ರಾಮಮೋಹನ್ ರಾಯ್, ಕೇಶವ ಚಂದ್ರ ಸೇನ್, ದಯಾನಂದ ಸರಸ್ವತಿ, ರಾನಡೆ, ಅನಿಬೆಸೆಂಟ್ ಮತ್ತು ರಾಮಕೃಷ್ಣರು ಹದಮಾಡಿದ ನೆಲದಲ್ಲಿ ವಿವೇಕಾನಂದರು ಅಶ್ವತ್ಥದಂತೆ ಬೆಳೆದು ನಿಂತರು. ಇಂದು ಕೋಮುವಾದಿಗಳು ಆ ಅಶ್ವತ್ಥದ ರೆಂಬೆಕೊಂಬೆಗಳನ್ನು ಕಡಿದು ಯೂಪಸ್ಥಂಭ (ಬಲಿಸ್ಥಂಭ)ವನ್ನಾಗಿ ರೂಪಿಸುತ್ತಿದ್ದಾರೆ.

ಮತ್ತಷ್ಟು ಓದು »