ಕೈದಿಯೊಬ್ಬ ಜೈಲು ಸೂಪರಿಂಟೆಂಡೆಂಟ್ ಆಗಿದ್ದು!… ಮ್ಯಾಜಿಸ್ಟ್ರೇಟರೂ ಆಗಿದ್ದು!!
– ಕವಿ ನಾಗರಾಜ್
ಸುಮಾರು ೩೭ ವರ್ಷಗಳ ಹಿಂದೆ ಅವನೊಬ್ಬ ಜೈಲಿನ ಕೈದಿಯಾಗಿದ್ದ. ಆರು ತಿಂಗಳು ಹಾಸನದ ಜೈಲಿನಲ್ಲಿದ್ದ. ಅವನ ಮೇಲೆ ಭಾರತ ರಕ್ಷಣಾ ಕಾಯದೆಯನ್ವಯ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಅದೇ ವ್ಯಕ್ತಿ ಜೈಲಿನಿಂದ ಹೊರಬಂದ ಸುಮಾರು ನಾಲ್ಕು ವರ್ಷಗಳ ನಂತರ ಒಂದು ಉಪಕಾರಾಗೃಹದ ಜೈಲು ಸೂಪರಿಂಟೆಂಡೆಂಟ್ ಆಗಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ. ಇದಾಗಿ ೧೦ ವರ್ಷಗಳ ನಂತರದಲ್ಲಿ ಅವನು ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಯಾದ. ಆ ಹುದ್ದೆಯಲ್ಲಿ ಸುಮಾರು ೧೨ ವರ್ಷಗಳ ಕಾಲ ಕೆಲಸ ಮಾಡಿದ. ಹೀಗೇ ಆಗಲು ಸಾಧ್ಯವೇ? ಒಬ್ಬ ಕೈದಿ ಜೈಲು ಸೂಪರಿಂಟೆಂಡೆಂಟ್ ಆಗುವುದು ಮತ್ತು ನಂತರ ತಾಲ್ಲೂಕು ಮ್ಯಾಜಿಸ್ಟ್ರೇಟರೂ ಆದನೆಂದರೆ ಯಾರೂ ನಂಬಲಾರರು. ಆದರೆ ಇದು ನಡೆದ ಸಂಗತಿ.