ಮಂಕು ತಿಮ್ಮನ ಕಗ್ಗ – ರಸಧಾರೆ (೧೮)
– ರವಿ ತಿರುಮಲೈ
ಲೋಕಜೀವನ ಮಂಥನ
ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ I
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲ ವದಕೆ II
ಬದುಕೇನು ಸಾವೇನು ಸೊದೆಯೇನು ವಿಷವೇನು? I
ಉದಕಬುದ್ಬುದವೆಲ್ಲ ! – ಮಂಕುತಿಮ್ಮ II
ತೆರೆಯವೊಲುರುಳಿ = ತೆರೆಯವೊಲು ಉರುಳಿ, ಉದಕಬುದ್ಬುದವೆಲ್ಲ= ಉದಕ ಬುದ್ಬುದವು ಎಲ್ಲ.
ತೆರೆಯವೊಲು=ನದಿಯ ಅಲೆಯಂತೆ , ಮುಗಿವಿಲ್ಲ= ಕೊನೆಯಿಲ್ಲ, ನಿಲುವಿಲ್ಲ = ನಿಲುವು ಅಂದರೆ ಸ್ಥಿರತೆ,. ಸೊದೆಯೇನು= ಅಮೃತವೇನು, ಉದಕ= ನೀರು, ಬುದ್ಬುದ= ಗುಳ್ಳೆ
ನದಿಯ ತೆರೆಯಂತೆ ಉರುಳಿ ಹೊರಳುತಿದೆ ಜೀವ, ಮೊದಲಿಲ್ಲ , ಮುಗಿವಿಲ್ಲ ನಿಲುವಿಲ್ಲ ಅದಕೆ
ಬದುಕೇನು ಸಾವೇನು ಸೊದೆಯೇನು ವಿಷವೇನು ಉದಕದ ಬುದ್ಬುದವು ಎಲ್ಲ ಮಂಕುತಿಮ್ಮ.
ವಾಚಕರೆ ಹಿಂದಿನ ಕಗ್ಗದಲ್ಲಿ ಈ ಹಳತು ಹೊಸತನದ ತಿಕ್ಕಾಟವನ್ನು ಅಮೃತಕ್ಕಾಗಿ ನಡೆಯುವ ಸಮುದ್ರ ಮಂಥನಕ್ಕೆ ಹೋಲಿಸಿದರು ಮಾನ್ಯ ಡಿ.ವಿ.ಜಿ ಯವರು.ಆದರೆ ಇಂದಿನ ಕಗ್ಗದಲ್ಲಿ ಒಂದು ವೇದಾಂತದ ಮಾತನ್ನು ಸೂಚಿಸಿದ್ದಾರೆ. ಇಡೀ ಜೀವನವನ್ನು ಅವರು ಒಂದು ನದಿಯ ತೆರೆ ಅಥವಾ ಅಲೆಯಂತೆ ಎಂದಿದ್ದಾರೆ. ಒಂದು ನಿಮಿಷವೂ ಒಂದೇ ತೆರನಾಗಿ ಇರದ ನದಿಯ ತೆರೆಗೆ ಹೋಲಿಸಿದ್ದಾರೆ. ಹೌದು ಯಾರ ಜೀವನವೂ ಎಂದೂ ಒಂದೇ ತೆರನಾಗಿ ಇರುವುದಿಲ್ಲ.ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ನಾನು ಅದನ್ನು kaleidoscopic ಲೈಫ್ ಎಂದು ಕರೆಯುತ್ತೇನೆ. ಕೆಲಿಡೋಸ್ಕೊಪ್ ಎನ್ನುವುದು ನಾವು ಚಿಕ್ಕಂದಿನಲ್ಲಿ ಮೂರು ಬಿಳಿಯ ಗಾಜಿನ ಪಟ್ಟಿಗಳನ್ನು ತೆಗೆದುಕೊಂಡು ಮೂರನ್ನೂ ತ್ರಿಕೋನಾಕಾರದಲ್ಲಿ ಜೋಡಿಸಿ ಎಲ್ಲ ಬದಿಯಿಂದಲೂ ಬಂಧಿಸಿ ಒಂದು ಕೊನೆಯನ್ನು ಮುಚ್ಚ್ಚಿ ಸುತ್ತಲೂ ಕಾಗದವನ್ನು ಸುತ್ತಿ ಬಿಡುತ್ತಿದ್ದೆವು. ತೆರೆದ ಬದಿಯಿಂದ ಒಡೆದ ಗಾಜಿನ ಬಳೆಯ ಚೂರುಗಳನ್ನು ಹಾಕಿದರೆ ಒಂದು ಚಿತ್ತಾರ (ಡಿಸೈನ್) ಮೂಡುತ್ತಿತ್ತು. ಅದನ್ನು ತಿರುಗಿಸುತ್ತಾ ಹೋದಂತೆಲ್ಲ, ಬೇರೆಬೇರೆ ಚಿತ್ತಾರಗಳು ಮೂಡುತ್ತಿದ್ದವು. ಒಂದು ಬಾರಿ ಮೂಡಿದ ಚಿತ್ತಾರ ಮತ್ತೊಂದು ಬಾರಿಗೆ ಎಂದೂ ಬರುವುದಿಲ್ಲ. ಹಾಗೆಯೇ ನಮ್ಮ ಜೀವನಗಳು ಈಗ ಇದ್ದಂತೆ ಎಲ್ಲವೂ ಮತ್ತೆಂದಿಗೂ ಇರುವುದಿಲ್ಲ. ದಿನಕಳೆದಂತೆ ನಮ್ಮ ವಯಸ್ಸು ಒಂದು ದಿನ ಹೆಚ್ಚಾಗುತ್ತದೆ. ಒಂದು ದಿನ ಇದ್ದ ಮನೋಭಾವ ಮತ್ತೊಂದು ದಿನ ಇರುವುದಿಲ್ಲ, ಒಂದು ಗಳಿಗೆ ಇದ್ದ ನಮ್ಮ ಯೋಚನಾ ವಿಧ ಮತ್ತೊಂದು ಗಳಿಗೆ ಇರುವುದಿಲ್ಲ. ಇದನ್ನೇ ಮಾನ್ಯ ಗುಂಡಪ್ಪನವರು ನಿಲುವಿಲ್ಲ ಎಂದರು.
ಮತ್ತಷ್ಟು ಓದು
ಮಂಕು ತಿಮ್ಮನ ಕಗ್ಗ – ರಸಧಾರೆ (೧೯)
– ರವಿ ತಿರುಮಲೈ
ಲೋಕಜೀವನ ಮಂಥನ
ಗಾಳಿ ಮಣ್ಣು೦ಡೆಯೊಳಹೊಕ್ಕು ಹೊರಹೊರಳಲದು I
ಆಳೆನಿಪುದಂತಾಗದಿರೆ ಬರಿಯ ಹೆಂಟೆ II
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆI
ಕ್ಶ್ವೇಳವೇನಮೃತವೇಂ ? – ಮಂಕುತಿಮ್ಮ II
ಮಣ್ಣು೦ಡೆಯೊಳಹೊಕ್ಕು= ಮಣ್ಣ + ಉಂಡೆ+ಒಳ+ಹೊಕ್ಕು , ಹೊರಹೊರಳಲದು = ಹೊರ+ಹೊರಳಲು +ಅದು
ಆಳೆನಿಪುದಂತಾಗದಿರೆ = ಆಳು+ ಎನಿಪುದು +ಅಂತೆ + ಆಗದಿರೆ, ತಿಕ್ಕಿದುರಿಯ = ತಿಕ್ಕಿದ+ಉರಿಯ, ಕ್ಶ್ವೇಳವೇನಮೃತವೇಂ =ಕ್ಶ್ವೇಳವೇನು +ಅಮೃತವೇನು
ಈ ದೇಹವನ್ನು ಮಣ್ಣು೦ಡೆಗೆ ಹೋಲಿಸಿದ್ದಾರೆ ಮತ್ತು ಈ ದೇಹದಲ್ಲಿ ಆಡುವ ಉಸಿರು ( ಗಾಳಿ ) ಆಡುತ್ತಿದ್ದರೆ ನಾವುಗಳು “ಆಳು” ಎಂದು ಎನ್ನಿಸಿ ಕೊಳ್ಳುತ್ತೇವೆ. ಇಲ್ಲದಿದ್ದರೆ ಈ ದೇಹ ಬರೀ ಮಣ್ಣಿನ ಹೆಂಟೆ ಎಂದು ಒಂದು ಅತ್ಯುತ್ತಮ ಸತ್ಯವನ್ನು ಪ್ರತಿಪಾದಿಸುತ್ತಾರೆ. ಇಂದು ನಮ್ಮ ಸ್ನೇಹಿತರೊಬ್ಬರು ಇದಕ್ಕೆ ಸರಿಯಾಗಿ” ಬಡಿತ ನಿಂತರೆ ಬಡಿವಾರ ಬಂದ್ ” ಎಂದು ಹಿಂದಿನ ಕಗ್ಗಕ್ಕೆ ಪ್ರತಿಕ್ರಿಯೆ ನೀಡಿ, ಬಹಳ ಸೂಕ್ತವಾಗಿ ಹೇಳಿದರು. ಬಹುಶಃ ಅವರಿಗೆ ಇಂದಿನ ಕಗ್ಗದ ಪರಿಚಯವಿತ್ತೇನೋ ಎಂದು ಅನ್ನಿಸುತ್ತದೆ. ಇರಲಿ ಗುಂಡಪ್ಪನವರು ಈ ಬಾಳನ್ನು ದೂಳ ಸುಳಿ ಎಂದು ಕರೆಯುತ್ತಾರೆ. ಇದು ಬಹಳ ಸೂಕ್ತವಾಗಿದೆ. ಏಕೆಂದರೆ, ನಾನು ಹಿಂದೆ ಒಮ್ಮೆ ಈ ಬ್ರಹ್ಮಾಂಡದ ವಿವರಣೆಯನ್ನು ಮಾಡುವಾಗ, ಇಡೀ ಬ್ರಹ್ಮಾಂಡವು ಎಷ್ಟು ದೊಡ್ಡದೆಂದರೆ, ಇದರೆದುರು ನಾವು ಒಂದು ದೂಳ ಕಣವೂ ಅಲ್ಲ ಎಂದು ಹೇಳಿದ್ದೆ. ಈಗ ಮಣ್ಣಿಂದ ಆದ, ಮತ್ತು ಈ ಸಮಸ್ತ ಭೂಮಂಡಲವನ್ನು ನಿವಾಸಸ್ಥಾನವನ್ನಾಗಿಸಿಕೊಂಡ ಪ್ರಾಣಿಗಳೆಲ್ಲವೂ ಧೂಳ ಕಣಗಳೇ ಎಂದು ಗುಂಡಪ್ಪನವರು ಹೇಳುತ್ತಾರೆ.
ಮಣ್ಣಿಂದ ಆದ ಜೀವಕಣಗಳು ಮತ್ತು ಈ ಜೀವಕಣಗಳಿಂದಾದ ಈ ದೇಹವೂ ಮಣ್ಣಲ್ಲವೇ? “ಮಣ್ಣಿಂದ ಕಾಯ ಮಣ್ಣಿಂದ” ಎಂದು ನಾವು ಕೇಳಿಲ್ಲವೇ? ಹಾಗೆ ಮಣ್ಣಿಂದ ಆದ ಈ ದೇಹವನ್ನು ಮಣ್ಣ ಉಂಡೆ ಎಂದು ಹೇಳಿದ್ದಾರೆ. ಈ ಮಣ್ಣ ಉಂಡೆಯಲಿ ಗಾಳಿ ಆಡುತ್ತಿದ್ದರೆ ನಾವೂ ಸಹ “ಆಳು” ಅಂದರೆ ಮನುಷ್ಯ ಎಂದು ಕರೆಯಲ್ಪಡುತ್ತೇವೆ. ಇಲ್ಲದಿದ್ದರೆ ಬರೇ ಮಣ್ಣ ಉಂಡೆ. ಆಗ ನಮ್ಮನ್ನು ಹೆಣ ಎನ್ನುತ್ತಾರೆ
ಹಾಗಿದ್ದರೆ ಈ ಬಾಳು ಅಂದರೆ ಜೀವನವು ಏನು? ಎಂದರೆ ಮಣ್ಣ ಕಣಗಳ ತಿಕ್ಕಾಟವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ತಿಕ್ಕಾಟದಲ್ಲಿ ಬೆಂಕಿ ಉಂಟಾಗುತ್ತದೆ ಮತ್ತು ಹೊಗೆಯಾಡುತ್ತದೆ. ದ್ವೇಷದ ಬೆಂಕಿ, ಅಸೂಯೆಯ ಬೆಂಕಿ ಕೋಪದ ಬೆಂಕಿ ಹೀಗೆ ಹಲವಾರು ವಿಧದಲ್ಲಿ ಮನುಜ ಮನುಜರ ಮಧ್ಯೆ ಉಂಟಾಗುವ ತಿಕ್ಕಾಟ. ಆ ತಿಕ್ಕಾಟದ ಪರಿಣಾಮ ಸಾವು ನೋವುಗಳ ಪರಿಣಾಮ. ಅದೇ ಈ ಬೆಂಕಿಯಿಂದ ಬರುವ ಹೊಗೆ.
ಇದರಿಂದ ಕೆಲವರಿಗೆ ಸುಖ ಕೆಲವರಿಗೆ ದುಃಖ. ಇದನ್ನೇ “ಕ್ಶ್ವೇಳ “ಅಂದರೆ ವಿಷವೆಂದು, ಸುಖ ಮತ್ತು ಆನಂದವನ್ನು “ಅಮೃತ”ವೆಂದೂ ಕರೆಯುತ್ತಾರೆ ಗುಂಡಪ್ಪನವರು.
ಪರಮಾತ್ಮನೆಂಬ ಮಹಾಜ್ಜ್ವಾಲೆಯಲ್ಲಿ ಉರಿಯುವ ಬೆಂಕಿಯಿಂದ ಸಿಡಿದ ಕೋಟ್ಯಾಂತರ ಕಿಡಿಗಳೇ, ಈ ಜೀವಿಗಳು. ಈ ಜಗತ್ತಿನಲ್ಲಿ, ಮಣ್ಣಿನ ಉಂಡೆಗಳಂತೆ ಇರುವ ನಾವೂ ಮತ್ತು ಈ ಉಂಡೆಯೊಳಗೆ ಗಾಳಿ ಎಂಬಂತೆ ಇರುವ ಆತ್ಮ ಅಥವಾ ಚೇತನದ ಸಮ್ಮಿಲನದಿಂದ ಉಂಟಾದ ಬದುಕೆಂಬ ತಿಕ್ಕಾಟದಲ್ಲಿ ಬೆಂಕಿಯುಗುಳಿ, ವಿಷಕಾರಿ, ಅಮೃತವ ಸವಿದು ಬಾಳ ಸವೆಸಿ ಮತ್ತದೇ ಚೇತನವನ್ನು ಸೇರುವಾಗ, ಇಲ್ಲಿ ಪಡೆದ ಅಮೃತದ ಬೆಲೆಯೇನು ಕುಡಿದ ಅಥವಾ ಕಕ್ಕಿದ ವಿಷದ ಬೆಲೆಯೇನು ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು.
ಈ ಕಗ್ಗದ ಒಟ್ಟಾರೆ ಅಂತರ್ಯವೇನೆಂದರೆ, ಮಣ್ಣಿಂದ ಆಗಿ, ಮಣ್ಣಲ್ಲೇ ಇದ್ದು ಮಣ್ಣಲ್ಲೇ ಸೇರುವ ಈ ಮಾನವನ ಬಾಳು ಕೇವಲ ಉಸಿರಿರುವ ತನಕ. ಹೀಗೆ ಬದುಕಿರುವಾಗ ನಾವು ಪಡೆಯುವ ಸುಖ ದುಃಖ ಅನುಭವಿಸುವ , ಕೋಪ ದ್ವೇಷ, ಅಸೂಯ, ಪ್ರೀತಿ, ಪ್ರೇಮ, ಅನುರಾಗ, ಬಂಧನಗಳಂಥಹ ಭಾವಗಳೆಲ್ಲವೂ, ” ಬಡಿತವಿರುವತನಕ( ಹೃದಯದ)” ಅದು ನಿಂತರೆ” ಬಡಿವಾರ ಬಂದ್” ಈ ಜೀವನದ ಎಲ್ಲಕ್ಕೂ ಒಂದು ಮಂಗಳವನ್ನು ಹಾಡುವ,ಸಾವನ್ನು ಅಪ್ಪಿ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗುವಾಗುವಂಥಾ ಈ ಜೀವನದಲ್ಲಿ ಪಡೆದ ಸುಖಕ್ಕೆ ಏನು ಬೆಲೆ, ದುಃಖಕ್ಕೆ ಏನು ಬೆಲೆ. ಎಲ್ಲವೂ ಶೂನ್ಯ.
ಇಂತಹ ಭಾವಗಳನ್ನು ವ್ಯಕ್ತಪಡಿಸುವ ಈ ಕಗ್ಗದ ಅಂತರ್ಯವನ್ನು ವಾಚಕರು ಅವರದೇ ಅನುಭವದ ಮೂಸೆಯಲ್ಲಿ ಹಾಕಿ ನೋಡಿದಾಗ, ಪ್ರತಿಯೊಬ್ಬರಿಗೂ ಅವರವರದೇ ಅನುಭವದ ಭಾವ ಸಿಗುತ್ತದೆ.
ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ.
ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.
ನಮಸ್ಕಾರ
ಸೇನೆ-ಸರ್ಕಾರದ ನಡುವೆ ಬಡವಾಗದಿರಲಿ ನನ್ನ ಭಾರತ
– ರಾಕೇಶ್ ಶೆಟ್ಟಿ
ಆವತ್ತು ಸಂಸತ್ತಿನಲ್ಲಿ ಭಾಷಣಕ್ಕೆ ನಿಂತ ನೆಹರೂ ದೇಶದ ಒಂದಿಂಚು ನೆಲವನ್ನು ಚೀನಿಗಳೀಗೆ ಬಿಟ್ಟುಕೊಡುವುದಿಲ್ಲ.ಎಂತಾ ಯುದ್ಧಕ್ಕಾದರೂ ಸೈನ್ಯ ತಯಾರಿದೆ ಅನ್ನುತ್ತಲೇ ತಮ್ಮ ಕೋಟಿನಿಂದ ತೆಗೆದ ಕೆಂಪು ಗುಲಾಬಿಯನ್ನ ಜನರ ಕಿವಿಗಿಟ್ಟರು.ಅವರ ಭಾಷಣದ ನಂತರದ ಇತಿಹಾಸ ನಿಮಗೆ ಗೊತ್ತಿರಲೇಬಹುದು.ಆ ಕಹಿ ನೆನಪಿಗೆ ೫೦ ವರ್ಷ ಆಗೋ ಸಮಯದಲ್ಲಿ ಮತ್ತೊಮ್ಮೆ ಕಳೆದವಾರ ಸಂಸತ್ತಿನಲ್ಲಿ ರಕ್ಷಣಾ ಸಚಿವ ಆಂಟನಿಯವರೂ ಸಹ ಭಾರತದ ಸೈನ್ಯ ಬಲಿಷ್ಟವಾಗಿದೆ,ಯುದ್ಧ ಸನ್ನದ್ಧವಾಗಿದೆ ಅಂದಿದ್ದಾರೆ.ನೆಹರೂ ಅವರಿಗೂ-ಅವ್ರ ಕಾಲಕ್ಕೂ ತುಲನೆ ಮಾಡಿದರೆ ಆಂಟನಿ ಅವರನ್ನ ಸ್ವಲ್ಪ ನಂಬಬಹುದು ಅನ್ನಿಸುತ್ತದೇ.ಆದರೆ…
ಕಳೆದ ವಾರ ನಡೆದ ವಿದ್ಯಾಮಾನಗಳಿವೆಯಲ್ಲ ಅವೆಲ್ಲ ಗಾಬರಿ ಹುಟ್ಟಿಸುವಂತವು.ಇದಕ್ಕೆ ಮುನ್ನುಡಿ ಬರೆದಿದ್ದು ಜನರಲ್.ವಿ.ಕೆ ಸಿಂಗ್…! ಜನ್ಮ ದಿನಾಂಕದ ರಗಳೆಯ ನಂತರ ಸ್ವಲ್ಪ ದಿನ ಸುಮ್ಮನಾಗಿದ್ದವ್ರು, ಟಿವಿ ಚಾನೆಲ್ನೊಂದಿಗೆ ಮಾತನಾಡುತ್ತ ತಮಗೆ ೧೪ ಕೋಟಿ ಲಂಚ ನೀಡಲು ಬಂದ ಪ್ರಸಂಗದ ಬಗ್ಗೆ ಬಾಯಿಬಿಡುವ ಮೂಲಕ.ಮತ್ತೆ ಆ ವಿಷಯವನ್ನ ನಾನು ರಕ್ಷಣಾ ಮಂತ್ರಿ ಆಂಟನಿ ಅವರಿಗೂ ಹೇಳಿದ್ದೆ ಅನ್ನುವುದು ಬೆಂಕಿಗೆ ತುಪ್ಪ ಸುರಿದಂತಾಗಿ ಹೋಯಿತು.ಸಂಸತ್ತಿನಲ್ಲಿ ಆಂಟನಿ ’ಅವರು ಮೌಕಿಕವಾಗಿ ಹೇಳಿದ್ದರು ನಾನು ಏನು ತಾನೇ ಮಾಡಲಿ” ಅಂತೆಲ್ಲ ಗೋಳಾಡುವಾಗಲೇ, ಜನರಲ್ ಪ್ರಧಾನಿ ಅವ್ರಿಗೆ ಬರೆದ ಮತ್ತು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ರಹಸ್ಯವಾಗಿರಬೇಕಿದ್ದ ಪತ್ರ ಸೋರಿಕೆಯಾಗಿದ್ದು.!